ಸರೋಜಿನಿ ಪಡಸಲಗಿ
ಓ ಸಮಯವೇ ನಿನಗಿಲ್ಲವೇ ಅಂಕೆ
ಇಲ್ಲವೇ ನಿನಗ್ಯಾವ ಹಂಗು ಪರಿವೆ
ಏಕತಾನದಿ ಚಣಬಿಡದೇ ಸರಿಯುವ
ನೀ ಬಲು ನಿರ್ಭಾವುಕ ಬಿಡು ||
ಆ ಮೂಲೆ ಸ್ವಚ್ಛಗೊಳಿಸ ಬೇಕು
ಇಲ್ಲಿಯದನು ಕಿತ್ತಿ ಅಲ್ಲಿಡ ಬೇಕು
ಅಲ್ಲಿ ನೀರೆರೆದು ತಂಪಾಗಿಸ ಬೇಕು
ಇಲ್ಲಿನ ಹಿಮಗಡ್ಡೆ ಕರಗಿಸ ಬೇಕು
ಯಾವ ಗೊಡವೆ ಇಲ್ಲದ ನೀ ನಿರ್ಭಾವುಕ ಬಿಡು ||
ಈ ಅಡ್ಡ ಗೋಡೆ ಕೆಡವಿ ಬಿಡಬೇಕು
ಅಲ್ಲೊಂದು ಗಟ್ಟಿ ಕಟ್ಟು ಕಟ್ಟಬೇಕು
ಅಗೋ ಅಲ್ಲಿನ ತೂತಿಗೆ ತ್ಯಾಪೆ ಹಚ್ಚಬೇಕು
ತ್ಯಾಪೆ ಕಾಣದಂತೆ ರೇಷ್ಮೆ ದಾರ ಸುತ್ತಬೇಕು
ಯಾವ ಚಿಂತೆ ಇಲ್ಲದ ನೀ ಬಲು ನಿರ್ಭಾವುಕ ಬಿಡು ||

ನೆಟ್ಟ ಗಿಡದಡಿ ಗಳಿಗೆ ವಿಶ್ರಮಿಸ ಬೇಕು
ನನ್ನಂಗಳ ಹೂಗಳ ಹಾರ ಮಾಡಬೇಕು
ಸೌಗಂಧದ ಹೊಳೇಲಿ ಮೈಮರೆಯಬೇಕು
ಒಂದೇ ಒಂದು ಸಲ ಮನಬಿಚ್ಚಿ ನಗಬೇಕು
ಯಾವ ಎಗ್ಗಿಲ್ಲದ ನೀ ಬಲು ನಿರ್ಭಾವುಕ ಬಿಡು ||
ಓ ಅಲ್ಲಿ ನಡುವೆ ಕಾಣೋ ಗುಡ್ಡೆ ಕೆತ್ತಬೇಕು
ಹಸಿರು ನೆಲ ಡೊಂಕಿಲ್ಲದೇ ಸಮತಟ್ಟಾಗಬೇಕು
ಚೂರೂ ವ್ಯವಧಾನವಿಲ್ಲದ ನಿನ್ನ ಕೂಗಿಗೆ
ಹೊರಡಲೇ ಬೇಕೆ ಎಲ್ಲ ಚೆಲ್ಲಿ ನಿರ್ಭಾವುಕವಾಗಿ
ನಿನ್ನ ಜೊತೆ ಸೇರಿದ ಎಲ್ಲ ನಿರ್ಭಾವುಕವೇ ಬಿಡು
ನಿನ್ನಂತೆಯೇ ನಿರ್ಭಾವುಕವೇ ಬಿಡು||






ಸಮಯ ಮತ್ತು ಅದರ ನಿರ್ಭಾವುಕತೆಯ ಬಗ್ಗೆ. ಸುಂದರ ಸುಲಲಿತವಾಗಿ ಸಿಗಳಿಸುವ ಸಾಲುಗಳು ಅದರೊಡನೆ ಪೂರಕ ಚಿತ್ರ!
ತುಂಬ ಧನ್ಯವಾದಗಳು ತಮಗೆ ಶ್ರೀ ವತ್ಸ ದೇಸಾಯಿಯವರೇ.ಈ ಅವಕಾಶ ಒದಗಿಸಿಕೊಟ್ಟದ್ದಕ್ಕೆ ಅವಧಿಗೂ ಧನ್ಯವಾದಗಳು.