ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಕವಿತೆ- ಬೊಮ್ಮ ನೀ ಮರೆತು ಬಿಟ್ಟೆ…

ಸರೋಜಿನಿ ಪಡಸಲಗಿ

ಬೊಮ್ಮ….
ಬಲೇ ಜಾಣ ಸೃಷ್ಟಿಕರ್ತ ನೋಡು ನೀನು
ಹೆಣ್ಣೆಂದರೇನೆಂದು ಹೇಳುವೆ ಅಂತ ಹೇಳಿ
ನಾಜೂಕಾಗಿ ಏನೆಲ್ಲ ತುಂಬಿಸಿ ಅವಳನು
ನಾಜೂಕಾಗಿಸಿದೆ ನಿನ್ನ ಕಾರ್ಯ ಸಾಧಿಸಲು

ಬೊಮ್ಮ….
ಅವಳನು ಮಾಡಿ ಬಿಟ್ಟೆ ಕೋಮಲೆ ಮಮತೆ
ಸಹನಾ ಮೂರ್ತಿ ಆ ಶಬ್ದಗಳ ಅರ್ಥ ಹೇಳಲು
ಏನೂ ಹೇಳದಂತೆ ಮೌನವೇ ಭಾಷೆಯಾಗಿಸಿ
ಅಸಹಾಯಕಳನ್ನಾಗಿಸಿ ಬಿಟ್ಟೆ ಅವಳನ್ನು

ಬೊಮ್ಮ….
ನಿಜ ನೀಡಲಿಲ್ಲ ನೀ ಯಾವ ಸ್ವಾತಂತ್ರ್ಯವನೂ
ನೂರು ಕನಸು ಭಾವನೆ ಯೊಚನೆ ಅವಳಲಿದ್ರೂ
ಆದರೂ ಉಂಟು ಒಂದು ಅಪೂರ್ವ ಗುಟ್ಟು
ಹೇಳಲಾ ಬೊಮ್ಮ ಕೇಳು ಕಿವಿದೆರೆದು ಆಲಿಸು

ಬೊಮ್ಮ….
ಅಷ್ಟೊಂದು ಸರಕು ಭದ್ರವಾಗಿ ತುಂಬಿಸಿಟ್ಟ
ಅವಳೆದೆಯ ಗೂಡಿನ ಕಿಟಕಿ ತೆರೆದಿಡಲು
ಮರೆತು ಬಿಟ್ಟೆ ನೀ ಮರೆತೇ ಬಿಟ್ಟೆ ಬೊಮ್ಮ
ನಿನ್ನ ಮರೆವು ಸೃಷ್ಟಿಸಿತು ಅಗಾಧ ರಮ್ಯತೆಯ

ಬೊಮ್ಮ…..
ಅವಳೇ ಅವಳು ಅಲ್ಲಿ ಪೂರ್ಣ ಸ್ವತಂತ್ರಳಾಗಿ
ಮನಸೋ ಇಚ್ಛೆ ಸ್ವಚ್ಛಂದ ಲೋಕದಲಿ
ತನಗೆ ತಿಳಿದಂತೆ ಗೀಚಿ ಅಲ್ಲಿ ಜೀವ ತುಂಬಲು
ಯಾರಿಗೂ, ನಿನಗೂ ಇಲ್ಲ ಅಲ್ಲಿ ಪ್ರವೇಶ
ಬೊಮ್ಮ ನಿನಗೂ ಇಲ್ಲ

‍ಲೇಖಕರು Admin

17 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading