ಸದಾಶಿವ್ ಸೊರಟೂರು
ನಮ್ಮ ನಮ್ಮ ಗೋರಿಗಳಿಗಾಗಿ
ನಾವಿಬ್ಬರೂ ಸೇರಿಯೇ ತೆಗೆದ ಗುಂಡಿ
ಗೋರಿಗಳಾಗುವ ಹೊತ್ತಿಗೆ
ಏನೇನಿಸಿತೊ ನೀನು ಎದ್ದು ಹೋದೆ
ಒಬ್ಬನೆ ಮಣ್ಣಾಗಲು ಬೇಜಾರಾಗಿ ನಾನೂ ಸುಮ್ಮನಾದೆ
ಗುಂಡಿ ಮಾತ್ರ ಅನಾಥ..
ನೀನು ಹೋದ ಎಷ್ಟೊ ದಿನಕೆ
ಗೊತ್ತಾದದ್ದು ಅದು ನನ್ನದೆ ಎದೆಯೊಳಗೆ
ನಾನೇ ತೋಡಿದ್ದು ಮತ್ತು ನೀನು ಮಣ್ಣು ತೆಗೆದದ್ದೆಂದು..
ಹೋದಲೆಲ್ಲಾ ಹೊತ್ತು ತಿರುಗುವುದು
ಹಿಂಸೆಯಾಗಿ ಆ ಹಾಳು ಗುಂಡಿಗೆ
ಒಂದು ದಿನ ನನ್ನಿಷ್ಟದ ರೆಂಜೆ ಗಿಡ ತಂದು ನೆಟ್ಟೆ..

ಗಿಡ ಬೆಳೆಸುವುದು ಪ್ರೀತಿಸುವುದಕ್ಕಿಂತ ಸುಲಭ
ಕೆಲವೇ ದಿನಗಳಲ್ಲೇ ನನ್ನೊಳಗೆ
ನನ್ನನ್ನು ಮೀರಿ ಬೆಳೆಯಿತು
ಅದರ ನೆರಳಿಗೆ ನನ್ನ ತಲೆ ತಂಪೊ ತಂಪು
ಒಂದೊಂದು ಎಲೆ ಒಂದೊಂದು ಹಾಡು
ಕೊಂಬೆ ಕೊಂಬೆಯಲ್ಲು ಜೊಂಪೆ ಜೊಂಪೆ ಹೂ
ಹೀಚು ಕಾಯಿ ಹಣ್ಣು
ಓಹ್ ಎಷ್ಟೊಂದು ಅಳಿಲು
ಹಕ್ಕಿ ಗೂಡು ಮೊಟ್ಟೆ ಚಿಲಿಪಿಲಿ ಮರಿಗಳು
ಅಬ್ಬಾ ನಾನೊಂದು ನಡೆದಾಡುವ ಕಾಡು
ಕಿಸೆ ತುಂಬಾ ಹೂವು ತಲೆತುಂಬಾ ನೆರಳು
ಕಿವಿ ತುಂಬಾ ಹಕ್ಕಿ ಹಾಡು
ಆಗಾಗ ಕಚಗುಳಿಗೆ ಇದ್ದೆ ಇವೆ ಅಳಿಲು
ಅಯ್ಯೊ ಇದೇನು ಮಕ್ಕಳಾಟ ನೋಡಿದವರ
ಹುಯಿಲು
ಅರೆ ನನಗಷ್ಟು ಏಜು?
ಎಲ್ಲಾ ಮರೆತೆ ಹೋಗಿದೆಯಲ್ಲಾ..!

ಅದ್ಯಾರು ಹುಡುಗಿ ಗುಂಡಿ ತೊಡಲು
ಸಹಕರಿಸಿದ್ದಳಲ್ಲ
ಮಣ್ಣು ತೆಗೆದು ತೆಗೆದು ಬೆವೆತಿದ್ದಳು ಪಾಪ
ಅವಳೇನಾದ್ರೂ ಇತ್ತ ಬಂದರೆ ನಾಲ್ಕು
ರಂಜೆ ಹೂವಾದರೂ ಕೊಡಬಹುದಿತ್ತು!
ಈ ಮರದ ಸಹವಾಸದಿಂದ ಏನೂ
ಬರೆದರೂ ಕವನದ ಸಾಲುಗಳಂತೆಯೆ
ಕಾಣಿಸುತ್ತವೆ
‘ರಂಜೆ ಹೂವುಗಳಿವೆ ಬಾ ಹುಡುಗಿ
ನಿನ್ನ ಬೆವರ ಹನಿಗಳು ವ್ಯರ್ಥವಾಗಿಲ್ಲ..’
ಅನ್ನುವ ಸಾಲೊಂದನು ಅವಳಿಗೆ
ತಲುಪಿಸುವ ಹುಕಿಯಿದೆ
ಅವಳಿಗಿದು ಕವನದಂತೆ ಕಂಡರೆ
ಅದು ಅವಳ ಅದೃಷ್ಟ
ಬರೀ ಸಾಲುಗಳಂತಾದರೆ ಅದು ನನ್ನ
ಅದೃಷ್ಟ..
ನನ್ನ ಈ ತಿಕ್ಕಲುತನಕ್ಕೆ
ರಂಜೆ ಹೂವುಗಳು ನಗುತ್ತಿವೆ
ಅದೊ, ಅದೊ ಕೇಳಿಸಿಕೊಳ್ಳಿ…






ಚೆನ್ನಾಗಿದೆ
ಪ್ರತಿಭಾ ನಂದಕುಮಾರ್