ಸುರೇಶ ಎಲ್ ರಾಜಮಾನೆ
ರಸ್ತೆ ಬದಿಯಲಿ ಹರಿಯುವ ಕೊಳಚೆ ನೀರು
ಶುದ್ಧೀಕರಣಗೊಂಡು ಬಾಟಲಿ ಸೇರಿತು
‘ನೀರು’ ಬಾಯಿಗಿಳಿಯಿತು
ಗಂಟಲಿಗಿಳಿಯಿತು
ಕರುಳ ಸೇರಿತು..
ವ್ಯತ್ಯಾಸವಾಗಲಿಲ್ಲ..
ತಿಪ್ಪೆಯಲಿದ್ದ ಕಸಾಯಿಕಾನೆಯ ಕಸವೆಲ್ಲ
ಬೀಜದ ಹೊಟ್ಟೆಗೆ ಸೇರಿ ಬೆಳೆಯಾಯಿತು
‘ಆಹಾರ’ ಬಾಯಿಗಿಳಿಯಿತು
ಗಂಟಲಿಗಿಳಿಯಿತು
ಕರುಳ ಸೇರಿತು..
ವ್ಯತ್ಯಾಸವೆನಿಸಲಿಲ್ಲ..
ಕೇರಿಯಲಿದ್ದ ಕೆಲಸಗಾರರು ಕೈಮೈತೊಳೆಯದೇ
ಮೈಮುರಿದು ಮನೆಯ ಕೆಲಸವ ಮಾಡಿದರು
‘ಮನೆ’ ಹೊಳೆಯತೊಡಗಿತು
(ಅ)ಶುದ್ಧವಾಯಿತು-ಮನಸು
ಹಸನಾಗಲೆಯಿಲ್ಲ..

ಮನೆಯ ತುಂಬೆಲ್ಲ ಆಳು-ಕಾಳು ಹೇಳೊಕೆ
ಮನೆಯ ಮನಸುಗಳಲ್ಲೆಲ್ಲ ಬರಿ ಕೊಳಕೆ
‘ಆಳು’ ಕಾಳುಣ್ಣುವದಿಲ್ಲ
ಹಾಲುಣ್ಣುವದಿಲ್ಲ
ಹಸಿವದು ಹೊಸದಲ್ಲ..
ಅಂಗಳದ ಕಸ, ಬಾಗಿಲ ಬಳಿಯ ಚಪ್ಪಲಿ
ದಿನವೂ ಮೈಸವರಿಕೊಳ್ಳುತ್ತವೆ ಅವನ ಕೈಲಿ
‘ಕಾಲ’ ಕಸವಾಯಿತಲ್ಲ
ಕಸ ಹಸಿರಾಗಲಿಲ್ಲ
ಸವೆಯುವದು ತಪ್ಪಲಿಲ್ಲ..
ಸಮಾನತೆಗೆ ಸಮತೆಗೆ ಹೆಸರೊಂದೆ ಜಗಕೆಲ್ಲ
ಸಾಹೇಬ ಸಾರಿ ಹೇಳಿದ್ದು ಸುಳ್ಳಲ್ಲ
‘ಶಿಕ್ಷಣ’ ಹುಲಿಯ ಹಾಲ
ಕುಡಿದು ಬಲಿಯಬೇಕು
ಬಲಿಯಾಗಬಾರದಲ್ಲ..ಧರ್ಮಗಳ ಬೇಲಿಗೆ ಬಳ್ಳಿಯೊಂದು ತಬ್ಬಿಕೊಂಡಿದೆ
ಹೃದಯದಿಂದ ಹೂಬಿಟ್ಟಿದೆ ಹಾತೊರೆಯುತ್ತಿದೆ
‘ಮನುಷ್ಯ’ ಮನುಷ್ಯನಾಗಲಿ
ಮತ್ಸರ ದೂರವಾಗಲಿ
ಹೂ ಸಂವಿಧಾನದ ಕರ ಸೇರಲಿ..






0 Comments