ಸಾಗರಕ್ಕೆ ಸಾಗರವೇ ಉಪಮೆ…

ಗಿರಿಜಾ ಶಾಸ್ತ್ರಿ

‘ಸಾಗರ’ ಈ ಶಬ್ದವನ್ನು ಆತ್ಮಸಾತ್ ಮಾಡಿಕೊಳ್ಳಬೇಕೆಂದರೆ ಸಾಗರದ ಮಧ್ಯಕ್ಕೆ ಬಂದು ನಿಲ್ಲಬೇಕು. ಜನಸಾಗರ, ಕರುಣಾಸಾಗರ, ಪ್ರೇಮಸಾಗರ ಇಂತಹ ಶಬ್ದಗಳನ್ನೆಲ್ಲಾ ಸಾಗರವನ್ನು ನೋಡದೆಯೇ ಚರ್ವಿತ ಚರ್ವಣವಾಗಿ ಬಳಸಿಬಿಡುತ್ತೇವೆ. ಅದರ ಅನುಭೂತಿಯಾಗಬೇಕೆಂದರೆ ಅದರ ಭೂಮಸದೃಶ ಆಕೃತಿಯ ಒಳಗೆ, ಒಂದು‌ ಸುರಕ್ಷಿತ ದೂರದಲ್ಲಿ ನಿಂತರೆ ಮಾತ್ರ ಭೂಮಾನುಭೂತಿ ಕಣ್ಮನಗಳಿಗೆ ಹತ್ತಬಹುದು. ಇಲ್ಲದಿದ್ದರೆ ಸೌಂದರ್ಯಕ್ಕೂ, ಸಾವಿಗೂ ನಡುವೆ ಒಂದೇ ನೆಗೆತ ಸಾಕು.

ಪ್ರಾಚೀನ ಕಾವ್ಯಗಳಲ್ಲಿ ಅಷ್ಟಾದಶವರ್ಣನೆಯ ಭಾಗವಾಗಿ ಸಮುದ್ರದ ವರ್ಣನೆ ಕಡ್ಡಾಯವಾಗಿ ಇರಲೇಬೇಕೆಂಬ, ಇದ್ದರೆ ಮಾತ್ರ ಪರಿಪೂರ್ಣ ಕಾವ್ಯವಾಗುತ್ತದೆ ಎಂಬ ನಿಯಮವಿತ್ತು. ಈ ನಿಯಮವನ್ನು ಪೂರ್ಣಗೊಳಿಸಬೇಕೆಂಬ ಹಟದಲ್ಲಿ ಸಮುದ್ರವನ್ನು ನೋಡದೆಯೇ ಕವಿಗಳು ಸಮುದ್ರವನ್ನು ಕಾಲ್ಪನಿಕವಾಗಿ ಹಿಡಿಯುವ ಭರದಲ್ಲಿ ಅವುಗಳೊಳಗೆ ಕಮಲಗಳನ್ನು ಸೃಷ್ಟಿಸಿ ಔಚಿತ್ಯಭಂಗ ಮಾಡಿದುದೂ ಇದೆ. ನಿಜವಾಗಿ ಸಾಗರವನ್ನು ಅತ್ಯಂತ ಶಕ್ತಿಯುತವಾಗಿ ಹಿಡಿಯಲು ಪ್ರಾಚೀನ ಕವಿಗಳಲ್ಲಿ ಸಾಧ್ಯವಾಗಿರುವುದು ನಮ್ಮ ರತ್ನಾಕರವರ್ಣಿಗೆ ಮಾತ್ರ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅವನ ಹೆಸರೇ ರತ್ನಾಕರ!! ರತ್ನಾಕರವರ್ಣಿ ಸಾಗರದ ಪಕ್ಕದಲ್ಲೇ (ಮೂಡುಬಿದಿರೆ) ಬೆಳೆದವನು.

“ತೆರೆ ತೆರೆ ಹೆದ್ದೆರೆ” ಹೀಗೆ ತೆರೆಗಳು ಒಂದನ್ನೊಂದು ಅಟ್ಟಿಸಿಕೊಂಡು ಓಡಿ ಆಡುವ ಆಟವನ್ನು ಕಣ್ಣಾರೆ ಕಂಡವನು! ಅದಕ್ಕೂ ಮೊದಲು “ನಿಚ್ಚಂ ಪೊಸತು ಆರ್ಣವಂಬೊಲ್” ಎಂದು ಪಂಪ ಹೇಳುತ್ತಾನೆ. ಕನ್ನಡ ಕಾವ್ಯದೊಳಗೆ ಅದು ಬಹುಶಃ ಸಮುದ್ರದ ಮೊತ್ತ ಮೊದಲ ಉಲ್ಲೇಖವಿರಬೇಕು!

ಗೋಕಾಕರ‌ “ಸಮುದ್ರ ಗೀತೆಗಳಿಗೆ” ಇಂಗ್ಲೆಂಡಿಗೆ ಪ್ರಯಾಣಮಾಡುವಾಗ ಸಮುದ್ರದ ಸಮ್ಮುಖದಲ್ಲಿ ಅವರಿಗೆ ದಕ್ಕಿದ ಭೂಮಾನುಭೂತಿಯೇ ಕಾರಣವಿರಬೇಕು. “ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು” ಎಂದು ಸ್ವಚ್ಛಂದ ಹಾಡಿದರು. ಆಧುನಿಕ ಕನ್ನಡಕಾವ್ಯದೊಳಗೆ ಮೊದಲ ಬಾರಿಗೆ ಸಮುದ್ರ ಹೊಕ್ಕಿಬಿಟ್ಟಿತು.

ನಾನೂ ೩೮ ವರುಷಗಳಿಂದ ಮುಂಬಯಿಯಲ್ಲಿ, ಹಾಗೂ ಅದರ ಸುತ್ತಮುತ್ತ ಸಮುದ್ರವನ್ನು ಕಾಣುತ್ತಲೇ ಬಂದಿರುವೆ. ಎಲಿಫೆಂಟಾಗೆ ಹೋಗುವಾಗ ಅದ್ಭುತ ಎನಿಸಿದ್ದಿದೆ. ಆದರೆ ನನಗೆ ನಿಜವಾದ ಅರ್ಥದಲ್ಲಿ ಸಾಗರನ ದರ್ಶನವಾದದ್ದು ವಾಷಿಂಗ್ಟನ್ ನ ಅನಾರ್ಕೊಟಿಸ್ ಎಂಬ ಪೋರ್ಟ್ ನ ಶಾಂತಸಾಗರದ ಸಮ್ಮುಖದಲ್ಲಿ! ಅದೊಂದು ಹದ್ದು ಮೀರಿದ ಅಪರಂಪಾರ ಶರಧಿಯ ದರ್ಶನ.

ಸಾಗರವೆಂದರೆ ಕೇವಲ ನೀರಲ್ಲ. ಅದೊಂದು ಅನನ್ಯ ಜೀವಿಗಳ ಲೋಕ. ಈ ಪೋರ್ಟ್ ಡಾಲ್ಫಿನ್ ಜಾತಿಯ ತಿಮಿಂಗಲಗಳ ( ಕಿಲ್ಲರ್ ವೇಲ್ಸ್) ವೀಕ್ಷಣೆಗೆ ಪ್ರಸಿದ್ಧವಾದುದು. ಸಿಯಾಟಲ್ ನಗರದಿಂದ ಇಲ್ಲಿಗೆ ಸುಮಾರು ಒಂದು ತಾಸಿನ ಪ್ರಯಾಣ. ತೀರದಿಂದ ಸಾಗರದ ಮೇಲೆ ಸುಮಾರು ಮೂರುವರೆ- ನಾಲ್ಕು ತಾಸುಗಳ ಪ್ರಯಾಣ. ನಾವು ಸ್ವಲ್ಪ ತಡವಾಗಿ ತಲಪಿದುದರಿಂದ, ನಾವು ಬರುವುದಕ್ಕೇ ಕಾಯುತ್ತಿದ್ದಂತೆ ದೋಣಿ ಹೊರಟಿತು. ಆ ದೋಣಿ ನನ್ನ ಕಲ್ಪನೆಗೂ ಮೀರಿದ ಒಂದು ಹಡಗಿನಂತಿತ್ತು. ಒಂದು ನೂರು ಮಂದಿ ಕುಳಿತುಕೊಳ್ಳಬಹುದಾದಂತಹ ಸುಸಜ್ಜಿತವಾದ ದೊಡ್ಡ ದೋಣಿಯದು. ಒಳಗೇ ಸಣ್ಣ ಹೋಟೆಲ್, ದೋಣಿಯೂ ಕೂಡ ಹೋಟೆಲ್ ನಂತೆಯೇ ಸಜ್ಜಾಗಿತ್ತು ಎಲ್ಲರ ಮುಂದೆ ಇರಿಸಲಾದ ಸಣ್ಣ ಮೇಜುಗಳು, ಕುಳಿತುಕೊಳ್ಳಲು ಸುಖಾಸೀನಗಳು !!! ಎಲಿಫೆಂಟಾಗೆ ಹೋಗುವಾಗ ಒಂದು ತಾಸು ಮುರುಕಲು ಬೆಂಚಿನಲ್ಲಿ ಕುಳಿತ ನೆನಪಾಯಿತು.

ಹೀಗೆ ತಿಮಿಂಗಲಗಳ ದರ್ಶನಕ್ಕೆ ಹೊರಡುವುದೆಂದರೆ ಒಂದು ಯಾತ್ರೆಗೆ ಹೊರಟಂತೆ! ಎಲ್ಲ ಕಾಲಕ್ಕೂ ಎಲ್ಲರಿಗೂ ಅವು ದರ್ಶನ ಕೊಡುವುದಿಲ್ಲವಂತೆ. ಅದೃಷ್ಟ ಇದ್ದವರಿಗೆ ಮಾತ್ರ ಈ ದರ್ಶನ ಲಭ್ಯ ಎಂಬೆಲ್ಲಾ ಮಾತುಗಳಿವೆ. ಏಕೆಂದರೆ ಇವು ದಿನಕ್ಕೆ ನೂರು ಮೈಲು ಚಲಿಸುತ್ತವೆ. ಅವು ಕುಪ್ಪಳಿಸುತ್ತಾ ಜೊತೆ ಜೊತೆಯಾಗಿ ನೀರಾಟವಾಡುತ್ತಾ, ಬಾಯಿಯಿಂದ ನೀರನ್ನು ಫುರ್ ಎಂದು ಕಾರಂಜಿಯನ್ನು ಹಾರಿಸುತ್ತಾ ಓಡಾಡುವುದಕ್ಕೂ ನಮ್ಮ ದೋಣಿಗಳು ಅಲ್ಲಿ ಹಾಯುವುದಕ್ಕೂ ಕಾಲಕೂಡಿ ಬರಬೇಕು! ಆದರೆ ಈಗ ಸ್ಯಾಟಲೈಟ್ ನ ಈ ಯುಗದಲ್ಲಿ ಎಲ್ಲ ಸಾಧ್ಯವಿದೆ.

ತಿಮಿಂಗಲಗಳು ಓಡಾಡುತ್ತಿರುವುದನ್ನು ಕಂಡ ದೋಣಿಗರು ಅದೇ ಉದ್ದೇಶಕ್ಕೆ ಹೊರಟ ಮತ್ತೊಂದು ದೋಣಿಯಲ್ಲಿ ಯಾತ್ರೆಹೊರಟವರಿಗೆ ಪರಸ್ಪರ ಸುದ್ದಿ ಮುಟ್ಟಿಸುತ್ತಾರೆ. ದೋಣಿ ಆ ಸುದ್ದಿಯ ಜಾಡು ಹಿಡಿದು ದಿಕ್ಕು ಬದಲಿಸುತ್ತದೆ. ನಾವಂತೂ ದೋಣಿಯ ಪೂರ್ವ ಬಾಗಿಲಿನಿಂದ ಪಶ್ಚಿಮಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ ಓಡಾಡಿದ್ದೇ ಓಡಾಡಿದ್ದು. ತಿಮಿಂಗಿಲಗಳ ಜಾಡು ಹಿಡಿದು ದೋಣಿಯೂ ತಿರುಗುತ್ತದಲ್ಲ? ನಮಗೆ ಅಲ್ಲಿ ವಾಸವಾಗಿರುವ ಎಂಟು ತಿಮಿಂಗಿಲಗಳೂ ಕಂಡವು. ಒಂದಂತೂ ನಮ್ಮ ದೋಣಿಯ ಬುಡದಲ್ಲೇ ಡ್ಯಾನ್ಸ್ ಮಾಡುತ್ತಾ ಹಾದು ಹೋಯಿತು. ಬೃಹತ್ ಗಾತ್ರದ ನೀರೆ! ಅದೊಂದು ಭವ್ಯ ದರ್ಶನ.

ಇದು ನಿಜವಾಗಿ ನೀರೆಯರ ಪ್ರಪಂಚವೇ! ತಿಮಿಂಗಲಗಳದ್ದು ಅದ್ಭುತವಾದ ಮಾತೃಪ್ರಧಾನ ಸಮಾಜ. ತಮ್ಮ ಕೌಟುಂಬಿಕ ಸಂಬಂಧಗಳನ್ನು ಜೀವಮಾನವಿಡೀ ಕಾಪಿಡುತ್ತವೆ. ಇಲ್ಲಿ ತಾಯಿ ತಿಮಿಂಗಲದ ಅಧಿಕಾರವೇ‌ ನಡೆಯುವುದು. ಹದಿನೆಂಟು ತಿಂಗಳು ಗರ್ಭ ( ಜಗತ್ತಿನ ಜೀವಿಗಳಲ್ಲೇ ಅಧಿಕ ಕಾಲಾವಧಿ) ಧರಿಸಿ ಒಂದೇ ಮರಿಯನ್ನು ಹೆತ್ತು, ಅದಕ್ಕೆ ಎರಡು ವರುಷಗಳ ಕಾಲ ಹಾಲೂಡುತ್ತವೆ. ಆನಂತರ ಅವುಗಳಿಗೆ ಬೇಟೆಯಾಡುವ, ತಮ್ಮನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ತರಬೇತಿ ಶುರು. ಅಮ್ಮಂದಿರು ಇಲ್ಲದಿದ್ದರೆ ಮಕ್ಕಳು ಬದುಕುವುದೇ ಇಲ್ಲ. ತಾಯಿಗೆ ಏನಾದರೂ ಸಾವು ಬಂದರೆ ಒಂದೆರಡು ವರುಷಗಳಲ್ಲಿ ಮಕ್ಕಳೂ ಅಸುನೀಗುತ್ತವೆ.

ಗಂಡು ಮಕ್ಕಳು ಯಾವಾಗಲೂ ತಾಯಿಯ ಒಡನೆಯೇ ಓಡಾಡುತ್ತವೆ. ಹೆಣ್ಣು ಸಂತಾನಗಳು ಗರ್ಭಾವಸ್ಥೆಗೆ ಬಂದಾಗ ತಾಯಿಯಿಂದ ಪ್ರತ್ಯೇಕವಾಗಿಬಿಡುತ್ತವೆ. ಗಂಡುಗಳು ಮಾತ್ರ ಹೊರಗಿನ ಹೆಣ್ಣುಗಳ ಜೊತೆಗೆ ಸೇರಿ ಅವುಗಳ ಗರ್ಭಕ್ಕೆ ಕಾರಣವಾಗಿ ಮತ್ತೆ ತಮ್ಮ ಅಮ್ಮನಲ್ಲಿಗೇ ಬಂದುಬಿಡುತ್ತವೆ. ಅಮ್ಮ ಗರ್ಭಿಣಿಯಾಗಿರುವಾಗ, ಹಾಲೂಡುವ ಕಾಲದಲ್ಲಿ ಮತ್ತು ತಮ್ಮ ಕಿರಿಯ ತಮ್ಮ ತಂಗಿಯರನ್ನು ಕಾಯುವ ಕೆಲಸ ಇವುಗಳದ್ದೇ ಆಗಿರುತ್ತದೆ.

ಹುಟ್ಟುವಾಗಲೇ ಯಾವುದೋ ಒಂದು ಖಾಯಿಲೆಯಿಂದ ನರಳುತ್ತಿದ್ದ ಮಗುವನ್ನು ಅದರ ಅಕ್ಕ ಅಣ್ಣಂದಿರೆಲ್ಲಾ‌ಸೇರಿ ಜೋಪಾನ ಮಾಡಿದ ವಿಷಯವನ್ನು ಅಲ್ಲಿನ ನಿರ್ವಾಹಕಿ ಹೇಳಿದಳು. ಗಂಡು ಮಕ್ಕಳು ಎಂದೂ ಅಮ್ಮಂದಿರ ಸೆರಗು ಹಿಡಿದೇ ತಿರುಗುವ ‘Mumma’s Boys’ ! ಹಾಗೆಂದು ಇವು ಇತರ ಪ್ರಾಣಿಗಳಂತೆ ತಾಯ್ಗಂಡರಲ್ಲ. ತಾಯಿ ಮತ್ತು ಸಹೋದರಿಯರನ್ನು ಕೂಡುವುದು ತಿಮಿಂಗಿಲಗಳ ಸಮಾಜದಲ್ಲಿ ನಿಷೇಧ. ಇವುಗಳ ಕುಟುಂಬದ ಗುರುತು ದೇಹದ ಮೇಲೆ ಮೂಡುವ ಗೆರೆಗಳಿಂದ ಪತ್ತೆಯಾಗುತ್ತವಂತೆ. ಹೀಗಾಗಿ ತಮ್ಮ ಕುಟುಂಬದ ಹೊರಗಿನ ಸದಸ್ಯರೊಂದಿಗೇ ಕೂಡುವಿಕೆ. ಈ ಅಮ್ಮಂದಿರು ಋತುಬಾಧೆಯಿಂದಲೂ ಸಂಕಟಪಡುತ್ತಾರಂತೆ.

ಸಂತಾನ ಶಕ್ತಿ ತೀರಿದ ಮೇಲೆ ಮನುಷ್ಯ ಸಮಾಜದ ಅಜ್ಜಿಯರಂತೆ ಇವೂ ಮೊಮ್ಮಕ್ಕಳಿಗೆ ಉಣಿಸುವ, ತರಬೇತಿ ಕೊಡುವ ಕೆಲಸಗಳನ್ನು ಮಾಡುತ್ತವೆ ಎಂಬ ಮಾಹಿತಿಗಳಿವೆ.

“ಅಲ್ಲಿ ನೋಡಿ ….ಅವಳು ತನ್ನ ಮೊಮ್ಮಗನ ಜೊತೆ ಓಡುತ್ತಿದ್ದಾಳೆ”…… “ಇಗೋ ಇಲ್ಲಿ ನೋಡಿ ತನ್ನ ಮಗಳ ಜೊತೆ ಹೇಗೆ ಕುಪ್ಪಳಿಸುತ್ತಿದ್ದಾಳೆ!!!” ದೋಣಿಯಲ್ಲಿದ್ದ ನಿರ್ವಾಹಕಿಯೊಬ್ಬಳು ನಮ್ಮನ್ನು ಆಗಾಗ್ಗೆ ಜಾಗೃತಗೊಳಿಸುತ್ತಿದ್ದಳು. ಏನು ಸುಮ್ಮಾನ ಅವುಗಳಿಗೆ ! ತಮ್ಮ ಲೀಲೆಯಲೇ ಇದ್ದವು. ಅವುಗಳ ಸ್ವಚ್ಛಂದ ಕೇಳಿಗೆ ಭಂಗ ತರಬಾರದೆಂದೂ, ಅವುಗಳ ಆವಾಸದೊಳಗೆ ನಾವು ಪ್ರವೇಶ (ಅತಿಕ್ರಮ?) ಮಾಡಿದ್ದೇವೆಂದೂ ಎಚ್ಚರಿಕೆಯ ಗಂಟೆ ಆಗಾಗ ಧ್ವನಿವರ್ಧಕದಿಂದ ಮೆಲ್ಲಗೆ ಮೊಳಗುತ್ತಿತ್ತು.

ಎಲ್ಲವಕ್ಕೂ ಏನೇನೋ ಹೆಸರುಗಳಿವೆ. “ಆರ್ಕಾಸ್” (Orca) ಜಾತಿಗೆ ಸೇರಿದ ಈ ತಿಮಿಂಗಲಗಳು ಜಲಚರಗಳಲ್ಲೇ ಬಹಳ ಶಕ್ತಿಯುತವಾದ ಪರಭಕ್ಷಕ (predators) ಪ್ರಾಣಿಗಳಂತೆ. ಈ ಪ್ರದೇಶದಲ್ಲಿ ಎಂಟು ತಿಮಿಂಗಿಲಗಳು ಇವೆಯಂತೆ. ನಾವು ನಿಜವಾಗಿ ಅದೃಷ್ಟವಂತರು, ಎಂಟು ತಿಮಿಂಗಿಲಗಳೂ ನಮಗೆ‌ ದರ್ಶನ ನೀಡಿದವು ಎಂದು ನಿರ್ವಾಹಕಿ ಹೇಳಿದ್ದರಿಂದ ನಮಗೆ ಗೊತ್ತಾಯಿತು. ನಾವು ಹತ್ತಿಪ್ಪತ್ತಾದರೂ ನೋಡಿದ್ದೇವೆ ಎನಿಸುತ್ತಿತ್ತು. ಯಾರು ಅಜ್ಜಿ ಯಾರು ಅಮ್ಮ, ಮೊಮ್ಮಗ? ತಿಮಿಂಗಿಲಗಳ ಅನನ್ಯ ಅಸ್ಮಿತೆ ನಮ್ಮಂತಹ ಪಾಮರರಿಗೆ ಗೊತ್ತಾಗುವುದಾದರೂ ಹೇಗೆ?

ತಿಮಿಂಗಿಲಗಳ ಕುರಿತಾಗಿ‌ ಸಿನಿಮಾಗಳೂ ಬಂದಿವೆ. ಹಾಲಿವುಡ್ ಸಂಶೋಧನೆ ಮಾಡಿ ತೆಗೆದ ಇಂತಹ ಸಿನಿಮಾವೊಂದರಲ್ಲಿ ‘ಕೀಕೋ’ ಎನ್ನುವ ತಿಮಿಂಗಿಲಕ್ಕೆ ಈಗ ಪ್ರಪಂಚದಲ್ಲೇ ಬಹಳ ಪ್ರಸಿದ್ಧವಾದ ಜಲಚರವೆಂಬ ತಾರಾಮೌಲ್ಯವೂ ದೊರೆತಿದೆಯಂತೆ.

ಜಲಪ್ರಯಾಣದಲ್ಲಿ ಅನೇಕ ಕಡಲ ಸಿಂಹಗಳೂ, ಸೀಲ್ ಮೀನುಗಳೂ, ಕಡಲ ಹಕ್ಕಿಗಳೂ ಕಂಡವು. ನಾಲ್ಕಾರು ಕಡಲ ಸಿಂಹಗಳಂತೂ ಕಡಲ ನಡುವೆ ಯಾವುದೋ ಕಂಬಕ್ಕೆ ಕಟ್ಟಿದ್ದ ಕಟ್ಟೆಯ ಮೇಲೆ ಒಂದರಮೇಲೊಂದು ಬಿದ್ದು ಕೊಂಡಿದ್ದವು.

ಅನಂತ ಕಡಲ ಅಗಾಧತೆಯನ್ನು ತಡೆದುಕೊಳ್ಳ ಲಾರದವರಂತೆ ಪ್ರೇಮಿಗಳು ಖುಲ್ಲಂ ಖುಲ್ಲ ಪ್ರಣಯಚೇಷ್ಟೆಯಲ್ಲಿ ತೊಡಗಿದ್ದರು.

ಸಾಗರನ ಹೃದಯದಲಿ ಇನ್ನೆಷ್ಟು ಅಂತರ್ಜೀವಜಾಲ ಮಾಲೆಗಳು ಅಡಗಿವೆಯೋ ಕಂಡವರಾರು?
ಸಾಗರಕ್ಕೆ ಸಾಗರವೇ ಉಪಮೆಯಲ್ಲವೇ?

ಮೂರು ಬಣ್ಣದ ಚಿತ್ರಗಳು ಮಾತ್ರ ಗೂಗಲ್ ನಿಂದ ಕದ್ದದ್ದು

‍ಲೇಖಕರು Admin

July 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: