ಸರೋಜಿನಿ ಪಡಸಲಗಿ ಅಂಕಣ- ಮಾಟ ಹೆಂಗಸು ಬೆಟ್ಟದಷ್ಟ ಎತ್ತರಾದ್ಲು…

‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

5

ಆ ದಿನ  ನಾವು  ಸ್ಕೂಲ್ ನಿಂದ  ಬರೋಷ್ಟ್ರಲ್ಲಿ  ಮನೀ ಮುಂದ  ರಾಯಪ್ಪನ  ಚಕ್ಕಡಿ  ಬಂದು  ನಿಂತಿತ್ತು. ರಾಯಪ್ಪ  ನಮ್ಮ ರೈತ. ನನಗ  ವಿಪರೀತ  ಖುಷಿ ಆತು. ಬೆಳವಿಗೆ  ಹೋಗಿದ್ದ  ನಮ್ಮ ಏಕಾ  ಬಂದಿರತಾಳಂತ. ಬಿತಿಗಿ ಸುರು  ಆತಂದ್ರ, ಸುಗ್ಗಿ ಸುರು ಆದಕೂಡಲೇ, ಕಬ್ಬಿನ  ಗಾಣದ  ಹೊತ್ತಿಗೆ  ಏಕಾನ  ವಾಸ್ತವ್ಯ  ತೋಟದ  ಮನಿಯೊಳಗನ s  ಅಂದ್ರ  ಅಲ್ಲೇ  ಬೆಳವಿಯೊಳಗೇ. ಅಲ್ಲಿನ  ಕೆಲಸ  ಮುಗೀತಂದ್ರ  ಹುಕ್ಕೇರಿಗೆ  ಬರೂದು; ಹೊಲದಾಗ  ಕೆಲಸ ಸುರು ಆತಂದ್ರ  ಬೆಳವಿಗೆ  ಹೋಗೂದು. ಹೀಂಗ  ಆಕೀದು  ಹೋಗೂದು  ಬರೂದು  ನಡದs  ಇರ್ತಿತ್ತು. ಈಗ  ಶೇಂಗಾದ  ಸುಗ್ಗಿ  ಮುಗಿಸಿ ಕೊಂಡು  ಬಂದಿದ್ಲು.

ನಾವೆಲ್ಲ ಸಾಲಿ ಮುಗಿಸಿ  ಬರೋದನ್ನೇ  ಕಾಯ್ತಿದ್ಲು ಆಕಿ. ನಾವು ಬಂದಿದ್ದು  ನೋಡಿ “ಬಂದ್ರೀ  ಬಾಳಾಗೋಳ್ರ್ಯಾ , ಬರ್ರಿ  ಇಲ್ಲೆ. ಹೊಸಾ ಶೇಂಗಾದ್ದು ಕರದಂಟು ಮಾಡ್ಕೊಂಡು ಬಂದೀನ ನೋಡ್ರಿ. ಅಲ್ಲೇ ಆ ಕೈಚೀಲದಾಗ ಹಸಿ ಶೇಂಗಾ ಸುಡಿಸಿ ತಂದಿದ್ದು ಅವ. ಹಸಿ ಶೇಂಗಾನೂ ಅವ. ಆದ್ರ  ಹಂಗs‌  ತಿನಬ್ಯಾಡ್ರಿ. ಪಿತ್ತ ಆಗ್ತದ. ನಾಳೆ  ಉಪ್ಪು ಹಾಕಿ ಕುದಿಸಿ ಕೊಡ್ತೀನ ಹಾಂ!” ಅಂತ  ಹೇಳಿದ್ಲು ಏಕಾ.

ನಾ ಏಕಾನ ಮಾರೀನೇ ನೋಡ್ತಿದ್ದೆ. ಆಕೀ ಮಿರುಗುವ ಗುಲಾಬಿ ಬಣ್ಣದ  ಮಾರಿಯೊಳಗ ಸಣ್ಣಗ ಕಂದು ಬಣ್ಣ ಕೂಡಿಧಾಂಗ ಅನಿಸ್ತು. ಮತ್ತ ಮತ್ತ ಅದನ್ನೇ ನೋಡ್ತಿದ್ದೆ.ಏಕಾಗ ನಗೀ ಬಂತು. “ಏನ ಅಕ್ಕವ್ವಾ ಅದೇನ ಅಷ್ಟ  ನೋಡ್ಲೀಕ್ಹತ್ತೀ?” ಅಂತ ನಕ್ಕೋತ  ಕೇಳಿದ್ಲು. ನಾ ಹೇಳ್ದೆ “ಏಕಾ ನಿನ್ನ ಮಾರಿ ಬಣ್ಣ ಬ್ಯಾರೇನ ಆಗೇದ”.

“ಅಯ್ಯ ಅದs. ಅಕ್ಕವ್ವಾ ಅದು  ಅಡವ್ಯಾಗಿನ ಬಯಲ ಹವಾ ನೋಡು. ಹಿಂಗಾಗಿ ಬಣ್ಣ ಒಂಚೂರ ಕಾಡಬಣ್ಣ ಆಗ್ತದ. ಅಲ್ಲಿನ ಥಂಡಿ ಗಾಳಿಗೆ  ಮೈಕೈ ಚರ್ಮಾನೂ  ಬಿರಸಾಗಿ ಒಡದ್ಹಾಂಗ ಆಗ್ತದ. ಈಗ ಇಲ್ಲಿ ಬಂದೀನಲಾ  ಮತ್ತ  ತಾನs  ಎಲ್ಲಾ  ಬರೋಬ್ಬರಿ ಆಗ್ತದ  ಎರಡ ದಿನದಾಗ ”  ಅಂತ  ನಕ್ಕಳು.

ಆಕೀ  ಆ  ಅದಮ್ಯ ಉತ್ಸಾಹ ಎಂದೂ ಬತ್ತದ ಝರಿ ಹಾಂಗ ಹಂಗೇ ಹರೀತನ ಇರ್ತಿತ್ತು; ಅಡವ್ಯಾಗಿದ್ರೂ ಸರಿ,  ನಾಡಿನ್ಯಾಗಿದ್ರೂ ಸರಿ. ಅದನ್ನ  ಮಾತ್ರ  ಒಂಚೂರೂ ಜಿಪುಣತನಾ  ಮಾಡದೇ ಆ ಹಣೆಬರಹ  ಬರೆದಾಂವ  ಆಕಿ ಪದರಾಗ  ಕಟ್ಟಿ ಕಳಸಿದ್ದಾ. ಅದರ  ಆಸರದಲೇನ  ತನ್ನ  ದುರ್ಭರ  ಬಾಳನ್ನು ಸಹ್ಯ ಮಾಡ್ಕೊಂಡಿರ ಬೇಕು ಆಕಿ  ಅಂತ ಈಗ ಅನಸ್ತದ. ಆಕೀ ಹುರುಪು ಎಷ್ಟ  ಉಲ್ಲಾಸ  ತುಂಬಸ್ತಿತ್ತೋ  ಆಗ  ಅಷ್ಟೇ  ಸಂಕಟ, ಕಳವಳ ತುಂಬಸ್ತದ ಹೊಟ್ಟಿಯೊಳಗ  ಈಗ ನೆನಪಾದಾಗ.

ಹಂಗs ‌‌‌‌ ಒಂದು ನೀಳ ಉಸಿರು ಹೊರ ಬೀಳ್ತದ ಗೊತ್ತಾಗಧಾಂಗ. ದೊಡ್ಡ ದೊಡ್ಡ ಪುಸ್ತಕ ಓದಿ, ದೊಡ್ಡ ದೊಡ್ಡ ತತ್ವಗಳನ್ನು ಅಳವಡಿಸಿ ಕೊಳ್ಳಿಕ್ಕೆ ಕಷ್ಟಪಡಾವ್ರನ್ನ ನೋಡಿದಾಗ, ಅರ್ಥವಾಗದ, ಅರ್ಥವೇ ಇರದ ದೊಡ್ಡ ಮಾತುಗಳನ್ನ ಹೇಳಾವ್ರನ್ನ ನೋಡಿದಾಗ  ನನಗೆ ಏಕಾನ ನೆನಪಾಗ್ತದ. ಅಗದೀ  ಸರಳ ಸಹಜವಾಗಿ ಆಕೀ ಜೀವನದಾಗ ಅವೆಲ್ಲಾ ಒಟ್ಟು ಗೂಡಿ ನೆಲಿಯೂರಿದ್ದ ನೋಡಿ ಅಗಾಧ  ಅನಸ್ತದ ನಂಗ. ತನ್ನ ಕೆಲಸಾ, ತನ್ನ ಮನಿ ಮೊಮ್ಮಕ್ಕಳ ಅಕ್ಕರತಿ, ಸಂಜೀ ಮುಂದೆ  ನಾಲ್ಕು ಮಂದಿ ಜೋಡಿ (ಆಜು ಬಾಜೂದವರು) ಮಾತು; ಅದ ತಪ್ಪಿದ್ರ ಹೊಲಾ ತೋಟ, ರಾಶಿ, ಗಾಣ ಅಂತ ಇರೋವಾಕಿಗೆ ಬ್ಯಾರೆ ವಿಚಾರ ಬೇಕರೇ ಯಾಕ ಅನ್ನೂ ಹಾಂಗ ಇರತಿದ್ಲು ನಮ್ಮ ಏಕಾ. ಇದಲ್ವಾ ತಪಸ್ಸು, ದಾರ್ಶನಿಕತೆ, ವಿಶಿಷ್ಟ ನಿರ್ಲೀಪ್ತತೆ ಅನಕೋತೀನಿ  ನಾ. ಏಕಾ ಆ ಎಲ್ಲಾ ಶಬ್ದಗಳ  ಭಾನಗಡಿಯೊಳಗ ತಲಿ ಕೆಡಿಸ್ಕೊಳ್ಳಾಕೀನ  ಅಲ್ಲ. ಆ ಮಾತು ಬ್ಯಾರೆ.

ಏಕಾ  ಬೆಳವಿಂದ  ಬರೂದಂದ್ರ  ಆ ದಿನ  ನಮಗೆ ಸಣ್ಣ ಹಬ್ಬದಷ್ಟೇ  ಹುರುಪು. ಅಲ್ಲೇ  ನಮ್ಮ ತೋಟದಾಗ  ಸಿಗೂ ಸಾಮಾನು ಬಳಸಿ  ನಾನಾ ಥರದ  ತಿಂಡಿ- ತಿನಿಸು  ಮಾಡ್ಕೊಂಡು ಬರಾಕಿ.ನಾವು ಎಷ್ಟು ತಿಂತಿದ್ವಿ ಅದೆಲ್ಲಾ ಬ್ಯಾಡ. ಆದರ ಆಕೀ ಕಕ್ಕಲಾತಿಗೆ ಮಿತಿ ಅಂಬೂದ ಇರಲಿಲ್ಲ. ಅಲ್ಲೀವ  ಶೇಂಗಾ, ಬೆಲ್ಲ ಬಳಸಿ ಕರದಂಟು, ಶೇಂಗಾ ಉಂಡಿ, ಚಿಕ್ಕಿ ಮಾಡಿ ತರಾಕಿ, ಅದೂ  ತಾನೇ ಕೈಯಾರೆ ಮಾಡಿ. ಅಲ್ಲೇ ಸೈಕಲ್ ಮ್ಯಾಲೆ ಒಬ್ಬ ಹುಡುಗ ಚುರುಮುರಿ ಮಾರಲಿಕ್ಕ ಬರತಿದ್ದ. ಅದರಲೆ ಭಡಂಗ ಮಾಡಿ ತರತಿದ್ಲು.

ಹೊಲದಾಗ  ಬೆಳಿಯೂ ಗೆಣಸು, ಗೊಂಜಾಳ ತೆನಿ (ಮುಸುಕಿನ ಜೋಳ) ಎಲ್ಲಾ ಡಬಗಾಯಿ  ಹಾಕಿಸಿ ಬೇಯಿಸಿ  ತಗೊಂಡು ಬರೋದು.ಒಂದ s, ಎರಡs! ಡಬಗಾಯಿ ಹಾಕಿದ  ಗೆಣಸು, ಗೊಂಜಾಳ ತೆನಿ ಸಿಗೂ  ಸಾಧ್ಯತೆ ಈಗ  ಕಡಿಮೆ ಅನಸ್ತದ ನನಗ. ಕೇಳಿ, ರುಚಿ ನೋಡಿ ಗೊತ್ತಿರೋರೂ ಕಡಿಮಿನ ಇರಬಹುದು ಈಗ.

ಡಬಗಾಯಿ ಬಗ್ಗೆ ಸ್ವಲ್ಪ ಹೇಳ್ತೀನಿ ಇಲ್ಲಿ.

ಡಬಗಾಯಿ  ಹಾಕೂದು ಅಂದ್ರ ಅದೊಂದು  ವಿಶಿಷ್ಟ ನಮೂನಿ  ಕುಕಿಂಗ್!  ಒಂಚೂರೂ ಗಾಳಿ, ಹವಾ  ಒಳಗ ನುಸಳಧಾಂಗ  ಮುಚ್ಚಿ ಬೇಯಸೂದು, ಬರಿ  ನೆಲದ ತನುಗಾವು ಹುಟ್ಟಿಸಿದ ಉಗಾಕ್ಕ.   ಹೊಲದಾಗ ಒಂಚೂರ  ಬಯಲ ಜಾಗದಾಗ ಒಂದು ಸಣ್ಣ ತೆಗ್ಗು  ತೆಗೆದು  ಅದರಾಗ ಅಷ್ಟೇ ಸೈಜ್ ದು  ಮಣ್ಣಿನ ಗಡಿಗೆ  ತಗೊಂಡು ಅದರೊಳಗ ತೊಳೆದ ಗೆಣಸು ಹಾಕಿ, ಒಂಚೂರು ತುಪ್ಪ ಹಾಕಿ ಗಡಿಗೆ ಗಟ್ಟಿ ಮುಚ್ಚಿ ಆ ತಗ್ಗಿನ್ಯಾಗಿಟ್ಟು ಮ್ಯಾಲೆ ಬೆಂಕಿ ಹಾಕಿ ಮುಚ್ಚಿ ಬಿಡೂದು. ನೆಲದ ಆ ತನುಗಾವಿಗೆ  ಆ ಗೆಣಸು  ಹದವಾಗಿ ಬೆಂದು ತೆಳು ಅರಿಶಿಣ  ಬಣ್ಣಕ್ಕೆ ಬಂದಿರತದೆ. ಆ ಗೆಣಸು ತಿಂದ್ರೆ ಏನ ಹೇಳಲಿ? ಬಲ್ಲವನೇ ಬಲ್ಲ; ತಿಂದವನೇ ಬಲ್ಲ ಆ  ಸವಿ.

ಹಂಗs‌ ಗೊಂಜಾಳ ತೆನಿನೂ ಸಿಪ್ಪೆ ತಗೀದ ಒಣ ಹುಲ್ಲಿನ್ಯಾಗ  ಪೂರಾ ಮುಚ್ಚಿ ಮ್ಯಾಲೆ ತೆಳು ಮಣ್ಣ ಹರಡಿ ಬೆಂಕಿ ಹಾಕಿ ಚೂರೂ ಹವಾ ಆಡಧಾಂಗ ಸುಟ್ಟರೆ  ಪಸಂದಾಗಿ ಬೆಂದು ಬರತಾವ ಗೊಂಜಾಳ ತೆನಿ.ಅವಕ್ಕೆ ಉಪ್ಪು ತುಪ್ಪ ಹಚ್ಚಿದ್ರಂತೂ ಸರೀನೇ; ಹಚ್ಚದೇ ತಿಂದ್ರನೂ ಸವಿನೇ. ನೆನೆಸಿದ್ರೆ  ಸಾಕು , ಬಾಯಿ ನೀರೊಡೀತದೆ; ಆ ಸುಖ ಈಗೆಲ್ಲಿ, ಆ  ಧಡಪಡಿಸುವ  ಜೀವ ಈಗೆಲ್ಲಿ  ಅಂತ ಕಣ್ಣು ನೀರೊಡೀತದೆ. ಇವೆಲ್ಲದರ  ಪ್ರತ್ಯಕ್ಷದರ್ಶಿ ನಾ ಎಂಬ ಹೆಮ್ಮೆ ಉಂಟು ನಂಗೆ!

ಏಕಾ  ತೋಟದ ಮನ್ಯಾಗ  ಇದ್ದಾಗ  ಬೆಳವಿ , ತೋಟ  ನಮಗ ಮಸ್ತ್  ಪ್ರವಾಸಿ ಧಾಮ  ಆಗಿರತಿತ್ತು. ಹುಕ್ಕೇರಿಯಿಂದ  ಹತ್ತು – ಹನ್ನೆರಡು ಕಿಲೋಮೀಟರ್  ಆಗ್ತಿತ್ತು  ಬೆಳವಿ. ಏಕಾ  ಅಲ್ಲಿದ್ದಾಗ  ನಮ್ಮ ಸಾಲಿಗೆ  ಸೂಟಿ ಬಂತಂದ್ರ  ರಾಯಪ್ಪ  ಚಕ್ಕಡಿ ತಗೊಂಡು ಬಂದು ಕರಕೊಂಡು ಹೋಗ್ತಿದ್ದ  ನಮ್ಮನ್ನ. ನಾವು, ಮೊಮ್ಮಕ್ಕಳು ಬಂದ್ವಿ

ಅಂದ್ರ  ಏಕಾನ  ಖುಷಿ  ಗರಿಗೆದರೋದು. ಅಲ್ಲಿನ ಖುಲ್ಲಾ  ಹವಾ, ಸ್ವಚ್ಛ ಗಾಳಿ,  ಏಕಾನ  ಅಚ್ಛಾ, ರೈತರು ಅವರ ಮನೆಯವರ ತಿಳಿನಗು, ಒಣ ಸೋಗಲಾಡಿತನ  ಇಲ್ಲದ ಆ ಮಕ್ಕಳ ಜೊತೆ ಆಟ- ತಿರುಗಾಟ ನಮಗೂ ನಾಲ್ಕ ಪುಚ್ಚ, ರೆಕ್ಕಿ ಹಚ್ಚಿಧಾಂಗ  ಗಾಳ್ಯಾಗ  ತೇಲಾಡಸೂದು. ಏಕಾಂದು  ಮಡಿ . ಅದಕ್ಕ ಆಕಿ  ತನಗ ಬೇಕಾಗೂ ನೀರು ತಾನೇ ತಗೊಂಡು  ಬರ್ತಿದ್ಲು. ತೋಟದ ಬಾವಿಗೆ  ಮಟ್ಟಿ (ಕಪಲಿ) ಹೊಡೆಯೂ ಮುಂದೆ ಸಾಠಾ ಆಗಿ ಅಲ್ಲಿ  ಇರೂ ಪುಟ್ಟ  ಕಟ್ಟೆಯಲ್ಲಿ ಸೇರಿ ಆ  ನೀರು ಹರಿದು ಕಾಲುವೆ ಸೇರೋ ಮೊದಲು  ಹಿಡ್ಕೊಂಡು ಬಳಕಿಗೆ ತರೋದು. ಕುಡಿಯೋ ನೀರು ಮಾತ್ರ  ಬಾವಿಯೊಳಗ  ಇಳಿದು ಕೊಡಾ ತುಂಬ್ಕೊಂಡು ತರೋದು. ನಾವು ಹೋದಾಗ  ನಮಗೆ ಹೊಲದಾಗಿನ  ಆಳು ಮಕ್ಕಳು  ತಂದಿಡಾವ್ರು.  ಹೊಲದ ತುಂಬ  ಹಚ್ಚ ಹಸಿರಿನ ಪೈರು; ಸ್ವಚ್ಛಂದ ಗಾಳಿ. ಬಿಸಿಲೂ ತಂಪs  ಅನಸೂದು. ಎಷ್ಟು ತಿರುಗಾಡಿದ್ರೂ, ಎಲ್ಲಿ ನುಗ್ಗಿದ್ರೂ ಯಾರೂ ಕೇಳೋರಿಲ್ಲ, ಏನೂ ಅನ್ನೋವ್ರಿಲ್ಲ. ನಮ್ಮದೇ ಸಾಮ್ರಾಜ್ಯ. ನಾವ ಏನು ಮಾಡಿದ್ರೂ ಏಕಾಗ, ಆ ರೈತರಿಗೆ  ಅಕ್ಕರತೀನ ಭಾಳ.

ಏಕಾ  ಮಾಡೋ  ಬಿಳಿಜೋಳದ್ದು  ಮೆತ್ತಗಿನ  ಭಕ್ಕರಿ, (ಜೋಳದ ರೊಟ್ಟಿ)ಬೆಣ್ಣೆ, ಉಪ್ಪು ಹಚ್ಚಿ, ಇಲ್ಲಿ ನಮ್ಮ ತೋಟದಾಗ  ಹರಿಯೂ ಬಿಡಿಗಾವಲಿ  ನೀರಾಗ  ಕಾಲ ಇಳಿಬಿಟ್ಟು ಕೂತು, ಆ ಪೈರಿನ  ಮಧ್ಯ ಹಾರಾಡೋ ಹಕ್ಕಿ, ಪಕ್ಷಿ  ನೋಡಕೋತ  ತಿಂದ್ರ  ಯಾವ  ಹೋಳಿಗೆ ಊಟಾನೂ ರದ್ದು  ಅದರ ಮುಂದೆ.  ಈ ಸುಖಾ ಭರಪೂರ ಅನುಭವಿಸಿದವ್ರು ನಾನು ನಮ್ಮಣ್ಣ. ನನ್ನ ಹಿಂದೆನೇ ಹುಟ್ಟಿದ ಒಬ್ಬ ತಮ್ಮನೂ ಅದರಲ್ಲಿ ಪಾಲುದಾರ ಇದ್ರೂ ಸಿಂಹಪಾಲು ನಂದು, ನಮ್ಮಣ್ಣಂದು. ನಾನು ನಾಲ್ಕೈದು ವರ್ಷದಾಕಿ ಇದ್ದಾಗನಿಂದನ  ಹೋಗ್ತಿದ್ದೆ ನಮ್ಮಣ್ಣನ ಜೊತೆಗೆ. ನಮ್ಮ ಮಕ್ಕಳೆಲ್ಲಾ  ಇಂಥ ಸುಖಗಳಿಂದ  ವಂಚಿತರು ಅಂತ ಹಳಹಳಿ ನಂಗೆ. ಬರೀ ತೋಟಕ್ಕೆ ಹೋಗಿ ಬರೋದಲ್ಲ; ಅಲ್ಲೇ ಹತ್ತು, ಹದಿನೈದು ದಿನ ಮುಕ್ಕಾಂ  ಹೂಡಿ ಅನುಭವಿಸೋ ಸುಖಾ, ಮುದವೇ ಬ್ಯಾರೆ. ಈ ಸುಖಾ ನನ್ನ ಚಿಕ್ಕ ತಮ್ಮಂದಿರು, ತಂಗಿನೂ ನಮ್ಮಷ್ಟು ಸವಿದಿಲ್ಲ. ಬದಲಾಗೋ ಕಾಲಮಾನ!

ಅದರ ಜೊತೆಗೆನೇ  ನಮ್ಮ ಏಕಾನ  ಶ್ರಮಜೀವನ  ಅಲ್ಲೀದು ನೆನೆಸ್ಕೊಂಡ್ರೆ ಅಗಾಧ ಅನಸ್ತದ ನಂಗ.ಆಶ್ಟರ್ಯ ಅನ್ನೋದಕ್ಕೆ ಅರ್ಥವೇ ಇಲ್ಲ ಅಲ್ಲಿ. ಅದಕ್ಕೇ ಅಗಾಧ ಅಂದೆ. ಮುಂಜಾನೆ ಬೆಳ್ಳಿ ಚುಕ್ಕಿ ಮೂಡೋವಾಗಲೇ ಎದ್ದು, ತನ್ನ ಕೆಲಸಾ  ಮುಗಿಸಿ  ಹೊಲದ ತುಂಬ  ಅಡ್ಡಾಡಿ  ಬರೋದ್ರಿಂದ  ಆಕಿದು ಹೊರಗಿನ  ತೋಟದ ಕೆಲಸ ಸುರು ಆಗ್ತಿತ್ತು. ಕಣ್ಣು  ಹರಿದಷ್ಟು ದೂರಕ್ಕೂ ಚಾಚಿ ಹಾಸಿ ನಿಂತ ಹಸಿರು ತುಂಬಿದ ಹೊಲಗಳು; ಕಬ್ಬಿನ  ಗದ್ದೆಗಳು. ಏಕಾನ  ಹೃದಯ ತುಂಬಿ ಬರ್ತಿತ್ತು ಅನಸ್ತದ  ಅವನ್ನೆಲ್ಲಾ ಕಣ್ತುಂಬಿ ಕೊಂಡಾಗ.

ಅಷ್ಪ್ರಾಗ  ಆಳು ಕಾಳು, ರೈತರು ಎಲ್ಲಾ ಬರೋರು. ಅವರ  ಕೈಲಿ  ವ್ಯವಸ್ಥಿತವಾಗಿ  ಅಂದಿಗೆ  ಠರಾಸಿಟ್ಟ ಕೆಲಸ ಮಾಡಸೂದು; ಎಲ್ಲೂ ಯಾವ ಗೊಂದಲ ತೊಡಕಿನ  ಪ್ರಶ್ನೆನೇ ಇಲ್ಲ. ಆ ಮಟ್ಟದ  ಒಂದು ವ್ಯವಸ್ಥಿತ ರೀತಿ, ಉಸ್ತುವಾರಿ  ಯಾವ ಆಡಳಿತಗಾರರೇ  ಮಾಡ್ತಿದ್ರೋ ಇಲ್ಲೋ  ಅನಸೂ ಹಾಂಗ. ಆ ನಿಸರ್ಗದ ಮಡಿಲಲ್ಲಿ ಎಲ್ಲಾರೂ ಒಂದೇ; ಯಾವ ಭೇದ ಭಾವದ  ರಗಳೆ ಇರೋದಿಲ್ಲ  ಅಲ್ಲಿ. ಒಬ್ಬರು ಇನ್ನೊಬ್ಬರ  ಕಾಳಜಿ ತಗೋಳು ರೀತಿ ಒಂಥರಾ  ಆಪ್ಯಾಯಮಾನ ಅನಸ್ತಿತ್ತು.

ಹಂಗs ‌‌‌‌‌‌‌‌ರಾಯಪ್ಪ  ಬರೋಬ್ಬರಿ  ಹೊತ್ತು  ನೆತ್ತಿಗೆ ಬಂದ  ಕೂಡಲೇ  ಏಕಾಗ  ಹೇಳಾಂವ ;” ಅಕ್ಕಾಗೋಳ, ಹೊತ್ತು ನೆತ್ತಿಗೇರತ್ರಿ. ಊಟಾ  ಮಾಡಿ ಬರ್ರಿ  ಅಕ್ಕಾಗೋಳ” . ಆಗ ಆಕಿ ತಲೆ  ಎತ್ತಿ ಆಕಾಶ  ನೋಡಿ ವೇಳೆಯ  ಅಂದಾಜು  ಹಾಕಿ ಮನೆಗೆ  ಬಂದು  ಮತ್ತೊಮ್ಮೆ ತಣ್ಣೀರು ಸ್ನಾನ ಮಾಡಿ ಮಡಿ ಉಟ್ಟು  ಅಡಿಗೆ, ಸಣ್ಣಪೂಜೆ  ದೇವರದು ಮುಗಿಸಿ  ಊಟ.ಆ ಮೇಲೆ  ಅರ್ಧ ಗಂಟೆ  ವಿಶ್ರಾಂತಿ. ಮತ್ತೆ ಎದ್ದು ಹೊಲದತ್ತ. ಆಕೆಯ  ಜೀವ- ಜೀವನ  ಆ ಹೊಲ ತೋಟಗಳಲ್ಲೇ ಏಕರಸವಾಗಿ , ಏಕರೂಪವಾಗಿ ಹೋಗ್ತಿತ್ತು  ಅಲ್ಲಿದ್ದಾಗ. ರೈತರು-ರಾಣೇರು, ಆಳು ಕಾಳು, ಅವರವರ  ಹೆಂಡಿರು ಮಕ್ಕಳು,ಅವರ ಕಾಳಜಿ, ಅವರೊಡನೆ  ಜೊತೆಯಾಗಿ  ತಾನೂ  ದುಡಿಯೋದು ಇದೇ ಆಕೆಯ  ಜೀವನ ಅಲ್ಲಿದ್ದಾಗ. ಹುಕ್ಕೇರಿಗೆ  ಬಂದ್ರ ಮೊಮ್ಮಕ್ಕಳು, ಮನಿ, ಹಿತ್ತಲಾ ಅಂಗಳಾ,  ಅಲ್ಲಿರೋ  ಗಿಡಗಳು ಇವುಗಳಲ್ಲೇ  ಆಕೆ ಜೀವ.

ನಮ್ಮ ಅಣ್ಣಾ ಅಂದರೆ ನಮ್ಮ ತಂದೆ  ದಿನಕ್ಕೊಂದು  ಬಾರಿ  ತಮ್ಮ ಸ್ಕೂಲ್  ಕೆಲಸ  ಮುಗಿಸಿ ಕೊಂಡು  ಅಥವಾ ಬೆಳಿಗ್ಗೆ  ಬೇಗ ಎದ್ದು ಬಂದು ಹೋಗೋರು ಅಥವಾ ಹೋಗಿ ಬರೋರು ತೋಟಕ್ಕೆ. ಏಕಾನ  ಮಗ ಅವರು. ದಣಿವೆಂಬುದನು  ಅರಿಯದ  ಜೀವ  ನಮ್ಮ ಅಣ್ಣಾನದೂ. ಸುಗ್ಗಿ ಸುರು  ಆದಾಗ  ಬೆಳಿಗ್ಗೆ, ಸಂಜೆ  ಎರಡೂ  ಹೊತ್ತೂ  ಹೋಗಿ ಬರೋರು!

ನನಗೀಗ  ವಿಚಿತ್ರ ಆಶ್ಚರ್ಯ, ಜೊತೆಗೆ ಸಣ್ಣ ಹೆದರಿಕೆ- ಆ ತೋಟದ ಮನೆಯಲ್ಲಿ ಏಕಾ  ಒಬ್ಬಳೇ ಇರ್ತಿದ್ಲು. ಹೊರಗಿನ  ಗುಡಿಸಲನ್ಯಾಗ ಒಬ್ಬ ರೈತ, ಆತನ ಹೆಂಡತಿ ಮಲಗ್ತಿದ್ರು. ಆಜೂಬಾಜೂ  ಹೊಲಗಳಲ್ಲೂ  ಅಷ್ಟೇ; ಒಬ್ರು, ಇಬ್ರು ರೈತರು ಕಾವಲಿಗೆ. ಬಾಕೀ  ಎಲ್ಲಾರೂ ಸ್ವಲ್ಪ ದೂರದಲ್ಲಿದ್ದ ಊರೊಳಗಿನ  ಮನಿಗೆ ಹೋಗಿ ಬೆಳಿಗ್ಗೆ ಬರಾವ್ರು.

ಏಕದಂ ಪ್ರಶಾಂತ,  ಸ್ತಬ್ಧ, ನಿಶ್ಯಬ್ದ ಎಲ್ಲಾ ಕಡೆ. ಆಗ ಅಲ್ಲಿ  ಇನ್ನೂ  ವಿದ್ಯುತ್ ಸರಬರಾಜು ಇರಲಿಲ್ಲ. ಸೀಮೆ ಎಣ್ಣೆ  ದೀಪಾನೇ ಇರೋದು ಮನಿಯೊಳಗ. ಹೊರಗ ದಟ್ಟ ಕತ್ತಲು !  

ರಾತ್ರಿ  ಹೊರಗೆ ಬಂದು ನೋಡಿದ್ರ  ಎಲ್ಲಾ ಕಡೆ ಗವ್ವೆನ್ನೋ ಕತ್ತಲು; ಬೀಸೋ ಗಾಳಿಗೆ ಹೊಯ್ದಾಡೋ  ಪೈರು! ಕತ್ಲಾಗ  ನಾನಾ ನಮೂನೀ ಆಕಾರ  ತಾಳ್ತಿದ್ವು ಅವು. ನಮ್ಮ ಏಕಾನ  ಜೊತೆಗಾರರು  ಅವೆಲ್ಲಾ!

ಆ  ಜೀವಕ್ಕೆ  ಹೆದರಿಕೆ, ಅಂಜಿಕೆ ಗೊತ್ತೇ ಇರಲಿಲ್ಲ. ಏಕಾನ್ನ  ಕೇಳಿದ್ರ ನಕ್ಕಬಿಡ್ತಿದ್ಲು . ” ಇವೆಲ್ಲಾ  ನಮ್ಮ ಹಾಂಗ  ಮಾತ ಮಾತಿಗೆ ಸಿಟ್ಟು ಸೆಡವು, ಜಗಳ ತಕರಾರು ಅರಿಯದ  ಸಂತೃಪ್ತ, ಪ್ರಶಾಂತ ಜೀವಗಳು. ಇವರ ಜೋಡಿ ಇದ್ರ ನೂರ  ಆನಿ  ಬಲಾ  ಇದ್ದಹಾಂಗ!  ಎದೀತುಂಬ  ಅನನ್ಯ ತೃಪ್ತ, ಭಾವ  ಬಾಳಾ” ಅಂತಿದ್ಲು ಏಕಾ. ಖರೇನ  ಅದು.

ಏಕಾನ  ಜೋಡಿ  ಅಲ್ಲಿದ್ದಾಗ  ಯಾವ  ಅಂಜಿಕೆ  ನಮ್ಮ ಸನಿಹಕ್ಕೂ  ಸುಳೀತಿರಲಿಲ್ಲ. ಆ  ಅಡವ್ಯಾಗಿನ ಮನ್ಯಾಗ  ನಾವಷ್ಟೇ  ಇದ್ದೀವಿ  ಅನೂದು  ನೆನಪು ಸುದ್ಧಾ  ಇರತಿರಲಿಲ್ಲ. ಅಷ್ಟು ಭರವಸೆ  ತುಂಬಿಸುವ  ಗಟ್ಟಿ ಜೀವ  ನಮ್ಮ ಏಕಾ. ಸಾಲಿ  ಶುರು ಆತಂದ್ರ  ನಮ್ಮ ಮರು ಪಯಣ ಹುಕ್ಕೇರಿ ಕಡೆ;  ಹಿಂದ ಬಿಟ್ಟು ಬಂದ  ಆ ಹೊಲ ಗದ್ದೆ;  ಮನಿ ಮುಂದ  ನಮ್ಮ ಚಕಡಿ  ಕಾಣೂತನಕ ‌‌‌‌‌‌‌ನಿಂತ  ಏಕಾ,  ಅದೆಲ್ಲಾ ಅಲ್ಲೇ ಬಿಟ್ಟು ಹಿಂದ ನೋಡಕೋತನs  ಮುನ್ನಡೆದ  ಚಕಡಿಯೊಳಗ ನಾವು !  ಥೇಟ್ ನಮ್ಮ ಜೀವನ ಪಯಣಧಾಂಗನ ಅದೂ  ಅಂತದ  ನನ್ನ ಜೀವ  ಈಗ.

ಖರೇನ  ನಮ್ಮ ಏಕಾ ಭಾಳ ಸಮರ್ಥ ಇದ್ಲು ಎಂಥಾ  ಪ್ರಸಂಗ  ಬಂದ್ರೂ ನಿಭಾಯಿಸಲಿಕ್ಕೆ; ದಿನ ನಿತ್ಯದ  ದೇಖರೇಖಿ  ಸಂಭಾಳಸೂದ್ರಾಗೂ. ರೈತರು, ಆಳು ಕಾಳು ಎಲ್ಲಾ ತಗ್ಗಿ ಬಗ್ಗಿ ನಡ್ಯಾವ್ರು. ಒಂದೇ ಒಂದು  ಕಡ್ಡಿ  ಆಕಡೆ ಈಕಡೆ  ಆಗೋದು ಸಾಧ್ಯನ  ಇರಲಿಲ್ಲ. ಹೊಲದ ಬಾಂದಿನ  ಮ್ಯಾಲೆ ಕಾಲೂರಿ ನಿಂತು  ದೂರ ತನಕಾ  ಕೈ ತೋರಿಸಿ  ರೈತರಿಗೆ  ಕೆಲಸಾ ಹೇಳೂ ಗತ್ತು  ಇಂದಿಗೂ ಕಣ್ಣಾಗ ನಟ್ಟ ಹಾಂಗ  ನಿಚ್ಚಳ  ಆಗೇ ಅದ. ಜೊತೆಗೆ  ನಮ್ಮ ಅಂಬಕ್ಕಜ್ಜಿ  ಹೇಳೂ  ಮಾತು ಕಿಂವ್ಯಾಗ  ಕೇಳ್ತನ ಇರ್ತದ.;” ಅಂಥಾ  ಸಣ್ಣ ವಯಸಿನ್ಯಾಗ  ಹೊಲದ ಬಾಂದ  ಮ್ಯಾಲೆ ಕಾಲಿಟ್ಟು ಆಳು ಮಕ್ಕಳ ಕಡೆ  ಕೆಲಸಾ  ತಗೋಳುವಾಗ  ಹೊಲತುಂಬ  ಸೋನವ್ವನ  ಆ ಠೀವಿಯ ಬೆಳಕು ಬೀಳ್ತಿತ್ತೇನೋ ಅನಸ್ತದ ” ಅಂತ  ಹೇಳ್ತಿದ್ಲು ಅಂಬಕ್ಕಜ್ಜಿ. ಆಕಿ ‌‌ಆ ಠೀವಿ, ಗತ್ತು ನೋಡಿದ್ರ ಯಾವ ದರ್ಬಾರ್ ಕೂ  ಕಮಿ ಇರಲಿಲ್ಲ. “ಬಾಯಿ ಸಾಹೇಬ್” ಸಂಬೋಧನೆ  ಆಕೀಗೆ ಹೇಳಿ ಮಾಡಿಸಿದ್ದು, ಅನ್ವರ್ಥಕ  ಅನ್ನಿಸೋದು.

ಆದರೆ  ನಮ್ಮಜ್ಜ  ತೀರಿಕೊಂಡ ಮೇಲೆ  ಆಕೆ ಯಾರ  ಕಡಿಂದನೂ  ಬಾಯಿ ಸಾಹೇಬ ಅನಿಸಿಕೋಲಿಲ್ಲ. ಮಡಿ ಹೆಂಗಸಾದ ಮ್ಯಾಲೆ ಅದನ್ನ ಸಂಪೂರ್ಣ ತ್ಯಜಿಸಿ, ಆ ಹಂಗು ತೊರೆದನ ಆಕಿ ಹೊರಗ  ಕಾಲಿಟ್ಲು. ಉಳಿದ ಸುಖಗಳ  ಜೊತೆ  ಆ  ಹೆಸರನ್ನೂ  ಕಾಯಂ ತರೀಕ  ತ್ಯಜಿಸಿ  ನಡದ್ಲು. ರೈತ ಮಕ್ಕಳಿಗೆಲ್ಲ ಅಗದೀ ಸರಳ ಆಗಿ 

“ಅಕ್ಕಾಗೋಳ” ಆಗಿ ಬಿಟ್ಲು.

ಮಾಟ  ಹೆಂಗಸಾದ  ಏಕಾ ಬೆಟ್ಟದಷ್ಟೆತ್ತರಕ   ಬೆಳೆದು  ಬೆಟ್ಟದಷ್ಟೇ ಗಟ್ಟಿ ಆಗಿ  ಬಿಟ್ಲು ನಮ್ಮ ಏಕಾ! ಆ ಚಿಕ್ಕ ವಯಸ್ಸಿಗೇ  ಆಕೀ ಬಾಳನ್ನು ನಿರರ್ಥಕವಾಗಿಸಿದ  ವಿಧಿಯತ್ತ ನಿರ್ಲಕ್ಷ್ಯದ ಧೋರಣೆ  ತೋರಿಸಿ, ಆ  ನಿರರ್ಥಕತೆಯಲ್ಲೇ  ಸಂಪೂರ್ಣ  ಅರ್ಥ ತುಂಬಿಸಿ ಸಾರ್ಥಕತೆ  ಕಂಡು ಕೊಂಡವಳು ನಮ್ಮ ಏಕಾ ಒಂದೂ ಮಾತಾಡದೆಮೌನವಾಗಿಯೇ ! ದೊಡ್ಡ ಜೀವ ಅದು!

|ಇನ್ನು ಮುಂದಿನ ವಾರಕ್ಕೆ|

‍ಲೇಖಕರು Admin

June 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ramesh pattan

    ದಿಟ್ಟ ಹೆಣ್ಣು ಮಗಳು
    ಏಕಾ ಅಕ್ಕಾಗೋಳರನ್ನು ಒಮ್ಮೆ ಕಣ್ಣಾರೆ ನೋಡಬೇಕಿತ್ತು.
    ಅವರ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸಬೇಕಿತ್ತು
    ಎಂದು ಆಸೆಯಾಗುತ್ತಿದೆ.
    ರಮೇಶ ಪಟ್ಟಣ.
    kalaburagi

    ಪ್ರತಿಕ್ರಿಯೆ
  2. Sarojini Padasalgi

    ನೀವು ಬರೆದದ್ದು ಓದಿ ಎದೆ ತುಂಬಿ ಕಣ್ಣಂಚಲಿ ತುಳುಕಿತು ಸರ್. ಹೌದು ಹಾಗೇ ಇತ್ತು ಆಕೆ ವ್ಯಕ್ತಿತ್ವ ಇಂದಿಗೂ ನನ್ನೆದೆಯ ಜೀವಜಲವಾಗಿ.ಧನ್ಯವಾದಗಳು ಸರ್.
    ಜೊತೆಗೆ ಅವಧಿಗೂ ಅನೇಕ ಧನ್ಯವಾದಗಳು.

    ಪ್ರತಿಕ್ರಿಯೆ
  3. Shrivatsa Desai

    ಒಂದು ಕಂತಿನಿಂದ ಮುಂದಿನ ಕಂತಿಗೆ ಬರುವಷ್ಟರಲ್ಲಿ ‘ಏಕಾ’ ಬಹುದಾ ಶಕ್ತಿಯ ಬಲಶಾಲಿಯಾಗುವ ಪರಿ ನೋಡಿದೆವು ಈಗ. ” ಮಾಟ ಹೆಂಗಸಾದ ಏಕಾ ಬೆಟ್ಟದಷ್ಟೆತ್ತರಕ ಬೆಳೆದು ಬೆಟ್ಟದಷ್ಟೇ ಗಟ್ಟಿ ಆಗಿ ಬಿಟ್ಲು”ಎಂದು ಅನಾಡಂಬರ ಭಾಷೆಯಲ್ಲಿ ಬರೆಯುವ ಲೇಖಕಿಯ ‘ಬೆಳಸಿ- ಶೀತನೀ ‘ ಡಬುಗಾಯಿ ಉಂಡ ಸುಖ ಓದಿ ಒಂದು ತರದ ಅಸೂಯೆ. ಈ ಶೈಲಿಯಲ್ಲಿ ಆಗಿನ ನೈಜ. ಘಟನೆಗಳನ್ನು ವರ್ಣಿಸಬಲ್ಲರು. ಈಗ ದುರ್ಲಭರೇ, ಎನ್ನುವ ಮತ ನನ್ನದು.!

    ಪ್ರತಿಕ್ರಿಯೆ
  4. ಶೀಲಾ ಪಾಟೀಲ

    ” ಏಕಾ” ಅವರ ವ್ಯಕ್ತಿತ್ವ ಕಣ್ಣಗೆ ಕಟ್ಟುವಂತೆ ಮೂಡಿಬಂದಿದೆ. ಡಬಗಾಯಿ , ಸುಟ್ಟ ಗೊಂಜಾಳತೆನಿ ವರ್ಣನೆ ಸವಿದ ಅನುಭವ ಉಂಟುಮಾಡಿತು. ಸುಂದರ ಶೈಲಿಯು ಮುಂದಿನ ಅಂಕಣದ ನಿರೀಕ್ಷೆಯಲ್ಲಿರುವಂತೆ ಮಾಡಿದೆ

    ಪ್ರತಿಕ್ರಿಯೆ
    • Sarojini Padasalgi

      ಧನ್ಯವಾದಗಳು ಶೀಲಾ ಅವರೇ. ಹೌದು ಶೀಲಾ ಆ ದಿನಗಳ ಆ ಸವಿ ನೆನಪು ಚಿರಂತರ, ಚಿರನೂತನ.

      ಪ್ರತಿಕ್ರಿಯೆ
  5. Sarojini Padasalgi

    ಖರೇನ್ರೀ ಶ್ರೀವತ್ಸ ದೇಸಾಯಿಯವರೇ, ನಮ್ಮ ಏಕಾ ಸದ್ದಿಲ್ಲದೆ ಬೆಳೆದು ಮಾಗಿದ ರೀತಿ ಅಗಾಧ,‌‌
    ಹಾಗೇ ಆ ಡಬಗಾಯಿ ಗೆಣಸು, ಗೊಂಜಾಳ ಅವುಗಳ ರುಚಿನೂ ಅಪರೂಪದ. ತಪ್ಪದೇ ಬರುವ ನಿಮ್ಮ ಅನಿಸಿಕೆ ಪ್ರೋತ್ಸಾಹ ದ ಝರಿ ನನಗೆ. ಅನಂತ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: