ಸದಾಶಿವ್ ಸೊರಟೂರು ಕಥಾ ಅಂಕಣ- ಉತ್ತರಗಳ ಸಹವಾಸ ಬೇಡ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

43

‘ನನಗೆ ಅನೇಕ ಬಾರಿ ಅನಿಸಿದೆ ಇವಳೇಕೆ ನನ್ನ ಮೊಬೈಲ್ ಸ್ಕ್ರೀನ್ ಲಾಕ್ ಪಾಸ್ವರ್ಡ್ ಕೇಳಲಿಲ್ಲ ಅಂತ. ನಾವು ಇಷ್ಟು ಪ್ರೀತಿಸಿಕೊಂಡರೂ.. ಮದುವೆ ಆಗಬೇಕು ಅಂತ ಪ್ರಾಮಿಸ್ ಮಾಡಿಕೊಂಡರೂ ಪರಸ್ಪರ ಮೊಬೈಲಿನೊಳಗೆ ನುಗ್ಗಿ ತಡಕಾಡುವ ಪ್ರಯತ್ನವೇಕೆ ಮಾಡಲಿಲ್ಲ ಅಂತ..’ ತುಂಬಾ ಕುತೂಹಲದ ಉತ್ತರ ನಿರೀಕ್ಷೆ ಮಾಡಿ ಅವನು ಅವಳ ಮುಂದೆ ಈ ಪ್ರಶ್ನೆಯೊಂದನ್ನು ಇಟ್ಟ..

ಅವರ ಕೂತ ಜಾಗದಲ್ಲಿದ್ದ ಮರದ ಮೇಲಿನ ಪಿಕಳಾರವೊಂದು ಸುಮ್ಮನೆ ಗರಿ ಅಗಲಿಸಿ ಸುಮ್ಮನಾಯಿತು.‌

‘ನಾನು ತುಂಬಾ ಹೊತ್ತು ಆನ್ಲೈನ್‍ನಲ್ಲಿ ಇರ್ತೀನಿ ಅಂತಾರೆ ಫ್ರೆಂಡ್ಸ್.. ಬಹುಶಃ ನಿನಗೂ ಅದು ಗೊತ್ತಾಗಿರಬಹುದು.. ಇವನೇಕೆ ನನ್ ಮೊಬೈಲ್ ಒಳಗೆ ಇಣುಕಿ ಏನಿದೆ ಅಂತ ತಡಕಾಡಿ ನೋಡುವ ಪ್ರಯತ್ನ ಮಾಡಿಲಿಲ್ಲ.. ನನ್ನ ಮೊಬೈಲ್ ಸ್ಕ್ರೀನ್ ಲಾಕ್ ಯಾಕೆ ಕದಿಯಲಿಲ್ಲ ಅಂತ..’ ಅವಳು ಅವನ ಪ್ರಶ್ನೆಗೆ ಉತ್ತರಿಸದೆ.. ತನ್ನ ಪ್ರಾಮಾಣಿಕ ಪ್ರಶ್ನೆಯೊಂದನ್ನು ಮುಂದಿಟ್ಟಳು..

ಓಡಿ ಬಂದ ಗಾಳಿ ಅವಳ ಮುಂಗುರಳ ಮೇಲೆ ಜೀಕಿ.. ಮತ್ತೆ ಅಷ್ಟೆ ಅವಸರದಲ್ಲಿ ಮಾಯವಾಯಿತು..

ಅವನು ಉತ್ತರಿಸಿಲಿಲ್ಲ.. ಕಣ್ತುಂಬಾ ನಕ್ಕ..
ಇವಳಿಗೆ ಉತ್ತರವೇ ಗೊತ್ತಿಲ್ಲ.. ತುಟಿ ಅಗಲಿಸಿದಳು..

ಅಲ್ಲೇ ಅವಳ ಪಕ್ಕ ಇದ್ದ ಅವಳ ಮೊಬೈಲಿನ ಸ್ಕ್ರೀನ್ ಬೆಳಗಿತು. ಟಣ್ ಅನ್ನುವ ಒಂದು ಮೆಸೇಜಿನ ದನಿ.. ಇದಕ್ಕೆ ಉತ್ತರವೇನೊ ಅನ್ನುವಂತೆ ಅವನ ಮೊಬೈಲ್ ಸ್ಕ್ರೀನ್ ಕೂಡ ಯಾವುದೊ ಸಂದೇಶ ಪಡೆದುಕೊಂಡು ಗೆಲುವಾಯಿತು.. ಇಬ್ಬರಿಗೂ ಅದರ ಪರಿವೆ ಇಲ್ಲ. ಅವನು ಅವಳ ಮುಂಗೈ ಅಮುಕಿದೆ.. ಅವಳು ಅವನ ಬೆರಳು ಸವರಿದಳು..

ಮೇಲೆ ಕೂತಿದ್ದ ಪಿಕಳಾರ.. ನಾಚಿ ಹಾರಿಹೊಯಿತು..

‘ಮನಸು ತೆರದಿಟ್ಟು ಕೊಂಡ ನಾವು ಮೊಬೈಲ್ ಒಳಗೆ ಏನ್ನನ್ನೊ ಅಡಗಿಸಿಕೊಂಡಿದ್ದೆವಾ.. ಇದು ನಮ್ಮ ನಮ್ಮ‌ಗಳ ಖಾಸಗಿತನವೇ ಆಗಿರಬಹುದು. ಬದುಕಲ್ಲಿಕ್ಕೆ ಹಿಡಿ‌ ಖಾಸಗಿತನ ಸಾಕಾಗಬಹುದು.. ಆದರೆ ಇಡೀ ಬದುಕೇ ಖಾಸಗಿಯಾಗಿಬಿಟ್ಟರೆ.. ? ಎಷ್ಟು ಖಾಸಗಿತನ ಬೇಕು ಒಬ್ಬ ಮನುಷ್ಯನಿಗೆ?’ ಅಂತ ಕೇಳಬೇಕು ಅನಿಸಿತ್ತು ಇವನಿಗೆ.. ಆದರೆ ಕೇಳಲಿಲ್ಲ

‘ಮೊಬೈಲ್ ತಡಕಾಡಿದ ಬಳಿಕ ಏನೂ ಅಲ್ಲದ ಒಂದು ವಿಚಾರ ನನ್ನವನ ಮನಸಿನಲ್ಲಿ ಏನ್ನನ್ನೊ ಬಿತ್ತಬಹುದು.. ಅದನ್ನು ಸರಿ ಮಾಡಲು ನಾನೊಂದು ಸುಳ್ಳು ಹೇಳಬಹುದು.. ಪ್ರೀತಿಯಲ್ಲಿ ಮೊದಲ ಸುಳ್ಳು ಒಂದು ಸೋಂಕಿನಂತೆ.. ಅದು ಕ್ರಮೇಣ ಬೆಳೆದು ಬೆಳೆದು ಇಡೀ ಪ್ರೀತಿಯನ್ನೇ ಸುಳ್ಳಾಗಿಸುತ್ತದೆ.. ಏನೊ ಅಲ್ಲದ ವಿಚಾರಕ್ಕೆ ಸತ್ಯದ ಪ್ರೀತಿಯನ್ನು ಯಾಕೆ ಸುಳ್ಳಾಗಿಸಿಕೊಳ್ಳಬೇಕು… ಅಂತ ಇವಳಿಗೆ ಹೇಳಬೇಕು ಅನಿಸಿತು.. ಆದರೆ ಹೇಳಲಿಲ್ಲ..

ಈ ಹೇಳುವ, ಕೇಳುವ ಜವಾಬ್ದಾರಿಯನ್ನು ಅವರವರ ಬೆರಳುಗಳು ಪರಸ್ಪರ ಸ್ಪರ್ಶದ ಸಹಾಯದಿಂದ ಜತನವಾಗಿ ಮಾಡಿ ಮುಗಿಸಿದವು..

‘ಹೊರಡೋಣ್ವ..’ ಅವಳು ಕೇಳಿದಳು.. ಅವನು ಅವಳ ಹಣೆಗೊಂದು ಮುತ್ತಿಟ್ಟು ಅನುಮತಿಸಿದ..

ಅವನು ಅವಳ ಮೂಗುತಿಯ ಸೊಬಗು ಸವಿಯುತ್ತಾ ಮೊಬೈಲ್ ಎಳೆದುಕೊಂಡು ಸುಮ್ಮನೆ ಜೇಬಿಗಿಟ್ಟುಕೊಂಡ.‌ ಅವಳು ಅವನ ಕಡೆ ಒಮ್ಮೆ ಹುಬ್ಬು ಹಾರಿಸಿ.. ಮೊಬೈಲ್ ಎತ್ತಿಕೊಂಡು ಎದ್ದಳು..

ಇಬ್ಬರೂ ಎದ್ದು ಪಾರ್ಕಿನಿಂದ ಆಚೆ ಬಂದು, ತಮ್ಮ ತಮ್ಮ ಮನೆ ಕಡೆ ನಡೆದರು.. ಅವನು ಸ್ವಲ್ಪ ದೂರ ನಡೆದ ಬಳಿಕ ಯಾರಿಗೊ ಕರೆ ಮಾಡಲು ಮೊಬೈಲ್ ತೆಗೆದಾಗ ಮೊಬೈಲ್ ಅದಲು ಬದಲಾಗಿದ್ದು ಅರಿವಾಯಿತು..‌ ಕಳೆದ ವರ್ಷ ತಮ್ಮ ಪ್ರೀತಿ ಮೂಡಿದ ದಿನದ ನೆನಪಿಗಾಗಿ ಇಬ್ಬರೂ ಒಂದೇ ತರಹದ ಮೊಬೈಲ್ ಕೊಂಡಿದ್ದರು.. ಇಬ್ಬರ ಮೊಬೈಲ್ ಕೂಡ ಗೊತ್ತಾಗದಷ್ಟೂ ಒಂದೇ ತರಹ ಇದ್ದವು.. ಈಗ ಅದಲು ಬದಲಾಗಿವೆ.. ಅವಳ ಮೊಬೈಲ್ ಅವನ ಬಳಿ ಬಂದಿದೆ.. ಅವನದು ಅವಳ ಬಳಿ.

‘ಅರೇ..’ ಅನ್ನುವ ಉದ್ಗಾರ ಬಂದದ್ದೆ ಅದರ ಹಿಂದೆಯೇ ಒಂದು ಯೋಚನೆಯೂ ಬಂತು ಅವನಿಗೆ. ಅವಳು ಕೇಳುವವರೆಗೂ ಮೊಬೈಲ್ ತನ್ನ ಬಳಿಯೇ ಇಟ್ಟುಕೊಂಡು ಇವಳಿಗೆ ಯಾರ ಕರೆಗಳು ಬರುತ್ತವೆ? ಯಾವ ಮೆಸೇಜ್‍ಗಳು ನೋಟಿಫಿಕೇಷನ್‍ನಲ್ಲಿ ಕಾಣಿಸುತ್ತವೆ.? ಎಂದು ನೋಡಿದರೆ ಹೇಗೆ ಅನಿಸಿತು.. ಆ ಯೋಚನೆಯನ್ನು ತುಂಬಾ ಬೆಳೆಯಲು ಬಿಡಲಿಲ್ಲ ಅವನು. ತಕ್ಷಣ ತಿರುಗಿ ವೇಗವಾಗಿ ನಡೆಯುತ್ತಾ ಅವಳ ಮನೆಯ ದಾರಿಯ ಕಡೆ ಓಡತೊಡಗಿದನು…

ವೇಗ ವೇಗವಾಗಿ ಬಂದ. ಅವಳು ನಿಧಾನಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಕೂಗಿ ಕರೆದು ನಿಲ್ಲಿಸಿದ. ಹೋಗಿ ಮೊಬೈಲ್ ಬದಲಾಗಿರುವ ವಿಷಯ ತಿಳಿಸಿ. ಅವಳಿಗೆ ಅವಳ ಮೊಬೈಲ್ ಕೊಟ್ಟ. ತನ್ನ ಮೊಬೈಲ್‌ ಪಡೆದುಕೊಂಡ. ‘ಅವಳು ನನಗೆ ಗೊತ್ತೆ ಆಗಿಲ್ಲ ನೋಡು’ ಅಂದಳು.. ಇವನೂ ಕೂಡ ‘ಸಾರಿ‌ ಮಿಸ್ ಆಯ್ತು’ ಅಂದ.. ಇಬ್ಬರೂ ಒಮ್ಮೆಗೆ ನಕ್ಕು, ಮತ್ತೆ ಅಗಲಿದರು..

ಅವರ ನಡುವೆ ಅಗಲದೆ ಹಲವು ವರ್ಷಗಳು ಕಳೆದವು..

ಇಬ್ಬರ ಮನೆಯಲ್ಲಿ ಪ್ರೀತಿಗೆ ಅನುಮತಿ ಇರಲಿಲ್ಲವಾದರೂ ಮದುವೆ ಅಂತ ಬಂದಾಗ ಒಪ್ಪಿಗೆಯ ಮುದ್ರೆ ಬಿದ್ದಿತ್ತು. ನಾಳೆ ಮದುವೆ ಅನ್ನುವಾಗ ಹಿಂದಿನ ದಿನ ಇಬ್ಬರೂ ಒಟ್ಟಿಗೆ ಕೂತು ಮಾತಾಡತೊಡಗಿದರು..

‘ಇಲ್ಲಿಯವರೆಗೂ ಆದ ದಿನಗಳೇ ಬೇರೆ. ಇನ್ಮೇಲೆ ಬರುವ ದಿನಗಳೇ ಬೇರೆ..‌ಇದೆ ಬೇರೆಯದೆ ಬದುಕು..’ ಅಂದಳು ಅವಳು.‌

‘ಹೌದು.. ಹೊಸ ಬದುಕು.. ಹೊಸತಾಗಿ ಬದುಕೋಣ..’ ಅವನದು ಭರವಸೆಯ ಉತ್ತರ.

‘ಕೆಲವು ಹಳೆಯವನ್ನು ಬಿಟ್ಟು ಬಿಡೋಣ.. ಹೊಸದನ್ನು ಬದುಕಿಗೆ ತಂದುಕೊಳ್ಳೊಣ..’ ಅವಳ ಖಚಿತ ಮಾತು.

‘ಈ ಮೊದಲು ಏನೇ ಆಗಿದ್ದರು ಅದು ಅಲ್ಲಿಗೇ ಮುಗಿಯಲಿ.. ಮುಂದೆ ಆಗುವುದು, ನಮಗಾಗಿಯೇ ಆಗಲಿ..’ ಅವನ ವಿನಂತಿ.

‘ಹೌದು ಕಣೊ..‌ಎಲ್ಲವೂ ಹೊಸತಾಗಲಿ..’ ಆಣೆಯಂಥ ಅವಳ ಮಾತು.

‘ತಗೊ ಈ ಮೊಬೈಲ್.. ಇಷ್ಟು ದಿನ ನೀನು ನನ್ನ ಮನಸು ಮಾತ್ರ ನೋಡಿದೀಯ, ಈಗ ಮೊಬೈಲ್ ಕೂಡ ನೋಡು. ನಾಳೆಯಿಂದ ನಾವು ದಂಪತಿಗಳು. ನಿನಗೆ ಯಾವ ಗುಮಾನಿಗಳು ಇರಬಾರದು. ಮೊಬೈಲ್ ಕೊಂಡ ದಿನದಿಂದ ಇಲ್ಲಿಯವರೆಗೂ ಏನ್ನನ್ನು ಅಳಿಸದ ಎಲ್ಲವನ್ನೂ ಹಾಗೆ ಉಳಿಸಿಕೊಂಡಿದ್ದೇನೆ; ನಿನ್ನ ಪ್ರೀತಿಯಂತೆ. ನಮಗೆ ಬದುಕಲಿಕ್ಕೆ ಒಂದು ನಂಬಿಕೆ ಬೇಕು’ ಅಂದ.‌

ಅವಳು ಖುಷಿಯಿಂದ ಅವನ ಮೊಬೈಲ್ ತೆಗೆದುಕೊಂಡಳು..‌

‘ಪಾಸ್ವರ್ಡ್..?’ ಕೂತೂಹಲದಿಂದ ಕೇಳಿದಳು..‌

ಅವನು ಪಾಸ್ವರ್ಡ್ ಹೇಳಿದ..

ಮೊಬೈಲ್ ತಗ್ದು ಒಮ್ಮೆ ಮೇಲೆ, ಕೆಳಗೆ ನೋಡಿದಳು.. ಅವನ ಕಡೆಯೊಮ್ಮೆ ನೋಡಿದಳು..

ಸುಮ್ಮನೆ ಕೂತು ಒಮ್ಮೆ ಏನ್ನನ್ನೊ ಯೋಚಿಸಿದಳು..

ತಕ್ಷಣವೇ ಮೊಬೈಲ್ ಆಫ್ ಮಾಡಿದಳು. ಅವನು ಆಶ್ಚರ್ಯಕರವಾಗಿ ಅವಳನ್ನು ನೋಡತೊಡಗಿದ..

ಅವಳು ಸ್ವೀಚ್ ಆನ್ ಮಾಡುವ ಬಟನ್ ಮತ್ತು ವ್ಯಾಲ್ಯೂಮ್ ಬಟನ್ ಒಮ್ಮೆಲೆ ಒತ್ತಿ ಹಿಡಿದಳು.. ಮೊಬೈಲ್ ರಿಸೆಟ್ ಫ್ಯಾಕ್ಟರಿ ಸೆಟ್ಟಿಂಗ್ ಮೊಡ್ ನಲ್ಲಿ ಆನ್ ಆಯ್ತು.. ರೆಸೆಟ್ ಒತ್ತಿ ಮುಂದುವರೆದಳು..‌ ಮೊಬೈಲ್ ಇಡೀ ತನ್ನ ಡೇಟಾ ಕಳೆದುಕೊಂಡು ಹೊಸತಾಗಿ ಆನ್ ಆಯ್ತು..

‘ಹಳೆದು ಏನೇ ಇರಲಿ.. ಇಂದು ಇಬ್ಬರೂ ಅಳಿಸಿಕೊಳ್ಳುವ. ಇಂದಿನಿಂದ ಎಲ್ಲವೂ ಹೊಸತಾಗಲಿ’ ಅಂದಳು..‌

ತಗೊ ನನ್ನ ಮೊಬೈಲ್. ಯಾವ ಸ್ಕ್ರೀನ್ ಲಾಕ್ ಕೂಡ ಇಟ್ಟಿಲ್ಲ. ತೆಗೆದು ಹಾಕಿದೆ. ಈಗಿರುವ ನನ್ನ ಮನಸಿನಂತೆ ಅದು ಕೂಡ ಮುಕ್ತವಾಗಿದೆ. ನನ್ನ ಹೃದಯದ‌ ಕೋಣೆಗೆ ಬಂದವನು ನೀನು, ಮೊಬೈಲ್ ಕೋಣೆಗಳನ್ನೂ ಹುಡುಕಾಡು..’ ಅನ್ನುತ್ತಾ ಅವನ ಕೈಗೆ ಮೊಬೈಲ್ ಇಟ್ಟಳು..

ಅವನ ಅವಳ ಮೊಬೈಲ್ ಅನ್ನು ಅವಳಿಗೇ ಹಿಂದಿರುಗಿಸಿ.. ಅವಳ ಕತ್ತಿಗೊಂದು‌ ಮುತ್ತಿಟ್ಟ..

‘ನೀನು ನನ್ನ ಮೊಬೈಲ್ ನೋಡ್ಬೇಕು ಕಣೊ..’ ಅಂದಳು.

ಅವನು ಸುಮ್ಮನೆ ನಕ್ಕ..

ಅವಳು ಒಂದು ಕ್ಷಣ ಸುಮ್ಮನೆ ಕೂತು ಯೋಚಿಸಿ..

ತನ್ನ ಮೊಬೈಲ್ ಅನ್ನು ಕೂಡ ಅದೇ ತರಹ ಅವನ ಮುಂದೆಯೇ ರಿಸೆಟ್ ಮಾಡಿಹಾಕಿದಳು.. ಎಲ್ಲಾ ಡೇಟಾ ಹೊರಟು ಹೋಗಿ ಅದು ಹೊಸತಾಯಿತು..

‘ನೀನ್ ಅಷ್ಟ ಅಲ್ಲ ಕಣೋ.. ನಾನು ಹೊಸತಾಗುತ್ತೀನಿ..’ ಅಂದಳು..

ಅವನ ಮೊಬೈಲ್ ತಾನು ತೆಗೆದುಕೊಂಡು, ತನ್ನ ಮೊಬೈಲ್ ಅವನಿಗೆ ಕೊಟ್ಟಳು.. ಅವರವರ ಸಿಮ್ ಮಾತ್ರ ಅವರವರೇ ಬಳಸುವಂತೆ ಮಾಡಿ.. ಅವನ ಕೈಗೆ ಇಟ್ಟಳು..

ಆ ಕ್ಷಣದಿಂದ ಅವರ ಇನ್ನೊಂದು ಬದುಕು ಹೊಸತಾಗಿ ಅರಳತೊಡಗಿತು..‌

ಈಗಿನ ಜನ ಮನಸ್ಸು ಕೊಟ್ಟಷ್ಟು ಸುಲಭಕ್ಕೆ ಮೊಬೈಲ್ ಒಳಗಿ‌ನ ಗುಟ್ಟು ಬಿಟ್ಟು ಕೊಡುವುದಿಲ್ಲ.. ಮೊಬೈಲ್ ಎಂಥಹ ಚಾಲಾಕಿಯೆಂದರೆ ಕೊಟ್ಟ ಮನಸ್ಸನ್ನು ಕೂಡ ವಾಪಸ್ ತೆಗೆದುಕೊಂಡು ಬಿಡುವಷ್ಟು ಮ್ಯಾಜಿಕ್ ಮಾಡುತ್ತದೆ..

ಪ್ರೇಮಿಗಳು ಈಗ ದಂಪತಿಗಳಾಗಿದ್ದರು. ಬರೀ ಪ್ರೇಮಿಗಳ ಮಧ್ಯೆ ದಾಂಪತ್ಯ ಇರುವುದಿಲ್ಲ..‌ ಆದರೆ ದಂಪತಿಗಳ ಮಧ್ಯೆ ಪ್ರೇಮಿ ಇರುತ್ತಾನೆ.. ದಾಂಪತ್ಯ ಮತ್ತು‌ ಪ್ರೇಮ ಈ ಎರಡನ್ನೂ ಕೈ ಹಿಡಿದು ನಡೆಸುವುದೇ ಬದುಕು.

ಈಗ ಅವರು ಸುಖವಾಗಿ ಬದುಕುತ್ತಿದ್ದಾರೆ. ಈಗಲೂ ಮೊಬೈಲ್ ಬಳಸುತ್ತಾರೆ. ಮೊದಲಿನಷ್ಟೆ ಬಳಸುತ್ತಾರೆ. ಇಬ್ಬರ ಮೊಬೈಲಿಗೂ ಈಗ ಪಾಸ್ವರ್ಡ್ ಗಳಿಲ್ಲ.. ಮದುವೆಗಿಂತ ಮೊದಲು ಅವರ ಮೊಬೈಲ್ ಗಳಿಗೆ ಪಾಸ್ವರ್ಡ್ ಗಳಿದ್ದವು.. ಆಗ ನೋಡಲು ಸಾಧ್ಯವಿರುತ್ತಿರಲಿಲ್ಲ.. ನೋಡುವ ಕೆಟ್ಟ ಕುತೂಹಲವೂ ಅವರಿಗೆ ಇರಲಿಲ್ಲ.. ಈಗ ಪಾಸ್ವರ್ಡ್ ಗಳಿಲ್ಲ.. ತೆರೆದಿದೆ ಎಲ್ಲವೂ.. ನೋಡಬಹುದು. ಆದರೆ ನೋಡುತ್ತಿಲ್ಲ.‌ ಅವನ‌ ಮೊಬೈಲ್ ಕಡೆ ಅವಳು ಕಣ್ಣೆತ್ತಿ ಕೂಡ ನೋಡುವುದಿಲ್ಲ.. ಕರೆ ಬಂದ್ರೂ ಕೂಡ ಅದನ್ನು ಅವಳು ಸ್ವೀಕರಿಸುವುದಿಲ್ಲ.. ರೀ ಫೋನ್ ಬಂದಿದೆ ನೋಡಿ ಅಂತಾಳೆ.. ಅವನು ಕೂಡ ಅವಳ ಮೊಬೈಲ್ ವಿಚಾರದಲ್ಲಿ ಅವಳ ತಂಟೆಗೂ ಹೋಗುವುದಿಲ್ಲ.

ಅವಳು ಒಮ್ಮೊಮ್ಮೆ ಗಂಟೆಗಟ್ಟಲೆ ಕೂತು ಯಾರಿಗೊ ಮೆಸೇಜ್ ಮಾಡ್ತಾಳೆ.. ಕೆಲವೊಮ್ಮೆ ಗಂಟೆಗಟ್ಟಲೆ ಹರಟುತ್ತಾಳೆ.. ಅವನು ಯಾರದು ಅದು ಪೋನ್? ಏನು ಅಷ್ಟು ಮಾತು ಅಂತ ಕೇಳುವುದಿಲ್ಲ.. ಇವಳು ಕೂಡ ಹೇಳುವ ಪ್ರಯತ್ನ ಮಾಡುವುದಿಲ್ಲ.‌

ಆದರೆ ಈ ನಡುವೆ ಗಂಡ ಮೊಬೈಲ್ ನಲ್ಲೆ ಹೆಚ್ಚು ಹೊತ್ತು ಕಳೆಯುತ್ತಾನೆ ಅಂತ ಅವಳಿಗೆ ಅನಿಸಿದೆ. ಏನದು ಮೊಬೈಲ್ ನಲ್ಲಿ; ಏನು ಅಷ್ಟು ಹೊತ್ತು? ಅಂತ ಕೇಳಬೇಕು ಅಂತ ಅವಳಿಗೆ ಒಮ್ಮೆಯೂ ಅನಿಸಿಲ್ಲ..

ಒಮ್ಮೆ ಸ್ನಾನಕ್ಕೆ ಹೋದಾಗಲೂ ಅವನು ಮೊಬೈಲ್ ಎತ್ತಿಕೊಂಡು ಹೋದಾಗ ಮಾತ್ರ ಅವಳಿಗೆ ಇದು ಯಾಕೊ ಸಹಜವಾಗಿಲ್ಲ ಅನಿಸಿತು.. ಅಸಹಜ ನಡೆ ಅನಿಸಿತು..‌ ಅವನು ಮೊಬೈಲ್ ಲಾಕ್ ಮಾಡಿಟ್ಟುಕೊಂಡಿರಬಹುದಾ? ಒಮ್ಮೆ ನೋಡಬೇಕೆಂದುಕೊಂಡಳು.. ಮನಸು ಬೇಡ ಅನಿಸಿದರೂ ಒಮ್ಮೆ ಅಚಾನಕ್ಕಾಗಿ ಅವಳ ಕಣ್ಣಿಗೆ ಅವನು ಮೊಬೈಲ್ ಬಳಸುತ್ತಿರುವುದು ಕಂಡಿತು…‌ಇಲ್ಲ ಯಾವುದೇ ಲಾಕ್ ‌ಇಟ್ಟಿರಲಿಲ್ಲ. ತನ್ನ ಮೊಬೈಲ್ ನಂತೆ ಸಹಜವಾಗಿ ಬಳಸುತ್ತಿದ್ದ. ತಾನೇ ಏಕೊ ಅತಿಯಾಗಿ ಯೋಚಿಸುತ್ತಿರಬಹುದೆಂದು ಎನಿಸಿ.. ತನಗೆ ತಾನೇ ಬೈದುಕೊಂಡಳು.

ನಂಬಿಕೆ ಮರವಾಗಿ ಬೆಳೆದಾಗ.. ಕೆಲವೊಮ್ಮೆ ಆ ಮರದಲ್ಲಿ ಹಾವು ಕೂಡ ಬಂದು ವಾಸಿಸಬಹುದು. ಹಾವಿಗೆ ಬೆಳೆದು ನಿಂತ ದಟ್ಟ ಮರವೆ ಅಭಯ.

ಅಡುಗೆ ಮಾಡಿ ಗಂಡನಿಗಾಗಿ ಕಾಯುತ್ತಿದ್ದ ಅವಳಿಗೆ ಗಂಡ ಬರದೆ ಅದರ ಬದಲು ಒಂದು ಆಶ್ಚರ್ಯಕರ ಕರೆ ಬಂತು..‌

‘ನಿಮ್ ಯಜಮಾನ್ರು ಫ್ಲೇ ಓವರ್ ಬಳಿ ಆಕ್ಸಿಡೆಂಟ್ ಆಗಿ ಬಿದ್ದು ಹೋಗಿದ್ದಾರೆ.. ತಲೆಗೆ ತುಂಬಾ ಏಟಾಗಿದೆ. ಬದುಕೋದ ಅನುಮಾನ..’ ಅಂದಿತ್ತು ಪೋನ್ ಮಾಡಿದ ದನಿ.

ಇವಳು ಹೃದಯವೇ ನಿಂತು ಹೋದಂತೆ ಕನಲಿದಳು.‌‌ಕೈ ಕಾಲುಗಳು ನಡುಗತೊಡಗಿದವು.. ಜಲಜಲ ಬೆವೆತು ಹೋದಳು.‌ ತಕ್ಷಣವೇ ಆಟೋ ಹಿಡಿದು ಅಪಘಾತದ ಜಾಗ ತಲುಪಿದಳು.. ಗಂಡ ನಡು ರಸ್ತೆಯಲ್ಲಿ ಸತ್ತು ಬಿದ್ದಿದ್ದ. ಅವನು ಕೂತ ಬೈಕಿಗೆ ಹೊಡೆದ ಕಾರು ಕೂಡ ಅಲ್ಲೆ ಇತ್ತು..

‘ಇವನು ಸತ್ತೋದ.. ಅವಳಿಗೆ ಏನಾಗಿದೆಯೊ ಆಸ್ಪತ್ರೆಗೆ ತಗ್ದುಕೊಂಡು ಹೋದ್ರು..’ ಅಂತ ಯಾರೊ ಮಾತಾಡುವ ಸದ್ದು ಕೇಳಿಸಿತು.‌.

‘ಅವನು ಹೆಲ್ಮಟ್ ಹಾಕಿದ್ರೆ ಹೀಗೆ ಆಗ್ತಿರಲಿಲ್ಲ. ಇವಳು ಹಾಕಿರಲಿಲ್ಲ. ಅವಳಿಗೆ ಕಮ್ಮಿ ಏಟಾಗಿದೆ ಅಂತೆ, ಬಹುಶಃ ಬದುಕಬಹುದು.. ಇವನೇ ಹೋಗಿಬಿಟ್ಟ..’ ಇನ್ನೊಂದು ಮಾತು ಕೂಡ ಅವಳ ಕಿವಿಗೆ ಬಿತ್ತು..‌

‘ಯಾರು ಅವಳು..?’ ಸಿಡಿಲಿನಂಥ ಪ್ರಶ್ನೆ ಅವಳಿಗೆ ಬಡಿಯಿತು..

ಆದರೆ ಅದನ್ನು ಲೆಕ್ಕಿಸದೆ ಸತ್ತು ಬಿದ್ದಿದ್ದ ಗಂಡನ ಬಳಿ ಓಡಿದಳು. ಬಿದ್ದಿದ್ದ ಗಂಡನನ್ನು ಕರೆದು ಕರೆದು ಎಬ್ಬಿಸಿತೊಡಗಿದಳು.. ಚೀರಿದಳು.. ಅತ್ತಳು.. ಅಳುತ್ತಲೇ ಮೂರ್ಛೆ ಹೋದಳು..‌

ಗಂಡ ಹೋಗಿ ವಾರ ಕಳೆದಿದೆ.. ಪೊಲೀಸ್ ಕೊಟ್ಟು ಹೋದ ರಸ್ತೆಯಲ್ಲಿ ಬಿದ್ದ ಗಂಡನ ಮೊಬೈಲ್ ಏನೂ ಆಗದೆ ಹಾಗೆ ಉಳಿದಿದೆ..‌

ಅವನ ಜೊತೆ ಬೈಕಿನಲ್ಲಿ ಕೂತಿದ್ದ ಆ ಹುಡುಗಿ ಕೂಡ ಆಸ್ಪತ್ರೆಯಲ್ಲಿ ಸತ್ತು ಹೋದಳಂತೆ. ಅವಳು ಯಾರು ಅನ್ನುವುದಕ್ಕೆ ಜನ ಒಬ್ಬೊಬ್ಬರು ಒಂದೊಂದು ಮಾತಾಡುತ್ತಿದ್ದಾರೆ.. ಅವರ ಈ ಎಲ್ಲಾ ಮಾತುಗಳಿಗೆ ಅವಳು ಕಿವುಡಿಯಾಗಿದ್ದಾಳೆ..‌

ಮೊಬೈಲ್ ಗೆ ಯಾವುದೊ ಮೆಸೇಜ್‌ಗಳು ಬರುತ್ತವೆ.. ಪೋನ್‍ಗಳು ಬರುತ್ತವೆ.. ಯಾವುದೂ ಬೇಡವಾಗಿದೆ ಅವಳಿಗೆ..

ಆ ಹುಡುಗಿ ಯಾರು? ಇವರ ಬೈಕಿನಲ್ಲಿ ಆ ರಾತ್ರಿ ಎಲ್ಲಿಗೆ ಹೊರಟಿದ್ದು?

ಉತ್ತರ ಹೇಳುವವರು ಯಾರು?

ತಟ್ಟನೆ ಗಂಡನ ಮೊಬೈಲ್ ನೆನಪಾಗುತ್ತದೆ..

ಬಂದು ಮೊಬೈಲ್ ಎತ್ತಿಕೊಳ್ಳುತ್ತಾಳೆ..‌ ಸ್ಕ್ರೀನ್ ಲಾಕ್ ಇಲ್ಲ..‌ ಅದಂತೂ ಗೊತ್ತು. ಅವಳು ಯಾರಿರಬಹುದು ಎಂಬುದಕ್ಕೆ ಬಹುಶಃ ಉತ್ತರವಿದೆ ಇದರಲ್ಲಿ..

ಮೊಬೈಲ್ ಕೈಯಲ್ಲೆ ಹಿಡಿದು, ಅರೆ ಕ್ಷಣ ಯೋಚಿಸಿದಳು.

ಯೋಚಿಸುತ್ತಲೇ.. ಮೊಬೈಲ್ ಸ್ವೀಚ್ ಆಫ್ ಮಾಡಿದಳು

ಈಗ ಮೊಬೈಲ್ ಸ್ವೀಚ್ ಆನ್ ಮಾಡುವ ಬಟನ್ ಮತ್ತು ವ್ಯಾಲ್ಯೂಮ್ ಬಟನ್ ಒಟ್ಟಿಗೆ ಹಿಡಿದು ಒತ್ತಿದ್ದಳು.

ಮೊಬೈಲ್ ರಿಸೆಟ್ ಫ್ಯಾಕ್ಟರಿ ಸೆಟ್ಟಿಂಗ್ ಮಾಡಿ.. ಇಡೀ ಮೊಬೈಲ್ ನಲ್ಲಿರುವ ಡೇಟಾ ಅಳಿಸಿ ಹಾಕಿದಳು..

ಮೊಬೈಲ್ ಈಗ ಹೊಸತು.. ಎಲ್ಲಾ ನಿಗೂಢ ಉತ್ತರಗಳನ್ನು ಅಳಿಸಿ ಹಾಕಿದ ಹೊಚ್ಚ ಹೊಸದು..‌

ಬದುಕಿನಲ್ಲಿ ಪ್ರಶ್ನೆಗಳೊಂದಿಗೆ ಬದುಕುವುದು ಸುಲಭ.. ಉತ್ತರಗಳೊಂದಿಗೆ ಬದುಕಲಾಗುವುದಿಲ್ಲ..!

ಅವಳೀಗ ಪ್ರಶ್ನೆಗಳೊಂದಿಗೆ ಬದುಕು ಕಟ್ಟಿಕೊಳ್ಳಲು ಅಣಿಯಾಗುತ್ತಿದ್ದಾಳೆ.. ಉತ್ತರಗಳ ಸಹವಾಸ ಬೇಡ ಅನಿಸಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

May 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: