ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಟಿ ಹುಡುಗಿಯೊಬ್ಬಳ ಮನದ ಮಾತು

’ಹೆಣ್ಣಿನ ಮೇಲೆ ಭಯೋತ್ಪಾದನೆ ಹೆಚ್ಚುತ್ತಿದೆ’ ಎನ್ನುವ ಲೇಖನ ಅವಧಿಯಲ್ಲಿ ಈ ಹಿ೦ದೆ ಪ್ರಕಟವಾಗಿತ್ತು. ಲಿ೦ಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ :

ಹೇಮಾರವರು ತಮ್ಮ ಬ್ಲಾಗ್ ನಲ್ಲಿ ಆ ಲೇಖನಕ್ಕೆ ಪ್ರತಿಕ್ರಯಿಸಿದ್ದಾರೆ. ಆ ಬ್ಲಾಗ್ ಲೆಖನ ನಿಮಗಾಗಿ.

(ಮಹಿಳಾ)ವಾದ

ಹೇಮಾಂತರಂಗ

ಲಂಕೇಶರ ಟೀಕೆ ಟಿಪ್ಪೆಣಿಯ ಲೇಖನವೊಂದರಲ್ಲಿ ಹಳ್ಳಿಗಳ ಆರ್ಥಿಕ ಸ್ವಾವಲಂಬನೆಗೆ ಅನುಸರಿಸಬಹುದಾದ ಒಂದು ಯೋಚನೆಯನ್ನು ಹೇಳುತ್ತಾರೆ. ಹಳ್ಳಿಯೊಂದು ಹತ್ತೆಕೆರೆ ನೆಲದಲ್ಲಿ ಸುಮಾರು 17420 ಸಾಗುವಾನಿ ಗಿಡಗಳನ್ನು ಇಪ್ಪತ್ತೈದುವರ್ಷಗಳ ಕಾಲ ಕಾಪಾಡಿಕೊಂಡು, ಅವು ಮರವಾದ ನಂತರ ಶೇ.೪ ಭಾಗ ಅಂದರೆ 696 ಗಿಡಗಳನ್ನು ಕಡಿದು ಮಾರಿ ಅಷ್ಟು ಸಸಿಗಳನ್ನು ಪುನಃ ನೆಟ್ಟರೆ ವರ್ಷಕ್ಕೆ ಆರೂವರೆ ಕೋಟಿಯಷ್ಟು (ಆಗಿನ ಕಾಲಕ್ಕೆ ಅಂದರೆ 1991 ರಲ್ಲಿ) ಆದಾಯ ಬರುತ್ತದೆ, ಇದರಲ್ಲಿ ಕೇವಲ ರಸ್ತೆ ಸೇತುವೆ ಮಾತ್ರವಲ್ಲ, ಊರಿನ ಶಿಕ್ಷಣ, ಹಬ್ಬ, ಕ್ರೀಡೆ ಎಲ್ಲವನ್ನು ಸರ್ಕಾರದ ಹಂಗಿಲ್ಲದೆ ನಡೆಸಬಹುದು ಎಂಬುವುದು. ಮೇಲುನೋಟಕ್ಕೆ ಇದು ಅತೀ ಆದರ್ಶದ ಪರಿಹಾರ ಎಂದೆನಿಸಿದರು, ಸಾಧ್ಯವಾಗದ್ದೇನಲ್ಲ. ಸಂಕೀರ್ಣ ಸಮಸ್ಯೆ. ಸಮಸ್ಯೆಗೆ ಕಾರಣಗಳನ್ನು ಹೇಳುವಷ್ಟೇ ಕರಾರುವಾಕ್ ಆಗಿ ಅದಕ್ಕೆ ಪರಿಹಾರವನ್ನು ಸೂಚಿಸುವುದು, superficial ಅಲ್ಲದ ಸಾಧ್ಯವಾಗುವಂತಹ ಪರಿಹಾರಗಳನ್ನು ಸೂಚಿಸುವುದು ಬಹಳ ಮುಖ್ಯ. ಎಲ್ಲ ಸಮಸ್ಯೆಗಳಿಗೂ ಈ ರೀತಿಯ ಸಿದ್ಧಸೂತ್ರಗಳು ಅನ್ವಯಿಸಲು ಸಾಧ್ಯವಾ? ಇತ್ತೀಚೆಗೆ ಇಲ್ಲಿ ನಡೆಯುತ್ತಿದ್ದ ’ಮಹಿಳೆಯರ ಮೇಲಿನ ಭಯೋತ್ಪಾದನೆ’ ಎಂಬ ಚರ್ಚೆಯ ಹಿನ್ನಲೆಯಲ್ಲಿ ಈ ಸಂಧರ್ಭ ನೆನಪಾಯಿತು. ಎಂತಹ ಪರಿಸ್ಥಿತಿಯಲ್ಲು ಹೊಂದಿಕೊಂಡು ಬದುಕುವುದು, ಬದಲಾಯಿಸಲು ಅವಕಾಶವಿದ್ದಾಗ ತನಗೆ ಬೇಕಾದಂತೆ ಬದಲಾಯಿಸಿಕೊಳ್ಳುವುದು ಮನುಷ್ಯನಗುಣ. ಮನುಷ್ಯನ ಗುಣ ಎಂದ ಮಾತ್ರಕ್ಕೆ ಮಹಿಳೆಯರಿಗೆ ಹೊರತಾದ ಗುಣ ಎಂದು ಭಾವಿಸಬೇಕಿಲ್ಲ ಅಷ್ಟೆ! ಯಾವುದರಲ್ಲೂ ತೀವ್ರ ಬದಲಾವಣೆ ಬಯಸದೆ, ಕ್ರಿಯೆಯಲ್ಲಿ ತರದೆ, ಪ್ರಗತಿಯನ್ನು ಅಪೇಕ್ಷಿಸುವುದು ಹಗಲುಗನಸಿನಂತೆಯೇ. ನಿಜವಾದ ಪ್ರತಿಭೆ ಇದ್ದಲ್ಲಿ ಅದು ಹೊರಹೊಮ್ಮುವುದಕ್ಕೆ ಯಾವುದೇ ಬೇಲಿಯಿರುವುದಿಲ್ಲ. ಸಾರಾ ಅಬೂಬಕ್ಕರ್ ತಮ್ಮ ೪೦ನೇ ವಯಸ್ಸಿನಲ್ಲಿ ಬರೆಯಲು ಶುರುಮಾಡಿ, ತಮ್ಮ ಧರ್ಮದವರ ಕಟ್ಟಳೆಗಳನ್ನು ಮೀರಿ ಪ್ರಸಿದ್ದ ಲೇಖಕಿ ಆಗಿದ್ದು, ವೈದೇಹಿ ತಮ್ಮ ಕರಾವಳಿಯ ಹಳ್ಳಿಯಲ್ಲೇ ಇದ್ದುಕೊಂಡು ಅದರ ಸೂಕ್ಷ್ಮಾತಿಸೂಕ್ಷ್ಮ ಚಿತ್ರಣಗಳನ್ನು ಅವರ ಬರಹಗಳಲ್ಲಿ ಕಟ್ಟಿಕೊಡುತ್ತಿರುವುದು ನೋಡಿದರೆ, ಇಷ್ಟೆಲ್ಲಾ ಅವಕಾಶಗಳಿರುವ, ಪುರುಷರಿಗೆ ಸಮನಾಗೇ ಬದುಕುವ ಇತರ ಮಹಿಳೆಯರಲ್ಲಿ ವಿರಳವಾಗಿರುವ ಸಂವೇದನಶೀಲತೆಗೆ ಏನು ಕಾರಣವೆನ್ನೋಣ? ಈಗ ಗಮನಿಸಿ, ಎಲ್ಲ ಪ್ರಸಿದ್ದ ಟೀವಿ ಚಾನೆಲ್ಗಳು ಹೆಂಗಸರನ್ನು ಪ್ರಮುಖ ಪ್ರೇಕ್ಷಕರು ಎಂದು ಪರಿಗಣಿಸಿ ಧಾರವಾಹಿಗಳನ್ನು ಮಾಡುತ್ತವೆ. ಹಲವಾರು ಚಿತ್ರೀಕರಣ ತಂಡಗಳು ಹಗಲು ರಾತ್ರಿ ತಲೆಕೆಡೆಸಿಕೊಂಡು ಹೆಂಗಸರ ಮನರಂಜನೆಗಾಗಿ ದುಡಿಯುತ್ತಿವೆ. ಇದನ್ನು ನೀವು ಮಹಿಳೆಯರಿಗೆ ಸಿಗುತ್ತಿರುವ ಗೌರವವೆಂದಾಗಲೀ, ಪರಿಗಣನೆ ಎಂದಾಗಲಿ ಮಹಿಳಾವಾದದಡಿಯಲ್ಲಿ ಹೇಳಲು ಆಕ್ಷೇಪವಿಲ್ಲವಷ್ಟೆ? ಆದರೆ ಈ ಧಾರಾವಾಹಿಗಳಲ್ಲಿ ಬರುವ ವಿಷಯಗಳು, ಅವನ್ನು ಪ್ರಸ್ತುತಪಡಿಸುವ ರೀತಿ (ಬೆರಳೆಣಿಕೆಯ ಕೆಲವನ್ನು ಹೊರತು ಪಡಿಸಿ) ಹೆಂಗಸರ ಬುದ್ದಿ ಯಾವ ಮಟ್ಟದಲ್ಲಿದೆ ಎಂದು ನಿರ್ಧರಿಸಿದೆ ಎಂಬುದಕ್ಕೊಂದು ಒಳ್ಳೆಯ ಉದಾಹರಣೆ. ಅದಿರಲಿ ನಮ್ಮ ಚಾನೆಲ್ಗಳು ಟಿ.ಆರ್.ಪಿ ದುರಾಸೆಗಾಗಿ ಪ್ರಸಾರ ಮಾಡುವ ಜ್ಯೋತಿಷ್ಯ ಕಾರ್ಯಕ್ರಮಗಳನ್ನೇ ತೆಗೆದುಕೊಳ್ಳಿ, ಅಲ್ಲೊಬ್ಬ ತಲೆಕೆಟ್ಟ ಬ್ರಹ್ಮಾಂಡ ಸ್ವಾಮಿ, ’ಕುಂಕುಮವಿಟ್ಕೊಳ್ದೆ ಗಂಡಸತ್ತವರಂತೆ, ಬೂಬಮ್ಮಗಳಂತೆ ಇರ್ಬೇಡಿ’ ಎಂದು ಘಂಟಾಘೋಷವಾಗಿ ಹೇಳ್ತಾನೆ. ಇಂತಹ ಮಾತನ್ನು ನಾವು ಖಂಡಿಸಬೇಕು ಅಲ್ಲವೇ? ಆದರೆ ನಮ್ಮಲ್ಲಿ ಎಷ್ಟು ಜನ ಮುಟ್ಟಾದಾಗ ದೇವರ ಕೋಣೆಗೆ ಹೋಗಲು ಹಿಂಜರಿಯುವುದಿಲ್ಲ? ಅದೊಂದು ನೈಸರ್ಗಿಕ ಕ್ರಿಯೆ ಎಂದು ಎಷ್ಟೇ ವೈಚಾರಿಕವಾಗಿ ಹೇಳಿದರೂ, ಓದಿದ್ದರೂ, ತಿಳಿದಿದ್ದರೂ ಮುಟ್ಟಾಗುವುದು ನಮಗೆ ಮೈಲಿಗೆಯೇ. ಇಂತಹದ್ದೊಂದು ಪದ್ದತಿಯನ್ನು ನಂಬುತ್ತಿದ್ದೇವೆ, ಅನುಸರಿಸುತ್ತಿದ್ದೇವೆ ಎಂದರೆ ನಮಗೆ ಅದರದೇ ಮುಂದುವರೆದ ಭಾಗವಾದ ಕುಂಕುಮವಿಡುವುದು, ಬಳೆಹಾಕಿಕೊಳ್ಳುವುದು choice ಆಗಿ ಉಳಿಯುವುದಿಲ್ಲ, ಅನಿವಾರ್ಯತೆಯಾಗಿಬಿಡುತ್ತದೆ. ಇಷ್ಟೆಲ್ಲಾ ನಾನು ಹೇಳುತ್ತಿರುವುದು ’ಮಹಿಳೆಯರ ಮೇಲಿನ ಭಯೋತ್ಪಾದನೆ’ ಹೆಚ್ಚಾಗುತ್ತಿದೆ ಎಂದಾದರೆ ಮಹಿಳೆಯೇನು ಕೈಲಾಗದವಳಂತೆ ಸುಮ್ಮನೆ ಕೂರಬೇಕಿಲ್ಲ unless she is ok with it. ಕುಡುಕ ಗಂಡನಿಂದ ಒದೆತ ತಿಂದು ಮುಸುಮುಸು ಅಳುತ್ತಾ ಕೂರುವ ಹೆಂಗಸರಿರುವ ಊರಿನಲ್ಲೇ, ಮನೆಗೆ ಸರಿಯಾಗಿ ದುಡ್ಡುಕೊಡುತ್ತಿಲ್ಲವೆಂದು ತಮ್ಮ ಕುಡುಕಗಂಡನನ್ನು ಪೊರಕೆಯಲ್ಲಿ ಹೊಡೆಯುವ, ಪೋಲೀಸ್ಟೇಶನ್ನಿಗೆ ದೂರುಕೊಡುವ ಹೆಂಗಸರಿದ್ದಾರೆ. ವೈದೇಹಿಯವರು ಹೇಳಿದಂತೆ ಹೆಣ್ಣಿನ ದೇಹವೆ ಆಕೆಗೆ ಶತ್ರುವಾಗುತ್ತಿದೆ ಮತ್ತು ಇದರಿಂದಾಗಿ ಆಕೆಯ ಮೇಲೆ ಒಂದು ರೀತಿಯ ಭಯೋತ್ಪಾದನೆ ನಡೆಯುತ್ತಿದೆ. ತುಂಡುಡುಗೆ ತೊಟ್ಟು pose ಕೊಡುವ ನಟಿಯರಿಗೆ ಬೇಕಾದಷ್ಟು ಭದ್ರತೆ ಹಾಗೂ ಅನುಕೂಲ ವಾತಾವರಣವಿರುತ್ತದೆ. ಅದನ್ನು ಜಾಹೀರಾತುಗಳಲ್ಲಿ ಕಂಡು ಸ್ಪೂರ್ತಿಗೊಂಡು ನಾವೆಲ್ಲರೂ ಸಾರ್ವಜನಿಕವಾಗಿ ಹಾಗೆಯೇ ಇರತೊಡಗಿದಾಗ ಅಷ್ಟೇ ರಕ್ಷಣೆ ಇರುವುದಿಲ್ಲವೆಂಬುದನ್ನು ಮನವರಿಕೆ ಮಾಡಿಕೊಡಬೇಕು. ಫ್ಯಾಶನ್ ಹೆಸರಿನಲ್ಲಿ ವಿದೇಶಿಯರನ್ನು ಅನುಕರಣೆ ಮಾಡಿ Educated fool ಗಳಾಗಬಾರದು. ಅಭದ್ರತೆ ಇದೆಯೆಂದಾದರೆ ಅದನ್ನು ಬದಲಿಸಲು ಯತ್ನಿಸಬೇಕು. ಇವೆಲ್ಲಾ ಯಾವುದು ಹೀಗೆ ಹರಟೆಕೋಣೆಗಳಲ್ಲಿ ಮಾತಾಡಿದರೆ ಮುಗಿದು ಹೋಗುವಂತದ್ದಲ್ಲ. ಎಲ್ಲರ ಗಮನಕ್ಕೆ ಬರದ ಸಾವಿರಾರು ಘಟನೆಗಳಿರುತ್ತವೆ. ಮಹಿಳೆ ತಾನಾಗೇ ಎಚ್ಚೆತ್ತುಕೊಳ್ಳದೆ ಮೌಢ್ಯಗಳಿಂದ ಹೊರಬರದೆ, ಪರಿಸ್ಥಿತಿಯನ್ನು ಎದುರಿಸದೇ, ಇಂತಹ ಮಾತುಗಳು, ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ. ಅಲ್ಲೊಬ್ಬ ಅಪ್ಪ ಹೆಣ್ಣುಮಗುವೆಂದು ಕೋಪಗೊಂಡು ತನ್ನ ಮಗುವನ್ನೇ ಕೊಂದುಹಾಕಿದ ಎಂದರೆ ನಾವಿಲ್ಲಿ ಲೊಚಗುಟ್ಟಿ ಸುಮ್ಮನಾಗಬಹುದು. ಕ್ರಿಯೆಯಲ್ಲಿ ಕಾಣದ್ದು ಬರೀ ಒಣವಾದವಾಗಿ ಉಳಿದುಬಿಡುವ ಭಯವಿದೆ.]]>

‍ಲೇಖಕರು G

19 May, 2012

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. savitri

    ಹೆಣ್ಣು ಮಕ್ಕಳು ಭಯೋತ್ಪಾದನೆ, ದೌರ್ಜನ್ಯ ಇತ್ಯಾದಿಗಳ ನೆರಳನ್ನು ಕೂಡ ಸೋಕಿಸಿಕೊಳ್ಳದಂತೆ ಬದುಕಿಬಿಡಬಹುದು. ಇಲ್ಲಿ ಅವರ ಉಡುಗೆ ತೊಡುಗೆ ಮಾನದಂಡಗಳಾಗಬೇಕಿಲ್ಲ. ಉಡುಗೆ ತೊಡುಗೆ ಅವರವರು ಬದುಕುತ್ತಿರುವ ನೆರೆಹೊರೆ, ಸಾಮಾಜಿಕ ಸ್ಥಿತಿ-ಗತಿಯನ್ನು ಅವಲಂಬಿಸಿ ಬದಲಾಗಬೇಕಾದ ಅಥವಾ ಹೊಂದಾಣಿಕೆಗೆ ಒಳಗಾಗಬೇಕಾದ ನಾಗರಿಕತೆಯ ಅಂಶಗಳು. ಮಹಿಳೆಯರ ಉಡುಪುಗಳು ಯಾವುದೇ ಶೈಲಿಯವಿರಲಿ, ಉಡುವುದಕ್ಕೆ ಇಷ್ಟಪಡುವವರಿಗೆ ಆ ದಿರಿಸುಗಳು ಆತ್ಮವಿಶ್ವಾಸ ತುಂಬುವಂತಿದ್ದರೆ ಸಾಕು. ಆದರೆ ಹಾಗಂತ ತುಂಡುಡುಗೆಯವರನ್ನು ಟೀಕಿಸಿದಾಗ ಅದು ಹೆಣ್ಣು ಮಕ್ಕಳನ್ನು ಅವರ ಆಶಯ/ಒಲವುಗಳನ್ನು ಹತ್ತಿಕ್ಕುತ್ತಿದ್ದಾರೆ, ನಿಯಂತ್ರಿಸುತ್ತಿದ್ದಾರೆ ಎಂದು ಬೊಬ್ಬಿಡುವುದಕ್ಕೆ ಮೌಲ್ಯವಿದೆಯೇ ಎಂದು ಪ್ರಶ್ನೆ ಕಾಡುತ್ತಿದೆ.
    ಬಳೆ, ಕುಂಕುಮದ ವಿಷಯದಲ್ಲಿ ಹೇಳುವುದಾದರೆ ಅದು ಧರಿಸಿದರೂ ಧರಿಸದೇ ಇದ್ದರೂ ಅಷ್ಟೊಂದು ರಂಪ ಮಾಡಬೇಕಾದ ವಿಷಯವಲ್ಲ ಎನ್ನಿಸುತ್ತದೆ. ನಾವು ಭೂಮಿಗೆ ಬಂದಾಗ ಅವುಗಳನ್ನೆಲ್ಲ ಧರಿಸಿಕೊಂಡು ಬಂದಿರುವುದಿಲ್ಲ. ಹಾಗೇ ಗಂಡನಿಂದಾಗಿ ಬರುವ ಉಡುಗೊರೆಗಳು ಅಂತಲೂ ಅವುಗಳನ್ನು ಪರಿಗಣಿಸಲು ಸಾಧ್ಯವಿಲ್ಲ.
    ಮುಟ್ಟಾದಾಗ ಮಕ್ಕಳು ಮತ್ತು ದೇವರ ಪಟಗಳನ್ನು ಮುಟ್ಟುವುದಕ್ಕೆ ನಿಷೇಧವಿದೆ ನಿಜ. ಮಕ್ಕಳೇ ದೇವರು ಎನ್ನುತ್ತೇವೆ ಅಲ್ಲವೇ? ಮಕ್ಕಳನ್ನು ಮಾತ್ರ ಮುಟ್ಟುವುದಕ್ಕೆ ನನ್ನದೂ ತಕರಾರಿದೆ. ಏಕೆಂದರೆ ನಾವು ಮುಟ್ಟಾದಾಗ ದೇಹದಲ್ಲಿ ಎಂಥೆಂಥ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆಯೋ ಅಂತ ಸಾಮಾನ್ಯ ಮಹಿಳೆಯರಿಗೆ ಎಲ್ಲರಿಗೂ ಗೊತ್ತಿರುವುದಿಲ್ಲ. ಮಕ್ಕಳನ್ನು ಮುಟ್ಟುವುದರಿಂದ ಅವರಿಗೆ ಯಾವುದೇ ಸೋಂಕು/ಕೆಟ್ಟ ಪರಿಣಾಮ ಆಗಬಾರದಲ್ಲ, ಅದಕ್ಕೆ. ಆದರೆ ದೇವರ ಚಿತ್ರಪಟಗಳು ವಾಸ್ತವದಲ್ಲಿ ನಿರ್ಜೀವ ವಸ್ತುಗಳು. ಮುಟ್ಟಾದವರ ಮನಸ್ಸು ಕಿರಿಕಿರಿ ಮುಕ್ತವಾಗಿದ್ದರೆ, ವೇದನೆರಹಿತವಾಗಿದ್ದರೆ ಪೂಜೆ ಮಾಡಲು ಅಡ್ಡಿ ಇಲ್ಲ. ಆದರೆ ಸಾಮಾನ್ಯವಾಗಿ ಎಲ್ಲ ಹೆಂಗಸರೂ ಮುಟ್ಟಿನ ವೇಳೆಯಲ್ಲಿ ಒಂದಲ್ಲ ಒಂದು ದೈಹಿಕ ವೇದನೆಗೆ ಈಡಾಗಿ, ಅವರ ಮನಸ್ಸು ಶಾಂತವಾಗಿಲ್ಲದ ಕಾರಣದಿಂದ ಪೂಜೆ ಮಾಡುವಷ್ಟು, ವ್ಯವಧಾನ ಅವರಿಗೆ ಇರುವುದಿಲ್ಲ. ಹಾಗಾಗಿಯೇ ನಮ್ಮ ಹಿರಿಯರು ಅದನ್ನು ಕ್ರಮೇಣ ನಿಷೇಧಿಸುತ್ತ ಬಂದಿರಬಹುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading