'ಸಿಂಗರದ ಹೊರೆಯೇಕೆ ಈ ಕವಿಶೈಲಕ್ಕೆ?' – ಜಿ ಪಿ ಬಸವರಾಜು ಕೇಳ್ತಾರೆ

ಜಿ ಪಿ ಬಸವರಾಜು

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ?
ಸಡಗರದ ಮಾತುಗಳ ಬಿಂಕವೇಕೆ?
.. .. … ..
ಮಂತ್ರಗಳ ಜವನಿಕೆಯು, ದೊರೆ, ನಿನ್ನ ಸಿರಿಮೈಯ್ಯ
ಸೌಂದರ್ಯವನು ಮಬ್ಬುಗೈಯ್ಯದಿರಲಿ
ಕುವೆಂಪು ಅವರು 1947 ರಲ್ಲಿ ಪ್ರಕಟಿಸಿದ ‘ಷೋಡಶಿ’ ಎನ್ನುವ ಕವನ ಸಂಕಲನದಲ್ಲಿ ಈ ಸಾಲುಗಳಿವೆ. ಇವುಗಳ ಸಂದರ್ಭ, ಅರ್ಥಗೌರವ ಬೇರೆಯೇ ಇರಬಹುದಾದರೂ, ‘ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ?’ ಎನ್ನುವ ಸಾಲು ಮನದಲ್ಲಿ ಉಳಿದು ಬೇರೆಯ ಅರ್ಥ ವಿನ್ಯಾಸಗಳನ್ನೇ ನನ್ನ ಮನದಲ್ಲಿ ಹೆಣೆಯತೊಡಗಿತು.
ಅವತ್ತು ಸೂರ್ಯ ಆಗಲೇ ಮೇಲೇರಿದ್ದ. ಕುವೆಂಪು ಅವರ ಧ್ಯಾನತಾಣ ಅಥವಾ ಸ್ಫೂತರ್ಿತಾಣ ಎನ್ನಿಸಿ ಜನರನ್ನು ಸೆಳೆದುಕೊಳ್ಳುತ್ತಿರುವ ಕುಪ್ಪಳಿಯ ಕವಿಶೈಲದ ಶಿಖರಕ್ಕೆ ಏರುತ್ತಿದ್ದೆವು. ಸುತ್ತ ಹಸಿರು ತಾನೇ ತಾನಾಗಿ ನಗುತ್ತಿತ್ತು. ಮಂಜಿನ ಪರದೆ ಕರಗಿ ಹೋಗಿ ಬಹಳ ಹೊತ್ತಾಗಿತ್ತು. ಈ ಪುಟ್ಟ ಗುಡ್ಡವನ್ನು ಹತ್ತುತ್ತ, ಅದರ ಸುಖವನ್ನು ಅನುಭವಿಸುತ್ತ, ನಿತ್ಯದ ಬೆಳಗಿಗೆ ಬೇರೆಯೇ ಅರ್ಥವನ್ನು ಕಂಡುಕೊಳ್ಳುತ್ತಿದ್ದೆವು. ಅಲ್ಲಿನ ಕಲ್ಲು ಮಣ್ಣು ಮರಗಿಡಗಳು ಮಾತನಾಡುತ್ತಿದ್ದವು. ಹಸಿರಿನ ನಡುವಿನಿಂದ ಎದ್ದುಬರುತ್ತಿದ್ದ ಹಕ್ಕಿಗಳ ಹಾಡು ನಮ್ಮೊಳಗಿನ ಹಾಡುಗಳನ್ನು ಶ್ರುತಿಗೊಳಿಸುತ್ತಿದ್ದವು. ಸರಳ, ಸಹಜ, ಸೊಬಗು ನಮ್ಮೊಳಕ್ಕೆ ಇಳಿಯುತ್ತ ಬೇರೊಂದು ಲೋಕಕ್ಕೆ ರಹದಾರಿ ಪಡೆದುಕೊಳ್ಳುತ್ತಿದ್ದೆವು.
ಹಳೆಯ ನೆನಪುಗಳು ನುಗ್ಗುಬಂದವು: ಈ ಗುಡ್ಡದ ಕೆಳಭಾಗದಲ್ಲಿರುವ ಕುವೆಂಪು ಅವರ ಮನೆಯಿಂದ ಅದೆಷ್ಟು ಬಾರಿ ಮೇಲಕ್ಕೆ ಹತ್ತಿಹೋಗಿದ್ದೆವು. ಆಕಾಶದ ತುಂಬ ದಟ್ಟ ಕಪ್ಪನೆಯ ಮೋಡಗಳು ಕಿಕ್ಕಿರಿದು ಇನ್ನೇನು ಬಿರುಮಳೆ ಸುರಿದೇ ಬಿಟ್ಟಿತು ಎನ್ನುವಾಗ, ಗುಡುಗು ಅಬ್ಬರಿಸುವಾಗ, ಸಿಡಿಲು ಬೆಳಕಿನ ಚಾಟಿ ಬೀಸುವಾಗ, ಕರಾಳ ಕತ್ತಲೆ ಆವರಿಸುತ್ತಿದೆ ಎನ್ನುವಾಗ ದಡಬಡನೆ ಓಡುತ್ತ ಕೆಳಕ್ಕೆ ಇಳಿದು ಈ ಮಹಾಕವಿಯ ಮನೆಯನ್ನು ಸೇರಿಕೊಂಡಿದ್ದೆವು. ನಡುರಾತ್ರಿಯ ಬೆಳದಿಂಗಳು ಹಾಡುವಾಗ, ಕವಿಶೈಲದ ತುದಿಗೇರಿ, ನಮ್ಮ ಹಾಡನ್ನೂ ಸೇರಿಸಿ, ಮನಸ್ಸುಗಳನ್ನು ಹಗುರಮಾಡಿಕೊಂಡಿದ್ದೆವು. ಸೂರ್ಯೋದಯ, ಸೂರ್ಯಾಸ್ತಗಳಿಗೆ ಸಾಕ್ಷಿಯಾಗಿ ಆಕಾಶವೆಂಬ ಆಕಾಶವೇ ಹಲವು ಬಣ್ಣಗಳಲ್ಲಿ ಅದ್ದಿಹೋಗಿ ರಂಗಾಗುವುದನ್ನು ನೋಡಿ ಬೆರಗಾಗಿದ್ದೆವು. ‘ಸೂರ್ಯೋದಯ, ಚಂದ್ರೋದಯ ದೇವರ ದಯ ಕಾಣೊ’ ಎಂದ ಕುವೆಂಪು ಅವರ ದೇವರನ್ನು, ಪ್ರಕೃತಿಯೊಳಗಿನ ಅವರ ಒಂದಾದ ಭಾವವನ್ನು ನೆನೆಯುತ್ತ ಮಾತುಗಳನ್ನು ಮರೆಮಾಡಿ ಮೌನದ ಆಸರೆ ಪಡೆದಿದ್ದೆವು- ಈ ಎಲ್ಲ ನೆನಪುಗಳನ್ನು ಹೊತ್ತು ಕವಿಶೈಲವನ್ನು ಏರುವುದು ಎಂಥ ಉಲ್ಲಾಸದ ಅನುಭವ!

ಈಗ ಕವಿಶೈಲ ಎಲ್ಲರಿಗೂ ತೆರೆದ ದಾರಿ. ಇದು ಎಲ್ಲ ಕನ್ನಡಿಗರಿಗೂ ಗೊತ್ತಿರುವ ಸಂಗತಿಯೇ. ಈ ಕಾರಣಕ್ಕಾಗಿಯೇ ಇರಬೇಕು ನಿತ್ಯವೂ ಸಾವಿರಾರು ಯಾತ್ರಿಗಳು ಇಲ್ಲಿಗೆ ಬಂದು ಹೋಗುತ್ತಾರೆ. ಕುವೆಂಪು ಟ್ರಸ್ಟ್ ಈ ತಾಣದ ಸೊಬಗನ್ನು ಹೆಚ್ಚಿಸಲು ಹಲವಾರು ಉಪಯುಕ್ತ ಕೆಲಸಗಳನ್ನು ಮಾಡಿದೆ. ಕುವೆಂಪು ಮನೆ ಈಗ ಎಲ್ಲರೂ ನೋಡಲು, ನಡೆದಾಡಲು, ಮುಟ್ಟಿ ಸುಖಿಸಲು, ಕುವೆಂಪು ಕುಂತ, ನಿಂತ, ನಿದ್ರಿಸಿದ, ಕನಸಿದ, ಕಲ್ಪಿಸಿದ, ಓದಿದ, ಧ್ಯಾನಿಸಿದ ಅಂಗುಲ ಅಂಗುಲ ಜಾಗವನ್ನೂ ನೋಡಿ ಸಂಭ್ರಮಿಸುವ ಜಾಗ. ಜೊತೆಗೆ ಅಪ್ಪಟ ಮಲೆನಾಡಿನ ಹಳೆಯ ಕಾಲದ ಮನೆಯೊಂದನ್ನು ನೋಡುವ ಅವಕಾಶ. ಪ್ರವಾಸಿಗರನ್ನು ಸೆಳೆಯಲು ಅಗತ್ಯವಾದ ವಿಭಿನ್ನ ಪ್ರಯತ್ನಗಳನ್ನೂ ಟ್ರಸ್ಟ್ ಮಾಡಿದೆ. ಕುವೆಂಪು ಅವರ ನೆನಪು ಬಂದವರ ಮನದಲ್ಲಿ ಉಳಿಯುವಂಥ ಕೆಲಸಗಳು ಇಲ್ಲಿ ಆಗಿವೆ. ಸಕರ್ಾರವೂ ಇದಕ್ಕೆ ಅಗತ್ಯ ನೆರವು ನೀಡಿ ತನ್ನ ಕಾಣಿಕೆಯನ್ನು ಸಲ್ಲಿಸಿದೆ,
ಕುವೆಂಪು ಮನೆಯನ್ನು ನೋಡಿದವರು ಕವಿಶೈಲಕ್ಕೂ ಹೋಗುತ್ತಾರೆ. ಕವಿಶೈಲದಲ್ಲಿ ಕುವೆಂಪು ಅವರ ಸಮಾಧಿ ಇದೆ ಎಂಬುದು ಒಂದು ಕಾರಣ ಹೌದು. ಆದರೆ ಕುವೆಂಪು ಅವರ ‘ದೇವರಾದ’ ಪ್ರಕೃತಿಯ ದರ್ಶನವಾಗಬೇಕಾದರೆ ಈ ಗುಡ್ಡವನ್ನು ಹತ್ತಿಳಿಯಲೇ ಬೇಕು. ಇದು ಕವಿ ನಡೆದಾಡಿದ, ಧ್ಯಾನಕ್ಕೆ ಕುಳಿತ, ಸೂರ್ಯೋದಯ, ಚಂದ್ರೋದಯಗಳನ್ನು ನೋಡುತ್ತ ಮೈಮರೆತ ಜಾಗ; ಇದು ಕವಿಯ ಭಾವಲೋಕ ಯಾನಕ್ಕೆ ಅನುವು ಮಾಡಿಕೊಟ್ಟ, ಅವರ ಸ್ಫೂತರ್ಿಯನ್ನು ಚಿಮ್ಮಿಸಿದ ಜಾಗ. ಇಲ್ಲಿ ನಿಂತು ನೋಡಿದರೆ ಸುತ್ತ ಹಸಿರು ನಗುತ್ತದೆ. ಸಕರ್ಾರ ಕವಿಶೈಲದ ಸುತ್ತ ಇರುವ ವಿಸ್ತಾರವಾದ ಕಾನನ ನಾಶವಾಗದಂತೆ ನೋಡಿಕೊಂಡಿದೆ. ಕವಿಗೆ ಪ್ರೀತಿಯ ಕಾಣಿಕೆ ನೀಡುವಂತೆ ಜನರೂ ಕಾಡನ್ನು ಉಳಿಸಿಕೊಂಡಿದ್ದಾರೆ. ಈ ಕಾಡೇ ಕವಿಶೈಲದ ಸೊಬಗನ್ನು ಹೆಚ್ಚಿಸಿದೆ. ಕವಿಶೈಲದ ಕಾಂತಿಯನ್ನು ಸಹಜ ರೀತಿಯಲ್ಲಿ ಬೆಳಗುವಂತೆ ಕಲಾವಿದ ಕೆ.ಟಿ.ಶಿವಪ್ರಸಾದ್ ತಮ್ಮ ಪ್ರತಿಭಾ ಕೌಶಲವನ್ನು ತೋರಿದ್ದಾರೆ. ಇಲ್ಲಿ ಅವರು ನಿಲ್ಲಿಸಿರುವ ಕಲ್ಲುಗಳು ಪುರಾತನ ಕಾಲವನ್ನು ಕಣ್ಮುಂದೆ ತಂದು ನಿಲ್ಲಿಸುವಂತಿವೆ. ಎಷ್ಟೊಂದು ಸರಳವಾಗಿ, ಅದ್ಭುತ ಕಲ್ಪನೆಯೊಂದು ಮನದಲ್ಲಿ ಮೂಡುವಂತೆ ಮಾಡಿರುವ ಈ ಕಲಾವಿದನ ಪ್ರತಿಭೆಗೆ ಸೋತು ಕವಿಶೈಲವನ್ನು ಹೊಕ್ಕರೆ ಕೆಳಗಿಳಿದು ಬರಲು ಮನಸ್ಸಾಗುವುದಿಲ್ಲ. ಆ ಲೋಕದಲ್ಲಿ ಒಂದಾಗಿ ಅಲ್ಲಿಯೇ ಧ್ಯಾನಸ್ಥರಾಗಿಬಿಡುವಂಥ ಸ್ಥಿತಿಯೊಂದಕ್ಕೆ ಪ್ರೇರಣೆ ನೀಡುವ ತಾಣವಾಗಿದೆ ಕವಿಶೈಲ.
ಇಲ್ಲಿ ಬೆಳೆದ ಕವಿ ಅದೆಷ್ಟು ಸಲ ಕವಿಶೈಲವನ್ನು ಹತ್ತಿ ಇಳಿದಿರಬಹುದು. ಅದೆಷ್ಟು ಸಲ ಇಲ್ಲಿ ಮೈಮರೆತು ಕುಳಿತಿರಬಹುದು. ತನ್ನ ಮಿತ್ರರು, ಗುರು ಹಿರಿಯರು, ರಸಿಕರು, ಪ್ರಕೃತಿ ಆರಾಧಕರು ಹೀಗೆ ತಮ್ಮ ಹತ್ತಿರದ ಅನೇಕರನ್ನು ಮೈಸೂರಿನಿಂದ ಇಲ್ಲಿಗೆ ಕರೆದುತಂದು ಈ ಸೊಬಗನ್ನು ಹಂಚಿದ್ದು ಅದೆಷ್ಟು ಬಾರಿ. ಇಲ್ಲಿ ಕುಳಿತು ಸುತ್ತಲಿನ ಕಾಡನ್ನು, ಪ್ರಕೃತಿಯನ್ನು ನೋಡಿದ ನೆನಪಿಗಾಗಿ ಕುವೆಂಪು, ಇಲ್ಲಿನ ಬಂಡೆಯೊಂದರ ಮೇಲೆ ರುಜುಮಾಡಿದರು. ಬಿಎಂಶ್ರೀ, ವೆಂಕಣ್ಣಯ್ಯನವರ ಜೊತೆಯಲ್ಲಿ 1936ರಲ್ಲಿ ಮಾಡಿದ ರುಜು ಅದು. ನಂತರ ತೇಜಸ್ವಿ ಕೂಡಾ ಇಲ್ಲಿ ತಮ್ಮ ಹೆಸರನ್ನು ಕೆತ್ತಿದರು. ಇದು ಒಂದು ಚಾರಿತ್ರಿಕ ಸಂಗತಿಯಂತೆ ಈಗಲೂ ಉಳಿದಿದೆ. ಇದನ್ನು ನೋಡಲು ಬರುವ ಪ್ರವಾಸಿಗರೂ ತಮಗೆ ಚರಿತ್ರೆಯಲ್ಲಿ ಜಾಗಸಿಕ್ಕಬೇಕೆಂದು ತಮ್ಮ ಹೆಸರು ಕೆತ್ತುವ ಸಾಹಸಕ್ಕೂ ಕೈಹಾಕಿದ್ದರು. ಈಗ ಅಂಥ ಅವಿವೇಕಕ್ಕೆ ಅವಕಾಶವಿಲ್ಲ. ಸುಮ್ಮನೆ ನೋಡಿ ಮನಸ್ಸಿನಲ್ಲಿಯೇ ರುಜುಮಾಡಿಕೊಳ್ಳಬೇಕು.
ಮೊನ್ನೆ ಹೋದಾಗ ಒಂದು ಅವಿವೇಕ ಕಾಣಿಸಿತು. ಕವಿಶೈಲದ ಎದೆಗೇ ಒದ್ದಂತೆ ಟಾರು ರಸ್ತೆ ತನ್ನ ಕಪ್ಪು ನಾಲಗೆಯನ್ನು ಮೇಲಿನವರೆಗೂ ಚಾಚಿದೆ. ಹಣ ಹೆಚ್ಚಾದರೆ ಇಂಥ ಅವಿವೇಕಗಳೂ ನಡೆಯುತ್ತವೆ. ಈ ಗುಡ್ಡವನ್ನು ಹತ್ತಿ ಇಳಿಯುವುದರ ಸೊಗಸೇ ಬೇರೆ. ಇಲ್ಲಿನ ಕಲ್ಲು ಮಣ್ಣು ಮರ ಗಿಡ ಅನುಭವ ಕವಿಶೈಲಕ್ಕೆ ಬರುವವರಿಗೆ ಆಗಬೇಕು. ಕವಿನಡೆದಾಡಿದ ಜಾಗ ಎನ್ನುವ ಭಾವವೂ ಸುಳಿಯಬೇಕು. ಇದನ್ನು ಪವಿತ್ರ ಎಂದು ಭಾವಿಸದಿದ್ದರೂ ನಿಸರ್ಗದ ಜೊತೆ ಒಂದು ಬಗೆಯ ನಂಟಿಗೆ ಇದು ದಾರಿ ಮಾಡಿಕೊಡಬೇಕು. ಇಲ್ಲಿಗೆ ಬರುವವರು ಹೀಗೆ ಒಂದರ್ಧ ತಾಸನ್ನಾದರೂ ಕಳೆಯುವುದು ಸಾಧ್ಯವಾದರೆ ಅಂಥವರಿಗೆ ಕವಿಶೈಲದ ಅರ್ಥ ಬಿಚ್ಚಿಕೊಳ್ಳಬಹುದು. ಈ ಟಾರು ರಸ್ತೆಯ ‘ಸುಖ’ ಯಾರಿಗೂ ಏನನ್ನೂ ತಂದುಕೊಡಲಾರದು.
ಈ ಟಾರು ರಸ್ತೆಯ ತುದಿಗೆ ವಾಹನಗಳನ್ನು ತಂದು ನಿಲ್ಲಿಸಿದರೆ ಶವಪ್ರಸಾದರ ಕಲಾಕೃತಿಗಳ ಸೊಬಗೇ ಮುಕ್ಕಾದಂತೆ ಕಾಣಿಸುತ್ತದೆ. ದೂರದಿಂದ ನೋಡುತ್ತ ಬಂದಾಗಲೇ ಈ ಕಲಾಕೃತಿಗಳು. ಇವುಗಳ ಸುತ್ತ ವಾಹನಗಳ ಜಾತ್ರೆಯೇ ನೆರೆದರೆ?
ಇಲ್ಲಿಂದ ಮುಂದೆ ನಡೆದು ಸಾಗಿದರೆ ಅಲ್ಲಲ್ಲಿ ಚಪ್ಪಡಿ ಕಲ್ಲುಗಳು ಬಿದ್ದಿದ್ದವು. ಇವು ಏನನ್ನು ರೂಪಿಸುವ ಸಿದ್ಧತೆಯಲ್ಲಿವೆಯೋ! ಅಂತೂ ಕುವೆಂಪು ಅವರಿಗೆ ಬಿಡುಗಡೆ ಇಲ್ಲ ಎಂದುಕೊಂಡು ಮೇಲೇರಿದೆವು.
ಮನುಷ್ಯನ ಆಧುನಿಕ ನಾಗರಿಕತೆಯ ದಾಹ ಎಷ್ಟೊಂದು ಮೇಲಕ್ಕೆ ಏರಿದೆ ಎಂದರೆ ಕುವೆಂಪು ಸಮಾಧಿಯ ಸುತ್ತ ಮೆಕ್ಸಿಕನ್ ಹುಲ್ಲಿನ ಹೊದಿಕೆ. ಇದೇನು ಬೆಂಗಳೂರಿನ ಲಾಲ್ಬಾಗಿಗೆ ಬಂದೆವಾ ಎಂದು ಎಚ್ಚರಿಸುವಂಥ ನುಣುಪು ನುಣುಪು ಹುಲ್ಲ್ಲು.
ಕವಿಶೈಲದ ಸುತ್ತಲಿನ ಕಾಡು ನಿತ್ಯ ಹಸಿರಾಗಿ ನಗುತ್ತದೆ. ಮರಗಿಡಗಳು ಎಲೆ ಕಳಚಿ ಬೆತ್ತಲಾಗುವುದೂ ಒಂದು ಸೊಬಗು! ಚಿಗುರಿನ ಹಸಿರುಟ್ಟು ನಗುವುದೂ ಒಂದು ಸೊಗಸು. ಕವಿಶೈಲವನ್ನು ಆವರಿಸಿರುವ ಕಪ್ಪನೆಯ ಏಕಶಿಲೆಯ ಸೌಂದರ್ಯ ಸಹಜ ಸೌಂದರ್ಯ!
 

‍ಲೇಖಕರು G

February 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. ಶೇಷಗಿರಿ ಜೋಡಿದಾರ್

    Your write up is nice…
    Just I was wondering about you..I know your journey from Bangalore to others places.. been listening from others…time to time….today I got you…
    hope you are well settled….by now..
    Basavaraj… I am sheshagiri… remember… we lived together in K.R.Road… Jwalamukhi…press… with artist Vasudev and Bakakrishna…and of course my brother Madhu..who is no-more…now..

    ಪ್ರತಿಕ್ರಿಯೆ
  2. Anonymous

    yes, sheshagiri. they are memorable days. I met Madhu about three months ago in H.D.Kote. we shared many things. I inquired about you and other friends. It was a very sad thing; Madhu left this world so early.

    ಪ್ರತಿಕ್ರಿಯೆ
  3. Hema Sadanand Amin

    Sir, fabulous …. sahajavagi, yava ade tade illade, samanya shaba galindale, tamma baharavannu shrungarisuva uttama kalagarikege vandhane.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: