ಆಶಾ ಜಗದೀಶ್
ನಿನ್ನ ಹೆರಳ ಕೊನರಲ್ಲಿ
ಕಮಲ ಅರಳಿದಂತೆ…..
ಬೆರಳುಗಳ ಲಾಲಿತ್ಯ….
ಪತ್ರದ ಮೇಲೆ ತೊಳೆದ ಮುತ್ತಿನಂಥ
ಜಮೆಗೊಂಡ ಸಂಭ್ರಮದ ಹನಿಗಳು
ಸುಳ್ಳು ಸತ್ಯಗಳ ನಾಜೂಕಿನ
ವ್ಯತ್ಯಾಸವನ್ನು
ಈ ಹೊತ್ತಿನ ಬಿಸುಪಿನೊಳಗೆ
ಕರಗದಂತೆ ಮುತ್ತು ಉದುರದಂತೆ
ಜೋಪಾನ ಮಾಡುತ್ತಿವೆ….
ಜೋಪಾನ….
ನನ್ನ ನಿನ್ನ ತಲೆ ಮೇಲೆ
ಸುರಿದ ಅಕ್ಷತೆಯ ಮಳೆ
ಒಂದೊಂದೇ ಮುತ್ತಾಗುತ್ತಿವೆ
ತಣ್ಣಗೆ ಬೀಸುತ್ತಿರುವ ತಂಗಾಳಿ
ಈ ಹೊತ್ತಿನಲ್ಲಿ
ಎಲ್ಲೋ ಮಳೆಯಾಗಿರುವ
ಸಾಧ್ಯತೆಯ ಸಂದೇಶ ತಂದಿಲ್ಲ
ಮೋಡ ಕವಿದು ದಾರಿತಪ್ಪಿಸುತ್ತಿದೆ
ಬಾನ್…. ಸುಮ್ಮನೇ ತಣಿದಂತೆ
ಕಾಣುವ ಇಳೆಯ ಎದೆಯಲಿ
ಇರುವ ಬೆಂಕಿ ಎಚ್ಚರ….
ಹೊರಗೆ ಸಣ್ಣ ಶಬ್ಧ….
ನಿನ್ನದೇ ಕನಲಿಕೆ ಇರಬಹುದು
ನನ್ನ ಭ್ರಮೆಯೂ….
ಅಲ್ಲಳೆಯುವಂತಿಲ್ಲ…..
ಸಹಜವೇ ಎನಿಸುಷ್ಟು ಸ್ಪಷ್ಟ ಸ್ಫುಟ
ಹೀಗೆಲ್ಲಾ ಆಗಿದ್ದಿದೆ
ಅದೆಷ್ಟೋ ಬಾರಿಯ ಅನುಭವದಲ್ಲಿ
ನಿಶ್ಯಬ್ಧವನ್ನು ಹುಡುಕಿ
ಸೋಲುತ್ತಿದ್ದೇನೆ….
ಇಷ್ಟೇ ಕಡ ಸಿಗಬಹುದಾದ
ಹಂದರದ ಗೂಟದಲಿ
ಪಟವಾಗಿ ಹಾರಾಡುತಿರುವ
ನಿರೀಕ್ಷೆ….. ದ್ರಾಕ್ಷಿಯ ಗೊಂಚಲಷ್ಟೇ
ಸುಂದರ…. ಸಿಗದೆ ಕಾಡುವ
ಸಿಕ್ಕು ಹುಸಿಯಾಗುವ ಹುಳಿ
ನಿನ್ನ ಪಾದಗಳು ಕಲಿತಿವೆ
ಹೆದರುವ ನಟನೆಯನ್ನು….
ಅದುರುವ ತುಟಿಗಳೂ….
ಅಂಗಳದ ತುಂಬೆಲ್ಲಾ
ಹರಿದಾಡಿ ಮಾಯವಾಗಿರುವ
ಹ್ಞಾವಿನಂತೆ….
ಮೋಡ ಹೆದರುತ್ತಿದೆ
ಕಪ್ಪಾಗಲು…
ಮೇಲೆ ನೋಡುವ ದೃಷ್ಟಿ
ಮಂಜಾಗದಿರಲೆಂಬ
ಬಯಕೆ ಹೊತ್ತು….
ಬಸಿರ ಬಯಕೆ…..
ತೀರಲಿ…..






0 Comments