ಸರೋಜಿನಿ ಪಡಸಲಗಿ
ಒಮ್ಮೊಮ್ಮೆ ಅನಿಸುವುದುಂಟು
ಒಮ್ಮೊಮ್ಮೆ ಅನಿಸುವುದುಂಟು
ಕಾಡುವ ನೆನಪು ಮೂಡುವ ಕನಸು
ಜೊತೆಯಾಗಿ ಕೈ ಹಿಡಿದು ಹೆಜ್ಜೆ ಹಾಕಿ
ಮನತುಂಬ ಗೆಜ್ಜೆ ನಾದ ರಿಂಗಣಿಸಿದರೆ
ಆ ಗಳಿಗೆ ಅಲ್ಲೇ ನಿಂತು ಹೋಗಬಾರದೇ
ಒಮ್ಮೊಮ್ಮೆ ಅನಿಸುವುದುಂಟು
ಹಿಂದುಳಿದ ಕಾಲದ ಜಡತೆ ಕಳೆದು
ಮುಂದೋಡಿದ ಕಾಲವನೆಳ ತಂದು
ಎರಡೂ ಕಲೆತ ಸಂಭ್ರಮ ಉಕ್ಕಿದರೆ
ಆ ಗಳಿಗೆ ಅಲ್ಲೇ ನಿಂತು ಹೋಗಬಾರದೇ
ಒಮ್ಮೊಮ್ಮೆ ಅನಿಸುವುದುಂಟು
ತೆರೆದ ಬಾನು ಎದೆಯಂಗಳದಿ ಒರಗಿ
ಸೊಲ್ಲಿಲ್ಲ ಸದ್ದಿಲ್ಲದೆ ಮೌನ ತಳೆದಾಗ
ಸುಳಿವು ಕೊಡದೆ ತಾರಾಗಣ ಇಳಿದರೆ
ಆ ಗಳಿಗೆ ಅಲ್ಲೆ ನಿಂತು ಹೋಗಬಾರದೇ
ಒಮ್ಮೊಮ್ಮೆ ಅನಿಸುವುದುಂಟು
ಸುತ್ತ ಕವಿದ ಗವ್ವೆನ್ನೋ ಕಡುಗತ್ತಲಲಿ
ತಡಕಾಡೋ ವ್ಯರ್ಥ ನೋಟ ಬಗೆದು ಕತ್ತಲ
ಗರ್ಭ ಸಾಲುದೀಪ ಝಗ್ಗನೆ ಬೆಳಗೆ
ಆ ಗಳಿಗೆ ಅಲ್ಲೇ ನಿಂತು ಹೋಗಬಾರದೇ
ಒಮ್ಮೊಮ್ಮೆ ಅನಿಸುವುದುಂಟು
ಕೆಲಸವಿಲ್ಲದ ಹುಚ್ಚು ವಿಚಾರಗಳ ಸಂತೆ
ಅಗಡಾ ದಿಗಡಿ ವ್ಯವಹಾರ ನಿಲ್ಲಿಸುವ
ಧ್ವನಿ ಎಚ್ಚರಿಸೆ ಬುದ್ಧಿ ನಿಚ್ಚಳವಾದರೆ
ಆ ಗಳಿಗೆ ಅಲ್ಲೇ ನಿಂತು ಹೋಗಬಾರದೇ
ಒಮ್ಮೊಮ್ಮೆ ಅನಿಸುವುದುಂಟು
ಇಷ್ಟೆಲ್ಲದರ ಮೊತ್ತ ಈ ಬದುಕಾದಾಗ
ಈ ಗಳಿಗೆ ಈ ಗಾಳಿ, ಈ ಜೀವ ಜಗ
ಎಲ್ಲ ಹೀಗೇ ಅಲ್ಲೇ ನಿಂತು ಹೋಗಬಾರದೇ
ಎಂದೆಂದೂ ಈ ಜೀವ ಹಾಗೇ ಕಳೆದು ಹೋಗಬಾರದೇ

ಯಾವುದ್ಹೇಳು ಶಾಶ್ವತ
ತಲೆ ಅಂದ್ರೆ ಅಷ್ಟೇ ಯೋಚನೆ
ಆ ಮೂಲೆದು ಸಂದಿದು ಎಲ್ಲ ಉಕ್ಕಿ
ಹೊರ ಚಲ್ಲೋ ಹಾಗನಸಿದರೂ
ಇಲ್ಲ ಚಲನೆ ಕೊಂಚವೂ ಅಲುಗದೆ
ಭದ್ರ ತಿಳಿವಲ್ಲತು ಹೊಳಿವಲತು ಏನೇನೂ
ಮಣಭಾರ ಎದೆ ಕಲ್ಪನೆ ಮೀರಿ
ಯಾಕೆ ಏನು ಇಣುಕಿ ನೋಡಿ
ಹೌಹಾರಿ ಗಾಬರಿ ಸಂತೆ ಅಲ್ಲಿ
ಅಲ್ಲವೆ ಕೋಣೆ ನಾಲ್ಕೆ ಎದೇಲಿ
ಅಲ್ಲ ನೂರಾರು ತಪ್ಪಿತೆಲ್ಲೋ ಲೆಕ್ಕ ಇನ್ನೇನು
ತಲೆ ಮೇಲೆ ಕೈ ಹೊತ್ತ ಮನಸು
ಅತ್ತ ಮೊಗದಿರುವಿ ಕೂತ ಬುದ್ಧಿ
ಎಷ್ಟೊಂದು ಸರಕು ಓರಣ ದೂರ
ವಿಲೇವಾರಿ ವಿಚಾರ ಹೇಗೆ ಏನು
ಎಲ್ಲಾ ಮಸುಕು ಮಂಜು ಹೊದ್ದಂತೆ ಮತ್ತೇನು
ಆಗುವುದುಂಟು ಒಮ್ಮೊಮ್ಮೆ ಹೀಗೆ
ಬೇಡ ತಪ್ಪುವುದು ದಿಕ್ಕುದೆಸೆ ಮೆಲ್ಲ
ಇಳುಹಿ ಎಲ್ಲ ಆಗಲೆ ಬೇಕಲ್ಲ ಹಗುರ
ಕಟ್ಟಿ ಉಸಿರು ಹಾರದಂತೆ ಜಾಗರ
ಯಾಕೆ ತತ್ತರ ಹೊರವಾದೀತು ಯಾವುದ್ಹೇಳು ಶಾಶ್ವತ






ಮನದಾಳದ ದುಗುಡ, ಕಹಿ ಸಿಹಿ ಭಾವನೆಗಳನ್ನು ಮಥಿಸಿದಾಗ ಹೊರಹೊಮ್ಮಿದ ಕವನಗಳಂತೆ ಭಾಸವಾಗುತ್ತವೆ. ಅವುಗಳನ್ನಿ ಕವಿತೆಯಲ್ಲಿ ಜೋಡಿಸಿದ ಮನಸ್ಸಿಗೆ ಸ್ವಲ್ಪವಾದರೂ ಸಾಂತ್ವನ ದೊರೆತಿರಬಹುದೇನೋ!
ತುಂಬ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ಕವನದ ನಾಡಿ ಮಿಡಿತ ಹಿಡಿದಂತೆ ನಿಮ್ಮ ಅಭಿಪ್ರಾಯ.
ಈ ಕವಿತೆಗಳನ್ನ ಪಬ್ಲಿಷ್ ಮಾಡಿದ ಅವಧಿಗೆ ಧನ್ಯವಾದಗಳು.