ಸರ್ವಾಧಿಕಾರದ ದೌರ್ಜ್ಯನಕ್ಕೆ ಪತ್ರಕರ್ತರೇ ಮದ್ದು!

ಮೂಲ: ಡಿಮಿಟ್ರಿ ಮುರಟೋವ್
ಕನ್ನಡಕ್ಕೆ: ಡಾ. ಸತ್ಯಪ್ರಕಾಶ್ ಎಂ ಆರ್

ಕೃಪೆ: ನೊಬೆಲ್ ಪ್ರತಿಷ್ಠಾನ

ಜಗತ್ತು ಇಂದು  ಪ್ರಜಾತಂತ್ರ ವ್ಯವಸ್ಥೆಯ ಮೇಲಿನ ಪ್ರೀತಿ ಕಳೆದುಕೊಂಡಿದೆ. ಎಲೀಟ್‌ಗಳ ಅಧಿಕಾರದಿಂದ ರೋಸಿ ಹೋಗಿದೆ. ಸರ್ವಾಧಿಕಾರದತ್ತ ಮುಖ ಮಾಡುತ್ತಲಿದೆ. ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಬದಿಗಿರಿಸಿ ತಂತ್ರಜ್ಞಾನ ಮತ್ತು ಹಿಂಸೆಯ ಮೂಲಕ ಅಭಿವೃದ್ಧಿಯನ್ನು ಸಾಧಿಸಬಲ್ಲೆವೆಂಬ ಭ್ರಮಾಲೋಕದಲ್ಲಿದೆ. ಸ್ವಾತಂತ್ರ್ಯವಿಲ್ಲದ ಪ್ರಗತಿ ಸಾಧ್ಯವೇ?

ಸರ್ವಾಧಿಕಾರಿಗಳು ಇಂದು ಹಿಂಸೆಯ ಮಾರ್ಗ ಹಿಡಿದಿದ್ದಾರೆ. ನಮ್ಮ ದೇಶದಲ್ಲಿ (ರಷ್ಯಾ) ಹಿಂಸಾಚಾರದಲ್ಲಿ ತೊಡಗದ ರಾಜಕಾರಣಿಗಳು ಬಲಹೀನರೆನಿಸಿಕೊಂಡರೆ, ಜಗತ್ತಿನ ಮೇಲೆ ಯುದ್ಧಕ್ಕೆ ಹಪಹಪಿಸುವವರು ನಿಜವಾದ ದೇಶಭಕ್ತರೆಂದು ಕರೆಸಿಕೊಳ್ಳುತ್ತಾರೆ. ಶಕ್ತಿಯುತ ಅಧಿಕಾರಸ್ಥರು ಯುದ್ಧವನ್ನು ಅನಿವಾರ್ಯವೆಂಬಂತೆ ಬಿಂಬಿಸುತ್ತಾರೆ. ಆಕ್ರಮಣಕಾರಿ ಮಾರ್ಕೆಟಿಂಗ್‌ನಿಂದಾಗಿ ಸಾಮಾನ್ಯ ನಾಗರಿಕರು ಯುದ್ಧವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾರೆ. ಸರ್ಕಾರಿ ಕೃಪಾಪೋಷಿತ ಟಿವಿ ವಾಹಿನಿಗಳಲ್ಲಿ ಬಿತ್ತರವಾಗುವ ಮಿಲಿಟರಿ ರೆಟಾರಿಕ್‌ನ ಹಿಂದೆ ಸರ್ಕಾರ ಮತ್ತು ಸರ್ಕಾರದ ಬೆಂಬಲಿಗರ ಯೋಜಿತ ಪ್ರಚಾರ ಕೆಲಸ ಮಾಡುತ್ತಿರುವುದು ಸ್ಪಷ್ಟ. ಆದರೆ ಹಿಂಸೆಯ ಭೀಕರ ದೃಶ್ಯಗಳನ್ನು ಮುಕ್ತವಾಗಿ, ವಸ್ತುನಿಷ್ಠವಾಗಿ ಬಿತ್ತರಿಸುವ ಟಿವಿ ವಾಹಿನಿಗಳನ್ನು ಕೂಡ ನಾನು ನೋಡಿದ್ದೇನೆ.

ಚೆಚೆನ್ಯಾದ ಯುದ್ಧದ ಸಂದರ್ಭದಲ್ಲಿ ರೈಲ್ವೆ ನಿಲ್ದಾಣವೊಂದರ ಟ್ರ್ಯಾಕ್‌ನ ಮೇಲೆ ಬಿಳಿಯ ಬಣ್ಣದ ಐದು ಶಿಥಿಲೀಕರಣದ ರೈಲ್ವೆ ಬೋಗಿಗಳನ್ನು ನಿಲ್ಲಿಸಲಾಗಿತ್ತು. ಈ ಬೋಗಿಗಳಿಗೆ ೨೪ ಗಂಟೆಗಳ ಕಾಲ ಸುರಕ್ಷತೆ ಒದಗಿಸಲಾಗಿತ್ತು. ಅವು ಬರಿಯ ಬೋಗಿಗಳಾಗಿರಲಿಲ್ಲ. ರಕ್ಷಣಾ ಸಚಿವಾಲಯದ ಲ್ಯಾಬ್ ನಂಬರ್ ೧೨೪ನ ಶವಪೆಟ್ಟಿಗೆಗಳಾಗಿದ್ದವು. ಈ ಶೀತಲ ಪೆಟ್ಟಿಗೆಗಳಲ್ಲಿ ಚಿತ್ರಹಿಂಸೆಗೆ ಒಳಗಾಗಿ ಸಾವನ್ನಪ್ಪಿದ್ದ ರುಂಡಗಳೇ ಇಲ್ಲದ ದೇಹಗಳಿದ್ದವು. ಲ್ಯಾಬ್‌ನ ಮುಖ್ಯಸ್ಥ ಕಮಾಂಡರ್ ಶೆರ್ಬಕೋವ್, ತನ್ನ ಸೈನಿಕರು ಅಪರಿಚಿತರಾಗಿ, ಅನಾಮಧೇಯರಾಗಿ ಮಣ್ಣಲ್ಲಿ ಮಣ್ಣಾಗದಂತೆ ನೋಡಿಕೊಳ್ಳಲು ಸರ್ವಪ್ರಯತ್ನವನ್ನು ಮಾಡುತ್ತಲಿದ್ದ. ರೈಲ್ವೆ ಟ್ರ್ಯಾಕ್ ಪಕ್ಕದ ಪುಟ್ಟ ಕೊಠಡಿಯೊಂದರಲ್ಲಿ ಟಿವಿ ಪರದೆಯೊಂದನ್ನು ಇರಿಸಲಾಗಿತ್ತು.

ನಾಪತ್ತೆಯಾದ ಯೋಧರ ತಂದೆ ತಾಯಂದಿರು ಆ ನಿರೀಕ್ಷಣಾ ಕೊಠಡಿಯಲ್ಲಿ ಟಿವಿ ಪರದೆಯ ಮೇಲೆ ಒಂದಾದರೊಂದರ ನಂತರ ಬರುವ ಸತ್ತ ಸೈನಿಕರ ಚಿತ್ರಗಳನ್ನು ಜೀವ ಕೈಯಲ್ಲಿ ಹಿಡಿದುಕೊಂಡು ಎವೆಯಿಕ್ಕದೆ ನೋಡುತ್ತಾ ಕುಳಿತಿದ್ದರು. -೧೫ ಡಿಗ್ರಿಯ ಶೈತ್ಯಾಗಾರದಲ್ಲಿ ಮಲಗಿರುವ ೪೫೮ ದೇಹಗಳು, ಯುದ್ಧಭೂಮಿಯಿಂದ ಸಾವಿನ ಮನೆಗೆ ಹಳಿಯ ಮೇಲೆ ಹೊರಟ ೪೫೮ ಯುವಕರನ್ನು ಹೊತ್ತ ರೈಲು. ಚೆಚೆನ್ಯಾದ ಗುಡ್ಡಗಳಲ್ಲಿ, ಕಣಿವೆಗಳಲ್ಲಿ ಬೆಳೆದು ನಿಂತ ಮಕ್ಕಳಿಗಾಗಿ ಹುಡುಕಾಡಿ ರೋಸಿಹೋಗಿದ್ದ ತಾಯಂದಿರು ಕಿರುತೆರೆಯ ಮೇಲೆ ಸರತಿ ಸಾಲಿನಲ್ಲಿ ಬರುತ್ತಲಿದ್ದ ಚಿತ್ರಗಳನ್ನು ನೋಡಿ, ಇಲ್ಲ! ಅವನಲ್ಲ! ಇವ ನನ್ನ ಮಗನಲ್ಲ! ಎಂದು ಉದ್ಘರಿಸುತ್ತಿದ್ದುದು ಮನಕಲಕುತ್ತಿತ್ತು. ಕಿರುತೆರೆಯ ಮೇಲೆ ಬರುತ್ತಿದ್ದ ಚಿತ್ರಗಳೆಲ್ಲವೂ ಯುದ್ಧದಲ್ಲಿ ಮಡಿದ ಯೋಧರ ಚಿತ್ರಗಳಷ್ಟೇ ಆಗಿರಲಿಲ್ಲ. ಅವರೆಲ್ಲರೂ ಅಸಹಾಯಕ ತಾಯಂದಿರ ಮಕ್ಕಳಾಗಿದ್ದರು!

ಇಂದು ಜಾಗತಿಕ ನಾಯಕರು ದೇಶಕ್ಕಾಗಿ ಬದುಕಲು ಯುವಕರಿಗೆ ಪ್ರೇರಣೆ ನೀಡುವುದಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಪ್ರಚೋದಿಸುತ್ತಾರೆ. ಕನಿಷ್ಠ ಈ ಟಿವಿ ಪರದೆಗಳಾದರೂ ನಮ್ಮನ್ನು ಮುಠ್ಠಾಳರನ್ನಾಗಿಸದಿರಲಿ. ರೈಲ್ವೆ ಹಳಿಯ ಪಕ್ಕದ ನಿರೀಕ್ಷಣಾ ಕೊಠಡಿಯ ಟಿವಿ ಪರದೆಯ ಮೇಲೆ ಕಂಡ ಯುವ ಸೈನಿಕರ ಚಹರೆಗಳು ನಮ್ಮನ್ನು ಜಾಗೃತ ಸ್ಥಿತಿಯಲ್ಲಿಡಲಿ.

ಹೈಬ್ರಿಡ್ ಯುದ್ಧೋನ್ಮಾದ, ಬೋಯಿಂಗ್ ಎಂಎಚ್೧೭ನ ಅನಾಹುತಕಾರಿ ಕಥೆ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಬಂಧವನ್ನು ಶಾಶ್ವತವಾಗಿ ಸರ್ವನಾಶಗೊಳಿಸಿದೆ. ಮುಂಬರುವ ಪೀಳಿಗೆಗೆ ಇದನ್ನು ಸರಿಪಡಿಸಲು ಸಾಧ್ಯವಾಗುವುದೇ ಅನುಮಾನ! ಕೆಲ ಯುದ್ಧಪಿಪಾಸು ಜಾಗತಿಕ ನಾಯಕರ ಪ್ರಕಾರ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಈಗ ಅನಿವಾರ್ಯ. ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರನ್ನು ಗುರುತಿಸುವುದು ಮತ್ತು ಸೆರೆಯಾಳುಗಳನ್ನು ವಿನಿಮಯ ಮಾಡಿಕೊಳ್ಳುವುದರ ಮೂಲಕವಷ್ಟೇ ಎಲ್ಲ ಯುದ್ಧಗಳು ಕೊನೆಗೊಳ್ಳುತ್ತದೆಯೆಂದು ನನಗೆ ತಿಳಿದಿದೆ. ಚೆಚೆನ್ಯಾ ಯುದ್ಧದ ಬಳಿಕ ರಷ್ಯಾದ ವೀಕ್ಷಕ ಮೇಜರ್ ಇಸ್‌ಮಾಜ್ಲೋವ್ ಸುಮಾರು ೧೭೪ ಮಂದಿ ಸೆರೆಯಾಳುಗಳನ್ನು ಬಿಡುಗಡೆಗೊಳಿಸಿದ್ದರು.

ಪತ್ರಕರ್ತರ ಹೊಣೆಗಾರಿಕೆ
ಸತ್ಯ ಮತ್ತು ಕಾಲ್ಪನಿಕ ಕಥೆಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವುದು ಪತ್ರಕರ್ತರ ಸ್ಪಷ್ಟವಾದ ಗುರಿ. ಬೃಹತ್ ದತ್ತಾಂಶ ಮತ್ತು ಡೆಟಾಬೇಸ್‌ನೊಂದಿಗೆ ಕಾರ್ಯನಿರ್ವಹಿಸುವ ಚಾಕಚಕ್ಯತೆ ನಮ್ಮ ಹೊಸ ತಲೆಮಾರಿನ ಪತ್ರಕರ್ತರಿಗಿದೆ. ಈ ಹೊಸ ತನಿಖಾ ಮಾರ್ಗವನ್ನು ಬಳಸಿ ನಿರಾಶ್ರಿತರನ್ನು ಯಾವ ವಿಮಾನಗಳು ಸಂಘರ್ಷದ ಪ್ರದೇಶಗಳಿಗೆ ಕರೆದುತರುತ್ತಿದೆಯೆಂದು ಪತ್ತೆಹಚ್ಚಿದ್ದೇವೆ. ಅಂಕಿ ಅಂಶಗಳು ತಂತಾನೆ ಮಾತಾಡುತ್ತವೆ. ಮಧ್ಯಪೂರ್ವ ಪ್ರಾಚ್ಯದಿಂದ ಮಿನ್ಸ್ಕ್ ಪ್ರಾಂತ್ಯಕ್ಕೆ ಹೊರಡುವ ಬೆಲಾರಸ್ ದೇಶದ ವಿಮಾನಗಳ ಸಂಖ್ಯೆ ಈ ಚಳಿಗಾಲದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿವೆ. ೨೦೨೦ರ ಆಗಸ್ಟ್ ತಿಂಗಳಿಂದ ನವೆಂಬರ್‌ವರೆಗೆ ಕೇವಲ ಆರು ವಿಮಾನಗಳು ಹಾರಾಟ ನಡೆಸಿದ್ದರೆ, ೨೦೨೧ರ ಅದೇ ಅವಧಿಯಲ್ಲಿ ವಿಮಾನಯಾನಗಳ ಸಂಖ್ಯೆ ೨೭ಕ್ಕೆ ಏರಿಕೆಯಾಗಿದೆ. ಬೆಲಾರಸ್‌ನ ಏರ್‌ಲೈನ್ ಕಂಪನಿ ಗಡಿ ದಾಟುವ ಕೆಲಸಕ್ಕಾಗಿ ಈ ವರ್ಷ ಸುಮಾರು ೪೫೦೦ ಮಂದಿಯನ್ನು ನಿಯೋಜಿಸಿದರೆ, ಕಳೆದ ವರ್ಷ ಈ ಸಂಖ್ಯೆ ೬೦೦ರಷ್ಟಿತ್ತು. ಇರಾಕ್ ಏರ್‌ಲೈನ್ ವಿಮಾನಗಳಿಂದ ಬಂದಿಳಿದ ನಿರಾಶ್ರಿತರ ಸಂಖ್ಯೆ ಕೂಡ ೬೦೦೦ದಷ್ಟಿತ್ತು.

ಶಸ್ತ್ರಾಸ್ತ್ರ ಪ್ರಚೋದಿತ ಸಂಘರ್ಷಗಳು ಹುಟ್ಟಿಕೊಳ್ಳುವುದೇ ಹೀಗೆ. ಸಂಘರ್ಷಗಳ ಪೂರ್ವಾಪರಗಳನ್ನು ನಾವು ಪತ್ರಕರ್ತರು ಬಹಿರಂಗಪಡಿಸಿದ್ದೇವೆ. ನಮ್ಮ ಕೆಲಸ ಮುಗಿದಿದೆ. ಪರಿಹಾರ ರಾಜಕಾರಣಿಗಳ ಕೈಯಲ್ಲಿದೆ.

ಈ ಪ್ರಶಸ್ತಿ ಜಗತ್ತಿನ ಎಲ್ಲಾ ತನಿಖಾ ಪತ್ರಕರ್ತರಿಗೆ ಸಲ್ಲುತ್ತದೆ. ನನ್ನ ಸಹುದ್ಯೋಗಿ ಮಿತ್ರರು ಲಕ್ಷಾಂತರ ಕೋಟಿ ರೂಬೆಲ್‌ಗಳ ಅವ್ಯವಹಾರಗಳನ್ನು ಬಯಲಿಗಿಳೆದು ಖಜಾನೆಗೆ ಹಿಂದಿರುಗುವಂತೆ ಮಾಡಿದ್ದಾರೆ. ವಿದೇಶಿ ಬ್ಯಾಂಕುಗಳಲ್ಲಿರುವ ಬೇನಾಮಿ ಖಾತೆಗಳನ್ನು ಬೆಳಕಿಗೆ ತಂದಿದ್ದಾರೆ. ಸೈಬೀರಿಯಾದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಅರಣ್ಯ ನಾಶವನ್ನು ನಿಲ್ಲಿಸಿದ್ದಾರೆ. ಆದರೆ ಇಂದು ರಷ್ಯಾದ ಪತ್ರಿಕೋದ್ಯಮ ಅಂಧಕಾರದಲ್ಲಿದೆ. ಇತ್ತೀಚೆಗೆ ರಷ್ಯಾದಲ್ಲಿ ನೂರಕ್ಕೂ ಹೆಚ್ಚು ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳನ್ನು ’ವಿದೇಶಿ ಏಜೆಂಟರು’ಗಳೆಂದು ಬ್ರ್ಯಾಂಡ್ ಮಾಡಲಾಗಿದೆ. ಬಹಳಷ್ಟು ಮಂದಿ ನನ್ನ ಸಹುದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಕೆಲವರು ದೇಶ ಬಿಟ್ಟು ಹೋಗಿದ್ದಾರೆ. ಕೆಲವು ಮಂದಿ ಎಷ್ಟೋ ತಿಂಗಳುಗಳಿಂದ ಸಾಧಾರಣ ಜೀವನ ನಡೆಸಲು ಕೂಡ ಆಗದೆ ಅಜ್ಞಾತರಾಗಿದ್ದಾರೆ. ಬಹುಶಃ ಇವರೆಲ್ಲರೂ ಶಾಶ್ವತವಾಗಿ ಭೂಗತರಾಗಿಯೇ ಇರಬೇಕೇನೋ.. ರಷ್ಯಾದ ಇತಿಹಾಸದಲ್ಲಿ ಈ ರೀತಿ ನಡೆದಿರುವುದು ಇದು ಮೊದಲೇನಲ್ಲ.

ರಷ್ಯನ್ ಮತ್ತು ಇಂಗ್ಲಿಷ್ ಭಾಷೆಯಲ್ಲೊಂದು ಗಾದೆಯಿದೆ. “ನಾಯಿಗಳು ಬೊಗಳಿದರೆ, ಪಲ್ಲಕ್ಕಿಗಳು ನಿಲ್ಲುವುದಿಲ್ಲ.” ಸರ್ಕಾರದ ಪ್ರಕಾರ ಪತ್ರಕರ್ತರು ಯಾರಿಗೂ ತೊಂದರೆ ಕೊಡದ ಬೊಗಳುವ ನಾಯಿಗಳು. ಮರುಭೂಮಿಯಲ್ಲಿ ಪಲ್ಲಕ್ಕಿಗಳು ಸಂಚರಿಸುವಾಗ ಕ್ರೂರ ಪ್ರಾಣಿಗಳಿಂದ ರಕ್ಷಣೆ ಒದಗಿಸುವುದು ಇದೇ ನಾಯಿಗಳು ಎಂಬುದನ್ನು ಸರ್ಕಾರಗಳು ಮರೆತಿವೆಯೇ?

ಹೌದು, ನಾವು ಹೂಳಿಡುತ್ತೇವೆ, ಕಚ್ಚುತ್ತೇವೆ. ನಮಗೆ ಹರಿತವಾದ ಹಲ್ಲುಗಳಿವೆ ಮತ್ತು ಬಿಗಿಯಾದ ಹಿಡಿತವಿದೆ. ಆದರೆ, ನಿಜವಾದ ಅಭಿವೃದ್ಧಿಯ ಅಡಿಪಾಯ ನಾವು. ದೌರ್ಜನ್ಯಕ್ಕೆ ಮದ್ದು ಕೂಡ ನಾವೇ!

‍ಲೇಖಕರು Admin

November 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಎಸ್. ಆರ್. ಪ್ರಸನ್ನ ಕುಮಾರ್

    ಯುದ್ಧ ಪೀಪಾಸು ನಾಯಕರುಗಳ ಸ್ವಪ್ರತಿಷ್ಟೇ, ದೇಶಿಯರ ದ್ರಷ್ಟಿಯಲ್ಲಿ ದೇಶದ ಅಧಿನಾಯಕನಾಗ ಬಯಸುವ ರಾಜಕಾರಣಿಗಳ ತೆವಲಿಗೆ ಇಂದು ಪ್ರಜೆಗಳು ಬಲಿಯಾಗುತ್ತಿದ್ದಾರೆ, ದೇಶ ಕಟ್ಟಬೇಕಾದ ಯುವಕರು ದ್ವೇಷಕ್ಕೆ ಬಲಿಯಾಗುತ್ತಿದ್ದಾರೆ. ವಾರ್ ಎಕಾನಮಿಯ ಇನ್ನೊಂದು ಮುಖವಷ್ಟೇ. ಇದನ್ನು ವಸ್ತುನಿಷ್ಟವಾಗಿ ನೋಡಬೇಕಾದ ಮಾಧ್ಯಮಗಳು ಅಧಿಕಾರಸ್ತರ ಬಾಲಂಗೋಚಿಗಳಾಗಿವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: