ಅಂಚೆ ಪೇದೆ ವಿಡಂಬಾರಿ ಎಂದರೆ ಅಣ್ಣನಿಗೆ ಪಂಚಪ್ರಾಣ..

‘ಅಂಚೆಪೇದೆಯ ಆತ್ಮಕಥನ’ದ ಮೂಲಕ ಹೆಸರಾಗಿದ್ದ, ಉತ್ತರ ಕನ್ನಡ ಜಿಲ್ಲೆಯ ಪುಸ್ತಕ ಚಳವಳಿಯ ಪ್ರಮುಖ ಭಾಗವಾಗಿದ್ದ ‘ವಿಡಂಬಾರಿ’ ಅವರು ಇನ್ನಿಲ್ಲ.

ಅವರ ಅಗಲಿಕೆಗೆ ‘ಅವಧಿ’ ಕಂಬನಿ ಮಿಡಿಯುತ್ತದೆ.

ವಿಠ್ಠಲ ಭಂಡಾರಿ ಅವರು ತಮ್ಮ ತಂದೆ ಆರ್ ವಿ ಭಂಡಾರಿ ಅವರ ಬಗ್ಗೆ ಬರೆದ ನೆನಪುಗಳ ಸರಮಾಲೆ ‘ಅವಧಿ’ಯಲ್ಲಿ ಪ್ರಕಟವಾಗಿತ್ತು

ಈ ಸರಣಿಯಲ್ಲಿ ಆರ್ ವಿ ಭಂಡಾರಿ ಹಾಗೂ ವಿಡಂಬಾರಿ ಅವರ ಅನ್ಯೋನ್ಯತೆಯ ಬಗ್ಗೆ ಬರೆದ ಬರಹವನ್ನು ಮತ್ತೆ ನಿಮ್ಮ ಓದಿಗಾಗಿ ಪ್ರಕಟಿಸುತ್ತಿದ್ದೇವೆ-

ವಿಠ್ಠಲ ಭಂಡಾರಿ 

ಅಣ್ಣ ಮತ್ತು ವಿಡಂಬಾರಿಯವರ ಸ್ನೇಹಕ್ಕೆ ಸುಮಾರು 4-5 ದಶಕದ ಇತಿಹಾಸ ಇರಬಹುದು. ಅಂದರೆ ಹೆಚ್ಚು ಕಡಿಮೆ ಸುವರ್ಣಮಹೋತ್ಸವದ ಸಂಭ್ರಮ. ಆದರೆ ಇದನ್ನು ಆಚರಿಸಿಕೊಳ್ಳಲು ಅಣ್ಣ ಇಹದಲ್ಲಿ ಇಲ್ಲ. ವಿಡಂಬಾರಿಯವರು ಆಚರಿಸಿಕೊಳ್ಳುವಷ್ಟು ಘಟ್ಟಿಯಾಗಿ ಇಲ್ಲ. ಆದರೂ ಅವರ ಸ್ನೇಹ ಆದರ್ಶವಾದದ್ದು. ಪುರಾಣದ ಕೃಷ್ಣ ಸುಧಾಮರದ ಹಾಗೆ ಆದರೆ ಇಲ್ಲಿ ಇಬ್ಬರೂ ಸುಧಾಮರೆ.

ವಿಡಂಬಾರಿಯವರು ಅಂಚೆ ಪೇದೆಯಾಗಿದ್ದವರು. ಇಬ್ಬರ ನಡುವೆಯೂ ಪತ್ರವ್ಯವಹಾರ ಪೋಸ್ಟ ಕಾರ್ಡಿನಲ್ಲಿ. ಬಹುಶಃ ಪೋಸ್ಟಿನಲ್ಲಿ ಮಾರಾಟಕ್ಕೆ ಬಂದ ಕಾರ್ಡನಲ್ಲಿ ಅರ್ಧಕ್ಕರ್ಧ ಇವರೇ ಖರ್ಚು ಮಾಡುತ್ತಿರಬೇಕು. ವಿಡಂಬಾರಿಯವರ ಪತ್ರ ಬಂದರೆ ಅದಕ್ಕೆ ಅಣ್ಣನ ಉತ್ತರ; ಅದು ಆವರಿಗೆ ತಲುಪುತ್ತಿದ್ದಂತೆ ಅವರಿಂದ ಒಂದು ಮರು ಉತ್ತರದ ಕಾರ್ಡ. ಹೀಗೆ ಸರಣಿ ಪತ್ರ ವ್ಯವಹಾರ.

ಹೀಗೆ ಅವರ ಸ್ನೇಹದ ಬಗ್ಗೆ ಬರೆಯುವಾಗ ವಿಡಂಬಾರಿಯವರ ಕುರಿತು ಎರಡು ಮಾತು ಬರೆಯುವುದು ಒಳ್ಳೆಯದು ಅಂದುಕೊಂಡಿದ್ದೇನೆ. ನನಗೂ ಅವರೊಂದಿಗೆ 25-30 ವರ್ಷಗಳ ಸಲಿಗೆ. ಅವರ ಬದುಕನ್ನು ತಿಳಿಯಲು ಅವರೇ ಬರೆದ “ಅಂಚೆ ಪೇದೆಯ ಆತ್ಮ ಕಥನ” ಒಳ್ಳೆಯ ಆಕರ.

ವಿಡಂಬಾರಿಯವರ ಬದುಕು: ಅದು ಪ್ರಾರಂಭವಾಗಿದ್ದೇ ದುರಂತದ ಮೂಲಕ. ಮನುಷ್ಯ ಲೋಕಕ್ಕೆ ಶಾಪವಾಗಿರುವ, ಸೂಳೆ ಬಿಡುವ ಪದ್ಧತಿ ಇನ್ನೂ ಜೀವಂತವಾಗಿರುವ ಕಾಲ ಅದು. ದೇವರ ಹೆಸರಿನಲ್ಲಿ ಊರ ಪ್ರತಿಷ್ಟಿತರೋ, ಪೂಜಾರಿಯೋ ತಮ್ಮ ತೆವಲಿಗೆ ಕೆಳಜಾತಿಯ ಹೆಣ್ಣುಗಳನ್ನು ದೇವದಾಸಿಯಾಗಿಸುವುದನ್ನು ಸ್ವತಃ ಇಲ್ಲದ ದೇವರಿಗೂ(!?) ನಿಲ್ಲಿಸಲಾಗಿರಲಿಲ್ಲ.
“ದೇವಸ್ಥಾನದ ದೇವರೆಂಬ ಮೂರ್ತಿಯ ಎದುರು ತನ್ನ ತಾಯಿಯ ತಂದೆಯವರನ್ನು ಕರೆತಂದು ನಿಲ್ಲಿಸಿ, ನೋಡು, ನಿನ್ನ ಹಿರಿಯ ಮಗಳ ಮೇಲೆ ನಮ್ಮ ದೇವರಿಗೆ ಮನಸ್ಸಾಗಿದೆ. ಕಾರಣ ನಿನ್ ಮಗಳನ್ನು ನಾಳೇಯೇ ದೇವರ ಹೆಸರಿನಲ್ಲಿ ಬಿಡದಿದ್ದರೆ ನಿನ್ನ ಕುಲವೇ ನಾಶವಾದೀತೆಂದು ಹೇಳಿದರಂತೆ. ಆಗ ತಾಯಿಯ ತಂದೆಯಾದ ವೆಂಕಟಪ್ಪ ಭಂಡಾರಿ “ಹೌದ್ರಾ ಒಡ್ಯಾ,ಆಗ್ಲಿ ಒಡ್ಯಾ” ಅಂದರಂತೆ. ಹೀಗಾಗಿ ವೆಂಕಪ್ಪ ಭಂಡಾರಿಯವರ ಮುಗ್ಧತನ ಮತ್ತು ದೇವಸ್ಥಾನಕ್ಕೆ ಸಂಬಂಧಪಟ್ಟವರ ಸ್ವಾರ್ಥಕ್ಕೆ ಬಲಿಯಾಗಿ ನನ್ನ ತಾಯಿಯಾದ ಗಣಪಿ ದೇವರ ಹೆಸರಿನಲ್ಲಿ ಸೂಳೆ ಆದಳಂತೆ”. [ಅಂಚೆ ಪೇದೆಯ ಆತ್ಮ ಕಥನ ಎಂದು ತಾನು ಹುಟ್ಟುವ ಮೊದಲು ನಡೆದು ಹೋದ ಒಂದು ಅಮಾನವೀಯ ಘಟನೆಯನ್ನು ನೆನಪಿಸಿಕೊಳ್ಳಲು ವಿಡಂಬಾರಿ ಹಿಂಜರಿಯುವುದಿಲ್ಲ.

ಇವರು ಹುಟ್ಟಿದ್ದು 1935ರಲ್ಲಿ ಅಂದು ಅಮವಾಸ್ಯೆ ಮತ್ತೆ ಅಪಶಕುನ. ಅಮಾವಾಸ್ಯೆ ದಿನ ಹುಟ್ಟಿದ ಮಗುವನ್ನು ಬೇರೆಯವರಿಗೆ ಕೊಡುವ ರಿವಾಜಿತ್ತು. ಕವಿ ವಿಡಂಬಾರಿಯವರನ್ನೂ ಹುಟ್ಟಿದ 12ನೇ ದಿವಸಕ್ಕೆ ಬೇರೆಯವರಿಗೆ ಕೊಡಲಾಯಿತು. ಸಾಕು ತಂದೆ -ತಾಯಿಯ ಪ್ರೀತಿ ಹೆಚ್ಚುದಿನ ಇರಲಿಲ್ಲ. ಸಾಕುತಾಯಿ ತೀರಿಕೊಂಡ ನಂತರ ಆ ಸ್ಥಾನಕ್ಕೆ ಬಂದ ಮಲತಾಯಿಯ ಉಪಟಳ, ಹಿಂಸೆಯನ್ನು ಸಹಿಸಬೇಕಾಯಿತು. ಮನೆಯಾಚೆ ಹೋಗಲೇಬೇಕಾಯಿತು.

ಹೀಗೆ ಹುಟ್ಟಿಸಿದ ಮನೆ ನೆರಳಾಗಲಿಲ್ಲ; ಎತ್ತಿ ಆಡಿಸಿದವರು ಬೇರೆ , ಮೊಲೆಹಾಲನಿಕ್ಕಿ ಪ್ರೀತಿ ಹಂಚಿದವರು ಬೇರೆ, ತುತ್ತ ನಿಕ್ಕಿದವರು ಬೇರೆ; ಅಕ್ಷರ ದೀಕ್ಷೆ ಕೊಟ್ಟವರು ಬೇರೆ…. ಹೀಗೆ ಸರ್ವರಲಿ ಒಂದೊಂದು ನೆರವು ಪಡೆದು ವಿಡಂಬಾರಿಯಾಗಿ ಬೆಳೆದರು. ಅವರಿಗೆ ಅವರೇ ಮಾರ್ಗದರ್ಶಕರು, “ತಾನು ಏಕಲವ್ಯನ ಮಗನ ಮೊಮ್ಮಗನು” ಎನ್ನುತ್ತಾರೆ. ಅಂದಿನ ಅದೇ ಹಠ, ಸಾಧಿಸುವ ಏಕಾಗ್ರತೆಯನ್ನು ಅವರು ಇಂದಿಗೂ ಜತನದಿಂದ ಕಾಯ್ದುಕೊಂಡು ಬಂದಿದ್ದಾರೆ.

‘ವಿಶಾಲ ಕರ್ನಾಟಕ’ ದಲ್ಲಿ ಮೊದಲ ಚುಟುಕು ಪ್ರಕಟವಾಯಿತು. ವಿ.ಗ.ಭಂಡಾರಿ ಬದಲು ಸಂಪಾದಕರು ‘ವಿಡಂಬಾರಿ’ ಎಂದು ಬದಲಿಸಿ ಪ್ರಕಟಿಸಿದರು. (ಆಗ ಅಂಚೆ ನೌಕರರ ಹೋರಾಟ ನಡೆಯುತ್ತಿತ್ತು. ಇಲಾಖೆಯ ವಿರುದ್ಧ ಬರೆದ ಚುಟುಕು ಪ್ರಕಟವಾಗಿದ್ದರೆ ಅನವಶ್ಯಕ ತೊಂದರೆ ಎಂದು ಸಂಪಾದಕರೇ ನಿಜ ನಾಮಧೇಯವನ್ನು ಬದಲಿಸಿದ್ದರು) ಅದೇ ಮುಂದೆ ಕಾವ್ಯನಾಮವೂ ಆಯಿತು. ಹಾಗೆ ನೋಡಿದರೆ ಅವರ ಬದುಕನ್ನು ರೂಪಿಸಿದ್ದು ಅಂಕೋಲೆ; ಅಲ್ಲಿಯ ಸಮಾಜವಾದಿ ಹೋರಾಟಗಾರ ಸ್ನೇಹಿತರು. ದಿನಕರ ದೇಸಾಯಿಯವರ ಪರಿಚಯ, ವಿ.ಜೆ ನಾಯಕ, ಅಮ್ಮೆಂಬಳ ಆನಂದ, ಶಾಂತಾರಾಮ ನಾಯಕ, ವಿಷ್ಣು ನಾಯ್ಕ ,ಶ್ಯಾಮ ಹುದ್ದಾರ ….ಹೀಗೆ ಹಲಚರ ಸ್ನೇಹ ಅವರ ವೈಚಾರಿಕತೆ ರೂಪಿಸಿತು. ಅಲ್ಲಿಂದಲೇ ಅಣ್ಣನೊಂದಿಗೆ ಅವರ ಸಖ್ಯ ಪ್ರಾರಂಭ. ಅಲ್ಲಿಯೇ ಅಂಚೆ ನೌಕರಿಯೂ ಹೌದು.

ಬದುಕಿಗೆ ಪಕ್ವತೆ ತಂದುಕೊಟ್ಟಿದ್ದು ಭಟ್ಕಳದ ಶಿರಾಲಿ. ಅಲ್ಲಿ ಅವರು ನಿವೃತ್ತಿಯೂ ಆದರು. ಬದುಕಿಗೆ ಹೊಸ ಚಾಲನೆ ಕೊಟ್ಟಿದ್ದು ಶಿರಸಿಯ ‘ಚಿಂತನ’ ಕನ್ನಡ ಪುಸ್ತಕ ಮಳಿಗೆ. ಆಗ ಚಿಂತನ ಉತ್ತರ ಕನ್ನಡ ಸಂಘಟನೆ ಜಿಲ್ಲೆಯ ಒಂದು ಪ್ರಮುಖ ಸಾಂಸ್ಕೃತಿಕ ಸಂಘಟನೆಯಾಗಿ ಕೆಲಸ ಮಾಡುತ್ತಿತ್ತು. ನಾನು ಮತ್ತು ಸಿ. ಆರ್. ಶ್ಯಾನಭಾಗರು ಅದರ ಜಿಲ್ಲಾ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದೆವೆ. ಅದರ ಭಾಗವಾಗಿ ಶಿರಸಿಯಲ್ಲಿ ಒಂದು ಪುಸ್ತಕ ಮಳಿಗೆ ಕೆಲಸ ಮಾಡುತ್ತಿತ್ತು. ನಿವೃತ್ತಿಯ ನಂತರ ಎಲ್ಲೋ ಜಲ್ಲಿ ಕ್ರಶ್ಶರಿನಲ್ಲಿ ಜೀವ ತೇಯುತ್ತಿದ್ದ ವಿಡಂಬಾರಿಯವರನ್ನು ಪುಸ್ತಕದಂಗಡಿಯ ಮ್ಯಾನೇಜರನನ್ನಾಗಿ ನೇಮಿಸಿಕೊಳ್ಳಲು ಸಾಧ್ಯವೇ ಎಂದು ಅಣ್ಣ ಕೇಳಿದಾಗ ಖುಷಿಯಿಂದ ಒಪ್ಪಿಕೊಂಡವು. ಸ್ವಂತಕ್ಕೆ ಮನೆ ಇಲ್ಲದ ಅವರು ತನ್ನ ಸಂಸಾರವನ್ನು ಶಿರಸಿಗೆ ಸ್ಥಳಾಂತರಿಸಿದರು. ಅಂದಿನಿಂದ ಪುಸ್ತಕಗಳೇ ಅವರ ದಿನಚರಿಯಾಯಿತು. ಪ್ರತಿದಿನ ಶಿರಸಿ ಬಸ್ ನಿಲ್ದಾಣಕ್ಕೆ ಹೋಗಿ ಬಸ್ಸಲ್ಲ್ಲಿ ಹತ್ತಿ ಭಾಷಣಮಾಡಿ ಸಾವಿರಾರು ಪುಸ್ತಕಗಳನ್ನು ಮಾರುತ್ತಿದ್ದರು!. ಅಂಚೆಯಣ್ಣ ಪುಸ್ತಕದ ಅಜ್ಜನಾಗಿ ಬದಲಾದರು. ಸಹಸ್ರ ಸಹಸ್ರ ಪುಸ್ತಕ ಮಾರಿ ಓದುವ ಸಂಸ್ಕೃತಿ ಹುಟ್ಟು ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದರು. ಮುಗ್ಧತೆ, ವಿನಯ, ಮುಜುಗರ, ಸಹನೆ ಅವರೊಂದಿಗೆ ಬೆಳೆದ ಗುಣಗಳು. ವೈರಿಗಳನ್ನು ಕ್ಷಮಿಸಿ ಬಿಡುವ ಹೃದಯವೈಶಾಲ್ಯ ಅವರಲ್ಲಿದೆ. ಆದರೆ ಸ್ವಾಭಿಮಾನ, ಆಶಾವಾದ ಸಾಧಿಸುವ ಛಲ ಅದರೊಳಗೆ ಸದಾ ಜಾಗೃತವಾಗಿವೆ.

ವಿಡಂಬಾರಿಯವರು ಬರೆದಂತೆ ಬದುಕಿದವರು. ಇವೆರಡರ ನಡುವೆ ಮುಚ್ಚುಮರೆಯಾಗಲೀ, ಕಂದಕವಾಗಲೀ ಇಲ್ಲ. ತೀರಾ ಗ್ರಾಮೀಣ ಭಾಗದಲ್ಲಿ ನೆಲೆನಿಂತು ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಸಂಸ್ಕೃತಿಯನ್ನು ಜೀವಂತ ಇಟ್ಟಿದ್ದಾರೆ.
ವಿಡಂಬಾರಿಯವರ 4 ಕವನ ಸಂಕಲನ ಈವರೆಗೆ ಪ್ರಕಟವಾಗಿವೆ. 1981 ರಲ್ಲಿ ‘ಒಗ್ಗರಣೆ’ 1986ರಲಿ ‘ಕವಳ’2004ರಲ್ಲಿ ‘ಕುದಿ ಬಿಂದು’ 2010ರಲ್ಲಿ ‘ವಿಡಂಬಾರಿ ಕಂಡಿದ್ದು’ ಚುಟುಕು ಸಂಕಲನವಾದರೆ ‘ಅಂಚೆ ಪೇದೆಯ ಆತ್ಮ ಕಥನ’ ಅವರ ಆತ್ಮಕಥನ… ಹೀಗೆ 7-8 ಪುಸ್ತಕಗಳು ಬಂದಿವೆ. ಇದನ್ನು ಹೊರತಾಗಿಸಿ ಪ್ರಕಟಣೆಗಾಗಿ ಸುಮಾರು 3,000 ಚುಟುಕುಗಳು ಕಾದಿವೆ. ಮಗನನ್ನು ಕಳೆದುಕೊಂಡರು. ಮೊಮ್ಮಗನ್ನು ಕಳೆದುಕೊಂಡರು. ಇತ್ತೀಚೆಗೆ ಹೆಂಡತಿಯನ್ನು ಕಳೆದುಕೊಂಡರು. ಸಣ್ಣ ಪಾರ್ಶ್ವವಾಯುವಿಗೆ ಈಡಾದರು. ಈಗ ಓಡಾಟ ಕಷ್ಟ. ಮಗಳ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ವಿಡಂಬಾರಿ ಈ ಸಮಾಜದಲ್ಲಿ ಆಗುಹೋಗುವ ಪ್ರತಿಘಟನೆಗೂ ಕಣ್ಣು-ಕಿವಿತೆರೆದುಕೊಂಡವರು. ಹಾಗಾಗಿಯೇ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯ ಬಂದಾಗೆಲ್ಲ ಅವರ ಪ್ರಜ್ಞೆ ಎಚ್ಚೆತ್ತುಕೊಳ್ಳುತ್ತದೆ. ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ. ಕೋಮುವಾದ, ಬ್ರಷ್ಟಾಚಾರ, ಲಂಚಗುಳಿತನ, ಸ್ವಜನಪಕ್ಷಪಾತ, ಜಾತಿವಾದ, ಮೌಢ್ಯ ಕಂದಾಚಾರ, ಧಾರ್ಮಿಕ ಅಸಹಿಷ್ಣುತೆಯನ್ನು ಒಳಗೊಂಡಂತೆ ಮನುಷ್ಯನ ಮನಸ್ಸಿನ ಒಳತೋಟಿಗಳ ಬಗ್ಗೆ ಕೂಡ ಸೂಕ್ಷ್ಮವಾಗಿ ಬರೆಯುತ್ತಾರೆ.

ಆಕ್ರೋಶ, ನೋವು, ನಲಿವುಗಳಿಗೆ, ವ್ಯಂಗ್ಯ-ವಿಡಂಬನೆ ಸೂಕ್ಷ್ಮವಾದ ಭಾಷೆ, ದೃಷ್ಟಾಂತಗಳಿಂದಾಗಿ ಅವರ ಆಶಯ ತನ್ನೆಲ್ಲ ಶಕ್ತಿಯೊಂದಿಗೆ ಪ್ರಕಟವಾಗುತ್ತದೆ. ಆಶ್ಚರ್ಯವೆಂದರೆ ಅವರ ಚುಟುಕಿಗೂ ಅವರಿಗೂ ಇರುವ ಸಂಬಂಧ ವೈರುಧ್ಯದಿಂದ ಕೂಡಿದ್ದು. ವೈಯಕ್ತಿಕವಾಗಿ ಅವರ ಸ್ವಭಾವ ಹೆಚ್ಚು ಮೃದು ಮತ್ತು ಮುಗ್ಧತನದ್ದು. ಯಾರಿಗೂ ಎದುರುವಾದಿಸದ, ವೈರಿಗಳಿಗೂ ಶುಭ ಹಾರೈಸುವ ಕೆಟ್ಟ ಮುಲಾಜಿನ ಮನುಷ್ಯ. ಎತ್ತರದ ದನಿಯಲ್ಲಿ ಮಾತನಾಡಿಸಿದ್ದನ್ನು ನಾನರಿಯೆ. ಎಲ್ಲಾ ನೋವನ್ನು ಸ್ವತಃ ನುಂಗಿಕೊಳ್ಳುವ ಸ್ವಭಾವ. ಆದರೆ ಅವರ ಚುಟುಕು ಇದರ ವಿರದ್ಧ. ಸಿಟ್ಟು, ಪ್ರತಿಭಟನೆ, ಆಕ್ರೋಶಗಳು ಬೆಂಕಿಯುಂಡೆಯಂತೆ ಏಳುತ್ತವೆ. ಅವರ ಚಾಟಿಗೆ, ವ್ಯಂಗ್ಯಕ್ಕೆ ಒಳಗಾಗದ ವಸ್ತುವೇ ಇಲ್ಲ ಎನ್ನಬಹುದು. ಚೇಳಿನಂತೆ ಕುಟುಕುವ ,ಕಟ್ಟಿರುವೆಯಂತೆ ಕಚ್ಚುವ, ರಣ ಹದ್ದಿನಂತೆ ತಲೆಯ ಮೇಲೆ ಎರಗುವ ಚುಟುಕುಗಳು ಸಾಂತ್ವನದ ಅಪ್ಪುಗೆಯನ್ನು ನೀಡುವುದರಿಂದ ಕನ್ನಡದ ಪ್ರಮುಖ ಕವಿಯಾಗಿ ಅವರು ನಮಗೆ ಮುಖ್ಯವಾಗುತ್ತಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ವಿಡಂಬಾರಿಯವರ ಹೆಸರನ್ನು ಕಳೆದ 5 ವರ್ಷಗಳಿಂದ ಸೂಚಿಸುತ್ತಲೇ ಬರುತ್ತಿದ್ದೇವೆ.

ದುರಂತವೆಂದರೆ ಇನ್ನೂ ಅವರಿಗೆ ಒಂದು ಪ್ರಶಸ್ತಿ ಕೊಡುವ ಮನಸ್ಸನ್ನು ಅಕಾಡೆಮಿ ಮಾಡಿಲ್ಲ. ನಗರದಲ್ಲಿದ್ದು ಎಲ್ಲಾ ರೀತಿ ಸೌಲಭ್ಯ ಪಡೆದು ಸಾಹಿತ್ಯ ರಚಿಸಿದವರ ಯಾದಿ ಇನ್ನೂ ಮುಗಿದಂತಿಲ್ಲ. ಅದೆಲ್ಲಾ ಮುಗಿದ ಮೇಲೆ ಕೊಟ್ಟರೆ ತೆಗೆದುಕೊಳ್ಳಲು ವಿಡಂಬಾರಿ ಘಟ್ಟಿ ಇರಲಿಕ್ಕಿಲ್ಲ.

ವಿಡಂಬಾರಿ ಯಾಕೆ ದಲಿತ ಅಲ್ಲ ಎಂದು ಅಣ್ಣ ಯಾವಾಗಲೂ ಪ್ರಶ್ನಿಸುತ್ತಿದ್ದ. ಯಾಕೆಂದರೆ ವಿಡಂಬಾರಿಯವರು ಪಟ್ಟ ಅವಮಾನ, ಹಸಿವು, ಅಸಹಾಯಕತೆ ಯಾರನ್ನೂ ದಂಗು ಬಡಿಸುವಂತದ್ದು. ಆತ ಮನೆಗೆ ಬಂದರೆ ಅಂದು ನಮ್ಮ ಮನೆಯಲ್ಲಿ ಮೀನು ಊಟವೇ ಆಗಬೇಕು. ಎಲ್ಲೇ ಸಭೆ, ವಿಚಾರ ಸಂಕಿರಣ, ಸಮ್ಮೇಳನ ನಡೆಯಲಿ ವಿಡಂಬಾರಿಯವರನ್ನು ಕರೆದುಕೊಂಡು ಹೋಗುತ್ತಿದ್ದ, ಆರ್ಥಿಕವಾಗಿ ದುರ್ಭಲನಿದ್ದಾನೆಂದು ಅವರನ್ನು ಈತನೇ ಬಸ್ ವೆಚ್ಚ ಬರಿಸಿ ಕರೆದೊಯ್ಯುತ್ತಿದ್ದ. ಎಲ್ಲೇ ವೈಚಾರಿಕ ಪುಸ್ತಕ ಕಂಡರೆ ವಿಡಂಬಾರಿಯವರಿಗೊಂದು ಪ್ರತಿ ಅಣ್ಣನ ಬ್ಯಾಗ ಸೇರುತ್ತಿತ್ತು.

ಹೆಚ್ಚು ಕಡಿಮೆ ಆತನ ಪುಸ್ತಕಗಳು ಪ್ರಕಟವಾಗಲು ಅಣ್ಣನೇ ಕಾರಣನಾಗಿದ್ದ. ಅವನ ಬಹುತೇಕ ಪುಸ್ತಕಗಳಿಗೆ ಆತನ ಚುಟುಕನ್ನು ಆಯ್ಕೆ ಮಾಡಿಕೊಟ್ಟಿದ್ದೂ ಕೂಡ ಅಣ್ಣನೇ. ಎಲ್ಲೇ ಕವಿಗೋಷ್ಠಿಯಾದರೂ ವಿಡಂಬಾರಿಯವರ ಚುಟುಕುಗಳನ್ನು ಹೊತ್ತ ಲಕೋಟೆಯು ಬರುತ್ತಿತ್ತು ಅಥವಾ ಅವರೇ ಬರುತ್ತಿದ್ದರು. ಅಣ್ಣ ಕೆಲವನ್ನು ತಿದ್ದಿ ಒಪ್ಪ ಮಾಡಿ ಕೊಡ್ತಿದ್ದ. ಅಣ್ಣನ ಕುರಿತೂ ಅವನಿಗೂ ಅಪಾರ ಪ್ರೀತಿ, ಗೌರವ. ಆತ ತನ್ನ ಆತ್ಮ ಚರಿತ್ರೆಯಲ್ಲಿ ಅಣ್ಣನಿಗಾಗೇ ಒಂದು ಅಧ್ಯಾಯ ಇಟ್ಟಿದ್ದಾನೆ. ಅವರ ಆತ್ಮ ಕಥನದಲ್ಲಿ ಅಣ್ಣನ ಹೆಸರು 100 ಬಾರಿಯಾದರೂ ಬಂದಿರಬೇಕು. ನಮ್ಮ ಮಾಧವಿ ಪ್ರಾಧಿಕಾರದ ಸದಸ್ಯೆ ಆಗಿದ್ದಾಗ ‘ಅಂಚೆ ಪೇದೆಯ ಆತ್ಮ ಕಥನ’ ಪ್ರಕಟವಾಯಿತು. ಅವರ ಆತ್ಮ ಕಥೆಯನ್ನು ನಾನೇ ಎಡಿಟ್ ಮಾಡಿಕೊಟ್ಟಿದ್ದೆ. ತುಂಬಾ ಕಡೆಗೆ ಇರುವ ಅಣ್ಣನ ಹೆಸರನ್ನು, ಆತನ ಹೊಗಳುವಿಕೆಯನ್ನು ನಾನೇ ತೆಗೆದು ಹಾಕಿದೆ. ಆ ಕುರಿತು ಅವರು ಬೇಸರ ವ್ಯಕ್ತಪಡಿಸಿದ್ದರು. ಮೊದಲು ಇದು ಅಂಚೆ ಪೇದೆಯ ಆತ್ಮ ಚರಿತ್ರೆ ಎಂದು ಸಣ್ಣ ರೂಪದಲ್ಲಿ ರಾಘವೇಂದ್ರ ಪ್ರಕಾಶನದಡಿ ಪ್ರಕಟವಾಗಿತ್ತು. ಇದಕ್ಕೆ ಅವರು ‘ಸೂಳೆ ಮಗನ ಆತ್ಮ ಕತೆ’ ಎಂದು ಹೆಸರಿಡಬೇಕೆಂದುಕೊಂಡಿದ್ದರಂತೆ. ಆಮೇಲೆ ಹಾಗೆ ಬೇಡ ಎಂದು ಕೆಲವರು ಹೇಳಿದರಂತೆ. ಹಾಗಾಗಿ ಕೈಬಿಟ್ಟೆ ಎನ್ನುತ್ತಿದ್ದರು.

ಆರ್. ವ್ಹಿ. ಭಂಡಾರಿ ನನ್ನ ಸ್ಪೂರ್ತಿ ಎನ್ನುವ ಒಂದು ಅಧ್ಯಾಯವನ್ನೇ ಅವರು ಬರೆದಿದ್ದಾರೆ. ಆತನೊಂದಿಗೆ ವಿಚಾರಿಸದೇ ಒಂದು ಸಣ್ಣ ಕೆಲಸವನ್ನೂ ಅವರು ಮಾಡುತ್ತಿರಲಿಲ್ಲ.
ಅವರಿಬ್ಬರ ಭೇಟಿ ಮತ್ತು ವಿಡಂಬಾರಿಯವರು ಅಣ್ನ ಬಗ್ಗ ಬರೆದ ಕೆಲವು ಮಾತುಗಳನ್ನು ಮುಂದಿನ ವಾರ ಬರೆಯುತ್ತೇನೆ. ಅಣ್ಣನ ಶೃದ್ಧಾಂಜಲಿ ಸಭೆಯಲ್ಲಿ ಅವರು ಬರೆದು ಓದಿದ ಚುಟುಕು ಅವರಿಬ್ಬರ ಸ್ನೇಹಕ್ಕೆ ಸಾಕ್ಷಿ.

ನಿನಗೆಲ್ಲಿ ಸಾವು?
ಹೋರಾಡಿ ಹೋರಾಡಿ ನುಂಗುತ್ತ ನೋವು
ನಾಡಿಗೇ ತಂದವನು ಮಲ್ಲಿಗೆಯ ಹೂವು
ಈ ಹೂವು ಇಲ್ಲಿರಲು ನಿನಗೆಲ್ಲಿ ಸಾವು?
ಸತ್ತಿದ್ದು ಬರೆ ದೇಹ ಮತ್ತದರ ಬೇವು
ಈ ಮೂರ್ಖರು
ಓ ಆರ್.ವ್ಹಿ ನೀ ದುಡಿದು ಅಪಾರ ಸೊತ್ತು
ಪಡೆದಿಲ್ಲಿ ಮಡಗಿದ್ದು ಕೆಲವರಿಗೆ ಗೊತ್ತು
ಈ ಸೊತ್ತು ಹಣವಲ್ಲ ಒಡವೆಯೂ ಅಲ್ಲ
ಹೀಗಾಗಿ ಮೂರ್ಖರಿಗೆ ಕಾಣಲೇ ಇಲ್ಲ

ಅಣ್ಣನ ನಿಧನಾನಂತರ ಸಹಯಾನ ಕಟ್ಟುವಲ್ಲಿ ವಿಡಂಬಾರಿಯವರು ಪಾಲ್ಗೊಂಡರು. ಸಹಯಾನದಲ್ಲಿ ಏನೇ ಆದರೂ ಮುಂದಿನ ಸಾಲಿನಲ್ಲಿ ಅವರ ಹಾಜರಾತಿ ಇರಲೇ ಬೇಕು. ಕಾರ್ಯಕ್ರಮಕ್ಕೆ 500/1000 ಹಣವನ್ನು ಒತ್ತಾಯವಾಗಿ ಕೈಲಿ ಹಿಡಿಸಿಯೇ ಹೋಗುತ್ತಿದ್ದರು.ಈಗ ವಯೋಸಹಜ ತೊಂದರೆಯಿಂದಾಗಿ ಬರಲು ಆಗಿತ್ತಿಲ್ಲ. ಆದರೆ ದೇಹ ಕಡತೋಕೆಯಲ್ಲಿದ್ದರೂ ಅವರ ಮನಸ್ಸು ಸಹಯಾನದಲ್ಲಿ ಇದೆ. ಹೀಗೆ ಅಣ್ಣ ಬೆಳೆಸಿದ ಗಿಡ ಮರವಾಗಿ ಹಣ್ಣು ಕೊಟ್ಟಿದೆ.. ಮರವಾಗಿದ್ದನ್ನು ನೋಡಿದ ಖುಷಿಯಲ್ಲಿಯೇ ಅಣ್ಣ ಕಣ್ಣು ಮುಚ್ಚಿದ್ದಾನೆ.

‍ಲೇಖಕರು Avadhi

February 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: