ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಹೊಸ ಕವಿತೆ – ಚಾಚಿದ ಕೈಗೆ ಎಟುಕದಿರಲಿ ಹೂ!

ಸದಾಶಿವ್ ಸೊರಟೂರು

ಯಕ್ಷಲೋಕದ ಕಿನ್ನರಿಯೊರ್ವಳು
ಗಂಧರ್ವನ ಸೇರಲು
ಅವಸರದಲ್ಲಿ ನಡೆಯುವಾಗ
ಬೀಳಿಸಿಕೊಂಡು ಹೋದ
ಅವಳ ಕನಸೇ ನೀನು..

ಕನಸಿಗೂ ರೂಪು ಮೂಡಿ
ಕಣ್ಣು ಕಿವಿ‌ ಮೂಗು ಬಾಯಿ
ಕಿನ್ನರಿಗಿಂತಲೂ
ಅವಳು ಕೆಡವಿಹೋದ
ಕನಸೇ ಎಷ್ಟು ಸೊಗಸು!

ಕೆಂಪು ಬಿಳಿ ಕಪ್ಪು ಹೊನ್ನ
ಬಣ್ಣಗಳೆಲ್ಲವೂ
ಹುಟ್ಟಿದ್ದು
ಆ ತುಣುಕು ಕನಸು ಜೀವಪಡೆದ
ತುಟಿ ಹಲ್ಲು ಕಣ್ಣು ತೊಗಲಿನಿಂದಲೇ
ತಾನೇ!?

ಕನಸೇ ಮತ್ತೆ ಮತ್ತೆ ಚಿಗುರಿ
ತಾರುಣ್ಯದ ಹೂ ಹಿಡಿದ
ನಿಂತರೆ
ಎದೆಯೊಳಗೆ ಚಾಚುವ ಕೈಯನು
ಹೇಗೆ ಸುಮ್ಮನಿರಿಸಲಿ?

ಅದಿರಲಿ, ನೀ ಹೂ ಹಿಡಿದಿದ್ದಾರೂ
ಏಕೆ
ಒಲವು ಒತ್ತಿ ಕತ್ತಿಗೆ ಬಂದರೂ
ಹುಲ್ಲೆಯಂತೆ ಹೆದರೆದರಿ
ಹಿಂದೆಗೆಯುವ ನಿನ್ನ
ಸಂಕಟವೂ ಒಂದು ಚೆಲುವು..

ಆ ಸಂಕಟವೂ ಹಾಗೆ ಉಳಿಯಲಿ
ಚಾಚಿದ ಕೈಗೂ
ಹೂ
ಎಂದೂ ಸಿಗದಿರಲಿ
ಯುಗ ಯುಗಗಳು ಹೀಗೆ
ಸಾಗಲಿ
ಹುಟ್ಟೂ ಅಲ್ಲದ ಸಾವೂ ಅಲ್ಲದ
ಒಲವೊಂದು
ಗಂಟಲಲ್ಲೇ ಉಳಿದಿರಲಿ..

ಕನಸು ಬೀಳಿಸಿಕೊಂಡ ಹೋದ
ಕಿನ್ನರಿಯ ಹೊಟ್ಟೆಯೂ
ತಣ್ಣಗಿರಲಿ..

‍ಲೇಖಕರು Admin

21 February, 2022

1 Comment

  1. T S SHRAVANA KUMARI

    ಸುಂದರ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading