ಸರೋಜಿನಿ ಪಡಸಲಗಿ ಅಂಕಣ- ಅಣ್ಣಾ ಹೂಬೇಹೂಬ ಏಕಾನ್ಹಂಗ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

17

ಒಂದ  ಕೈಲೇ  ಕೊಡೂದು ,  ಮತ್ತೊಂದು ಕೈಲೇ  ಕಸಗೊಂಡ   ಏನ,  ಹೆಂಗ ಮಾಡ್ತಾರ ಈಗ ಅಂತ  ಮಜಾ  ನೋಡೋದು; ಇದೊಂದ  ಆಟ  ಆ  ಕೊಡಾಂವಗ. ಮಜಾ  ನೋಡಿ  ಸಾಕಾತಂದ್ರ ಮತ್ತ  ಕೊಟ್ಟು  ರಮಿಸಿ ಸಣ್ಣ ಹಂಗೆ ನಗಾಂವನೂ   ಅವನs. ಸಣ್ಣು ಹುಡಗೂರನ  ನಾವು  ಕಾಡಸ್ಲಿಕ್ಕೆ ತಗೋಳೋದು  ಅವರ  ಕೈಯಾಗಿಂದು ; ಮತ್ತ ಅಳ್ಳೀಕ್ಹತ್ತು  ಅಂದ್ರ  ಕೊಟ್ಟು  ರಮಸ್ತೀವಲಾ  ಹಂಗೇ  ಅಗದೀ  ಹಂಗೇ ಇದೂ, ಅವನ ಆಟನೂ. ನಮ್ಮ ಅಣ್ಣಾನ  ಜೀವನದಾಗನೂ  ಆಗದೀ ಅಂದ್ರ  ಅಗದೀ, ಪಕ್ಕಾ ಗೀಟ  ಒಂದು ಅಳಸಲಾರದಂಥಾದು  ಕೊರದಷ್ಟ  ಸ್ಪಷ್ಟ ಹಿಂಗs ಆತು. ಏಕಾಂದ    ಹೋದದ್ದ ಹೋಗೇ ಬಿಟ್ರೂ ಎಲ್ಲೋ ಒಂದ  ಸಮಾಧಾನದ  ಎಳಿ ಅಂತೂ  ಮೂಡ್ತು  ಮಗನ ಬಾಳು  ಅಷ್ಟ ಛಂದ ಅರಳಿದಾಗ; ಹಿಂಗ ಕಸಗೊಂಡದ್ದನ್ನ ಆಂವಾ ತಿರುಗಿ ಕೊಟ್ಟ ಸಮಾಧಾನ ಮಾಡಿದಾ ಅವ್ವಾ – ಮಗನ್ನ ಇಬ್ಬರನೂ. 

ರಾವಸಾಹೇಬ್ರಿಗೆ   ಬೇಕಾದಷ್ಟ  ಭಾಗ್ಯಾ ಇತ್ತು. ಆದ್ರ  ಮಕ್ಕಳ  ಭಾಗ್ಯಾ  ಒಂದ  ಇರಲಿಲ್ಲ. ತಬ್ಬೇತ ಬರೋಬ್ಬರಿ  ಇಲ್ಲದ್ದಕ್ಕ  ಅವರ ಮೊದಲನೇ ಹೆಂಡ್ತಿ  ಎಂಕೂಬಾಯಿ  ಮಕ್ಕಳಾಗದನs  ತೀರಿ ಹೋದಾಗ.  ನಮ್ಮ ಏಕಾ  ನಮ್ಮಜ್ಜಗ  ಎರಡನೇ  ಹೆಂಡತಿ  ಆಗಿ ಬಂದು  ಅವರ ಮನಿ  ತುಂಬಿ,. ಅಗದೀ  ಉತಾವಿಳ  ಆಗಿ  ಮಕ್ಕಳ ಹಾದಿ ನೋಡ್ತಿದ್ದ  ನಮ್ಮ  ಅಜ್ಜ  ರಾವ್ ಸಾಹೇಬ್ರ ಆಶಾ ಪೂರ್ಣ ಮಾಡಿದ್ಲು. ಭಂಗಾರದಂಥಾ  ಗಂಡು ಕೂಸಿನ  ಅಪ್ಪ ಆದ್ರು ಏಕಾನ್ನ  ಮದವಿ ಮಾಡ್ಕೊಂಡ  ವರ್ಷ  ತುಂಬೂದ್ರಾಗ. ಅವರಿಗೆ  ಮುಗಲ  ಮೂರೇ ಬಟ್ಟ ಉಳಧಂಗಾಗಿತ್ತು. ಎಂದೂ ಕಾಣದ  ಖುಷಿ ಆತು. ಅದಕ ನಮ್ಮ ಅಣ್ಣಾ ಹುಟ್ಟಿದಾಗ  ನಮ್ಮಜ್ಜ  ನಂದಿಕುರಳಿ,  ಚಿಕ್ಕೋಡಿ ಊರ ತುಂಬ  ಐನಾಪೂರ ಫೇಡೆ, ಸಕ್ರಿ ಹಂಚಿದ್ರು ಅಂತ  ಏಕಾ ಹೇಳ್ತಿದ್ಲು. ಆದ್ರ  ನಸೀಬದ  ಇದರ ನಿಂದ್ರಾವ್ರ ಯಾರು?  ನಿಂತ್ರನೂ ಅದಕೇನ  ಅದರ  ದರಕಾರ. ಯಾವ್ಯಾವ  ವ್ಯಾಳ್ಯಾಕ್ಕ ಏನೇನ  ಆಗಬೇಕು ಅಂತ  ಆ  ಬ್ರಹ್ಮ ಬರೆದು ಕಳಸ್ಯಾನೋ  ಅದ  ಆಗಲಿಕ್ಕೇ  ಬೇಕಲಾ. ಹಂಗೇ ಆತು  ನಮ್ಮ ಅಣ್ಣಾನ ಬದುಕಿನ್ಯಾಗೂ.

ಬಡತನದ  ಮನಿಂದ ಬಂದು, ಅದs ಜೀವನ ಏನೋ ಅನ್ಕೊಂಡಿದ್ದ ನಮ್ಮ ಏಕಾ  ಇಲ್ಲಿ ಗಂಡನ ಮನ್ಯಾಗ ಮೂರ ವರ್ಷ ರಾಜ ಭೋಗದಾಗ ಮುಳುಗಿದ್ಲು; ಅಪ್ಪಟ ಭಂಗಾರ ಅನಬೇಕ ಅಂಥಾವು ಒಂದ ಅಲ್ಲಧಂಗ ಎರಡು ಗಂಡು ಮಕ್ಕಳ  ತಾಯಾದ್ಲು. ಆದರ  ಅದನ ಕೊಟ್ಟಾಂವಾ ಅಷ್ಟs ಮಾಸಲೆ ತೋರಿಸಿದಾ ಹೀಂಗೂ ಒಂದ ಬಾಜೂ ಅದ ಈ ಜೀವನಕ್ಕ ಅಂತ ಮತ್ತ ಅದನ ಆಕಿ ದಿಕ್ಕ ತಪ್ಪಿಸಿ ಎಲ್ಲಾ ಕನಸಿನ ಹಾಂಗ ಕರಗಿಸಿ ಬಿಟ್ಟಾ. ಗಂಡನ್ನ ಕಳಕೊಂಡ್ಲು; ಆ ಎರಡೂವರಿ  ತಿಂಗಳ ಎಳೀ ಕೂಸಿನ್ನ ಕಳಕೊಂಡ ಏಕಾ ತಾ ಒಬ್ಬಾಕಿ ಅಲ್ಲಾ, ತನ್ನ ಜೋಡಿ ಮುತಾಲಿಕ ದೇಸಾಯರ ಮನಿತನದ ಕುಡಿ, ಅಂಥಾ ಅಪರೂಪಕ್ಕ ಹುಟ್ಟಿದ ಕೂಸು  ಅಣ್ಣಾ ಸಾಹೇಬನ್ನೂ ತನ್ನ ಜೋಡಿ ಕರಕೊಂಡು ತಾ  ಅನುಭೋಗಿಸಿದ  ಅದೇ ಬಡತನದ  ಜೀವನಕ್ಕ ಬ್ಯಾರೆ ಹಾದೀನs ಇಲ್ಲದ ಅದನ್ನೂ  ನುಗಿಸಿ  ತಾನೂ ಹೊಳ್ಳಿ  ಕಾಲ ಇಟ್ಲು. ನಮ್ಮ ಅಣ್ಣಾ ನಂದಿಕುರಳಿ ಮುತಾಲೀಕದೇಸಾಯರ  ಮನಿತನದ  ಏಕೈಕ  ಕುಡಿ. ರಾವ್ ಸಾಹೇಬ್ರ ತಮ್ಮಅಪ್ಪಾಸಾಹೇಬ್ರಿಗೂ  ಮಕ್ಕಳು ಇದ್ದಿದ್ದಿಲ್ಲ. ಅದರ ಜೋಡಿ  ಆರೋಗ್ಯ ಭಾಗ್ಯನೂ ಇರಲಿಲ್ಲ. ನಮ್ಮಜ್ಜ ತೀರಿದ ಒಂದs  ತಿಂಗಳಿಗೆ ಅವರೂ ಹೋದ್ರಂತ.  ಇಂಥಾ ದಿಕ್ಕೆಟ್ಟ ಪರಿಸ್ಥಿತಿ  ತಂದಿಟ್ಟ ಆ  ನಸೀಬದ ಆಟರೇ  ಎಂಥಾದಿದ್ದೀತು  ಅನಸ್ತದ ನಂಗ.

ಅವ್ವಾ – ಮಗಾ ಅಂದ್ರ ನಮ್ಮ ಏಕಾ ಮತ್ತ ಅಣ್ಣಾ ಇಬ್ರೂ ಕನಸಿನಂಥಾ  ಆ ವೈಭವದ ಜೀವನದ  ಕಡೆ  ಬೆನ್ನ ಮಾಡಿ  ಈಕಡೆ ಮೋತಿ ತಿರಗಿಸಿ  ಆ  ತುದಿಂದ ಈ ತುದಿಗೆ ಬಂದು ನಿಲ್ಲ ಬೇಕಾತು. ಅಣ್ಣಾ  ಎರಡ ವರ್ಷದ  ಕೂಸು ಆಗ. ಏನ  ತಿಳೀಬೇಕ  ಅವ್ರಿಗೆ ; ಪರದೇಶಿ ಕೂಸ  ಅಂತ  ಎಲ್ಲಾರ  ಕೈಯಾಗ ಓಡಾಡಿದ್ರು, ಎತ್ತಿದವರ ಕೈ ಕೂಸು ಅನೂ ಹಾಂಗ. ಪರಿಸ್ಥಿತೀನs  ಹಂಗಿತ್ತು. ಏಕಾ  ಅಂತೂ  ಗ್ವಾಡಿ ಕಡೆ  ಮಾರಿ  ಮಾಡಿ ಮಲಕೊಂಡ  ಬಿಟ್ಲು. ಯಾರ  ಅಚ್ಛಾದ್ಲೆ  ಕರದು  ಒಂತುತ್ತ  ತಿನಸತಾರ  ಅವರ  ಕಡೆ  ಕೂಸ ಬೆಳೀತು. ಏಕಾ ಇದನ್ನ ಹೇಳೂ ಮುಂದ ನಂಗ ಹೊಟ್ಟ್ಯಾಗ  ಕೆಟ್ಟ  ಸಂಕಟ ಆಗೂದು. ಮುಂದ ಒಂದ  ನಾಕ ವರ್ಷಕ್ಕ  ಏಕಾ ಮಡಿ ಆಗಿ  ಕೆಂಪ ಸೀರಿ  ಉಟ್ಟು ಮತ್ತ ಈ ಜೀವನದ  ಕಡೆ ಮಾರಿ ಮಾಡಿದ್ಲು ಪೂರಾ  ಹೊಸಬಳಾಗಿ, ತನ್ನ ಸಲವಾಗಿ ಅಲ್ಲದಿದ್ರೂ  ಮಗನ  ಸಲುವಾಗಿ. ಆದ್ರೂ  ಆಗಲೂ  ಒಬ್ರ ಮಾರಿ ನೋಡಕೋತ, ಅವರ  ಮರ್ಜಿ  ಹಿಡಕೋತನs  ಬದಕೋ ಪ್ರಸಂಗ ಇತ್ತು.

ಏಕಾ ಮಡಿ ಆದಾಗ ಅಣ್ಣಾ ಆರ ವರ್ಷದಾವ್ರ  ಇದ್ರಂತ. ಒಮ್ಮೆಲೆ ಏಕಾಂದ ಹಿಂಗ ಬದಲಾದ ರೂಪಾ ನೋಡಿ  ಆ  ಸಣ್ಣ ಹುಡಗಾ  ಘಾಬರಿ ಆಗಿ ಬಿಟ್ತಂತ. ಏಕಾನ ಅಂಬಾಡಾ ಕಾಣಸವಲ್ಲತಂತ ಆಕೀ ಸುತ್ತ ತಿರಗಿ ತಿರಗಿ ಹುಡಕಿದ್ರು  ಅಣ್ಣಾ. “ನೀ ಸೋನವ್ವನs  ಹೌದಲ್ಲ” ಅಂತ  ಮತ್ತ ಮತ್ತ ಕೇಳಿ ಖಾತ್ರಿ ಮಾಡ್ಕೊಂಡ್ರು. ಅಲ್ಲೆ ಐನಾಪೂರದಾಗ  ಎಲ್ಲಾರೂ ಆಕೀಗೆ ಸೋನವ್ವ ಅಂತ ಕರೀತಿದ್ರು. ಅದಕ  ನಮ್ಮ ಅಣ್ಣಾನೂ ಹಂಗೇ ಅಂತಿದ್ರು  ತಮ್ಮ ಅವ್ವಗ. ಒಂದ  ನನಗ ಅಗಾಧ ಅನಸ್ತದ, ಹಂಗs  ಕೆಟ್ಟೂ ಅನಸ್ತದ. ಕೆಟ್ಟ ವ್ಯಾಳ್ಯಾ ಮತ್ತೇನ ಕೊಡದಿದ್ರೂ  ವಯಸ್ಸಿಗೆ ಮೀರಿದ  ತಿಳವಳಿಕಿ ಕೊಟ್ಟು ಗುಂಡಿಗಿ ಗಟ್ಟಿ ಮಾಡ್ತದ ಅಂಬೂದು ಭಾಳ ಖರೇ. ಅದಕನೋ  ಏನೋ ಅಣ್ಣಾ ಮುಂದ ಮತ್ತ ಒಂದೇ ಒಂದ ಸರ್ತೆನೂ ಏಕಾನ ಈ  ಹೊಸಾ ರೂಪದ ಬಗ್ಗೆ ಚಕಾರ ಎತ್ತಲಿಲ್ಲಂತ. ಆಗಿನ್ನೂ ಆಡೋ ವಯಸಿನ್ಯಾಗನs ಚೂರಚಾರ ಏನೆಂದೇ ಗೀರಿದ್ರ  ಅತ್ತೂ – ಕರೆದೂ ಆಕಾಶ ಪಾತಾಳ ಒಂದ ಮಾಡೂ ವಯಸಿನ್ಯಾಗನs ಥೇಟ್ ತಮ್ಮವ್ವನ ಹಂಗ ಖಂಬೀರ ಆದ್ರು ನಮ್ಮ ಅಣ್ಣಾ; ಏಕಾನಗತೆ ಗಟ್ಟಿತನ  ಬೆಳಸ್ಕೋಳಿಕ್ಹತ್ರು. ಏಕಾನ ಮಗಾ ನಮ್ಮ ಅಣ್ಣಾ!

ನಾ ಹಿಂದ ಹೇಳಿಧಾಂಗ ಅಣ್ಣಾಂದ  ಮುಲ್ಕಿ ಪರೀಕ್ಷಾ ಆದ ಮ್ಯಾಲ ಏಕಾ ಚಿಕ್ಕೋಡಿಯೊಳಗ ಮನೀ  ಮಾಡಿ  ಮಗನ್ನ ಕರಕೊಂಡು ಅಲ್ಲೇ ನಿಂತ್ಲು. ಅದರ  ಜೋಡೀನs  ತವರಿನಾವರನೂ ಸಂಭಾಳಿಸಿಕೊಂಡು ಪೋಲ್ಮಿಲೇ  ಜೀವನದ ಹಾದಿ ತುಳದ್ಲು ಮಗನ ಜೋಡಿ. ತವರ ಬಿಟ್ಟು ಬ್ಯಾರೆ  ಆಸರ  ಏನಿತ್ತು ಆ ಪೋರಿಗೆ  ಅನುವು ಆಪತ್ತಿನ್ಯಾಗ. ಇಂಥಾ ಕಷ್ಟದಾಗೂ ಅಣ್ಣಾನ ತಿಳುವಳಿಕೆ ನೋಡಿ ಸಮಾಧಾನ ಮಾಡ್ಕೋತಿದ್ಲು ಏಕಾ.

ಅಣ್ಣಾ  ತಾವು  ಒಂಬತ್ತನೇ  ಕ್ಲಾಸ್ ನ್ಯಾಗ  ಇದ್ದಾಗಿಂದನs  ಏಕಾನ  ಸೋಬತಿ  ಬೆಳವಿ  ತ್ವಾಟಾ ಪಟ್ಟಿಗೆ  ಹೋಗಲಿಕ್ಕೆ  ಸುರು ಮಾಡಿದ್ರು. ಅಂದ್ರ ಆಗ  ಅವರಿಗೆ  ಅಜಮಾಸ ಹದಿನಾಲ್ಕು – ಹದಿನೈದ  ವರ್ಷ ಇದ್ದೀತು. ಈ  ಜೀವನಾ  ಅಂಬೂ  ಇಷ್ಟಗಲ ಹರಿವಿನ್ಯಾಗ  ಭರೆ  ಬುಚಕಳಸೂದಲ್ಲ, ಪೂರಾ  ಮುಳುಗಿ  ಈಸ ಬಿದ್ರು ಅಣ್ಣಾ  ಏಕಾನ  ಬಟ್ಟ ಹಿಡ್ಕೊಂಡ . ಆ ಅಪರಂಪಾರ ಹರಿವಿನ್ಯಾಗ ಮುಳಗಿದ್ರೂ  ಎತ್ತಲಿಕ್ಕೆ  ಆ ಆಸರ ಅಸರಂತ  ಅದ ಅಂಬೂ  ಭರೋಸ ಅಂತೂ ಭರಪೂರ  ಇತ್ತು.

ಇದs  ಹುಷಾರಕಿ  ಅಣ್ಣಾಗ  ಸಾಲಿ  ಒಳಗೂ , ಅಭ್ಯಾಸದಾಗನೂ  ಬಕ್ಕಳ  ಇತ್ತು. ಆಗಿಂದನ ಸಂಗೀತ,  ಹಾಡಿಂದನೂ  ಭಾಳ  ಖಯಾಲಿ  ಇತ್ತು ನಮ್ಮ  ಅಣ್ಣಾಗ. ಸಾಲಿ ಪುಸ್ತಕದಾಗ  ಇರೂ ಕವಿತಾ  ಸುದ್ಧಾ  ಛಂದ  ಧಾಟಿ  ಹಚ್ಚಿ  ಹಾಡಿ ಬಾಯಿ ಪಾಠ  ಮಾಡ್ತಿದ್ರು.  ಅಕ್ಷರ ಅಂತೂ  ಮುತ್ತ ಇಟ್ಟಹಾಂಗ. ಹೀಂಗ  ಸ್ವಲ್ಪ ತ್ರಾಸದಾಗ  ಆದ್ರೂ ಸರಳ ಸುರಳೀತ  ನಡದಿತ್ತು. ಭರೇ  ಹೊಲದ  ಉತ್ಪನ್ನ  ಒಂದs  ಆಧಾರ. ನಮ್ಮಜ್ಜ ಇದ್ದಾಗನೂ  ಅಷ್ಟೇ ಆದರೂ  ಅದಕೊಂದು  ಬ್ಯಾರೇನ  ಖದರ ಇತ್ತು ದೇಸಗತಿದು. ಅಣ್ಣಾ ಆ ಪ್ರಮಾಣಲೆ  ಸಣ್ಣ ಹುಡುಗ  ಇನ್ನೂ. ಏಕಾಂದು  ದೊಡ್ಡ  ಆಸರ ಇದ್ರೂ , ಆಕಿ ವ್ಯವಸ್ಥಿತ ಮಾಲ್ಕೀತನಾ  ಮಾಡ್ತಿದ್ರೂ  ಒಂಚೂರು ತ್ರಾಸ ಆಗs ತಿತ್ತು ; ಮಳೀ ಆಗೂದ್ರಾಗ ಹೈಗೈ ಆಗೂದು, ಆಳಿನ  ಕೆಲಸಾ. ಒಂದs  ಎರಡs  ಹಜಾರ ಇರೂವು. ಮತ್ತ  ಹೆಣ್ಣ ಹೆಂಗಸು  ಏಕಾ. ಇದೂ ಒಂದ  ಭಾಳ  ಲೆಕ್ಕಕ್ಕ  ಬರೂದು ಆ ಕಾಲ ಘಟ್ಟದಾಗ. ಏಕಾನ ವತಾವತೀಲೆ  ನಮ್ಮಜ್ಜ ನಂದಿಕುರಳೀದು ಒಂದ  ನಾಲ್ವತ್ತ  ಎಕರೆ ಮನಿಂದನ ಬಾಗಾಯತಿ  ಮಾಡಸ್ತಿದ್ರು. ಆದ್ರ ನಮ್ಮ ಅಜ್ಜ  ಅಚಾನಕ್ಕಾಗಿ  ತೀರಕೊಂಡ ಮ್ಯಾಲ ನಮ್ಮ ಏಕಾನ  ಅಪ್ಪ  ಏಕಾನ್ನ  ಒಂದೂ ಮಾತ  ಹೇಳದ  ಕೇಳದ  ಅದನ್ನೂ  ಮತ್ತ  ಫಾಳೇದಲೆ  ಕೊಟ್ಟಬಿಟ್ರು  ಈಗಾಗಲೇ  ಫಾಳೇದಲೆ  ಕೊಟ್ಟ ಜಮೀನ  ಜೋಡಿ. ಚಿಕ್ಕೋಡಿಂದ  ಬೆಳವಿಗೆ ತ್ವಾಟದ  ಕೆಲಸದ ಸಲವಾಗಿ   ಅಣ್ಣಾಂದ   ಓಡಾಡೂದ ಚಾಲೂ  ಆದಮ್ಯಾಲ  ,  ಅಣ್ಣಾ ನಂದಿಕುರಳಿಗೂ  ಫಾಳೇದ  ವಸೂಲಿಗೂ ತಾಂವ ಹೋಗಲಿಕ್ಕ  ಸುರು ಮಾಡಿದ್ರು. ಒಂದಿಪ್ಪತ್ತ  ಸಲಾ ಓಡಾಡ್ಸವ್ರಂತ  ಆ ರೊಕ್ಕಾ  ಕೊಡ್ಲಿಕ್ಕೆ.  ನೂರಾರ ಎಕರೆ  ಜಮೀನಿನ  ಮಾಲಕ  ತನಗ  ನ್ಯಾಯವಾಗಿ  ಬರಬೇಕಾದ ತಂದs  ರೊಕ್ಕಕ್ಕ  ಹೀಂಗ  ಓಡಾಡ ಬೇಕಿತ್ತು.  ಪೂರಾ ಹಿಂಡಿ ಹಿಪ್ಪಿ ಮಾಡಿ  ಅದೂ  ಥೋಡೆ ಥೋಡೆ  ರೊಕ್ಕಾ ಕೊಟ್ಟ ಕಳಸಾವ್ರು  ರೈತರು. ಪರಿಸ್ಥಿತಿದ  ಗೈರ ಫಾಯದೇ ಎಲ್ಲಾರೂ ತಗೋಳಾವ್ರೆಲಾ. ಹೆಚ್ಚು ಕಡಿಮಿ ಫಾಳೇದ್ಲೆ  ಹೊಲಾ  ಕೊಟ್ಟ ಎಲ್ಲಾ  ವತನದಾರರ ಪರಿಸ್ಥಿತಿ  ಹಿಂಗ  ಇತ್ತೋ ಏನೋ. ಆದ್ರ ಸಣ್ಣ ಹುಡುಗ  ಓಡಾಡ್ತದ  ಅಂಬೋ  ಕಿಂಚಿತ್ ಮನುಷ್ಯತ್ವ  ಇರಲಿಲ್ಲಲಾ  ಅಂತ  ನಂಗ  ವಿಚಿತ್ರ ಅನಸೂದು. ಏಕಾ ಅಣ್ಣಾ  ಬರೂತನಕಾ  ಒಂದ  ಹನಿ ನೀರೂ  ಬಾಯಾಗ  ಹಾಕದs  ಅವರ  ಹಾದಿ  ನೋಡಕೋತ  ಕೂಡ್ತಿದ್ಲು . ಅದನ್ನ ನಾ  ಸಣ್ಣಾಕಿ ಇದ್ದಾಗ  ಅಂದ್ರ ಹುಕ್ಕೇರಿಗೆ  ಬಂದ ಮ್ಯಾಲನೂ  ನೋಡಿದ  ನೆನಪದ. ಆಮ್ಯಾಲ  ಆ ಹೊಲಾ  ಮಾರೇಬಿಟ್ರು.

ನಮ್ಮ ಏಕಾ  ತಾನs  ತನ್ನ  ಅಮಾನತಿನ  ಕಾಳಜಿ  ತಗೋಳಿಕ್ಕೆ ಸುರು  ಮಾಡೂದ್ರಾಗ  ಬೆಳವಿ  ಜಮೀನನೂ  ಅರ್ಧಕ್ಕರ್ಧಾ  ಫಾಳೇದಲೇನ  ಕೊಟ್ಟಬಿಟ್ಟಿದ್ರು ನಮ್ಮ ಏಕಾನ ಅಪ್ಪ. ಸ್ವಲ್ಪ  ಜಮೀನು ಮಾರಿನೂ ಬಿಟ್ಟಿದ್ರು. ಆ ಮ್ಯಾಲ  ಎಲ್ಲಾ ಮಾಮಲಾ  ತನ್ನ  ತಾಬೇಕ್ಕ  ತೊಗೊಂಡ ಮ್ಯಾಲ ಏಕಾ  ಒಂದೊಂದs  ಚೊಕ್ಕ ಮಾಡೂದ್ರಾಗ  ವ್ಯಸ್ತ ಆದ್ಲು.  ಏಕಾ, ಅಣ್ಣಾ ಭಾಳ ಗುದ್ದಾಡಿ ಏನೇನೋ  ಗಾರಾಗತ್ಲಿ  ಮಾಡಿ, ಫಾಳೇಕ್ಕ ಹೊಲಾ ಹಿಡದ  ರೈತರಿಗೆ ಒಂದ  ನಾಕ ನಾಕ  ಎಕರೆ ಜಮೀನ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಕೊಟ್ಟು  ಹೊಲಾ  ಎಲ್ಲಾ  ತಮ್ಮ  ತಾಬಾಕ್ಕ   ತೊಗೊಂಡ್ರು. ಹಿಂಗ  ವಯಸ್ಸಿನ   ಗೊಡವಿ  ಇರದs  ಈ  ಥರದ  ಜವಾಬ್ದಾರಿ  ಹೊತ್ತಿದ್ರು ನಮ್ಮ ಅಣ್ಣಾ ಏಕಾನ ಜೋಡಿ ; ಏಕಾನ ಕೈ ತಳಗ  ತಯಾರ ಆಗ್ಲಿಕ್ಹತ್ತಿದ್ರು

ಆದ್ರ ನಮ್ಮ ಏಕಾ  ಅಣ್ಣಾನ  ಶಿಕ್ಷಣದ  ಬಾಬ್ತಿ ಒಳಗ  ಏನೂ  ಹೇರಪೇರ  ಆಗಲಿಕ್ಕೆ  ಅಜೀಬಾತ ಬಿಡ್ತಿದ್ದಿಲ್ಲ. ಆ  ವಿಷಯಕ್ಕ ಆಕಿ  ಅಗದೀ  ಅಟಲ ಇದ್ಲು. ಹಿಂಗಾಗಿ  ಎಲ್ಲಾತರದೂ  ಪೂರಾ  ಜವಾಬ್ದಾರಿ  ಏಕಾಂದನs. ಅದರಾಗೇನ  ಎರಡ  ಮಾತs  ಇದ್ದಿಲ್ಲ; ಹಂಗs  ಮತ್ತೇನ  ಬ್ಯಾರೆ  ಹಾದಿನೂ  ಇದ್ದಿದ್ದಿಲ್ಲ. ಏಕಾ  ಅಣ್ಣಾಗ  ಅಸರಂತ ಹೇಳ್ಕೋತನs  ಇರಾಕಿ;”  ಅಣ್ಣಪ್ಪಾ  ಭರೇ  ಒಕ್ಕಲತನದ   ಉತ್ಪನ್ನದಲೆ  ಸಂಸಾರ  ನಡಸೂದ ಅಷ್ಟ ಹಗರ  ಇಲ್ಲಪಾ  ಈಗ. ನಾವೇನೋ  ಈಗ  ಇಬ್ರ ಇದ್ದೀವಪಾ  ನಡೀತದ. ಸಣ್ಣಹಾಂಗ  ದಿನ ಮಾನನೂ  ಬದ್ಲ ಆಗಲಿಕ್ಹತ್ಯಾವ  ನೋಡ. ಕಲ್ತು ಶಾಣ್ಯಾ ಆಗಿ  ನೋಕರಿ  ಮಾಡೂ; ಕೈತುಂಬ  ಪಗಾರ  ತಗೋ. ಏನಪಾ ” ಅಂತ ಹೇಳಾಕಿ. ಅದೂ  ಬರೋಬ್ಬರಿನೇ. ಏಕಾ ಭಾಳ ಸಾರಾಸಾರ ವಿಚಾರ ಮಾಡಾಕಿ.

ಇನ್ನೊಂದ  ಅಗದೀ  ಕರಳ ಕಿವಚೂ  ವಿಷಯ  ಅಂದ್ರ  ನಮ್ಮ  ಅಣ್ಣಾಂದು  ಮುಂಜಿವಿ  ಆದ ಕೂಡ್ಲೇ  ಆ  ಸಣ್ಣ ವಯಸ್ಸಿನಾಗನs  ಅಣ್ಣಾ  ತಮ್ಮ  ಅಪ್ಪಂದು,  ಮತ್ತ ತಮ್ಮ  ಮಲತಾಯಿದು ಶ್ರಾದ್ಧ  ಮಾಡ್ಬೇಕಾತು. ಪಕ್ಷಮಾಸದಾಗ ಪಕ್ಷಾ  ಮಾಡೂದು ಇವೆಲ್ಲಾ  ಚಾಲೂನೇ ಆದು. ಎಂಟ  ವರ್ಷಕ್ಕಂದ್ರ  ಆಗೆಲ್ಲಾ  ಮುಂಜಿವಿ  ಮಾಡಿ ಬಿಡ್ತಿದ್ರು. ಏಕಾ  ಕಣ್ಣಾಗ  ನೀರ ತಂದು  ಹೇಳ್ತಿದ್ಲು; ” ಇನ್ನೂ  ನೆಟ್ಟಗ  ತೊಳ್ಕೋಳಿಕ್ಕೆ  ಬರತಿದ್ದಿಲ್ಲಾ . ಅಂಥಾ  ಸಣ್ಣ ಕೂಸು ತಮ್ಮ ಅಪ್ಪಗ, ಅವರ  ಮೊದಲನೇ ಹೆಂಡ್ತಿಗೆ  ತರ್ಪಣಾ‌  ಬಿಡ್ತಿತ್ವಾ ನನ್ನ ಕೂಸು”  ಅಂತ ಹೇಳ್ತಿದ್ಲು. “ಏನ ಮಾಡೂದು; ಏನೇನ  ಬೇಡಿ ಬಂದಿರತದ ಅದ  ಹಂಗs  ನಡೀಲಿಕ್ಕೇ  ಬೇಕ ನೋಡವಾ” ಅಂತ  ಉಸಗಾರಿ ಹಾಕಾಕಿ  ಏಕಾ. ಅಣ್ಣಾ ನಮಗ  ಹೇಳ್ತಿದ್ದದ್ದೂ  ನೆನಪ  ಅದ. ” ನಂದು,  ನಮ್ಮಪ್ಪಂದು  ಇಷ್ಟs  ನೋಡ್ರೆಪಾ  ಋಣಾ”  ಅಂತ. ಈ  ಮಾತ  ಹೇಳ ಬೇಕಾದ್ರ  ಅವರ  ಕರಳ  ಎಷ್ಟ ಹುರಪಳಿಸಿಧಂಗ ಆಗಿರಬೇಕು  ಅಂತ ಈಗ  ಅನಸ್ತದ ನಂಗ.

ಏಕಾ  ಒಂದ  ವಿಚಾರ  ಎರಡ ಮೂರ  ಸರ್ತೆ ಅಂದಿದ್ಲು  ನನ್ನ  ಮುಂದ. ” ಅಕ್ಕವ್ವಾ  ನಿಮ್ಮಜ್ಜಗ ಭವಿಷ್ಯದ  ಬಗ್ಗೆನೂ  ಚೂರ ಚೂರ  ಮಾಹಿತಿ  ಗೊತ್ತಾಗ್ತಿತ್ತೋ   ಏನೋ ನೋಡ. ಅವರಿಗೆ  ಏನ ಸಂಶೆ  ಬಂತೋ ಗೊತ್ತಿಲ್ಲಾ. ಒಂದೆರಡ  ದಿನಾ  ಯಾಕೋ ಭಾಳ  ಬೇಚೈನ  ಇದ್ರು. ಏನೋ ವಿಚಾರ  ಮಾಡಾವ್ರು; ಏನೋ  ಲೆಕ್ಕಾ ಹಾಕಾವ್ರು. ನನಗಂತೂ ಏನೂ  ಅಂತ  ಹತ್ಲಿಲ್ಲಾ. ಭಾವಜೀದು  ತಬ್ಬೇತ  ಭಾಳ  ಖರಾಬ  ಆಗಲಿಕ್ಹತ್ತಿತ್ತಲಾ  ಅದರದs  ಕಾಳಜಿ  ಇದ್ದೀತು  ಅಂತ  ನಾನೂ  ಗಪ್ಪ ಕೂತ ನೋಡವಾ. ಆ ಮ್ಯಾಲ ಅಂದ ಸಂಜೀನ್ಯಾಗ  ಒಬ್ಬ ಜ್ಯೋತಿಷಿ ಕಡೆ  ಹೋಗಿ ಬಂದ್ರ  ಅಕ್ಕವ್ವಾ.  ನನಗೂ  ಹೇಳದ ಹೋಗಿ ಬಂದ್ರು; ದಿನಧಂಗ  ಎಂಟ ಪೌಣೆ ಎಂಟಕ್ಕ  ಬಂದ್ರು.ಬಂದಾವ್ರs  ನನ್ನ  ಕರದ್ರು. ಹೇಳಿದ್ರು -” ಇಕಾ ನೋಡ್ರಿ  ಬಾಯಿ ಸಾಹೇಬ, ನೀವು  ಅಣ್ಣಾ ಸಾಹೇಬಂದು  ಎಲ್ಲಾ  ಸೌಭಾಗ್ಯ ನೋಡ್ತೀರಿ. ನನಗ  ಮಾತ್ರ ಇಷ್ಟೇ ನೋಡ್ರಿ” ಅಂತ ಹೇಳಿ  ನೀರ ಬಿಡಾವ್ರ ಹಂಗ ಕೈ ಮಾಡಿ  ತೋರಿಸಿದ್ರ ನೋಡವಾ. ನಾ ಏನರೇ ಅಪದ್ಧ ಮಾತಾಡಬ್ಯಾಡ್ರಿ  ಅಂತ ಎದ್ದ ಹೋದೆ ” ಅಂತ ಹೇಳಿದ್ಲು  ಏಕಾ. ನಾ ಕೇಳಿದ್ದೆ  ಆಕಿನ್ನ  ಯಾವಾಗ ಇದು  ಏಕಾ”  ಅಂತ. “ಅವರು ಹೋಗೂಕಿಂತಾ  ಮೊದಲ  ಒಂದ  ನಾಕಾರ ತಿಂಗಳ  ಇರಬೇಕವಾ. ನಾ ಎರಡನೇದ   ಬಸರ  ಇದ್ದ ಆಗ. ಅಷ್ಟ ನೆನಪದ ” ಅಂದ್ಲು. ನನಗೂ  ಏನೂ ತಿಳೀಲಿಲ್ಲ ಮಾತಾಡ್ಲಿಕ್ಕೆ.‌ ಜೀವನದ ಆಟಾ, ಓಟಾ  ಹೆಂಗಿರತದ, ಆತನ ಲೆಕ್ಕ  ಏನಿರತದ  ಅದು ಯಾರ  ಅಂದಾಜಿಗೂ  ಸಿಗೂದಲ್ಲ ಅದು. ಯಾವ ಲೆಕ್ಕಾ ಹಾಕಿ, ಏನೇನ ಆಗಬೇಕಂತ  ನಮ್ಮಜ್ಜನ  ಜೋಡಿ  ಏಕಾನ  ಮದವಿ  ಮಾಡಿಸಿದ್ನೋ ಏನೋ!

ಅಣ್ಣಾ  ಮೊದಲನೇ ಸಲಕ್ಕನs  ಮ್ಯಾಟ್ರಿಕ್ ಪಾಸ್  ಆದ್ರು.ಆಗೆಲ್ಲಾ  ಅದು  ಭಾಳ  ದೊಡ್ಡ  ವಿಚಾರ. ನಮ್ಮ ಅಣ್ಣಾನ  ಮಾಮಾ  ಐನಾಪೂರ ಸಾಲಿಂದ  ಮೊದಲನೇ  ಚಾನ್ಸಿಗೆ  ಮ್ಯಾಟ್ರಿಕ್   ಪಾಸಾದಾಗ  ಕೊಂಬ  ಹಚ್ಚಿಸಿ ಮೆರವಣಿಗೆ  ಮಾಡಿದ್ರಂತ  ಐನಾಪೂರದಾಗ. ಬೆಳಗಾವಿ  ವಿಭಾಗಕ್ಕೆಲ್ಲಾ  ಬೆಳಗಾವಿ ಒಂದೇ  ಪರೀಕ್ಷಾ ಕೇಂದ್ರ. ಅಣ್ಣಾ ಚಿಕ್ಕೋಡಿ ಸಾಲಿಂದ  ಮ್ಯಾಟ್ರಿಕ್ ಪಾಸಾದ್ರು, ಬೆಳಗಾವಿ ಕೇಂದ್ರದಿಂದ. ಆಗ ಈ ಬೆಳಗಾವಿ, ಧಾರವಾಡ ಎಲ್ಲಾ ಮುಂಬೈ ಕರ್ನಾಟಕ  ಪ್ರಾಂತದಾಗ  ಬರ್ತಿದ್ದು. ಅಲ್ಲಿಂದ ಮ್ಯಾಟ್ರಿಕ್ ಪಾಸ್ ಆದಮ್ಯಾಲ  ಕಾಲೇಜಿಗೆ  ಸಾಂಗಲಿಗ  ಹೋದ್ರು ಅಣ್ಣಾ.ಅಲ್ಲೆ  ವಿಲಿಂಗ್ಡನ್ ಕಾಲೇಜಿಗೆ  ಸೇರಕೊಂಡ್ರು.ಸಾಂಗಲಿಂದ  ಬೆಳವಿ, ನಂದಿಕುರಳಿ  ಎರಡೂ ದೂರನs  ಆಗ್ತಿದ್ದು. ಆದ್ರೂ ಏಕಾ  ಸಾಂಗ್ಲಿಯೊಳಗs  ಮನಿ ಮಾಡಿ ಮಗನ ಜೋಡೀನs  ಇದ್ಲು  ಅಣ್ಣಾಗ  ಊಟದ್ದ ತ್ರಾಸ  ಆಗಬಾರದು ಅಂತ. ಅಲ್ಲಿಂದನs  ಹೊಲಾ ಮನಿ  ಸಂಭಾಳಿಸಿದ್ಲು. ಪರೀಕ್ಷಾ ಆದ ಮ್ಯಾಲ, ಮತ್ತೇನರೆ  ಸೂಟಿ ಇದ್ದಾಗ, ತಮಗ  ವ್ಯಾಳ್ಯಾ ಸಿಕ್ಕಾಗ  ಅಣ್ಣಾನೂ ಏಕಾನ ಜೋಡಿ  ಹೊಲದ ಕೆಲಸಕ್ಕ ಕೈ ಹಚ್ಚತಿದ್ರು. ಅವ್ವಾ – ಮಗಂದು  ಭಾಳ ಕಷ್ಟದ್ದ  ಜೀವನಾ. ಆದರ  ತಪ್ಪಿ ಸದ್ಧಾ  ಒಮ್ಮೆನೂ ಅಣ್ಣಾ ಆಗಲಿ , ಏಕಾ  ಆಗಲಿ  ಹಂಗ ಅಂತಿದ್ದಿಲ್ಲಾ.

ಅಣ್ಣಾಂದು ಅಲ್ಲೆ FY ಮತ್ತ ಇಂಟರ್  ಆತು. ಆದ್ರ  ಜ್ಯೂನಿಯರ್  ಬಿ.ಏ.ಕ್ಕ ಮೊದಲ ಪ್ರಯತ್ನ ನಪಾಸ  ಆದ್ರು. ಏಕಾ  ಇನ್ನೊಮ್ಮೆ ಪರೀಕ್ಷಾಕ್ಕ  ಕೂಡು ಅಂದ್ರೂ  ಅಣ್ಣಾ ತಮ್ಮ ಅವ್ವಗ  ಎಷ್ಟ  ತ್ರಾಸ  ಕೊಡೂದು ಅಂತನೋ ಏನೋ ನೌಕರಿಗೆ  ಸೇರಿದ್ರು. “ನೌಕರಿ  ಮಾಡ್ಕೋತನ    ಬಿ.ಏ.ಮಾಡ್ತೀನ  ಸೋನವ್ವಾ”  ಅಂತ  ಸಮಾಧಾನ  ಹೇಳಿದ್ರು ಏಕಾಗ. ಅಣ್ಣಾ ಸೇರಿದ್ದು ಆಗ ಸರ್ಕಾರಿ  ನೋಕ್ರಿಗೆ. ಈ ರೇಷನ್  ಅಂಗಡಿ  ಮ್ಯಾಲೆ  ಸುಪರ್ ವೈಸರ್  ಅಂತ ಅವರ  ಹುದ್ದಾ ಇತ್ತು. ಆದ್ರ ಪೋಸ್ಟಿಂಗ್  ವಿಜಾಪೂರಕ್ಕ  ಇತ್ತು.

ಅಣ್ಣಾ ವಿಜಾಪುರದಾಗ  ಇದ್ದಾಗನs  ಮೊದಲs  ನೋಡೇ ಇಟ್ಟಿದ್ದ  ಅವರ  ಪ್ರೀತಿಯ ಹುಡುಗಿ  ಐನಾಪೂರದ  ಮಾಹುಲಿ  ಶ್ರೀನಿವಾಸಾಚಾರ  ಮಗಳು ಕುಸುಮಾ  ಅಂದ್ರ  ನಮ್ಮವ್ವನ   ಜೋಡಿ  ಅಣ್ಣಾನ  ಮದವಿನೂ ಆತು. ಆಗ  ನಮ್ಮ  ಅಣ್ಣಾ  ಇಪ್ಪತ್ತೊಂದು ವರ್ಷದಾವ್ರು  ಮತ್ತ ನಮ್ಮ ಅವ್ವಾ  ಹದಿನೆಂಟ  ವರ್ಷದಾಕಿ.  ವಿಜಾಪುರದಾಗನ  ಅದೇ  ಕೆಲಸದಾಗ ಒಂದ   ಯೋಳೆಂಟ  ತಿಂಗಳ ಇದ್ರು ಅಣ್ಣಾ. ಆದ್ರ ಅಲ್ಲಿದ್ದು  ಬೆಳವಿ ನಂದಿಕುರಳಿ ತ್ವಾಟಾ ಪಟ್ಟಿ  ನೋಡ್ಕೋಳೋದು ಭಾಳ ಕಠಿಣ ಇತ್ತು. ದೂರ ಆಗ್ತಿತ್ತು ಮತ್ತ  ಈಗಿನ ಹಂಗ  ಬಸ್ ಗಿಸ್  ಅಂತ  ಅಷ್ಟ  ವ್ಯವಸ್ಥಿತ  ಅನುಕೂಲ  ಇದ್ದಿದ್ದಿಲ್ಲ. 

ಅಗದಿ  ಹೇಳಿ  ಮಾಡಿಸಿಧಂಗ  ಬರೋಬ್ಬರಿ  ಅದs  ವ್ಯಾಳ್ಯಾಕ್ಕ ಹುಕ್ಕೇರಿಯೊಳಗ  ಹೊಸಾ  ಹೈಸ್ಕೂಲ್  ಸುರು ಆತು. ಅಣ್ಣಾ ಹಿಂದ ಮುಂದ ನೋಡದs  ಆ  ಸರ್ಕಾರಿ ನೋಕ್ರಿಗೆ  ರಾಜೀನಾಮೆ  ಕೊಟ್ಟ  ಹುಕ್ಕೇರಿ  ಸಾಲ್ಯಾಗ  ಟೀಚರ್  ಅಂತ  ಸೇರೂ   ವಿಚಾರ  ಮಾಡಿ ಅರ್ಜಿ  ಕೊಟ್ರು; ಹಂಗs  ನೇಮಣೂಕೀನೂ ಆತು. ಇಲ್ಲಿ  ಹುಕ್ಕೇರಿಯೊಳಗ  ಇದ್ದು  ನೋಕರಿ ಮಾಡ್ಕೋತ  ಹೊಲಾ- ಮನಿ  ಎರಡೂ ಸಂಭಾಳಸೂದು  ಸಾಧ್ಯ ಇತ್ತು. ಬೆಳವಿ  ಅಂತೂ ಅಗದೀನs ಹತ್ರ ಇತ್ತು. ಎಂಟ ಮೈಲ ಆಗ್ತಿತ್ತು. ದಿನಾ  ಸೈಕಲ್ ಮ್ಯಾಲ  ಹೋಗಿ ಬರ್ತಿದ್ರು  ನಮ್ಮ ಅಣ್ಣಾ.ನಂದಿಕುರಳಿ  ಹೊಲಾ  ಇನ್ನೂ ಫಾಳೇದಲೇನ  ಇತ್ತು. ಖರೇ ಫಾಳೇ ವಸೂಲಿಗೆ  ಹೋಗಿ ಬರಬೇಕಾಗ್ತಿತ್ತು.  ಆದರೂ ಅಟಪದಾಗಿನ ಕೆಲಸ ಇತ್ತು ಅದು. ಹಿಂಗಾಗಿ  ಅಣ್ಣಾ ಹುಕ್ಕೇರಿಯವರಾದ್ರು. 

ನಮ್ಮ ಅಣ್ಣಾಂದೂ  ಥೇಟ್  ಅವರವ್ವ , ನಮ್ಮ ಏಕಾನ  ಧರತೀನೇ,  ಹೂಬೇಹೂಬ  ಏಕಾನ ಹಂಗs. ಮನಸಿಗೆ  ಬ್ಯಾಸರಕಿ, ದೇಹಕ್ಕ  ದಣಿವು ಅನೂದು  ಆಗೇತಿದ್ದಿಲ್ಲೋ  ಏನೋ ಅಂತೀನಿ. ಮುಂಜಾನೆ  ಏಕಾ  ಎದ್ದ ಕೂಡಲೆ  ತಾವೂ  ಎದ್ದs ಬಿಡ್ತಿದ್ರು. ಮಾರಿ  ತೊಳ್ಕೊಂಡ  ಅಷ್ಟ ಚಹಾ  ಕುಡದ  ದೇವರಿಗೆ, ಏಕಾಗ  ನಮಸ್ಕಾರ ಮಾಡಿ ಆಮ್ಯಾಲ  ಮನಿ ಮುಂದಿನ  ಹಣಮಪ್ಪಗ  ಗುಡಿ ಹೊರಗಿಂದನs  ಮುಚ್ಚಿದ ಬಾಗಲ ಮುಂದ  ನಮಸ್ಕಾರ ಮಾಡಿ  ಸೈಕಲ್  ಏರಿದ್ರಂದ್ರ  ಗಾಳಿ ಜೋಡಿ  ಕಾಂಪಿಟೇಷನ್  ಇದ್ಧಾಂಗನ  ಲೆಕ್ಕ. ಹೊತ್ತ  ಹುಟ್ಟೂಕಿಂತಾ  ಮೊದಲ  ಬೆಳವಿ  ಹೊಲದಾಗ  ಇರ್ತಿದ್ರು  ಅಣ್ಣಾ. ಎಲ್ಲಾ ಕಡೆ  ತಿರಗ್ಯಾಡಿ  ನೋಡಿ  ಮೊದಲs  ಲೆಕ್ಕಾ ಹಾಕಿ  ಇಟ್ಟದ್ರಾಗ  ಒಂಚೂರೂ  ಹೆಚ್ಚು ಕಡಿಮಿ  ಆಗಧಾಂಗ   ಆಳು ಮಕ್ಕಳು, ರೈತರು  ಬಂದ ಬಂಧಂಗ  ಅವರ  ಕಡಿಂದ  ಕೆಲಸ ಮಾಡಿಸಿಗೋತ  ಒಂಬತ್ತೂವರಿ- ಪೌಣೆ ಹತ್ತರ ತನಕಾ  ಅಲ್ಲಿದ್ದು  ಆ ಮ್ಯಾಲೆ  ಮನಿಗ  ಬರೂದು, ಬಂದು ಸ್ನಾನ, ಊಟಾ  ಮುಗಿಸಿ  ಸಾಲಿಗೆ  ಹೋಗೂದು. ಈ  ಠರಾವಿಕ  ವ್ಯವಸ್ಥಾದಾಗ  ಹೆಚ್ಚು ಕಡಿಮಿ  ಆಗೂದು  ಭಾಳ  ಕಡಿಮಿ. ಬಿತಿಗಿ,  ಹೊಲ ತುಂಬ  ಫಸಲ ತುಂಬಿ ನಿಂದಾಗ  ಸುಗ್ಗಿ ಒಳಗ  ಏಕಾ  ಅಲ್ಲಿದ್ದs    ಇರತಿದ್ಲು. ಆದರೂ  ಅಣ್ಣಾನ  ದಿನ ನಿತ್ಯದ  ಕೆಲಸ  ಅಗದೀ ಚೊಕ್ಕ ಅದs  ಹಾದ್ಯಾಗನs  ನಡೀತಿತ್ತು. ಹಿಂಗಾಗಿ ರೈತರಿಗೆ  ಕೆಲಸದ್ದು ಒಳೇ ರಿಕ್ಕ  ಹತ್ತೂದು. ಇಲ್ಲಿ ಹಗಲು- ರಾತ್ರಿ  ಆಕ್ಕಾಗೋಳ  ಅಜ್ಜಗಾವಲು; ಇದರ  ಮ್ಯಾಲ  ಅಣ್ಣಾಗೋಳ  ಹೋಗ ಬರೂದು. ರೈತರಿಗೆ  ಕಳ್ಳಾಟ ಆಡಲಿಕ್ಕೆ  ವಾವನs  ಇರತಿದ್ದಿಲ್ಲಾ.

ಆಗ  ಮನೀ  ಒಳಗ  ಹಿಂಡೂ  ಎಮ್ಮಿ ಇತ್ತು. ತ್ವಾಟದಿಂದ  ಬರೂ ಮುಂದ  ಒಂದೂ  ದಿನಾ  ತಪ್ಪದ   ಅದಕೊಂದು ‌‌ ಎಳಿ ಹುಲ್ಲಿಂದ  ದೊಡ್ಡ  ಪೆಂಡಿ   ಮಾಡಿಸ್ಕೊಂಡು  ಸೈಕಲ್ಲ್  ಹಿಂದಿನ  ಕ್ಯಾರಿಯರ್  ಮ್ಯಾಲ  ಇಟ್ಕೊಂಡ ತರಾವ್ರು. ಅದೂ  ಅಣ್ಣಾ  ಬರೂ ಹಾದಿ ನೋಡ್ತಿತ್ತ  ಅನಸೂದು  ನಮಗ. ಒಮ್ಮೆ ಈ  ಹುಲ್ಲಿನ  ಪೆಂಡಿದ  ದೊಡ್ಡ  ಘೋಟಾಳಿ  ಆತು.

ಅದು  ನವರಾತ್ರಿ  ಮುಂದ.  ನವರಾತ್ರಿ  ಅಡಮಳಿ  ಬಲೆ  ಜೋರ  ಹುಕ್ಕೇರಿ, ಬೆಳವಿ ಅಲ್ಲೆಲ್ಲಾ. ಮಳಿನೂ ಹಂಗs, ಥಂಡಿನೂ  ಹಂಗs.  ಆಗ  ದಸರಾ ಸೂಟಿ ಇತ್ತು.  ನವರಾತ್ರಿ ಮುಗದಿತ್ತು. ಶೇಂಗಾ  ಸುಗ್ಗಿ  ನಡದಿತ್ತು. ಏಕಾ ಅಲ್ಲೇ ಬೆಳವ್ಯಾಗನ  ಇದ್ಲು. ಅಂದೂ ನೇಹಮಿ  ಪ್ರಮಾಣೆ  ಅಣ್ಣಾ ಹೊತ್ತ ಮುಣಗೂ  ತನಕಾ ಅಲ್ಲಿದ್ದು ,  ದಿನಧಾಂಗ  ಒಂದ  ದೊಡ್ಡ ಪೆಂಡಿ  ತಾಜಾ  ಹಸಿ ಹುಲ್ಲಿಂದು  ಮಾಡಿಸ್ಕೊಂಡು  ಹುಕ್ಕೇರಿಗೆ  ಹೊರಡೂ  ತಯಾರಿ  ಮಾಡ್ಕೊಂಡ  ಹೊಂಡಲಿಕ್ಕೆ  ತಯಾರ  ಆದ್ರು. ಭರ್ತಿ ಮಾಡ  ಏರಿ  ಬಂತು. ಗಾಳಿನೂ ಜೋರಾತು. ಏಕಾ,  

“ಅಣ್ಣಪ್ಪಾ ಇಂದ  ಇಲ್ಲೇ ಇದ್ದ ಬಿಡು. ನಶೀಕ್ಲೆ ಲಗೂನ ಹೋಗ್ಯಾಕಂತ. ಮಳಿ  ಭಾಳ  ಏರೇದ” ಅಂದ್ರೂ ಅಣ್ಣಾ,” ಎಷ್ಟೊತ್ತ  ಸೋನವ್ವಾ , ಅರ್ಧಾ ತಾಸಿನ್ಯಾಗ  ಮುಟ್ತಿನು. ಕುಸುಮಾನೂ  ಘಾಬ್ರಿ ಆಗ್ತಾಳ; ಸಣ್ಣು ಸಣ್ಣು ಹುಡಗೂರು; ದೊಡ್ಡ ಮನಿ. ಲೈಟಿಂದೂ ನೇಮ ಹೇಳ್ಳಿಕ್ಕ ಬರಾಂಗಿಲ್ಲ ಈ ಘಾಳಿ ಮಳಿಯೊಳಗ”  ಅಂತ ಹೇಳಿ  ಸೈಕಲ್ ಏರಿದ್ರು. ಏಕಾನ  ತಾಯಿ ಕರಳು ಹೊಯ್ದಾಡ್ಲಿಕ್ಹತ್ತು. ರಾಯಪ್ಪ, “ಅಕ್ಕಾಗೋಳ  ಘಾಬ್ರಿ ಆಗಬ್ಯಾಡ್ರಿ. ಈsಗ  ಮನಿ  ಮುಟ್ತಾರು  ಅಣ್ಣಾಗೋಳ” ಅಂದ. ಸ್ವಲ್ಪ ಹೊತ್ತ  ಹಂಗs  ನಿಂತು ಏಕಾ ಒಳಗ ಹೋದ್ಲು. ಅಣ್ಣಾ  ಅರ್ಧಾ  ಹಾದಿಗೆ  ಬರೂದ್ರಾಗ ದಿಕ್ಕ ಹಾರಿ  ಮಳಿ  ಎಲ್ಲಾ ಕಡಿಂದನೂ ಹೊಡೀಲಿಕ್ಹತ್ತು. ಕಿವಿ ಕಿವಡಾಗೂ ಹಂಗ  ಗುಡುಗು, ಕಣ್ಣ ಕುಕ್ಕೂ ಹಂಗ ಮಿಂಚು. ಖಡಾ ಖಡಲ್  ಸಿಡ್ಲು; ರೌದ್ರಾವತಾರದ ಮಳಿ. ಆ ಮಳಿ, ಕೆಟ್ಟ  ಕತ್ತಲದಾಗ ಏನೂ ಕಾಣಧಂಗ ಆತು. ಸೈಕಲ್ ಇಳದು ದೂಡಕೊಂಡ  ಅಲ್ಲೆ ಗಿಡದ ಬುಡಕ  ನಿಂತ್ರು ಅಣ್ಣಾ.ಅಷ್ಟ್ರಾಗ  ಅಲ್ಲೆ  ಸಮೀಪನs  ಒಂದ ಗಿಡಕ್ಕ ಸಿಡ್ಲ ಬಡೀತು. ಘಾಬರ್ಯಾಗಿ  ಅಲ್ಲಿದ್ದ ಒಂದ ಖಾಲಿ  ಗುಡ್ಲದಾಗ ಓಡಿ ಹೋಗಿ ಕೂತ್ರು ಅಣ್ಣಾ,  ಸೈಕಲ್ ಆ ಗಿಡದ ಬುಡಕ ಛಲ್ಲಿ. ಒಂಚೂರ  ಮಳಿ  ಅರ್ಭಾಟ  ಕಡಿಮಿ ಆದ ಕೂಡ್ಲೇ ಸೈಕಲ್ ಹತ್ತಿ  ಹುಕ್ಕೇರಿಗೆ  ಬಂದ್ರು. ಇಲ್ಲಿ ನಾವೆಲ್ಲಾ  ಏನೂ ತಿಳಿದs  ಗಪ್ಪಗಾರ  ಕೂತಾವ್ರು ಅಣ್ಣಾ ಬಂದ ಮ್ಯಾಲನs  ಮ್ಯಾಲಕ  ಎದ್ದದ್ದು. ತೊಪ್ಪನ ತೊಯಸ್ಕೊಂಡ  ಒಳಗ  ಬಂದ  ಅಣ್ಣಾ ನೋಡ್ತಾರ; ಹುಲ್ಲಿನ  ಪೆಂಡಿ  ಇಲ್ಲ! ಬಹುತೇಕ ಅಲ್ಲಿ  ಗಿಡದ ಬುಡಕ  ಸೈಕಲ್  ಬಿದ್ದಾಗ ಅಲ್ಲೇ ಬಿದ್ದಿರಬೇಕ  ಆ ಪೆಂಡಿ  ಅಂತ  ಲೆಕ್ಕಾ ಹಾಕಿ ಮತ್ತ ಮರುದಿವಸ  ಬೆಳ್ಳಿ ಚುಕ್ಕಿ  ಮೂಡೂದಕs  ಎದ್ದು ಸೈಕಲ್ ಹತ್ತಿ ಹೋಗಿ  ನೋಡೂದ್ರಾಗ  ಅದು ಅಲ್ಲೇ ಬಿದ್ದಿತ್ತಂತ. ಇನ್ನೂ ಮಂದಿ  ಓಡಾಟನೂ ಅಷ್ಟ ಸುರು ಆಗಿದ್ದಿಲ್ಲ; ಕತ್ಲ ಕತ್ಲೇ ಇತ್ತಲಾ. ಅದನ್ನ ತಗೊಂಡ  ಬಂದ್ರು ಅಣ್ಣಾ. ಅಣ್ಣಾ ಬಂದದ್ದ ನೋಡಿ  ಎದ್ದ ನಿಂತ  ಎಮ್ಮಿ ಗ್ವಾದ್ನ್ಯಾಗ  ಇಷ್ಟ ಹುಲ್ಲ ಹಾಕಿ ಎಮ್ಮಿ ಬೆನ್ನ ಮ್ಯಾಲ ಕೈಯಾಡಿಸಿ ಬಂದ್ರು ಅಣ್ಣಾ. ಆ  ಹುಲ್ಲಿನ ಪೆಂಡಿ ನಮಗ  ಅಷ್ಟ ದೊಡ್ಡದಲ್ಲಾ; ಆದ್ರ ಅಣ್ಣಾ ಆ ಎಮ್ಮೀಗಂತ  ತಾಜಾ ಹುಲ್ಲ ತಗೊಂಡು ಬಂದಿದ್ರು.ಅದಹೆಂಗ ಸುಮ್ಮ ಬಿಟ್ಟಾರು ಅವರು? ಅದವರ  ಸ್ವಭಾವದಾಗ  ಬಂದದ್ದs ಅಲ್ಲಾ.ಹಿಡದ ಕೆಲಸಾ  ಸಣ್ಣದಿರಲಿ,  ದೊಡ್ಡದಿರಲಿ ಅರ್ಧವಟ  ಮಾಡೂದ ಸಾಧ್ಯನs  ಇಲ್ಲ; ಥೇಟ್  ನಮ್ಮ ಏಕಾನ  ಗುಣಾನs  ಅವ್ರಿಗೂ ಬಂದಿದ್ದು; ಅವ್ರ ಹಂಗೇ  ಅವರ ಮಕ್ಕಳೂ ಅಗದೀ ಥೇಟ್ ಹಂಗೇ!

ನನಗ  ಯಾವಾಗಲೂ ಒಂದು ವಿಚಾರ ತಲಿಯೊಳಗೆ  ಬರತಿರತದ – ಏಕಾ ಹೆಚ್ಚ ಖಟಿಪಿಟಿನೋ, ಅಣ್ಣಾನೋ ಅಂತ. ಖರೆ ನನಗೆ ಠರಾವಿಕ ಉತ್ತರಾ  ಸಿಗೂದೇ ಇಲ್ಲ. ಆದರ ನನ್ನ ಮನಸು ರೋಕಠೋಕ  ಉತ್ತರಾ ಕೊಡ್ತದ -ಇಬ್ಬರೂ ಹಂಗೇ. ಅಣ್ಣಾ ಹೂಬೇಹೂಬ ಏಕಾನ್ಹಂಗೇ ; ಏಕಾನ ಮಗಾ ಅಣ್ಣಾ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Shrivatsa Desai

    ಕೆಂಪು ಸೀರೆ ಉಟ್ಟ ಏಕಾ ‘ಫಣಿಯಮ್ಮ’ ನನ್ನು ನೆನಪಿಸಿದಳು. ‘ಏಕಾನ ಅಂಬಾಡಾ ಕಾಣಸವಲ್ಲತಂತ ಆಕೀ ಸುತ್ತ ತಿರಗಿ ತಿರಗಿ ಹುಡಕಿ . “ನೀ ಸೋನವ್ವನs ಹೌದಲ್ಲ” ಅಂತ ಮತ್ತ ಮತ್ತ ಕೇಳಿ ದ ಹಸುಳೆಯ ದೃಶ್ಯ ಹೃದಯ ವಿದ್ರಾವಕ. ಆಗಿನ ಕಾಲದ ಬದುಕು ಉಲ್ಲೇಖಿಸಿದ ಎರಡು ಕಥಾನಾಯಕಿರಲ್ಲೇ ಕಂಡಾಗಲೇ ಕಠೋರ ಸಾಮಾಜಿಕ ಪದ್ಧತಿಯ ಕಲ್ಪನೆ ಬರೋದು. ‘ಜೋ ಜೋ ಜಬ್ ಜಬ್ ಹೋನಾ ಹೈ ,ಸೊ ಸೊ ತಬ್ ತಬ್ ಹೋತಾಹೈ!’. ಈಗ ಕಥಾ ನಾಯಕ – ಮುಂದಿನ ತಲೆಮಾರಿನವ – ಬದಲಾದಂತೆ ಕಾಣುತ್ತದೆ. ಮುಂದಿಬ ವಾರಕ್ಕೆ ಕಾಯುವೆ!

    ಪ್ರತಿಕ್ರಿಯೆ
    • Sarojini Padasalgi

      ತುಂಬ ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ.
      ಹೌದು ಕರುಳು ಹಿಂಡುವ ಅನುಭವ ಅದು. ಏಕಾ ಅದನ್ನ ಹೇಳುವಾಗ ಸಂಕಟ ನಂಗೆ. ಅದನ್ನ ಹೇಳಬೇಕೆಂದರೆ ಅದೆಷ್ಟು ನಿರ್ಲಿಪ್ತತೆ ಸಾಕಿಕೊಂಡಿದ್ದಾಳು ಆಕಿ ಅನಸ್ತದೆ ನಂಗೆ. ಓದಿ ಬರೆದಿದ್ದಕ್ಕೆ ಇನ್ನೊಮ್ಮೆ ಧನ್ಯವಾದಗಳು ಸರ್.

      ಪ್ರತಿಕ್ರಿಯೆ
  2. ಶೀಲಾ ಪಾಟೀಲ

    ” ಏಕಾ ” ರ ಜೀವದ ಜೊತೆಗಿನ ದೇವರ ಆಟ ಓದಿ ಕರುಳು ಹಿಚುಕಿದಂತಾಯಿತು. ಮುಂದೆ ಧೈರ್ಯ ದೊಂದಿಗೆ ಜೀವದ ಬದಲಾವಣೆಗೆ ಹೊಂದಿಕೊಂಡು , ಜೀವದ ಒಂದೇ ಒಂದು ಆಸರೆಯಾದ ಮಗನನ್ನು ತಮ್ಮದೇ ರೀತಿಯಲ್ಲಿ ಬೆಳೆಸಿದ್ದು ಹೃದಯ ಸ್ಪರ್ಶಿಯಾಗಿದೆ. ತಾಯಿಗೆ ತಕ್ಕ ಮಗ ….

    ಪ್ರತಿಕ್ರಿಯೆ
    • Sarojini Padasalgi

      ಹೌದು ಶೀಲಾ. ಬಹಳ ಸೂಕ್ಷ್ಮ ಮನ: ಸ್ಥಿತಿಯ ಗಳಿಗೆಗಳು ಅವು ನಮ್ಮ ಏಕಾ, ಅಣ್ಣಾ ಇಬ್ಬರ ಜೀವನದಲ್ಲೂ. ಕಠಿಣ ಪರಿಸ್ಥಿತಿಗಳೇ ಗಟ್ಟಿತನ ಬೆಳಸ್ತಾವೋ ಏನೋ ಅನಿಸ್ತದೆ. ಆದರೆ ನಾ ನೋಡೀನಿ ಆ ಗಟ್ಟಿತನದ ಅಡಿಗಿರುವ ಮೃದು ಮನಸನ್ನು, ಭಾವುಕತೆಯನ್ನು. ಗೊತ್ತಿಲ್ಲದೆ ಎಷ್ಟೋ ಸಲ ಮಂಕಾಗಿದೀನಿ ನಾ ದು:ಖ ತಡೀದೆ.
      ಧನ್ಯವಾದಗಳು ಶೀಲಾ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: