ಆರ್. ವಿ. ಭಂಡಾರಿಯವರು ನಮ್ಮನ್ನಗಲಿ 3 ವರುಷ.
—
(ಡಾ. ಆರ್.ವಿ.ಭಂಡಾರಿ ಒಡನಾಟದ ಮೆಲುಕು)
1
ನಿನ್ನ `ಸಹಯಾನಕ್ಕೆ’ ಸಹಿಮಾಡಿದ ಖುಷಿಯಲ್ಲಿ
ಬಂದಿರಲಿಲ್ಲ ನಿದ್ದೆ, ಕಾರಣ ಗೊತ್ತು ನಿನಗೇ! ಬಾಗಿಲು
ತೆರೆದಿತ್ತು!…
ಒಣ ಜಬ್ಬು ಪಳದಿ ಹರಡಿದ `ಘಮ ಘಮ’ದ ಮಧ್ಯೆ
ನಿಲ್ಲಿಸಿ ಧರೆದೊರೆಗಳ, ಅಂಗುಲಂಗುಲ ಅಳೆವ
ಮಾತಿನೂಟಕೆ, ಗೊತ್ತೇ ಇರಲಿಲ್ಲ ಕಳೆದ ಹೊತ್ತು!
ಹಿಂಡುಹಿಂಡಾಗಿ ಜಿಗಿವ ಜಿಂಕೆಗಳ ಜಗ್ಗಿ ಕಿವಿ
ಹಿಂಡುವಾಗಲೂ ಮರೆಯದ ಮುಗುಳ್ನಗೆ ಬಗೆ
ಗೆ ಹುಡುಕುತ್ತಿದ್ದೇನೆ ಮಾದರಿ, ಸಿಗಲಿಲ್ಲ ನನಗೆ!
ಉಂಬಾಗ ತಾಟಿಗೆತಾಟು ತಾಗಿಸಿ ಬಳಿಕರೆದು `ಚಿಟ್ಟಿ’
ಅರುಳುತ್ತಿದ್ದ ಎದೆಬಾಗಿಲ ನಗೆನಂಟಿನ ನಡುವೆ
ಕೆಂಪಾಗುವ ಕಣ್ಣು ನಿನ್ನ, ನೆತ್ತಿಗೇರುತ್ತಿದ್ದ
ಅಮಲು – ಆಕ್ರೋಶ ! ಚಕ್ಕನೆ ಮಾತಿನ ಮಧ್ಯೆ
ಹೊಳೆವ ಮಿಂಚು! ಮತ್ತದೇ ಒಳದನಿಯ ಅಳು!
ಅಲ್ಲ ಹೆದರಿ, ಕಳಕೊಂಡವರ ಕತೆಯ ಕರುಳ ಕಂಬನಿ!
2
ಎಷ್ಟು ವರ್ಷಗಳಾಗಿರಬಹುದಣ್ಣ ಒಡನಾಡಿದ
ದಾರಿ ಸುಖ – ದುಃಖ? ನೆನಪಿದೆಯೇ ನಿನಗೆ?
ಆಯಿತಿಂದಿಗೆ ಸರಿ ಅರ್ಧಶತಮಾನ! ಕೋಡಿಬಾಗ
ದಿಂದ ಕೆರೆಕೋಣದವರೆಗೂ ಅಂಗಂಗಿ ಹಿಡಕೊಂಡು
ನಡೆದು ಬಂದುದ ನೆನೆಯೆ, ಗಮ್ಮೆನ್ನುವುದು ಮೊದಲು
`ಮೀನಪಳದಿ’ಯ ಬೆನ್ನತ್ತಿ ಸವೆಸಿದ `ಕೃಷ್ಣ ಭವನ’ದ ದಾರಿ!
ತಿನ್ನುವಾಗಲೂ ಬಂಗಡೆ ತೋರಿ ಕಾಣುತ್ತಿದ್ದೆ ನೀನು
ಮುಳ್ಳಿನಲ್ಲೇ ವರ್ಣ ಮತ್ತು ವರ್ಗ ಸಂಘರ್ಷದ ದಾರಿ
ಎಂಥ ರುಚಿಯಿತ್ತಣ್ಣ ಪಳದಿಗೆ ಆ ದಿನ ! ನೀನು
ಬೇಕೆಂದೆ ಮತ್ತೂ, ಸಾಕೆಂದೆ ನಾನು ; ಹಾಗೇ ತಾನೆ
ಅಲ್ಲಿಂದ ಇಲ್ಲಿತನ ಭಾವಗರ್ಭದ ಅದ್ವೈತ ಭ್ರೂಣ ?…
3
ನನ್ನ ಬಾಲ್ಯ ಹೆಕ್ಕುವಾಗೆಲ್ಲ ಆರ್ವಿ, ನೆನಪಾಗುತ್ತೀಯೆ
ನೀನು, ಹೆಗಲ ಬಾರುಕೋಲು! ಎತ್ತಿನಗಾಡಿ! ಹಸಿದ ತಟ್ಟೆ!
ಹರಕುಬಟ್ಟೆ !
ಕೆಚ್ಚಿತ್ತು ಅಲ್ಲಿ, ಮಾಸ್ತರನಾದೆ, `ಮಕ್ಕಳ ಮನೆ’ ಕಟ್ಟಿ ಹಾಡಿದೆ
ಕವಿತೆ, ಕೊಲೆಗಾರನ ಪತ್ತೆಯಾಗದಿರಲು ಹೊರಳಿ
ಕೊಂಡೆ, ನಿಂತೆ ಬೆಂಕಿನ ಮಧ್ಯೆ, ಮಾತು ಮಾತು ಮಾತು!
ಕತೆ-ಕಾದಂಬರಿ ನಾಟಕಗಳೇನೇ ಇರಲಿ, ಬೆಳಕು ತೂರಿದ್ದು
ಕಂದಮ್ಮಗಳ ಕಾವಳದ ಎದೆಗಳಲಿ! ನೀ ಹುಟ್ಟಿದ್ದೂ ಮತ್ತೆ
ಅಲ್ಲೇ ಅಲ್ಲೇ !
ಮಾತು ಮೀರಿ ಮೂಡಿದ ಹೆಜ್ಜೆಗಳಣ್ಣ, ದೊಡ್ಡವರ
ದರಕಾರು ಬಿಟ್ಟು, ಬಿಟ್ಟವನು ಬಾಣ, ತರ್ಕದ ತರಕು
ಗಳ ಸುಟ್ಟು ಚಳಿಕಾಯಿಸಿ ಪಟ್ಟವನು
ಖುಷಿ, `ನಿಜದನಿ’ ಕೊನೆಗೂ ನಿನ್ನದೇ ಒಳದನಿ !
4
ಮರೆಯಲಾರೆ ನಿನ್ನ – ಗನರ್ಾಲು ತುಂಬಿಕೊಂಡ
ಹೆಗಲಚೀಲ, ಚಡಪಡಿಕೆಗಳಿದ್ದವು ನಿನ್ನ ಗೌಜಿಗೆ!
ಮುಂದೆ ಪತ್ರಿಕೆ ತುಂಬ `ಪರ-ವಿರೋಧ’ ಯುದ್ಧ !
ಸಿಕ್ಕಾಗ ಎದುರಾಳಿ ಕತ್ತಿ ಬದಿಗಿಟ್ಟು ಮುತ್ತು
ಕೊಟ್ಟವನು – ಚಾಕಲೇಟುಬಾಯಿಗಿಟ್ಟು!
ಹೀಗೆ ಹೀಗೇ, ಅಲ್ಲಿ ಇಲ್ಲಿ ಆಗೆಲ್ಲ ನೀನೇ,
ಬೆಳಕು ಹಂಚಿದ ಬಾಲಕ, ಬಾರುಕೋಲಿನ ಚಾಲಕ
ಊರೋಟ್ಟಿನ ಸೇವಕ.
5
ಬೆಂಕಿ ಹಿಮವಾದ ನೆನಪುಗಳೂ ಇವೆ ನನ್ನಲ್ಲಿ:
ಬಂದೊಂದು ದಿನ, ಅಂದೆ – ಕೊಟ್ಟು ಕೈಗೊಂದು ಕವಿತೆ,
`ಇದು ನನಗೇ ಬಿಟ್ಟ ಬಾಣ, ಏನು ಮಾಡೋಣ!’ ಅನು
ವಾಗ – ಇತ್ತು ಕಣ್ಣಂಚಿನಲ್ಲೊಂದು ಕರುಳಹನಿ!
6
ಬರುತ್ತಿದ್ದಿ ಆಗಾಗ ಗೌಜು ಗದ್ದಲವಿಲ್ಲದ ದಿನ
ಹೆಕ್ಕಿ, ಹೇಲಿಸಲಿಕ್ಕೆ ಬುದ್ಧಿ: ಆಗಿತ್ತದು ನಿನ್ನ
ಮುಗ್ಧಯತ್ನ, ಇರಲಿಲ್ಲ ಅಂಥ ಯಾವ ಕಾರಣ,
ಆದರೂ ಯಾಕೆ ಕಾಡಿತ್ತು ನಿನಗೆ ಆ ಅಂಥ ಆಭದ್ರ
ಸ್ವಪ್ನ?…
ಮರು `ಮಾತು’ಕೊಟ್ಟೆನಲ್ಲವೇ ನಿನಗೆ?…ನಗು
ವಿತ್ತೊ ತುಟಿಯೊಳಗೆ, ನೋವಿತ್ತೊ ಅದ ಕೇಳಿ!
ಎದ್ದು ಹೋದೆ ನೀನು `ಅಮ್ಮಿ’ಯ ಗಲ್ಲ ಮುಟ್ಟಿ
ಬರಲಿಲ್ಲ ಮುಂದೆ, – ಸಿಗಲಿಲ್ಲ ಮನೆಮಕ್ಕಳಿಗೆ
ಕರುಳ ಮಾತು!…
—————–
ಚಿಟ್ಟಿ- ನನ್ನ ಮನೆಯಲ್ಲಿ – ನನ್ನ ಆಶ್ರಯದಲ್ಲೇ ಬೆಳೆದ ತಮ್ಮನ (ಅನಂತ) ಮಗಳು, ಕ್ಷಮಾ
ಅಮ್ಮಿ- ನನ್ನ ಎರಡನೆಯ ಮಗಳು, ಅಮಿತಾ
ಸಹಯಾನ- ಇದು ಆರ್. ವಿ. ಭಂಡಾರಿಯವರ ಹೆಸರಿನಲ್ಲಿ ರಚನೆಗೊಂಡ ಅಧ್ಯಯನ ಕೇಂದ್ರ







masta ide kavite sir