ಸದಾಶಿವ್ ಸೊರಟೂರು ಕಥಾ ಅಂಕಣ – ದಿಸ್ ಮೆಸೇಜ್ ವಾಸ್ ಡಿಲಿಟೆಡ್..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

31

ಅವನು :
ನಾನು ಒಂದು ಪುಸ್ತಕ ಎತ್ತಿಕೊಂಡು ಅದರಲ್ಲಿ ಮುಳುಗಿದಂತೆ ನಟಿಸಿದೆ. ದೊಡ್ಡ ಪುಸ್ತಕದ ಅಂಗಡಿ. ಜೋಡಿಸಿಟ್ಟ ಸಾವಿರಾರು ಪುಸ್ತಕಗಳು.‌ಆದರೆ ನನಗೆ ಪುಸ್ತಕಕೊಳ್ಳುವ ಇರಾದೆ ಇರಲಿಲ್ಲ‌. ಅವಳು ಅಲ್ಲಿಗೆ ಬರುವೆನೆಂದಿದ್ದಳು..‌

ಅವಳು ಹೇಳಿದ ಟೈಮಿಗಿಂತ ಕಾಲು ಗಂಟೆ ಮುಂಚಿತವಾಗಿ ಅಲ್ಲಿದ್ದೆ. ಪುಸ್ತಕದ ಅಂಗಡಿಯಲ್ಲಿ ಜನ ವಿರಳ. ಮುಗಿ ಬಿದ್ದು ಕೊಳ್ಳಲು ಪುಸ್ತಕವೇನು ವಿದೇಶದ ಅತ್ತರೆ? ಸುವಾಸನೆ ಹೊಡಿಸಿಕೊಂಡು ಓಡಾಡಲು. ಜನ ಪುಸ್ತಕ ಬಿಟ್ಟು ತುಂಬಾ ದಿನ ಆಗಿದೆ. ನಾನೂ ಕೂಡ ಕೊಳ್ಳುವ ಉದ್ದೇಶದಲ್ಲಿ ಇರಲಿಲ್ಲ‌. ಅವಳಿಗಾಗಿ ಕಾಯಬೇಕಿತ್ತು. ಹೊತ್ತು ತಳ್ಳ ಬೇಕಿತ್ತು.‌

ನನಗೆ ಅವಳನ್ನು ಭೇಟಿಯಾಗುವ ಬಗ್ಗೆ ಕುತೂಹಲವಿತ್ತು. ಅವಳೇನು ಕೇಳಬಹುದು? ಅದಕ್ಕೆ ನಾನೇನು ಹೇಳಬಹುದು? ನಾನು ಕಾಫಿ ಅರ್ಡರ್ ಮಾಡಿದರೆ ಟೀ ಬೇಕು ಅನ್ನಬಹುದಾ? ನಿಮಗೆ ಓಶೋ ಗೊತ್ತಾ ಅನ್ನಬಹುದಾ? ಜೋಗಿಯವರ ಹೊಸ ಕಾದಂಬರಿ ಬಂದಿದೆ ಗೊತ್ತಾ ಅನ್ನಬಹುದಾ? ನಾನು ಪುಸ್ತಕಗಳಿರುವುದು ಪರೀಕ್ಷೆಯ ಹಿಂದಿನ ದಿನ ಓದಲು ಅಂದುಕೊಂಡವನು. ಈ ರಾಶಿ ರಾಶಿ ಪುಸ್ತಕ ಜೋಡಿಸಿಕೊಂಡು ಮಾರಲು ಕೂತಿರುವ ಈ ಅಂಗಡಿಯವನ ಬಗ್ಗೆ ನನಗೆ ಕರುಣೆ ಮೂಡುತಿದೆ..

ಮೊಬೈಲ್ ತೆಗೆದು ನೋಡಿದೆ. With in minute. ಅವಳ ಪುಟ್ಟ ಮೆಸೇಜ್. ಒಂದು ವಾಕ್ಯದಲ್ಲಿ ಉತ್ತರಿಸುವ ಕಾಲದವನು ನಾನು. ಒಂದು ಪದದಲ್ಲಿ ಉತ್ತರಿಸುವ ಕಾಲದವಳು ಅವಳು.

ನನಗೆ ಮತ್ತೆ ನೆನಪಾಯಿತು..

This message was deleted.

ಅವಳು ಅರ್ಧರ್ಧ ಗಂಟೆಯ ಅಂತರದಲ್ಲಿ

Delete for everyone ಮಾಡಿದ ನಾಲ್ಕು ಮೆಸೇಜುಗಳು..

ನಾನು ಮೊಬೈಲ್ ಸೈಲೆಂಟ್ ಮೋಡ್‍ಗೆ ಹಾಕಿ ಮಲಗಿದ್ದೆ.‌ ಮಲಗಿದ್ದಾಗ ಇನ್ಬಾಕ್ಷಿನಲ್ಲಿ ಹೀಗೆ ಒಂದರ ಹಿಂದೆ ಒಂದು ಕಳುಹಿಸಿ delete ಮಾಡಿದ ಮೆಸೇಜ್ ಗಳು. ಅವಳಿಗೆ ನನ್ನ ಮೊಬೈಲ್ ನಂಬರ್ ನಿನ್ನೆಯಷ್ಟೆ ಸಿಕ್ಕಿದೆ.‌

ವಾರದ ಹಿಂದೆ ನಾನು ಗುಂಪು ಕಟ್ಟಿಕೊಂಡು ಅವಳ ಮನೆಗೆ ಹೋದಾಗ.. ಅವಳು ಮೆಲ್ಲಗೆ ನಡೆದು ಬಂದು ಕಾಫಿ‌ ಕೊಟ್ಟಿದ್ದಳು. ನನಗೆ ಚೆನ್ನಾಗಿ ನೆನಪಿದೆ. ಅವಳ ಸೀರೆಯ ಸೆರಗಿನ ಅಂಚಿನಲ್ಲಿ ನವಿಲಿನ ಕಣ್ಣುಗಳಿದ್ದವು.‌

ಅದಾದ ನಂತರ ನಮ್ಮ ಮೊಬೈಲ್ ನಂಬರಗಳ ವಿನಿಮಯ.

ಮೊದಲ ಮೆಸೇಜ್ ಗಳೇ ‘Delete for everyone’

ಅವಳು ಏನು ಕಳುಹಿಸಿದ್ದಳು..? ಯಾಕೆ ಅಳಿಸಿಬಿಟ್ಟಳು? ನಾನು ನೋಡಬಾರದು ಅಂತದ್ದ? ನೋಡಿದರೆ ಅನಾಹುತ ಆಗುವಂತದ್ದ? ತುಂಬಾ ಯೋಚಿಸಿದೆ..

ಏನದು? ಅಂತ ಕೇಳಬಿಡಲೇ?

ಮೊದಲ ಮೆಸೇಜೇ ಏನದು? ಯಾಕೆ ಅಳಿಸಿದ್ದು? ಅಂತ ಕೇಳುವುದು ಎಷ್ಟು ಸರಿ.. ಇರಲಿ ಅದು ಏನಾದ್ರೂ ಇರಲಿ.. ಕೇಳುವುದು ಬೇಡ ಅಂದುಕೊಂಡೆ. ಏನೇ ಅಂದುಕೊಂಡರು ಮುಗಿಯುತ್ತದೆಯೇ ಆ ಕುತೂಹಲ? ಎದೆಯ ಮೂಲೆಯಲ್ಲಿ ಚುಚ್ಚುತ್ತಲೇ ಇತ್ತು..

ಇದರ ನಡುವೆಯೂ ನಾನು ಅವಳಿಗೆ ಏನೊ ಹೇಳುವುದಿತ್ತು. ಅದನ್ನು ಹೇಳಿಯೆ ನಂತರ ಮತ್ತೆ ನಾವು ಮಾತು ಮುಂದುವರೆಸಬಹುದು ಎಂಬುದು ನನ್ನ ತೀರ್ಮಾನವಾಗಿತ್ತು.

ತಡ ಮಾಡಲಿಲ್ಲ. ಮೊಬೈಲ್ ಎತ್ತಿಕೊಂಡು ಪಟಪಟ ಅಂತ ನಾಲ್ಕು ಮೆಸೇಜ್ ಟೈಪ್ ಮಾಡಿ ಕಳುಹಿಸಿಬಿಟ್ಟೆ. ಕಳುಹಿಸಿ ಮೊಬೈಲ್ ಪಕ್ಕದಲ್ಲಿಟ್ಟೆ..

ಅರೆಕ್ಷಣ ತಡೆದ ಬಳಿಕ ಒಳಗೊಳಗೆ ಏನೊ ಯೋಚನೆ..

ಯಾಕೊ.. ಹಾಗೆ ಕಳುಹಿಸಿದ್ದು ಸರಿ ಅನಿಸಲಿಲ್ಲ. ಹಾಗೆ ಕಳುಹಿಸಬಾರದಿತ್ತಾ?

ಹೌದು, ಕಳುಹಿಸಬಾರದಿತ್ತು ಅನಿಸಿತು.. ಮೊಬೈಲ್ ಎತ್ತಿಕೊಂಡು.. ನಾಲ್ಕು ಮೆಸೇಜ್ ಗಳನ್ನು ಕೂಡ..

Delete for everyone ಮಾಡಿಬಿಟ್ಟೆ..

ಈಗ ಇನ್ಬಾಕ್ಷಿನಲ್ಲಿ ಮೊದಲು ಅವಳ ನಾಲ್ಕು ಮಸೇಜ್ ಗಳು This message was deleted ತೋರಿಸುತ್ತಿದ್ದವು. ಅದರ ಕೆಳಗೆ ನನ್ನ ನಾಲ್ಕು ಮೆಸೇಜ್ ಗಳು ಕೂಡ This message was deleted ತೋರಿಸುತ್ತಿದ್ದವು..

ಆರಂಭವೇ ಹೀಗಾಯ್ತಲ್ಲ.. ಅಂತ ಅನಿಸಿದರೂ ನಾನು ಅದರ ಬಗ್ಗೆ ಹೆಚ್ಚು ದಾದು ಮಾಡಲಿಲ್ಲ.

ಹೊಸ್ತಿಲ ಮೇಲಿಟ್ಟ ಸೇರು ಅಕ್ಕಿ ಮತ್ತು ಬೆಲ್ಲ ಒದ್ದು ಒಳಬರುವಂತೆ..
ನನ್ನ ಇನ್ಬಾಕ್ಷಿಗೆ ಮಸೇಜ್ ಕಳುಹಿಸಿ ನಂತರ Delete for everyone ಒತ್ತುವ ಮೂಲಕ ಬಂದಿದ್ದಳು.

ನಿಂತು ನಿಂತು ಕಾಲಿಗೆ ತುಸು ಆಯಾಸ. ಹೋಗಿ ಕೂತೆ. ವೇಟರ್ ಏನು ಬೇಕು ಅನ್ನುತ್ತಾ ಬಂದ.. ನಾನು ಬರುವವಳ ದಾರಿ ನೋಡುತ್ತಾ ಕೂತೆ.

ಅವಳು :

ನಾನು ಅವನಿಗೆ ‘ಪುಸ್ತಕದ ಅಂಗಡಿಯಲ್ಲಿರಿ’ ಎಂದು ಹೇಳಬಾರದಿತ್ತಾ? ಖಂಡಿತ ಅವನಿಗೆ ಬೋರಾಗುತ್ತೆ. ನನಗೇನೊ ಪುಸ್ತಕ ಇಷ್ಟ.. ಆದರೆ ಅವನಿಗೂ ಇಷ್ಟವಾಗುತ್ತಾ..? ಅವನನ್ನು ನೋಡಿದರೆ ಹಾಗೆ ಅನಿಸುವುದಿಲ್ಲ.. ಈಗಾಗಲೇ ತಡವಾಗಿದೆ.‌ ಮೊದಲ ಭೇಟಿಯೇ ಹೀಗೆ ತಡವಾದರೆ?

ಅಯ್ಯೊ ನಾನೇಕೆ ಇಷ್ಟು ಕಾಳಜಿ ಮಾಡುತ್ತೇನೆ. ನಾನು ಕಳುಹಿಸಿದ ಮೆಸೇಜಗಳನ್ನು ಅಳಿಸದೆ ಇದ್ದಿದ್ದರೆ ಇವತ್ತಿನ ಈ ಆತಂಕಗಳ ಪ್ರಶ್ನೆಯೇ ಇರುತ್ತಿರಲಿಲ್ಲ.
ಅಳಿಸಬಾರದಿತ್ತಾ?
ಅಳಿಸಿದ್ದೆ ಸರಿಯಾ? ನನಗೆ ಎರಡಕ್ಕೂ ಉತ್ತರ ಸಿಗುತ್ತಿಲ್ಲ.

ತಡವಾಗ್ತಾ ಇದೆ. ಈ ಹಾಳು ಟ್ರಾಫಿಕ್. ಒಳಗೊಳಗೆ ಅಳಕು. ಸಮಯಕ್ಕೆ ಸರಿಯಾಗಿ ಹೋಗಿಲ್ಲ ಅಂದರೆ ಬದುಕಲ್ಲಿ ಶಿಸ್ತು ಇಲ್ಲದವಳು ಅಂದುಕೊಂಡು ಬಿಡುತ್ತಾನೆ. ಅಯ್ಯೊ ಅಂದುಕೊಳ್ಳಲಿ ಬಿಡು ಅದಕ್ಕೇನು?

ಎಷ್ಟೊಂದು ತಾಕಲಾಟಗಳು..‌

ಅದು ಸರಿ ಅವನೇಕೆ ಏನನ್ನು ಕೇಳಲಿಲ್ಲ?
ಅದೇನದು ಡಿಲೀಟ್ ಮಾಡಿದ್ದು ಅನ್ನಲಿಲ್ಲ?
ನನ್ನ ಬಗ್ಗೆ ಯಾವುದೂ ಕುತೂಹಲಗಳಿಲ್ಲವೆ?
ನನ್ನ ಬಗ್ಗೆ ತಾತ್ಸಾರವಾ?

ಅಥವಾ ನನ್ನ ಮೆಸೇಜ್‍ಗಳ ಕುರಿತು ಪ್ರತಿಕ್ರಿಯಿಸಿ.. ಪಾಪ ಏನೆಂದುಕೊಳ್ಳುವಳೊ ಹುಡುಗಿ ಅಂತ ಅಳಿಸಿ ಹಾಕಿದರೆ?
ನನ್ನ ಮೇಲೆ ಅಷ್ಟೊಂದು ಗೌರವವಿದೆಯಾ ಅವರಿಗೆ? ಕಾಳಜಿ ಇದೆಯಾ?
ಅದನ್ನೇ ಪ್ರತಿಕ್ರಿಯಿಸಿದ್ದ ಅಥವಾ ನಾನು ಬರೆದಂತೆ ಏನಾದ್ರೂ ಬೇರೆ ಬರೆದಿದ್ದರಾ?
ಇದ್ದರೂ ಇರಬಹುದು? ಏನಿತ್ತು ಹಾಗಾದರೆ?
ಎಷ್ಟೊಂದು ಕುತೂಹಲ..

ನನ್ನ ಮಾತು ಅವನಿಗೆ ಮುಟ್ಟಿಲ್ಲ.. ಅವನದೂ ನನಗೆ ಮುಟ್ಟಿಲ್ಲ..ನಮ್ಮ ನಮ್ಮ ಮಾತು ಮುಟ್ಟದೆ ನಾವೇ ಮೀಟ್ ಆಗಲು ಬಂದಿದ್ದೇವೆ ಇದಲ್ಲವೇ ಸೋಜಿಗ?

ಹಾಗೆ ಅಂದುಕೊಳ್ಳುತ್ತಲೇ ಬೈಕ್ ಪಾರ್ಕ್ ಮಾಡಿ ಆ ಬುಕ್ ಕಮ್ ಕಾಫಿ ಸೆಂಟರ್ ಮೆಟ್ಟಿಲು ಹತ್ತಿದೆನು..

ಅವನು ಕಾಣಿಸಿದ.. ಏನನ್ನೊ ಯೋಚಿಸುತ್ತಿದ್ದ.‌ ನಾನು ಅಳಿಸಿ ಹಾಕಿದ ಮೆಸೇಜ್ ಗಳ ಬಗ್ಗೆಯೇ ಯೋಚಿಸುತ್ತಿರಬಹುದಾ ಅನಿಸಿತು.. ನಮ್ಮ ಯೋಚನೆಯಂತೆಯೆ ಇರುತ್ತದೆಯಲ್ಲವೆ ನಮ್ಮ ನೋಟ.

ಅವನು ಎದ್ದು ಕೈ ಕುಲುಕಿದ. ನಾನು ತುಟಿ‌ ಅಗಲಿಸಿ‌ ನಕ್ಕೆ. ಇಬ್ಬರೂ ಬೇರೆ ಕುರ್ಚಿಗಳಲ್ಲಿ ಎದುರು ಬದುರಾದೆವು.

ನಮ್ಮಿಬ್ಬರ ನಡುವೆ ಅಳಿಸಿದ ಹೋದ ಆ ಮೆಸೇಜ್ ಗಳಿವೆ ಅನಿಸಿತು..

ಅವನು ಮತ್ತು ಅವಳು :

ಅವಳ ಮನಸಿನಲ್ಲಿ ಅಳಿಸಿ ಹೋದ ಅದೇ ಮೆಸೇಜ್ ಗಳಿವೆ.. ಅವನ ಮನಸಿನಲ್ಲೂ ನಂತರ ಅಳಿಸ ಹಾಕಿದೆ ಮೆಸೇಜ್‍ಗಳಿವೆ..

ಅದನ್ನು ಕಣ್ಣಲ್ಲಿಟ್ಟುಕೊಂಡೆ ಅವನು ಮಾತಾಡುತ್ತಾನೆ..

‘ನೀವು ಹೂಂ ಅಂದರೆ wedding card print ಗೆ ಕಳುಹಿಸುವಾ?’ ಇದು ಅವನ ತುಟಿಯಲ್ಲಿ ಸರಿದಾಡಿದ ಮಾತು

ಆದರೆ ಅವನ ಕಣ್ಣಿಲ್ಲಿದದ್ದು : ‘ಕೆಲವನ್ನು ಗುರುತು ಇಲ್ಲದಂತೆ ಹೇಳಬೇಕು. ಕೆಲವನ್ನು ಹೇಳಬಾರದು ಬರೀ ಗುರುತು ಮೂಡಿಸಬೇಕು. ಕೆಲವನ್ನು ಹೇಳಿ ಗುರುತು ಮೂಡಿಸಿ ಸುಮ್ಮನಾಗಬೇಕು. ಕೆಲವು ಬಾರಿ ಬರೀ ಸುಮ್ಮನಿರಬೇಕು..”

ಅವನ ತುಟಿಯ ಮಾತು ಮತ್ತು ಕಣ್ಣ ಮಾತು ಎರಡನ್ನೂ ಓದಿಕೊಂಡು ಅವಳು ಉತ್ತರಿಸುತ್ತಾಳೆ..

‘ನಿಮ್ಮ ಆಯ್ಕೆ ಚೆನ್ನಾಗಿಯೇ ಇರುತ್ತದೆ.. ಪರವಾಗಿಲ್ಲ ಓಕೆ ಮಾಡಿ. ವಾಟ್ಸಪ್ ಸ್ಟೇಟಸ್ ಗಳನ್ನು ಸ್ಕಿಪ್ ಮಾಡುವ ಈ ಕಾಲದಲ್ಲಿ ಕಾರ್ಡ್ ಯಾರು ಓದುತ್ತಾರೆ ಅಲ್ವ?

ಆದರೆ ಅವಳ ಕಣ್ಣಲ್ಲೂ ಒಂದು ಮಾತು ಕಾಣಿಸುತ್ತಿತ್ತು. ಅವಳ ಕಣ್ಣಲ್ಲಿದಿದ್ದು ಇದು : ‘ಹೇಳಬೇಕು ಅನಿಸಿ ನಂತರ ಬೇಡ ಅನ್ನುವ ಕಾರಣ ಏನಿರಬಹುದು..? ನಾವಿನ್ನೂ ಅಷ್ಟೊಂದು ಹತ್ತಿರವಲ್ಲ ಬಿಡು ಎಂಬ ಸೂಚನೆಯಾ?
ಹತ್ತಿರ ಇದ್ದೀನಿ ಸರಿ, ಆ ಒಂದು ಮಾತು ದೂರ ಮಾಡುವುದು ಬೇಡ ಅನ್ನುವ ಯೋಚನೆಯಾ?’

ನನಗೆ ಕಾಫಿ ಇಷ್ಟ.. ಅಷ್ಟು ಸಾಕು ಅನಿಸುತ್ತೆ? ನಿಮಗೆ?
ಅವನು ಅವಳ ಮುಖ ನೋಡುತ್ತಾ ಹೇಳಿದ..

ಅವನ ಮಾತು ಇವಳಿಗೆ ಸರಿಯಾಗಿ ಕೇಳಿಸಿತು.. ಆದರೆ ಅವನ ಕಣ್ಣಲ್ಲಿದ್ದ. ‘ನೋಡಿದ ಮೇಲೆ ಅಳಿಸಿದರೆ
ಅದು ಬೇರೆಯವರು ನೋಡುವಂತದ್ದಲ್ಲ; ನೋಡುವ ಮುಂಚೆ ಅಳಿಸಿದರೆ ಅದನ್ನು ನೀನು ನೋಡುವಂತದ್ದಲ್ಲ..’ ಎನ್ನುವ ಮಾತುಗಳನ್ನು ಓದಿಕೊಂಡಳು..

ನಿಮಗೆ ಕಾಫಿಯೇ ಇರಲಿ.. ನನಗೆ ಒಂದೊಳ್ಳೆ ಟೀ ಬೇಕು.. ಇಬ್ಬರದೂ ಒಂದೇ ಆದರೆ ಅದೂ ಬೋರು.. ‘ ಅಂದಳು ಅವಳು..

ಅವಳ ಕಣ್ಣಗಳನ್ನು ನೋಡಿದ. ಏನೊ ಬರೆದಂತಿದ್ದ ಸಾಲುಗಳನ್ನು ಓದಿಕೊಂಡ ಅವು ಹೀಗಿದ್ದವು ‘ಎದೆ ಮುಚ್ಚಿದಾಗ ಯಾರೊ ಬಂದು ಹೋಗುತ್ತಾರೆ.‌ ಬಂದ ಗುರುತು ಉಳಿಯುತ್ತದೆ, ಕಾರಣವೊಂದು ಉಳಿಯದೆ.. ಕಳಿಸಿದ ಮೆಸೇಜ್ ಅಳಿಸಿ ಹೋಗುವಂತೆ..’

ಕಾಫಿ, ಟೀ ಒಟ್ಟಿಗೆ ಬಂದವು. ಮೌನವಾಗಿ ಕುಡಿದರು. ಮತ್ತೆರಡು ಮಾತು.. ನಂತರ ಬಂದ ಬಿಲ್ಲು.. ಅವನು ಬಿಲ್ಲು ಕೊಟ್ಟ.. ಅವಳು ನಗುತ್ತಾ ಬೈ ಅಂದಳು.

ಅವರಿಬ್ಬರ ನಡುವೆ ಅವರ ಮನೆಯ ಮುಂದಿನ ಮರ ಸುಮಾರು ಮೂವತ್ತು ಬಾರಿ ಎಲೆ ಕಳಚಿಕೊಂಡು ಚಿಗುರಿತು.. ಮನೆಯ ಹಿಂದಿನ ತುಂಗಾಭದ್ರೆಯಲ್ಲಿ ಅದೆಷ್ಟೊ ಮಳೆಗಾಲದ ನೀರು ಹರಿಯಿತು. ಅವರಿಬ್ಬರ ನಡುವೆ ಅದೆಷ್ಟು ಹಳ್ಳಿಗಳು ಸವೆದು ಹೋದವು. ಅವೆಷ್ಟು ನಗರಗಳಿಗೆ ಬೊಜ್ಜು ಬಂದಿತ್ತೊ..

ಅವನು‌ :

ಎಲ್ಲಿಂದ ಎಲ್ಲಿಗೆ ತಲುಪಿ ಬಿಟ್ಟೆವು.. ಅಂದು ಮೊದಲ ಬಾರಿಗೆ ಅವಳೇನು ಮೆಸೇಜ್ ಕಳ್ಸಿ ಅಳಿಸಿದ್ದು ನನಗಿನ್ನೂ ತಿಳಿದಿಲ್ಲ. ಮಗ ‘ಅಪ್ಪಾ, ಅಮ್ಮಾ.. ನಿಮ್ಮದು ಸೂಪರ್ ಜೋಡಿ’ ಅಂತಾನೆ. ಜನಗಳು ಅಪರೂಪದ ದಂಪತಿ ಅಂತಾರೆ. ನಾನು ಅವಳಿಗೆ ಹೇರ್ ಡೈ ಹಚ್ಚುತ್ತೇನೆ. ನನಗೆ ದವಡೆ ಹಲ್ಲು ಉದುರಿ ಹೋಗಿದೆ ಅಂತ ಅವಳು ಚಪಾತಿ ತಿನ್ನಲು ಬಲವಂತ ಮಾಡುವುದಿಲ್ಲ..

ಆರಂಭದಲ್ಲಿ ಅವಳು ಅಳಿಸಿದ ಮೆಸೇಜ್ ನಲ್ಲಿ ಇದರ ಕುರುಹು ಇತ್ತಾ? ಬಹುಶಃ ಅದೇ ಅನಿಸುತ್ತೆ..

ಆದರೆ ನಾನೆಂತಹ ಮೆಸೇಜ್ ಹಾಕಿಬಿಟ್ಟಿದ್ದೆ.. ಅವಳು‌ ಓದಿದ್ದರೆ ಎಂತಹ ಎಡವಟ್ಟು ಆಗುತ್ತಿತ್ತು. ಅವಳೆಷ್ಟು ಬೇಜಾರು ಮಾಡಿಕೊಳ್ಳುತ್ತಿದ್ದಳು. ನಾನು ಅಂದು ಡಿಲೀಟ್ ಮಾಡಿ.. ಬಹುಶಃ ಒಳ್ಳೆಯದೆ ಮಾಡಿದೆ. ಮಗ ಕೆಲಸಕ್ಕೆ ಅಂತ ಹೊರ ರಾಜ್ಯಕ್ಕೆ ಹೋದ ಮೇಲೆ ನಾವು ಇನ್ನೂ ಹತ್ತಿರವಾದೆವು. ಅವಳು ಈಗಲೂ ನನ್ನ ಮೇಲೆ ಬಲಗಾಲು ಹಾಕಿ, ಎದೆ ಮೇಲೆ ಕೈಯಿಟ್ಟು ಮಲಗುತ್ತಾಳೆ. ನಾನು‌ ಮಧ್ಯೆರಾತ್ರಿ ಸೊಂಟ ಹಿಡಿದು ಎಳೆದುಕೊಳ್ಳುತ್ತೇನೆ. ಅವಳು ಬಿಡಿಸಿದಂತೆ ಮಾಡಿಕೊಂಡು ಇನ್ನೂ ಹತ್ತಿರವಾಗುತ್ತಾಳೆ.. ಒಮ್ಮೊಮ್ಮೆ ಬೆಳಗ್ಗೆ ನಾನು ಕಾಫಿ ಮಾಡುತ್ತೇನೆ, ಅವಳೂ ಕಾಫಿ ಕುಡಿಯುತ್ತಾಳೆ.. ಒಮ್ಮೊಮ್ಮೆ ಅವಳು ಟೀ ಮಾಡುತ್ತಾಳೆ, ನಾನೂ ಟೀ ಕುಡಿಯುತ್ತೇನೆ..

ಅವಳು :

ಇವರು ಸಿಗದೆ ಇದ್ದರೆ ಈ ಬದುಕು ಎಷ್ಟೊಂದು ವ್ಯರ್ಥದ್ದು ಅನಿಸುತ್ತಿತ್ತು. ನಾನು ಪಿಎಚ್ಡ್ ಗೆ ಓದುವಾಗ ನನ್ನೊಂದಿಗೆ ರಾತ್ರಿ ಎರಡರವರೆಗೂ ಕೂತಿರುತ್ತಿದ್ದರು. ಎಲ್ಲಾ ಕೆಲಸ ಅವರದೆ.. ಅವತ್ತು ಇಡೀ ಪ್ರಬಂಧ ಮುಗಿಸಿ ಸೋತು ಮನೆಗೆ ಬಂದು ಮಲಗಿದಾಗ ಅವರು ಬಂದು ಕಾಲು‌ ಒತ್ತುತ್ತಿದ್ದರು.. ನಿಜಕ್ಕೂ ಕಣ್ಣಲ್ಲಿ ನೀರು ಬಂತು. ಬೇಡ ರೀ ಅಂದೆ.. ಕಾಲು ನೋವು ಗಂಡಿಗೂ, ಹೆಣ್ಣಿಗೂ ಒಂದೇ.. ಅದರಲ್ಲಿ ಬೇರೆ ಬೇರೆ ವಿಧಗಳೂ ಅಂತ ಇರಲ್ಲ ಕಣೇ ಅಂದರು.. ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ. ಎಂತಹ ಅದ್ಬುತ ಮನುಷ್ಯ ಇವರು ಅನಿಸಿತು..

ಯಾಕೆ ನನಗಾಗಿಯೆ ಇಡೀ ಬದುಕು ಶ್ರಮಿಸುತ್ತಿದ್ದಾರೆ ಇವರು ಅನಿಸುತ್ತೆ.. ಅವರು ಹೆಚ್ಚು ಪುಸ್ತಕಗಳನ್ನು ಓದುವುದಿಲ್ಲ ನನ್ನ ಕಣ್ಣುಗಳನ್ನು ಓದಿಕೊಳ್ಳುತ್ತಾರೆ. ರೆಪ್ಪೆಯಂತೆ ಪೊರೆಯುವ ಇವರು ನನಗಾಗಿ ಹುಟ್ಟಿದವರಾ? ಇವತ್ತಿಗೂ ಹಾಸಿಗೆಯಾ ಮೇಲೆ ನನಗೆ ಒಂಟಿಯಾಗಿ ಮಲಗಲಾಗುವುದಿಲ್ಲ.. ಅವರ ತೋಳು ಬೇಕು. ಮನೆಯಲ್ಲಿ ಇಬ್ಬರೇ.. ಎಷ್ಟೊಂದು ಸೊಗಸಿದೆ ಬದುಕಿಗೆ..

ಅವನು ಮತ್ತು ಅವಳು..

ನಾಳೆ ನಮ್ಮ ಮೂವತ್ತೈದನೇ ವರ್ಷದ ಮದುವೆಯ ವಾರ್ಷಿಕೋತ್ಸವ.. ಈ ಕಾಲದಲ್ಲೂ ಪತ್ರ ಬರೆದು ಅವನಿಗೆ ಅಚ್ಚರಿ ಮೂಡಿಸಬಹುದೆಂದು ಗೊತ್ತಾಗಬೇಕೆಂದನ್ನು ಯೋಚಿಸಿದ ಅವಳು ಚೆಂದದ ಒಂದು ಬಿಳಿ ಪುಟ ತೆಗೆದುಕೊಂಡು ಅವತ್ತು ಮೊದಲಬಾರಿಗೆ ಅವನ ಮೊಬೈಲ್ ಗೆ ಕಳುಹಿಸಿ, ಅಳಿಸಿ ಹಾಕಿದ್ದ ಆ ನಾಲ್ಕು ಮೆಸೇಜ್ ಗಳನ್ನು ಬರೆದಳು..

‘ನೀವು ಅಷ್ಟೊಂದು ಇಷ್ಟ ಆಗಲಿಲ್ಲ..’

‘ಮನೆಯಲ್ಲಿ ಬೇಡ ಎಂದು ಹೇಳಲೇ?’

‘ನಾಳೆ ಸಿಕ್ಕಾಗ ಇದರ ಬಗ್ಗೆ ಒಂದು ತೀರ್ಮಾನ ಮಾಡುವ’

‘ಕ್ಷಮಿಸಿ, ಯಾಕೊ ಹೇಳಬೇಕು ಅನಿಸಿತು ಇದನು..’

ಅಂದು ನಿಮಗೆ ಈ ಸಾಲುಗಳನ್ನು ಬರೆದೆ.. ಅಳಿಸದೆ ಹೋಗಿದ್ದರೆ ನನಗೆ ಎಂತಹ ನಷ್ಟವಿತ್ತು..
ಲವ್ ಯೂ..

ಇತ್ತ
ಅವನೂ ಒಂದು ಪತ್ರ ಸಿದ್ದ ಮಾಡಿಕೊಂಡ. ಒಬ್ಬನೇ ಕೂತು ಬರೆದ..

‘ ಇದನ್ನು ನಿಮಗೆ ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ..’

‘ನೀವು ನನಗೆ ತಕ್ಕ ಹುಡುಗಿ ಅನಿಸಲಿಲ್ಲ..’

‘ಅಲ್ಲಿ ಎಲ್ಲರ ಮುಂದೆ ಸುಮ್ಮನಿದ್ದೆ, ಈಗ ಬೇಡ ಅನಿಸಿದೆ’

‘ನಾಳೆ ಸಿಕ್ಕಾಗ ಇದರ ಬಗ್ಗೆ ಮಾತಾಡುವ..’

ಇವೇ ನಾನು ಅಂದು ಟೈಪ್ ಮಾಡಿ ನಿಮಗೆ ಕಳುಹಿಸಿ, ಅಳಿಸಿದ ಸಾಲುಗಳು… ನಾನು ಅಂದು ಅಳಿಸದೆ ಹೋಗಿದ್ದರೆ ಇವತ್ತು ಈ ಬದುಕು ಇಷ್ಟೊಂದು ಚೆಂದವಿರುತ್ತಿರಲಿಲ್ಲ.. ಲವ್ ಯೂ.

ಮರುದಿನ ಬೆಳಿಗ್ಗೆ ಪತ್ರಗಳ ವಿನಿಮಯ..

ಕಾಲವೂ ಕಾದಿದೆ.. ಕುತೂಹಲದಿಂದ.

‍ಲೇಖಕರು avadhi

February 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: