ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಗರ…

ರೇವಣಸಿದ್ದಪ್ಪ ಜಿ ಆರ್

ಇಲ್ಲಿ ಬಿದ್ದ ಮೇಲೆ ಈಸಲೇಬೇಕು;
ಈಸಲಾರದೆ ಮುಳುಗಿಹೋದರೆ
ಅಲ್ಲಿಗೆ ಮುಗಿಯಿತು ಪಂದ್ಯ!
ಲೆಕ್ಕಕ್ಕೆ ಸಿಗದಷ್ಟು ಟೈಟಾನಿಕ್ಕುಗಳ
ಮುಳುಗಿಸಿಕೊಂಡಿರುವ ಸಾಗರ
ತಾನು ಮುಳುಗುವುದಿಲ್ಲ!

ಶಾಂತ ಪ್ರಶಾಂತ ಉದ್ವಿಗ್ನ
ರುದ್ರ ರಮಣೀಯ ರೋಚಕ
ನಿಗೂಢ ನೀರಸ
ವಿರೋಧಾಭಾಸಗಳ ಮಿಶ್ರಣ.
ಈಸುಗಾರ ಕೂಡ ಅಷ್ಟೇ ವಿಲಕ್ಷಣ!

ಸಾಗರದ ಆಳಹರಹುಗಳೆದುರು
ಈಸುಗಾರನೆಷ್ಟು ಗೌಣ!
ಈಸಲೇಬೇಕಾದ ಧಾವಂತದಲ್ಲಿ
ಸಾಗರದ ದಿಕ್ಕು ಬದಲಿಸಬಹುದೇ?
ಸಾಗರವ ಧಿಕ್ಕರಿಸಿ ಸಾಧಿಸಲಹುದೇ?

ಉದ್ದಟ ಅಲೆಗಳಿಗೆ ಮುಖಾಮುಖಿಯಾಗಿ,
ಹೊಂಚುಹಾಕಿ ಸೆಳೆಯುವ ಸುಳಿಗಳ ಜತೆ ಸೆಣಸಿ,
ಚಂಡಮಾರುತದೊಡನೆ ಮಾರಾಮಾರಿ ನಡೆಸಿ,
ಹಗಲುರಾತ್ರಿಗಳ ಒಂದುಮಾಡಿ,
ಕೈಕಾಲುಗಳಾಡಿಸಿ, ಮೈಯ ಬಾಗಿಸಿ,
ಶಕ್ತಿಯುಕ್ತಿಗಳ ಮೇಳೈಸಿ,
ಈಸಬೇಕು
ಮುಂದೆಮುಂದೆ ದಿಟ್ಟಿನೆಟ್ಟು ನುಗ್ಗಬೇಕು.

ಸೂಕ್ಷ್ಮಾತಿಸೂಕ್ಷ್ಮ ಅಣುಜೀವಿಗಳಿಂದ
ಭಾರೀಗಾತ್ರದ ತಿಮಿಂಗಿಲಗಳವರೆಗೆ
ತರಹೇವಾರಿ ಜೀವಜಂತುಗಳು
ಈಸುತ್ತಿವೆ ಇಲ್ಲಿ.
ಅವುಗಳಿಗೂ ಗೊತ್ತಿದೆ-
ಈಸದೆ ವಿಧಿಯಿಲ್ಲ!

ಯಾವ ತಿಮಿಂಗಿಲದ ಬಾಯಿಗೆ
ಆಹಾರವಾಗಬಹುದು?
ಯಾವ ವಿಷಜಂತುವಿನ ವಿಷ
ಮೈಬಣ್ಣ ನೀಲಿಯಾಗಿಸಬಹುದು?
ಯಾವ ಆಕ್ಟೋಪಸ್ಸಿನ ಕಬಂದ ಬಾಹುಗಳಲ್ಲಿ
ಅಪ್ಪಚ್ಚಿಯಾಗಬಹುದು?
ಏನೂ ಆಗಬಹುದು!

ಸಾಗರದಾಳದಲ್ಲಾವ ನಿಧಿಯಿದೆಯೋ!
ನಿರೀಕ್ಷೆಯಿಲ್ಲದೆ ಈಸುವುದೇ?
ನೀರೇ ಸಾಗರವಾಗಿರುವಾಗ
ಬೊಗಸೆಯಷ್ಟೇ ಈಸುಗಾರನಿಗೆ.
ಸಾಗರ ನೀರು ಕುಡಿಸಿದ್ದೇ ಹೆಚ್ಚು!

‍ಲೇಖಕರು Admin

14 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading