ಪಿ ಪಿ ಉಪಾಧ್ಯ ಸರಣಿ ಕಥೆ 70- ಶಾಮಣ್ಣನವರ ಮೂವರು ಮಕ್ಕಳು…

ಪಿ ಪಿ ಉಪಾಧ್ಯ

ನನ್ನ ರಾಜೀನಾಮೆ ಪತ್ರವನ್ನು ಹಾಗೆಯೇ ಅವರ ಮೇಜಿನ ಮೇಲೆ ಇಟ್ಟುಬಿಟ್ಟು ಹೊರಬಂದವ ಮೊದಲು ಮಾಡಿದ ಕೆಲಸವೆಂದರೆ ನನ್ನ ಒಟ್ಟು ಆಸ್ತಿ ಎಷ್ಟು ಎಂದು ಲೆಕ್ಕ ಹಾಕಿದ್ದು. ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆಯೆಂದು ನೋಡಿದ್ದು. ಆ ಪಾಟಿ ಆ ಹೆಂಗಸಿಗೆ ಕೊಟ್ಟೂ ಸಾಕಷ್ಟು ಉಳಿದಿತ್ತು. ಮನೆಯನ್ನು ಮಾರ್ಗೇಜ್ ಮಾಡಿದ್ದೆ. ಮಾರ್ಗೇಜ್ ಕಂಪೆನಿಯವರಿಗೆ ಆ ಮನೆಯನ್ನು ಮಾರಾಟ ಮಾಡಿಕೊಳ್ಳಿ.

ಸಾಲವನ್ನು ಮುರಿದುಕೊಂಡು ಉಳಿದ ಹಣವನ್ನು ನನ್ನ ಖಾತೆಗೆ ಜಮಾವಣೆ ಮಾಡಿ ಎಂದು ಕೇಳಿಕೊಂಡಿದ್ದೇನೆ. ಅದೂ ಒಂದು ನಾಲ್ಕೈದು ಲಕ್ಷ ಡಾಲರ್ ಬರಬಹುದು. ಹಾಗೆಲ್ಲ ಲೆಕ್ಕ ಹಾಕಿದವನೇ ಮಂಗಳೂರಿಗೆ ಟಿಕೆಟ್ ಬುಕ್ ಮಾಡಿ ಹೊರಟೇ ಬಿಟ್ಟೆ. ಹಾಗೆಯೇ ಮಂಗಳೂರಿನಿ೦ದ ಟ್ಯಾಕ್ಸಿ ಮಾಡಿಕೊಂಡು ಮನೆಗೆ ಬಂದಿದ್ದೇನೆ. ಈ ಮನೆಯನ್ನು ನನ್ನ ಮನೆ ಎನ್ನುವ ಹಕ್ಕು ನನಗಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ನೀವೆಲ್ಲ ಇಲ್ಲ ಎಂದರೆ ಎಲ್ಲೋ ಹೋಗಿ ಇದ್ದು ಬಿಡುತ್ತೇನೆ’.

‘ಛೆ.. ಬಿಡೋ ಅನಂತ. ಏನಂತ ಮಾತನಾಡುತ್ತೀಯ. ನೀನು ನಮ್ಮ ಒಡಹುಟ್ಟಿದವನಲ್ಲವೇನೋ. ನೀನು ಎಲ್ಲಿದ್ದರೂ ನಮ್ಮವನೇ. ಈ ಮನೆ ಎಂದಿದ್ದರೂ ನಿನ್ನದೇ’ ಆದಿ ಮತ್ತು ಅಂತ್ಯ ಒಟ್ಟಿಗೇ ಹೇಳಿದರು. ಆ ಮಾತು ಮತ್ತು ಅದರಲ್ಲಿ ತುಂಬಿದ ಕಾಳಜಿ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಅನಂತ ಪುನಃ ಬಿಕ್ಕಳಿಸಲಿಕ್ಕೆ ತೊಡಗಿದ. ಹಾಗೆಯೇ ಸ್ವಲ್ಪ ಹೊತ್ತಿನಲ್ಲಿ ತುಸುವೇ ಸುಧಾರಿಸಿಕೊಂಡವ ಕಾಯುತ್ತಿದ್ದ ಟ್ಯಾಕ್ಸಿಯವನಿಗೆ ಹಣ ಕೊಟ್ಟು ಕಳುಹಿಸಿ ಬಿಟ್ಟ.

ಹಾಗೆ ಅಂದು ಬಂದ ಅನಂತ ಊರಲ್ಲಿಯೇ ಉಳಿದಿದ್ದಾನೆ. ಆದಿ, ಅನಂತ ಮತ್ತು ಅಂತ್ಯ ಮೂವರೂ ಅವರಪ್ಪ ಅಮ್ಮ ಇದ್ದ ಅದೇ ಹಳೇ ಮನೆಯಲ್ಲಿಯೇ ಇದ್ದಾರೆ. ಮನೆಯ ಪಕ್ಕದಲ್ಲಿಯೇ ಇನ್ನೊಂದು ಕಟ್ಟಡವನ್ನು ಕಟ್ಟಿಸಿ ಮುಂದೆ ದೊಡ್ಡದೊಂದು ಬೋರ್ಡ್ ಹಾಕಿದ್ದಾರೆ. ‘ಶಾಮಣ್ಣ ಸೇವಾ ಕೇಂದ್ರ’ ಎನ್ನುವ ಆ ಬೋರ್ಡಿನಲ್ಲಿಯೇ ಕೆಳಗಡೆ ಸಮಾಜ ಸೇವೆ, ಬಡ ಮಕ್ಕಳ ವಸತಿ ಮತ್ತು ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತವರು- ದಿವಂಗತ ಶಾಮಣ್ಣನವರ ಮೂವರು ಮಕ್ಕಳು ಎಂದೂ ತುಸು ಚಿಕ್ಕ ಅಕ್ಷರಗಳಲ್ಲಿ ಬರೆಸಿದ್ದಾರೆ.

ಯಕ್ಷಗಾನ ಕೇಂದ್ರದಲ್ಲಿಯೂ ತುಂಬಾ ಬದಲಾವಣೆಗಳನ್ನು ತಂದಿದ್ದಾರೆ. ಅದನ್ನು ನೋಡಿಕೊಳ್ಳಲು ಪೂರ್ಣಾವಧಿಯ ಜವಾಬ್ದಾರಿ ಕೊಟ್ಟು ಇನ್ನೊಬ್ಬರನ್ನು ನೇಮಿಸಿದ್ದಾರೆ. ಮೂವರೂ ಅಣ್ಣ ತಮ್ಮಂದಿರು ಸಮಯ ಸಿಕ್ಕಿದಾಗಲೆಲ್ಲ ಕೇಂದ್ರಕ್ಕೆ ಹೋಗಿ ಬರುತ್ತ ಕೇಂದ್ರದ ಚಟುವಟಿಕೆಗಳಲ್ಲಿ ಸಮನಾದ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಅಲ್ಲಿ ಇವರು ತಂದ ಅತೀ ದೊಡ್ಡ ಬದಲಾವಣೆಯೆಂದರೆ ಮೊದಲೆಲ್ಲ ಅಭ್ಯರ್ಥಿಗಳಿಂದ ಹೆಸರಿಗಷ್ಟೆ ವಸೂಲಿ ಮಾಡುತ್ತಿದ್ದ ಫೀಯನ್ನೂ ನಿಲ್ಲಿಸಿ ಬಿಟ್ಟಿದ್ದಾರೆ.

ಹಣ ಕೊಡುವ ಶಕ್ತಿ ಮತ್ತು ಮನಸ್ಸಿದ್ದ ಯಾರಾದರೂ ತಾವಾಗಿಯೇ ಕೊಟ್ಟರೆ ತೆಗೆದುಕೊಳ್ಳುತ್ತಾರೆ. ಹಾಗೆಂದು ಯಾರಾದರೂ ಕಷ್ಟಪಟ್ಟು ಹಣ  ಒಟ್ಟು ಮಾಡಿ ಕೊಡುತ್ತಿದ್ದಾರೆ ಎಂದು ಗೊತ್ತಾದರೆ ಅಂಥವರಿ೦ದ ಸುತರಾಂ ಹಣವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅಷ್ಟೇ  ಅಲ್ಲ ಅದನ್ನು ಎಲ್ಲರೆದುರಿಗೇ ಹೇಳಿಯೂ ಬಿಡುತ್ತಾರೆ. ಯಾಕೆಂದರೆ ಮುಂದೆ ಯಾರೂ ಆ ತರ ಕಷ್ಟ ಪಡುವದು ಬೇಡ ಎಂದು.

ಅಪ್ಪನ ಕಾಲದಿಂದ ಬಂದ ಆಸ್ತಿಯಿದೆ. ಅದರಲ್ಲಿ ಹೆಚ್ಚು ಕಡಿಮೆ ಯಾಂತ್ರೀಕರಣಗೊ೦ಡಿದ್ದ ಕೃಷಿ ಪದ್ಧತಿಯಿಂದ ಊಟಕ್ಕೆ ಮಿಕ್ಕು ಯಥೇಚ್ಛವಾಗಿ ಮಾರಲು ಸಿಗುವಷ್ಟು ಭತ್ತ ಮತ್ತು ಧಾನ್ಯಗಳು ಬೆಳೆಯುತ್ತವೆ. ವರ್ಷಕ್ಕೆ ಹತ್ತಿಪ್ಪತ್ತು ಸಾವಿರ ಕಾಯಿಗಳು ಬೆಳೆಯುವಷ್ಟು ತೆಂಗಿನ ಮರಗಳ ದೊಡ್ಡ ತೋಟವೇ ಇದೆ. ಅಂತ್ಯನ ಪುಸ್ತಕ ಮಾರಾಟ ಮಾಡಿ ಬಂದ ಹಣ ಬ್ಯಾಂಕಿನಲ್ಲಿಟ್ಟದ್ದು ಹಾಗೆಯೇ ಇದೆ. ಬಡ್ಡಿ ಸೇರಿ ಬೆಳೆದದ್ದು ಈಗ ಇನ್ನೂ ಹೆಚ್ಚಿನ ಬಡ್ಡಿಯನ್ನು ತರುತ್ತಿದೆ. ಜೊತೆಗೆ ಈಗಲೂ ಮಾರಾಟವಾಗುತ್ತಿದ್ದ ಆ ಪುಸ್ತಕದ ಮೇಲಿನ ರಾಯಧನ ಬರುತ್ತಲೂ ಇದೆ. ಅನಂತನದ್ದ೦ತೂ ಕೇಳುವುದೇ ಬೇಡ. ಅಮೆರಿಕದಲ್ಲಿದ್ದ ಹಣವೆಲ್ಲವನ್ನೂ ಇಲ್ಲಿಗೇ ತರಿಸಿಕೊಂಡಿದ್ದಾನೆ. ಹಾಗಾಗಿ ಅವರು ಮೂವರ ಯಾವ ಚಟುವಟಿಕೆಗಳಿಗೂ ಹಣದ ಕೊರತೆಯೆಂಬುದು ಇಲ್ಲವೇ ಇಲ್ಲ.

ಮೂವರೂ ಜೊತೆಗಾರ್ತಿಯರೇ ಇಲ್ಲದವರು. ಅಪ್ಪ ಅಮ್ಮ ಒತ್ತಾಯ ಮಾಡಿಯೂ ಮದುವೆಗೆ ಒಲ್ಲೆ ಎಂದು ಹಾಗೆಯೇ ಉಳಿದವನು ಆದಿ. ಮದುವೆಯೆಂಬುದು ಇಲ್ಲದಿದ್ದರೂ ಹೆಣ್ಣಿನೊಂದಿಗೆ ಬಾಳ್ವೆಮಾಡಿ ಮಕ್ಕಳಿಗೂ ತಂದೆಯಾಗಿ ಕೊನೆಗೆ ಬೇಸತ್ತು ಆ ಸುಖವೆಲ್ಲ ಸಾಕು ಎಂದು ಎಲ್ಲವನ್ನೂ ತೊರೆದು ಬಂದ ಅನಂತ, ಯಾರೂ ಮದುವೆ ಮಾಡಿಕೋ ಎನ್ನುವ ಸಲಹೆಯನ್ನೂ ಕೊಡದೆ ಆ ಬಗ್ಗೆ ಚಿಂತೆಯನ್ನೇ ಹಚ್ಚಿಕೊಳ್ಳದೆ ಹಾಗೆಯೇ ಉಳಿದ ಅಂತ್ಯ. ಹಾಗಾಗಿ ಮೂವರೂ ಬ್ಯಾಚರ‍್ಸ್.

ಮನೆಯ ಪಕ್ಕದಲ್ಲಿಯೇ ಇವರೇ ಕಟ್ಟಿಸಿದ ಅನಾಥಾಶ್ರಮದಲ್ಲಿ ಕನಿಷ್ಟ ನೂರಿಪ್ಪತ್ತು ಮಕ್ಕಳು ಯಾವಾಗಲೂ ಇರುತ್ತಾರೆ. ಅವರ ಎಲ್ಲ ಖರ್ಚುಗಳನ್ನೂ ಈ ಅಣ್ಣ ತಮ್ಮಂದಿರೇ ನೋಡಿಕೊಳ್ಳುವುದು. ಊಟ ತಿಂಡಿ, ಬಟ್ಟೆ ಬರೆಯಿಂದ ಹಿಡಿದು ಅವರ ವಿದ್ಯಾಭ್ಯಾಸದ ವರೆಗೆ ಎಲ್ಲ. ಒಂದು ಕಾಸನ್ನೂ ಹೊರಗಿನವರಿಂದ ಕೇಳುವುದಿಲ್ಲ. ಅಣ್ಣ ತಮ್ಮಂದಿರೆಲ್ಲರೂ ತಮ್ಮ ಬಹುಪಾಲು ಸಮಯವನ್ನು ಆ ಮಕ್ಕಳೊಂದಿಗೆ ಕಳೆಯುತ್ತಾರೆ. ಅವಕ್ಕೆ ತಾವು ಅನಾಥರು, ಯಾರೂ ದಿಕ್ಕಿಲ್ಲದವರು ಎನ್ನುವ ಭಾವನೆ ಬರದಂತೆ ನೋಡಿಕೊಳ್ಳುವ ಪ್ರಯತ್ನವನ್ನು ಮನಃ ಪೂರ್ವಕವಾಗಿ ಮಾಡುತ್ತಾರೆ.

ಮಕ್ಕಳೂ ಹಾಗೆಯೇ. ಅಲ್ಲಿನ ಚಿಕ್ಕ ಚಿಕ್ಕ ಮಕ್ಕಳಂತೂ ಇವರು ಆಶ್ರಮಕ್ಕೆ ಬಂದೊಡನೆಯೇ ಓಡಿಬಂದು ತಬ್ಬಿಕೊಂಡು ಬಿಡುತ್ತವೆ. ದೊಡ್ಡವೂ ಅಷ್ಟೆ. ಅದೇ ತೆರನ ಪ್ರೀತಿ. ವಿಶ್ವಾಸ. ಜೊತೆಯಲ್ಲಿಯೇ ಇತ್ತೀಚೆಗೆ ಒಂದು ವೃದ್ಧಾಶ್ರಮವನ್ನೂ  ಪ್ರಾರಂಭಿಸಿದ್ದಾರೆ. ತಿಂಗಳೊಳಗೇ ನೂರಕ್ಕೂ ಮಿಕ್ಕು ಮಂದಿ ಸೇರಿದ್ದಾರೆ. ಅವರೆಲ್ಲ ಸೇರಿದ ದಿನದಿಂದಲೇ ಅಲ್ಲಿನ ಅದ್ಭುತ ಸೌಲಭ್ಯವನ್ನು ಕಂಡು ಬೆರಗುವಡೆದಿದ್ದಾರೆ. ತಮಗೆ ತಿಳಿದವರಿಗೆಲ್ಲ ಸುದ್ದಿ ಕಳುಹಿಸಿ ಅವರನ್ನೂ ಬರಮಾಡಿಕೊಂಡಿದ್ದಾರೆ. ಅಲ್ಲಿಯೂ ಅಷ್ಟೆ. ಇಂತಿಷ್ಟೇ ಫೀಸು ಕೊಡಬೇಕೆಂದಿಲ್ಲ. ಹಣದ ಅನುಕೂಲತೆಯಿದ್ದು ಕೊಡುವ ಮನಸ್ಸಿದ್ದವರಿದ್ದರೆ ಕೊಡಬಹುದು ಅಷ್ಟೆ. ಉಳಿದಂತೆ ಈ ಮೂವರು ಅಣ್ಣ ತಮ್ಮಂದಿರದ್ದೇ ಖರ್ಚು.

ಅಂತ್ಯನಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತ ತನ್ನಿಂದಾದ ಸಹಾಯವನ್ನು ಮಾಡಿಕೊಂಡು ಬರುತ್ತ ಅವನನ್ನು ತನ್ನ ಪ್ರೀತಿಯ ಶಿಷ್ಯ ಎಂದೇ ಕೊನೆಯ ವರೆಗೂ ಪರಿಗಣಿಸಿ ಹಾಗೆಯೇ ಕರೆಯುತ್ತಿದ್ದ ಪ್ರೊಫೆಸರರೂ ನಿವೃತ್ತಿಯ ನಂತರ ಒಂದಾರು ವರ್ಷ ಬದುಕಿದವರು ತೀರಿ ಹೋಗಿದ್ದಾರೆ. ಅವರ ಅಂತ್ಯ ಕ್ರಿಯೆಗೆ ಆದಿ ಮತ್ತು ಅಂತ್ಯ ಇಬ್ಬರೂ ಹೋಗಿ ಬಂದಿದ್ದಾರೆ.

ಈಗ ಅನಂತನೊ೦ದಿಗೆ ವಿವರವಾಗಿ ಆ ಪ್ರೊಫೆಸರರ ವಿಚಾರವನ್ನು ಹಂಚಿಕೊ೦ಡಾಗ ಅವನೇ ಮೂರೂ ಜನ ಅಣ್ಣ ತಮ್ಮಂದಿರ ಹೆಸರಿನಲ್ಲಿ ಒಂದು ದತ್ತಿಯನ್ನು ಪ್ರಾರಂಭಿಸಿ ಆ ದತ್ತಿಯ ಮೂಲಕ ಆ ಪ್ರೊಫೆಸರರ ಹೆಸರಿನಲ್ಲಿ ಅವರ ಕಾಲೇಜಿನಲ್ಲಿಯೇ ಒಂದು ಸ್ಕಾಲರ್‌ಶಿಪ್ ಯೋಜನೆಯನ್ನು ಪ್ರಾರಂಭಿಸಿ ಕನಿಷ್ಟ ಹತ್ತು ಮಂದಿ ಅರ್ಹ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಬೇಕಾಗುವಷ್ಟು ಧನಸಹಾಯ ಮಾಡುವ ಕಾರ್ಯಕ್ರಮವೊಂದನ್ನು ಮುಂದಿಟ್ಟಿದ್ದಾನೆ. ಅದಕ್ಕೆ ಬೇಕಾಗಬಹುದಾದ ಹಣದ ಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳುವುದಾಗಿ ಹೇಳಿದ. ಕೂಡಲೇ ಮೂವರೂ ಸೇರಿ ಕಾಲೇಜಿನವರಿಗೆ ಆ ಯೋಜನೆಯ ರೂಪು ರೇಷೆಗಳನ್ನು ಕಳುಹಿಸುವುದರ ಜೊತೆಗೆ ‘ಏನಾದರೂ ಬದಲಾವಣೆಯ ಅಗತ್ಯವಿದ್ದರೆ ದಯವಿಟ್ಟು ತಿಳಿಸಿ’ ಎಂದೂ ಬರೆದು ಈಗ ಕಾಲೇಜಿನ ಅನುಮತಿಗಾಗಿ ಕಾಯುತ್ತಿದ್ದಾರೆ.

। ಮುಕ್ತಾಯ ।

‍ಲೇಖಕರು Admin

July 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: