ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಹೊಸ ಕವಿತೆ – ನರಳುವಿಕೆಯಲ್ಲಿ ದೇಶದ ಹೆಸರಿಲ್ಲ..!

ಸದಾಶಿವ್ ಸೊರಟೂರು

ಗಾಬರಿ ಬೇಡ
ನಿಮ್ಮ ಮಗ ಕಳಿಸೆಂದು ಹೇಳಿದ
ತುಸು ಸುದ್ದಿ ಇದು..

ಗುಂಡುಗಳು ಹೊಕ್ಕಾಗ
ಅವ ಅಮ್ಮಾ ಅಂದ..,
ನರಳುವಿಕೆಯಲಿ ದೇಶದ ಹೆಸರಿರಲಿಲ್ಲ..

ಎರಡು ಗುಂಡು ಹೊಕ್ಕುವು
ತುಕ್ಕಡಿ ಬಿಟ್ಟು ಮುಂದೆ ಹೊಯಿತು

ಕೊಲ್ಲುವ ಅವಸರ
ಬದುಕಿಸುವುದರಲ್ಲಿರಲಿಲ್ಲ!

ಜೇಬಿನಲಿ ನಾವು ಗುರುತು ಪತ್ರ
ಹುಡುಕಲಿಲ್ಲ
ಮನುಷ್ಯನ ಗುರುತಿಗೆ
ಎದೆಗಿಂತ ಸಾಕ್ಷಿ ಬೇಕಿಲ್ಲ..

ಹೊಕ್ಕ ಗುಂಡು ತೆಗೆದವು
ಹಿತ್ತಲ ಗಿಡದ ರಸ ಹಿಂಡಿದೆವು

ಕ್ಷಮಿಸಿ,
ಕೊಲ್ಲಲು ಬಂದವನನು
ಬದುಕಿಸಿದೆವು..

ಕರೆದೊಯ್ಯಲು ನೀವೇ ಬರಬೇಕು

ರಸ್ತೆಗಳಲಿ ಹೆಣ ಬಿದ್ದಿವೆ
ಹಾಲು ತರಲು ಹೋದ ಮಗನೂ
ಕಾಡತೂಸಿಗೆ ಬರೀ ರಕ್ತವಾದ
ಹಾಲು ಮತ್ತು ರಕ್ತ
ಜೋಡಿಯಾಗಿಯೇ ಹರಿದಿವೆ..

ತಮ್ಮ ತಮ್ಮ ಮಕ್ಕಳು‌
ಕೊಲ್ಲುತ್ತಾ ಕೊಲ್ಲುತ್ತಾ ಸಾಯುವುದನು
ತಾಯಿಂದರೆ ನೋಡಬೇಕು!

ಮೊಲೆ ಹಾಲು ಚೀಪಿದ ತುಟಿಗಳು
ಚೂರಾಗುವುದನು‌
ನೀವೇ ನೋಡಬೇಕು!

‍ಲೇಖಕರು Admin

14 March, 2022

1 Comment

  1. T S SHRAVANA KUMARI

    ಮಾರ್ಮಿಕ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading