ಸದಾಶಿವ್ ಸೊರಟೂರು ಕಥಾ ಅಂಕಣ- ಹಸಿದ ಕಣ್ಣಿನ ಪೋರ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

2

ಹಸಿದ ಕಣ್ಣಿನ ಪೋರ

ಮೊಬೈಲ್ ಗಿರ್ರ್ ಎಂದಿತು; ವೈಬ್ರಿಷೆನ್ ಮೋಡ್.‌ ಗಂಭೀರ ಸಭೆ. ಉಹೂಂ ಕರೆ ಸ್ವೀಕರಿಸುವುವಂತಿಲ್ಲ. ಎಂಟು ಬಾರಿ ಗಿರ್ರ್ ಅಂದ
ಮೊಬೈಲ್ ಸುಮ್ಮನಾಯಿತು. ಅರೆ ಕ್ಷಣದ ಬಿಡುವು ತೆಗೆದುಕೊಂಡ ಮೊಬೈಲ್ ಮತ್ತೆ ಗಿರ್ರ್ ಎನ್ನ ತೊಡಗಿತು. ತುಸು ಬಿಗಿಯಾದ
ಜೀನ್ಸ್ ಪ್ಯಾಟಿನೊಳಗಿಂದ ಯಾರಿಗೂ ಕಾಣದಂತೆ ಮೊಬೈಲ್ ಹೊರಗೆಳೆದು ನೋಡಿದೆ..

ಸೌಮ್ಯ ಇಸ್ ಕಾಲಿಂಗ್…

ಓಹ್ ಇವಳ್ಯಾಕೆ ಪೋನ್ ಮಾಡಿದ್ಲು? ನಂಗೆ ಸಿಗಲಿಕ್ಕೆ ಆಗಲ್ಲ ಅಂತ ಸಭೆಗೂ ಮೊದಲೇ ಸ್ಪಷ್ಟವಾಗಿ ಹೇಳಿದ್ದೆನ್ನಲ್ಲ. ಬಹುಶಃ ಏನೊ
ತುರ್ತು ಇರಬಹುದು ಅನಿಸುತ್ತೆ. ಆದರೆ ಸಭೆ ಬಿಟ್ಟು ಹೊರಗೆ ನಡೆಯುವುದು ಹೇಗೆ? ಇಂತಹ ನನ್ನ ಹತ್ತು ಅಲೋಚನೆ ಸಾಗಿರುವಾಗಲೇ
ಕಾಲಿಂಗ್ ನಿಂತಿತ್ತು.

ಮತ್ತೆ ಒಂದೆರಡು ನಿಮಿಷದ ಬಳಿಕ ಮೊಬೈಲ್ ಗಿರ್ರ್ ಅನ್ನಲು ಆರಂಭಿಸಿತು.

‘ಎಕ್ಸ್ ಕ್ಯೂಸ್ ಮಿ..’ ಅಂದು ಸಭೆಯಿಂದ ಒಂದು ನಿಮಿಷ ಆಚೆ ಬಂದೆ. ದೂರ ಹೋಗಿ ನಿಂತು ಹಲೋ ಎಂದೆ.

‘ಸಾರಿ ಕಣೋ ತೊಂದರೆ ಮಾಡಿದೆ ಅನ್ಸುತೆ. ಏನ್ ಗೊತ್ತಾ? ನೀನು ಇಲ್ಲಿಯವರೆಗೂ ಬಂದು ಮೀಟ್ ಮಾಡದೆ ಹೋಗೋದು
ಬೇಜಾರಿದೆ. ಆದರೆ ಪರವಾಗಿಲ್ಲ ಬಿಡು ನಿನ್ನ ಕೆಲಸ ಮುಗೀಲಿ. ನಾನು ಇಲ್ಲೆ ನಿಮ್ಮ ಆಫೀಸ್ ನ ಪಕ್ಕದ ರೋಡಿನಲ್ಲಿದ್ದೀನಿ. ಆಫೀಸಿನ
ಎಡಭಾಗದ ಹೊರ ಹೋಗುವ ದಾರಿಯ ಫೂಟ್ಪಾತ್ ನಲ್ಲಿ ಸಣ್ಣ ಮಕ್ಕಳ ಬಟ್ಟೆ ಮಾರುವ ರಸ್ತೆಯ ಬದಿಯ ಅಂಗಡಿ ಇದೆ. ಅಲ್ಲಿ
ಒಂದು ಪುಟ್ಟ ಮಗುವಿಗೆ ಕಟ್ಟಿದ ಜೋಕಲಿ ಇದೆ. ಅವರ ಬಳಿ ಏನೊ ಕೊಟ್ಟಿದ್ದೀನಿ. ನಿನಗೆ ಬಿಡುವಾದಾಗ ಬಂದು ತಗೊ. ನಾನು
ಹೋಗ್ತಿನಿ..’ ಅಂದು ಕರೆ ಕಟ್ ಮಾಡಿದಳು. ನಾನು ಹಲೋ ಹಲೋ ಅನ್ನುತ್ತಲೇ‌ ಇದ್ದೆ.

ಮತ್ತೆ ನಾನು ಸಭೆಯಲ್ಲಿ ಮುಳುಗಿ‌ಹೋದೆ. ಮಧ್ಯಾಹ್ನದ ಊಟದ ಸಮಯದಲ್ಲಿ ಬೇಗ ಊಟ ಮುಗಿಸಿ ರಸ್ತೆ ಬದಿಯ ಆ ಅಂಗಡಿ
ಹುಡುಕುತ್ತಾ ನಡೆದೆ. ಜೋಕಲಿ ಕಟ್ಟಿದ ಅಂಗಡಿ ಹುಡುಕಿ ಹೋಗಿ ನಿಂತು.

‘ಯಾರಾದ್ರೂ ಏನಾದ್ರೂ ಕೊಟ್ಟು ಹೋಗಿದಾರಾ?’ ಕೇಳಿದೆ.

‘ಹೌದು ಸರ್ ತಗೊಳಿ..’ ಅಂತ ಒಂದು ಕವರ್ ನೀಡಿದರು.

ಅವಳ ಪಕ್ಕದಲ್ಲಿ ನಿಂತಿದ್ದ ಪುಟ್ಟ ಪೋರ ನನ್ನನ್ನೆ ನೋಡುತ್ತಿದ್ದ.

ಕವರ್ ತೆಗೆದೆ. ಜಯಂತ್ ಕಾಯ್ಕಿಣಿ ಅವರ ‘ಅರ್ನಾಕಲಿಯ ಸೇಪ್ಟಿ ಪಿನ್’ ಪುಸ್ತಕ ಮತ್ತು ಒಂದಷ್ಟು ಮಾವು ಮತ್ತು ಸೇಬಿನ
ಹಣ್ಣಿದ್ದವು. ಆಶ್ಚರ್ಯ ಮತ್ತು ಖುಷಿ ಒಟ್ಟಿಗೆ ಆದವು. ಆ ಪೋರ ನನ್ನ ಕಡೆಯೇ ನೋಡುತ್ತಿದ್ದ. ನಾನು ಹಣ್ಣುಗಳನ್ನು
ತೆಗೆದುಕೊಂಡು ಹೋಗಿ ಸಭೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿರಲಿಲ್ಲ.

‘ಹಣ್ಣು ಇಲ್ಲೆ ಇರಲಿ.. ಮತ್ತೆ ಬಂದು ತಗೊಂಡು ಹೋಗ್ತೀನಿ’ ಅಂದು ಪುಸ್ತಕ ಮಾತ್ರ ಎತ್ತಿಕೊಂಡು ಬಂದೆ.

ಸಭೆ ಮತ್ತೆ ಶುರುವಾಯಿತು. ಜಯಂತ್ ಪುಸ್ತಕ ನನ್ನ ಕೈಯಲ್ಲಿದದ್ದು ತುಂಬಾ ಖುಷಿ ಆಗಿತ್ತು. ಹಣ್ಣು ಮತ್ತು ಪುಸ್ತಕ ಕೊಟ್ಟು
ಹೋದ ಅವಳ ಅಕ್ಕರೆ ನೆನೆ ನೆನೆದು ಪುಳಕಗೊಂಡೆ.

ಈ ಮಧ್ಯಯೇ ಆ ಪುಟ್ಟ ಪೋರನ ಮುಖ ನೆನಪಾಯಿತು. ಅವನ ಕಣ್ಣುಗಳು ನೆನಪಾದವು. ನೂರು ಯೋಚನೆಗಳ ಮಧ್ಯೆ ಸಾಗಿಯೆ ಇತ್ತು
ಸಭೆ.

ಸಭೆ ಮುಗಿದಾಗ ಆರು ಗಂಟೆ. ಹಣ್ಣು ತೆಗೆದುಕೊಳ್ಳಲು ಹುರುಪಿನಿಂದಲೇ ಮೆಟ್ಟಿಲು ಇಳಿದು ನಡೆಯ ತೊಡಗಿದೆ. ಪ್ರತಿ ಹೆಜ್ಜೆ ಇಡುವಾಗ
ಆ ಪೋರನ ಮುಖ ನೆನಪಾಗ ತೊಡಗಿತು.

ಆ ಪೋರ ನಿಜಕ್ಕೂ ನನ್ನ ನೋಡುತ್ತಿದ್ದನೊ ಅಥವಾ ನನ್ನ ಕೈಯಲ್ಲಿನ ಹಣ್ಣನ್ನೊ?

ಯಾಕೊ ಒಮ್ಮೆಲೆ ಎದೆಯೊಳಗೆ ಚಳಕ್ ಎಂದಿತು.

ಪೋರನ ಕಣ್ಣಲ್ಲಿ ನಿಜಕ್ಕೂ ಹಸಿವಿತ್ತು. ಹಣ್ಣಿನ ಆಸೆಯಿತ್ತು. ನಾನೇಕೆ ಹಣ್ಣು ನಿಮಗಿರಲಿ, ಮಗುವಿಗಿರಲಿ.. ಅನ್ನಲಿಲ್ಲ. ಹಾಗೆ
ಅಂದಿದ್ದರೆ ಅವರು ಖಂಡಿತ ಒಪ್ಪುತ್ತಿದ್ದರೆ. ಇಲ್ಲ ಅವರು ಒಪ್ಪುತ್ತಿರಲಿಲ್ಲ.

ಹೀಗೆ ಯೋಚಿಸುತ್ತಾ ನಡೆಯುತ್ತಲೇ‌ ಇದ್ದೆ. ಎಷ್ಟೊ ಹೊತ್ತಿ‌ನ ಬಳಿಕ ನಿಂತು ನೋಡಿಕೊಂಡೆ ‘ಅರೇ ನಾನೆಲ್ಲಿದ್ದೇನಿ? ರಸ್ತೆಯ ಆ
ಅಂಗಡಿಯಿಂದ ಅದೆಷ್ಟು‌ ದೂರ ಬಂದಿದ್ದೀನಿ..?

ಹಾಗಾದರೆ ಹಣ್ಣು?
ಹಣ್ಣು ನೆನಪಾದಾಗಲೆಲ್ಲಾ ಆ ಪೋರನ ಕಣ್ಣುಗಳೇಕೆ ನೆನಪಾಗುತ್ತಿವೆ?

ನಾನು ಹೋಗಿ ಹಣ್ಣುಗಳನ್ನು ನೀವು ಇಟ್ಟುಕೊಳ್ಳಿ ಎಂದರೆ ಒಪ್ಪುವರೆ?
ನಾನು ಹೋಗದೆ ಇದ್ದರೆ ಹಣ್ಣುಗಳನ್ನು ಏನು ಮಾಡಿಯಾರು?

ಮತ್ತೆ ಪೋರ ನೆನಪಾದ..

ಪೋನ್ ಮತ್ತೆ ಗಿರ್ರ್ ಅಂದಿತು.

ಸೌಮ್ಯ ಕಾಲಿಂಗ್…

‘ಹ್ಮ..ಹ್ಮ.. ತಗೊಂಡೆ ಹಣ್ಣು ಪುಸ್ತಕ ಎರಡೂ ತಗೊಂಡೆ. ಹ್ಮ am so happy..’ ಅಂದೆ.

ಅದಾಗಲೇ ರಸ್ತೆಯ ಅಂಗಡಿಯಿಂದ ವಿರುದ್ದ ದಿಕ್ಕಿಗೆ ಒಂದೆರೆಡು ಕಿಲೊಮೀಟರ್ ಸಾಗಿ ಬಂದಿದ್ದೆ..

ಮನಸು ಎದೆಯಲ್ಲಿದೆ ಅಂತಾರೆ ಆದರೆ ಕಾಲೇಕೆ ಇತ್ತ ನಡೆದವು?

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: