ಸದಾಶಿವ್ ಸೊರಟೂರು ಕಥಾ ಅಂಕಣ- ಅವಳಿಗೊಂದು ಹಿಡಿ ಹಸಿವಿತ್ತು…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

36

‘ಅವಳಿಗೊಂದು ಹಿಡಿ ಹಸಿವಿತ್ತು..’

ಹೀಗೆ ಒಂದು ಸಾಲು ಬರೆದು ಪೆನ್ನು ಪಕ್ಕಕ್ಕೆ ಇಟ್ಟೆ. ಕಳೆದ ಹದಿನೈದು ದಿನಗಳಿಂದ ಒಳಗೊಳಗೆ ಬೂದಿಯಲ್ಲಿ ಉಳಿದ ಸಣ್ಣ ಕೆಂಡದಂತೆ ಬೆಳೆಯುತ್ತಿತ್ತು ಅದು. ಇವತ್ತು ‘ಬಿಡು, ನನ್ನಿಂದ ಇನ್ನೂ ತಡೆಯಲಾಗದು..’ ಎಂದೆನಿಸಿ ಬರೆದು ಬಿಟ್ಟೆ. ಮೊದಲ ಸಾಲನ್ನು ಬರೆದಾಯಿತು. ಈಗ ಅದಕ್ಕೆ ಮುಂದಿನ ಸಾಲು ಜೋಡಿಸಿದರೆ.. ಅದಕ್ಕೆ ಇನ್ನೊಂದು ಸಾಲು ಜೋಡಿಸಿದರೆ.. ಹೀಗೆ ಜೋಡಿಸುತ್ತಾ ಹೋದರೆ ಒಂದು ಕಥೆ ಆಗಿಬಿಡುತ್ತದೆ.. ನಿಜಕ್ಕೂ ಆಗಿಬಿಡುತ್ತದಾ?

ಪಕ್ಕದಲ್ಲಿ ಈಗಾಗಲೇ ತುಸು ತಣ್ಣಗಾಗಿದ್ದ ಕಾಫಿ ಎತ್ತಿಕೊಂಡು ಒಂದು ಗುಟುಕು ಹೀರಿ ಇಟ್ಟೆ.‌ ಕಾಫಿ ನನ್ನ ದೌರ್ಬಲ್ಯವೊ, ಶಕ್ತಿಯೊ ನನಗೆ ಅದರ ಬಗ್ಗೆ ಅಂದಾಜಿಲ್ಲ.‌ ಏನೂ ತೋಚದೆ ಇದ್ದಾಗ ಮತ್ತು ಏನಾದರೊಂದು ತೋಚಿದಾಗಲೂ ಕಾಫಿ ಎತ್ತಿಕೊಳ್ಳುತ್ತೇನೆ. ಕಾಫಿ ಮಗ್ ಇಟ್ಟು ಮತ್ತೆ ಪೆನ್ನು ಎತ್ತಿಕೊಂಡೆ. ಬರೆದ ಮೊದಲ ಸಾಲು ಓದಿಕೊಂಡೆ. ಮತ್ತೆ ಮತ್ತೆ ಓದಿದೆ. ಇಡೀ ಸಾಲು ಯಾವುದೊ ದೋಷದಂತಿತ್ತು. ಅದು ಇಡೀ ಬದುಕಿನ ದೋಷದಂತೆ ಭಾಸವಾಯಿತು. ಇಡೀ ಬದುಕನ್ನು ಪ್ರತಿನಿಧಿಸುವ ಒಂದು ಅಸಂಬದ್ಧ ಹೇಳಿಕೆಯಂತೆ ಗೋಚರಿಸಿತು..‌

ಹಾಳೆ ಹರಿದು ಹಾಕಲೇ? ಬರೀ ಒಂದು ಸಾಲಿಗಾಗಿ ಇಡೀ ಹಾಳೆ ಹರಿದು ಹಾಕುವುದೆ; ಕೆಲವು ಮನುಷ್ಯರ ಆತ್ಮಹತ್ಯೆಯ ತರಹ..! ನನ್ನ ತಪ್ಪಿಗೆ ಹಾಳೆಯನ್ನು ಯಾಕೆ ಕೊಲ್ಲಬೇಕು? ಹಾಳೆಯ ಶಾಪಕ್ಕೆ ಬಲಿಯಾಗಿ ಉಃಶಾಪಕ್ಕಾಗಿ ನಾನು ಎಲ್ಲೆಲ್ಲಿ ಅಲೆಯಬೇಕಾಗುತ್ತದೊ..? ಯಾಕೆ ಇವತ್ತು ಬರೀ ಪ್ರಶ್ನೆಗಳೇ ಮೂಡುತ್ತಿವೆ. ‌ಈ ಮೂಡಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದರೆ ಅದೇ ಒಂದು ಕಥೆಯಾಗಬಹುದಾ? ಒಂದೊಂದು ಪ್ರಶ್ನೆಗೆ ಒಂದೊಂದು ಉತ್ತರ. ಒಂದೊಂದು ಉತ್ತರವೂ ಒಂದೊಂದು ಕಥೆ. ಒಂದು ಕಥೆಯೊಳಗೆ ಹಲವು ಕಥೆಗಳು ಸೇರಿಕೊಂಡಂತೆ; ನಮ್ಮ ಬದುಕು ಹಲವರ ಬದುಕಿನೊಂದಿಗೆ ಹೆಣೆದುಕೊಂಡಂತೆ.. ಯಾವತ್ತೂ ಅಷ್ಟೆ.. ಒಂದು ಕಥೆಯಲ್ಲಿ ಒಂದೇ ಕಥೆ ಇರುವುದಿಲ್ಲ.. ಒಬ್ಬರ ಬದುಕಲ್ಲಿ ಒಂದೇ ಬದುಕಿರುವುದಿಲ್ಲ.‌

ಕಥೆ ಬರೆಯಲು ಕೂತ ನಾನು ಕಥೆ ಬಿಟ್ಟು ಉಳಿದಿದ್ದರ ಬಗ್ಗೆ ಯೋಚಿಸುತ್ತಾ ಕೂತದ್ದು ಕಂಡು ನನಗೇ ಪೆಚ್ಚಾಯಿತು. ಕಥೆಗಳು ಹಾಗೆಯೇ ಇರಬೇಕು.. ನಾವು ಹೇಳುವುದನ್ನು ಬಿಟ್ಟು ಉಳಿದಿದ್ದನ್ನು ಹೇಳಿಬಿಡುತ್ತೇವೆ.‌ ಅಸಲಿ ಕಥೆ ಸದಾ ನಮ್ಮಿಂದ ತಪ್ಪಿಸಿಕೊಳ್ಳಲು ಜಂಪು ಹಾಕಿರುತ್ತದೆ.

ಇಲ್ಲ ಇದೇ ಸಾಲನ್ನು ಇಟ್ಟುಕೊಂಡು ನಾನು ಮುಂದುವರೆಯಬೇಕು.

‘ಅವಳಿಗೊಂದು ಹಿಡಿ ಹಸಿವಿತ್ತು..’

ಮತ್ತೆ ಮತ್ತೆ ಓದಿಕೊಂಡೆ.
ನಾನು ಹೇಳಬೇಕಾದದ್ದು ಏನು..?
ಹೇಳಬಾರದ್ದು ಏನು?
ಹೇಳಬೇಕಾದದ್ದು ಮೊದಲೇ ನಿರ್ಧರಿಸಿಕೊಂಡು ಕಥೆ ಬರೀತಾ ಹೋದರೆ ನಾವು ಪಾತ್ರಗಳು ಹೇಳಿದಂತೆ ಕೇಳುವುದು ಹೇಗೆ? ನಾವು ಹೇಳಿದಂತೆ ಪಾತ್ರಗಳು ಕೇಳುತ್ತವೆ ಅಷ್ಟೆ. ಅದು ಆ ಪಾತ್ರಗಳ ಕಥೆಯಾಗುವುದಿಲ್ಲ.. ನನ್ನ ಕಥೆಯಾಗುತ್ತದೆ. ಬರೆದವನ ಕಥೆಯಾಗುತ್ತದೆ.

ಬರೆದಿಟ್ಟ ಸಾಲಿನ ಮೇಲೆ ಒಂದು ಗೆರೆ ಎಳೆದು ಕಥೆ ಹಣೆಬರಹ ಮುಗಿಸಿ ಬಿಡಲೆ?

ಕಥೆಯಾಗಿ ಬೆಳೆಯಬೇಕಾದ ಈ ಸಾಲನ್ನು ಈಗಲೇ ಕತ್ತು‌ ಹಿಸುಕಿ ಕೊಂದರೆ.. ಕೊಲ್ಲಬಹುದೆ ಕಥೆಗಾರನೇ ತನ್ನ ಕಥೆಯನ್ನು? ಕಥೆಗಾರ ಹುಟ್ಟಿಸಬಹುದು, ಅದನ್ನು ಕೊಲ್ಲಬಹುದೆ? ಹುಟ್ಟಿಸಿದವರಿಗೆ ಕೊಲ್ಲುವ ಅಧಿಕಾರ ಎಲ್ಲಾದರೂ ಉಂಟೆ?

ಎಷ್ಟೊ ಹೊತ್ತಿನ ಚಡಪಡಿಕೆಯ ನಂತರ..

ನನಗೆ ಗೊತ್ತಿಲ್ಲದೆಯೇ ನಾನು ಮೊದಲ ಆ ಸಾಲಿನ ಕೆಳಗೆ

‘ಅವನಿಗೊಂದು ಹಿಡಿ ಹಸಿವಿತ್ತು..’

ಅಂತ ಬರೆದೆ.. ಅವಳಿಗೊಂದು ಹಸಿವಿತ್ತು ಅನ್ನುವ ಸಾಲು ಇಲ್ಲವೇ ಇಲ್ಲ ಅಂದುಕೊಂಡು ಈ ಸಾಲು ಬರೆದೆನೆ? ಅದಕ್ಕೆ ಪೂರಕವಾಗಿ ಬರೆದೆನೆ? ಪೂರಕವಾಗಿದ್ದರೆ

‘ಅವನಿಗೂ ಒಂದು ಹಸಿವಿತ್ತು’ ಎಂದಾಗಬೇಕಿತ್ತು..

ಎರಡೂ ಬೇರೆ ಬೇರೆ ಕಥೆಗಳಾಗುತ್ತವೆಯೇ?

ಅವಳೇ ಬೇರೆ.. ಅವನೇ ಬೇರೆ..

ಎಲ್ಲೊ ಬೇರೆ ಬೇರೆ ಇರುವವರು ಒಂದಾಗಬಾರದೆ? ಎಷ್ಟೊ ಜನ ಎಲ್ಲೊ ಅನಾಮಿಕರಂತಿದ್ದವರು ಇಂದು ಎದೆಯ ಗೆಳೆಯರಾಗಿ ಹೋಗುತ್ತಾರಲ್ಲ. ಅಷ್ಟರಮಟ್ಟಿಗೆ ಬದುಕು ಒಂದು ಮಾಡುತ್ತದೆ. ಒಂದಾದರೆ ಅವರಿಬ್ಬರ ಹಸಿವು ಒಂದಾಗುತ್ತದೆಯೇ? ಸಂಬಂಧಗಳಲ್ಲಿ ಏನೇನೊ ಹೇಳಿಬಿಡಬಹುದು. ಆದರೆ ಇಬ್ಬರೂ ಒಂದು ಎನ್ನಬಹುದು.. ಒಂದು ಆತ್ಮ ಎರಡು ದೇಹ ಅನ್ನಬಹುದು.. ಇಬ್ಬರ ಹಸಿವೂ ಒಂದೇ ಆಗುತ್ತದಾ? ಅಥವಾ ಒಂದಾಗುತ್ತದಾ? ಯಾರಿಗೆ ಯಾವ ಹಸಿವಿರುತ್ತದೊ.. ಅನ್ನದ್ದೊ.. ಆತ್ಮಸಂಗಾತದ್ದೊ..?

ಅವಳ ಹಸಿವಿಗೂ.. ಅವನ ಹಸಿವಿಗೂ ಬಹಳ ವ್ಯತ್ಯಾಸವಿರಬಹುದು..!

ಯಾಕೊ ತಲೆ ದಿಮ್ ಎನ್ನತೊಡಗಿತು.

ನನ್ನಾಕೆ ಖಾಲಿಯಾಗಿರುವ ಕಾಫಿ ಮಗ್ ಎತ್ತಿಕೊಂಡು ಹೋಗಲು ರೂಮಿಗೆ ಬಂದಳು. ಬಂದವಳು ಕಾಫಿ ಮಗ್ ಎತ್ತಿಕೊಳ್ಳುವಾಗ ನಾನು ಬರೆದಿಟ್ಟುಕೊಂಡ ಆ ಎರಡು ಸಾಲುಗಳ ಕಡೆ ಇಣುಕಿದಳು. ಅವಳೇನು ನನ್ನ ಬರವಣಿಗೆ ಬಗ್ಗೆ ಅಂತಹ ಕುತೂಹಲ ಇರುವವಳಲ್ಲ. ಆದರೂ ಯಾಕೊ ಇಂದು ಇಣುಕಿದಳು.

ದೇವರಿಗೆ ನೈವೇದ್ಯಕ್ಕೆ ಮುಂದೆ ಇಡುವ ಪುಟ್ಟ ಪ್ರಸಾದಂತೆ ನನ್ನ ಮುಂದೆ ಆ ಎರಡು ಸಾಲುಗಳಿದ್ದವು.‌

ನಾನು ಇಡೀ ಜಗತ್ತಿನೊಳಗೆ ನುಗ್ಗಲು ನನಗಿರುವುದು ಈ ಎರಡೇ ದಾರಿಗಳು ಎಂಬಂತೆ ಕೂತಿದ್ದೆ!

ಅವಳು ನನ್ನನ್ನು ವಿಚಿತ್ರವಾಗಿ ನೋಡಿದಳು. ಮತ್ತು ಆ ಎರಡು ಸಾಲುಗಳನ್ನು ಓದಿಕೊಂಡಳು.

ಇದೇನು ಮಕ್ಕಳು ಕಾಪಿ ರೈಟ್ ಬರೆಯುವಂತೆ
ಮೊದಲ ಸಾಲು ‘ಅವಳ ಹಸಿವು’
ಎರಡನೇ ಸಾಲು ‘ಅವನ ಹಸಿವು’ ಅಂತ ಬರೆದಿದ್ದೀರಿ? ವ್ಯಂಗ್ಯವಾಗಿಯೇ ಕೆಣಕಿದಳು.

ನನಗೆ ನನ್ನ ಸಂಕಟವನ್ನು ಅವಳಿಗೆ ಹೇಗೆ ವರ್ಗಾಹಿಸಬೇಕೆಂದು ಗೊತ್ತಾಗಲಿಲ್ಲ..

ಜಗತ್ತಿನಲ್ಲಿ ಕಥೆ ಬರೆಯುವವರು ಬಿಟ್ಟು ಉಳಿದವರೆಲ್ಲಾ ಸುಖಿಗಳೆಂದು ನನಗೆ ಆ ಕ್ಷಣಕ್ಕೆ ಅನಿಸಿಬಿಟ್ಟಿತು.

‘ಕಥೆ ಏನು ಅಂತ ಮೊದಲೇ ನಿರ್ಧರಿಸಿಕೊಳ್ಳದೆ ಹೀಗೆ ಒಂದು ಸಾಲು ಬರೆದುಕೊಂಡು ಯಾಕೆ ಚಡಪಡಿಸ್ತೀರಿ?’ ಅವಳು ತುಂಬಾ ನ್ಯಾಯಯುತವಾದ ಪ್ರಶ್ನೆ ಕೇಳಿದಳು.‌

ಎಲ್ಲೊ ಇದ್ದ ಶೂನ್ಯ ನೋಟವನ್ನು ಕಿತ್ತು ಅವಳ ಕಡೆ ನೆಟ್ಟು.. ಒಂದು ನಿಡುದಾದ ಉಸಿರು ಎಳೆದುಬಿಟ್ಟೆ..

‘ನೋಡು.. ಮೊದಲೇ ನಿರ್ಧರಿಸಿ ಬರೆಯೋದು ಪರೀಕ್ಷೆಯಲ್ಲಿ ಉತ್ತರವನ್ನ, ಪತ್ರಿಕೆಯ ವರದಿಯನ್ನ ಮತ್ತು ಮನೆಗೆ ಬೇಕಾದ ದಿನಸಿ ಸಾಮಾನನ್ನ; ಕಥೆಯನ್ನಲ್ಲ. ಕಥೆಯ ಆರಂಭದ ಸಾಲು ಮಾತ್ರ ಕಥೆಗಾರನದು.. ಉಳಿದದ್ದು ಕಥೆಯದು.. ಎತ್ತ ಹೋಗುತ್ತದೊ ಅತ್ತ ನಾನು ಲೇಖನ ಓಡಿಸಬೇಕು.. ಅದು ಕರೆದುಕೊಂಡು ಹೋದ ಕಡೆ ನಾನು ಹೋಗಬೇಕು.. ನಾನು ಕರೆದಕಡೆ ಅದು ಬಂದರೆ ಕತೆಗೂ ಭವಿಷ್ಯವಿಲ್ಲ,ಕಥೆ ಬರೆದ ನನಗೂ ಭವಿಷ್ಯವಿಲ್ಲ..’ ಎಂದು ಮಾತು ಮುಗಿಸಿದೆ. ಕೊನೆಯ ಶಬ್ದಕ್ಕೆ ತುಸು ನಗೆ ಅಂಟಿಕೊಂಡಿತ್ತು.

‘ಅಲ್ರೀ ಹಸಿವು ಇತ್ತು ಎಂದು ಬರೆದಿದ್ದೀರಿ.. ಸರಿ, ಅವಳಿಗೊಂದು ಹಸಿವಿತ್ತು.. ಕಛೇರಿಯಿಂದ ಬಂದವಳೆ ತಿಳಿಸಾರು ಅನ್ನ ಮಾಡಿಕೊಂಡು ಉಂಡುಬಿಟ್ಟಳು ಎಂದರೆ ಮುಗಿದೆ ಹೊಯ್ತಲ್ಲ..’ ಅಗ್ದಿ ಸಾವಯವ ಪರಿಹಾರ ಸೂಚಿಸಿದಳು.

‘ಇಷ್ಟೇ ಆಗಿದ್ದರೆ ಈ ಕಥೆ, ಈ ಬದುಕು ಎಷ್ಟು ಸುಲಭವಿತ್ತು. ಸರಳವಿತ್ತು.‌ ಅನ್ನ ದುಡಿದುಕೊಂಡು..‌ಉಂಡುಕೊಂಡು ಜನ ಹಾಯಾಗಿರುತ್ತಿದ್ದರು.. ಆದರೆ ಹಸಿವು ಬರೀ ಅನ್ನದ್ದಲ್ಲ..’

ನನ್ನ ಮಾತು ಅವಳನ್ನು ತುಸು ತಾಕಿರಬೇಕು. ಅವಳ ಮುಖ ಚೂರೇ ಚೂರು ಗಂಭೀರವಾಯಿತು.

‘ಅವನಿಗೂ ಒಂದು ಹಸಿವಿತ್ತು ಅಂತ ಬೇರೆ ಬರೆದಿದ್ದೀರಿ.. ಏನೇ ಹಸಿವುಗಳಿದ್ದರೂ ಅದು ಮನುಷ್ಯ ಅನಿಸಿಕೊಂಡ ಇಬ್ಬರಿಗೂ ಇರುತ್ತದೆ ಅಲ್ವ? ನೀವ್ಯಾಕೆ ಅವನು, ಅವಳು ಅಂತ ಬೇರೆ ಮಾಡಿದ್ದೀರಿ? ಅಥವಾ ಬೇರೆ ಮಾಡಲು ಹೊರಟ್ಟಿದ್ದೀರಿ..?’

ಹೆಂಡತಿ ಮಾತಿನಲ್ಲಿ ವಿಮರ್ಶಕಿ ಗುಣವೊಂದು ಕಾಣಿಸಿತು.

‘ಅವಳು ಮತ್ತು ಅವನು ಇಬ್ಬರೂ ಮನುಷ್ಯರೆ. ಇಬ್ಬರಿಗೂ ಹಸಿವುಗಳಿವೆ. ಎಲ್ಲಾ ಪ್ರಾಣಿಗಳ ಹಸಿವು ಒಂದೇ ಅಲ್ಲ.‌ ಎಲ್ಲಾ ಮನುಷ್ಯರ ಹಸಿವು ಒಂದೇ ಅಲ್ಲ.‌ ಒಬ್ಬರು ಒಂದು ಹಿಡಿ ಅನ್ನಕ್ಕೆ ಹಸಿದರೆ, ಇನ್ನೊಬ್ಬರು ಅನ್ನದ ಜೊತೆ ಒಂದು ಮಾಂಸದ ತುಡಿಗೆ ಹಸಿಯುತ್ತಾರೆ. ಕೆಲವರು ನೋಟಕ್ಕೆ, ಕೆಲವರು ಆಟಕ್ಕೆ. ಹೆಸರಿಗೆ, ಬಸಿರಿಗೆ.. ಹೀಗೆ ನೂರೆಂಟು. ಒಬ್ಬನಿಗೆ ಒಂದೇ ಹಸಿವಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಒಬ್ಬೊಬ್ಬರಿಗೂ ನೂರೆಂಟು. ಇದು ಹಸಿವುಗಳ ಜಗತ್ತು.. ‘ ಎಂದೆ.

ಅವಳು ಯಾಕೊ ಮೌನವಾದಳು. ಅವಳು ಏನಾದ್ರೂ ಮಾತಾಡಬೇಕು ಅಂತ ನನಗೆ ಅನಿಸುತ್ತಿತ್ತು.‌ ಆದರೆ ಅವಳು ಮಾತಾಡಲಿಲ್ಲ ಮತ್ತು ಏನನ್ನೂ ಕೇಳಲಿಲ್ಲ.

ನಾನೇ ಮಾತು ಮುಂದುವರೆಸಿದೆ..‌

ಎಷ್ಟೊ ಬಾರಿ ಮನುಷ್ಯನಿಗೆ ತನ್ನ ಹಸಿವೇನೆಂದು ಅರ್ಥವೇ ಆಗಿರುವುದಿಲ್ಲ. ಹುಡುಕುತ್ತಲೇ ಇರುತ್ತಾನೆ. ‌ಅದು ಸಿಕ್ಕಾಗಲೇ ಓಹ್ ನಾನು ಹಸಿದಿದ್ದು ಇದಕ್ಕೆ ಅನಿಸಿಬಿಡುತ್ತದೆ. ಬದುಕು ಸಾಗುವುದೆಂದರೆ ನೂರು ಹಸಿವಿನೊಂದಿಗೆ ಏಗುವುದು…’ ಎಂದು ಹೇಳಿ ಇನ್ನೂ ಈ ಹಸಿವಿನ ಮಾತು ಸಾಕು ಅನ್ನುವಂತೆ ಮಾತು ಮುಗಿಸಿದೆ.

ಕಾಫಿ ಮಗ್ ತೆಗೆದುಕೊಂಡು ಹೋಗಲು ಬಂದವಳು ನನ್ನನ್ನು ಕೆಣಕಿ ತಪ್ಪು ಮಾಡಿದೆನೇನೊ ಅಂದುಕೊಂಡಳೊ ಏನೊ.. ಮೊದಲಿನ ಹುರುಪು ಅವಳಲ್ಲಿ ಇರಲಿಲ್ಲ. ನಾನು ಬಿತ್ತಿದ್ದ ಹಸಿವನ ಬೀಜ ಅವಳೊಳಗೆ ಕೆಲಸ ಮಾಡತೊಡಗಿತ್ತಾ? ಗೊತ್ತಿಲ್ಲ. ‌

ಕಥೆಗಳು ಅಪಾಯಕಾರಿ.. ಮತ್ತು ಕಥೆಗಾರ ಕೂಡ.‌

ಅವಳು ಸುಮ್ಮನೆ ಎದ್ದು ಹೋದಳು. ನಾನು ಎದ್ದು ಕಿಟಕಿ ಹತ್ತಿರ ಹೋಗಿ ಒಂದು ಸಿಗರೇಟು ಹಚ್ಚಿದೆ. ಅದು ಸುರುಳಿ ಬಿಚ್ಚಿಕೊಂಡು ನನ್ನನ್ನು ನುಂಗುತ್ತಿತ್ತು. ಸಿಗರೇಟಿನ ಕೊನೆಯ ಗುಕ್ಕು ಇರುವಾಗಲೇ ಯಾವುದೊ ಸಾಲೊಂದು ಸುಳಿದಂತಾಗಿ ನಡೆದು ಟೇಬಲ್ ಬಳಿ ಬಂದು ಕೂತು ಬರೆಯತೊಡಗಿದೆ.‌ ಕಥೆ ಒಂದು ಸಿಗರೇಟಿಗಾಗಿ ಹಸಿದಿತ್ತೊ ಏನೊ..

‘..ಅವಳಿಗೊಂದು ಹಸಿವಿತ್ತು.. ಅವನಿಗೂ ಒಂದು ಹಸಿವಿತ್ತು.. ಇವನು ಅವಳ ಅರ್ಜೀಣದಲ್ಲಿ ಬಳಲಿದ್ದ. ಅವಳು ಇವನ ಅಜೀರ್ಣದಲ್ಲಿ ಹೊಟ್ಟೆ ಕೆಡಿಸಿಕೊಂಡಿದ್ದಳು. ಇಬ್ಬರಿಗೂ ಆ ಅಜೀರ್ಣದ ಶಮನಕ್ಕಾಗಿ ಒಂದು ಹಸಿವು ಬೇಕಾಗಿತ್ತು.‌ ಅದಕ್ಕಾಗಿ ಹಂಬಲಿಸುತ್ತಿದ್ದರು.‌ ಅದನ್ನು ಅವನು ಇವಳಿಗೆ ಹೇಳುವುದಿಲ್ಲ. ಇವಳು ಅವನಿಗೆ ಹೇಳುವುದಿಲ್ಲ. ಅಜೀರ್ಣ ಮತ್ತು ಹಸಿವಿನ ಮಧ್ಯೆ ಬದುಕು ನವೆಯುತ್ತದೆ. ಚರ್ಮ ಸುಕ್ಕಾಗುತ್ತದೆ. ಕೊನೆಗೆ ಇನ್ನೊಂದು ಹಸಿವು ಬಂದು ಜೊತೆಗೂಡುತ್ತದೆ. ಸಾವಿನ ಹಸಿವು!!!

ಒಂದು ನೀಳ್ಗತೆ ಮಾಡಬೇಕು ಅಂತ ಕೂತವನು
ನ್ಯಾನೊ ಕಥೆ ಬರೆದು ಕೂತೆ..

ನನಗ್ಯಾವ ಅಜೀರ್ಣ ಕಾಡುತ್ತಿತ್ತೊ..!!?

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

April 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: