ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ ಸೊರಟೂರು ಹೊಸ ಕವಿತೆ ‘ಕೋಗಿಲೆ ಮತ್ತು ಯುಗಾದಿ’

ಸದಾಶಿವ ಸೊರಟೂರು

**

ಬಂದೆಯಾ ಬಾ..

ಬಿಸಿಲು,

ದಣಿವು

ಸಾವರಿಸಿಕೊ..

ಹಬ್ಬವಂತೆ ತಿಳಿರಂತೆ

ತೋರಣವಂತೆ

ನಿನ್ನ ಕೂಹೂ ಕೂಹೂ ಹಾಡಂತೆ

ನಕ್ಕೆಯಾ? 

ನಗಬೇಡ ಮಾರಾಯಾ

ನೀ ನಕ್ಕಾಗ ನನ್ನೊಳಗೆ ನೂರು

ತಂತಿ ತುಂಡಾಗುತ್ತವೆ..

ನಿನ್ನೆ ಯಾವ ಕೊಂಬೆ ಮೇಲೆ

ಕಳೆದೆ?

ಮೊನ್ನೆ ರಾತ್ರಿ

ಯಾವ ಎಲೆ ಮರೆಯಲ್ಲಿ ಮಲಗಿದ್ದೆ?

ಮಾತಿಗೆ

ಯಾರೂ ಇಲ್ಲದೆ ಎಲ್ಲೆಲ್ಲಿ ಅಲೆದೆ?

ಈ ಎಲ್ಲವೂ ಗೊತ್ತಿದ್ದೂ ಹೇಗೆ

ಕೇಳಲಿ?

ಯಾರದೊ ಗೂಡಲ್ಲಿ ಬಿಟ್ಟು ಹೋದ ತತ್ತಿ

ಹುಟ್ಟುವ ಮೊದಲೆ ಒಂಟಿ

ಕುಕ್ಕಿದ್ದು, ಗುಟುಕು ತಿನ್ನಿಸಿದ್ದು

ಹಾರಿಸಿದ್ದು ಯಾರು ರೆಕ್ಕೆ ನೀವಿ? 

ಪ್ರಶ್ನೆಗಳಿಗಳಿವೆ, ಉತ್ತರಗಳೂ ಇವೆ

ಜೋಡಿಸುತ್ತಾ ಕೂತರೆ

ಸುಖವಿಲ್ಲ

ಮಾವೂ ಚಿಗುರಂತೆ ಬೇವೂ ಚಿಗುರಂತೆ

ವಸಂತವಂತೆ

ಹೊಸ ಗಾಳಿ ಹೊಸ ಯುಗವೂ

ನಿನ್ನೊಳಗೊಂದು ಹಾಡು ಹುಟ್ಟುವ

ಸಮಯವೂ ಅಂತೆ..

ಹೌದು.. ಹೌದು!

ಎಷ್ಟೊಂದು ಇಂಪಾದ ಹಾಡು..

ಯಾಕಿಷ್ಟು ಇನಿ ದನಿ?

ಯಾವುದದು ರಾಗ?

ತಿಂದ ಚಿಗುರೆ?

ಕುಡಿದ ವಸಂತವೇ?

ಹೊದ್ದುಕೊಂಡ ಹೊಸಗಾಳಿಯೇ? 

‘ನೋವು ಉಂಡಷ್ಟೂ ದನಿ ಇಂಪಾಗುತ್ತದೆ

ಒಂಟಿಯಾದಷ್ಟೂ ಅನಾಥ ರಾಗ

ಕೈಹಿಡಿಯುತ್ತದೆ..

ಗಂಟಲು ತುಂಬಿದಷ್ಟು ಹಾಡು ಹೊಮ್ಮುತ್ತದೆ..’ 

ನೀನು ತಣ್ಣನೆ ಉತ್ತರಿಸಿ ಹಾರಿ ಹೋದೆ..

ಇಂದು ಇಲ್ಲಿ ಜನ ಬೆಲ್ಲ ತಿನ್ನುತ್ತಿದ್ದಾರೆ

ಬೇವೂ ತಿನ್ನುತ್ತಿದ್ದಾರೆ

ದನಿಯಲ್ಲಿ ಯಾಕೊ ಕತ್ತಿ ಮಸೆಯುತ್ತಿರುವ

ಸದ್ದು! 

‍ಲೇಖಕರು Admin MM

9 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading