ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ಧರಾಮ ಕೂಡ್ಲಿಗಿ ಅನುವಾದಿತ ಕವಿತೆ…

ಮೂಲ : ಅಮೃತಾ ಪ್ರೀತಂ

ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ

ನಾನು ಮೌನವಾಗಿ, ಶಾಂತಳಾಗಿ,
ಸ್ತಬ್ಧಳಾಗಿಯೇ ನಿಂತಿದ್ದೆ
ಕೇವಲ ಪಕ್ಕದಲ್ಲಿ ನ ಸಮುದ್ರದಲ್ಲಿ
ಮಾತ್ರ ಬಿರುಗಾಳಿಯಿತ್ತು…
ಮತ್ತೆ ದೇವರಿಗೇ ಗೊತ್ತು
ಸಮುದ್ರಕ್ಕೆ ಅದೇನು ಯೋಚನೆ ಬಂದಿತೋ
ಅದು ಬಿರುಗಾಳಿಯ ಒಂದು ಮೂಟೆಯನ್ನು ಕಟ್ಟಿತು
ನನ್ನ ಕೈಗೊಪ್ಪಿಸಿತು ಮತ್ತು
ನಗುನಗುತ್ತಲೇ ದೂರ ಸರಿಯಿತು

ಅದು ತುಂಬ ದಣಿದಂತಿತ್ತು
ಆದರೆ ಒಂದು ಅದ್ಭುತವನ್ನಂತೂ ನಾನು ಪಡೆದೆ
ನನಗೆ ಗೊತ್ತಿತ್ತು ಈ ರೀತಿಯ ಘಟನೆ
ಯಾವಾಗಲೋ ಶತಮಾನಗಳಿಗೊಮ್ಮೆ ಆಗುತ್ತದೆ ಎಂದು

ತಲೆಯೊಳಗೋ ಲಕ್ಷಾಂತರ ಯೋಚನೆಗಳು
ಮಿಂಚಿದವು

ಆದರೆ ನಾನು ಮಾತ್ರ ನಿಂತೇ ಇದ್ದೆ
ಈ ಬಿರುಗಾಳಿಯನ್ನು ತೆಗೆದುಕೊಂಡು
ಈಗ ನನ್ನ ಊರಿಗೆ ಹೇಗೆ ಹೋಗಲಿ ?

ಯಾಕೆಂದರೆ-
ನನ್ನ ಊರಿನ ಪ್ರತಿ ಓಣಿಯೂ ಕಿರಿದಾಗಿದೆ
ನನ್ನ ಊರಿನ ಪ್ರತಿ ಛಾವಣಿಯೂ ಕೆಳಗಿದೆ
ನನ್ನ ಊರಿನ ಪ್ರತಿ ಗೋಡೆಯೂ ಚಾಡಿ ಹೇಳುತ್ತದೆ

ಒಂದು ಕ್ಷಣ ಯೋಚಿಸಿದೆ
ಒಂದುವೇಳೆ ನೀನು ಎಲ್ಲಾದರೂ ಸಿಕ್ಕರೆ
ಸಮುದ್ರದ ರೀತಿಯಲ್ಲಿಯೇ
ಇದನ್ನು ಎದೆಯ ಮೇಲಿರಿಸಿಕೊಂಡು
ನಾವಿಬ್ಬರೂ ಎರಡು ತೀರಗಳಂತೆ ನಗಬಹುದಿತ್ತು

ಮತ್ತು ಕೆಳಗಿನ ಛಾವಣಿ
ಮತ್ತು ಕಿರಿದಾದ ಓಣಿಯಿರುವ
ಊರಿನಲ್ಲಿ ಹೋಗಬಹುದಾಗಿತ್ತು

ಆದರೆ ಇಡೀ ಮಧ್ಯಾಹ್ನ ನಿನ್ನ ಹುಡುಕುತ್ತಲೇ ಇದ್ದೆ
ಮತ್ತು ನನ್ನೊಳಗಿನ ಬೆಂಕಿಯನ್ನು
ನಾನೇ ನುಂಗಿಬಿಟ್ಟೆ

ನಾನೀಗ ಒಂಟಿ ತೀರ
ತೀರವನ್ನು ಸಹ ಬೀಳಿಸಿಬಿಟ್ಟೆ
ಮತ್ತು ಯಾವಾಗ ದಿನವೂ
ಮೆಲ್ಲನೆ ಜಾರತೊಡಗಿತೊ
ಅದು-
ಸಮುದ್ರದ ಬಿರುಗಾಳಿಯ ಮೂಟೆಯನ್ನು
ಸಮುದ್ರಕ್ಕೆ ಮತ್ತೆ ಮರಳಿಸಿತು

ಈಗ ರಾತ್ರಿ ಆವರಿಸತೊಡಗಿದಂತೆ ನೀನು ದೊರೆತೆ
ನೀನೂ ದು:ಖಿ, ಮೌನಿ, ಶಾಂತ ಮತ್ತು ಸ್ತಬ್ಧನಾಗಿರುವೆ
ನಾನೂ ದು:ಖಿ, ಮೌನಿ, ಶಾಂತ ಮತ್ತು ಸ್ತಬ್ಧಳಾಗಿರುವೆ
ಕೇವಲ ದೂರದಲ್ಲಿ ಸಮುದ್ರದಲ್ಲಿ ಮಾತ್ರ ಬಿರುಗಾಳಿ ಇದೆ

‍ಲೇಖಕರು Admin

1 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading