ಸದಾಶಿವ್ ಸೊರಟೂರು ಕಥಾ ಅಂಕಣ- ಗೆದ್ದ ಕವಿತೆಯೂ, ಸೋತ ರಾಜನೂ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

7

ನನ್ನ ರಾಜ್ಯದಲ್ಲಿ ಇನ್ಮುಂದೆ ಯಾರು‌ ಕವಿತೆ ಬರೆಯುವಂತಿಲ್ಲ. ಬೀದಿಗಳಲಿ ಒಂದು ತುಣುಕು ಹಾಡಿನ ಗೊಣಗಾಟುವು ಕೇಳಿಸುವಂತಿಲ್ಲ..ಇದು ರಾಜಾಜ್ಞೆ.‌ ಆಜ್ಞೆ ಮೀರಿದರೆ ಆ ಕ್ಷಣಕೆ  ನೇಣು ನಿಶ್ಚಿತ. ರಾಜ ಆದೇಶ ಹೊರಡಿಸಿದ. ಆಸ್ಥಾನಿಕರು ಬೆಚ್ಚಿದರು. ರಾಜ್ಯದ ಮಂದಿ ಹೆದರಿದರು. ತಾರುಣ್ಯದ ಈ ರಾಜನಿಗೆ ಇದೆಂತಹ ಅರಸಿಕತೆ. ಯಾವ ಹುಚ್ಚು ಬಡಿಯುತು ಎಂದು ಯೋಚಿಸಿದರು. ಮಾತಾಡಲು ಧೈರ್ಯಬಾರದೆ ನುಂಗಿಕೊಂಡರು.

ಮಹಾರಾಣಿ ಆಸ್ಥಾನದ ಕವಿಯ ಕವಿತೆಗಳಿಗೆ ಮಾರುಹೋಗುತ್ತಿದ್ದಾಳೆ ಎಂಬ ಗುಮಾನಿ ಅವನನ್ನು ಕೆರಳಿಸಿತ್ತು. ಕವಿಯನ್ನು ಜೇಲಿನಲ್ಲಿ ಮಹಾರಾಣಿಯನ್ನು ಗೃಹಬಂಧನದಲ್ಲಿ ಕೂಡಿಹಾಕಿದ.

ಈ ಸುದ್ದಿ ಕೇಳಿ ಊರಿನ ಒಂದು ಸಣ್ಣ ಬೀದಿಯಲ್ಲಿ ವಾಸವಿದ್ದ ಆ ಇಬ್ಬರು ಕಂಗಾಲಾದರು. ಅವರಿಬ್ಬರೂ ಆ ಊರಿನ ಗುಪ್ತ ಪ್ರೇಮಿಗಳು.

‘ರೆಪ್ಪೆಗಳ ಬಾಗಿಲಲಿ ಬಚ್ಚಿಟ್ಟುಕೊಂಡೆ

ನೀ ಒಂದ್ಹನಿ ಜಾರಿಸಿದರೂ

ಜಾರಿ ಬೀಳುವೆ ಮರುಳೆ..’

ಹೀಗೆ ಬರೆದ ಒಂದು ಸಣ್ಣ ಸಾಲಿಗೆ ಅವಳು ಶರಣಾಗಿದ್ದಳು. ಅವನು ಕವನ ಗೀಚಿ ನೀರು ಕೊಂಡೊಯ್ಯುವ ಬಾವಿಯ ಬಳಿ ಅವಳಿಗೆ ಹೇಗೊ ದಾಟಿಸುತ್ತಿದ್ದ. ಅವಳು ಮಂತ್ರದಂತೆ ಭಕ್ತಿಯಿಂದ ಪುಳಕಿತಳಾಗಿ ಒಂದು ಮರು ಓಲೆ ಬರೆಯುತ್ತಿದ್ದಳು.‌ ಅವರ ಎದೆಗಳನ್ನು ಕವನಗಳು ಸೇರಿಸಿ ಹೊಲಿದಿದ್ದವು.

ಈಗ ರಾಜನ ಆಜ್ಞೆಯಿಂದ ತಲ್ಲಣಿಸಿದರು. ತಮ್ಮ ನಡುವಿನ ಮಾತುಗಳೇ ಸತ್ತು ಹೋದವು ಅನಿಸಿತು. ಕದ್ದು ಬರೆಯಬಹುದು. ಬರೆದು ಗೊತ್ತಾದರೆ ಇಬ್ಬರೂ ಉಳಿಯುವುದಿಲ್ಲ ಎಂಬುದರ ಅರಿವಾಗಿ ಹೆದರಿದರು.

ಬಾವಿಯ ಬಳಿ ಬರುತ್ತಿದ್ದರು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದರು. ಅವನು ಕಣ್ಣಲ್ಲೆ ಒಂದು ಸಾಲು ಬರೆಯುತ್ತಿದ್ದ.. ಅವಳು ಎದೆಯೊಳಗೆ ಎಳೆದುಕೊಂಡು ಅನುವಾದಿಸಿಕೊಳ್ಳುತ್ತಿದ್ದಳು. ಮನೆ ಸೇರಿದ ಬಳಿಕ ಇಬ್ಬರೂ ಕಳೆದು ಹೋದ ಆ ಅರೆಕ್ಷಣಗಳನ್ನು ಮತ್ತೆ ಮತ್ತೆ ನೆನಪಿಗೆ ತಂದು ಸುಖಿಸುತ್ತಿದ್ದರು. ಆದರೆ ಕವನದಲ್ಲಿ ಹೇಳುವುದನು ಬರೀ ಕಣ್ಣಲ್ಲಿ ದಾಟಿಸಲಾಗುತ್ತಿಲ್ಲ ಎಂದೆನಿಸಿತು. ಮತ್ತೆ ಕವನದ ಮೊರೆ ಹೋದರು. ಅವನು ಬರೆದು ಹೇಗೊ ಜಾಗೃತೆವಹಿಸಿ ಅವಳಿಗೆ ದಾಟಿಸಿ ಖುಷಿಪಡುತ್ತಿದ್ದ. ಕವಿತೆ ಇಲ್ಲದೆ ಬದುಕಿಲ್ಲ ಎಂಬಂತೆ ಪ್ರೀತಿಸತೊಡಗಿದರು.

ಈ ರಾಜನಿಗೊಂದು ಖಯಾಲಿಯಿತ್ತು. ವೇಷಮರೆಸಿಕೊಂಡು ರಾಜ್ಯ ತಿರುಗುತ್ತಿದ್ದ. ಪ್ರಜೆಗಳ ವಿಚಾರಗಳನ್ನು ಗುಪ್ತವಾಗಿ ಅರಿಯುತ್ತಿದ್ದ. ಒಮ್ಮೆ ಬೆಳ್ ಬೆಳಗ್ಗೆ ಅದೇ ಊರಿನಲ್ಲಿ ಮಾರುವೇಷದಲ್ಲಿ ಸಂಚಾರದಲ್ಲಿರುವಾಗ ಸಣ್ಣ‌ ಗುನುಗುವಿಕೆ ಕೇಳಿ ಮರೆಯಲ್ಲಿ ನಿಂತು ನೋಡಿದ. ಹಸಿ ತರುಣಿಯೊಬ್ಬಳು ಆಗಷ್ಟೇ ಮಿಂದು, ಒದ್ದೆ ಕೂದಲಿಗೆ ಬಿಳಿ ವಸ್ತ್ರ ಕಟ್ಟಿಕೊಂಡು ಹೂ ಬಿಡಿಸುತ್ತಿದ್ದಾಳು. ಅವಳು ಸೌಂದರ್ಯಕ್ಕೆ ಮತ್ತು ಅವಳ ಗುನುಗುವಿಕೆಗೆ ಬಹಳ ಹೊಂದುತ್ತಿತ್ತು. ಅವಳನ್ನು ನೋಡುತ್ತಾ ಅವಳ ದನಿಗೆ ಕಿವಿಯಾದ. ಅವಳು ಯಾವುದೊ ಕವನದ ಸಾಲುಗಳನು ಹಾಡಿಕೊಳ್ಳುತ್ತಿದ್ದಾಳೆ ಅನಿಸಿತು. ಕೇಳುತ್ತಾ ಕೇಳುತ್ತಾ ಅವನಿಗೆ ಕೋಪ ಬರದೆ ಮನಸು ವಿನೀತವಾಗತೊಡಗಿತು. ಅವಳ ಚೆಂದವನ್ನು ಕವನದ ಬಂಧವನ್ನು ಸವಿಯತೊಡಗಿದ.

ನಿತ್ಯ ವೇಷಮರಿಸಿಕೊಂಡು ಸದ್ದಿಲ್ಲದೆ ಅಲ್ಲಿ ನಿಲ್ಲ ತೊಡಗಿದ. ಅವಳನ್ನು ಅವಳ ಗುನುಗುವಿಕೆಯನ್ನು ಸವಿಯತೊಡಗಿದ. ಅವಳಿಂದ ಆ ಗುನುವಿಕೆಯ ಸಾಲುಗಳಿಗೆ ಚೆಂದ ಬಂದಿದೆಯೊ? ಕವನದ ಸಾಲುಗಳಿಂದ ಅವಳಿಗೆ ಚೆಂದ ಬಂದಿದೆಯೊ ತರ್ಕಿಸಿ ಸೋತ. ಅದರ ಗೊಡವೆಯೇ ಬೇಡವೆಂದು ಬರೀ ಸೌಂದರ್ಯದ ಆಸ್ವಾದನೆಯಲ್ಲಿ ತೊಡಗಿದ.

ಅರಮನೆಯಲ್ಲಿ ಅವಳದೇ ನೆನಪು. ಅವಳ‌ ಗುನುವಿಕೆಯದೆ ಹಿತ. ಏನನ್ನೊ ಹೇಳಬೇಕು ಅನ್ನುವ ತಹತಹಿಕೆ. ಏನನ್ನೊ ಹೇಳಲಾಗದ ಚಡಪಡಿಕೆ. ಕೆಲವು ದಿನ ನಿದ್ದೆ ಇಲ್ಲದೆ ಕಳೆದ. ಯಾವುದೊ ಪುಸ್ತಕ ತೆರೆದು ಕೂತ. ಓದುತ್ತಾ ಯಾವುದೊ ಒಂದು ಚೆಂದ ಸಾಲು ಕಂಡು ಪುಳಕಿತನಾದ. ಇದನ್ನು ಅವಳಿಗೆ ದಾಟಿಸುವಂತಿದ್ದರೆ? ಯೋಚಿಸಿದ.

ಲೇಖನಿ ಎತ್ತಿಕೊಂಡು ಆ ಸಾಲುನ್ನು ಬರೆದಕೊಂಡ. ಅದಕ್ಕೆ ಮತ್ತೊಂದು ಸಾಲು ಸೇರಿಸಿದ. ತನಗೆ ಗೊತ್ತಿಲ್ಲದೆ ಸಾಲುಗಳು ಸೇರುತ್ತಾ ಹೋದವು. ಮುಗಿಸಿದ ಮೇಲೆ ಅರೇ ಇದೇನಿದು ಕವಿತೆಯಾಗಿ ಹೊಯಿತು. ಅರಿವಾಗಿ ಬೆಚ್ಚಿಬಿದ್ದ. ಅವನೇ ಹೊರಡಿಸಿದ ಆಜ್ಞೆ ನೆನಪಾಯಿತು. ಸಣ್ಣಗೆ ಬೆವೆತ. ಆದರೂ ಕವನ ಮತ್ತೆ ಮತ್ತೆ ಓದಿಕೊಂಡ. ಎಷ್ಟೊಂದು ಚೆಂದವಿದೆ ಎನಿಸಿತು.

ಮರು ದಿನ ಅದನ್ನು ಎತ್ತಿಕೊಂಡು ಎಂದಿನಂತೆ ಹೋದ. ಅವಳು ಹೂ ಬಿಡಿಸುತ್ತಿದ್ದಳು. ಮಾತಾಡಿಸಿ ಕವನ ಕೊಟ್ಟು ಬಿಡಲೇ ಎಂದ. ರಾಜ್ಯದಲ್ಲೇ ಕವನಗಳನ್ನೇ ನಿಷೇಧಿಸಿರುವಾಗ ಅವಳ ಕೈಗೆ ಕವನ ಸೇರಿದಾಗ ಅದು ಗೂಢಚಾರರ ಮೂಲಕ ತನಗೇ ವಿಷಯ ಬರುವಂತಾಗಿ‌ ವಿಚಾರಣೆಯಲ್ಲಿ ತಾನೇ ಅಪರಾಧಿಯಾಗಿ ಬಿಟ್ಟರೆ ಅನ್ನುವ ಯೋಚನೆ ಬಂತು. ಆದರೂ ತಾನೇ ರಾಜನಲ್ಲವೆ ಆದರೇನು? ಅಂದುಕೊಂಡು ಮುಂದೆ ಹೆಜ್ಜೆ ಹಾಕಿದ. ಎದೆ ನಡುಗತೊಡಗಿತು. ಕೈ ಬೆವರಿತು. ಯಾಕೊ‌ ಧೈರ್ಯ ಇಷ್ಟೊಂದು ಅಡಗಿ ಹೋಗುತಿದೆಯಲ್ಲಾ ಅನಿಸಿತು. ಕತ್ತು ಕತ್ತರಿಸುವಾಗ ನಡುಗದ ಎದೆ ಅವಳ ಎದುರಿಗೆ ಪತ್ರ ಹಿಡಿದು ನಿಲ್ಲಲು ಯಾಕೆ ತತ್ತರಿಸುತ್ತಿದೆ.‌ ಗೊತ್ತಾಗದೆ ಒದ್ದಾಡಿದ. ಇದು ತನ್ನಿಂದಾಗದು‌ ಎನಿಸಿ ವಾಪಸಾದ. ರಾತ್ರಿ ಆ ಚಡಪಡಿಕೆಯನ್ನು ಬರೆದು ಕವನವಾಗಿಸಿದ. ನಿತ್ಯ ಅವಳ ನೆನಪಲ್ಲೇ ಕವನಗಳು ಹುಟ್ಟತೊಡಗಿದವು. ಇವನು ಬರೆಯತೊಡಗಿದ.

ಒಂದು ದಿನ ಒಡ್ಡೊಲಗದಲ್ಲಿ ಕೂತಿರುವಾಗ ಗೂಢಚಾರರು ಒಬ್ಬನನ್ನು ಎಳೆದು ತಂದರು ‘ಮಹಾಪ್ರಭು, ಆಜ್ಞೆಯನ್ನು ದಿಕ್ಕರಿಸಿ ಇವನ್ನೊಬ್ಬ ಕವನ ಬರೆದಿರುವ ಆರೋಪಿ. ಇವನ ಬರೆದ ಕವನಗಳೊಂದಿಗೆ ಕರೆತಂದಿದ್ದೇವೆ. ಇವನ ಶಿರಚ್ಛೇದಕ್ಕೆ ಅನುಮತಿ ಬೇಕು..’ ರಾಜ ದಿಗಿಲುಗೊಂಡ. ಅವನಿಗೆ ಅಲ್ಲಿ ನಿಂತಿರುವ ಆರೋಪಿಯೇ ತಾನು ಎನಿಸಿತು. ತನ್ನ ಶಿರಚ್ಛೇದಕ್ಕೆ ತಾನೇ ಆದೇಶ ಕೊಟ್ಟಿಕೊಳ್ಳುವಂತಿತ್ತು.

‘ಕವನಗಳನ್ನು ಇಲ್ಲಿ ಕೊಡಿ..’ ಅಂದನು ರಾಜ.‌ ಕವನಗಳನ್ನು ಕಿರುಗಣ್ಣಲ್ಲೂ ನೋಡದ ರಾಜನ ಈ ನಡೆಗೆ ಆಸ್ಥಾನಿಕರಿಗೆ ಆಶ್ಚರ್ಯವಾಯಿತು. ಕವನಗಳನ್ನು ತಂದು ಅವನ ಮುಂದಿಡಲಾಯಿತು. ರಾಜ ಒಂದೊಂದೆ ಓದತೊಡಗಿದ. ಈ ಸಾಲುಗಳು ಓದುತ್ತಲೇ ಒಮ್ಮೆಲೆ ಹೂ ಬಿಡಿಸಿಕೊಂಡು ಗುನುಗುವ ಆ ದನಿ ನೆನಪಾಯ್ತು. ಅವೇ ಸಾಲುಗಳಿವು. ಇವನ ಸಾಲುಗಳನ್ನು ಅವಳು ಗುನುಗುವುದು ಹೇಗೆ ಸಾಧ್ಯ? ವಿಚಾರಿಸತೊಡಗಿದ.

ಕವನಗಳನ್ನು ಬರೆದ ಆ ಕವಿ ‘ಇವು ನನ್ನ ಹುಡುಗಿಗೆ ಬರೆದ ಸಾಲುಗಳು ಮಹಾರಾಜರೇ. ದಯವಿಟ್ಟು ಕ್ಷಮಿಸಿ ನನ್ನಿಂದ ತಪ್ಪಾಗಿದೆ’ ಎಂದು ಅಗಲಾಚಿದ.

ನಿಮ್ಮ ಹುಡುಗಿಯನ್ನು ನಾವು ನೋಡಬೇಕು ಕರೆಸಿ ಅವಳನ್ನು.. ರಾಜ ಆದೇಶ ಮಾಡಿದ.

ಅವಳನ್ನು ಕರೆತಂದು ರಾಜನ ಮುಂದೆ ನಿಲ್ಲಿಸಿದರು.

ರಾಜ ಬೆಚ್ಚಿಬಿದ್ದ. ಅವಳೇ ಇವಳಾ? ಇಂತಹ ಸೌಂದರ್ಯ ಬರೀ ಕವನಕ್ಕೆ ಒಲಿದು ಹೋಗಿದೆಯಾ?

ಈಗ ಇವರನ್ನು ಕೊಲ್ಲುವ ಅಧಿಕಾರ ತನ್ನ ಕೈಯಲ್ಲಿದೆ. ಆದರೆ ನನಗೇಕೆ ಕೊಲ್ಲಿಸುವಷ್ಟು ರೋಷ ಬರುತ್ತಿಲ್ಲ. ತಾನು ರಾಜ ಇವಳನ್ನೀಗ ಬಲವಂತವಾಗಿ ಪಡೆಯಬಹುದು ಆದರೆ ಯಾಕೆ ಬಲವಂತ ಮಾಡಲು ಮನಸು ಒಪ್ಪುತ್ತಿಲ್ಲ.‌ ನಾನ್ಹೇಗೆ ಇಷ್ಟು ಬದಲಾದೆ. ಯೋಚಿಸಿತ್ತಾ ಕೂತ. ಮಂತ್ರಿಯವರು ಎಚ್ಚರಿಸಿದರು. ಪ್ರಭು ನಿಮ್ಮ ಆಜ್ಞೆಗಾಗಿ ಸಭೆ ಕಾದಿದೆ.

‘ಇಂದಿನಿಂದ ಕವನ ಬರೆಯಬಾರದು ಎಂಬು ಆಜ್ಞೆ ವಾಪಸು ಪಡೆಯಲಾಗಿದೆ. ಹಾಡು ಇತ್ಯಾದಿಗಳು ಎಂದಿನಂತೆ ಇರಲಿವೆ. ಪ್ರೀತಿಸಿಕೊಂಡ ಇವರನ್ನು ಅರಮನೆಯ ಕಡೆಯಿಂದಲೇ ಮದುವೆ ಮಾಡಿಸಲಾಗುವುದು. ಇಂದು ಇವರಿಗೆ ಸೂಕ್ತ ಉಡುಗೊರೆ ಕೊಟ್ಟು ಕಳುಹಿಸಿ.. ಅಲ್ಲದೆ ಸೆರಯಲ್ಲಿರುವ ಆ ಕವಿ ಮತ್ತು ಮಹಾರಾಣಿಯವರನ್ನು ಬಂಧ ಮುಕ್ತಗೊಳಿಸಿ  ಎಂದು ಹೇಳಿ ಅಲ್ಲಿ ನಿಲ್ಲಲಾರದೆ ತನ್ನ ಕೋಣೆಗೆ ಹೊರಟುಹೋದ. ಆಸ್ಥಾನಿಕರು ರಾಜನ ಮಾತಿಗೆ ತಡವರಿಸಿ‌ ಕೂತರು.

ಅಂದಿನಿಂದ ರಾಜ ಚಿಂತನೆಗೆ ಬಿದ್ದ. ಕವಿತೆಗಳನ್ನು ಓದತೊಡಗಿದ. ಬರೆಯತೊಡಗಿದ. ಕಳೆದುಹೋದ ಹುಡುಗಿಯ ಕೂತು ಬರೆದ. ದೂರವೇ ಉಳಿದಿದ್ದ ರಾಣಿಯ ಬಗ್ಗೆ ಬರೆದ. ಕಳೆದುಹೋದ ತನ್ನ ದಿನಗಳ ಬಗ್ಗೆ ಬರೆದ.

ಒಮ್ಮೆ ರಾಜನಿಲ್ಲದ ಹೊತ್ತಿನಲ್ಲಿ ಮಹಾರಾಣಿ ಅವನ ಕೋಣೆಯನ್ನು ಹೊಕ್ಕಳು. ಅಲ್ಲಲ್ಲಿ ಬಿದ್ದಿದ್ದ ಬರೆದು ಹಾಕಿದ್ದ ಕವನದ ಪ್ರತಿಗಳನ್ನು ಎತ್ತಿಕೊಂಡು ನೋಡಿದಳು. ಮಹಾರಾಣಿಗೆ ಆಶ್ಚರ್ಯವಾಯಿತು. ಕವನ ದ್ವೇಷಿ ತನ್ನ ಗಂಡ ಹೀಗೆ ಬರೆಯಲು ಸಾಧ್ಯವೇ? ಹೇಗೆ ಬದಲಾವಣೆ ಸಾಧ್ಯ? ಕವನ ಓದುವ ಹುಚ್ಚಿನ ಅವಳು ಪ್ರತಿಯೊಂದನ್ನು ಹಿಡಿದು ಓದತೊಡಗಿದಳು. ಓದುತ್ತಾ ‌ಮೈಮರೆತಳು, ನಕ್ಕಳು, ಕಣ್ಣೀರು ಹಾಕಿದಳು. ಆಗಾಗ ಕಣ್ಣುಗಳು ಬೆಳಗುತ್ತಿದ್ದವು. ಮುಖವು ಸಾಲಿನಿಂದ ಸಾಲಿಗೆ ಅರಳುತ್ತಿತ್ತು.

ಆಸ್ಥಾನದ ಕವಿಯ ಕವಿತೆಗಳು ಮಹಾರಾಜರ ಕವಿತೆಯ ಮುಂದೆ ಏನೂ ಅಲ್ಲ ಅನಿಸಿದವು. ತನ್ನ ಗಂಡ ಇಷ್ಟು ಚೆಂದ ಬರೆಯಲ್ಲನಾ? ಅಷ್ಟೊಂದು ಅಭಿರುಚಿ ಇದೆಯಾ? ನೆನೆದು ನೆನೆದು ತಲ್ಲಣಿಸಿದಳು.

ಓದುತ್ತಾ ಕೂತಾಗಲೇ ಅಲ್ಲಿಗೆ ರಾಜರ ಆಗಮನವಾಯಿತು.‌ ತನ್ನ ಗಂಡನನ್ನು ನೋಡಿದ್ದೆ ಎದ್ದು ಓಡಿ ಬಂದು ಅವನನ್ನು ತಬ್ಬಿದಳು. ದಿಗಿಲುಗೊಂಡ ರಾಜ ಎಷ್ಟೊ ಹೊತ್ತಿನ ಬಳಿಕ ಸಾವರಿಕೊಂಡು ಅವಳ ಬೆನ್ನು ಸವರಿದ.

ಅವರ ತುಟಿಗಳು ಪರಸ್ಪರ ಕವನ ಬರೆಯತೊಡಗಿದವು.

‍ಲೇಖಕರು Admin

September 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vidyarashmi P N

    ತುಂಬಾ ಚೆನ್ನಾಗಿದೆ ಈ ಕಥೆ.
    ಕವನವನ್ನು ದ್ವೇಷಿಸುವ ರಾಜನ‌ ಮನದಲ್ಲಿ ಬಂದ ಬದಲಾವಣೆ ಸಹಜವಾಗಿದೆ. ಕಥೆಯ ಹರಿವು ನದಿಯಂತೆ ಸಲಿಲ, ಸಹಜ.
    – ವಿದ್ಯಾರಶ್ಮಿ ಪೆಲತ್ತಡ್ಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: