ಸದಾಶಿವ್ ಸೊರಟೂರು ಕಥಾ ಅಂಕಣ – ಪ್ರೊಫೈಲ್ ಪಿಕ್..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

23

ಕಥೆಗಾರ ಆದಿತ್ಯನ ಎದುರಿಗೆ ಕೂತು ತುಂಬಾ ಹೊತ್ತು ಹರಟಿದ್ದ ಮನು ಎದ್ದು ಹೋದ. ಹಾಗೆ ಹೋಗುವಾಗ ಅವನು ಆದಿತ್ಯನನ್ನು ನೋಡಿದ ಪರಿ ಇತ್ತಲ್ಲ ಅದು ಅವನನ್ನು ಸಣ್ಣಗೆ ಕೆಣಕಿತು. ಅದರ ಜೊತೆ ಮನು ತುಟಿಯ ಅಂಚಿನಲ್ಲಿ ಒಂದು ವಕ್ರ ನಗೆ ಬೀಳಿಸಿ‌ ಹೋದ. ಇದರಿಂದ ಆದಿತ್ಯ ಮತ್ತಷ್ಟು ಗಲಿಬಿಲಿಗೊಂಡ.

‘ನೀನು, ನಿನ್ನದೇ ಪಾತ್ರವೊಂದರ ಡೂಪ್ ಅನ್ಸಲ್ವ?’ ಮನುವಿನ ಪ್ರಶ್ನೆ ತಿವಿದಿತ್ತು.

ಮನು ಆ ಬಗ್ಗೆ ಸಾಕಷ್ಟು ಹೇಳಬಹುದಿತ್ತು ಆದರೆ ಹೇಳಲಿಲ್ಲ.. ಒಂದೇ ಒಂದು ವಾಕ್ಯದಲ್ಲಿ ಮುಗಿಸಿ ಎದ್ದು ಹೋಗಿದ್ದ.

ಮೊದಲ ಬಾರಿಗೆ ಕಥೆಗಾರ ಆದಿತ್ಯ ತನ್ನೊಂದಿಗೆ ತಾನೇ ಮಾತಾಗಲು ಯತ್ನಿಸಿದ. ಇದು ಮನುವಿನ ಮಾತು ಅಷ್ಟೆಯೊ ಅಥವಾ ತನ್ನ ಸುತ್ತಾ ಇರುವ ಎಲ್ಲರ ಅನಿಸಿಕೆಯೂ ಕೂಡ ಇದೇನಾ? ಅವನ ಯೋಚನೆಗಳು ಗೋಜಲು ಗೋಜಲಾದವು.‌

ಎದ್ದು ಮನೆಯಿಂದ ಮಾರು ದೂರ ಇರುವ ಒಂದು ಪುಟ್ಟ ಮುರುಕು ಹೋಟೆಲ್‍ಗೆ ಬಂದು ಕೂತ. ಹಾಲು ಸಾಲದ ಕಪ್ಪನೆಯ ಚಹಾವೊಂದು ಒಲೆಯ ಮೇಲೆ ತನ್ನ ಸಂಕಟ ನುಂಗಿಕೊಂಡು ಕುದಿಯುತ್ತಿತ್ತು. ಒಂದು ಪುಟ್ಟ ಪೇಪರ್ ಕಪ್ಪಿನಲ್ಲಿ ಚಹಾ ಕೊಟ್ಟ ಅಂಗಡಿಯವ. ಇದರಲ್ಲಿ ಅಂತದ್ದೇನು ಕುತೂಹಲವಿಲ್ಲ. ಅವನು ನಿತ್ಯ ಎರಡು ಬಾರಿ ಚಹಾ, ಹೆಂಡತಿ ತವರಿಗೆ ಹೋದರೆ ಎರಡು ಇಡ್ಲಿ, ಇಲ್ಲವೆ ಕೆಂಪು ಬಣ್ಣದ ರೈಸ್ ಬಾತ್ ತಿಂದು ಆ ದಿನಗಳನ್ನು ಮುಗಿಸುತ್ತಿದ್ದ.

ಚಹಾವನ್ನು ಕೈಗೆತ್ತಿಕೊಂಡು ಮೊಬೈಲ್ ತಗ್ದು, ನೆಟ್ ಆನ್ ಮಾಡಿ ಎಂದಿನಂತೆ ಫೇಸ್ಬುಕ್ ತೆರೆದ.‌ ತನ್ನ ಪ್ರೊಫೈಲ್ ಒಳಹೊಕ್ಕ. ಇಷ್ಟು ದಿನ ತಾನು ಹಾಕಿದ್ದ ಪೋಟೊಗಳನ್ನೆಲ್ಲಾ ಒಂದೊಂದಾಗಿ ನೋಡತೊಡಗಿದ.

ಮತ್ತೆ ಮತ್ತೆ ಮನು ಹೇಳಿ ಹೋದ ಮಾತು ನೆನಪಾಗತೊಡಗಿತು.

‘ನೀನು ನಿನ್ನದೆ ಪಾತ್ರವೊಂದರ ಡೂಪ್ ಅನ್ಸಲ್ವ?’

ಕುಡಿಯುತ್ತಿದ್ದ ಚಹಾ ಹಠಾತ್ ಗಂಟಲಿನಲ್ಲಿ ಸಿಕ್ಕಿ ಕೊಂಡಿತು. ಜೋರಾಗಿ ಕೆಮ್ಮು ಬಂತು.‌

ಇದುವರೆಗೂ ಅವನು ಅಪ್ಲೋಡ್ ಮಾಡಿರುವ ಪೋಟೊದಲ್ಲಿ ಒಂದೂ ಕೂಡ ಅವನ ಮನೆಯಲ್ಲಿ ತೆಗೆದದ್ದು ಇರಲಿಲ್ಲ ಮತ್ತು ಈ ಮುರುಕು ಹೋಟೆಲ್‍ನದು ಇರಲಿಲ್ಲ.. ಅಷ್ಟೆ ಏಕೆ ತಾನು ಕೆಲಸ ಮಾಡುವ ಜಾಗದ್ದೂ ಇರಲಿಲ್ಲ.

ಮನೆಯ ಮಾಸಿದ ಗೋಡೆ, ನೆಲಕ್ಕೆ ಹಾಕಿರುವ ಹಳೆಯ ಕಾಲದ ಕಲ್ಲು, ಯಾವುದೊ ಕಾಲದ ಪಳೆಯುಳಿಕೆಯಂತೆ ಕಾಣುವ ಈ ಹೋಟೆಲ್ ನಲ್ಲಿ ತೆಗೆದ ಒಂದೇ ಒಂದು ಪೋಟೊವೂ ಅಲ್ಲಿರಲಿಲ್ಲ. ಸುಮಾರು ಹತ್ತು ವರ್ಷಗಳಷ್ಟು ಕಾಲ‌ ಫೇಸ್ಬುಕ್ ನಲ್ಲಿ ಮುಳುಗಿರುವ ಅವನು ತನ್ನ ಮನೆಯ ಅಥವಾ ಹೊಟೆಲ್ ನಲ್ಲಿ ತೆಗೆದ ಒಂದೇ ಒಂದು ಪೋಟೊವನ್ನೂ ಹಾಕಿರಲಿಲ್ಲ.

ಅಲ್ಲಿ ಹಾಕಿರುವ ಎಲ್ಲಾ ಪೋಟೊಗಳು ದೊಡ್ಡ ದೊಡ್ಡ ಸ್ಟಾರ್ ಹೋಟೆಲ್‍ನಲ್ಲಿ ತೆಗೆದುಕೊಂಡಂತವು.‌ ಬಣ್ಣ ಬಣ್ಣದ ತೆಳು ಬೆಳಕು, ತೊಟ್ಟುಕೊಂಡ ದುಬಾರಿ ಬಣ್ಣದ ಟೀ ಶರ್ಟ್, ಅದ್ದೂರಿತನದ ಕುರ್ಚಿಗಳು, ಬಹುತೇಕರಿಗೆ ಹೆಸರು ಗೊತ್ತಿಲ್ಲದ ಕಾಸ್ಟ್ಲಿ ತಿನಿಸುಗಳನ್ನು ಮುಂದಿಟ್ಟುಕೊಂಡು ತೆಗೆದುಕೊಂಡ ನೂರಾರು ಪೋಟೊ ಗಳು ಅಲ್ಲಿದ್ದವು. ಯಾರೇ ಹೊಸಬರು ಅವರ ಪ್ರೊಫೈಲ್ ಇಣುಕಿದರೆ ಕಥೆಗಾರ ಆದಿತ್ಯ ಎಂತಹ ರಿಚ್ ಫೆಲೊ ಮಾರಾಯ, he is sophisticated ಅಂದುಕೊಂಡು ಬಿಡಬೇಕು ಅಂಥದೊಂದು ಭಾವನೆಯನ್ನು ನೋಡುವವರೆಗೆ ಬಿತ್ತುವಲ್ಲಿ ಅವನು ಅಲ್ಲಿ ಯಶಸ್ವಿಯಾಗಿದ್ದ.

ಪೇಪರ್ ಕಪ್ಪಿನಲ್ಲಿ ಚಹಾ ಹೀರುತ್ತಾ ಕೂತ. ಆತನಿಗೆ ಅವನೇ ಬರೆದ ಕಥೆಗಳು ನೆನಪಾದವು ‘ನಿನ್ನ ಬದುಕಿನಲ್ಲಿ ಎಲ್ಲೂ ನೀನಿಲ್ಲ..’ ಎಂದಿದ್ದ ಮನುವಿನ ಇನ್ನೊಂದು ಮಾತು ಸಣ್ಣಗೆ ಕೊರೆಯತೊಡಗಿತು. ‘ನಾನು ಕನಿಷ್ಠ ನಾನು ಬರೆದ ಕಥೆಗಳಲ್ಲಾದರೂ ಇರಬಹುದೇ?’ ಅಂದುಕೊಂಡು ಇದುವರೆಗೂ ಅವನ ಬರೆದ ಎಲ್ಲಾ ಕಥೆಗಳನ್ನು ಒಂದೊಂದಾಗಿ ಕಣ್ಣ ಮುಂದೆ ತಂದುಕೊಂಡ. ಒಂದೊಂದೆ ಕಥೆಗಳನ್ನು ನೆನಪಿಸಿಕೊಳ್ಳುತ್ತಾ ಹೋದ.

ಇಲ್ಲ, ಯಾವ ಕಥೆಗಳಲ್ಲೂ ಅವನಿಗೆ ಅವನು ಕಾಣಿಸಲಿಲ್ಲ. ತನ್ನ ಹಳೆಯ ಮನೆ, ಮುರುಕು ಹೋಟೆಲ್ ಆ ಕಥೆಗಳಲ್ಲಿ ಎಲ್ಲೂ ಬಂದಿರಲಿಲ್ಲ. ಮತ್ತು ಸ್ಟಾರ್ ಹೋಟೆಲ್ ಕೂಡ ಬಂದಿರಲಿಲ್ಲ. ಅಲ್ಲಿ ಇನ್ನೊಂದು ಹೊಸ ನಟನೆ..! ಇಂಗ್ಲಿಷ್ ಕಾದಂಬರಿಯಿಂದ ಭಾವವೊಂದನ್ನು ಎತ್ತಿಕೊಂಡು ಬಂದು ಊರು ಕೇರಿಯ ಬಣ್ಣ ಬಳಿದಿದ್ದ, ಯಾರ್ ಯಾರದೊ ಬದುಕನ್ನು ಎತ್ತಿಕೊಂಡು ಬಂದು ತನ್ನ ಪದಗಳನ್ನು ತೊಡಿಸಿ ಕೂರಿಸಿದ್ದ.

ಮೊದಲ ಬಾರಿಗೆ ಅವನಿಗೆ ಅವನ ಮನೆಯೇ ಒಂದು ಸಣ್ಣ ತಿರಸ್ಕಾರ ಮೂಡಿತು.‌ ಉಳಿದ ಟೀ ಅನ್ನು ಗಟಗಟ ಕುಡಿದು ಹಾಕಿದ. ಮೊಬೈಲ್ ಕ್ಯಾಮೆರಾ ತೆರೆದು ಅದರಲ್ಲಿ ತನ್ನ ಮುಖ ನೋಡಿಕೊಂಡ. ಬೆಳೆದ ಗಡ್ಡ, ಅಲ್ಲಲ್ಲಿ ಕಾಣುವ ಬಿಳಿಗಡ್ಡ, ಕೆನ್ನೆಯ ಎರಡು ಮೂಡಿರುವ ಕಂದು ಕಲೆಗಳು, ಎಲ್ಲಕ್ಕೂ ಮುಗಿಲಾಗಿ ಢಾಳಾಗಿ ಮೆತ್ತಿಕೊಂಡಿರುವ ಬೇಸರ ಅವನನ್ನು ಕೆಣಕಿತು. ಅದೇ ನೋಟದಲ್ಲೇ ಒಂದು ಸೆಲ್ಪಿಯನ್ನು ಕ್ಲಿಕಿಸಿಕೊಂಡ. ತನ್ನ ಸ್ಟಾರ್ ಹೋಟೆಲ್ ಪೋಟೊ ಮತ್ತು ಈ ಅಸಲಿ ಪೋಟೊ ಎರಡನ್ನೂ ಪಕ್ಕ ಪಕ್ಕ ನೋಡಿದೆ. ಅವನ ನಟನೆ ಅವನ ಮುಂದೆ ಸ್ಪಷ್ಟವಾಗಿ ಕಾಣುತ್ತಿತ್ತು.‌

ಈಗ ತಗ್ದ ಅಸಲಿ ಪೋಟೊವನ್ನು ಫೇಸ್ಬುಕ್ ಗೆ ಅಪ್ಲೋಡ್ ಮಾಡಿ ಈ ನಟನೆಯ ನಾಟಕಕ್ಕೆ ಒಂದು ಇತಿಶ್ರೀ ಹಾಡಿಬಿಡಲೇ? ಹಾಡಬಹುದು ಆದರೆ ಜನ ಏನಂದುಕೊಂಡಾರು!!

ಧೈರ್ಯ ಸಾಲಲಿಲ್ಲ.

ತನ್ನ ಪಾತ್ರ ನಿಜಕ್ಕೂ ಯಾವುದು?

ಸ್ಟಾರ್ ಹೋಟೆಲ್‍ನದಾ?
ಕಥೆಗಳಲ್ಲಿರುವುದಾ?
ಹಳೆಯ ಮನೆ, ಮುರುಕು ಹೋಟೆಲ್ ನಲ್ಲಿ ಹಳೆಯ ಟೀ ಶರ್ಟ್ ತೊಟ್ಟು ಕೂತಿರುವ ಈ ನಲವತ್ತರ ಅಸಾಮಿಯದಾ?

ಈ ಮೂರರಲ್ಲಿ ಅಸಲಿ ಯಾವುದು?

‘ಏನ್ ಸಾ.. ಬಾಳ ಯೋಚ್ನಿಯೊಳಗ ಇದೀರಿ?’

ಹೋಟೆಲ್‍ನವ ಮಾತಿಗೆಳೆದ.

ಏಕಾಏಕಿ ತೂರಿಬಂದ ಅವನ ಪ್ರಶ್ನೆಗೆ ಏನು ಉತ್ತರಿಸಬೇಕೆಂದು ಆದಿತ್ಯನಿಗೆ ತಿಳಿಯಲಿಲ್ಲ.‌

ಎಂದೂ ಗಮನಿಸಿದ ಹೋಟೆಲ್ ನವನನ್ನು ಆದಿತ್ಯ ಒಮ್ಮೆ ಗಮನಿಸಿದ.

ಸೊರಗಿದ ದೇಹ, ಬಿಳಿ ಕೂದಲು, ಕೊಳೆಯಾದ ಬಟ್ಟೆ, ಹೊಗೆಯಲ್ಲಿ ಕಂದಿದ ಕಣ್ಣುಗಳು, ಅದಕ್ಕೆ ಒಪ್ಪುವ ಜವಾರಿ ಮಾತುಗಳು. ಜಗತ್ತು ಅಸಲಿಯಾಗಿದೆ ಇಲ್ಲಿ ತಾನು ಮಾತ್ರ ನಕಲಿ ಎಂಬುದು ಅವನಿಗೆ ಇದೆ ಮೊದಲ ಬಾರಿಗೆ ಭಾಸವಾಗತೊಡಗಿತು.

‘ನಕಲಿಗೆ ಯಾವತ್ತೂ ಲೈಫ್ ಇಲ್ಲ. ಬೇಗ ಸವೆದು ಹೋಗಿ ಅದರ ಬಣ್ಣ ಗೊತ್ತಾಗಿ ಬಿಡುತ್ತದೆ ಆದಿತ್ಯ..’

ಮನು ಆಡಿದ್ದ ಇನ್ನೊಂದು ಮಾತು ಎದೆಯ ಯಾವುದೊ ಮೂಲೆಯಿಂದ ಎದ್ದು ಬಂತು.‌

ಒಂದು ಕ್ಷಣ ತತ್ತರಿಸಿದ..

ಮನು ಮಾತ್ರ ಇದೆಲ್ಲವನ್ನು ಹೇಳಿದ; ಜಗತ್ತು ಹೇಳುತ್ತಿಲ್ಲ ಬರೀ ನಗುತ್ತಿರಬೇಕು ಅನಿಸಿತು.

ಒಮ್ಮೆ ಹೋಟೆಲ್ ನಲ್ಲಿ ಕೂತಿದ್ದವರ ಕಡೆ ಕಣ್ಣು ಹಾಯಿಸಿದ. ಅವರೆಲ್ಲಾ ತನ್ನ ಕಡೆ ನೋಡಿ ನಗುತ್ತಿದ್ದಾರೆ ಅನಿಸಿತು.

ಈ ಕಥೆಗಳು, ಆ ಸ್ಟಾರ್ ಹೋಟೆಲ್ ನ ಶೋಕಿ ತನಗೆ ಒಂದು ಚಟದಂತೆ ಅಂಟಿಕೊಂಡಿರುವ ಪರಿಗೆ ಅವನ ಮೇಲೆಯೇ ಅವನಿಗೆ ಮರುಕ ಉಂಟಾಯಿತು. ಆತ್ಮವೊಂದು ದೇಹವನ್ನು ಬಿಟ್ಟು ಹೊರಡಲು ದೇಹದಿಂದ ಆಚೆ ಬಂದು ಕೊನೆಯ ಬಾರಿ ದೇಹವನ್ನು ನೋಡುವಂತೆ ಅವನೊಳಗೆ ಗುಪ್ತವಾಗಿ ಹುದುಗಿ ಹೋಗಿದ್ದ ‘ಅವನು’ ಆಚೆ ಬಂದು ಅವನನ್ನೇ ಅವನು ನೋಡಿಕೊಂಡ. ನಾಚಿಕೆಯಾಯಿತು.

ಹೋಟೆಲ್ ನಿಂದ ಎದ್ದು ಹೊರಟ.

ಆವರಿಸಿರುವ ಎರಡು ನಕಲಿ ಜಗತ್ತುಗಳಿಂದ ತಪ್ಪಿಸಿಕೊಂಡು ನಡೆಯುತ್ತಿರುವವಂತೆ ಕಾಣಿಸುತ್ತಿದ್ದ.

ನಡೆಯುತ್ತ ನಡೆಯುತ್ತಲೇ ಮೊಬೈಲ್ ಎತ್ತಿಕೊಂಡು ಮತ್ತೊಮ್ಮೆ ಫೇಸ್ಬುಕ್ ಪ್ರೊಫೈಲ್ ತೆಗೆದು ಏನನ್ನೊ ಜಾಲಾಡಿಸತೊಡಗಿದ.

ಈಗಷ್ಟೇ ಹೋಟೆಲ್ ನಲ್ಲಿ ತೆಗೆದ ಪೋಟೊವನ್ನು ಫೇಸ್ಬುಕ್ ಪ್ರೊಫೈಲ್ ಪೋಟೊಗೆ ಹಾಕಿಬಿಡುವ ಅಂತ ನೋಡತೊಡಗಿದ.

ತಕ್ಷಣ ಮೊಬೈಲ್ ಗೆ ಅನಾಮಿಕ ನಂಬರ್ ನಿಂದ ಕರೆ ಬಂತು..

ಕರೆ ಸ್ವೀಕರಿಸಿ ಕಿವಿಗಿಟ್ಟುಕೊಂಡ..

‘ಆದಿತ್ಯ ಸರ್ ಗೊತ್ತಾಯ್ತಾ ನಾನು ಸಂಪಾದಕ ನರಹರಿ’ ಅತ್ತ ಕಡೆಯ ದನಿ

‘ಸರ್ ನಮಸ್ತೆ.. ಗೊತ್ತಾಯ್ತು ಗೊತ್ತಾಯ್ತು ಹೇಳಿ. ಹೇಗಿದೀರಿ ಸರ್?’ ಇವನವು ಕಾಳಜಿ ಪೂರ್ವಕ ಮಾತುಗಳು.‌

‘ಫೈನ್ ಫೈನ್. ದೀಪಾವಳಿಗೆ ಒಂದು ವಿಶೇಷ ಸಂಚಿಕೆ ಮಾಡ್ತಾ ಇದೀವಿ. ಅನುಭವಿಸಿದ ಬದುಕನ್ನು ನೇರವಾಗಿ ಕಥೆಗಳಿಗೆ ತಂದವರು ನೀವು, ಅಂಥದೊಂದು ಕಥೆ ಬೇಕಿತ್ತು..’ ಸಂಪಾದಕರ ಒತ್ತಾಯದ ಮಾತುಗಳು.

ಆದಿತ್ಯನಿಗೆ ಕಥೆ ಅಂದ ತಕ್ಷಣ ಸಣ್ಣಗೆ ನಡುಗಿದ ‘ನೀನಗೆ ನೀನೆ ಡೂಪ್ ಅನ್ಸಲ್ವ?’ ಅನ್ನುವ ಮಾತು ನೆನಪಾಗಿ ತತ್ತರಿಸಿದ. ಏನು ಹೇಳಬೇಕು ಎಂದು ತಿಳಿಯಲಿಲ್ಲ..

‘ಸರ್ actually ಅದು.. ಏನೆಂದರೆ…’ ಅನ್ನುವುದ್ರೊಳಗೆ ಅತ್ತ ಕಡೆಯಿಂದ ಮಾತುಗಳು ಕೇಳಿಸದಾಯಿತು, ಆದರೆ ಕರೆ ನಿಂತು ಹೋಗಿರಲಿಲ್ಲ. ಹಲೋ ಹಲೋ ಅನ್ನುತ್ತಾ ಮೊಬೈಲ್ ಸ್ಕ್ರೀನ್ ಮೇಲೆ ಅದು ಇದು ಒತ್ತ ತೊಡಗಿದ. ಕರೆ ಬರುವ ಮೊದಲೇ ಸ್ಕ್ರೀನ್ ಮೇಲೆ ಫೇಸ್ಬುಕ್ ತೆರೆದಿತ್ತು. ಯಾವುದಕ್ಕೆ ಯಾವುದೊ ಬಟನ್ ತಾಗಿ ಹೋಟೆಲ್ ತೆಗೆದಿದ್ದು ಆ ಪೋಟೊವು ಪ್ರೋಫೈಲ್ ಪೋಟೊವಾಗಿ ಅಪ್ಲೋಡ್ ಆಗಿಬಿಟ್ಟಿತ್ತು.

ಅರೇ ಇದೇನಾಯ್ತು ಅನ್ನುವುದ್ರೊಳಗೆ ಸಂಪಾದಕರ ಕರೆಯು ಕಟ್ ಆಗಿ ಹೋಗಿತ್ತು. ಇತ್ತ ಫೇಸ್ಬುಕ್ ನಲ್ಲಿ ಇವನು ಹೊಸ ಪೊಟೋ ತಣ್ಣಗೆ ಕೂತಿತ್ತು.

ಪೆಚ್ಚಾಯಿತು ಅವನ ಮುಖ..

ಮತ್ತೆ ಸಂಪಾದಕರಿಗೆ ಕರೆ ಮಾಡಲೇ ಎಂದು ಯೋಚಿಸುತ್ತಾ ಕಾಲ್ ಹಿಸ್ಟರಿ ತೆಗೆದ..

ಹಿಂದಿನಿಂದ ಮನು ಕೂಗಿ ಹೇಳಿದಂತೆ ಕೇಳಿಸಿತು.

‘ನೀನು ನಿನ್ನದೆ ಪಾತ್ರವೊಂದರ ಡೂಪ್ ಅನ್ಸಲ್ವ?’

ಕರೆ ಮಾಡಲೊ, ಬೇಡವೊ..
ದ್ವಂದ್ವದಲ್ಲೇ ನಿಂತುಕೊಂಡ..

ಫೇಸ್ಬುಕ್ ನಲ್ಲಿ ಟಣ್ ಟಣ್ ನೋಟಿಫಿಕೆಷನ್ ಮೆಸೇಜ್‍ಗಳು..

‘ಓಹ್ ಸರ್ ಏನಿದು ಪೋಟೊ..?’
‘ಹೊಸ ಕಥೆ ಹುಡುಕಲು ಆ ಹಾಳು ಹೋಟೆಲ್ ಗೆ ಹೋಗಿದೀರಾ..?’
‘ಇದೇನ್ ಸರ್ ಹೊಸ ಅವತಾರ..?’

… ಹೀಗೆ ಪ್ರಶ್ನೆಗಳ ಸಾಲು ಬೆಳೆಯತೊಡಗಿತು. ಅವುಗಳನ್ನು ಓದುತ್ತಾ ಆದಿತ್ಯ ಅಲ್ಲೇ ನಿಂತುಬಿಟ್ಟ.‌ ನೂರಾರು ಕಥೆಗಳನ್ನು ಬರೆದಿದ್ದ ಅವನಿಗೆ ಈಗ ಉತ್ತರಿಸಲು ಒಂದೇ ಒಂದು ಪದವು ಸಿಗದಂತಾಗಿತ್ತು..‌

ಉತ್ತರದ ತಲಾಷಿನಲ್ಲಿ ಮುಳುಗಿಹೋದ!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

December 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: