ಸರೋಜಿನಿ ಪಡಸಲಗಿ ಅಂಕಣ- ಏಕಾನೂ ಅಜ್ಜಾನ ಜೋಡಿ ಜಗಳಾಡಿದ್ಲಂತ…

‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

2


ಏಕಾನೂ ಅಜ್ಜಾನ ಜೋಡಿ ಜಗಳಾಡಿದ್ಲಂತ…

ಮನಿ  ಅಂದ ಮೇಲೆ  ಒಂಚೂರು ಜಗಳ, ಒಂಚೂರು ಮಾತುಕತೆ, ಒಂಚೂರು ವಾದ-ವಿವಾದ ಎಲ್ಲಾ  ಇರೋದೇ. ಹಂಗs  ನಮ್ಮನಿಯೊಳಗೂ ಆವಾಗಾವಾಗ  ನಮ್ಮವ್ವ ಮತ್ತು ಅಣ್ಣಾಂದು  ಜೋರ  ಜೋರ  ಮಾತು ಕತಿ  ನಡದಿರತಿತ್ತು. ನಮ್ಮ  ಅಣ್ಣಾ ಅಂದರೆ ನಮ್ಮ ತಂದೆ  ಒಂಚೂರು ಸಿಟ್ಟಿನವರೇ.ಅವರದು ಅಷ್ಟೇ  ಹೆಂಗರಳೂ  ಹೌದು. ಭಾಳ  ಭಾವುಕರು  ಅವರು. ಹಂಗೇ  ಭಾಳ  ಕಟ್ಟು ನಿಟ್ಟಿನ  ಮನುಷ್ಯರು. ಸಾಲಿ ಬಿಟ್ಟು ಬಂದು, ಹಾಲು – ತಿಂಡಿ  ಮುಗಿಸಿ  ಆಡಲಿಕ್ಕೆ  ಹೋದ  ಮಕ್ಕಳು  ಆರೂವರೆ ಠೋಕೆ  ಬೀಳೋಷ್ಟೊತ್ತಿಗೆ  ಮನಿ ಒಳಗ  ಇರಲಿಕ್ಕೆ ಬೇಕು. ತಮ್ಮ ತಮ್ಮ  ಅಭ್ಯಾಸದಲ್ಲಿ  ತೊಡಗಿರ ಬೇಕು. ಅವರ ಈ ಶಿಸ್ತು, ಕಟ್ಟುನಿಟ್ಟು  ಒಮ್ಮೊಮ್ಮೆ ಅವ್ವಾ- ಅಣ್ಣಾನ  ಪುಟ್ಟ ಪುಟ್ಟ ಜಗಳಕ್ಕೆ ಕಾರಣ ಆಗ್ತಿತ್ತು.

ನಾ ಬಹುಶಃ  ಆರನೇ  ಕ್ಲಾಸ್ ನಲ್ಲಿರಬೇಕು  ಆಗ.  ನನಗೆ  ಯಾಕೆ  ಆ  ಪ್ರಶ್ನೆ  ತಲಿಯೊಳಗೆ  ಬಂತೋ  ಗೊತ್ತಿಲ್ಲಾ. ಓಡಿ ಹೋಗಿ  ‘ಏಕಾ, ಏಕಾ’ ಅಂತ  ಆಕೀ  ಮುಂದೆ ನಿಂತೆ.  ಏನೋ  ಕೆಲಸದಲ್ಲಿ  ಮುಳುಗಿದ್ದ ಏಕಾ  ನನ್ನ ಕಡೆ  ತಿರುಗಿ  ನೋಡಿ ” ಏನ  ಅಕ್ಕವ್ವಾ’ ಅಂದ್ಲು. ಅಂದ ಹಾಗೆ  ಇಲ್ಲೊಂದು ಸಣ್ಣ ವಿಷಯ ಹೇಳ್ತೀನಿ. ಏಕಾ ನನಗೆ  ‘ ಅಕ್ಕವ್ವಾ’ ಅಂತಿದ್ಲು. ಅದು  ಎಲ್ಲರ ಮಾತಿನಲ್ಲಿ  ಅಕ್ಕಣ್ಣಿ, ಅಕ್ಕಾ, ಅಕ್ಕಮ್ಮ  ಆಗಿ ಬಿಟ್ಟಿತ್ತು. ಅದಕ್ಕೂ  ಒಂದು ಕತೆ  ಹೇಳ್ತಿದ್ಲು  ಆಕೆ.   ನಮ್ಮಣ್ಣ  ಹುಟ್ಟಿದ ಮೇಲೆ  ನಮ್ಮವ್ವನಿಗೆ  ಮೂರು ಬಾರಿ  ಗರ್ಭ  ಇಳಿದು ಹೋಯ್ತಂತೆ. ಏಕಾಗ  ಯಾಕೋ ಗಾಬರಿ ಆತಂತ, ಏನೇನೋ  ವಿಚಾರ ತಲೀ ಒಳಗ. ನಾ ಹಿಂದೆ ಬರೆದ ಹಾಗೆ  ನಮ್ಮ ಏಕಾ  ನಮ್ಮ ಅಜ್ಜಾನ ಎರಡನೇ ಹೆಂಡತಿ. ಮೊದಲನೇ ಹೆಂಡತಿ ಆರೋಗ್ಯ  ಸರಿ ಇಲ್ಲದೆ, ಮಕ್ಕಳಾಗದೇ  ತೀರಿಕೊಂಡಳಂತೆ.  ಆ ಮ್ಯಾಲೆ ರಾವ್ ಸಾಹೇಬರ ಎರಡನೇ  ಹೆಂಡತಿಯಾಗಿ  ಏಕಾ ಅವರ ಮನೆ ತುಂಬಿದಳಂತೆ. ಅದಕ್ಕ ಆಕೀಗೆ ಈಗ ನಮ್ಮವ್ವಗ ತ್ರಾಸ  ಆಗಲೀಕ್ಹತ್ತೀದ ಕೂಡಲೆ ತನ್ನ  ಸವತಿ  ನೆನಪಾಗಿ, ಮತ್ತೆ  ನಮ್ಮವ್ವಗ  ಗರ್ಭ ನಿಂತಾಗ ನಮ್ಮ ಏಕಾ ತನ್ನ  ಸವತಿಗೆ ಬೇಡ್ಕೊಂಡಳಂತೆ -” ಗಂಡರ ಹುಟ್ಟಲಿ, ಹೆಣ್ಣರ ಹುಟ್ಟಲಿ  ಕೂಸಿಗೆ  ನಿನ್ನ  ಹೆಸರs‌ ಇಡ್ತೀನವಾ. ಹೆಣ್ಣ ಹುಟ್ಟಿದರ ಅಕ್ಕಾ ಅಂತನs  ಕರೀತೀನಿ. ಒಟ್ಟ ಎಲ್ಲಾ ಸುಸೂತ್ರ ಆಗಲಿ ನಮ್ಮವ್ವಾ” ಅಂತ. ಆ ಮ್ಯಾಲೆ ನಾ ಹುಟ್ಟಿದ್ದು. ಅದಕ್ಕ ಏಕಾ  ನನಗೆ ಅಕ್ಕಾ, ಅಕ್ಕವ್ವ ಅಂತನೇ  ಕರೀತಿದ್ಲು.

ಅದಕ  ಆಕಿ ನಾ ಓಡಿ ಬಂದು ಆಕಿ ಮುಂದೆ  ನಿಂತ ಕೂಡಲೇ ” ಏನ ಅಕ್ಕವ್ವಾ ” ಅಂತ  ಕೇಳಿದ್ದು. ನಾ ನನ್ನ ತಲೀಯೊಳಗ  ಹುಟ್ಟಿತ್ತಲಾ ಆ ಪ್ರಶ್ನೆ ಕೇಳ್ದೆ  ಆಕೀಗೆ;” ಏಕಾ,  ನೀ ಅಜ್ಜಾನ ಜೋಡಿ ಜಗಳಾಡ್ತಿದ್ದೇನ  ಅವ್ವಾನ್ಹಂಗ ” ಅಂದೆ. ಅದಕ್ಕ ಆಕೆ ,” ಜಗಳಾಡ್ಲಿಕ್ಕೆ  ವ್ಯಾಳ್ಯಾ  ಎಲ್ಲಿತ್ತ  ಅಕ್ಕವ್ವಾ” ಅಂದ್ಲು. ಆಗ  ನನಗದರ  ಮಾರ್ಮಿಕತೆ,  ಆ ನೋವು  ಅರ್ಥ  ಆಗಿರಲಿಲ್ಲ. ಈಗ ಅರ್ಥ ಹೊಳೆದು  ಎದೆ ತುಂಬಿ ಬಂದ ನೋವಿನ್ಯಾಗ ಅನಕೋತೀನಿ ;  ಎರಡೂವರೆ , ಮೂರು ವರ್ಷಗಳ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಸಂಸಾರದಾಗ  ಏನ ಜಗಳಾಡ್ಯಾಳು, ಯಾವಾಗ ಜಗಳಾಡ್ಯಾಳು ಅಂತ. ಆದರ  ಆಗ ಆ ಅಬೋಧ ವಯಸ್ಸಿನ್ಯಾಗ  ನಾ ಕೇಳಿದ್ದೆ ;” ಯಾಕ,  ಅಜ್ಜಾ ಮನ್ಯಾಗ  ಇರತಿರಲಿಲ್ಲೇನು ?”  ಅದಕ್ಕೇನೂ ಹೇಳಲಿಲ್ಲ  ಆಕಿ. ಮತ್ತ ಎರಡ ನಿಮಿಷ ಬಿಟ್ಟು ಹೇಳಿದ್ಲು ,” ಅಕ್ಕವ್ವಾ ಒಂದು ಸಲ ಜಗಳಾಡೀನ ನೋಡ. ಅಷ್ಟದಿನದ್ದು ಬಾಕಿ ತೀರಸೂ ಹಂಗ” ಅಂದ್ಲು. ” ಆ ಸುದ್ದಿ  ಹೇಳಲಾ ಮತ್ತ ” ಅಂದೆ. 
” ನಿನಗೆ  ತಿಳ್ಯೂದಿಲ್ಲ  ಬಾಳಾ”  ಅಂದ್ಲು ಆಕಿ. ನಾ ಬಿಡಲಿಲ್ಲ. ‘ ನೀ ಹೇಳು. ನನಗೆಲ್ಲಾ  ತಿಳೀತದ ‌‌’ ಅಂದೆ  ಹಟದ ಧ್ವನಿಯೊಳಗ. ಖರೇ ಅಂದ್ರ ಆಗ ನನಗ  ಅಷ್ಟು ಪೂರಾ  ಅರ್ಥ ಆಗಿದ್ದಿಲ್ಲ. ಆದರ ಏಕಾ  ಅಗದೀ  ತುಂಬಿ  ಬಂದ ಧ್ವನಿಯಲ್ಲಿ  ಸಾವಕಾಶ ಹೇಳಿದ ಕತೆಯ  ಪ್ರತಿ ಅಕ್ಷರ  ಕೊರದ ಹಾಂಗ  ನನ್ನ ಮನಸಿನ್ಯಾಗ  ಅಚ್ಚೊತ್ತಿ ಕೂತ ಬಿಟ್ಟಿತ್ತು. ನಾ ಅದನ್ನ  ಆಗಾಗ ಮೆಲಕ  ಹಾಕ್ತಿದ್ದೆ ನನಗs  ಗೊತ್ತಾಗಧಾಂಗ. ಯಾವಾಗ ಅದು ಪೂರ್ತಿ ಅರ್ಥ ಆತೋ  ಆಗ  ನನ್ನ ಕಣ್ಣೀರ ಕೋಡಿ ಒಡೆದಿತ್ತು. ಇಂದೂ ಆ ದಿನ ನೆನಪಾದಾಗ ನನ್ನ ಕಣ್ಣೀರು  ಇಂಗುದೇ ಇಲ್ಲ. ವಿಧಿ  ಕ್ರೂರ ಅನೂದು  ಖರೇನ  ಅನಸ್ತದ. ಒಬ್ಬೊಬ್ಬರ  ಜೀವನದಾಗ  ಒಂದೊಂದು  ನಮೂನಿ  ಆಟ  ಅದರದು. ಏಕಾ ಹೇಳಿದ  ಜಗಳದ  ಕಥಿ, ಆ ಕಥಿ  ನಂತರದ  ಕಥಿ  ಕೇಳಿದ ಮ್ಯಾಲೆ ಹೆಚ್ಚು ಗದ್ದಲ  ಇಲ್ಲದನ  ಕತ್ತಲ ತುಂಬಿದ  ತನ್ನ  ಬಾಳ ದಾರಿಯಲಿ ತಾನs ಹೆಂಗ  ಧಡಪಡಿಸಿ  ಒಂದು  ಬೆಳಕಿನ ಹಾದಿ  ಕಂಡಕೊಂಡಳೋ ಅದು  ಇಂದಿಗೂ  ಆಗಾಧ   ಅನಿಸ್ತದ ನಂಗೆ. ಅದೂ  ಆ ಕಾಲಮಾನದ ಘಟ್ಟದಲ್ಲಿ!;  ಹೆಣ್ಣನ್ನು ನೋಡುವ ದೃಷ್ಟಿ ಕೋನವೇ ಬೇರೆ ಇದ್ದ, ಆಕೆಗಾಗಿಯೇ ಕಟ್ಟಳೆಗಳಿರುವ  ಸಮಾಜದಲ್ಲಿ!

ಹೂಂ , ನಮ್ಮ ಏಕಾನೂ  ಅಜ್ಜಾನ  ಜೋಡಿ ಒಮ್ಮೆ  ಜಗಳಾಡಿದ್ಲಂತ.

ದಿನಾಲೂ ಸಂಜಿ  ಚಹಾ ಮುಗಿಸಿ  ಐದೂವರೆ ಹೊತ್ತಿಗೆ  ತಯಾರಾಗಿ  ನಮ್ಮಜ್ಜ  ಗಾಳಿ ಸೇವನೆಗೆ ಹೋಗೋ ರೂಢಿ  ಇಟ್ಕೊಂಡಿದ್ರಂತೆ. ರಾತ್ರಿ ಎಂಟರ  ಸುಮಾರಿಗೆ  ಬರೋದು, ಆಮೇಲೆ  ರಾತ್ರಿ ಊಟ ಮುಗಿಸಿ  ಓದೋದು  ಸ್ವಲ್ಪ ಹೊತ್ತು ಆಮೇಲೆ  ಮಲಗೂದು  ಹೀಂಗ ಅವರ   ಪದ್ಧತಿ  ಇತ್ತು. ಆ ದಿನ ಸಂಜೆ ಆರು ಗಂಟೆ ಸುಮಾರಿಗೆ, 
” ಬಾಯಿ ಸಾಹೇಬ್(ನಮ್ಮಜ್ಜ ಏಕಾನ್ನ ಹಂಗೇ ಕರೀತಿದ್ರಂತ) ನಾ ಹೋಗಿ  ಬರ್ತೀನಿ. ಬಾಗಲಾ ಬಂದ  ಮಾಡ್ಕೋರೀ”  ಅಂತ ಹೇಳಿ ಹೋದ್ರು. ದಿನದ  ಹಾಂಗ ಹೋದಾವ್ರು ಮುಂದೆ ಒಂದೇ ತಾಸಿನಲ್ಲಿ ತಿರುಗಿ  ಬಂದ್ರು.

ನಮ್ಮ ಅಣ್ಣಾಗ  ಪುರೋಚಿ ಅಂದ್ರ  ಅಗದೀ ಸಣ್ಣ ಮಕ್ಕಳಿಗೆ  ಹೇಳೂ ಆರಂಭಿಕ  ಅಭ್ಯಾಸ ( ಮುಂದೆ ಇದರ ಬಗ್ಗೆ ವಿವರ ಕೊಟ್ಟೀನಿ) ಹೇಳಕೋತ, ಎರಡನೇ ಮಗು  ಸಣ್ಣದು ಮೂರು ತಿಂಗಳ ಕೂಸಿನ್ನ  ತೊಡಿ ಮ್ಯಾಲೆ ಹಾಕೊಂಡು ಕೂತಿದ್ದ ಏಕಾ, ಲಗೂನ ಬಂದ  ನಮ್ಮಜ್ಜನ್ನ  ನೋಡಿ    ” ಯಾಕ  ಇಷ್ಟ ಲಗೂನ  ಬಂದ್ರೆಲಾ ” ಅಂತ  ಸಹಜ ಕೇಳಿದ್ರ  ನಮ್ಮಜ್ಜ  ಗಾಬರಿ  ಆಗೂ ಹಂಗs‌  ಉತ್ತರಾ  ಕೊಟ್ರಂತ. ” ಇಲ್ಲಾ, ಯಾಕೋ  ಅಷ್ಟ ತಬ್ಬೇತ  ಬರೋಬ್ಬರಿ ಇಲ್ಲ. ಪ್ರಕೃರ್ತಿ  ಬಿಗಡಾಸೇದ. ಸಮಾಧಾನ  ಅನಸವಲ್ಲತು. ಏನೋ ಕಸಿವಿಸಿ ಆಗ್ತದ. ತಿಳೀವಲ್ಲತು ಏನೂ ” ಅಂದ್ರು. ” ಒಂಚೂರ  ಅಡ್ಡಾಗಿ  ಏಳ್ರಿ. ಆರಾಮ ಅನಸ್ತದ. ಆಮ್ಯಾಲೆ ಊಟಾ  ಮಾಡಾಕ್ರೆಂತ. ನಾ ಅನ್ನಕ್ಕಿಟ್ಟು  ಬರ್ತೀನಿ” ಅಂತ ಎದ್ದು  ಹೋಗಿ  ಶೇಗಡಿ ಹೊತ್ತಿಸಿ  ಅನ್ನಕ್ಕಿಟ್ಟು ಬಂದ್ಲು ಏಕಾ. ನಮ್ಮಣ್ಣಾ  ಇನ್ನೂ ತಮ್ಮವ್ವ  ಹಾಕಿಕೊಟ್ಟ  ಅಕ್ಷರ  ತೀಡೂದ್ರಾಗ  ಮಗ್ನ ಆಗಿದ್ರಂತ. ನಮ್ಮಜ್ಜ ಅಲ್ಲೇ ಮಂಚದ  ಮ್ಯಾಲೆ  ಮಲಗಿದವ್ರು ಮಗ್ಗುಲಾಗಿ, ” ಇಕಾ, ಇಲ್ನೋಡ, ಈ ನಿನ್ನ ದೊಡ್ಡ  ಮಗಾನs ನಿನಗ  ಬೆಳಕ ತೋರಸಾಂವ. ತಿಳೀತಿಲ್ಲೋ? ಶಾಣ್ಯಾ ಇದ್ದಾನ. ಅಂವಗ  ಛಂದ ಹಾಂಗ ಓದಸು. ಕಲಿಸಿ  ಶಾಣ್ಯಾನ್ನ  ಮಾಡು. ನಮ್ಮ ಮನೆತನಾ  ಮುಂದಕ  ತರಾಂವಾ  ಅವನs ” ಅಂತ ಹೇಳಿದಾಗ  “ಅಯ್ಯ ಹಂಗ್ಯಾಕ  ಮಾತಾಡ್ತೀರಿ? ನಾ ಏನ ಮಾಡೇನು  ಹೆಣ್ಣ ಹೆಂಗಸು. ನಿಮ್ಮಂಥ ರಾವಸಾಹೇಬ್ರ ಅವನ  ಅಪ್ಪ ಇದ್ದಾಗ  ಅಂವಗೇನ ಕಮ್ಮಿ” ಅಂತ ಹೇಳಿ, ಸ್ವಲ್ಪ ಬೇಸರದಲೇ” ಏನರೇ ಅಪದ್ಧ ಮಾತಾಡಬ್ಯಾಡ್ರಿ” ಅಂತ ಅಂದ್ಲು ಏಕಾ.

ಉತ್ತರಾ  ಕೊಡ್ಲಿಕ್ಕಾಗದ  ನಮ್ಮಜ್ಜ ‘ ಯಾಕೋ ಹೊಟ್ಟಿಯೊಳಗ ಗುಡು ಗುಡು  ಅನ್ಲಿಕ್ಹತ್ತೇದ  ನೋಡು. ಒಂಚೂರ ಹಿತ್ತಲ ಕಡೆ  ಹೋಗಿ ಬರ್ತೀನಿ ‘ ಅಂತ  ಹೋದಾವ್ರು ನಿರ್ವಿಣ್ಣಾಗೇ  ಬಂದ್ರಂತ  ರಾವ್ ಸಾಹೇಬ್ರು.
” ತಿನ್ನೂದ್ರಾಗ ಏನರೇ  ಹೆಚ್ಚ ಕಡಮಿ  ಆಗಿರ ಬೇಕ ನೋಡ. ಬರೀ ನೀರಿನ್ಹಾಂಗ  ಶೌಚಕ್ಕ  ಆತು’ ಅಂತ ಹೇಳಿ  ಮಂಚದ ಮೇಲೆ ಹೊರಳಿದ್ರಂತ.  ಮತ್ತ ಭಡಕ್ಕನೆ  ಎದ್ದಾವ್ರು  ಡಬಡಬಾಂತ  ವಾಂತಿ  ಮಾಡ್ಕೊಂಡ್ರು.
 ಮೂರು ತಿಂಗಳ ಬಾಣಂತಿ ನಮ್ಮ ಏಕಾ. ಆಕೀ ಅವ್ವ ಊರಿಗೆ ವಾಪಸ್ಸ ಹೋಗಿ ಒಂದು ವಾರ  ಆಗಿತ್ತಷ್ಟೇ. ಆಷಾಢ ಮಾಸದ ಗಾಳಿ  ದಿಕ್ಕ ಹಾರಿ ಬೀಸಲಿಕ್ಹತ್ತಿತ್ತು. ರಾತ್ರಿ ಹೊತ್ತು. ಯಾಕೋ ಗಟ್ಟಿ ಹೆಂಗಸು ಆದ ನಮ್ಮ ಏಕಾಗೂ ಒಂಚೂರ  ಹೆದರಿಕೆ ಆತು ಮತ್ತ ಸುಧಾರಿಸಿ ಕೊಂಡು, ಕೂಸಿನ್ನ  ತೊಟ್ಟಿಲದಾಗ  ಮಲಗಿಸಿ,” ಸ್ವಲ್ಪ  ನಿಂದರ್ರಿ. ನಿಂಬಿಹಣ್ಣಿನ  ಶರಬತ್ತು  ಮಾಡ್ಕೊಂಡ ಬರ್ತೀನಿ. ಪಿತ್ತ ಆಗಿರಬೇಕು. ಹಂಗs‌  ಮೊರಳನೂ (ಸಕ್ಕರೆ ಪಾಕದಲ್ಲಿ ಬೇಯಿಸಿದ ಬೆಟ್ಟದ ನೆಲ್ಲಿಕಾಯಿ) ತರತೀನಿ.” ಅಂತ ಹೇಳಿ  ಒಳಗೆ ಹೋಗಿ  ಶರಬತ್ತು, ಮೊರೋಳ  ತಗೊಂಡು ಬರೂದ್ರಾಗ  ಮತ್ತ  ಹಿತ್ತಲ ಕಡೆ  ಹೋಗಿ  ಬಂದ್ರಂತ  ಅಜ್ಜ. ಪಾನಕಾ ಕುಡದ್ರೂ  ದಕ್ಕದೇ ಮತ್ತೆ  ವಾಂತಿ ಆಯ್ತು.
‘ ಹೀಂಗ  ಇದು ಸುರೂನ ಆತ  ಅಕ್ಕವ್ವಾ’ ಅಂದ್ಲು ಏಕಾ. ನಾ ಆಕೀ ಮಾರಿ ನೋಡಿ ‘ ಆ ಮ್ಯಾಲೆ’ ಅಂದೆ.
ಎಂಟೂವರೆ , ಒಂಬತ್ತರ ಹೊತ್ತಿಗಂದ್ರ  ಭಾಳ ಥಕಾಸಿದ್ರಂತ  ನಮ್ಮಜ್ಜ. ಅಣ್ಣಾ ಕೂತಲ್ಲೇ  ತೂಕಡಿಸಿಗೋತ  ಅಲ್ಲೇ ಮಲಗಿದ್ರು.ಸ್ವಲ್ಪ ಸುಧಾರಿಸಿಕೊಂಡು  ಅಜ್ಜ ಹೇಳಿದ್ರಂತೆ” ನಿಂದು, ಅಣ್ಣಾ ಸಾಹೇಬಂದು(ನಮ್ಮ ತಂದೆ) ಊಟಾ  ಮುಗಿಸಿ ಬಿಡು. ನನಗೇನೂ ಬ್ಯಾಡ ಈ ಹೊತ್ತ” 
” ನನ್ನ ಊಟೇನ  ಅಡಗಾಣಸೇದೀಗ. ನೀವು ಮಲಕೋರಿ ” ಅಂತ ಹೇಳಿ ಅಣ್ಣಾನ  ಊಟಾ ಮುಗಿಸಿ ಮಲಗಿಸಿದ್ಲಂತ. ತೊಟ್ಲಾಗಿನ  ಕೂಸು ಕಿರಿ ಕಿರಿ ಮಾಡೂದ ಕೇಳಿ ಅದಕೂ ಹಾಲು ಕುಡಿಸಿ ಮಲಗಿಸಿ ಬಂದ್ಲು. ಇಷ್ಟಾಗೂದ್ರಾಗ  ವಾಂತಿ ಭೇದಿಲೆ  ಸುಸ್ತಾಗಿ, ಕೈಕಾಲು ಭಾಳೇ  ಸೋತು ಹೋಗಿ  ಮಲಗಿದ್ರು ನಮ್ಮಜ್ಜ.
ಅಲ್ಲೇ  ಬಾಜೂದ  ಮನೀಯೊಳಗೆ  ದೂರದ  ಬಳಗದವರು, ನಾನಾಸಾಹೇಬ, ಅವರ ಪತ್ನಿ ಯಮುತಾಯಿ, ಮಕ್ಕಳ ಜೋಡಿ ಇದ್ರು. ನಾನಾಸಾಹೇಬರು  ನಾಟಿ ವೈದ್ಯರು. ಅವರನ ಕರೆದು  ಎಲ್ಲಾ ಸುದ್ದಿ ಹೇಳಿದ ಕೂಡಲೇ ಬಂದs  ಬಿಟ್ಟ  ಅವರು ನಾಡಿ , ಹೊಟ್ಟಿ ಎಲ್ಲಾ ಪರೀಕ್ಷಾ ಮಾಡಿ ನೋಡಿ ,” ಸೋನವ್ವಾ ಯಾಕೋ ಭಾಳ ನಿತ್ರಾಣ  ಆಗ್ಯಾನ  ರಾವಸಾಹೇಬ. ನಮ್ಮ ಔಷಧಿ ನಾಟೂದಿಲ್ಲ  ಈಗ. ಅಂಗ್ರೇಜೀ ಡಾಕ್ಟರ್ ನ  ಕರಸೂದ  ಠೀಕ  ಅನಸ್ತದ”  ಅಂತ ಹೇಳಿ ಹೊರಗ ಹೋಗಿ  ಇನ್ನೊಂದು ಬಾಜೂಕ  ಇದ್ದ ಹುಡುಗನ್ನ ಕರೆದು ಡಾಕ್ಟರ್ ನ  ಕರಕೊಂಡು ಬರಲು ಹೇಳಿ ಕಳಸಿದ್ರು.
ಡಾಕ್ಟರ್  ಬಂದು ಎಲ್ಲಾ ನೋಡಿ ಗುಳಿಗೆ, ಪುಡಿ, ಔಷಧಿ ಕೊಟ್ಟು” ಕಾಲರಾ ಇದ್ಧಾಂಗ ಅನಸ್ತದ್ರಿ ಬಾಯಿಸಾಹೇಬ.
( ಮುತಾಲೀಕ ದೇಸಾಯರ ಮನೆ ಸೊಸೆಗೆ ತೋರಿಸುವ ಮರ್ಯಾದೆಯ ಸಂಬೋಧನೆ) ಊರಾಗ  ಎಲ್ಲಾ ಕಡೆ ಕಾಲರಾ ಸಾತನೂ ಅದ. ಜಾಸ್ತಿ ನೀರು, ಶರಬತ್ತು ಕುಡಸ್ರಿ. ಕೈ ಕಾಲು ಸ್ವಲ್ಪ ಬೆಚ್ಚಗ ಮಾಡ್ರಿ. ಒಂಚೂರ ತ್ರಾಸ ಆದ್ರೂ ತಾಬಡತೋಬ ಕರೀರಿ.ಕಾಳಜಿ ತಗೋರಿ” ಅಂತ ಹೇಳಿ ಡಾಕ್ಟರ್ ಹೋದ್ರು.( ಆಗ ಅಂದರೆ ನಾ ಹೇಳೋ ಈ ಘಟನೆ ನಡೆದಾಗ ಕಾಲರಾ ಬಂದ್ರೆ ವಾಸಿ ಆಗೋ ಸಾಧ್ಯತೆ ಭಾಳ ಕಡಿಮೆ.ಈಗಿನಷ್ಟು ವೈದ್ಯಕೀಯ ಸೌಲಭ್ಯ ಇಲ್ಲದ ಕಾಲ ಅದು- ಸ್ವಾತಂತ್ರ್ಯ ಪೂರ್ವ ಕಾಲ) ‌‌‌‌‌
  ಏಕಾಗ  ಆಕೀ ತೌರಿನ  ಬಡತನ  ಕಲಿಸಿದ ಪಾಠನೋ, ಏನ  ಸ್ವಭಾವತ: ಘಟ್ಟಿ  ಹೆಣ್ಮಗಳೋ! ಅಂತೂ ಡಾಕ್ಟರ್  ಹೇಳಿದ  ಮಾತ ಕೇಳಿ ಎರಡು ನಿಮಿಷ  ಕಂಬಧಾಂಗ  ನಿಂತಾಕಿ  ಮರುಗಳಿಗೆ  ಸಂಭಾಳಿಸಿಕೊಂಡು  ಒಳಗೆ ಹೋಗಿ ದೇವರ ಮುಂದೆ  ತುಪ್ಪದ ದೀಪ  ಹಚ್ಚಿಟ್ಟು  ಮನೀದೇವರು  ಕೊಲ್ಹಾಪುರ  ಅಂಬಾ ಬಾಯಿ  ಹೆಸರಲೆ  ಮುಡಿಪು  ಕಟ್ಟಿ ಇಟ್ಟು ಹೊರಗ ಬಂದ್ಲು. ನಾನಾಸಾಹೇಬ್ರು, ಯಮುತಾಯಿ  ಏನ ಹೇಳಲಿಕ್ಕೂ  ಗೊತ್ತಾಗದೆ ಒಬ್ಬರ ಮಾರಿ  ಒಬ್ರು  ನೋಡಿಕೋತ  ಕೂತಾವ್ರು  ಏಕಾ ಬಂದದ್ದ ನೋಡಿ,” ಏನ ಕಾಳಜಿ  ಮಾಡಬ್ಯಾಡ  ಸೋನವ್ವ, ನಾಳೆ  ಅನೂದ್ರಾಗ  ಆರಾಮ ಆಗ್ತಾರ ಭಾವಜೀ” ಅಂತ  ಯಮುತಾಯಿ  ಹೇಳಿದ್ರು. ಗೋಣ ಹಾಕಿ ಏಕಾ  ,” ಭಾವಜೀ, ವೈನೀ  ನೀವೂ  ಹೋಗ್ರಿ ಮನಿಗೆ. ಮನ್ಯಾಗ  ಹುಡಗೂರಷ್ಟೇ  ಅವ. ಇವರೂ  ಮಲಗ್ಯಾರ. ನಾ ನೋಡಕೋತೀನಿ. ಹಂಗೇನರೆ  ಬೇಕಾದ್ರ  ಕರೀತೀನಿ ವೈನೀ. ನೀವೂ ಸ್ವಲ್ಪ ಆರಾಮ ತಗೋರಿ” ಅಂತ ಹೇಳಿ ಅವರನ್ನು ಕಳಿಸಿ, ಬಾಗಲಾ ಮುಂದೆ ಮಾಡಿ ಬಂದ ಏಕಾ ಒಮ್ಮೆ ಸೋತು ಮಲಗಿದ ರಾವಸಾಹೇಬರತ್ತ ಒಮ್ಮೆ  ಮಕ್ಕಳತ್ತ ನೋಡಿ  ಅಜ್ಜಾನ  ಹತ್ರ ಬಂದ್ಲು.

ಅಣ್ಣಾನ್ನ  ಬಾಜೂಕ  ಮಲಗಿಸಿಕೊಂಡು  ತಾ ಅಜ್ಜಗಾವಲಾಗಿ  ಅಜ್ಜಾನ  ಮಂಚಕ್ಕ ಆತಗೊಂಡ ಕೂತಾಕಿ  ಅಲ್ಲಾಡಲಿಲ್ಲಂತ.
ಬೆಳಗ  ಮುಂಜಾನೆ  ನಾಲ್ಕೂವರೆ  ಆಗಿರಬೇಕು; ನಮ್ಮ ಅಜ್ಜಾ  ಕಣ್ತೆರೆದು ನೋಡಿದ್ರಂತ; ಕಣ್ಣು, ಮಾರಿ  ಪೂರಾ ನಿಸ್ತೇಜ ಆಗಿದ್ದು. ಅಗದೀನ  ಸೋತ  ಸಣ್ಣ ಧ್ವನಿಯೊಳಗ ,” ಬಾಯೀಸಾಹೇಬ, ನನ್ನ  ಕ್ಷಮಾ  ಮಾಡ್ರಿ. ಸಣ್ಣಾಕಿ  ನೀ; ನಿನ್ನ ಹೆಗಲ ಮ್ಯಾಲ ಎಲ್ಲಾ ಭಾರ  ಹೊರಿಸಿ ಹೊಂಟ ಬಿಟ್ಟೆ ನಾ. ಸಂಭಾಳಿಸಿಕೊಂಡು  ಸಾಗೂ ಜವಾಬ್ದಾರಿ ನಿಂದs.”
 ಅಂದ್ರು. ಏಕಾ, ” ಏನೇನರ  ಮಾತಾಡಬ್ಯಾಡ್ರಿ. ಅಶಕ್ತತನಕ್ಕ ಹಂಗಾಗ್ತದ. ಸ್ವಲ್ಪ  ಹಾಲು  ಬಿಸಿ ಮಾಡ್ಕೊಂಡ ಬರ್ತೀನಿ. ಒಂದ ನಾಲ್ಕ ಚಮಚಾ ಕುಡದ್ರ ಸಮಾಧಾನ ಆಗ್ತದ”  ಅಂತ ಹೇಳಿ ಒಳಗೆ ಹೋಗಿ ಹಾಲು ಬಿಸಿ ಮಾಡಿ  ತಗೊಂಡು ಬರೂದ್ರಾಗ  ನಮ್ಮಜ್ಜ  ಶಾಂತ  ಮಲಗಿದ್ರಂತ.

‘ಅಯ್ಯs  ಹಾಲ ತರೂದ್ರಾಗ  ಮಲಗೇ ಬಿಟ್ಟಾರಲಾ. ನಿತ್ರಾಣ ಆಗ್ಯಾರ ಭಾಳ ‘ ಅನಕೋತ ಎಬ್ಬಸಲಿಕ್ಕೆ  ಹೋದ್ರ  ಹಾಂ ಇಲ್ಲ, ಹೂಂ ಇಲ್ಲ! ಅಗಳಾಡಿಸಿ ಹೊಳ್ಳಾಡಿಸಿದ್ರು  ಎಲ್ಲಾ ಸ್ತಬ್ಧ, ನಿಶ್ಯಬ್ದ! ಮೂಗಿನ  ಹತ್ರ ಬೆರಳ ಹಿಡಿದು ನೋಡಿದ್ರ ಗಾಳಿ  ಸುಳಿವೇ ಇಲ್ಲ ! ಏಕದಂ ಪ್ರಶಾಂತ, ಎಂದೂ ಮುಗಿಯದ ನಿದ್ದೀ ಒಳಗ ರಾವ್ ಸಾಹೇಬ್ರು ಮುಳುಗಿ ಬಿಟ್ಟಿದ್ರಂತ!

ಥರಾ ಥರಾ  ನಡುಗಿ ” ಹೋಗೇ ಬಿಟ್ರಿ, ನನ್ನ ಒಬ್ಬಾಕಿನ್ನೆ  ಬಿಟ್ಟು” ಅಂತ  ವಿಕಾರ ಧ್ವನೀಲೇ  ಚೀರಿ  ಏಕಾ  ಧಡಾರನೆ  ಬಿದ್ಲು.. ಅಣ್ಣಾಸಾಹೇಬ ಎದ್ದು ಅಳ್ಳೀಕ್ಹತ್ತಂತ ಗಾಬರಿಯಾಗಿ. ಎರಡು ವರ್ಷಗಳ  ಮಗು!  ತೊಟ್ಲಾಗಿನ ಕೂಸೂ ಚೀರಿ ಚೀರಿ  ಅಳಲಿಕ್ಕ ಶುರು ಮಾಡ್ತಂತ. ಈಕಡೇನ  ಟಕ್ಕ ಇಟಗೊಂಡ ಕೂತ  ಯಮುತಾಯಿ, ನಾನಾ ಸಾಹೇಬ್ರು ಓಡಿ ಬಂದು, ನಾಡಿ ನೋಡಿದ ನಾನಾ ಗೋಣು ಅಲ್ಲಾಡಿಸಿ ‘ ಯಮು , ಎಲ್ಲಾ ಮುಗದದ’ ಅಂದ್ರಂತ  ನಮ್ಮ ಅಣ್ಣಾನ್ನ  ಎದಿಗೆ ಅವಚಿಕೊಂಡು! ಯಮುತಾಯಿ ‘ ಎಂಥಾ ಘಾತಾ ಮಾಡದ್ಯೆಪಾ ಭಗವಂತಾ’ ಅಂತ ನೀರು ತಂದು ಏಕಾನ ನೆತ್ತಿಗೆ, ಮಾರಿಗೆ  ಚಿಮುಕಿಸಿದ ಕೂಡಲೇ ಎಚ್ಚೆತ್ತ  ಏಕಾ ಚೀರಲಿಕ್ಹತ್ತಿದ್ದ ಆ ತೊಟ್ವಲದಾಗಿನ ಕೂಸಿನ್ನ ಎತ್ತಿ ತಂದು ರಾವಸಾಹೇಬ್ರ ಉಡಿಯೊಳಗ  ಮಲಗಿಸಿ, ಅಣ್ಣಪ್ಪನ್ನ  ಅವರ ಬಾಜೂಕ  ಕೂಡಿಸಿ, ” ನಾ ಏನ ಮಾಡ್ಲಿ ಹೇಳ್ರಿ ಈಗ.ಏನೇನ  ಮಾಡ್ಲಿ ಅಂತ ಒಬ್ಬಾಕೀನ್ನ ಬಿಟ್ಟ ಹೋದ್ರಿ ನೀವು? ಬಾಯಿ ಸಾಹೇಬ , ನಿಮ್ಮ ಪರವಾನಗಿ ಇಲ್ಲದೆ ನಾ ಏನೂ ಮಾಡೂದಿಲ್ಲ ಅಂತಿದ್ರಿ;  ಇಷ್ಟ ದೊಡ್ಡ  ಘಾತದ  ಕೆಲಸಾ ಅದಹೆಂಗ ಮಾಡಿದ್ರಿ ನೀವು? ಕೊಲ್ಲಾಪುರಕ್ಕ ಎರಡೂ ಮಕ್ಕಳನ ಕರಕೊಂಡು ಹೋಗಿ ಬರೂಣ ಅಂದಾವ್ರು ಅದನ ಬಿಟ್ಟು ಅದು ಹೆಂಗೆ ಈ ಕಡೆ ಹೋದ್ರಿ ಒಬ್ಬರೇ?  ಏನೂ ಹೇಳದ ಕೇಳದ ಎಲ್ಲಾ ಕೆಲಸ ಅರ್ಧವಟ ಮಾಡಿ…” ಅಂತ  ಚೀರಿ ಚೀರಿ ಜಗಳಾಡಿದೆ ನೋಡ ಅಕ್ಕವ್ವಾ; ನನ್ನ ಮನಸೋ ಇಚ್ಚಾ ಜಗಳಾಡಿದೆ ನೋಡ” ಅಂದ್ಲು ಏಕಾ.

ದಂಗ ಬಡದ ಕೂತಿದ್ದ  ನಾನು ಆಕೀ ಮಾರಿ  ನೋಡ್ದೆ. ಆಕಿ ಕಣ್ಣಾಗ ಒಂದೇ ಒಂದು ಹನಿ  ನೀರು ಇರಲಿಲ್ಲ; ಮುಖ ಪೂರ್ತಿ ಕೆಂಪು ಕೆಂಪಾಗಿತ್ತು, ಉಟ್ಟ ಕೆಂಪು ಸೀರಿಗಿಂತಲೂ! ಜೀವನ ಪರ್ಯಂತ ಅನುಭವಿಸಿದ  ದು:ಖದ  ಝಳಕ್ಕ ಆ  ನೀರು ಕುದ್ದು  ಆವಿ ಆಗಿ  , ಕೆಂಪಗಿನ  ಮುಖ  ಮತ್ತಷ್ಟು ಕೆಂಪಾಗಿರಬೇಕು ಅಂತ ಈಗ  ಅನಸ್ತದ ನನಗೆ.

ಆಗ ಪೂರ್ಣ ಅರ್ಥವಾಗದ್ದು ಕ್ರಮೇಣ  ತಿಳಿ ಆಗ್ತಾ  ಹೋಗಿ  ನಮ್ಮ ಏಕಾನ್ನ ಇಷ್ಟೆತ್ತರಕ್ಕ ನಿಲ್ಲಿಸಿತು ನಾ ತಲಿ ಎತ್ತಿ  ನೋಡೂಹಂಗ! ಒಂದೇ ಒಂದು  ರಾತ್ರಿ ಕಳೆಯೂದರಾಗ  ಪೂರ್ತಿ ಜೀವನದ ದಿಕ್ಕನ  ಬದಲಾಗಿ ಹೋತು! ಹೆಂಗ  ಎದರಿಸಿರಬೇಕು  ಆಕೀ ಈ  ಇಷ್ಟುದ್ದ  ಹರಡಿ ಚಾಚಿ ನಿಂತ  ಬಾಳನ್ನು ಆ  ಎಳೆಕಳಲಿನೊಂದಿಗೆ! ಯಾಕೋ ಕಲ್ಪನಾ ಮಾಡೂದೂ  ಆಗದ  ಮಾತು ಅನಸ್ತದ ನನಗ. 
ನಮ್ಮ ಏಕಾನ್ನ ನಸೀಬ; ಗಂಡನ್ನ ಕಳಕೊಂಡ ದು:ಖ  ಆರಗೊಡಧಾಂಗ ಮುಂದೆ ಹದಿನೈದೇ ದಿನಕ್ಕೆ ಆ ಎಳೇ ಕೂಸಿನ್ನೂ ತಗೊಂಡೇ ಹೋತಂತ ವಿಧಿ. ಈಗ ನಮ್ಮ ಏಕಾನ ಜಗತ್ತು ಅಂದ್ರೆ ತಾನು, ತನ್ನ ಮಗ ಅಣ್ಣಾ ಸಾಹೇಬ. ಆ ಮ್ಯಾಲೆ  ಕೆಲ ವರ್ಷಗಳ ಕಾಲ ಏಕಾ ತೌರಿನಲ್ಲೇ ಇರಬೇಕಾತು. ಏಕಾ ತನ್ನ ಮಗ ಅಣ್ಣಾ ಸಾಹೇಬನೊಡನೆ ತಿರುಗಿ ತನ್ನ  ತೌರು ಐನಾಪೂರಿನ ಆ ಮನೆ ಸೇರಿದಾಗ  ರಾವಸಾಹೇಬರ ವಂಶದ ಕುಡಿ ಅಣ್ಣಾ ಸಾಹೇಬ, ಅಂದ್ರ ನಮ್ಮ ತಂದೆ ಎರಡು ವರ್ಷದ ಮಗು!

ನಾಲ್ಕು ವರ್ಷ ಸುಮ್ಮನಿದ್ದ ಏಕಾ ತನ್ನ ಇಪ್ಪತ್ತೆರಡನೇ  ವರ್ಷಕ್ಕೆ ತನ್ನ ತೋಟ, ಹೊಲ, ಗದ್ದೆ, ರೈತರು, ಆಳು ಕಾಳು, ಬಿತ್ತಿಗೆ, ರಾಶಿ ಅಂತ  ಓಡಾಟ, ದೇಖರೇಖಿ  ಎಲ್ಲಾ ಶುರು ಮಾಡ್ಕೊಂಡ ಬಿಟ್ಲು. ನಮ್ಮ ಅಣ್ಣಾನ ಮುಲ್ಕಿ ಪರೀಕ್ಷಾ ಆದಕೂಡಲೇ ಚಿಕ್ಕೋಡಿಯಲ್ಲಿ ಮನೆ ಮಾಡಿ  ಸ್ವತಂತ್ರವಾಗಿ ತನ್ನ ಜೀವನ  ಸಾಗಿಸುತ್ತ ಮಗನ ಶಿಕ್ಷಣ ಮುಂದುವರಿಸಿದ್ಲು. ಚಿಕ್ಕೋಡಿಯೊಳಗ ಮ್ಯಾಟ್ರಿಕ್ ಮುಗಿಸಿ, ಸಾಂಗ್ಲಿ ವಿಲಿಂಗ್ಡನ್ ಕಾಲೇಜಿಗೆ ಸೇರಿದರು ಅಣ್ಣಾ. ಏಕಾ ಸಾಂಗಲಿಯೊಳಗೇ ಮನೆ ಮಾಡಿ ನಿಂತು ಅಲ್ಲಿಂದಲೇ ಹೊಲಾ ಮನಿ ಸಂಭಾಳಿಸಿದ್ಲು.ಆಕೀನೂ ಸಹಸ್ರ ಬಾಹು, ಸಹಸ್ರ ಚಕ್ಷು  ಉಳ್ಳಾಕಿ ಆಗಿಬಿಟ್ಲು! ಅಣ್ಣಾ B.A. ಮುಗಿಸಿದ್ರು. ಮಗನ B A. ಮುಗೀಯೂ ತನಕ ಹೂರಣಾ ಬಿಟ್ಟಿದ್ಲು. ಮಗನ ಮದುವೆ ಆದ ಮೇಲೆ ಕೊಲ್ಹಾಪುರ ಮಹಾಲಕ್ಷ್ಮಿಗೆ ಸಹಕುಟುಂಬ ಹೋಗಿ ಹೋಳಿಗೆ ನೈವೇದ್ಯ ಮಾಡಿ ಹೂರಣಾ ಮುಟ್ಟಿದ್ದು ಏಕಾ!

ಹೀಂಗ ನಮ್ಮ ಏಕಾ ಮನೀ ಮನೆತನದ  ಜವಾಬ್ದಾರಿ ಯಾವ  ಕೊರತೆಯೂ ಇಲ್ಲಧಾಂಗ ವ್ಯವಸ್ಥಿತವಾಗಿ ಮುಗಿಸಿದ್ಲು; ಹೆಣ್ಣಾಗಿ  ತಾಯ್ತನದ ಪೂರ್ಣ  ಜವಾಬ್ದಾರಿ ಯಾವ ಕೊರೆ ಬರಧಾಂಗ ಪೂರೈಸಿದ್ದು. ಇದರಲ್ಲಿ ಯಾವುದೇ ಅಬ್ಬರ, ಹೆಗ್ಗಳಿಕೆಯ ಗಾಳಿಯೂ ಇರಲಿಲ್ಲ. ಪೂರ್ತಿ ಜೀವನಾನ ಸವಾಲು ಆಗಿ ತಗೊಂಡ  ನಮ್ಮ ಏಕಾ ಬಲು ಗಟ್ಟಿಗಿತ್ತಿ, ಗಡಸುಗಾತಿ !  ಕಲ್ಪನೆಗೂ ನಿಲುಕದ  ಆ ವಿಧಿಯ ಕ್ರೌರ್ಯಕ್ಕೆ  ಪ್ರತ್ಯುತ್ತರ ನೀಡಲು  ಪಟ್ಟ ಕಷ್ಟದ ಬಗ್ಗೆ  ಒಂದೇ ಒಂದು ಬಾರಿಯೂ  ಹೇಳಲಿಲ್ಲ ಏಕಾ. ಎಂದೂ ಹಾಗೆ ಮಾಡಿದೆ  ಹೀಗೆ  ಮಾಡಿದೆ ಅಂತ  ಹೇಳಿ ಕೊಳ್ಳಲಿಲ್ಲ.ಈ ಜೀವನ ಬಂದಹಾಗೆ  ಸ್ವೀಕರಿಸಿ ಅದನ್ನು ದಡ  ಮುಟ್ಟಿಸುವುದು ಅಂದರೆ  ಇದೇ ಅಂಬೋದನ್ನು ನಮ್ಮ ಏಕಾ ಮೌನವಾಗೇ  ಹೇಳಿ ಗೆದ್ದಳು . ಆ ಮೌನವೇ ಇಂದಿಗೂ  ನೂರು  ಹೇಳ್ತದೆ. 

ನಾ  ಆಕೀನ್ನ ಒಮ್ಮೆ ಕೇಳಿದ್ದೆ; ” ಏಕಾ ನನ್ನ ಗೆಳತಿ ಮೀರಾಗ ಅವರ ಅಜ್ಜಿ ಜರದ ಪರಕಾರ ಪೋಲ್ಕಾ ಹೊಲಿಸಿ ಕೊಟ್ಟಾರ. ನೀನೂ ನನಗ ಹೊಲಿಸಿ ಕೊಡ ಏಕಾ ” ಅಂತ. ಆಕೀ ನನ್ನ ತಲೀ ಮ್ಯಾಲೆ ಕೈ ಆಡಿಸಿ ಹೂಂ ಅಂದ್ಲು.

ಮುಂದೆ  ನಾ ಬೆಳಧಾಂಗ, ನನ್ನ ಮದುವೆ, ಗಂಡ, ಮಕ್ಕಳು ಅಂತ ಪೂರ್ಣ ಪ್ರಮಾಣದ ಗೃಹಿಣಿ ಆಗಿ, ಡಾಕ್ಟ್ರ ಹೆಂಡತಿ ಆದ ನಾ ಮನೀತನದ ಜವಾಬ್ದಾರಿ ಹೊರಬೇಕಾದಾಗ; ಕೆಲ ಕಠಿಣ ಪರಿಸ್ಥಿತಿಗಳಲ್ಲೂ ಎಷ್ಟೂ ಅಳ್ಳಕವಾಗದೇ ನಿಭಾಯಿಸಿದಾಗ ನನಗೆ ನನ್ನ ಏಕಾ ನೆನಪಾಗ್ತಾಳ.ನಾ ಆಕೀನ್ನ ಕೇಳಿದ್ದು ಬರೀ ಒಂದು ಜರದ ಪರಕಾರ ಪೋಲ್ಕಾ; ಆದ್ರೆ ಆಕಿ ನನಗ  ಕೊಟ್ಟಿದ್ದು ಅಖಂಡ ಗಟ್ಟಿತನ!

ನಾ ನನ್ನ ಪತಿಗೆ  ಇದನ್ನೇ ಹೇಳಿದಾಗ  ಅವರ ಮುಖದ ತುಂಬಾ ಅಭಿಮಾನ, ಮೆಚ್ಚುಗೆಯ ನಗು. ಆದ್ರೆ ಯಾಕೋ ಗೊತ್ತಿಲ್ಲ; ನನ್ನ ಕಣ್ಣ ತುಂಬ ನೀರು! ಬಹುಶಃ ಆ  ತಣ್ಣೆಳಲ ಹಾದಿಯ ಇಬ್ಬನಿಹನಿಗಳಿರ ಬೇಕು…..

|ಇನ್ನು ಮುಂದಿನ ವಾರಕ್ಕೆ|

‍ಲೇಖಕರು Admin

May 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shrivatsa Desai

    ಸ್ವಾತಂತ್ರ್ಯ ಪೂರ್ವದ. ಆಗಿನ ಕಾಲದ, ವೈದ್ಯಕೀಯ ಸೌಲಭಗಳಿರದ ಕಾಲಘಟ್ಟದಲ್ಲಿ ಕಾಲ ಭೈರವನ ಆಹುತಿಗಳಾದ ಜೀವಗಳೆಷ್ಟೋ. ನೊಂದು ಅನುಭವಿಸಿದ ಸಂಸಾರಗಳೆಷ್ಟೋ. ಸೋತವರೆಷ್ಟೋ, ಈಜಿ ಬಾಳಿದವರೆಷ್ಟೋ. ಅಂತವರೊಲ್ಲೊಬ್ಬಳಾದ ಆ ‘ಏಕಾ’ನ ಮುಖಾಂತರ ಆ ಇತಿಹಾಸವನ್ನು ತೇವವಾದ ಕಣ್ಣಿಗೆ ಕಟ್ಟುವಂತೆ ಬರೆದ ಕಂತು. ಅಂಥದೇನೂ ಉತ್ಪ್ರೇಕ್ಷೆಯಿಲ್ಲದೆ ಭಾವ ತುಂಬಿಡಾ ಬರಹ. ಅಭಿನಂದನೆಗಳು. ಮುಂದಿನ ಕಂತಿಗೆ ಕಾತರನಾಗಿದ್ದೇನೆ . ಶ್ರೀವತ್ಸ

    ಪ್ರತಿಕ್ರಿಯೆ
  2. Sarojini Padasalgi

    ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ. ಹೌದು ಆ ಥರದ ವಾತಾವರಣದಲ್ಲೂ ಈಜಿ ದಡ ಸೇರಿದ, ತನ್ನ ಬಾಳಿನ ಒಂದೊಂದೇ ಘಟನೆಗಳನ್ನು ಏಕಾ ಹೇಗೆ ಹೇಳಿದ್ಲೋ ಹಾಗೇ ಇಟ್ಟ ಲೇಖನ ಇದು.
    ಇಂಥ ಒಂದು ವ್ಯಕ್ತಿತ್ವ ದ ಬಗ್ಗೆ ಬರೆಯಲು ಅವಕಾಶ ನೀಡಿದ ಅವಧಿಗೆ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: