ಸಾಕ್ಷರತಾ ಆಂದೋಲನ ಆತನ ಬದ್ಧತೆಯ ಪ್ರಶ್ನೆಯೂ ಆಗಿತ್ತು..

ನೆನಪು -೫೩

ಉತ್ತರ ಕನ್ನಡದಲ್ಲಿ ನಡೆದ ಮುಖ್ಯ ಆಂದೋಲನದಲ್ಲಿ ಸದಾ ನೆನಪಿನಲ್ಲಿ ಇರುವಂತಹುದು ಕೆಂಬಾವುಟದ ರೈತ ಆಂದೋಲನ, ಸ್ವಾತಂತ್ರ್ಯ ಆಂದೋಲನ ಮತ್ತು ಸಾಕ್ಷರತಾ ಆಂದೋಲನ.

ಮೊದಲೆರಡು ಆಂದೋಲನಗಳು ಇಡೀ ಜಿಲ್ಲೆಯನ್ನು ಕ್ರಿಯಾಶೀಲಗೊಳಿಸಿದ್ದವು. ರೈತ ಆಂದೋಲನ ಮತ್ತು ಸ್ವಾತಂತ್ರ್ಯ ಚಳವಳಿಯ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದು ಒಂದು ಮಹತ್ವದ ನಡೆ.

ಕೇವಲ ಅಕ್ಷರದ ಅರಿವನ್ನು ಮೂಡಿಸುವಲ್ಲಿ ಇದು ತೃಪ್ತಿಪಟ್ಟುಕೊಳ್ಳದೆ ಜನತೆಯ ಹಕ್ಕುಗಳನ್ನು ಕುರಿತು ಜಾಗೃತಿ ಮೂಡಿಸುವ ಒಂದು ಸಾಂಸ್ಕೃತಿಕ ಆಂದೋಲನವಾಗಿ ಅದು ಸಾರ್ಥಕ್ಯ ಪಡೆಯಿತು. ಉತ್ತರ ಕನ್ನಡದ ಬಹುತೇಕ ಲೇಖಕರು, ಚಿಂತಕರು, ಹೋರಾಟಗಾರರು ಇದರಲ್ಲಿ ಸಂಪೂರ್ಣ ತೊಡಗಿಸಿಕೊಂಡರು.

೧೯೯೩ರಿಂದ ಅಣ್ಣ ಈ ಆಂದೋಲನದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದ. ಅವನಿಗೆ ಅದು ಬಂಡಾಯ ಚಳುವಳಿಯ ಸಾರ್ಥಕ ಮುಂದುವರಿಕೆಯೇ ಆಗಿತ್ತು. ಪ್ರಾರಂಭದಿಂದಲೂ ಆತನ ಬರವಣಿಗೆ, ಭಾಷಣ, ಮಾಸ್ತರಿಕೆ, ಸಂಘಟನೆ… ಎಲ್ಲವೂ ಜನಶಿಕ್ಷಣದ ಭಾಗವೇ ಆಗಿತ್ತು. ಸಾಕ್ಷರತಾ ಆಂದೋಲನ ಆತನಿಗೆ ಇದರ ವಿಸ್ತರಣೆಯಾಗಿತ್ತು. ಆತ ಮಾತ್ರವಲ್ಲ ಆತನ ಸಂಪರ್ಕಕ್ಕೆ ಬಂದ ಎಲ್ಲರನ್ನು ಇದರಲ್ಲಿ ತೊಡಗಿಸಿದ.

ಹಾಗೆ ನೋಡಿದರೆ ಕರ್ನಾಟಕದಲ್ಲಿಯೇ ಈ ಆಂದೋಲನ ಅತಿ ಹೆಚ್ಚು ಯಶಸ್ವಿಯಾಗಿದ್ದು ಉತ್ತರ ಕನ್ನಡದಲ್ಲಿ. ಅಂತಹ ಆಸಕ್ತ ಅಧಿಕಾರಿಗಳೂ ಉತ್ತರ ಕನ್ನಡದಲ್ಲಿದ್ದರು.

ಅಮ್ಮೆಂಬಳ ಆನಂದ, ವಿ.ಜೆ. ನಾಯಕ, ವಿಷ್ಣು ನಾಯ್ಕ, ಶಾಂತಾರಾಮ ನಾಯಕ ಹಿಚ್ಕಡ, ಜಿ.ಎಸ್. ಅವಧಾನಿ, ಎ.ಎಚ್.ದೊಡ್ಮನಿ, ಕುಸುಮಾ ಸೊರಬ, ಎಲ್.ಕೆ.ಅತೀಕ್, ತಹಶೀಲ್ದಾರ್ ಸುಬ್ರಾಯ ಕಾಮತ್, ಶಾಂತಿ ನಾಯಕ, ಖಲಿಲುಲ್ಲಾ ಮಾಸ್ತರರು, ನಜೀರ, ಅಶೋಕ ಹಾಸ್ಯಗಾರ, ಕುಮಾರ ನಾಯಕ(ಎ ಸಿ ಆಗಿದ್ದರು) ಹೀಗೆ ಲೇಖಕರ ದೊಡ್ಡ ದಂಡೇ ಇದರಲ್ಲಿ ತೊಡಗಿಸಿಕೊಂಡಿತ್ತು. ತಪ್ಪಿಸಿಕೊಂಡವರು ಅಪರೂಪ ಎನ್ನಬಹುದು.

ಅಣ್ಣ ಈ ಆಂದೋಲನದ ವಾತಾವರಣ ನಿರ್ಮಾಣದ ತಂಡದಲ್ಲಿ ಇದ್ದ ನೆನಪು. ಅದು ಯಶಸ್ವಿಯಾದರೆ ಆಂದೋಲನ ಯಶಸ್ವಿಯಾಗುತ್ತದೆ ಎನ್ನುವ ವೈಜ್ಞಾನಿಕ ಕಣ್ಣೋಟ ಅವನದಾಗಿತ್ತು. ಜಿಲ್ಲಾ ಮಟ್ಟದಲ್ಲಿ ಮತ್ತು ಹೊನ್ನಾವರ ತಾಲೂಕಿನಲ್ಲಿ ಅವನ ಕಾರ್ಯಾಚರಣೆ.

ಹೊನ್ನಾವರದಲ್ಲಿ ಜಿ. ಎಸ್. ಅವಧಾನಿಯವರು ತಾಲೂಕು ಸಂಚಾಲಕರು. ಸುಬ್ರಾಯ ಕಾಮತ್ ಎನ್ನುವ ಒಬ್ಬ ಒಳ್ಳೆಯ ನಗುಮುಖದ ತಹಶೀಲ್ದಾರರು ಅಲ್ಲಿದ್ದರು. ಅವರಂತೂ ಆಂದೋಲನದ ಆಸ್ತಿಯೇ ಆಗಿದ್ದರು. ಆಮೇಲೆ ಅವರು ಉ.ಕ. ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತರಾದರು. ಅವರ ನೇತೃತ್ವದಲ್ಲಿ ಹೊನ್ನಾವರದ ತಹಶೀಲ್ದಾರ ಕಛೇರಿಯ ಆವರಣದ ಒಳಗೆ ಕಟ್ಟಿದ ಸಾಕ್ಷರತಾ ಕುಟೀರ ರಾಜ್ಯಕ್ಕೇ ಮಾದರಿಯಾಗಿತ್ತು. ಅದನ್ನು ಉದ್ಘಾಟಿಸಲು ಡಾ. ಶಿವರಾಮ ಕಾರಂತರು ಬಂದಿದ್ದರು ಮತ್ತು ಅವರು ತುಂಬಾ ಖುಷಿಪಟ್ಟಿದ್ದರು.

ಅಂದು ನಾವೆಲ್ಲಾ ಹಾಜರಿದ್ದೆವು. ನಾವೆಲ್ಲಾ- ನಾನು, ಶ್ರೀಪಾದ, ಗಣೇಶ ಶೆಟ್ಟಿ ಕೆಕ್ಕಾರ್, ಛಾಯಾ, ಜಿ.ಟಿ.ಹಳ್ಳೇರ್, ವಿಶ್ವನಾಥ ಭಟ್ ಹೀಗೆ ಹಲವರು- ಆಗ ವಾತಾವರಣ ನಿರ್ಮಾಣ ಕಲಾತಂಡದ ನಟರು. ಇದರಲ್ಲಿ ನಮ್ಮ ಮನೆಯಿಂದ ಅಣ್ಣ, ನಾನು, ಮಾಧವಿ ಮತ್ತು ಛಾಯಾ ತೊಡಗಿಸಿಕೊಂಡಿದ್ದೆವು.

ಆರ್.ವಿ.ಯವರ ಮನೆಯ ಮೂರು ತಲೆಮಾರು ಸಾಕ್ಷರತಾ ಆಂದೋಲನದಲ್ಲಿ ಭಾಗಿಯಾಗಿದೆ ಎಂದು ಸುಬ್ರಾಯ ಕಾಮತರು ಖುಷಿಪಡುತ್ತಿದ್ದರು. ಹಿಂದೊಮ್ಮೆ ಬರೆದಂತೆ ನಾನು ನಾಲ್ಕಕ್ಷರ ಭಾಷಣ ಮಾಡಲು ಸರಿಯಾಗಿ ಕಲಿತಿದ್ದೇ ಈ ಆಂದೋಲನದಲ್ಲಿ.

ಈ ಸಂದರ್ಭದಲ್ಲಿಯೇ ಅಣ್ಣ ನವ-ಸಾಕ್ಷರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ‘ಇಟ್ಟ ಹೆಜ್ಜೆ ಮುಂದಕೆ’ ಎನ್ನುವ ನೀಳ್ಗತೆ ಬರೆದ, ‘ಕೇವಲ ಸಹಿ’ ನಾಟಕ ಬರೆದ. ಬಂಡಾಯ ಪ್ರಕಾಶನದಡಿ ಅದನ್ನು ಮುದ್ರಿಸಿಲಾಯಿತು. ಆಮೇಲೆ ಸಾಕ್ಷರತೆಯನ್ನು ಗಮನದಲ್ಲಿರಿಸಿ ಐದು ಏಕಾಂಕ ಯಕ್ಷಗಾನ ಪ್ರಸಂಗಗಳನ್ನು ಬರೆದ. ಬಿ.ವಿ. ಭಂಡಾರಿಯವರು ಅದಕ್ಕೆ ತಾಳವನ್ನು ಹೊಂದಾಣಿಕೆ ಮಾಡಿಕೊಟ್ಟರು.

ಸಾಕ್ಷರತಾ ಆಂದೋಲನ ಮುಗಿದ ಮೇಲೂ ಅಣ್ಣ ಅದರಲ್ಲಿ ಸಂಪೂರ್ಣ ತೊಡಗಿಸಿಕೊಂಡ. ನವ-ಸಾಕ್ಷರರಿಗಾಗಿ ಒಂದು ಪತ್ರಿಕೆ ತರಲು ಜಿಲ್ಲಾಡಳಿತ ನಿರ್ಧರಿಸಿತು. ಅದರ ಮೊದಲ ಹೆಸರು ‘ಅಕ್ಷರ ಸಂಗಾತಿ’ ನಂತರ ‘ಅಕ್ಷರ ವಾಹಿನಿ’. ಅದರ ಸಾರಥ್ಯವನ್ನು ಅಣ್ಣನಿಗೆ ವಹಿಸಲಾಯಿತು. ಇದಕ್ಕಾಗಿ ಆತ ಬೆವರು ಸುರಿಸಿದ್ದು ಅಷ್ಟಿಷ್ಟಲ್ಲ. ೧೫ ದಿನಕ್ಕೊಂದು ಬರಬೇಕು ಅದು. ಅದು ನವ-ಸಾಕ್ಷರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿದ ಪತ್ರಿಕೆ.

ಒಂದಿಷ್ಟು ಜಿಲ್ಲಾ ಪಂಚಾಯತ್ ಮಾಹಿತಿ, ಸರ್ಕಾರದ ಯೋಜನೆಯ ಮಾಹಿತಿ, ಜಿಲ್ಲೆಯ ಬೇರೆ ಬೇರೆ ಕಡೆಗೆ ಸಾಕ್ಷರರು ನಡೆಸಿದ ಕಾರ್ಯಕ್ರಮದ ವರದಿ, ಸಣ್ಣ-ಸಣ್ಣ ಕತೆ, ಕವಿತೆ, ವ್ಯಕ್ತಿ ವಿವರ, ವೈಜ್ಞಾನಿಕ ಬರಹ, ಕಾರ್ಟೂನ್, ಆರೋಗ್ಯ ಸಂಬಂಧಿ, ನವ ಸಾಕ್ಷರರ ಪತ್ರ.. ಹೀಗೆ ವೈವಿಧ್ಯಮಯವಾದ ಸುದ್ದಿಗಳಿರಬೇಕು. ಜಿಲ್ಲಾ ಪಂಚಾಯತ್‌ದಿಂದ ಒಂದಿಷ್ಟು ಸಂಗ್ರಹಿಸಿದ ನಂತರ ಉಳಿದೆಲ್ಲ ಬರವಣಿಗೆ ಸುಮಾರು ನಾಲ್ಕು ಪುಟ ಈತನದೆ. ಆ ಪತ್ರಿಕೆಗಳೆಲ್ಲಾ ಕಳೆದು ಹೋಗಿದೆ. ಅದನ್ನೆಲ್ಲಾ ಸೇರಿಸಿದರೆ ಅತ್ಯುತ್ತಮ ಸಾಕ್ಷರ ಸಾಹಿತ್ಯವಾಗುತ್ತದೆ ಎಂದು ಎಂ. ಜಿ. ಹೆಗಡೆಯವರು ಯಾವಾಗಲೂ ಹೇಳುತ್ತಿದ್ದರು.

ರಾತ್ರಿ ೧೨ರ ವರೆಗೆ ಕೂತುಕೊಳ್ಳುತ್ತಿದ್ದ. ಬೆಳಿಗ್ಗೆ ಎದ್ದರೆ ಸೊಂಟ ನೋವು. ಒಮ್ಮೊಮ್ಮೆಯಂತೂ ಕಾರವಾರಕ್ಕೆ ಹೋಗಿ ಪ್ರೆಸ್ಸಿನಲ್ಲಿ ವಿದ್ಯುತ್ ಇಲ್ಲವೆಂದೋ, ಅಥವಾ ಪತ್ರಿಕೆಯ ಕೆಲಸವೆಂದೋ ಹೋದ ಹಾದಿಗೆ ಸುಂಕವಿಲ್ಲವೆಂದು ವಾಪಾಸು ಬರುತ್ತಿದ್ದ. ರಾತ್ರಿ ೧೦ ಗಂಟೆಗೆ ಬಂದು ಮತ್ತೆ ಮರುದಿನ ಮಧ್ಯಾಹ್ನ ಮತ್ತೆ ಹೋಗುತ್ತಿದ್ದ.

ಕಾರವಾರವೆಂದರೆ ನಮ್ಮೂರಿಂದ ೪-೫ ತಾಸು ಪ್ರಯಾಣ. ಆದರೂ ಛಲ ಬಿಡದೆ ಪತ್ರಿಕೆಯನ್ನು ಯಶಸ್ವಿಯಾಗಿ ಹೊರತಂದ. ಈ ಪತ್ರಿಕೆ ಮೊದಲು ಮೈಸೂರಿನಲ್ಲಿ ಮುದ್ರಣಗೊಳ್ಳುತ್ತಿತ್ತು. ಆದರೆ ಇದು ಕಾರವಾರದಲ್ಲಿಯೇ ಮುದ್ರಣಗೊಳ್ಳಬೇಕೆಂದು ಒತ್ತಾಯಿಸಿದ ಅಣ್ಣ, ಅದರ ಮುದ್ರಣವನ್ನು ಕಾರವಾರದ ಕರಾವಳಿ ಮುಂಜಾವು ಪತ್ರಿಕೆ ಮುದ್ರಾಣಾಲಯದಲ್ಲಿ ಮುದ್ರಣಗೊಳ್ಳಬೇಕೆಂದು ಹಠ ಹಿಡಿದ.

ಮೊದಮೊದಲು ಜಿಲ್ಲಾ ಪಂಚಾಯತ್ ಇದಕ್ಕೆ ಒಪ್ಪದಿದ್ದರೂ ಆಗ ಜಿ.ಪಂ ಸಿ.ಎಸ್ ಆಗಿದ್ದ ಎಲ್.ಕೆ. ಅತೀಕ್ ಅವರ ಪ್ರಯತ್ನವೂ ಸೇರಿ ಅಕ್ಷರ ಸಂಗಾತಿ ಇರುವಷ್ಟು ಕಾಲವೂ ಅದು ಕರಾವಳಿ ಮುಂಜಾವು ಪತ್ರಿಕೆಯ ಮುದ್ರಣಾಲಯದಲ್ಲಿಯೇ ಮುದ್ರಣಗೊಂಡಿತು.

ಜಿಲ್ಲೆಯಲ್ಲಿ ಒಳ್ಳೆ ಮುದ್ರಣದ ವ್ಯವಸ್ಥೆ ಇರುವಾಗ ಯಾಕೆ ಬೇರೆ ನಗರಕ್ಕೆ ನಾವು ವರ್ಕ್ ಆರ್ಡರ್ ಕೊಡಬೇಕು? ಹೀಗಾದರೆ ನಮ್ಮಲ್ಲಿ ಉದ್ಯಮ ಬೆಳೆಯುವುದು ಹೇಗೆ? ಎನ್ನುವುದು ಅಣ್ಣನ ವಾದ. ಗಂಗಾಧರ ಹಿರೇಗುತ್ತಿಯವರ ಮಾಲಿಕತ್ವದ ಈ ಪತ್ರಿಕೆಯ ಹುಟ್ಟಿನಿಂದ ಅವರ ಜೊತೆ ಇದ್ದವ ಅಣ್ಣ.

ಆ ಕಛೇರಿಯಲ್ಲಿರುವ ಪರಸಪ್ಪ, ಅಶೋಕ ಹಾಸ್ಯಗಾರ, ನಾಗರಾಜ, ಎಸ್.ಬಿ. ಜೋಗೂರ… ಹೀಗೆ ಹಲವಾರು ಅಣ್ಣನ ಸ್ನೇಹಿತರೇ ಆಗಿದ್ದರು. ಹಿರೇಗುತ್ತಿಯವರಿಗೂ ಅಣ್ಣನೆಂದರೆ ಅಪಾರ ಗೌರವ. ಮುಂಜಾವಿನ ಕೆಲಸದ ಮಧ್ಯೆ ಈ ಕೆಲಸವೂ ನಡೆಯುತ್ತಿತ್ತು.

ಇಡೀ ಆಂದೋಲನದಲ್ಲಿ ತೊಡಗಿಕೊಳ್ಳುತ್ತಲೇ ಅಣ್ಣ ಅವರ ಕಟುವಿಮರ್ಶಕನೂ ಆಗಿದ್ದ. ಈ ಸಂಪೂರ್ಣ ಸಾಕ್ಷರತಾ ಆಂದೋಲನ ಉತ್ತರ ಕನ್ನಡದ ಒಂದು ಅನುಭವ ಎನ್ನುವ ಲೇಖನದಲ್ಲಿ ಅಣ್ಣ ಅದರ ವೈಫಲ್ಯದ ಕುರಿತು ಮಾತನಾಡಿದ್ದಾನೆ.

“ಆಶ್ಚರ್ಯದ ಸಂಗತಿ ಎಂದರೆ ಪರಿಷತ್ ಸದಸ್ಯರು ಇದರಲ್ಲಿ ತಮ್ಮ ಹೊಣೆ ತುಸುವಾದರೂ ಇದೆ ಎಂದು ಅರಿಯಲಿಲ್ಲ. ಅವರ ಲೀಡರ್‌ಶಿಪ್ಪಿಗೆ ಮಾದರಿಯಾದುದು ಪ್ರಚಲಿತ ದುಷ್ಟ ರಾಜಕೀಯ ಲೀಡರುಗಳೇ ಆಗಿದ್ದರು. ನಮ್ಮ ಸುತ್ತಲು ಅಕ್ಷರ ವಂಚಿತರಾದ ಶೋಷಣೆಗೆ ಒಳಗಾಗಿರುವ ಜನರಿಗೆ ಅಕ್ಷರ ಕೊಟ್ಟು ಅವರ ಬುದ್ಧಿಯನ್ನು ಪ್ರಚೋದಿಸಿ ಶಕ್ತಿವಂತರನ್ನಾಗಿ ಮಾಡುವುದು, ಪ್ರತಿನಿಧಿಯ ಅತಿ ಶ್ರೇಷ್ಠವಾದ ಕರ್ತವ್ಯ ಎನ್ನುವುದನ್ನು ಅವರು ಅರಿಯದೇ ಹೋದರು.” ಎನ್ನುವ ವಿಷಾದ ಅವನಲ್ಲಿ ಮಡುಗಟ್ಟಿ ನಿಂತಿತ್ತು.

ಆದರೂ ಸವಾಲನ್ನು ಸ್ವೀಕರಿಸಿಯೇ ಇವರೆಲ್ಲಾ ಮುಂದುವರಿದರು. ಸಾರ್ವಜನಿಕರೂ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿಲ್ಲ. ಹಲವರು ಇದು ಹಣ ಹೊಡೆಯುವ ಕಾರ್ಯಕ್ರಮ ಎಂದು ತಪ್ಪು ಪ್ರಚಾರ ಮಾಡಿದರು. ಕಾಂಗ್ರೆಸಿನಲ್ಲಿ ಇದು ಪ್ರಭಾಕರ ರಾಣೆಯವರ ಕಾರ್ಯಕ್ರಮ (ಆಗ ಅವರು ವಯಸ್ಕರ ಶಿಕ್ಷಣ ಸಚಿವರು) ಎಂದು ದೂರವಾದರು.

ಸನಾತನವಾದಿಗಳು ಸಂಸ್ಕೃತ ಮಾತ್ರ ಶ್ರೇಷ್ಠವೆಂದು, ಅದನ್ನು ಕಲಿಸಿದರೆ ಮಾತ್ರ ಕ್ರಾಂತಿಯೆಂದು ನಂಬಿ ಸಾಮಾನ್ಯರು ಅಕ್ಷರ ಕಲಿಯುವ ಪ್ರಕ್ರಿಯೆಯನ್ನೆ ನಗೆಚಾಟಿಕೆಗೆ ಗುರಿಯಾಗಿಸಿ ಆಸಕ್ತರ ಕಲಿಕೆಯ ಉತ್ಸಾಹವನ್ನು ಕಳೆಯಲು ಸಂಚು ಹೂಡಿದರು. ಅಕ್ಷರ ಕಲಿಯಲು ಬರುವವರು ಹೆಚ್ಚು ಮಂದಿ ಹೆಣ್ಣುಮಕ್ಕಳು. ಅವರ ಗಂಡಂದಿರನ್ನು ಛೂ ಬಿಟ್ಟು ರಾತ್ರಿ ಶಾಲೆಗೆ ಬರದಂತೆ ತಡೆದರು.

ಎಲ್ಲರೂ ಅಕ್ಷರವಂತರಾದರೆ ಸಾರಾಯಿ ವಿರೋಧಿ ಆಂದೋಲನ ನಡೆಸುತ್ತಾರೆಂದು ಗಂಡಸರ ವ್ಯಸನವನ್ನೇ ಆಯುಧವನ್ನಾಗಿಸಿಕೊಂಡು ಸಾಕ್ಷರತಾ ಕೇಂದ್ರವನ್ನು ಮುಚ್ಚಿಸಲು ಹೊರಟರು. ದಿನನಿತ್ಯ ಲೆಕ್ಕದಲ್ಲಿ, ಕೂಲಿಯಲ್ಲಿ ಮೋಸ ಮಾಡುತ್ತಿರುವ ಜಮೀನ್ದಾರರಿಗೆ, ಅಂಗಡಿ ಮಾಲಿಕರಿಗೆ ಇವರು ಕಲಿತು ಲೆಕ್ಕ ಕೇಳಿದರೆ ತಮ್ಮ ಬುಡಕ್ಕೇ ಬರುತ್ತದೆ ಎಂದು ಪರಿತಪಿಸಿ ಜನರ ದಾರಿ ತಪ್ಪಿಸಲು ಮುಂದಾದರು.

ಕೆಲವು ಖಾಸಗೀ ಕಾಲೇಜಿನಲ್ಲಿ ಶಿಕ್ಷಕರು, ಸಿಬ್ಬಂದಿಗಳು, ಆಂದೋಲನದಲ್ಲಿ ಕೆಲಸ ಮಾಡಲು ಬರಲು ಆಸಕ್ತರಾಗಿದ್ದರು. ಅಲ್ಲಿಯ ಖಾಸಗಿ ಸಂಸ್ಥೆಯ ಮುಖ್ಯಸ್ಥರು ನಮ್ಮ ಶಾಲಾ ಮಕ್ಕಳ ನೆಪ ಇಟ್ಟುಕೊಂಡು ಅವರನ್ನು ತಡೆದರು. ಇವನ್ನೆಲ್ಲಾ ಮೆಟ್ಟಿ ನಿಲ್ಲಬೇಕು. ಅದಕ್ಕೆ ವಿದ್ಯಾರ್ಥಿ ಯುವಜನ ಟೊಂಕ ಕಟ್ಟಿ ನಿಲ್ಲಬೇಕೆಂದು ಅಣ್ಣ ಹೇಳುತ್ತಿದ್ದ.

ಅಕ್ಷರ ಕಲಿಸಲು ಹೋದರೆ ಏನೆಲ್ಲಾ ಕಷ್ಟಗಳು ಬರುತ್ತವೆ. ಆದರೆ ಅದಕ್ಕೆ ಅಂಜಬೇಕಾಗಿಲ್ಲ. ನಿರಂಜನರ ಮೃತ್ಯುಂಜಯದ ಮನೆಪ್ಟಾ ಜಾತ್ರೆಯಿಂದ ತರುವ ಪಾಟಿಯನ್ನು, ಚಿರಸ್ಮರಣೆಯಲ್ಲಿ ಮಾಸ್ತರರು ಕೈಯ್ಯೂರ ವೀರರಿಗೆ ಶೋಷಣೆ ಅರಿವು ಮಾಡಿಸುವಾಗ ಪಟ್ಟ ಶ್ರಮವನ್ನು ಆತ ಮತ್ತೆ ಮತ್ತೆ ವಿವರಿಸುತ್ತಿದ್ದ.

ಸಾಕ್ಷರತಾ ಆಂದೋಲನಕ್ಕೆ ಸಾಧ್ಯ ಆದಷ್ಟು ಸ್ಥಳೀಯ ಜಾನಪದ ಪ್ರಕಾರವನ್ನು ಬಳಸಿಕೊಳ್ಳಬೇಕೆಂದು ಹೇಳುತ್ತಿದ್ದ. ಗುಮಟೆ ಪಾಂಗ್, ಸುಗ್ಗಿಕುಣಿತ, ಯಕ್ಷಗಾನ, ನಾಟಕ, ಗೀಗೀಪದ…… ಹೀಗೆ ಹಲವು ಪ್ರಕಾರಗಳನ್ನು ಬಳಸಿಕೊಳ್ಳುವಲ್ಲಿ ಈತನ ಕೊಡುಗೆಯೂ ಇತ್ತು.

ಅದಕ್ಕಾಗಿ ಆತ ‘ಅಕ್ಷರ ಸೂರ್ಯ’ ಎನ್ನುವ ಹಾಡನ್ನು, ಐದು ಯಕ್ಷಗಾನ ಏಕಾಂಕವನ್ನು, ‘ನಾ ನಿನ್ನ ಪ್ರೀತಿಸುತ್ತೇನೆ’ ಎನ್ನುವ ನೀಳ್ಗತೆಯನ್ನು, ಮಕ್ಕಳ ಕತೆಯನ್ನು ಬರೆದದ್ದನ್ನು ಇಲ್ಲಿ ನೆನಪಿಸಬಹುದು.

ಹೊನ್ನಾವರದಲ್ಲಿ ಶಾಂತಿನಾಯಕ, ಸುಬ್ರಾಯ ಕಾಮತ್ ಮೊದಲಾದವರ ಮುತುವರ್ಜಿಯಿಂದ ‘ಸಮತಾ’ ಎನ್ನುವ ಒಂದು ಮಹಿಳಾ ಸಂಘವು ಆರಂಭ ಆಯಿತು. ಆಗ BGVS ರಾಜ್ಯದಲ್ಲಿ ಇಂಥದ್ದೊಂದು ಸಂಘಟನೆ ಪ್ರಾರಂಭಿಸಿತ್ತು. ಅದರಡಿ ಹೊನ್ನಾವರ ತಾಲೂಕಿನಲ್ಲೂ ಸಂಘ ಪ್ರಾರಂಭ ಆಯ್ತು. ಶಾಂತಿ ನಾಯಕ, ಮಮತಾ ಭಾಗ್ವತ, ಮಾಧವಿ ಭಂಡಾರಿ ಕೆರೆಕೋಣ, ಎ.ಆರ್.ಭಟ್, ಎಸ್. ಎಂ. ನಾಯ್ಕ ಮುಂತಾದವರು ಅದರ ನೇತೃತ್ವ ವಹಿಸಿದ್ದರು.

ಸಮತಾ ಸಾರಾಯಿ ವಿರೋಧಿ ಆಂದೋಲನವನ್ನು ಕೈಗೆತ್ತಿಕೊಂಡಿತು. ನಂತರ ಸಮತಾ ಮಹಿಳಾಪತ್ತಿನ ಬ್ಯಾಂಕ್ ಪ್ರಾರಂಭಿಸಿ ಮಹಿಳೆಯರ ಮಧ್ಯೆ ಕೆಲಸ ಮಾಡಿತು. ಅಣ್ಣ ಆಗ BGVS ನ ಜಿಲ್ಲಾ ಅಧ್ಯಕ್ಷನಾಗಿದ್ದ. ಹಾಗಾಗಿ ‘ಸಮತಾ’ ಕಟ್ಟುವಲ್ಲಿಯೂ ಅವನ ಕೊಡುಗೆ ನಿರ್ಣಾಯಕವಾಗಿತ್ತು.

ಹಿಂದೆ ಹೇಳಿದಂತೆ ಸಾಕ್ಷರತಾ ಆಂದೋಲನ ಕೆಳಜಾತಿ ಜನಾಂಗದ ನಡುವೆ ಹೊಸ ಅರಿವಿನ ಪಯಣವಾಗಿ ರೂಪಿಸುವಲ್ಲಿ ಅಣ್ಣ ತನ್ನ ಆರೋಗ್ಯವನ್ನು ಲೆಕ್ಕಿಸದೆ ದುಡಿದ. ಅದು ಆತನ ಬದ್ಧತೆಯ ಪ್ರಶ್ನೆಯೂ ಆಗಿತ್ತು.

‍ಲೇಖಕರು avadhi

October 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: