– ಸುರೇಶ್ ಎಲ್ ರಾಜಮಾನೆ
ರನ್ನಬೆಳಗಲಿ

ಹಗಲು ಬಾವಲಿಗಳು
ಬೇವಿನ ಮರದಲ್ಲಿ
ಸಿಹಿಯನ್ನು ಕಂಡೆನು ಕೆಲವು
ದಿನಗಳ ಹಿಂದೆ
ಎತ್ತರದಲ್ಲಿದ್ದ ಆ ಮರದಲ್ಲಿ
ಮತ್ತಾವುದೋ ಒಂದು
ಲೋಕವನ್ನು ಕಂಡಂತಾಯಿತು.
ಹೊಳೆವ ನಕ್ಷತ್ರಗಳೆರಡು
ಬಳಕೆಯ ಜೊತೆಗೆ
ಬೆಳಕನ್ನು ಹಂಚಿದವು
ಉಳಿಸಿದವು, ಬೆಳೆಸಿದವು
ಮಾತೆಯ ಮರವನ್ನು
ಶಕ್ತಿಯುತವಾಗಿ
ಮುಕ್ತಿ ದೊರಕಿತ್ತು ಅಂದು
ಆ ಮರದ ನೆರಳಿಗೆ ಎರಗಿದಾಗ…
ಮರುದಿನದ ಬೆಳಕು
ಭಯವನ್ನು ಬಾಯಿಗಿಟ್ಟಿತು
ನುಂಗಲಾಗದಂತೆ
ಆ ಬೇವಿನ ಮರದಿ
ಜೋತು ಬಿದ್ದಿವೆ ತೂತು ತುಂಬಿಕೊಳ್ಳಲು
ಹಗಲು ಬಾವಲಿಗಳು
ಬೇತಾಳನ ಬೆಳಕಲ್ಲಿ
ಕತ್ತಲಲ್ಲಷ್ಟೇ ಅಲ್ಲ ಹಿತ್ತಲಲ್ಲೂ ಕಳ್ಳತನದ ಮಾತು
ಬಿತ್ತಿದೆದೆಗೆ ಬರಿ ಇಟ್ಟು
ಕಾಲ-ನೆತ್ತಿ
ಕುಳಿತು ಮೊಳಕೆಯೊಡೆಯುತಿವೆ
ಮರದಲ್ಲಿಯೇ
ಹಕ್ಕಿಗಳಿಟ್ಟ ಹಿಕ್ಕಿಕಾಳಿನಿಂದ
ಭಕಾಸುರನ ಬೀಜಗಳು
ನಭವು ಸುಮ್ಮನಿದೆ ಲೋಭವು ಸವಿಯುತಿದೆ
ಜಗವು ಮಲಗಿದೆ
ನೆರಳಲ್ಲಿ ಹೊಟ್ಟೆಗಿದ್ದಂತೆ ಒಬ್ಬಟ್ಟು.
ಮತ್ತೆ ಕಹಿಕಾರುತಿದೆ
ಆ ಮರವು
ಮತ್ತದೇ ಮಾತು ಉಲಿವ ನಾಲಿಗೆಯ ಮೇಲೆ
ಬೇವು ಕಹಿ ಕಹಿ .. ಕಹಿ ಅಷ್ಟೆ
ಸಹಿ ಹಾಕಿ ಒಪ್ಪಿಕೋ…
ಇದು ಅಪ್ಪ ಹಾಕಿದ ಆಲದ ಮರ…!!






nice
thanq
Nice
Very nice lines sir