ಸದಾಶಿವ ಸೊರಟೂರು ಓದಿದ ‘ಯಕ್ಷಗಾನ ಲೀಲಾವಳಿ’

ಸದಾಶಿವ್ ಸೊರಟೂರು

ಬಯಲು ಸೀಮೆಯವರಾದ ನಮಗೆ ಯಕ್ಷಗಾನದ ಪರಿಚಯವಾದರೂ ಹೇಗೆ ಆಗಬೇಕು?. ನಾನು ಐದೊ ಆರೊ ತರಗತಿ ಓದುವಾಗ ಒಮ್ಮೆ ಧರ್ಮಸ್ಥಳಕ್ಕೆ ಹೋದಾಗ ನಡುರಾತ್ರಿಯಲ್ಲೂ ನಡೆಯುತ್ತಿದ್ದ ವಿಭಿನ್ನ ವೇಷದ ಮತ್ತು ಹೆಚ್ಚು ಸದ್ದಿನ ಆಟವನ್ನು ನೋಡಿ ಏನಿದು ಅಂತ ಕೇಳಿದ್ದೆ. ಅಪ್ಪ ಅದೊಂದು ನಾಟಕ ಅಂದಿದ್ದರು. ನಾನು ನೋಡಿದ ಮೊದಲ ಯಕ್ಷಗಾನ ಅದು. 

ಹೈಸ್ಕೂಲ್ ಗೆ ಬಂದಾಗ ಪಾಠದ ಮಧ್ಯೆದಲ್ಲೆಲ್ಲೊ ಯಕ್ಷಗಾನ ಅನ್ನುವ ಪದ ಕಂಡಾಗ ನಮ್ಮ ಮೇಷ್ಟ್ರು ಅದರ ಬಗ್ಗೆ ಹೇಳಿದ್ದರು. ನಾನು ಧರ್ಮಸ್ಥಳದಲ್ಲಿ ನೋಡಿದ್ದು ಯಕ್ಷಗಾನವೇ ಎಂಬುದು ಖಚಿತವಾಯಿತು. 

ಪಿ.ಯು ಓದುವಾಗ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಟಿಕೆಟ್ ಕೊಂಡು ‘ಮೋಹಿನಿ ಭಸ್ಮಾಸುರ’ ಯಕ್ಷಗಾನ ನೋಡಿ ಒಂದು ವಿಭಿನ್ನ ಲೋಕದ ಅನುಭವದೊಂದಿಗೆ ಹೊರ ಬಂದಿದ್ದೆ. ನಾನು ಮೇಷ್ಟ್ರಾಗಿ ಕೆಲಸಕ್ಕೆ ಸೇರಿದಾಗ ಶಿವರಾಂ ಕಾರಂತರ ‘ಸ್ಮೃತಿಪಟಲದಿಂದ’ ಮತ್ತು ‘ಯಕ್ಷಗಾನ ಬಯಲಾಟ’ ಕೃತಿಗಳನ್ನು ಓದಿಕೊಂಡು ಯಕ್ಷಗಾನದ ಬಗ್ಗೆ ತಿಳಿದಕೊಳ್ಳುವ ಪ್ರಯತ್ನ ಮಾಡಿದೆ. 

ರಂಗಸ್ಥಳ, ಭಾಗವತರು, ಚೌಕಿ, ಹಿಮ್ಮೇಳ, ವಾದ್ಯಪರಿಕರಗಳು, ಬಾಲಗೋಪಲ, ಒಡ್ಡೋಲಗ, ತೆಂಕುತಿಟ್ಟು, ಬಡಗುತಿಟ್ಟು, ಬಡಬಡಗುತಿಟ್ಟು ಮುಂತಾದವುಗಳ ಪರಿಚಯವಾಯಿತು. ನಮ್ಮ ಶಾಲೆಯಲ್ಲಿ ಕರಾವಳಿ ಭಾಗದ ಒಬ್ಬ ಶಿಕ್ಷಕರಿದ್ದಾರೆ. ನಾನು ಶಾಲಾ ವಾರ್ಷಿಕೋತ್ಸಕ್ಕೆ ಒಂದು ಯಕ್ಷಗಾನ ಆಡಿಸಬೇಕೆಂದು ಒತ್ತಾಯ ಮಾಡಿದಾಗ ಅವರೇ ಮಕ್ಕಳಿಗೆ ಯಕ್ಷಗಾನ ಹೇಳಿಕೊಟ್ಟು ಅದಕ್ಕೆ ಬೇಕಾದ ವೇಷಭೂಷಣಗಳನ್ನು ತರಿಸಿದ್ದರು. ಯಕ್ಷಗಾನ ಅಂದ್ರೆ ಏನೂ ಅಂತಾನು ಗೊತ್ತಿಲ್ಲದ ಊರಲ್ಲಿ ಅದು ಮೆಚ್ಚುಗೆ ಗಳಿಸಿತು.

ವಿದ್ಯಾರಶ್ಮಿಯವರು ನಿರೂಪಿಸಿದ ‘ಯಕ್ಷಗಾನ ಲೀಲಾವಳಿ’ ಪುಸ್ತಕ ಸ್ವಾಭಾವಿಕವಾಗಿಯೆ ನನ್ನನ್ನು ಆಕರ್ಷಿಸಿತು. ಯಕ್ಷಗಾನದ ಬಗ್ಗೆ ಒಂದು ಆಸ್ಥೆಯನ್ನು ಉಳಿಸಿಕೊಂಡೆ ಇದ್ದ ನನಗೆ ಈ ಪುಸ್ತಕ ಓದಲು ಪ್ರೇರೇಪಿಸಿತು. ಇದು ಲೀಲಾವತಿ ಬೈಪಾಡಿತ್ತಾಯ ಅವರ ಆತ್ಮಕತೆ. ಯಕ್ಷಗಾನ ರಂಗದ ಮೊದಲ ಮಹಿಳಾ ಭಾಗವತರೆಂಬ ಹೆಗ್ಗಳಿಕೆ ಅವರದು. ಅದನ್ನು ವಿದ್ಯಾರಶ್ಮಿಯವರು ನಿರೂಪಿಸಿದ್ದಾರೆ. ಇದನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ. 

ಇಡೀ ಪುಸ್ತಕವನ್ನು ಒಂದೇ ಉಸಿರಿಗೆ ಮುಗಿಸಿದೆ. ಕೆಲವೊಮ್ಮೆ ಅಲ್ಲಲ್ಲಿ ತಡೆದು ಮೌನವಾದೆ. ಒಮ್ಮೊಮ್ಮೆ ತುದಿಗಾಲಲ್ಲಿ ಕೂತೆ, ಯಾವತ್ತಿಗೂ ಸ್ವತಂತ್ರವಾಗಿ ಓದಿಕೊಳ್ಳಬಹುದಾದ ಲೀಲಮ್ಮನವರ ಮಾತುಗಳನ್ನು ಬರೆದಿಟ್ಟುಕೊಂಡೆ. ಪುಸ್ತಕ ಮುಗಿದಾಗ ಒಂದು ವಿನೀತಭಾವ ನನ್ನನ್ನು ಆವರಿಸಿತು.  

ಈ ಪುಸ್ತಕ ಓದಿದ ಮೇಲೆ ಎರಡು ವಿಚಾರಗಳನ್ನು ನಾನು ಹೇಳಲೇಬೇಕಾಗುತ್ತದೆ. 

1) ಬರವಣಿಗೆ ಯಾವತ್ತೂ ಹಾಗೆಯೆ, ನಾವು ಏನನ್ನೆ ಬರೆದರೂ ನಮ್ಮ ವೈಯಕ್ತಿಕ ಅನುಭವ ಅಥವಾ ವಿಚಾರಗಳು ನಮಗೆ ಗೊತ್ತಿಲ್ಲದೆ ಅದರಲ್ಲಿ ಮೂಡುತ್ತವೆ. ಅದರಲ್ಲೂ ಪ್ರಥಮ ಪುರುಷದಲ್ಲಿ ಬರೆಯುವಾಗ (ನಾನು) ಅದು ಹೆಚ್ಚು. ಆದರೆ ವಿದ್ಯಾರಶ್ಮಿಯವರು ಎಷ್ಟೊಂದು ಜಾಗೃಕತೆಯಿಂದ ನಡೆದಿದ್ದಾರೆ ಎಂದರೆ ಎಲ್ಲಿಯೂ ಅವರ ವೈಯಕ್ತಿಕ ಭಾವವನ್ನು ಇಣುಕಲು ಬಿಟ್ಟಿಲ್ಲ. ಇದು ತುಂಬಾ ಕಷ್ಟದ ಕೆಲಸ. ಅದನ್ನವರು ತುಂಬಾ ಯಶಸ್ವಿಯಾಗಿ ಸಾಧಿಸಿದ್ದಾರೆ. 
2) ಬರವಣಿಗೆಯ ಶೈಲಿಯದ್ದು.ಅದು ತುಂಬಾ ಸುಲಲಿತವಾಗಿ ಬಂದಿದೆ. ಹರಿವ ನದಿಯ ಜುಳುಜುಳು, ದೂರದಿಂದ ಕೇಳುವ ಇಂಪಾದ ಹಾಡಿನಂತೆ ಸಾಲುಗಳು ಕಾಡುತ್ತವೆ. ಕಣ್ಣಿಗೆ ಒಡೆಯುವ ತೀವ್ರ ಉಪಮೆಗಳಿಲ್ಲ. ಸುಳ್ಳೆ ಸುಳ್ಳು ರೂಪಕಗಳಿಲ್ಲ. ಹೇಳುವುದನ್ನು ನೇರವಾಗಿ ಲೀಲಮ್ಮ ಹೇಳಿದಂತೆಯೇ ನಿರೂಪಿಸುತ್ತಾ ಹೋಗುತ್ತಾರೆ. 

ತುಂಬಾ ದೊಡ್ಡ ದೊಡ್ಡ ಅಧ್ಯಯಗಳಿಲ್ಲ. ಈ ಕಾಲದ ಓದುಗರ ಗುಣವನ್ನು ಲೇಖಕಿಯವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಒಂದು ಅಧ್ಯಯ ಮುಗಿದ ಬಳಿಕ ಮುಂದಿನ ಅಧ್ಯಯಕ್ಕೆ ನೀವಾಗಿಯೇ ಹೋಗಿ ನಿಲ್ಲುವ ಮ್ಯಾಜಿಕ್ ಪ್ರತಿ ಅಧ್ಯಯದ ಕೊನೆಯಲ್ಲಿದೆ. ನಾನೂರು-ಐನೂರು ಪುಟಗಳಿಟ್ಟು ಓದಲು ಭಯ ಹುಟ್ಟಿಸುವ ಪುಸ್ತಕ ಖಂಡಿತ ಇದಲ್ಲ. ನೂರಾ ಐವತ್ತು ಪುಟಗಳಲೇ ಇಡೀ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಮಾಡಿ ಅದರಲ್ಲಿ ಗೆದ್ದಿದಾರೆ. 

ನಾವು ನಮ್ಮ ಆತ್ಮಕಥನ ಬರೆದುಕೊಳ್ಳುವುದು ಸುಲಭ. ಬೇರೆಯವರ ಆತ್ಮಕತೆ ಬರೆಯುವುದು ತುಂಬಾ ಸವಾಲಿನದು. ಅದಕ್ಕೆ ತುಂಬಾ ತಾಳ್ಮೆ, ಸಹನೆ, ಜಾಣತನ, ಭಾಷೆಯ ಹಿಡಿತ, ಸೂಕ್ಷ್ಮತೆಯ ಗುಣ, ವಿಷಯದ ಆಳ-ಅಗಲ, ಬೇರೆಯವರೇ ನಾವಾಗುವ ಶಕ್ತಿ ಹೀಗೆ ಎಲ್ಲವೂ ಬೇಕು. ಅದು ವಿದ್ಯಾರಶ್ಮಿಯವರಿಗೆ ಸಿದ್ದಿಸಿದೆ. 

ಯಕ್ಷಗಾನದ ಪರಿಚಯವಿರುವವರು ಮಾತ್ರ ಈ ಪುಸ್ತಕ ಓದಬೇಕು ಅನ್ನುವಂತಿಲ್ಲ. ಇದೊಂದು ಸಾಹಸಗಾಥೆಯಾಗಿ ಎಲ್ಲರೂ ಓದಿಕೊಳ್ಳಬಹುದು. ನಿಮಗೆ ಕರಾವಳಿಯ ಪರಿಚಯವಿದ್ದರಂತೂ ಓದು ಮತ್ತಷ್ಟು ಖುಷಿಕೊಡುತ್ತದೆ. 

****
‘ಇವತ್ತು ಎಣ್ಣೆಹೊಳೆಯಲ್ಲಿ ಅರುವ ಮೇಳದ ಒಂದು ಆಟಕ್ಕೆ ಹೋಗೋಕು ಮಾರ್ರೆ, ಅದ್ಯಾರೋ ಹೆಂಗ್ಸು ಹಾಡೋದಂತೆ! ನೋಡ್ಬೇಕು ಹೇಗಿರ್ತದೆ ಅಂತ…’
‘ಹೌದಾ?! ಹೆಂಗ್ಸಾ? ಈ ಆಟದವ್ರು ದುಡ್ಡಿಗೋಸ್ಕರ ವೇಷ ಹಾಕಿ ಕೂರಿಸ್ತಾರಾಂತ…’
`ಇದ್ರೂ ಇರ್ಬುಹುದು, ಒಮ್ಮೆ ನೋಡಿ ಬರೇಕು’ 
ಬಸ್‌ ನಿಂತಿತು. ಜನ ಬಸ್‌ನಿಂದ ಇಳಿದರು. ಆಟಕ್ಕೆ ಜನ ಸೇರಿತು. 
ಬೆಳಗ್ಗಿನ ವೇಳೆಗೆ ಯಕ್ಷಗಾನ ಮುಗಿಯಿತು. ಆಟಕ್ಕೆ ಬಂದವರೆಲ್ಲ ತಮ್ಮ ತಮ್ಮ ಮನೆಯ ಹಾದಿ ಹಿಡಿದರು.
‘ಹೆಂಗ್ಸು ಭಾಗವತಿಕೆ ಮಾಡುದು ಹೇಗೋ ಏನೋ ಅಂದ್ಕೊಂಡಿದ್ದೆ, ಆಗ್ಟಹುದು ಮಾರ್ರೆ..’
‘ಹೌದು, ಭಾರೀ ಚಂದಾಗ್ತಿದೆ. ನಾನು ತಮಾಷೆಗೆ ಹೇಳ್ತಾರೆ ಅಂಡ್ಕೊಂಡಿದ್ದೆ. 

ಅದೇ ಬಸ್ಸಿನಲ್ಲಿ ಕೂತು ಲೀಲಮ್ಮ ಹೋಗುವಾಗಿನ ಮತ್ತು ಆಟ ಮುಗಿದ ಹೊರಡುವಾಗಿನ ಎರಡೂ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ.. 
ಆ ಎರಡೂ ಮಾತುಗಳ ನಡುವೆ  ಈ ಆತ್ಮಕತೆ ಅವಿತುಕೊಂಡಿದೆ. ಹೆಂಗ್ಸು ಹೇಗೆ ಭಾಗವತ ಮಾಡುವುದು ಮತ್ತು ಅವಳೂ ಮಾಡಬಲ್ಲಳು ಎಂಬ ಎರಡೂ ಪ್ರಶ್ನೆಗೆ ಅಲ್ಲೇ ಉತ್ತರ ಸಿಕ್ಕಿಬಿಡುತ್ತದೆ. ಆತ್ಕಕಥನದ ಇಡೀ ಕಥೆ ಆರಂಭದ ಈ ಒಂದು ರೂಪಕದಲ್ಲಿ ಬಚ್ಚಿಟ್ಟುಕೊಂಡಿದೆ.. 
ಇನ್ನೊಂದು ಸೊಗಸಾದ ವಿಷಯವಿದೆ..

‘ಎಂದು ಮಹಿಳೆ ಮಧ್ಯರಾತ್ರಿ ಹನ್ನೆರಡು ಗಂಟೆಗೂ ನಡುರಸ್ತೆಯಲ್ಲಿ ಓಡಾಡುವಂತಾಗುತ್ತದೋ, ಆಗಲೇ ನಮಗೆ ನಿಜವಾದ ಸ್ವಾತಂತ್ರ್ಯ ದೊರೆತಂತೆ’ ಎಂದಿದ್ದರಲ್ಲ. ಅದರಂತೆ ಸ್ವಾತಂತ್ರ್ಯ ಸಿಕ್ಕ ವರ್ಷದಲ್ಲೇ ಹುಟ್ಟಿದ ನಾನೇನು ಮಧ್ಯರಾತ್ರಿಯಲ್ಲಿ ಒಬ್ಬಳೇ ಎಲ್ಲಿಯೂ ಓಡಾಡಿದವಳಲ್ಲ. ಆದರೆ, ನಡುರಾತ್ರಿಯಲ್ಲೂ ವೇದಿಕೆಯಲ್ಲಿ ಕುಳಿತು ಯಕ್ಷಗಾನ ಹಾಡುಗಳನ್ನು ಹಾಡುವವಳಾದೆ. ಕಲಾಸೇವೆಗೆ ನನ್ನದೇ ರೀತಿಯಲ್ಲಿ ಕೈಗೂಡಿಸುವ ಸ್ವಾತಂತ್ರ್ಯವಂತೂ ನನಗೆ ಸಿಕ್ಕಿತ್ತು. ನನ್ನ ಪಾಲಿಗೆ ಇದೊಂದು ವಿಶೇಷ ಸೌಭಾಗ್ಯ ಎಂದೇ ಹೇಳಬೇಕು.. ‘ ಅನ್ನುವ ಲೀಲಮ್ಮನವರು ತಮಗೆ ದಕ್ಕಿದ್ದ ಸ್ವಾತಂತ್ರ್ಯದ ಔಚಿತ್ಯವನ್ನು ಚಿಂತನೀಯವಾಗಿ ವಿವರಿಸುತ್ತಾರೆ.. 

ಮಕ್ಕಳ ಬಾಲ್ಯ ಚೆನ್ನಾಗಿರಬೇಕು ಅಂದ್ರೆ ಜೊತೆಯಲ್ಲಿ ಅಪ್ಪನಿರಬೇಕು. ಹೆಣ್ಣುಮಕ್ಕಳ ಬದುಕು ಚೆಂದವಿರಬೇಕೆಂದರಂತೂ ಬೆನ್ನಿಗೆ ಅಪ್ಪನಿರಲೇಬೇಕು.. ಅವರ ಅನುಭವದ ಮೂಸಿಯಲ್ಲಿ ಜನಿಸಿ ಬಂದ ಎಂತಹ ಅದ್ಭುತ ಮಾತುಗಳು ನೋಡಿ. ಲೀಲಮ್ಮ ಚಿಕ್ಕವರಿದ್ದಾಗಲೇ ಅಪ್ಪ ಇಲ್ಲವಾಗುತ್ತಾರೆ. ಮಗಳ ಸಂಗೀತ ಕಲಿಯಬೇಕು ಅನ್ನುವ ಅಪ್ಪನ ಆಸೆ ಅವರನ್ನು ಸಂಗೀತದೆಡೆಗೆ ಕರೆದೊಯ್ಯುತ್ತದೆ. ಸಂಗೀತ ಅವರನ್ನು ಯಕ್ಷಗಾನದ ಅಂಗಳಕ್ಕೆ ತಂದು ನಿಲ್ಲಿಸುತ್ತದೆ. 

ಯಾರೊ ಕಟ್ಟಿದ ಹಾದಿಯಲ್ಲಿ ನಡೆಯುವುದು ತುಂಬಾ ಸುಲಭ. ಆದರೆ ನಾವೇ ಒಂದು ದಾರಿ‌ಮಾಡಿಕೊಂಡು ಹೊರಟಾಗಲೇ ಅದರ ಕಷ್ಟ ಅರಿವಾಗೋದು. ಎಷ್ಟೋ ಜನ ದಾರಿನೂ ಬೇಡ, ಗುರಿಯೂ ಬೇಡ ಅಂತ ಕೈಚೆಲ್ಲಿ ಬಿಡುತ್ತಾರೆ. ಹೆಣ್ಣು ಮಕ್ಕಳು ಒಂದು ಯಕ್ಷಗಾನ ಬಯಲಾಟ ನೋಡಿದರೆ ಅದಕ್ಕೆ ಪ್ರಾಯಶ್ಚಿತ್ತವಾಗಿ ಏಳು ರಂಗಪೂಜೆ ನೋಡಬೇಕು ಅನ್ನುವ ತೀರ ಕಟ್ಟಿಬದ್ದತೆಯ ನಡುವೆಯೂ ಅದನ್ನು ಮುರಿದು ಮೀರಿ ತಮ್ಮೊಳಗೆ ನರ ನಾಡಿಗಳೊಳಗೆ ಯಕ್ಷಗಾನದ ಚಂಡೆ ದನಿಯನ್ನು ಎಳೆದುಕೊಳ್ಳುತ್ತಾರಲ್ಲ ಅವರ ಧೈರ್ಯ, ಅದರ ಬಗೆಗಿನ ಸೆಳೆವು, ಏನಾದ್ರೂ ಒಂದನ್ನು ಸಾಧಿಸುವ ತುಡಿತ ಕಾಣಿಸುತ್ತದೆ.  

ಎಲ್ಲಾ ಅನುಕೂಲಗಳಿದ್ದರೂ ಕಲಿಯುವಿಕೆ ಅನ್ನೋದು ಬಲವಂತದ ಕ್ರಿಯೆ ಆಗಿರುವ ಈ ಕಾಲದಲ್ಲಿ ಶಾಲೆಯ ಮೆಟ್ಟಿಲ್ಲನ್ನೂ ತುಳಿಯದೆ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಓದುವುದನ್ನು ಬರೆಯುವುದನ್ನು ಕಲಿತ ಲೀಲಮ್ಮನವರ ಜೀವನ ಛಲ ಇಲ್ಲಿ ಕಾಣಿಸುತ್ತದೆ. 

ಕಪ್ಪೆಚಿಪ್ಪಿನೊಳಗೆ ಮುತ್ತೊಂದು ಮೂಡಲು ಸ್ವಾತಿ‌ಹನಿಯೇ ಬೇಕಂತೆ. ಮುತ್ತು ತಾನು ರೂಪುಗೊಳ್ಳಲು ಚಿಪ್ಪು ಮತ್ತು ಹನಿಯ ಎರಡರ ಸಹಕಾರ ಬೇಕು. ಬೀಳುವ ಎಲ್ಲಾ ಹನಿಗಳಿಗೂ ಅಂತಹ ಅದೃಷ್ಟ ಇರವುದಿಲ್ಲ. ಅದು ಚಿಪ್ಪಿನ ಅದೃಷ್ಟವೂ ಹೌದು ಹನಿಯ ಅದೃಷ್ಟವೂ ಹೌದು. ಲೀಲಮ್ಮ ರೂಪುಗೊಳ್ಳಲು ಅವರಿಗೆ ಸಿಕ್ಕ ಗಂಡನ ಮನೆಯ ಯಕ್ಷಗಾನದ ವಾತಾವರಣ ಮತ್ತು ಲೀಲಮ್ಮನೊಳಗೆ ತಮಗೆ ಗೊತ್ತಿಲ್ಲದೆ ಅಡಗಿದ್ದ ಕಲೆ ಎರಡರಿಂದಲೂ ಅವರ ಭಾಗವತಿಕೆ ರೂಪು ಪಡೆಯಿತು; ಮುತ್ತಿನಂತೆ!  

ಹಸಿವೇ ಹೊಸ ಹುಡುಕಾಟದ ತಾಯಿ. ಸೃಜನಾತ್ಮಕತೆ ಹುಟ್ಟುವುದೇ ಆಗ. ಮನೆಯಲ್ಲಿನ ಬಡತನಕ್ಕಾಗಿ ಇವರು ಏನಾದ್ರೂ ಒಂದು ಮಾಡಲೇಬೇಕಿತ್ತು. ಗಂಡನ ಒತ್ತಾಸೆಯಿಂದ ಮನಸ್ಸಿಲ್ಲದಿದ್ದರೆ ಭಾಗವತಿಕೆಯಡೆಗೆ ಸೆಳೆಯಲ್ಪಟ್ಟರು. ಮುಂದಾದೆಲ್ಲಾ ಒಂದು ಅದ್ಭುತ ಇತಿಹಾಸ. 

ಇತಿಹಾಸದ ಎಲ್ಲಾ ಮೊದಲುಗಳು ಸುಮ್-ಸುಮ್ನೆ ದಾಖಲಾಗುವುದಿಲ್ಲ. ಅದರ ಹಿಂದೆ ತುಂಬಾ ಶ್ರಮ, ಮಾಡಲೇ ಬೇಕಾದ ಹೋರಾಟ, ಸಹಿಸಿಕೊಳ್ಳಲೇಬೇಕಾದ ಕಷ್ಟಗಳು, ಅಲ್ಲೆಗೆಳೆಯುವ ಮಾತುಗಳು, ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಯಾಕೆ ಬೇಕು ಎಲ್ಲವನ್ನೂ ಬಿಟ್ಟು ಸುಮ್ಮನೆ ಇದ್ದು ಬಿಡೋಣ ಅನಿಸುತ್ತೆ. ಆದರೆ ಲೀಲಮ್ಮಗೆ ಕಷ್ಟಗಳು ಬಂದರೂ ಇದೆಲ್ಲಾ ನಂಗೆ ಬೇಕಿತ್ತಾ? ಅನ್ನುವ ಮನೋಭಾವವನ್ನು ಒಮ್ಮೆಯೂ ತಾಳುವುದಿಲ್ಲ. 

ಲೀಲಮ್ಮನವರ ಯಕ್ಷಗಾನದ ಬದುಕು ಸಂಪೂರ್ಣವಾಗಿ ಇದರಲ್ಲಿ ಅಡಗಿದೆ. ಹೋರಾಟಗಳು, ಹೊಸತನಕ್ಕೆ ತೆರದುಕೊಂಡ ರೀತಿ. ಮಾಡಿದ ಬಗೆ-ಬಗೆ ಪ್ರಯೋಗಗಳು, ಸಂದ ಗೌರವ ಸನ್ಮಾನಗಳು ಹೀಗೆ ಎಲ್ಲವೂ ಈ ಹೊತ್ತಿಗೆಯಲ್ಲಿವೆ. 

ಈ ಆತ್ಮಕತೆಯಲ್ಲಿ ಲೀಲಮ್ಮನವರ ಬದುಕಿನ ಅವಲೋಕನದ ಜೊತೆಜೊತೆಯಲ್ಲಿ ಮೂರಾಲ್ಕು ದಶಕಗಳಲ್ಲಿ ಆದ ಯಕ್ಷಗಾನದ ಕೆಲವು ಬದಲಾವಣೆಗಳು, ಪ್ರಯೋಗಗಳ ಮಾಹಿತಿ ದೊರೆಯುತ್ತದೆ. ಲೇಖಕಿಯವರು ಅದನ್ನು ತುಂಬಾ ಸೂಕ್ಷ್ಮವಾಗಿ ಮತ್ತು ಸಮರ್ಥವಾಗಿಯೇ ನಿಭಾಯಿಸಿದ್ದಾರೆ. 

ಇದೆಲ್ಲಾ ನನ್ನಿಂದಾಯ್ತು ಅಂತ ಲೀಲಮ್ಮ ಅಪ್ಪಿತಪ್ಪಿಯೂ ಹೇಳುವುದಿಲ್ಲ. ಪದ ಹೇಳುವ, ಶಬ್ದಗಳನ್ನು ಸರಿಯಾಗಿ ಉಚ್ಚರಿಸುವ ಶಕ್ತಿಯನ್ನು ಶಾಲೆಗೆ ಹೋಗದಿದ್ದರೂ ದೇವರು ನನಗೆ ಕೊಟ್ಟ. ಅದಕ್ಕಾಗಿಯೇ ನನ್ನ ನಾಲಿಗೆಯನ್ನು ಶುದ್ಧ ಮಾಡಿಕೊಟ್ಟ ಅನ್ನುತ್ತಾರೆ. ಬಾಲ್ಯದಲ್ಲೇ ಅಪ್ಪ ತೀರಿದ ಬಳಿಕೆ ಮನೆ ನಡೆಸಿದ ಅಮ್ಮ, ಪತಿಯೇ ಗುರುವಾಗಿ ನಿಂತ ಪರಿ,  ಬದುಕಿಗೆ ಅರ್ಥ ಕಲ್ಪಿಸಿದ ಮಕ್ಕಳು, ಸಹೋದರ ವಿಷ್ಣು ಹೆಬ್ಬಾರ್ ಅವರ ಸಹಕಾರ ಇವೆಲ್ಲವೂ ಸೇರಿಯೇ ನಾನೊಬ್ಬಳು ಮಹಿಳಾ ಭಾಗವತಿಯಾಗಲಿಕ್ಕೆ ಸಾಧ್ಯವಾದದ್ದು ಅನ್ನುತ್ತಾರೆ. ನೋಡಿ ಎಂತಹ ಗುಣ. 
ನೀವು ಓದಲೇಬೇಕಾದ ಮತ್ತು ನಿಮ್ಮ ಸಂಗ್ರಹದಲ್ಲಿ ಇರಲೇಬೇಕಾದ ಪುಸ್ತಕ. ಓದಿ ನೋಡಿ. 

‍ಲೇಖಕರು Admin

December 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: