ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಹೊಸ ಕವಿತೆ – ಬೊಮ್ಮ- ನನ್ನ ನಿನ್ನ ದಾರಿ ಬಲು ದೂರ…

ಸರೋಜಿನಿ ಪಡಸಲಗಿ

ಬೊಮ್ಮ….
ನಿನ್ನ ಪರಿಶ್ರಮ ಕ್ಷಣ ಬಿಡದ ದುಡಿಮೆ
ಬಲು ಮೆಚ್ಚು ನನಗೆ ನಿನ್ನ ಈ ರಮಣೀಯ
ಚಿತ್ರವಿಚಿತ್ರ ಗದ್ದಲ ತುಂಬಿದ ಸೃಷ್ಟಿಯೂ
ಆದರೆ ಸಂಕಟ ಹಣ್ಣಾದ ಅವಳ ನೋಡಿ

ಬೊಮ್ಮ…..
ಹೀಗ್ಯಾಕೆ ನಿನ್ನ ವ್ಯವಹಾರ ಅಂತ ಪಾರ ಇಲ್ಲದ್ದು
ನಿನ್ನದೇ ಸೃಷ್ಟಿಯಾದರೂ ಅವಳೂ ಅವಳಿಗೇ
ನುಂಗಲಾರದ ತುತ್ತು ದಿನಕ್ಕೊಂದು ರೂಪದ
ನೀತಿ ರೀತಿ ಸುತ್ತ ಮುತ್ತಿದವುಗಳ ಆಕಾರ ವಿಕಾರ

ಬೊಮ್ಮ…..
ಯಾಕೋ ನಿನ್ನೆಯಂತೆ ಇಂದಿಲ್ಲ ನಾಳೆ ಇನ್ನೇನು
ಎಂಬ ದುಗುಡದಲಿ ನೀ ಮುಳುಗಿಸಿ ಬಿಟ್ಟರೂ
ಈಜುವ ಅವಳ ಮೊಗದಲಿ ನಗು ಜೀವವಿಲ್ಲದ್ದು
ಹೊಳೀತಿಲ್ಲ ನಂಗೆ ಹೇಳು ನೀನೇ ಯಾಕೆ ಹೀಗೆ

ಬೊಮ್ಮ….
ಮರೆಯಬೇಡ ಇರಬಹುದು ನೀ ನಿರ್ಮಾತೃ
ಗಟ್ಟಿತನವೇ ಅವಳಾದಾಗ ನಿನ್ನದ್ಯಾವ ಹೆಗ್ಗಳಿಕೆ
ಅಗ್ನಿಯನ್ನೇ ನುಂಗಿ ತಣ್ಣಗಿರುವವಳಿಗೆ ‌‌‌‌‌‌‌‌‌‌‌ಇದ್ಯಾವ
ಲೆಕ್ಕ
ಹಾಗೆ ಸಾಗಬಲ್ಲವಳು ಅವಳೊಬ್ಬಳೇ ಅದೇ ಅವಳು

ಬೊಮ್ಮ…..
ನಿರ್ಮಿಸಿ ಕಣ್ಣು ಕಟ್ಟಿ ಕಾಡಲ್ಲೆಸೆದು ಬಿಟ್ಟರಾಗಲಿಲ್ಲ
ನಿನಗೇ ಸವಾಲು ಹಾಕಿ ನಿಭಾಯಿಸಬಲ್ಲಳಾಕೆ ತಿಳಿ
ಕಣ್ಣು ಕೊಳವಾಗಿದ್ದರೂ ದಾರಿ ಮಂಜಾಗಿದ್ದರೂ
ಅದರ ಸುಳಿವೂ ಕೊಡದೇ ಸಾಗಬಲ್ಲ ಶಕ್ತಳಾಕೆ

ಬೊಮ್ಮ….
ಕೇಳಿಸಿತಾ ನಿನಗೆ ಆಕೆ ಪಿಸುಗುಟ್ಟಿದ್ದು ನಗುತ
ನಿನ್ನ ದಾರಿ ನನ್ನ ದಾರಿ ಬಲು ದೂರ ಬೊಮ್ಮ
ಬರಲಾರೆ ನೀನಿಲ್ಲಿಗೆ ಬಂದರೂ ಕ್ಷಣ ನಿಲ್ಲಲಾರೆ
ಹೌದು ಕಂದ ಬಲ್ಲೆ ಬ್ರಹ್ಮಾಂಡದಂತೆ ಅವಳೆಂದ
ನಾನೇ ನಿರ್ಮಿಸಿದ ನನ್ನೆಣಿಕೆಗೂ ಮೀರಿ ಬೆಳೆದ ನನ್ನ ಹೆಮ್ಮೆ ಅವಳು

‍ಲೇಖಕರು Admin

25 February, 2022

2 Comments

  1. T S SHRAVANA KUMARI

    ಚಂದ

  2. Sarojini Padasalgi

    ಧನ್ಯವಾದಗಳು ಮೇಡಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading