ಜಿ ಎನ್ ನಾಗರಾಜ್ ಅಂಕಣ- ಅಸುರರಿಂದ ಮಂಟೇಸ್ವಾಮಿಯವರೆಗೆ ಕಬ್ಬಿಣದ ತಂತ್ರಜ್ಞಾನ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

56

ಅಸುರರಿಂದ ಮಂಟೇಸ್ವಾಮಿಯವರೆಗೆ ಕಬ್ಬಿಣದ ತಂತ್ರಜ್ಞಾನ :
ಕಬ್ಬಿಣ ತಯಾರಿಕೆ ಎಂಬುದು ಒಂದು ಅಸುರೀ ವಿದ್ಯೆ. ಇದು ಒಂದು ಕಡೆ ಸಂಸ್ಕೃತ ಧರ್ಮ ಗ್ರಂಥಗಳಲ್ಲಿ ಕಾಣುವ ಹೇಳಿಕೆ. ಮತ್ತೊಂದು ಕಡೆ ಹಲವು ಕಬ್ಬಿಣ ತಯಾರಿಸುವ ಬುಡಕಟ್ಟುಗಳ ನಂಬಿಕೆ. ಈ ಬುಡಕಟ್ಟುಗಳಲ್ಲಿ ಭಾರತದಲ್ಲಿ ಅತ್ಯಂತ ಪ್ರಾಚೀನ ಕಾಲದಿಂದಲೂ ಕಬ್ಬಿಣ ತಯಾರಿಕೆಯಲ್ಲಿ ಪರಿಣತಿ ಪಡೆದ  ಬುಡಕಟ್ಟಿನ ಹೆಸರು ಅಸುರ ಬುಡಕಟ್ಟು ಎಂತಲೇ ಇದೆ. ಇತರ ಕಬ್ಬಿಣ ತಯಾರಕ ಬುಡಕಟ್ಟುಗಳೂ ಇದು ಅಸುರೀ ವಿದ್ಯೆ ಎಂದು ಹೇಳುತ್ತವೆ.

ಬಾಣಾಸುರ, ಗಯಾಸುರ (ಪ್ರಸಿದ್ಧ ಗಯಾ ಕ್ಷೇತ್ರದ ಅಧಿಪತಿಯಾಗಿದ್ದವನು) ಮೊದಲಾದ ಅಸುರರು ದೇವಾಸುರ ಯುದ್ಧದಲ್ಲಿ ಹಲವು ಬಾರಿ ದೇವತೆಗಳ ಕುದುರೆ, ರಥ, ಹಲವಾರು ಉತ್ತಮ ಅಸ್ತ್ರಗಳನ್ನು ಎದುರಿಸಿ ಅವರನ್ನು ಸ್ಚರ್ಗದಿಂದಲೇ ಹೊಡೆದೋಡಿಸುವ ಸಾಮರ್ಥ್ಯ ಪಡೆದದ್ದು ಅವರ ಬಳಿ ಇದ್ದ ಕಬ್ಬಿಣ ಲೋಹ ತಂತ್ರಜ್ಞಾನವೇ. ಅವರು ದೇವತೆಗಳಿಗೆ ವಶಪಡಿಸಿಕೊಳ್ಳಲು ಬಹು ಕಷ್ಟಕರವಾದ ಹಲವಾರು ದುರ್ಗಮ ಕೋಟೆ ಕೊತ್ತಲಗಳನ್ನು ನಿರ್ಮಿಸಿಕೊಂಡಿದ್ದರು. ಇದೂ ಕೂಡಾ ಅವರ ಬಳಿ ಇದ್ದ ಕಬ್ಬಿಣ ಮತ್ತು ಅದರಿಂದ ಮಾಡಿದ ಉತ್ತಮ ಉಪಕರಣಗಳ ಬಲದಿಂದಲೇ ಎಂದು ಕೆಲ ಸಂಶೋಧಕರ ಶೋಧ.

ಬಾಣಾಸುರ ಪ್ರಸಿದ್ಧ ಮಹಾಬಲಿಯ ಮಗ. ಅವನು, ತನಗೆ ವಿಶ್ವಕರ್ಮನು ಕೊಟ್ಟ ರಸ ಲಿಂಗವನ್ನು ಪೂಜಿಸಿ ವರವನ್ನು ಪಡೆದಿದ್ದ. ಅವನನ್ನು ಸೋಲಿಸಲು ಕೃಷ್ಣ, ಬಲರಾಮರ ನೇತೃತ್ವದಲ್ಲಿ 12 ಅಕ್ಷೋಹಿಣಿ ಸೈನ್ಯ ಬಹುಕಾಲ ಕಾದ ಬೇಕಾಯಿತು ಎಂದು ಭಾಗವತ ಮತ್ತು ಮಹಾಭಾರತದಲ್ಲಿನ ಪುರಾಣ ಕತೆ. ಇದರಲ್ಲಿ ವಿಶ್ವಕರ್ಮ ಮತ್ತು ರಸಲಿಂಗ ಎಂಬ ಹೆಸರುಗಳು ಕುತೂಹಲಕಾರಿ. ಎಲ್ಲರಿಗೂ ಗೊತ್ತಿರುವಂತೆ ವಿಶ್ವಕರ್ಮ ವಿವಿಧ ಲೋಹಕಾರರ ದೇವತೆ. ರಸಲಿಂಗದ ರಸ ಎಂಬುದು ಭಾರತದ ರಸ ಶಾಸ್ತ್ರದಲ್ಲಿ ಪಾದರಸವೂ ಸೇರಿದಂತೆ ಬೇರೆ ಬೇರೆ ಲೋಹಗಳಿಗೆ ಸಂಬಂಧಿಸಿದ ಅರ್ಥವನ್ನು ಹೊಂದಿದೆ.

ಅಸುರ ಎಂಬುದು ಝಾರ್ಕಂಡ್, ಚತ್ತೀಸಘಡ ರಾಜ್ಯದ ನೇತ್ರಹಾಟ್ ಎಂಬ ಪ್ರಸ್ಥಭೂಮಿಯ ಮೇಲಿನ ಕಾಡು, ಗುಡ್ಡಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು. ಇವರು ಭಾರತದ ಅತ್ಯಂತ ಪ್ರಾಚೀನ ಕಬ್ಬಿಣ ತಯಾರಕ ಸಮುದಾಯ ಎಂದು ಹೆಸರಾಗಿದೆ. ಇವರು ಅದಿರುಗಳಿಂದ ಕಬ್ಬಿಣ ತಯಾರಿಸುವುದರಲ್ಲಿ ಉತ್ತಮ ಪರಿಣತಿ ಹೊಂದಿದವರು. ಹಾಗೆಯೇ ಅಗಾರಿಯಾ ಎಂಬ ಅಸುರರೊಡನೆ ಸಂಬಂಧ ಹೊಂದಿದ ಮತ್ತೊಂದು ಬುಡಕಟ್ಟು ಕೂಡಾ ಇದೇ ಪರಿಣತಿಯನ್ನು ಹೊಂದಿದೆ. ಅಸುರ ಬಿರ್ಜಾ, ತಗಾಸಿಯಾ ಎಂಬ ಬುಡಕಟ್ಟುಗಳು ಕೂಡಾ ಇಂತಹ ಪರಿಣತಿಯನ್ನು ಪಡೆದಿದೆ.

ಈ ಪ್ರದೇಶಕ್ಕೆ ದೂರದ ಉತ್ತರಖಂಡ್‌ಗೆ ಸೇರಿದ ಕುಮಾವೋ ಮತ್ತು ಗಡ್ವಾಲ್ ಪ್ರದೇಶದಲ್ಲಿ ಕೂಡಾ ಕಬ್ಬಿಣ ತಯಾರಕರು ತಮ್ಮನ್ನು ಅಸುರರು, ಕಬ್ಬಿಣ ತಯಾರಿಕೆ ಅಸುರೀ ವಿದ್ಯೆ ಎಂದು ಭಾವಿಸುತ್ತಾರೆ. ಈ ಎಲ್ಲ ಬುಡಕಟ್ಟುಗಳ ಜಾನಪದ ಸಂಸ್ಕೃತಿ, ಅವರ ಆಚರಣೆ ಮತ್ತು ದೈವಗಳಲ್ಲಿ ಕೂಡಾ ಕಬ್ಬಿಣ ತಯಾರಿಕೆ ಹಾಸು ಹೊಕ್ಕಾಗಿದೆ.

ಹಿಂದಿನ ಲೇಖನದಲ್ಲಿ ವಿವರಿಸಿದಂತೆ ಭಾರತದ ಅತ್ಯಂತ ಪ್ರಾಚೀನ ಕಬ್ಬಿಣ ಆಯುಧಗಳ ದಾಖಲೆ ದೊರೆತಿರುವುದು ಬೃಹತ್ ಶಿಲಾಯುಗದ ಕಲ್ಗೋರಿಗಳಲ್ಲಿ. ಅದರಲ್ಲಿಯೂ ಕರ್ನಾಟಕದ ಕುಮಾರನ ಹಳ್ಳಿ,ಹಳ್ಳೂರು, ತಡಕನಹಳ್ಳಿಗಳಲ್ಲಿ. ಬೃಹತ್ ಶಿಲಾಯುಗದ ಈ ಕಲ್ಗೋರಿಗಳ ಬಾಹುಳ್ಯ ದಕ್ಷಿಣ ಭಾರತದಲ್ಲಿಯೇ ಕಾಣ ಬಂದಿರುವುದರಿಂದ ದಕ್ಷಿಣ ಭಾರತವೇ ಕಬ್ಬಿಣ ತಂತ್ರಜ್ಞಾನದ ಮೂಲ ಎಂದು ಕೆಲವು ಸಂಶೋಧಕರು ವಾದಿಸಿದ್ದಾರೆ. ಇದೇ ದಾರಿಯಲ್ಲಿ ಕಬ್ಬಿಣ ತಂತ್ರಜ್ಞಾನ ದ್ರಾವಿಡ ಮೂಲದ್ದು, ಅಸುರ ಮೊದಲಾದ ಬುಡಕಟ್ಟುಗಳು ದ್ರಾವಿಡ ಮೂಲದವು ಎಂದೂ ವಾದಿಸಿದ್ದಾರೆ. ಭಾಷಾ ಅಧ್ಯಯನದಲ್ಲಿಯೂ ಅಸುರ ಮತ್ತು ಅಗಾರಿಯಾ ಬುಡಕಟ್ಟುಗಳ ಭಾಷೆಯಲ್ಲಿ ದ್ರಾವಿಡ ಮೂಲದ ಪದಗಳನ್ನು ಶೋಧಿಸಿದ್ದಾರೆ. ದ್ರಾವಿಡ ಭಾಷೆಗಳ ಪ್ರಾಚೀನ ಪದಕೋಶದಲ್ಲಿ ಕಬ್ಬಿಣದ ವಿವಿಧ ರೂಪಗಳ ಬಗ್ಗೆ ಇರುವ ಪದ ಸಂಪತ್ತು ಕೂಡಾ ಕಬ್ಬಿಣದ ದ್ರಾವಿಡ ಮೂಲ ಅದರಲ್ಲಿಯೂ ಕರ್ನಾಟಕದ ಮೂಲವನ್ನು ಸೂಚಿಸುತ್ತದೆ.

ಬಳ್ಳಾರಿಯ ಮುದ್ದೆ ಕಮ್ಮಾರರು :
ಬಳ್ಳಾರಿ ಎರಡು ದಶಕದಿಂದ ಗಣಿ ಮಾಫಿಯಾದಿಂದ ಕಬ್ಬಿಣದ ಅದಿರಿನ ದರೋಡೆಗೆ ಕುಪ್ರಸಿದ್ಧವಾದುದು ಎಲ್ಲರಿಗೂ ಗೊತ್ತು. ಇಲ್ಲಿಯ ಕಬ್ಬಿಣದ ಅದಿರು ಸಂಪತ್ತು ಈಗಲೂ ಬಹಳ ಬೇಡಿಕೆಯಲ್ಲಿದೆ. ಇದೇ ಬಳ್ಳಾರಿಯೇ ಪ್ರಾಚೀನ ಕಾಲದಲ್ಲಿಯೂ ಕಬ್ಬಿಣದ ಮೂಲ ಆಕರವಾಗಿತ್ತು. ಇತಿಹಾಸದಲ್ಲಿ ಕಬ್ಬಿಣದ ಉಪಕರಣ, ಆಯುಧಗಳ ಮೊದಲ ದಾಖಲೆ ಕಂಡ ಹಲವು ಬೃಹತ್ ಶಿಲಾ ಕಲ್ಗೋರಿಗಳು ಈ ಜಿಲ್ಲೆಯಲ್ಲಿಯೇ ಇವೆ. ಹಳ್ಳೂರು ಮತ್ತು ಕುಮಾರನಹಳ್ಳಿ ಇದರ ಆಸುಪಾಸಿನಲ್ಲಿಯೇ ಇದೆ.

ಬಳ್ಳಾರಿಯಲ್ಲಿ ಮುದ್ದೆ ಕಮ್ಮಾರರು ಎಂಬ ವಿಶಿಷ್ಟ ಕಮ್ಮಾರರಿದ್ದಾರೆ. ಅವರಿಗೆ ಮುದ್ದೆ ಕಮ್ಮಾರರೆಂದು ಹೆಸರು ಬಂದದ್ದೇ ಅವರ ದೇವತೆ ಮುದ್ದೆಯಂತೆ ಕುಲುಮೆಯಿಂದ ಈಚೆ ಬರುತ್ತಾಳೆ ಎಂಬ ಕಾರಣಕ್ಕೆ. ಕಬ್ಬಿಣದ ಅದಿರು ಕುಲುಮೆಯಿಂದ ಮುದ್ದೆಯಾಗಿ ಈಚೆ ಬರುತ್ತದೆ ಎಂಬುದುರ ಗುರುತು. ಇವರ ವಸತಿಗಳು ಇಂದು ಹೊಸ ಪೇಟೆ ತಾಲ್ಲೂಕಿನ ಕುಲುಮೆ ಗೊಲ್ಲರ ಹಳ್ಳಿ, ಕಂಪ್ಲಿ, ಕಮಲಾಪುರಗಳಲ್ಲಿ ಹರಪನಹಳ್ಳಿ ತಾಲ್ಲೂಕಿನ ಕುಲುಮೆ ಕಲ್ಲಹಳ್ಳಿ, ಶಿವಮೊಗ್ಗ ತಾಲ್ಲೂಕಿನ ಹೊಸಹಟ್ಟಿಗಳಲ್ಲಿವೆ.

ಇವರ ಬದುಕಿನ ಹಾಗೂ ಉತ್ಪಾದನೆಯ ಪ್ರಧಾನ ಆಧಾರ ಮೂಸೆ – furnace. ಇದನ್ನೇ ಅವರು ಕಾಳಿ ದೇವತೆ ಎಂದು ಪೂಜಿಸುತ್ತಾರೆ. ಆ ದೇವತೆಯ ಆಕಾರ ಈ ಮೂಸೆಯಿಂದ ಹೊರಬರುವ ಕಬ್ಬಿಣದ ಮುದ್ದೆಯಂತೆ ಗುಂಡಗಿರುತ್ತದೆ. ಈ ಮುದ್ದೆಗೇ ನಾಲ್ಕು ಕೈಗಳನ್ನು ಬೆಸೆದಿರುತ್ತಾರೆ. ಅದರ ಜೊತೆಗೆ ಕಬ್ಬಿಣವನ್ನು ಬಡಿಯುವ ಅಡಿಗೂಂಟವೇ ಶಿವ- ಕಮ್ಮಟೇಶ್ವರ.‌ ಗರ್ಭಗುಡಿಯ ಒಳಗೆ ಕಮ್ಮಾರರ ಇತರ ಮುಖ್ಯ ಉಪಕರಣಗಳಾದ ಸುತ್ತಿಗೆ, ಇಕ್ಕಳವನ್ನೂ ಪೂಜಿಸಲಾಗುತ್ತದೆ.

ಇವರ ಕುಲುಮೆಗಳು ಸಹಜವಾಗಿ ಸಾಮಾನ್ಯವಾಗಿ ಊರಿನಿಂದ ಬಹಳ ದೂರ ಇರುತ್ತದೆ. ಇವರ ವಸತಿಗಳು ಹಾಗೂ ಕಾಳಿ ದೇವಾಲಯವೂ ಇವುಗಳ ಬಳಿಯೇ ಇರುತ್ತದೆ.

ಕೊಡಚಾದ್ರಿಯ ಕಬ್ಬಿಣ :
ಕೊಡಚಾದ್ರಿಯ ಕಬ್ಬಿಣದ ಸ್ತಂಭದ ಬಗ್ಗೆ ಆಗಲೇ ಓದಿದ್ದೀರಿ. ಇದರ ಕಾಲ ನಿರ್ದಿಷ್ಟವಾಗಿ ವೈಜ್ಞಾನಿಕ ಪರೀಕ್ಷೆ ಮಾಡಿ ನಿಖರಗೊಳಿಸಲು, ಇದರ ಬಗ್ಗೆ ದೆಹಲಿ ಕಬ್ಬಿಣ ಸ್ತಂಭದ ಬಗ್ಗೆ ಕೈಗೊಂಡ ರೀತಿಯಲ್ಲಿ ವಿವರವಾದ ಅಧ್ಯಯನ ಕೈಗೊಳ್ಳಲು ಸರ್ಕಾರಗಳು ಮನಸ್ಸು ಬಂದಿಲ್ಲ. ಏಕೆಂದರೆ ಇದು ದೇಶದ ರಾಜಧಾನಿಯಲ್ಲಿಲ್ಲ. ಪಶ್ಚಿಮ ಘಟ್ಟದ ಯಾವುದೋ ಒಂದು ಮೂಲೆಯಲ್ಲಿ ಜನರು ಸುಲಭವಾಗಿ ಹೋಗಲು ಸಾಧ್ಯವಿಲ್ಲದ ಸ್ಥಳದಲ್ಲಿದೆ.

ಆದರೆ ಈ ಅಂಶವೇ ಈ ಅಂಶವನ್ನು ಅಧ್ಯಯನ ಮಾಡಲು ಪ್ರೇರೇಪಿಸಬೇಕಿತ್ತು. ಇಂತಹ ಮೂಲೆಯಲ್ಲಿ ಅರ್ಧ ಟನ್ ತೂಕದ ಸ್ತಂಭವನ್ನು ಯಾವಾಗ ಏಕೆ ಯಾರು ನಿರ್ಮಾಣ ಮಾಡಿದರು ? ಇದರ ಕಬ್ಬಿಣದ ಮೂಲ ಎಲ್ಲಿಂದ, ಅದರ ಗುಣಮಟ್ಟವೇನು ಎಂಬುದು ಮುಖ್ಯ ಪ್ರಶ್ನೆಗಳು.
ಈ ಸ್ತಂಭದ ಬಗ್ಗೆ ಇಲ್ಲಿಯವರೆಗೆ ನಡೆದ ಮೂರ್ನಾಲ್ಕು ಅಧ್ಯಯನಗಳು ಬಹಳ ಸೀಮಿತ ವ್ಯಾಪ್ತಿ ಉಳ್ಳವುಗಳಾಗಿವೆ. ಇವು, ಈ ಸ್ತಂಭ ಆಧುನಿಕ ಕಬ್ಬಿಣದಿಂದ ಮಾಡಲಾಗಿಲ್ಲ. ಇದರ ರಾಸಾಯನಿಕ ರಚನೆಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಪ್ರಾಚೀನ ಕಾಲದ ತಯಾರಿಕೆಯ ವಿಧಾನದ ಮೂಲದ ಕಬ್ಬಿಣ ಎಂದು ಕಂಡುಬಂದಿದೆ. ಆದಿವಾಸಿಗಳು ತಯಾರು ಮಾಡಿದಂತೆ ಕಾಣುತ್ತದೆ. ಇದು ಅವುಗಳ ತೀರ್ಮಾನದ ಸಾರಾಂಶ.

ಈ ಆದಿವಾಸಿಗಳು ಯಾರು ? ಇದನ್ನು ಈ ಸಂಶೋಧಕರು ಗುರುತು ಹಚ್ಚಲು ಪ್ರಯತ್ನ ಮಾಡಲಿಲ್ಲ. ಇದನ್ನು ಬೆಳಕಿಗೆ ತಂದವರು ಒಬ್ಬ ಅಬ್ರಹಾಂ ಕರ್ಕಡ ಎಂಬ  ರೈತ ನಾಯಕರು.

ಅವರು ಹೇಳಿದ್ದು, ಹಳ್ಳಿಬೇರು ಎಂಬುದು ಕುಂದಾಪುರ ತಾಲ್ಲೂಕಿನ ಒಂದು ಹಳ್ಳಿ. ಅದು ಇರುವುದು ಇಳಿದಾದ ಕಣಿವೆಯಲ್ಲಿ, ಮರಗಳ ಮಧ್ಯದಿಂದ ಹೋಗಬೇಕು. ಬಹಳ ಜಾರಿಕೆಯ ಭೂಮಿ. ಇಂತಹ ದಾರಿಯಲ್ಲಿ ನಡೆಯುತ್ತಾ ಹೋಗಬೇಕು ಇಲ್ಲವೇ ಬಹಳ ಎಚ್ಚರದಿಂದ ಸೈಕಲ್‌ನಲ್ಲಿ ಹೋಗಬೇಕು. ಅಲ್ಲಿಯ ಜನರೆಲ್ಲ ಕುಡುಬಿ ಜೋಗಿ ಎಂಬ ಬುಡಕಟ್ಟಿನವರು. ಕಾಡಿನ ಉತ್ಪತ್ತಿ ಸಂಗ್ರಹಿಸುವುದರೊಂದಿಗೆ ಅಲ್ಲಿಯೇ ಅಲ್ಪ ಸ್ವಲ್ಪ ಬೇಸಾಯ ಮಾಡುತ್ತಾರೆ.‌ ಅವರ ಸಾಗುಭೂಮಿಯ ಬಗ್ಗೆ ಯಾವುದೇ ದಾಖಲೆಗಳಿರುವುದಿಲ್ಲ. ಅವರಿಗೆ ಅದರ ಬಗ್ಗೆ ತಿಳುವಳಿಕೆಯೂ ಇರುವುದಿಲ್ಲ. ಯಾರನ್ನೂ ನಂಬುವುದೂ ಇಲ್ಲ.

ಅದರಿಂದಾಗಿ ಅವರ ಅಜ್ಞಾನವನ್ನು ಬಳಸಿಕೊಂಡು ಹಲವು ಭೂಮಾಲಕರು ಅವರ ಭೂಮಿಯನ್ನು ಆಕ್ರಮಿಸಿಕೊಂಡು ಅವರನ್ನು ಹೊರದೂಡಲು ಪ್ರಯತ್ನಿಸಿದ್ದರು. ನಮಗೆ ಗೊತ್ತಾದಾಗ ಹಲವು ರೀತಿ ಹೋರಾಟ ಮಾಡಿ ಪರಿಹರಿಸಿದೆವು. ಆ ಸಂದರ್ಭದಲ್ಲಿ ಅವರ ಊರಿನಲ್ಲಿಯೇ ಉಳಿದುಕೊಳ್ಳುವ ಪ್ರಸಂಗ ಬಂದಿತು. ಹೀಗೆ ಉಳಿದುಕೊಂಡಾಗ ಅವರು ತಮಗೆ ಬೇಕಾದ ಉಪಕರಣ ತಯಾರು ಮಾಡಿಕೊಳ್ಳುವುದು ಮಾತ್ರವಲ್ಲ, ಅದಕ್ಕೆ ಬೇಕಾದ ಕಬ್ಬಿಣವನ್ನೂ ಬೇರೆಯವರಂತೆ ಕೊಳ್ಳುತ್ತಿರಲಿಲ್ಲ. ತಾವೇ ತಯಾರಿಸಿಕೊಳ್ಳುತ್ತಾರೆಂದು ತಿಳಿದು ಬಂತು. ನಾವಲ್ಲಿ ಉಳಿದ ಒಂದು ದಿನ ಕಬ್ಬಿಣ ತಯಾರಿಕೆಗೆ ಬಹಳ ಪ್ರಶಸ್ತವಾದ ದಿನವಂತೆ. ಆಗ ಅವರ ಕಬ್ಬಿಣ ತಯಾರಿಕೆಯನ್ನು ಕಣ್ಣಾರೆ ಕಂಡೆವು ಎಂದರು. ಇದನ್ನು ಅವರು ಹೇಳಿದ್ದು ಮಂಗಳೂರಿನ ಬಳಿಯ ಸುರತ್ಕಲ್‌ನಲ್ಲಿರುವ ಎನ್‌ಐಟಿ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಎಂದು ಹೆಸರಾದ ಕೇಂದ್ರ ಸರ್ಕಾರದ ಒಡೆತನದ ಸಂಸ್ಥೆಯ ಲೋಹ ಶಾಸ್ತ್ರ (ಮೆಟಲರ್ಜಿ) ಪ್ರಾಧ್ಯಾಪಕರಾದ ರಾಜೇಂದ್ರ ಉಡುಪರಿಗೆ. ಅವರಿಗೆ ಈ ತಯಾರಿಕೆಯ ಪ್ರತಿಯೊಂದು ವಿವರವನ್ನೂ ತಿಳಿದುಕೊಳ್ಳುವ ಕುತೂಹಲವಾಯ್ತು. ಕೇಳಿ ಕೇಳಿ ಅದರ ವಿವರಗಳನ್ನು ಪಡೆದರು.

ಆ ತಯಾರಿಕೆಯ ವಿವರಗಳು ಹೀಗಿವೆ :
ಅವರ ಕುಲುಮೆ ಕೃಷಿ ಉಪಕರಣಗಳನ್ನು ತಯಾರಿಸುವ ಸಾಮಾನ್ಯ ಕಮ್ಮಾರರ ಕುಲುಮೆಗಿಂತ ದೊಡ್ಡದು. ಸುಮಾರು 4-5 ಅಡಿ ಎತ್ತರದ್ದು. ಅದಕ್ಕೆ ಎರಡು ತಿದಿಗಳು.

ಅವರು ಕಬ್ಬಿಣ ತಯಾರಿಸಲು ನಿರ್ದಿಷ್ಟ ದಿನವನ್ನೇ ಶುಭದಿನ ಎಂದು ಭಾವಿಸುತ್ತಾರೆ. ಅಂದು ಈ ಕುಲುಮೆ ಮತ್ತು ತಿದಿಗಳಿಗೆ ಮೊದಲು ಪೂಜೆ ಮಾಡುತ್ತಾರೆ. ಕುಲುಮೆಯೊಳಕ್ಕೆ ಅವರು ಅಲ್ಲಿಯ ಬೆಟ್ಟಗಳಲ್ಲಿ ಸಂಗ್ರಹಿಸಿದ ಅದಿರಿನ ಪುಡಿಯನ್ನು ಹಾಗೂ ಇದ್ದಿಲನ್ನು ಹಾಕಿ ಹೊತ್ತಿಸುತ್ತಾರೆ. ನಂತರ ಒಬ್ಬ ಹೆಂಗಸು ತಿದಿಯ ಮೇಲೆ ಹತ್ತಿ ತುಳಿಯುತ್ತಾಳೆ. ನಂತರ ಗಂಡಸರು ಒಬ್ಬೊಬ್ಬರಾಗಿ ಹತ್ತಿ ತುಳಿಯುತ್ತಾರೆ. ಹೀಗೆ ತುಳಿಯುತ್ತಾ ಅದರೊಳಗಿನ ಶಾಖವನ್ನು ಏರಿಸುತ್ತಾರೆ.

ಕೊನೆಗೆ ಕುಲುಮೆಯೊಳಗಿನಿಂದ ಹಳದಿ- ಕೆಂಪು ಮಿಶ್ರ ಬಣ್ಣದ ಕಬ್ಬಿಣದ ಉಂಡೆ ಹೊರಬರಲಾರಂಭಿಸುತ್ತದೆ. ಅದನ್ನು ಒಂದು  ಕೋಲಿನಿಂದ ಹೊರತೆಗೆದು ಕಬ್ಬಿಣದ ಸುತ್ತಿಗೆಯಿಂದ ಇಬ್ಬರು ಒಂದೇ ಸಮನೆ ಬಡಿಯುತ್ತಾ ಹೋಗುತ್ತಾರೆ. ಕಬ್ಬಿಣದ ಉಂಡೆ ಕೆಂಪಾಳವಾಗಿ ಕಾಣತೊಡಗಿದಾಗ ಬಡಿಯುವುದನ್ನು ನಿಲ್ಲಿಸುತ್ತಾರೆ. ಈ ಎಲ್ಲ ಕೆಲಸಗಳೂ ಬಹಳ ಶ್ರಮ ಬೇಡುವಂತಹವು. ಅದಕ್ಕೆ ಅವರು ತಾವೇ ತಯಾರಿಸುವ ಮದ್ಯವನ್ನು ಕುಡಿದು ಕೆಲಸ ಮಾಡುತ್ತಾರೆ. ಹೀಗೆ ತಯಾರಿಸಿದ ಕಬ್ಬಿಣವನ್ನು ಊರ ಕಮ್ಮಾರರಿಗೆ ಕೊಟ್ಟು ಕೃಷಿ ಉಪಕರಣಗಳನ್ನು ಮಾಡಿಸಿಕೊಳ್ಳುತ್ತಿದ್ದರು. ತಮ್ಮ ಅಗತ್ಯಕ್ಕಿಂತ ಹೆಚ್ಚಿಗೆ ದೊರೆತರೆ ಕುಂದಾಪುರದ ಸಂತೆಯಲ್ಲಿ ಮಾರುತ್ತಿದ್ದರು.

ಈ ವಿವರಗಳನ್ನು ಕೇಳಿದ ಪ್ರಾಧ್ಯಾಪಕರು ಕೆಲ ಸಮಯದ ನಂತರ ಒಂದು ದಿನ ಇದೇ ರೈತ ಸಂಘಟನೆಯ ಮತ್ತಿಬ್ಬರು ಸಂಗಾತಿಗಳೊಡನೆ ಅಲ್ಲಿಗೆ ಒಂದು ಜೀಪಿನಲ್ಲಿ ಹೊರಟರು. ಆದರೆ ಈ ಜೀಪನ್ನು, ಇವರುಗಳನ್ನು ನೋಡಿದ ಕೂಡಲೆ ತಮಗೇನೋ ಆಪತ್ತು ಬಂತು ಎಂದು ಭಾವಿಸಿದರು. ಆ ಬುಡಕಟ್ಟುಗಳ ಜನರು so called ನಾಗರಿಕ ಜನರಿಂದ ಅನೇಕ ಬಾರಿ ವಿಧ ವಿಧವಾಗಿ ಕಷ್ಟಗಳಿಗೆ ಒಳಗಾದ್ದರಿಂದ ಯಾವ ವಿವರಗಳನ್ನು ಹೇಳಲೂ ತಯಾರಿರಲಿಲ್ಲ. ಕೊನೆಗೆ ಅವರ ತಯಾರಿಕೆಯ ಒಂದು ಕಬ್ಬಿಣದ ತುಂಡು ಮಾತ್ರ ದಕ್ಕಿತು. ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಅದು ಪ್ರಾಚೀನ ತಯಾರಿಕೆಯ ವಿಧಾನದಲ್ಲಿ ತಯಾರಾದ ಕಬ್ಬಿಣ ಯಾವ ರಾಸಾಯನಿಕ ರಚನೆಯನ್ನು ಹೊಂದಿರುತ್ತದೋ ಅಂತಹುದೇ ಕಬ್ಬಿಣ ಎಂದು ಸಾಬೀತಾಯಿತು. ಇಂತಹ ಕಬ್ಬಿಣದ ತಯಾರಿಕೆಯಿಂದ ಮೂಡುವ ಈ ರಾಸಾಯನಿಕ ರಚನೆಯೇ ಈ ಕಬ್ಬಿಣಕ್ಕೆ ತುಕ್ಕನ್ನು ತಡೆದುಕೊಳ್ಳುವ ಸಾಧ್ಯತೆ ಉಂಟಾಗುತ್ತದೆ.

ಕೊಡಚಾದ್ರಿಯ ಮೇಲಿನ ಆ ಸ್ತಂಭ ಇಂತಹ ಆದಿವಾಸಿಗಳು ತಯಾರಿಸಿದ ಕಬ್ಬಿಣದಿಂದ ಮಾಡಿದ್ದು. ಆದ್ದರಿಂದಲೇ ಸಾವಿರಾರು ವರ್ಷಗಳ ಕಾಲ ಪಶ್ಚಿಮ ಘಟ್ಟಗಳ ಬಿರುಮಳೆ ಹಾಗೂ ಅರಬ್ಬೀ ಸಮುದ್ರದಿಂದ ಬೀಸುವ ಉಪ್ಪಿನಿಂದ ಕೂಡಿದ ರಭಸದ ಗಾಳಿಯ ಹೊಡೆತವನ್ನೂ ತಡೆದುಕೊಂಡು ಅರ್ಧ ಟನ್ ತೂಕದ  ಕಂಭ ನಿಂತಿದೆ . ಈ ಕಂಭ ನಿಂತಿರುವೆಡೆಯಲ್ಲಿ ಒಂದು ಆದಿವಾಸಿಗಳು ಪೂಜಿಸುವ ದೇವತಾ ಸ್ಥಾನವೂ ಇದೆ. ಇದನ್ನು ಕೊಲ್ಲೂರು ಮೂಕಾಂಬಿಕೆಯ ಆದಿ ದೇವಾಲಯ ಎಂದೂ ಕರೆಯುತ್ತಿದ್ದಾರೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ವಿಗ್ರಹಕ್ಕೆ ದ್ವಜ ಸ್ತಂಭಕ್ಕೂ ಕಬ್ಬಿಣವನ್ನು ಬಳಸುವುದಿಲ್ಲ. ಅವೆಲ್ಲ ಕಲ್ಲಿನವು ಇಲ್ಲವೇ ತಾಮ್ರ,ಕಂಚು ಇತ್ಯಾದಿಯವು. ಏಕೆಂದರೆ ಕಬ್ಬಿಣ ಕಪ್ಪು ನೋಡಿ. ಅದು ದೇವತಾ ಕಾರ್ಯಕ್ಕೆ ಅಸ್ಪೃಶ್ಯ.‌

ಕೊಲ್ಲೂರು ಎಂಬ ಹೆಸರೇ ಕಬ್ಬಿಣ ಮೂಲದ್ದು ಎನ್ನುತ್ತಾರೆ ಈ ಪ್ರಾಧ್ಯಾಪಕರು. ತಮಿಳಿನಲ್ಲಿ ಕೊಲ್ಲನ್ ಎಂದರೆ ನಮ್ಮ ಕಮ್ಮಾರ. ತುಳು ಭಾಷಿಕರ ಈ ಪ್ರದೇಶದಲ್ಲಿ ಈ ಪದ ಒಂದು ಕಾಲದಲ್ಲಿ ಬಳಕೆಯಲ್ಲಿದ್ದಿರಬಹುದು.

“ಸ್ವಾಮಿ ಘನನೀಲಿ ಸಿದ್ಧಪ್ಪಾಜಿ ಬನ್ಯೋ
ಧರೆಗೆ ದೊಡ್ಡವರ ಕಾರುಣ್ಯದ ಶಿಶುಮಗನೇ ಬನ್ಯೋ” :

ಧರೆಗೆ ದೊಡ್ಡವರಾದ ಮಂಟೇಸ್ವಾಮಿಗಳ ಕಾವ್ಯ ಈಗ ಸುಪರಿಚಿತ. ಈ ಸ್ವಾಮಿಯ ಪವಾಡಗಳಲ್ಲಿ ಒಂದು ಸಿದ್ಧಪ್ಪಾಜಿ‌ ಸಾಲು ಎಂಬುದೊಂದು ದೊಡ್ಡ ಅಧ್ಯಾಯ. ಈ ಸಾಲು  ಧರೆಗೆ ದೊಡ್ಡವರು ಕಮ್ಮಾರ ಕುಲಕ್ಕೆ ಸೇರಿದ ಕೆಂಪಾಚಾರಿಯನ್ನು ಸಿದ್ಧಪ್ಪಾಜಿಯಾಗಿ ದೀಕ್ಷೆ ಕೊಟ್ಟು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡ ಕತೆ. ಅವರ ಮೂಲಕ ಹಲಗೂರಿನ ಕಮ್ಮಾರರಿಂದ ಕಬ್ಬಿಣದ ಭಿಕ್ಷೆಯನ್ನು ಪಡೆದ, ಈ ಕಮ್ಮಾರರನ್ನು ತಮ್ಮ ಭಕ್ತರನ್ನಾಗಿ ಮಾಡಿಕೊಂಡ ಕತೆ. ಈ ಕತೆ ನಡೆಯುವುದು ಕಬ್ಬಿಣದ ತಯಾರಿಕೆ ಮತ್ತು ಅದರಿಂದ ಉಪಕರಣಗಳ ತಯಾರಿಕೆಗೆ ಪ್ರಸಿದ್ಧವಾಗಿದ್ದ ಮಳವಳ್ಳಿ, ಕೊಳ್ಳೇಗಾಲ ತಾಲ್ಲೂಕುಗಳ ಪ್ರದೇಶದಲ್ಲಿ.

ನಿಂಗೋಜಿ ಮತ್ತು ಮುದ್ದಮ್ಮ ಎಂಬ ದಂಪತಿಗಳ ಮಗ ಕೆಂಪಣ್ಣ ಅಥವಾ ಕೆಂಪಾಚಾರಿ. ಈ ಹೆಸರುಗಳೇ ಕಬ್ಬಿಣದ ತಯಾರಿಕೆಗೆ ಸಂಬಂಧಿಸಿದ ಹೆಸರುಗಳಾಗಿವೆ. ಮುದ್ದಮ್ಮ ಎಂದರೆ ಮೇಲೆ ವಿವರಿಸಿರುವಂತೆ ಕುಲುಮೆಯಿಂದ ಹೊರಬರುವ ಕಬ್ಬಿಣದ ಆಕಾರ. ಇನ್ನು ನಿಂಗೋಜಿ ಈಶ್ವರನ ಲಿಂಗವನ್ನು ನೆನಪಿಸುವ ಹೆಸರು. ಇವರಿಗೆ ಕೆಂಪಾಗಿ ಕಾದ ಕಬ್ಬಿಣದ ರೂಪಾಗಿ ಕೆಂಪಣ್ಣ.

ಈ ಕತೆಯಲ್ಲಿ ಹಲಗೂರಿನ ಕಮ್ಮಾರರು ಪಾಂಚಾಳರು ಧನಿಕರು. ಅವರು ಕಬ್ಬಿಣವನ್ನು ಯಾರಿಗೂ ಕೊಡುವುದಿಲ್ಲ. ಸಿದ್ಧಪ್ಪಾಜಿ ಅದನ್ನು ಅವರಿಂದ ಪಡೆಯುವ ಯತ್ನದಲ್ಲಿ ಕಮ್ಮಾರರು ಒಡ್ಡುವ ಹಲವು ಕಷ್ಟಕರ ಪರೀಕ್ಷೆಗಳಿಗೆ ಒಡ್ಡಿಕೊಳ್ಳುತ್ತಾನೆ. ಸಿದ್ಧಪ್ಪಾಜಿಯಾದ ಕೆಂಪಣ್ಣ ಕಷ್ಟಗಳನ್ನು ಮಂಟೇಸ್ವಾಮಿ ಆತನ ಶಿಷ್ಯರ ಸಹಾಯದಿಂದ ಎದುರಿಸುತ್ತಾನೆ ಹಲವು ಪವಾಡಗಳನ್ನು ಮಾಡುತ್ತಾನೆ. ಈ ಪರೀಕ್ಷೆಗಳು ಮತ್ತು ಪವಾಡಗಳ ಒಳಗೆ ಆಗ ಹಲಗೂರಿನಲ್ಲಿ ಕಬ್ಬಿಣ ತಯಾರು ಮಾಡುತ್ತಿದ್ದ ವಿಧಾನಗಳು ವಿವರಿಸಲ್ಪಡುತ್ತವೆ.
ಹಲಗೂರಲ್ಲಿದ್ದದ್ದು ಅಂತಿಂತಾ ಕುಲುಮೆಯಲ್ಲ, ಹೆಗ್ಗುಲುಮೆ-
ಆ ಹೆಗ್ಗುಲುಮೆಗೆ
” ಕಬ್ಬುಣ ತುಂಬಾ ತುಂಬುಸ್ತೀವಿ
ಆಗಲೀಗಾ ನಾಲಕು ಮೂಲೆಗೂ ನಾಲಕು ತಿದಿನಾದ್ರೂ ಒತ್ತಿಸ್ತೀವಿ
ಎಣ್ಣೆ ಕಾಯ್ಸಿದಂಗೆ ಕಬ್ಬಿಣ ಕಾಯ್ಸಿತೀವಿ
ಕುಲುಮೆ ಒಳಗೆ ಕಬ್ಬಿಣ ಕಾದು ಮಳ್ಳಬೇಕು
ಆ ಮಳ್ಳುವಂತಾ ಕಬ್ಬುಣದ
ಕೊಪ್ಪರಿಕೆಗೋಗಿ ನೀನು ನಿಂತಕೋಬೇಕು
ನೀನು ಮೂರುಸತಿ ಮುಳಗಬೇಕು
ಮೂರುಸಾಲಿ ಏಳಬೇಕು.”
ಕಬ್ಬಿಣವನ್ನು ಬಡಿಯುವ ಕ್ರಿಯೆ ಹೀಗೆ ವರ್ಣಿತವಾಗಿದೆ:
ನಿನ್ನ ಇಕ್ಕಳದಲ್ಲಿ ನಾವು
ಇಡಕೊಂಡು ಪರದೇಸಿ
ನಿನ್ನ ರಾವುಗೋಲಲ್ಲಿ ನಾವು
ಬಡೀತೀವಿ ಪರದೇಸಿ
ನಾವು ಕಬ್ಬುಣ ಬಡಿಯಂಗೆ
ನಿನಗೆ ಬಡಿದಾರೆ
ಬಾಯೆತ್ತಿ ಬಯ್ಯುವಂಗಿಲ್ಲ
ಕಣ್ಣೀರು ಹಾಕುವಂಗಿಲ್ಲ “
ಮೇಲೆ ಕೊಡಚಾದ್ರಿ ಕಬ್ಬಿಣ ತಯಾರಿಕೆಯನ್ನು ನೆನಪಿಸಿಕೊಳ್ಳುವಂತೆ ಈ ಶಿಕ್ಷೆಗಳ ರೂಪದಲ್ಲಿ ತಯಾರಿಕೆ ವಿವರಿಸಲ್ಪಟ್ಟಿದೆ. ಆದರೆ ಶಿಕ್ಷೆಗೊಳಗಾಗಿರುವನಾರು ? ಕಬ್ಬಿಣದ ಮುದ್ದಮ್ಮನ ಮಗ ಕೆಂಪಾಗಿ ಕಾದ ಕಬ್ಬಿಣವೇ ಆದ ಕೆಂಪಣ್ಣ.

ಹೀಗೆ ಜನಪದರು ಕೆಂಪಾದ ಕಬ್ಬಿಣಕ್ಕೆ ಶಿಕ್ಷೆ ಕೊಡುವಂತೆ ಕಬ್ಬಿಣದ ತಯಾರಿ, ಅದರಿಂದ ಉಪಕರಣಗಳ ತಯಾರಿ ಮಾಡುತ್ತಾರೆ.
ಹೀಗೆ ಕರ್ನಾಟಕದ ಮೂರು ಮುಖ್ಯ ಪ್ರದೇಶಗಳಲ್ಲಿಯೂ ಕಬ್ಬಿಣದ ತಯಾರಿಕೆ ವಿಪುಲವಾಗಿದ್ದ ಕಾಲ ಒಂದಿತ್ತು.

ಆದರೆ ಬುಡಕಟ್ಟು ವಿದ್ಯೆಯಾಗಿ, ಆರ್ಯೇತರ  ದ್ರಾವಿಡ ಜನರ ವಿದ್ಯೆಯಾಗಿ ಅಸುರೀ ವಿದ್ಯೆಯೆಂದು ಹೆಸರು ಪಡೆಯಿತು. ಮುಂದಿನ ಶತಮಾನಗಳಲ್ಲಿ ಜಾತಿ ವ್ಯವಸ್ಥೆಯ ಸಮಾಜದಲ್ಲಿ ಹೇರಲ್ಪಟ್ಟ ಮೇಲೆ ಲೋಹ ಕೌಶಲ್ಯವೂ ಜಾತಿ ವಿಭಜನೆಗೆ ಒಳಗಾಯಿತು.ಮೊದಲು ಒಂದೇ ಸಮುದಾಯದ ಅನುಭವವಾಗಿದ್ದ ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆ, ಕಬ್ಬಿಣ ಮೊದಲಾದ ತಯಾರಿಕೆಗಳು, ಅವುಗಳಿಂದ ಆಭರಣ, ಪ್ರತಿಮೆಗಳು, ಉಪಕರಣಗಳ ತಯಾರಿ ಬೇರೆ ಬೇರೆಯಾಯಿತು. ಮೊದಲು ಈ ಎಲ್ಲರೂ ಒಂದೇ ಮೂಲದವರಾಗಿದ್ದರೆಂಬುದನ್ನು ನೆನಪಿಸುವಂತೆ ಪಾಂಚಾಲರು ಎಂಬ ಒಟ್ಟಾರೆ ಹೆಸರು ಮತ್ತು ಈ ಎಲ್ಲರೂ ಕುಲುಮೆಯನ್ನು ಕಾಳಿ ಎಂದು, ಅಡಿಟವನ್ನು ಕಮಟೇಶ್ವರನೆಂದು ಆರಾಧಿಸುವ ಕ್ರಮ ಉಳಿದಿದೆ.

ಚಿನ್ನದ ಆಭರಣ ತಯಾರಿಸುವವರು ಎಲ್ಲಕ್ಕಿಂತ ಮೇಲೆ. ಕಂಚು, ಹಿತ್ತಾಳೆಯ ಪ್ರತಿಮೆಗಳನ್ನು ತಯಾರಿಸುವವರಿಗೆ ನಂತೆದ ಸ್ಥಾನ, ತಾಮ್ರದ ಪಾತ್ರೆ ಪಡಗ ತಯಾರಿಸುವವರ ನಂತರ ಕಬ್ಬಿಣದ ಕೆಲಸ ಮಾಡುವ ಕಮ್ಮಾರರು. ಈ ಕಮ್ಮಾರರಲ್ಲಿ ಊರಿನ ಭಾಗವಾಗಿದ್ದುಕೊಂಡು ಕಬ್ಬಿಣದ  ಉಪಕರಣಗಳನ್ನು ತಯಾರಿಸುವವರಿಂತ ಮೂಲ ಕಬ್ಬಿಣ ತಯಾರಿಸುವ ಮುದ್ದೆಗಮ್ಮಾರರು ಕೀಳು . ಇವರ ಕಾಳಿ ದೇವಾಲಯಗಳಿಗೆ ಚಿನ್ನ ತಯಾರಿಸುವವರು ಅಥವಾ ವಿಗ್ರಹ ತಯಾರಿಸುವವರು ಪೂಜಾರಿಗಳು. ಆದರೆ  ಹಿಂದಿನ ಲೇಖನದಲ್ಲಿ ವಿವರಿಸಿದಂತೆ ಕುಲುಮೆಯಲ್ಲಿ 1550 ಡಿಗ್ರಿ ಸೆಂಟಿಗ್ರೇಡ್ ಶಾಖಕ್ಕೆ  ಏರಿಸುವ ತಂತ್ರಜ್ಞಾನ ರೂಪಿಸಿದ್ದು, ಅದನ್ನು ಬಡಿದು ತುಕ್ಕು ನಿರೋಧಕ ಕಬ್ಬಿಣ ತಯಾರಿಸುವ ಶ್ರಮಪೂರಿತ ಕೆಲಸವನ್ನು ಎರಡು ಸಾವಿರ ವರ್ಷಗಳಿಗಿಂತ ಹೆಚ್ಚು ಮಾಡುತ್ತಾ ಬಂದದ್ದು ಅಸುರ ಮತ್ತಿತರ ಆದಿವಾಸಿಗಳು. ಚಿನ್ನ, ತಾಮ್ರಗಳನ್ನು ಅದಿರಿನಿಂದ ಬೇರ್ಪಡಿಸಿ ಶುದ್ಧ ಲೋಹ ತಯಾರಿಸಲು ಈ ಪರಿಯ ಶಾಖ ಬೇಕಿಲ್ಲ ಎಂಬುದು ಈ ಕಮ್ಮಾರರ ವಿಶೇಷತೆಯನ್ನು ಹೇಳುತ್ತದೆ.

ನಂತರ ಮೂಸೆ ಉಕ್ಕು (wootz steel) ಎಂಬ ವಿಶೇಷ ವಿಧಾನ ರೂಪಿಸಿದ್ದು, ನೂರಾರು ಟನ್‌ಗಟ್ಟಲೆ ಕಬ್ಬಿಣ, ಉಕ್ಕುಗಳನ್ನು ತಯಾರಿಸಿದ್ದು ಈ ಅಸುರ ಆದಿವಾಸಿಗಳು ಅಥವಾ ಮುದ್ದೆ ಕಮ್ಮಾರರು. ಭಾರತದ ಲೋಹ ತಂತ್ರಜ್ಞಾನಕ್ಕೆ ವಿಶ್ವ ಪ್ರಸಿದ್ಧಿ ತಂದುಕೊಟ್ಟದ್ದು ಈ ಆದಿವಾಸಿಗಳು ಮುದ್ದೆ ಕಮ್ಮಾರರು. ಸಮಾಜದಲ್ಲಿ ಅತ್ಯಂತ ಗೌರವಕ್ಕೆ ಪಾತ್ರರಾಗಬೇಕಾದ ಅವರನ್ನೇ ಅತ್ಯಂತ ಕೆಳಗೆ ತುಳಿಯಲಾಯಿತು.

ಮುಂದೆ ರಾಜ ಮಹಾರಾಜರುಗಳು, ನವಾಬ,ಸುಲ್ತಾನರುಗಳ ಕಾಲದಲ್ಲಿ ಈ ಉನ್ನತ ಲೋಹ ತಂತ್ರಜ್ಞಾನ ಏನಾಯಿತು ? ಬ್ರಿಟಿಷರು ದೇಶವನ್ನು ಆಕ್ರಮಿಸಿದ ಮೇಲೆ ಏನಾಯಿತು ? ಅದು ಬೇರೆಯೇ ಕತೆ.

ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

May 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: