ಸೂರ್ಯಕೀರ್ತಿ
೧.
ನಾನೊಬ್ಬ ಪ್ರೀತಿಯ ಕುಡುಕ ಕಣೇ ಸಾಕಿ!
ನಿನ್ನ ಮಧುಶಾಲೆಗೆ ಸೇರಿಸಿಕೊಳ್ಳುವೆಯಾ?
ನಾನೊಬ್ಬ ಅಪಥ್ಯ ಪ್ರೇಮಿ ಕಣೇ ಸಾಕಿ,
ನಿನ್ನ ಪ್ರೀತಿಯ ತೆಕ್ಕೆಗೆ ಹಾಕಿಕೊಳ್ಳುವೆಯಾ?
ನಾನೊಬ್ಬ ಪ್ರೀತಿಯ ದಾಸ ಕಣೇ ಸಾಕಿ,
ನಿನ್ನ ತುಟಿಯ ಸೋಂಕಿಸಿ ಪ್ರೀತಿಯರಸ ನೀಡುವೆಯಾ?
ನಾನೊಬ್ಬ ಅಪೂರ್ಣ ಪ್ರೀತಿಯ ಸೇವಕ ಸಾಕಿ,
ಚುಂಬನದ ರಾತ್ರಿಗೆ ಕರೆದೊಯ್ಯುವೆಯಾ?
ನಾನೊಬ್ಬ ಧರ್ಮೀಯ ಪ್ರೇಮಿ ಕಣೇ ಸಾಕಿ,
ಮನುಷ್ಯತ್ವದ ತತ್ವಾಧ್ಯಾತ್ಮಕ್ಕೆ ದಾರಿ ತೋರುವೆಯಾ?
ನಾನೊಬ್ಬ ಕಾಮಿಸುವ ಪ್ರೇಮಿ ಕಣೇ ಸಾಕಿ,
ನಿನ್ನ ಮಡಿಲಲ್ಲಿ ಪ್ರೀತಿಸುವ ಪಾಠ ಹೇಳಿಕೊಡುವೆಯಾ?
ನಾನೊಬ್ಬ ಕಳ್ಳಪ್ರೇಮಿ ಕಣೇ ಸಾಕಿ,
ನನ್ನ ಹೃದಯಕ್ಕೆ ಬಂದು ಸತ್ಯವ ನುಡಿಸುವೆಯಾ?
ನಾನೊಬ್ಬ ಮೂರ್ಖ ಪ್ರೇಮಿ ಕಣೇ ಸಾಕಿ,
ಕೈಯಿಡಿದು ಕರೆದೊಯ್ಯುವೆಯಾ?
ನಾನೊಬ್ಬ ಸೋತಹೃದಯದ ಪ್ರೇಮಿ ಕಣೇ ಸಾಕಿ,
ಪ್ರೀತಿಯ ದಡ ಸೇರಿಸುವೆಯಾ?

೨.
ಮಧು ಬಟ್ಟಲಲ್ಲಿ ಪ್ರೀತಿಯನ್ನು ಹಾಕಿಬಿಡು ಸಾಕಿ,
ಹಸಿದ ಪ್ರೇಮಿಗಳು ಕುಡಿಯಲಿ ಬೇಗ!
ಆಕಾಶದ ಚುಕ್ಕಿಗಳಿಗೆ ಹಗಲುಗಳನ್ನೆ ಕಳೆದುಬಿಡು ಸಾಕಿ,
ಸದಾ ನಮ್ಮಂತೆಯೇ ಹೊಳೆಯಲಿ ಆಗ!
ಬೆಟ್ಟಗಳಿಗೆ ಪ್ರೀತಿಸುವುದನ್ನು ಕಲಿಸಿಬಿಡು ಸಾಕಿ,
ಇನ್ನೂ ಚುಂಬನದ ಜೊಲ್ಲು ಹರಿಯಲಿ!
ಕೂಗುವ ಹಕ್ಕಿಗಳಿಗೆ ಮಾತು ಕಲಿಸು ಸಾಕಿ,
ಸತತ ನಮ್ಮಂತೆಯೇ ಮಾತನಾಡಲಿ ಈಗ!
ಈಜುವ ಮೀನುಗಳಿಗೆ ದಾರಿ ತೋರಿಸು ಸಾಕಿ,
ತಳದ ಬೇರುಗಳು ಸಡಿಲಗೊಂಡು ಸದಾರಿಯಾಗಲಿ!
ಹಂಸಗಳಿಗೆ ಹಡುಗುಗಳ ಕಳುಹಿಸು ಸಾಕಿ,
ಅವರ ಪ್ರೀತಿಯ ರಸಪ್ರೇಮಗಳ ಹೊತ್ತು ತರಲಿ!
ಬಸುರಿ ಕಪ್ಪೆಗಳಿಗೆ ಪ್ರೀತಿಯ ಮಳೆ ಕಳುಹಿಸು ಸಾಕಿ,
ಸರಾಗವಾಗಿ ಹೆರಿಗೆಯಾಗಲಿ!
ಕಚ್ಚುವ ಹಾವುಗಳಿಗೆ ಪ್ರೀತಿಯ ಕುಡಿಸು ಸಾಕಿ
ವಿಷ- ಪ್ರೇಮದ ಮಧುರ ರಾಗವಾಗಲಿ!
ಈ ತುಂಟ ದುಂಬಿಗೆ ಪ್ರೀತಿಯ
ನೂರು ದಾರಿಗಳನ್ನು ಕಲಿಸು ಸಾಕಿ,
ಹೋಗುವ ದಾರಿಗಳಲ್ಲಿ
ಕಲ್ಲು ಬಂಡೆಗಳು ನಗುತ ಸ್ವಾಗತ ಕೋರಲಿ.
೩.
ದೇವರು ಮೌನದಲ್ಲಿದ್ದಾನೆ ಸಾಕಿ,
ನೀನು ಅವನನ್ನು ಮಾತನಾಡಿಸಬೇಡ;
ಮನೆಯ ಹಿಂದೆ ಬಿಟ್ಟಿರುವ ತಾವರೆ ಹೂಗಳ
ಒಮ್ಮೆ ಮುದ್ದಿಸು ಬಿಡು ಸಾಕಿ
ದೇವರು ಮೌನದಲ್ಲಿದ್ದಾನೆ!
ನೀನು ಅವನನ್ನು ಏನೂ ಕೇಳಬೇಡ ಸಾಕಿ
ಪ್ರೀತಿಯ ಸಾಲ ತೀರಿಸುವುದು ಕಷ್ಟ;
ಸುಮ್ಮನೇ ಇದ್ದು ಬಿಡು ಸಾಕಿ,
ಕಡಲುಗಳ ಅಲೆ-ಅಲೆಗಳು ಬಂದು
ದಡಗಳ ಸೇರಲೇಬೇಕು!
ಈ ಕಡಲುಗಳ ಬಳಿ ಕುಳಿತು
ಜಲಚರಗಳ ನಿವೇದನೆಗಳ ಕೇಳೋಣವೇ ಸಾಕಿ,
ಮರಳು ಮುಚ್ಚಿದ ಪ್ರೀತಿ ನೆನಪುಗಳ
ಕೇಳಿಸಿಕೊಳ್ಳೋಣವೇ ಸಾಕಿ;
ಪ್ರೇಮಿಗಳ ಹೃದಯ ತಲ್ಲಣಗಳ?
ಈ ದೇವರಿಗೂ ಒಮ್ಮೆ ಪ್ರೀತಿಯನು
ಕುಡಿಸಬೇಕು ಸಾಕಿ,
ಅವನು ಕೂಡಾ ದ್ವೇಷಿಸಲು ಶುರು ಮಾಡಿದ್ದಾನೆ!
ಅವನನ್ನು ಮಾತನಾಡಿಸಬೇಡ ಸಾಕಿ;
ಪ್ರೀತಿಯ ಕೊಟ್ಟು ದ್ವೇಷವಿಟ್ಟು
ಪ್ರೇಮಿಗಳ ದೂರು ಮಾಡುವ ಪಾತಕ ಅವನು!
ಅವನನ್ನು ಮಾತನಾಡಿಸಬೇಡ ಸಾಕಿ;
ಪ್ರೀತಿಯಿರದ ದೇವರುಗಳನ್ನು,
ಪ್ರೀತಿಯಿರದ ಸಾಗರಗಳನ್ನು,
ಪ್ರೀತಿಸಲಾಗದ ಮನಸ್ಸುಗಳನ್ನು,
ಪ್ರೀತಿಸಲಾಗದ ಹೇಡಿಗಳನ್ನು
ನೀನು ಮಾತನಾಡಿಸಬೇಡ ಸಾಕಿ,
ಪ್ರೀತಿಸಿದ ದೇವರು ಮೌನದಲ್ಲಿದ್ದಾನೆ, ಸಾಕಿ!
೪.
ಸಾಕಿ! ಈ ಸಮುದ್ರವನ್ನು ಬೊಗಸೆಯಲ್ಲಿಡಿದು
ನಿನಗೆ ಒಪ್ಪಿಸುತ್ತೇನೆ!
ಈ ಆಕಾಶವ ಮಡಚಿ ನಿನಗೆ ತಲೆದಿಂಬಾಗಿಸುತ್ತೇನೆ,
ಭೂಮಿಯ ಅದುರುಗಳ
ಬಗೆದು ತರುವೆ ನೀನು ಪ್ರೀತಿಯ ಜೀವರಸ
ಸೋಂಕಿಸಿ ಪ್ರೀತಿಸುವಂತೆ ಮಾಡುವೆಯಾ?
ಇಲ್ಲಿ ಪ್ರೀತಿಗಿಂತ ದ್ವೇಷವೇ ಮೇಲಂತೆ?
ಒಮ್ಮೆಯಾದರೂ ಪ್ರೀತಿಸುವಂತೆ ಮಾಡುವೆಯಾ?
ಸಾಕಿ! ಈ ಜಗತ್ತು ತುಂಬಾ ವಿಶಾಲವಾಗಿರುವುದೇನೆ?
ಹೌದೇನೆ ಸಾಕಿ?
ನಿನ್ನ ಕಣ್ಣುಗಳನ್ನೆ ವಿಶಾಲ ಪ್ರಪಂಚವೆಂದುಕೊಂಡ
ನನಗೆ ಮತ್ಯಾವ ಪ್ರಪಂಚವೂ ಕೂಡಾ ಕಾಣುತ್ತಿಲ್ಲ!
ಸಾಕಿ! ನೀರೊಳಗಿನ ಪ್ರೀತಿ ಮೀನುಗಳ ಮರಿಮಕ್ಕಳು
ನಾವು, ಆಗಾಗ ಬಂದು ನೀರ ಮೇಲೆ
ಆಡುವ ಪ್ರೇಮಮೀನುಗಳು ನಾವು!
ಸಾಕಿ! ನನ್ನ ಪ್ರೇಮನಿವೇದನೆಯನ್ನು
ಸ್ವೀಕರಿಸುವೆಯಾ?
ಈ ಕಡಲಿನ ಬಳಿ ಕುಳಿತು ಎರಡು ದಡಗಳ ಪ್ರೇಮ
ಚುಂಬನಗಳ ನೋಡಲು ಬರೆವೆಯಾ?
ಹೇಳು ಸಾಕಿ! ಹಾರೋಣವೇ ಈ ಪ್ರೀತಿಯ ಸಮುದ್ರಕೆ?

೫.
ಸಾಕಿ ನಿನ್ನ ಮಧುಶಾಲೆಗೆ ಬರಬೇಕು ಕಣೇ,
ಅಲ್ಲಿ ನೀನು ಕೊಟ್ಟ ಮಧುವ ಕುಡಿದು
ಸಾಂಗತ್ಯದ ಹಾಡ ಹಾಡಬೇಕು!
ಅಲ್ಲಲ್ಲಿ ಬಿಟ್ಟಿರುವ ತಾವರೆ ಹೂಗಳಿಗೆ
ಮುತ್ತಿಟ್ಟು , ದಳಗಳಲ್ಲಿರುವ ಮಂಜಿನ ನೀರ
ಕುಡಿಯಬೇಕು!
ಸಾಕಿ! ನಿನ್ನ ಮಧುಶಾಲೆಗೆ ಬರುವಾಗ
ಎಲ್ಲವನ್ನು , ಎಲ್ಲರನ್ನೂ ಮರೆತು
ನಿನ್ನೊಂದಿಗೆ ಭಾಮಿನಿ ಷಟ್ಪದಿಯ ಕುಡಿದು
ರಾತ್ರಿಯ ಕರೆಯಬೇಕು!
ನಿನ್ನ ಕಣ್ಣುಗಳಲಿ ತುಂಬಿರುವ ಸರಳರಗಳೆಗಳ
ಹಿಡಿದು ಮಹಾಕಾವ್ಯಗಳ ಬರೆಯಬೇಕು!
ಸಾಕಿ! ನಿನ್ನ ಮಧುಶಾಲೆಗೆ ಬರುವಾಗ
ದ್ವೇಷದ ಕೊಂಬೆಗಳ ಮುರಿದು
ನಿನ್ನ ತುಟಿಗಳ ಚುಂಬನಗಳಿಗೆ ಛಳಿಯೆಬ್ಬಿಸಿ
ಓಡಿಸಬೇಕು!
ನಾನು, ನನ್ನದು,ನನ್ನಿಂದಲೇ ಎನ್ನುವ ಅಧಿಕಾರಿ
ಮಾತುಗಳು ನಿನ್ನ ಆಲಿಂಗನದ ಸಮಯದಿ
ಬಿಸುಟು ಬರಬೇಕು!
ಸಾಕಿ! ನಿನ್ನ ಮಧುಶಾಲೆಗೆ ಬರುವಾಗ
ಪ್ಲುತಗಳ ಹಿಡಿದು ಕೀರ್ತನೆಗಳ ಬರೆಯಬೇಕು!
ಆಗಾಗ ನಿನ್ನ ಗಲ್ಲಗಳ ಮೇಲೆ ಹುಟ್ಟುವ
ಕಂದಪದ್ಯಗಳ ನೋಡಿ ಚಂಪೂಕಾವ್ಯದಿ
ಪ್ರೇಮ ಸಾಂಗತ್ಯವ ಬರೆಯಬೇಕು!
ಸಾಕಿ! ನೀನು ನನ್ನ ಛಂದಸ್ಸು
ನಾನು ನಿನ್ನ ಛಂದಸ್ಸು
ಒರೆದಂತೆ ಬರೆದುಕೊಳ್ಳೋಣ!
ಬದುಕಿದಂತೆ ಬಾಳಿಕೊಳ್ಳೋಣ
ನೂಕಿದಂತೆ ಸ್ಪರ್ಶಿಸಿಬಿಡೋಣ
ಪ್ರೀತಿ ನಿವೇದನೆಯಲ್ಲಿ ಸಾವಿರ
ಕ್ಷಣಗಳನ್ನು ನಿರ್ಮಿಸೋಣ!
ಬರುವೆಯಾ ಸಾಕಿ? ಆ ದೂರದ ಊರಿಗೆ
ಹೋಗಿ ಬರೋಣ!
ಮಧು= ಆಧ್ಯಾತ್ಮ
ಸಾಕಿ = ಪ್ರೇಮವನ್ನು ಹೇಳಿ ಕೊಡುವ ಗುರು.






ಸಾಕಿಯನ್ನು ಧ್ಯಾನಿಸಿ ಪ್ರೀತಿಯನ್ನು ನಿವೇದಿಸಿಕೊಂಡ ನಿಮ್ಮ ಕವಿತೆಗಳು ತುಂಬಾ ಚೆನ್ನಾಗಿ ಸಾಲುಗಟ್ಟಿವೆ.
ಅಲ್ಲಲ್ಲಿ ಲಯವು ಬಿಟ್ಟುಹೋಗಿದೆ ಎನಿಸಿತು
ಸಾಕಿಯನ್ನು ನೆನೆಯುವುದು ಬರಿ ಪ್ರೀತಿಗಾಗಿ ಅಲ್ಲ
ಪ್ರೀತಿ ಪ್ರೇಮಗಳಾಚೆ ಬದುಕನ್ನು ವಿಸ್ತಾರಗೊಳಿಸಿ ಜೀವಯಾನದಲ್ಲಿ ನೆಲೆಯಾಗುವುದಕ್ಕೆ …
I share the same opinion as of Mr. Shivasankar.- Vijayasheela