ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಕವಿತೆ – ಮಹಾಪ್ರಸ್ಥಾನ..

ಸರೋಜಿನಿ ಪಡಸಲಗಿ

ಹುಟ್ಟಿದ ಮನೆ ತೊರೆಯಲು ದೂರ
ತೆರಳಲು ತಯಾರಾಯ್ತು ಯೋಚನೆ
ನೋಡ್ತಿದ್ದೆ ಮುಳುಗಿತ್ತು ಮನವೂ
ಗಾಢ ಮೌನದಲಿ ನಿರ್ಲಿಪ್ತತೆಯಲಿ

ನಡೆಸಿತ್ತು ಭರ್ಜರಿ ತಯಾರಿ ಜೋರಾಗಿ
ಪ್ರಸ್ಥಾನದತ್ತ ಯೋಚನೆ ಬಲೆ ಬಿರುಸಾಗಿ
ಮೂಲೆ ಮೂಲೆ ಗುಡಿಸಿ ಸಂದೆಲ್ಲ ಸಾರಿಸಿ
ಚೂರೂ ಕಸ ಮುಸುರೆ ಉಳಿಸದಂತೆ ಅಲ್ಲಿ

ಗೋಡೆ ಎಲ್ಲ ಒರೆಸಿ ಮೆತ್ತಿ ಬಣ್ಣ ಬಳಿದು
ಗೀರುಗಳ ಮುಚ್ಚಿ ಸಂದು ಬಿಡದಂತೆ
ಬಲು ಚೊಕ್ಕಟ ಪೂರಾ ಬಟಾ ಬಯಲು
ಇನ್ನು ಬಾಕಿ ಒಂದೇ ರಂಗೋಲೆ ಇಡೋದೆ

ಎಲ್ಲ ಸರಿ ಆದರೆ ಯಾಕೊ ಎಲ್ಲ ಖಾಲಿ
ಒಣ ಒಣ ಠಣ ಠಣ ಭಣ ಭಣ ನಿರ್ವಾತ
ನಾನೇನು ಮಾಡೊ ಹಾಗಿದ್ದೆ ನಿಸ್ಸಹಾಯಕ
ಅತಿಥಿಯ ಹಾಗೆ ಅಷ್ಟೇ ಈ ಜೀವ ಇನ್ನೇನು

ಒಣಗಣ್ಣಿಂದ ಸುತ್ತ ನೋಡಿ ಕುಕ್ಕಿ ಖಾಲಿತನ
ಕ್ಷಣ ಕಣ್ಮುಚ್ಚಿ ತೆರೆದು ಮನ ನೋಡಿತು ಆ
ಯೋಚನೆಯ ಮೊಗ ಬಲು ಆಳವಾಗಿ ದಿಟ್ಟಿಸಿ
ಏನೊ ಕೆದರುವಂತೆ ಕೆದಕಿ ಹುಡುಕುವಂತೆ

ಅಲ್ಲವೆ ಮತ್ತೆ ಹೆತ್ತೊಡಲ ಸಂಕಟ ಕರುಳ ಕರೆ
ಉಮ್ಮಳಿಸಿ ಕಣ್ಣೀರು ನಿಜವೆ ನೀ ಹೊರಡೋದು
ಎಂದುಸುರಿತು ದಣಿದು ಹೋಗಿ ಬಸವಳಿದು
ಇರಲಿಲ್ಲ ನಿರ್ಲಿಪ್ತತೆಯ ಕುರುಹೂ ಈಗಲ್ಲಿ

ಕರಗಿ ನೀರಾಗಿ ಕುದಿದು ಹೋಯ್ತು ಯೋಚನೆ
ಗಳಿಗೆಯಲಿ ಆವಿಯಾಗಿ ಮನದ ಸುತ್ತ ಮುತ್ತಿ
ಗಟ್ಟಿಯಾಗಿ ಬಿಗಿದು ತೆಕ್ಕೆ ಬಿದ್ದು ಉಲಿಯಿತು
ನಮ್ಮದೊಟ್ಟಿಗೆ ಬಿಡು ಪ್ರಸ್ಥಾನ ಮಹಾ ಪ್ರಸ್ಥಾನ
ನಕ್ಕೆ ನಾ

‍ಲೇಖಕರು avadhi

2 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading