'ಸಾರ್ವತ್ರಿಕವಾಗುತ್ತಿರುವ ಎನ್ಕೌಂಟರ್ ಸಂಸ್ಕೃತಿ'

divakar
ನಾ ದಿವಾಕರ

ಅಹಿಂಸೆ, ಪರಧರ್ಮ ಸಹಿಷ್ಣುತೆ, ಶಾಂತಿ, ಭ್ರಾತೃತ್ವ ಮತ್ತು ಮಾನವೀಯತೆ ಈ ಎಲ್ಲ ಪದಪುಂಜಗಳು ಭಾರತದ ಸಾಂಸ್ಕೃತಿಕ ಸಂಕಥನದಲ್ಲಿ, ಸಾರ್ವಜನಿಕ ಚರ್ಚೆಗಳಲ್ಲಿ ಮತ್ತು ಸಾಮುದಾಯಿಕ ಚೌಕಟ್ಟಿನಲ್ಲಿ ಸಾಕಷ್ಟು ಮಹತ್ವ ಪಡೆದಿವೆ. ಇತಿಹಾಸ ಕಾಲದಿಂದಲೂ ಭಾರತೀಯ ಸಮಾಜ ಇಂತಹ ಉದಾತ್ತ ಮೌಲ್ಯಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡೇ ಬೆಳೆದುಬಂದಿದೆ ಎಂದು ವ್ಯಾಖ್ಯಾನಿಸುವುದನ್ನು ಕಾಣಬಹುದು. ಭಾರತದ ಸಾಂಸ್ಕೃತಿಕ ವೈವಿಧ್ಯತೆ ಶತಮಾನಗಳಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದಕ್ಕೆ ಈ ಉದಾತ್ತ ಮೌಲ್ಯಗಳೇ ಕಾರಣ ಎಂದೂ ಹೇಳಲಾಗುತ್ತದೆ. ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಈ ಮೌಲ್ಯಗಳನ್ನು ಪ್ರಭುತ್ವದ ನೆಲೆಯಲ್ಲೂ ಪ್ರತಿಪಾದಿಸಲಾಗುತ್ತದೆ. ಸ್ವತಂತ್ರ ಭಾರತ ಯಾವುದೇ ದೇಶದ ಮೇಲೆ ಸ್ವ ಪ್ರೇರಣೆಯಿಂದ ಆಕ್ರಮಣ ನಡೆಸದೆ ಇದ್ದರೆ ಅದಕ್ಕೆ ಈ ಮೌಲ್ಯಗಳೇ ಕಾರಣ ಎಂದು ಪ್ರತಿಪಾದಿಸಲಾಗುತ್ತದೆ. ವಾಸ್ತವತೆಯ ನೆಲೆಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ವಿಶ್ಲೇಷಿಸುವ ಬದಲು ಗ್ರಾಂಥಿಕ ಧರ್ಮ ಸೂಕ್ಷ್ಮಗಳ ನೆಲೆಯಲ್ಲೇ ವ್ಯಾಖ್ಯಾನಿಸುವ ಮೂಲಕ ಈ ಉದಾತ್ತ ಮೌಲ್ಯಗಳು ಭಾರತೀಯ ಸಂಸ್ಕೃತಿ(?)ಯಲ್ಲಿ ಹಾಸು ಹೊಕ್ಕಾಗಿವೆ ಎಂಬ ಪ್ರತಿಪಾದನೆಯನ್ನು ಕಾಣಬಹುದು.

1

ಆದರೆ ಮಾನವ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇಂತಹ ಗ್ರಾಂಥಿಕ ಧರ್ಮಸೂಕ್ಷ್ಮಗಳು ಮತ್ತು ಮೌಲ್ಯಗಳು ಎಲ್ಲ ಸಮಾಜಗಳಲ್ಲೂ ಪ್ರಚಲಿತವಾಗಿರುವುದನ್ನೂ ಹಾಗೆಯೇ ಯಾವುದೇ ಸಮಾಜವೂ ಸಹ ಈ ಮೌಲ್ಯಗಳನ್ನು ಆಚರಣೆಯಲ್ಲಿ ಪಾಲಿಸದಿರುವುದನ್ನು ಕಾಣಬಹುದು. ತಾತ್ವಿಕ ಮೌಲ್ಯಗಳು ಎಷ್ಟೇ ಉದಾತ್ತವಾಗಿ ಕಂಡುಬಂದರೂ ವಾಸ್ತವ ಸನ್ನಿವೇಶಗಳ ನೆಲೆಯಲ್ಲಿ ನೋಡಿದಾಗ ಮಾನವ ಸಮಾಜವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಈ ಮೌಲ್ಯಗಳೇ ಮಂಜಿನ ಪರದೆಯಂತೆ ಕಾಣುತ್ತವೆ. ಧರ್ಮ ಗ್ರಂಥಗಳ ಅಥವಾ ಧರ್ಮಗಳ ಶ್ರೇಷ್ಠತೆಯ ಚಿನ್ನದ ಪರದೆಯ ನೇಪಥ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಮಾನವ ಸಮಾಜ ಗಮನಿಸುತ್ತಲೇ ಬಂದಿದೆ. ಈ ದೌರ್ಜನ್ಯಗಳನ್ನು ಪ್ರತಿರೋಧಿಸುವ ದನಿಗಳ ಹುಟ್ಟಡಗಿಸಲು ಸಾಮುದಾಯಿಕ ಅಸ್ಮಿತೆ, ಸಾಂಸ್ಕೃತಿಕ ಹಿರಿಮೆ, ಸ್ಥಾಪಿತ ಸಾಮಾಜಿಕ ಕಟ್ಟಲೆಗಳು ಮತ್ತು ಭೌಗೋಳಿಕ ಗಡಿಗಳಲ್ಲಿ ಬಂಧಿಸಲ್ಪಟ್ಟಿರುವ ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಹಾಗಾಗಿಯೇ ಭಾರತೀಯ ಸಮಾಜದಲ್ಲಿ ಕಂಡುಬರುವ ಜಾತಿ ದೌರ್ಜನ್ಯಗಳು ಜಾಗತಿಕ ಸಂಕಥನದಲ್ಲಿ ದೇಶದ ಅಂತರಿಕ ವಿಚಾರವಾಗಿಬಿಡುತ್ತದೆ.

ಸ್ಥಾಪಿತ ವ್ಯವಸ್ಥೆಯ ಮಾನವ ವಿರೋಧಿ ನೀತಿ ಸಂಹಿತೆಗಳನ್ನು ಪ್ರತಿರೋಧಿಸುವ ದನಿಗಳ ಹುಟ್ಟಡಗಿಸುವ ಸಂಸ್ಕೃತಿ ಮತ್ತು ಸಂಪ್ರದಾಯ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಇತಿಹಾಸದ ಒಂದು ಭಾಗವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಪ್ರತಿರೋಧದ ದನಿಯನ್ನು ದಮನಿಸುವ ವಿಧಾನಗಳು ಬದಲಾಗಿವೆಯೇ ಹೊರತು ದಮನಕಾರಿ ಧೋರಣೆ ಬದಲಾಗಿಲ್ಲ ಎನ್ನುವುದನ್ನೂ ಒಪ್ಪಲೇಬೇಕಾಗುತ್ತದೆ. ಸಮಕಾಲೀನ ಭಾರತೀಯ ಸಮಾಜದಲ್ಲೂ ಇದೇ ಧೋರಣೆಯನ್ನು ಕಾಣಬಹುದು. ಜಾತಿ ರಾಜಕಾರಣ, ಸಾಮುದಾಯಿಕ ಅಸ್ಮಿತೆಗಳು, ಮತೀಯ ಮೂಲಭೂತವಾದ ಮತ್ತು ಪ್ರಾದೇಶಿಕತೆಯ ಅಂಧಾಭಿಮಾನ ಈ ಎಲ್ಲ ಆಯಾಮಗಳಲ್ಲೂ ಭಾರತೀಯ ಸಮಾಜ ಅಸಹಿಷ್ಣುತೆಯ ಆಗರವಾಗಿರುವುದು ಚಾರಿತ್ರಿಕ ಸತ್ಯ. ಅನ್ಯ ದ ಪರಿಕಲ್ಪನೆ, ನಾವು-ಅವರು ಭೇಧದ ಪರಿಕಲ್ಪನೆ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆಯ ನೆಲೆಯಲ್ಲಿ ಶ್ರೇಷ್ಠತೆಯ ಭಾವನೆ ಈ ಮೂರೂ ಧೋರಣೆಗಳು ಭಾರತೀಯ ಸಮಾಜದಲ್ಲಿನ ಸಹಿಷ್ಣುತೆಯನ್ನು ಕತ್ತು ಹಿಸುಕಿ ಕೊಂದುಹಾಕಿದೆ. ಈ ಹಂತಕ ಮನೋಭಾವಕ್ಕೆ ನೀರೆರೆದು ಪೋಷಿಸುವಲ್ಲಿ ಕಳೆದ ಮೂರು ನಾಲ್ಕು ದಶಕಗಳ ರಾಜಕಾರಣವೂ ತನ್ನದೇ ಆದ ಕೊಡುಗೆ ನೀಡಿದೆ.
ಭಾರತೀಯ ಸಂದರ್ಭದಲ್ಲಿ ಇಂದು ಯಾವುದೇ ಧರ್ಮ ಅಥವಾ ಧರ್ಮಪ್ರವರ್ತಕರು, ಯಾವುದೇ ಮಹನೀಯರು ಸ್ವತಂತ್ರರಾಗಿಲ್ಲ.

ಬುದ್ಧ ಬಸವರಿಂದ ಹಿಡಿದು ಅಂಬೇಡ್ಕರ್ವರೆಗೆ ಎಲ್ಲ ದಾರ್ಶನಿಕರನ್ನೂ ಭಕ್ತಿ, ಶ್ರದ್ಧೆ ಮತ್ತು ಅಂಧಾಭಿಮಾನದ ಸರಳುಗಳಲ್ಲಿ ಬಂಧಿಸಲಾಗಿದೆ. ಅಭಿಮಾನದ ಶರಪಂಜರದಲ್ಲಿ ಬಂಧಿಯಾಗಿರುವ ಈ ಮಹನೀಯರ ತತ್ವಗಳ ಸಮಾಧಿಯಾಗಿದ್ದರೂ ಇವರ ಸುತ್ತಲು ನಿರ್ಮಿತವಾಗಿರುವ ಪ್ರಭಾವಳಿ ಮತ್ತು ಪುತ್ಥಳಿಗಳ ಸುತ್ತ ನಿರ್ಮಿಸಲಾಗಿರುವ ಬೇಲಿಗಳು ಸಮಾಜದ ಆಂತರ್ಯದಲ್ಲಿ ಹಿಂಸಾತ್ಮಕ ಧೋರಣೆಯನ್ನು ಹೆಚ್ಚಿಸುತ್ತಿರುವುದನ್ನು ಕಾಣಬಹುದು. ಇದು ವಿಚಾರವಾದಿಗಳನ್ನು ಗಂಭೀರವಾಗಿ ಕಾಡುತ್ತಿರುವ ವಿಚಾರವೂ ಹೌದು. ಎಲ್ಲವನ್ನೂ ಪ್ರಶ್ನಿಸುತ್ತಲೇ ಸತ್ಯದ ಸಾಕ್ಷಾತ್ಕಾರದತ್ತ ಮುನ್ನಡೆಯುವ ಉದಾತ್ತ ಚಿಂತನೆಯನ್ನು ಸಾಕಾರಗೊಳಿಸುವ ವಿಚಾರವಾದಿಗಳ ಪ್ರಯತ್ನಕ್ಕೆ ಅಂಧ ಶ್ರದ್ಧೆ, ಅಂಧಾಭಿಮಾನ ತಡೆಗೋಡೆಗಳಾಗಿ ಪರಿಣಮಿಸಿವೆ. ಮತ್ತೊಂದೆಡೆ ತಮ್ಮ ಶ್ರದ್ಧಾಭಕ್ತಿಗಳಿಗೆ ಪ್ರತಿರೋಧ ವ್ಯಕ್ತಪಡಿಸುವ ಯಾವುದೇ ದನಿಯನ್ನು ಇನ್ನಿಲ್ಲವಾಗಿಸುವ ಆಕ್ರೋಶವೂ ಜನಸಮುದಾಯಗಳಲ್ಲಿ ಹೆಚ್ಚಾಗುತ್ತಿದೆ.

2

ಸೋಮನಾಥ ರಥಯಾತ್ರೆಯ ಚಕ್ರದಡಿ ಭೂಗತವಾದ ದ್ವೇಷದ ಬೀಜಗಳು ಶೀಘ್ರ ಮೊಳಕೆಯೊಡೆದು ಇಂದು ಹೆಮ್ಮರವಾಗಿ ಬೆಳೆದುನಿಂತಿವೆ. ಸ್ನೇಹ, ಸಹಬಾಳ್ವೆ ಮತ್ತು ಮಾನವತೆಯ ಮೌಲ್ಯಗಳನ್ನು ಬದಿಗೊತ್ತಿ ಸ್ವಾರ್ಥ ರಾಜಕಾರಣವನ್ನು ಪೋಷಿಸುವಲ್ಲಿ ಈ ಬಿತ್ತ ಬೀಜಗಳು ಪ್ರಮುಖ ಪಾತ್ರ ವಹಿಸಿವೆ. ಅಯೋಧ್ಯೆಯ ಇಟ್ಟಿಗೆಗಳಿಂದ ಯಾವುದೇ ಸ್ಥಾವರವನ್ನು ನಿಮರ್ಿಸಲಾಗಿಲ್ಲ ನಿಜ. ಆದರೆ ಈ ಇಟ್ಟಿಗೆಗಳ ಹಿಂದಿರುವ ಕ್ರೌರ್ಯ, ದ್ವೇಷ, ಅಸೂಯೆ, ಅಸಹನೆ ಮತ್ತು ಅಹಮಿಕೆಗಳು ಮಾನವೀಯತೆ ಎಂಬ ಜಂಗಮವನ್ನು ನಿನರ್ಾಮಮಾಡಿರುವುದು ಸತ್ಯ. ತಮ್ಮ ನೆಲೆಯನ್ನು ಒಪ್ಪದ ದನಿಗಳ ಹುಟ್ಟಡಗಿಸಲು ಹತ್ಯೆಯೊಂದೇ ಮಂತ್ರ ಎಂಬ ತತ್ವ ಇಂದು ಜಾರಿಯಲ್ಲಿದೆ. ಈ ತತ್ವದ ಪ್ರಭಾವದಿಂದಾಗಿಯೇ ಪೊಲೀಸ್ ಎನ್ಕೌಂಟರ್ಗಳು ಜನಸಾಮಾನ್ಯರಿಗೆ ವೀರೋಚಿತವಾಗಿ ಕಾಣುತ್ತದೆ. ಎನ್ಕೌಂಟರ್ ಸ್ಪೆಷಲಿಸ್ಟ್ ಎಂಬ ಶ್ಲಾಘನೆಯನ್ನು ಇದೇ ಹಿಂಸಾತ್ಮಕ ಧೋರಣೆಯ ಪ್ರಗತಿಯಲ್ಲಿ ಕಾಣಬಹುದು. ಭೌಗೋಳಿಕ ರಾಷ್ಟ್ರದ ರಕ್ಷಣೆಯಲ್ಲಿ ತೊಡಗಿರುವ ಪೊಲೀಸ್ ಅಥವಾ ಸೇನಾಧಿಕಾರಿಗಳಿಗೆ ದೇಶದ್ರೋಹಿಗಳನ್ನು ಎನ್ಕೌಂಟರ್ನಲ್ಲಿ ಅಂತ್ಯಗೊಳಿಸುವ ಹಕ್ಕು ನೀಡಿರುವ ಪ್ರಜ್ಞಾವಂತ ಸಮಾಜವೇ, ಯಾವುದೇ ಎಲ್ಲೆ ಇಲ್ಲದ ಧರ್ಮ ಅಥವಾ ಸಂಪ್ರದಾಯದ ರಕ್ಷಣೆಯಲ್ಲಿ ತೊಡಗಿರುವವರಿಗೆ ಧರ್ಮ ವಿರೋಧಿಗಳನ್ನು, ಸಂಪ್ರದಾಯ ವಿರೋಧಿಗಳನ್ನು ಎನ್ಕೌಂಟರ್ನಲ್ಲಿ ಅಂತ್ಯಗೊಳಿಸುವ ಹಕ್ಕನ್ನೂ ನೀಡಿದೆ. ಇದು ದುರಂತವಾದರೂ ಸತ್ಯ.

ನರೇಂದ್ರ ಧಬೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ ಎಂ ಕಲಬುರ್ಗಿ ಇಂತಹ ಒಂದು ಎನ್ಕೌಂಟರ್ ಸಂಸ್ಕೃತಿಗೆ ಬಲಿಯಾಗಿರುವ ವಿಚಾರವಾದಿಗಳು. ಇವರ ಹತ್ಯೆಗೆ ಮೂಲ ಕಾರಣ ಸ್ಥಾಪಿತ ವ್ಯವಸ್ಥೆಗೆ ಪ್ರತಿರೋಧ ವ್ಯಕ್ತಪಡಿಸಿರುವುದು. ಈ ಹಂತಕರಿಗೆ ಶಿಕ್ಷೆಯಾಗಬಹುದು ಆದರೆ ಇದೇ ಹಂತಕರು ರಕ್ಷಿಸಲೆತ್ನಿಸುವ, ಸಮರ್ಥಿಸುವ ಸ್ಥಾಪಿತ ವ್ಯವಸ್ಥೆಯನ್ನು ಮಾನ್ಯ ಮಾಡುವ ನಮ್ಮ ಸಮಾಜವನ್ನು ಪ್ರಜ್ಞಾವಂತ ಸಮಾಜ ಎಂದು ಹೇಗೆ ಕರೆಯಲು ಸಾಧ್ಯ ? ಸಲ್ಮಾನ್ ರಷ್ದಿ, ತಸ್ಲಿಮಾ ನಸ್ರಿನ್, ಅರುಂಧತಿ ರಾಯ್ ಮುಂತಾದ ಲೇಖಕರು ಇಂತಹುದೇ ಎನ್ಕೌಂಟರ್ಗಳಿಂದ ತಪ್ಪಿಸಕೊಂಡು ಬದುಕುತ್ತಿದ್ದಾರೆ. ಪೆರುಮಾಳ್ ಮುರುಗನ್ ಅವರಂತಹ ಲೇಖಕರು ತಮ್ಮೊಳಗಿನ ಸಾಹಿತಿಯನ್ನು ಸ್ವತಃ ಹತ್ಯೆ ಮಾಡಿ ತೃಪ್ತರಾಗಿದ್ದಾರೆ. ಕಲಬುರ್ಗಿ, ಪನ್ಸಾರೆ, ಧಬೋಲ್ಕರ್ ತಮ್ಮ ಪ್ರತಿರೋಧಕ್ಕೆ ಪ್ರತಿಯಾಗಿ ಜೀವವನ್ನೇ ಅರ್ಪಿಸಿದ್ದಾರೆ. ಇಲ್ಲಿ ಹಂತಕರು ಯಾರು ರಕ್ಷಕರು ಯಾರು ಎಂಬ ಪ್ರಶ್ನೆ ಎದುರಾದಾಗ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯೇ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಶಿಕ್ಷೆ ಆಗುವುದೇ ಆದರೆ ಯಾರಿಗೆ ? ಇದು ಮೂರ್ತ ಪ್ರಶ್ನೆ .

‍ಲೇಖಕರು G

September 14, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: