ಅಮಲಿನ ತಂತು..
ರೆಕ್ಕೆಯ ಬಡಿದಿದೆ ಎದೆಯ ಅಂಚಿಗೆ
ಗೆರೆಯನು ಗೀಚುತ ಮುಗಿಲಿನ ಹಕ್ಕಿ
ಕರಗಿದೆ ನೆರಳು,ಕಾಣದ ಕ್ಷಣದಲಿ
ಕಾರಣ ಅರಸಿದೆ ಅರಳದ ಚುಕ್ಕಿ..

ಕಂಪನ ಕಾಮದ ಸೊಂಪಿನ ತಂಪಿಗೆ
ಋತು ಬರೆದಿದೆ ಒಲವಿನ ಸಾರ
ಅವಿರತ ಅಮಲಿನ ಅರಿವಿನ ಧಾಟಿಗೆ
ಸ್ವರ ಹೊಸೆದಿದೆ ಹರೆಯದ ಪೂರ
ಬೆರಗು ಬಾನಿನ ಮೌನದ ಗರಿಗೆ
ಬಣ್ಣದ ಹೊಸನಶೆ ಕಾಮನಬಿಲ್ಲು
ನೆರಿಗೆ ನಾಚುವ ಸೀರೆಯ ತುದಿಗೆ
ಕುಸುರಿಯ ಕರೆದಿದೆ ಗೊಲ್ಲನ ಕೊಳಲು..
ಹಸಿವಿನ ಹೊಸನಗು ತುಟಿಯಾ ಮುಡಿಗೆ
ಇಂಗಿದೆ ಹಂಗಿನ ನೆಲದಲಿ ಬಿಸಿಲು..
ಬಿರಿಯುವ ಮೊಗ್ಗಿನ ಪಕಳೆಯ ಮೈಗೆ
ಕಾದಿದೆ ತವಕದಿ ಚಿಟ್ಟೆಯ ಕಾಲು..
ಕರಗುವ ಮೇಣದ ಬೆಳಕಿನ ರಾಶಿಗೆ
ಕತ್ತಲ ಪ್ರಸವದ ಕನಸಿನ ಲಹರಿ..
ತಂತಿಯ ಒಳಗೂ ನರಳುವ ಕೂಗಿಗೆ
ಸರಿಗಮ ಕಲಿಸಿದೆ ಬದುಕಿನ ತಂಬೂರಿ..






ಸಿರಿಗನ್ನಡ ಭಾಷೆಯ ಶ್ರೀಮಂತ ’ಶ್ರೀ’!
ಸರಿಗಮ ಸಂಗೀತ ಹಾಡುತಿರುವಂತ ನುಡಿಸಿರಿ,
ಮಧುರ ಚಂದಸ್ಸು, ಸುಸ್ರಾವ್ಯ ಪದಸಂಪತ್ತು,
ಹಿಡಿಸಿತೆನ್ನ ಮನಸ್ಸು, ಕಾವ್ಯ ಸಂಪದ ಗಮ್ಮತ್ತು!
ಶುಭಾಶಯಗಳು ತಿಳಿಸುವ ಅಭಿಲಾಷೆ ನನ್ನ ಗೊತ್ತು!
– ವಿಜಯಶೀಲ, ಬರ್ಲಿನ್
mavipra@gmx.de
nice very nice…!