ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರಯೂ ದಡದಲ್ಲಿ…

ಸಮುದ್ಯತಾ ವೆಂಕಟರಾಮು

ಒಂದು ಹುಣ್ಣಿಮೆಯ ಇರುಳು
ಸರಯೂ ಎಂದಿನಂತೆ ಎಲ್ಲ ಆಗುಹೋಗುಗಳಿಗೆ
ಒಡ್ಡಿಕೊಂಡು ತನ್ನ ಪಾಡಿಗೆ ತಾನು ಹರಿಯುತ್ತಿದ್ದ ಹೊತ್ತು
ನಿದ್ದೆ ಬರದ ರಾಘವ ಧಿಗ್ಗನೆದ್ದು ಕುಳಿತ
ಇದೇನೂ ಹೊಸದಲ್ಲವಲ್ಲ.
ಹೆಚ್ಚಿನ ಇರುಳುಗಳು ಹೀಗೇ
ಸದ್ದಿಲ್ಲದೇ ಹೊರವಂಟ
ಬಂದು ಕುಳಿತದ್ದೇ ಸರಯೂ ದಡದಲ್ಲಿ
ಕ್ಷಣಕಾಲ ಕಣ್ಮುಚ್ಚಿದವನ ಮನದೊಳಗೆ
ಹಲವಾರು ರೂಪಗಳು ತರಂಗಗಳಾಗಿ

ಕಣ್ಣು ಬಿಟ್ಟವನೆದುರಿನಲ್ಲಿ ಸುಳಿದಳು
ಅಂದು ಬಿಲ್ಲನೆತ್ತಿ ವರಿಸಿದ ಜನಕಸುತೆ
ನೋಡ ನೋಡುತ್ತಿದ್ದಂತೆ
ಆಕೆ ವಿರಹಿಣಿಯಾಗಿ ಶೋಕಿಸುತ್ತಿದ್ದಳು
ರೆಪ್ಪೆ ಮಿಟುಕಿಸುವಷ್ಟರಲ್ಲಿ
ಮತ್ತೆ ಸಾಲಂಕೃತಳಾಗಿ ತುಂಬು ಗರ್ಭಿಣಿ
ಇದ್ದಕ್ಕಿದ್ದಂತೆ ಬೀಸಿತೋ ಬಿರುಗಾಳಿ ತೆರೆಗಳ ರಭಸ‌
ದಿಕ್ಕೆಟ್ಟ ರಾಜಾರಾಮ ಅವನತ ಮುಖಿಯಾಗಲು
ಕಂಡಳಲ್ಲಿ ಮತ್ತೆ ಸೀತೆ
ಮುಗ್ದತೆಯೇ ಮೈ ವೆತ್ತಂತೆ

ಮತ್ತೆ ದಿಟ್ಟ ಹೆಣ್ಣಾಗಿ ಕುಶೀಲವರ ಮಾತೆಯಾಗಿ
ಹಾಗೇ ಒರಗಿಬಿಟ್ಟ ರಾಮ ಮರಳಹಾಸಿನ ಮೇಲೆ
ಏನು ಪತಿದೇವರೇ ಎಂದಂತೆ
ಈ ಬಾರಿ ಆಕೆ ಎಲ್ಲಭಾವಗಳ ಮೀರಿ ನಿಂತಂತೆ
ಸಮಾಗಮವೇ ಇಲ್ಲದ ವಿರಹವದು
ಅಯೋಧ್ಯೆಯ ಅರಸನಿಗೆ

ಸುಖ ನೀಡಿತೇ ಅರಸೊತ್ತಿಗೆ ಅವನಿಜೆಗೆ?
ಯಾವುದೂ ಬೇಡವೆಂದು ಎಲ್ಲದಕ್ಕೂ
ಸಂಬಂಧಗಳಿಗೂ ವಿದಾಯ ಹೇಳಿಬಿಟ್ಟಳಾಕೆ

ಕುಳಿರ್ಗಾಳಿಯೊಂದು ನೇವರಿಸಿ ಹೋದಂತೆ
ಇನ್ನೆಷ್ಟು ದಿನ ಕಾಯುವುದು ಮಹರಾಯರೇ
ಸಾಕಿನ್ನು ಈ ಬಣ್ಣ ಒರೆಸಿ ಬನ್ನಿರಲ್ಲಾ
ಎಷ್ಟು ದಿನ ಇದೇ ನಾಟಕವಾಡುವುದು
ಕಣ್ಣು ತೆರೆದರೆ ಸೀತೆಯಾದವಳು ಹೊಸದೊಂದು
ಪಾತ್ರಕ್ಕೆ ಸಿದ್ದಳಾಗಿರುವಂತೆ

ತಯಾರಾಗಿ ಕುಳಿತವಳ ಆಗ್ರಹದ ನುಡಿಗಳಿಗೆ
ಬಂದು ಬಿಡುವೆನೆ ದೇವಿ ಆದಷ್ಟು ಬೇಗನೆ
ನನಗೂ ಸಾಕೆನಿಸಿಬಿಟ್ಟಿದೆ ಈ ಕೋದಂಡ ದಂಡ

ಸಣ್ಣದೊಂದು ಸಂದೇಹ
ಯಾರು ಹೆಚ್ಚು ನರನೋ ದೇವನೋ ಕೇಳಿದಳಾಕೆ
ನರರೇ ಹೆಚ್ಚು ಕಣೇ ದೇವಿ ಅವರು ನಂಬಿದರಷ್ಟೇ ನಾವು
ಮರ್ತ್ಯ ರೆಂಬುವರೇ ಸತ್ಯ ನಾವು ಮಿಥ್ಯ

ನಾವು ಮತ್ತೆ ಮತ್ತೆ ಬಣ್ಣ ಹಚ್ಚುವವರು
ಅವರಾದರೋ ಬಂದದ್ದನ್ನೆಲ್ಲ ಅನುಭವಿಸಿ
ಮುಗಿಸಿ ಹೋಗುವವರು
ನಾವವರನ್ನು ರಕ್ಷಿಸುವವರೆಂದು
ಹೃದಯ ದೇಗುಲದಲಿಟ್ಟು ಪೂಜಿಸುವ
ನರರೇ ದೊಡ್ಡವರಲ್ಲವೇ

ರಾಮ ಮೆಲ್ಲನೆದ್ದು ನಿಂತು ವಸ್ತ್ರಕ್ಕಂಟಿದ್ದ
ಮರಳಿನಕಣಗಳನ್ನು ಕೊಡಹಿ ಪುರದತ್ತ ಹೆಜ್ಜೆಹಾಕಿದ
ಎಲ್ಲದಕ್ಕೆ ಸಾಕ್ಷಿಯಾಗಿದ್ದ ಸರಯು
ಮತ್ತೆ ಹೊಸ ನಾಟಕ ಎಂದು ಎಲ್ಲಿ ಹೇಗೆ
ಶುರುವಾಗುವುದೋ ಎಂಬ ಕಾತರದಲ್ಲಿ
ಸಡಗರದಿಂದ ತುಂ ತುಂಬಿ ಹರಿಯುತ್ತಿದ್ದಳು

‍ಲೇಖಕರು Admin

5 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading