ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರ್ಕಾರವನ್ನು ಉರುಳಿಸಬೇಕೆಂದಿದ್ದೆ ಆದರೆ ಕೆಡವಿದ್ದು ಮಾತ್ರ ಯಾರದೋ ಹೆಂಡತಿಯನ್ನು..

ಚಾರ್ಲ್ಸ್ ಬುಕೋವ್ಸ್ಕಿ 

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಮೂವತ್ತು ನಾಯಿಗಳು, ಇಪ್ಪತ್ತು ಕುದುರೆಗಳ ಮೇಲೆ ಇಪ್ಪತ್ತು ಗಂಡಸರು ಮತ್ತು ಒಂದು ನರಿ
ಮತ್ತು ನೋಡಿಲ್ಲಿ, ಅವರು ಬರೆಯುತ್ತಾರೆ, ನೀನು ರಾಜ್ಯವನ್ನು, ಚರ್ಚನ್ನು ವಂಚಿಸಿದೆ.
ನೀನು ಅಹಂಕಾರಿ ಗರ್ವಿ, ಸ್ವಲ್ಪ ಚರಿತ್ರೆ ಓದಿಕೋ, ವಿತ್ತ ವ್ಯವಸ್ಥೆಯ ಅಧ್ಯಯನ ಮಾಡು
ತಿಳಿ ಜನಾಂಗೀಯ ಕದನ 23,000 ವರ್ಷಗಳಷ್ಟು ಹಳೆಯದು.

ಇರಲಿ, ನೆನಪಿದೆ ನನಗೆ, ಇಪ್ಪತ್ತು ವರ್ಷಗಳ ಹಿಂದೆ ಹಿರಿಯ ಯೆಹೂದಿ ದರ್ಜಿಯ ಜೊತೆಗೆ ಕೂತಾಗ
ದೀಪದ ಬೆಳಕಲ್ಲಿ ಅವನ ಮೂಗು ಶತ್ರುವಿನೆಡೆಗೆ ಗುರಿಯಿಟ್ಟ ಫಿರಂಗಿಯಂತೆ ಕಂಡಿತ್ತು ಮತ್ತು
ಊರಿನ ಅತ್ಯುತ್ತಮ ಬಡಾವಣೆಯ ಶ್ರೀಮಂತ ಮನೆಯಲ್ಲಿ ವಾಸವಿದ್ದ ಇಟಾಲಿಯನ್ ಔಷಧ ಅಂಗಡಿಯವ
ಸೇರಿ, ನಾವು ಕ್ಷೀಣಿಸುತ್ತಿದ್ದ ರಾಜವಂಶವನ್ನು ಉರುಳಿಸಲು ಯೋಜಿಸಿದೆವು.
ದರ್ಜಿ ಕೋಟಿಗೆ ಗುಂಡಿ ಹೊಲಿಯುತ್ತಿದ್ದ
ಇಟಾಲಿಯನ್ ಅವನ ಸಿಗಾರನ್ನು ನನ್ನ ಕಣ್ಣೊಳಗೆ ಚುಚ್ಚಿ, ನನಗೆ ಬೆಂಕಿ ಹಚ್ಚಿ
ನಾನೇ ಒಂದು ಕ್ಷೀಣಿಸುತ್ತಿದ್ದ ರಾಜವಂಶ ಸದಾ ಆದಷ್ಟು ಕುಡಿತದ ಅಮಲಿನಲ್ಲಿದ್ದೆ.
ನಾನು ಜ್ಞಾನಿ, ಹಸಿದಿದ್ದೆ, ಮ್ಲಾನನಾಗಿದ್ದೆ ಆದರೆ ವಾಸ್ತವವಾಗಿ ಒಂದು
ಸುಂದರ ತರುಣ ಪೃಷ್ಠ ನನ್ನೆಲ್ಲ ಕೋಪವನ್ನು ಕರಗಿಸಬಹುದಿತ್ತು.
ಆದರೆ ನನಗದು ತಿಳಿದಿರಲಿಲ್ಲ: ನಾನು ನನ್ನ ಯೆಹೂದಿ ಮತ್ತು ಇಟಾಲಿಯನ್ ರ ಮಾತು ಕೇಳಿ
ಕಡ ತೆಗೆದುಕೊಂಡ ಸಿಗರೇಟುಗಳನ್ನು ಸೇದುತ್ತಾ, ಮನೆಗಳ ಹಿತ್ತಲುಗಳು ಬೆಂಕಿಯಲ್ಲಿ

ಸುಟ್ಟು ಕರಕಲಾಗಿ ಉರುಳುವುದನ್ನು ನೋಡುತ್ತಾ ಕತ್ತಲ ಗಲ್ಲಿಗಳಲ್ಲಿ ಅಲೆದಾಡಿದೆ. ಆದರೆ
ಎಲ್ಲೋ ನಾವು ತಪ್ಪಿದೆವು. ನಾವಿನ್ನೂ ತಾಕತ್ತಿನ ಗಂಡಸರಾಗಿರಲಿಲ್ಲ, ಸಾಕಷ್ಟು ದೊಡ್ಡ
ಅಥವಾ ಚಿಕ್ಕ ಅಥವಾ ನಮಗೆ ಬರಿ ಮಾತಾಡುವುದು ಬೇಕಿತ್ತು ಅಥವಾ ನಮಗೆ ಬೋರಾಗಿತ್ತು
ಹಾಗಾಗಿ ಅರಾಜಕತೆ ಉರುಳಿಬಿತ್ತು. ಆ ಯೆಹೂದಿ ಸತ್ತುಹೋದ, ಇಟಾಲಿಯನ್ ಗೆ ಅತಿ ಕೋಪ ಬಂದಿತ್ತು
ಯಾಕಂದರೆ ಅವನು ಫಾರ್ಮಸಿಗೆ ಹೋದಾಗ ನಾನು ಅವನ ಹೆಂಡತಿಯ ಜೊತೆಗಿದ್ದೆ
ಅವನಿಗೆ ಅವನ ಸ್ವಂತದ ಸರ್ಕಾರ ಬೀಳುವ ಬಗ್ಗೆ ಕಾಳಜಿ ಇರಲಿಲ್ಲ ಮತ್ತು
ಅವನ ಹೆಂಡತಿ ಬಹಳ ಸುಲಭವಾಗಿ ಬಿದ್ದಳು ಮತ್ತು ನನಗೆ ಸ್ವಲ್ಪ ಅಪರಾಧಿ ಭಾವವಿತ್ತು
ಮಕ್ಕಳು ಪಕ್ಕದ ಕೊಠಡಿಯಲ್ಲಿ ಮಲಗಿದ್ದರು. ನಂತರ ನಾನು ಯಾವುದೋ ಕಚಡಾ ಆಟದಲ್ಲಿ
ಇನ್ನೂರು ಡಾಲರ್ ಗೆದ್ದೆ ಮತ್ತು ನ್ಯೂಆರ್ಲಿಯಾನ್ಸ್ ಗೆ ಬಸ್ಸಿನಲ್ಲಿ ಹೋದೆ
ಮತ್ತು ಬಾರುಗಳಿಂದ ಕೇಳಿ ಬರುತ್ತಿದ್ದ ಹಾಡು ಕೇಳುತ್ತಾ ಮೂಲೆಯಲ್ಲಿ ನಿಂತೆ
ಮತ್ತು ಬಾರುಗಳೊಳಗೆ ಹೋದೆ.
ಮತ್ತು ಹೋಗಿ ಕೂತು ಸತ್ತ ಯಹೂದಿಯ ಬಗ್ಗೆ ಚಿಂತಿಸಿದೆ
ಅವನಿಗೆ ಕೋಟಿಗೆ ಗುಂಡಿ ಹೊಲಿಯುವುದು ಮತ್ತು ಹರಟುವುದು ಬಿಟ್ಟರೆ ಬೇರೆ ಗೊತ್ತಿರಲಿಲ್ಲ
ಮತ್ತು ನಮ್ಮೆಲ್ಲರಿಗಿಂತ ಬಲಿಷ್ಠನಾದರೂ ಅವನು ಹೇಗೆ ಶರಣಾದ
ಆತ ಶರಣಾದ ಯಾಕಂದರೆ ಅವನಿಗೆ ಮೂತ್ರ ಹಿಡಿದಿಟ್ಟುಕೊಳ್ಳಲಾಗಲಿಲ್ಲ
ಮತ್ತು ಬಹುಶಃ ಅದೇ ಕಾಪಾಡಿತೇನೋ ವಾಲ್ ಸ್ಟ್ರೀಟ್ ಅನ್ನು ಮತ್ತು
ಮ್ಯಾನ್ ಹ್ಯಾಟ್ಟನ್ ಅನ್ನು ಮತ್ತು ರೋಮ್ ಅನ್ನು ಮತ್ತು ಲೆಫ್ಟ್ ಬ್ಯಾಂಕ್ ಅನ್ನು
ಆದರೆ ಆ ಔಷಧಿ ವ್ಯಾಪಾರಿಯ ಹೆಂಡತಿ ಅವಳು ಚೆನ್ನಾಗಿದ್ದಳು ಅವಳಿಗೆ
ದಿಂಬಿನ ಕೆಳಗಿನ ಬಾಂಬುಗಳಿಂದ ಬೇಸರವಾಗಿತ್ತು ಮತ್ತು ಪೋಪಿಗೆ ಶಾಪ ಹಾಕುತ್ತಿದ್ದ
ಅವಳ ಅಂಗ ಸೌಷ್ಠವ ಸುಂದರವಾಗಿತ್ತು ತುಂಬ ಸುಂದರ ಕಾಲುಗಳು
ಆದರೆ ಅವಳು ನನ್ನಂತೆ ಚಿಂತಿಸುತ್ತಿದ್ದಳು: ದುರ್ಬಲವಾಗಿರುವುದು ಸರ್ಕಾರವಲ್ಲ
ಬದಲಿಗೆ ಪುರುಷ. ಒಬ್ಬೊಬ್ಬನಾಗಿ. ಪುರುಷರು ತಮ್ಮ ಆಲೋಚನೆಯಷ್ಟು ಶಕ್ತಿಶಾಲಿಗಳಾಗಿರುವುದಿಲ್ಲ
ಮತ್ತು ಆಲೋಚನೆಗಳೆಂದರೆ ಪುರುಷರಾಗಿ ಮಾರ್ಪಾಟಾದ ಸರ್ಕಾರವೇ;
ಸೋಫಾದಲ್ಲಿ ಮಾರ್ಟಿನಿ ಚೆಲ್ಲಿದಾಗ ಪ್ರಾರಂಭವಾಯಿತು
ಮುಗಿದಿದ್ದು ಬೆಡ್ ರೂಮಿನಲ್ಲಿ: ಬಯಕೆ, ಕ್ರಾಂತಿ, ಅವಿವೇಕಗಳೆಲ್ಲ ಕೊನೆಗೊಂಡು
ಲ್ಯಾಮ್ಪ್ ಶೇಡ್ ಗಾಳಿಯಲ್ಲಿ ಗಣಗಣಿಸಿ,
ಬಾಗುಕತ್ತಿಯಂತೆ ದಡಬಡಿಸಿ, ಫಿರಂಗಿಯಂತೆ ಸಿಡಿದು
ಮೂವತ್ತು ನಾಯಿಗಳು, ಇಪ್ಪತ್ತು ಕುದುರೆಗಳ ಮೇಲೆ ಇಪ್ಪತ್ತು ಪುರುಷರು
ಒಂದು ನರಿಯನ್ನು ಅಟ್ಟಿಸಿಕೊಂಡು, ಬಿರುಬಿಸಿಲಲ್ಲಿ ಹೊಲಗಳ ಮೇಲೆ ಇಟ್ಟಾಡಿಸಿ
ನಾನು ಹಾಸಿಗೆಯಿಂದೆದ್ದು ಆಕಳಿಸುತ್ತಾ ಹೊಟ್ಟೆ ಕೆರೆದುಕೊಂಡೆ
ಮತ್ತು ಬೇಗ, ಬಹಳ ಬೇಗ, ಇಷ್ಟರಲ್ಲೇ ನಾನು ಮತ್ತೆ
ತುಂಬಾ ಕುಡಿಯಬೇಕಾಗುವುದೆಂದು ನನಗೆ ಗೊತ್ತಿತ್ತು.

‍ಲೇಖಕರು avadhi

24 June, 2019

2 Comments

  1. Beesu Suresha

    ಮೂಲ ಯಾವ ಭಾಷೆಯದು ಮತ್ತು ಮೂಲ ಲೇಖಕನ ಕುರಿತು ಸಣ್ಣ ಟಿಪ್ಪಣಿ ಜೊತೆಗಿದ್ದರೆ ಪದ್ಯದ ಅರ್ಥವಿಸ್ತಾರ ಇನ್ನೂ ಚೆನ್ನಾಗಿ ಅರ್ಥ ಆಗಬಹುದು ಅನಿಸುತ್ತದೆ.
    – ಬಿ.ಸುರೇಶ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading