ವೆಂಕಿ
ಹೈದ್ರಾಬಾದ್ ಎಲ್ಲೆಲ್ಲೂ ಸದ್ದು ಮಾಡುತ್ತಿರುವಾಗ ನ್ಯೂಯಾರ್ಕಿನಲ್ಲಿ ಹೈದ್ರಾಬಾದಿಯೊಬ್ಬಳು ಸುದ್ದಿ ಮಾಡುತ್ತಿದ್ದಾಳೆ. ಕನಿಷ್ಠ ನ್ಯೂಯಾರ್ಕಿನಲ್ಲಿರುವ ಭಾರತೀಯರ ಮಧ್ಯೆ. ಅದು ಇನ್ಯಾರು? ಹೈದ್ರಾಬಾದ್ ಮುತ್ತು ಎಂದೇ ಹೆಸರಾದ ಸಾನಿಯಾ! ಕಚೇರಿಗಳಲ್ಲಿ, ಭಾರತೀಯರ ಡಿನ್ನರ್ ಪಾರ್ಟಿಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಜರುಗುವ ಪಟ್ಟಾಂಗಗಳು ಸಾನಿಯಾ ಇಲ್ಲದೆ ಮುಕ್ತಾಯವಾಗುವುದೇ ಇಲ್ಲ. ಈ ಬಾರಿಯ ಟೂರ್ನಮೆಂಟಲ್ಲಿ ಸಾನಿಯಾ ಎಷ್ಟು ದೂರ ಸಾಗುತ್ತಾಳೆ ಎಂಬುದೇ ಎಲ್ಲರ ಮಾತಿನ ಮುಖ್ಯ ಹುರುಳು.
ಆಗಸ್ಟ್, ಸೆಪ್ಟೆಂಬರ್ ಎಂದರೆ ನ್ಯೂಯಾರ್ಕಿನಲ್ಲಿ ಅದು ಟೆನ್ನಿಸ್ ಹಬ್ಬ. ಯುಎಸ್ ಓಪನ್ ಎಂದೇ ಹೆಸರಾದ ಈ ಹಬ್ಬ ಎಲ್ಲರಿಗೂ ಹುಚ್ಚು ಹಿಡಿಸುತ್ತದೆ. ನಾನು ಟೆನ್ನಿಸ್ ಅಭಿಮಾನಿಯೇನಲ್ಲ. ಆದರೂ ನ್ಯೂಯಾರ್ಕಿನಲ್ಲಿದ್ದರೆ ಮೂರು ವಾರವಾದರೂ ಈ ಹುಚ್ಚು ತಗುಲಿಕೊಳ್ಳಲೇಬೇಕು.
ಫ್ಲೆಷಿಂಗ್ ಮೆಡೋಸ್ ಪಾರ್ಕಿನಲ್ಲಿರುವ ಯುಎಸ್ ಟಿಎ ನ್ಯಾಷನಲ್ ಟೆನ್ನಿಸ್ ಸೆಂಟರ್ ನ ಪ್ರಧಾನ ಸ್ಟೇಡಿಯಂನಲ್ಲಿ ಈ ಜ್ವರ ಆರಂಭವಾಗುತ್ತದೆ. ಈ ಓಪನ್ ಟೆನ್ನಿಸ್ ನಡೆಯುವ ಸ್ಟೇಡಿಯಂನ ಹೆಸರು ಆರ್ಥರ್ ಆಶ್ ಸ್ಟೇಡಿಯಂ.
ಬದುಕಿನಲ್ಲಿ ಎದುರಾದ ಎಲ್ಲಾ ಅಡ್ಡಿ ಆತಂಕಗಳನ್ನು ಮೀರಿ ಟೆನ್ನಿಸ್ ತಾರೆಯಾಗಿ ಮಿನುಗಿದ ಆರ್ಥರ್ ಆಶ್, ಅಮೆರಿಕಾದ ಗ್ರೇಟ್ ಹೀರೋ. ಆಫ್ರೋ ಅಮೆರಿಕನ್ ಆಗಿದ್ದ ಈತ ಜನಾಂಗೀಯ ಅವಮಾನಗಳನ್ನು ಉಣ್ಣಬೇಕಾಗಿ ಬಂದಿತ್ತು. ಆದರೂ ಆತನಲ್ಲಿದ್ದ ಕೆಚ್ಚು ಮೂರು ಬಾರಿ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ಧರಿಸಿಕೊಳ್ಳುವಂತೆ ಮಾಡಿತ್ತು. ಧೈರ್ಯ ಹಾಗೂ ನಿಷ್ಠೆಯ ಮೂಲಕ ಯಾವುದನ್ನೂ ಕೈವಶ ಮಾಡಿಕೊಳ್ಳಬಹುದು ಎಂಬುದನ್ನು ಇಡೀ ಜಗತ್ತಿಗೇ ಈತ ಮನವರಿಕೆ ಮಾಡಿಕೊಟ್ಟುಬಿಟ್ಟ.
ನಾಗರಿಕ ಹಕ್ಕುಗಳ ಚಳುವಳಿಯಲ್ಲಿ ಸಕ್ರಿಯವಾಗಿದ್ದ ಆಶ್, ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ದನಿಯೆತ್ತಿದ. ಆದರೆ ವಿಧಿಯ ವ್ಯಂಗ್ಯ ವಿಚಿತ್ರವಾಗಿತ್ತು. ಆಶ್ ಬೇರೊಬ್ಬರಿಂದ ರಕ್ತ ದಾನವಾಗಿ ಪಡೆಯುವಾಗ ಎಚ್ ಐ ವಿ ಕೂಡ ಈತನೊಳಗೆ ನುಸುಳಿಕೊಂಡಿತ್ತು. ೧೯೯೩ರಲ್ಲಿ ಏಡ್ಸ್ ಈತನನ್ನು ಕ್ರೀಡಾಂಗಣವಿಲ್ಲದೆಯೇ ಮಣಿಸಿತು. ಕೇವಲ ಕಪ್ಪು ಜನರ ಮಧ್ಯೆ ಮಾತ್ರವಲ್ಲ, ಇಡೀ ಅಮೆರಿಕಾದ ಹೃದಯದಲ್ಲಿ ಆಶ್ ಆಳವಾಗಿ ಉಳಿದುಹೋದ. ಆರ್ಥರ್ ಆಶ್ ಹೆಂಡತಿಗೆ ಫೋಟೋಗ್ರಫಿಯ ಇನ್ನಿಲ್ಲದ ಹುಚ್ಚು. ಹಾಗಾಗಿ ಮಗಳಿಗೆ “ಕೆಮೆರಾ” ಎಂದೇ ಹೆಸರಿಟ್ಟಿದ್ದಳು. ಆರ್ಥರ್ ಇಲ್ಲವಾದಾಗ ಆಕೆಗಿನ್ನೂ ಆರು ವರ್ಷ.
ನಮ್ಮ ಸಮಾಜವನ್ನು ಒಡೆಯುವ ಕೈಗಳು ಅನೇಕ. ಆದರೆ ಆರ್ಥರ್ ಆಶ್ ಮತ್ತು ನಮ್ಮ ಸಾನಿಯಾ ಇಬ್ಬರೂ ಸಮಾಜವನ್ನು ಬೆಸೆಯುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ, ಕ್ರೀಡೆ ಎಂಬ ಮಹಾ ಅಸ್ತ್ರದ ಮೂಲಕ.
ಸಾನಿಯಾ ಈ ಟೂರ್ನಮೆಂಟಲ್ಲಿ ಇನ್ನೂ ಮುಂದೆ ಹೆಜ್ಜೆ ಹಾಕುತ್ತಾ ಹೋದಲ್ಲಿ ಅವಳ ಆಟ ನೋಡಲು ನಾನೂ ಆಫೀಸಿಗೆ ಬಂಕ್ ಮಾಡುತ್ತೀನೇನೊ. ಆದರೆ ಬ್ಲಾಕಿನಲ್ಲಿ ಟಿಕೆಟ್ ಖರೀದಿಸುವಾಗ ಮಾತ್ರ ಹುಷಾರಾಗಿರಬೇಕು. ನ್ಯೂಯಾರ್ಕ್ ಪೊಲೀಸರು ಈ ಬಾರಿ ಬ್ಲಾಕ್ ದಂಧೆಯ ಮೇಲೆ ಚಾಟಿ ಬೀಸಿದ್ದಾರೆ. ನ್ಯೂಯಾರ್ಕಿಗೆ ನಾನು ಬಂದಿರುವುದು ಇಲ್ಲಿನ ಜೈಲಲ್ಲಿ ಕಂಬಿ ಎಣಿಸುವುದಕ್ಕಂತೂ ಅಲ್ಲ. ಅಲ್ಲವಾ?





beautiful venky
keep it up