ಸವಿತಾ ನಾಗಭೂಷಣ
**
ನಾನವರ ಕಾಣಲು ಹೋದಾಗ
ಜೋಡು ಹೊಲೆಯುತ್ತಿದ್ದರು…
ನಾನವರ ಕಾಣಲು ಹೋದಾಗ
ಅರಳೆಯಿಂದ ನೂಲು ತೆಗೆಯುತ್ತಿದ್ದರು….
ನಾನವರ ಕಾಣಲು ಹೋದಾಗ
ಪಾಯಖಾನೆ ಗುಡಿಸುತ್ತಿದ್ದರು…
ನಾನವರ ಕಾಣಲು ಹೋದಾಗ
ಕುಷ್ಟ ರೋಗಿಯ ಗಾಯ ತೊಳೆಯುತ್ತಿದ್ದರು….

ನಾನವರ ಕಾಣಲು ಹೋದಾಗ
ಹಸುವಿಗೆ ಮೇವು ತಿನ್ನಿಸುತ್ತಾ ಇದ್ದರು….
ಆರನೆಯ ಬಾರಿ ಕಾಣಲು ಹೋದಾಗ
ಮಕ್ಕಳ ಜತೆ ಆಡುತ್ತಾ ಇದ್ದರು….
ಮತ್ತೊಂದು ಬಾರಿ…
ಅದವರ ಪ್ರಾಥನೆಯ ಸಮಯ…
ಮಾತಿಗೆ ಸಿಗದವರ ಕಾಣುವುದೆಂತು? ಆಸೆ ಪೂರೈಸಲಿಲ್ಲ
ನಾನು ಪತ್ರ ಬರೆದೆ….
ಎರಡೇ ದಿನಗಳಲ್ಲಿ ಉತ್ತರವೂ ಬಂದಿತು!
ಆ ಕಾಲದ ಮಿಕ್ಕ ದೊಡ್ಡ ದೊಡ್ಡ
ಮನುಷ್ಯರೇನು ಮಾಡುತ್ತಿದ್ದರೋ
ನನಗೆ ಮಾಹಿತಿ ಇಲ್ಲ!
ಸಣ್ಣ ಪುಟ್ಟ ಕೆಲಸ ಮಾಡುವ ಈತ
ನನಗೆ ಇಷ್ಟವಾದ , ಸರಳಜೀವಿ
ಗುಂಡಿಗೆ ಬಲಿಯಾದ
ಕಾಪಿಟ್ಟಿರುವೆ ಕಾಗದ ಕಾಣುವೆನಲ್ಲಿ!






ಸವಿತಾ ನಾಗಭೂಷಣ ಅವರ ‘ಕಾಪಿಟ್ಟಿರುವೆ ಕಾಗದ’ ಬಹಳ ಚಂದದ ಕವಿತೆ. ಇಷ್ಟವಾಯಿತು.