ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರೋಜಿನಿ ಪಡಸಲಗಿ ಕವಿತೆ- ನಾನು ಮತ್ತು ಅವಳು

ಸರೋಜಿನಿ ಪಡಸಲಗಿ

ನಾನು ಮತ್ತು ಅವಳು ಬಲು ಹತ್ತಿರ
ನನ್ನೊಳಗೆ ಅವಳು ಅವಳೊಳಗೆ ನಾನು ||
ನಾನೇ ಅವಳು ಅವಳೇ ನಾನು
ಸಾಕಲ್ಲವೇ ಇಷ್ಟು ಹೇಳಿದರೆ ||

ನನ್ನ- ಅವಳ ಮಾತು ಗೂಢ ಗುಪಿತ
ದಿನವೂ ಅವಳ ಇದಿರಿಗೆ ಶಾಂತ ಕೂತು
ಕಣ್ಣಲ್ಲಿ ಕಣ್ಣು ಊರಿ ಮನಬಿಚ್ಚಿ
ತೆರೆದಿಡುವುದು ನನ್ನ ರೂಢಿ
ಒಂದೂ ಮಾತನಾಡದೆ ಕೇಳುವುದು
ಮನನ ಮಾಡುವುದು ಅವಳ ರೂಢಿ || ೧||

ನನ್ನ -ಅವಳ ಒಡನಾಟ ಬಿಡಿಸದ ಬಂಧ
ತೆರೆದಿಟ್ಟ ಮನದ ಪ್ರತಿ ಪುಟದ ಚಿತ್ರ
ಅವಳ ಕಣ್ಣಲ್ಲಿ ಮೂಡಿ ಪ್ರತಿಫಲನ
ಒಂದೊಮ್ಮೆ ಸಣ್ಣ ಹನಿ ಒಮ್ಮೆ ಸಣ್ಣ ನಗು
ಒಮ್ಮೆ ನಿರಾಳ ಇನ್ನೊಮ್ಮೆ ನಿರ್ಲಿಪ್ತ
ನನ್ನ ಭ್ರಮೆಯೋ ನಾನಂತೂ ಆಗ ಹಗುರ ||೨||

ಇಹುದು ಎಲ್ಲರಲೂ ಹಂಚಿದ ನಗು ಹೊನಲು
ಮತ್ತೆ ಎಲ್ಲೂ ತೋರಿರದ ಆಳ ಅಳಲು
ಉಂಟು ಅದರರಿವು ಅವಳೊಬ್ಬಳಿಗೆ ಮಾತ್ರ
ಹೊರಗೆಡವಲಾರೆ ಏನೂ ಅವಳ ಬಿಟ್ಟೆಂದು
ಅವಳೂ ಕಾಯ್ತಾಳೆ ಗಟ್ಟಿ ಉಸಿರ್ಹಿಡಿದು
ಆ ಗಟ್ಟಿತನವ ನೆಟ್ಟು ನನ್ನ ಋಣದಲ್ಲಿಡಲು ||೩||

ಹೇಳ್ತೀನೀಗ ಇನ್ನೊಂದು ದೊಡ್ಡ ಗುಟ್ಟು
ಬೇಕು ಅವಳೆದುರು ಕೂಡಲು ನೋಡಲು
ಗಟ್ಟಿ ಗುಂಡಿಗೆ ಕಣ್ಣ ನೋಟ ಸ್ವಚ್ಛ ಸ್ಪಷ್ಟ
ಬಲ್ಲೆ ಅವಳಲ್ಲೇ ಉಂಟು ನನ್ನ ಅಪ್ಪಟ ಚಿತ್ರ
ಕಾಪಿಡುವೆ ಅವಳಿರುವ ಠಾವನು ಜೋಕೆಯಲಿ
ಕಾಣುವಂತೆ ಅವಳು ಬೇಕೆಂದಾಗ ನಿಚ್ಚಳವಾಗಿ
ನಾ ನಿಚ್ಚಳವಾಗಿರುವ ಕ್ಷಣದ ವರೆಗೂ ||೪||

‍ಲೇಖಕರು Admin

1 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading