ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.
ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.
ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ.
ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
ಹಿಂದೆ ಅವಧಿಯ ಕತೆ ಕಿಟಕಿ ಅಂಕಣದಿಂದ ಇದೀಗ ಮತ್ತೊಂದು ಹೊಸ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ 5
ಮೌನದಲ್ಲಿ ಅದ್ದಿ ತೆಗೆದ ತರಗತಿ. ಆ ಪೋರನ ಕಣ್ಣುಗಳು ನನ್ನ ಕಡೆ. ನನ್ನ ಮಾತುಗಳು ತರಗತಿ ಕಡೆ. ಪೋರ, ಸಣ್ಣ ಧಾವಂತದ್ದಲ್ಲಿದ್ದ. ಅವನ ಕಣ್ಣುಗಳಲ್ಲಿ ಬೆಳಗಿನ ಸೂರ್ಯ ಉರಿಯುತ್ತಿದ್ದ. ಪ್ರತಿ ಬಾರಿಯೂ ಪುಸ್ತಕದ ಮಧ್ಯೆಕ್ಕೆ ಇಣುಕಿ ತಲೆ ಎತ್ತಿದ್ದಾಗಲೂ ಅವನ ಮುಖದಲ್ಲಿ ಬೇಸರದ ಚಂದ್ರ ಕುಣಿಯುತ್ತಿದ್ದ. ಅದಂತೂ ಮುದ್ದು ಮುದ್ದು. ಅವನ ಮುಖ ನಿನ್ನೆ ಮೊನ್ನೆಯಷ್ಟೆ ಎದೆ ಹಾಲು ಕುಡಿಯುವುದನ್ನು ಬಿಟ್ಟು ಬಂದಷ್ಟು ಎಳಸು. ಅವನ ಮುಖದ ಮೇಲೆ ಬೇಸರದ ಕಿರಣಗಳನ್ನು ಹಾಯಿಸುತ್ತಿರುವ ಪುಸ್ತಕದೊಳಗಿನ ಆ ಚಿತ್ರ ಯಾವುದಿರಬಹುದು? ಅದನ್ನು ನೋಡಿದ ಬಳಿಕವೇ ಯಾಕೆ ಆ ಪೋರ ಇನ್ನಷ್ಟು ಮೌನ ತಿನ್ನುತ್ತಾನೆ?
ಎದ್ದು ನಿಲ್ಲಿಸಿ ಕೇಳಬಿಡಲೆ? ಅವನ ಸುಂದರ ಮೌನದೊಳಗೆ ಕಲ್ಲು ತೂರಿ ಅಲೆ ಎಬ್ಬಿಸಿ ಬಗ್ಗಡ ಮಾಡಿದಂತಾಗುತ್ತದೆಯೇ? ನೀ ಯಾರು ನನ್ನ ಈ ಲೋಕದೊಳಗೆ ಅನಾಯಸವಾಗಿ ನುಗ್ಗಿ ಬರಲು ಎಂದು ಕೇಳಿದರೆ ಏನು ಹೇಳಲಿ? ನಾನು ಹೇಳುತ್ತಿರುವ ಮೊಲದ ಕಥೆಯ ಒಳಗೆ ಬರಲು ಅವನಿಗೆ ಸುತಾರಂ ಇಷ್ಟವಿಲ್ಲ. ಅವನು ಕಥೆಯ ಹೊರಗೆ ನಿಂತು ಪುಸ್ತಕದ ಮಧ್ಯೆದ ಪುಟಕ್ಕೂ ಹೊರಗಿನ ಪುಟಕ್ಕೂ ಶತಪಥ ಹಾಕುತ್ತಿದ್ದಾನೆ.
ಅವನ ಹತ್ತಿರ ಹೋದರೇ? ಚೆಂದದ ಹಕ್ಕಿಯೊಂದು ನಾವು ಹತ್ತಿರ ಹೋಗುತ್ತಿದ್ದಂತೆ ನಿಮ್ಮ ಸಹವಾಸವೇ ಬೇಡ ಮಾರಾಯ ಎಂದು ಹಾರಿ ಹೋಗುವಂತೆ.. ಈ ಪೋರ ಈಗಷ್ಟೇ ತಾನು ಕಟ್ಟಿಕೊಂಡಿರುವ ಆ ಲೋಕವನ್ನು ಎಲ್ಲಿ ಕಿತ್ತು ಮುದುರು ಮಾಡಿ ಬಿಸಾಕಿ ಕೂತು ಬಿಡುತ್ತಾನೊ ಎಂಬ ಅಂಜಿಕೆ ನನಗೆ! ಇನ್ನೆಂದೂ ನನ್ನನ್ನು ಹತ್ತಿರ ಸೇರಿಸದಂತೆ ದಿಕ್ಕರಿಸಿ ಬಿಡುವನೊ ಎಂಬ ದಿಗಿಲು.
ಮಧ್ಯೆದ ಪುಟಕ್ಕೆ ಹೋಗಿ ಹೋಗಿ ಬರುವ ಅವನ ಆ ತಿರುಗಾಟದ ನಡುವೆ ಒಂದು ಮಾಯಕದಂತೆ ಪುಸ್ತಕದೊಳಗಿನಿಂದ ಒಂದು ಪುಟ್ಟ ನವಿಲು ಗರಿಯೂ, ಚೂಪಾದ ತುದಿಯಿರುವ ಹಳದಿ ಬಣ್ಣಕ್ಕೆ ತಿರುಗಿದ ಎಲೆಯೂ ಕೆಳಗ್ಗೆ ಬಿದ್ದವು. ತನ್ನ ಆತ್ಮದ ತುಂಡೊಂದು ಕಳಚಿ ಬಿದ್ದಂತೆ ಆ ಪೋರ ಗಲಿಬಿಲಿಗೊಂಡ. ತನ್ನ ಆ ದಿವ್ಯವಾದ ಮೌನದ ಲೋಕವೊಂದು ಎಲ್ಲಿ ಈ ಕ್ಷಣಕ್ಕೆ ಒಡೆದು ಹೋಗುತ್ತದೊ ಎಂಬ ದಿಗಿಲಿನೊಂದಿಗೆ ಮತ್ತೆ ಎತ್ತಿಕೊಂಡು ಅವುಗಳನ್ನು ಅಲ್ಲಿಗೇ ಅಡಗಿಸಿಕೊಂಡ.
ಆಗಿನಿಂದ ತನ್ನ ಸುತ್ತ ಸಂಕಟದ ಕೋಟೆ ಕಟ್ಟಿಕೊಂಡು ಒದ್ದಾಡುತ್ತಿರುವ ಆ ಪೋರನ ಮೌನಕ್ಕೆ ಕಾರಣವೊಂದು ಸಿಕ್ಕಂತಾಯ್ತು. ಅಥವಾ ನಾನೇ ಅದೇ ಕಾರಣ ಇರಬಹುದೆಂದು ತೀರ್ಮಾನಿಸಿಕೊಂಡೆನೇನೊ!
ಎರಡು ಹಾಳೆಗಳ ನಡುವೆ ಮೈ ಚಾಚಿ ಮಲಗಿರುವ ಈ ನವಿಲು ಗರಿ ಯಾಕೆ ಇನ್ನೂ ಮರಿ ಹಾಕಿಲ್ಲ. ‘ಇಟ್ಕ ತಗಳೊ ಇದು ಮರಿ ಹಾಕುತ್ತೆ..’ ಅಂತ ಕೊಟ್ಟ ಅಕ್ಕನ ಮಾತಿನಲ್ಲಿ ಮೋಸವಿತ್ತಾ? ಮರಿ ಹಾಕುವುದಾದರೆ ಯಾವಾಗ ಹಾಕುತ್ತದೆ? ಎಷ್ಟು ಮರಿಗಳನ್ನು ಹಾಕುತ್ತದೆ? ಈ ನವಿಲು ಗರಿ ಏನ್ನನ್ನು ತಿನ್ನುತ್ತದೆ? ಪುಟದ ಮೇಲಿರುವ ಅಕ್ಷರಗಳನ್ನು ತಿನ್ನಬಹುದೇನೊ? ಯಾವ ಅಕ್ಷರ ಇಷ್ಟವಾಗಬಹುದು ಅದಕ್ಕೆ? ಹಾಕುವ ಮರಿಗೂ ಅಕ್ಷರಗಳದೇ ಊಟನಾ? ಇನ್ನೊಂದು ಪುಟದಲ್ಲಿರುವ ಎಲೆಯೂ ಕೂಡ ಇನ್ನೂ ಮೊಟ್ಟೆ ಇಟ್ಟಿಲ್ಲ ಅನ್ನೋದು ನೆನೆದು ಪೋರನಿಗೆ ಇನ್ನೂ ದುಃಖವಾಗಿರಬಹುದು. ಆ ಮೊಟ್ಟೆ, ಪುಟದಿಂದ ಜಾರಿ ಬಿದ್ದು ಒಡೆದು ಹೋಗುವ ಆತಂಕವೂ ಇರಬಹುದು. ನವಿಲು ಗರಿ ಮತ್ತು ಎಲೆ ಒಳ್ಳೆಯ ಗೆಳೆಯರಾದಂತೆ ಅದರ ಮರಿಗಳು ಗೆಳೆಯರಾಗಬಹುದು. ನಾನು ಈ ಮರಿಗಳನ್ನು ಯಾರಿಗೆ ಕೊಡಬಹುದು. ತಂಗಿ ಮುನ್ನಿಗೆ ಕೊಡೋಣ ಅವಳು ಚೆಂದ ಮುದ್ದು ಮಾಡುತ್ತಾಳೆ… ಬಹುಶಃ ಈ ತರಹದೊಂದು ಲಹರಿ ಆ ಪೋರನ ತಲೆಯೊಳಗೆ ನಡೆಯುತ್ತಿರಬಹುದೇನೊ.
ಈ ಜಗತ್ತಿಕ್ಕೊಂದು ಚೆಲುವಿದೆ. ಅದು ತೀರಾ ಮುಗ್ದ ಚೆಲುವು. ಯಾರು ಕೇಳಿಸಿಕೊಳ್ಳದಿದ್ದರೂ ಹಕ್ಕಿಗಳು ಹಾಡುವಂತೆ, ಯಾರು ಕಾಳಜಿ ಮಾಡದಿದ್ದರೂ ಗಾಳಿ ಬೀಸುವಂತೆ, ಯಾರು ಲಾಲಿ ಹಾಡದಿದ್ದರೂ ಎಲೆಗಳು ತಲೆದೂಗುವಂತೆ, ಯಾರು ಕರೆಯದಿದ್ದರೂ ಸೋನೆ ಸುರಿಯುವಂತೆ, ಯಾರು ಕಾಯದಿದ್ದರೂ ನದಿ ಹರಿಯುವಂತೆ.. ಅವೆಲ್ಲವೂ ಇಂತಹ ಮುಗ್ಧ ಪೋರರಿಂದ ಕಾಪಿ ಹೊಡೆದ ಚೆಲುವಿಕೆಗಳಿರಬಹುದು.
ಇಂತಹ ಮುಗ್ಧ ಕೋಟೆಯೊಳಗೆ ಹೇಗೆ ನುಗ್ಗಲಿ? ಪುಸ್ತಕದ ಹಳಸಲು ಕಥೆಯನ್ನು ಹೇಗೆ ಹೇಳಲಿ? ಅಂಕ, ರ್‍ಯಾಂಕ್, ನೌಕರಿ, ಹಣ.. ಎಂಬ ಸಣ್ಣತನವನ್ನೂ ಹೇಗೆ ತುಂಬಲಿ? ಜಾತಿ, ಧರ್ಮ, ಭಾಷೆ, ಶ್ರೀಮಂತಿಕೆ, ಶೋಷಣೆಯ ನೋವಿನ ಕಥೆಗಳನ್ನು ಹೇಗೆ ಮುಂದಿಡಲಿ? ಕಲಿಸುವುದು ಎಂದರೆ ಮಗುವಿನ ಮನಸನ್ನು ಕೇಡಿಸುವುದು ಎಂಬಂತೆಯೇ ನನಗೆ ಆಗಾಗ ಭಾಸವಾಗುತ್ತದೆ.
ನವಿಲುಗರಿ ನಿರ್ಜೀವ. ಮರದ ಎಲೆಗೆ ಜೀವ ಇಲ್ಲ. ಜೀವ ಇಲ್ಲದ ಯಾವ ವಸ್ತುವೂ ಸಂತಾನ ಮಾಡಲಾರುವು..ವಿಜ್ಞಾನ ಪುಸ್ತಕದ ಮೂರನೇ ಪಾಠವನ್ನು ಓದಿ ಹೇಳಿದರೆ ಆ ಮಗುವು ಕಳೆದಕೊಳ್ಳುವ ಮುಗ್ಧತೆಯಿಂದ ಜಗದ ಚೆಲುವಿನ ಪಾಡೇನು? ಆ ಮಗುವಿಗೆ ಉಂಟಾಗುವ ಭ್ರಮನಿರಸನವನ್ನು ಯಾವುದು ತುಂಬಿಕೊಡುತ್ತದೆ? ಆ ನವಿಲು ಗರಿ, ಹಳದಿ ಎಲೆಯಿಂದ ಪಡೆದುಕೊಳ್ಳುತ್ತಿರುವ ಭರವಸೆಯನ್ನು ನನ್ನ ಯಾವ ಪಾಠಗಳು ಕೊಡುತ್ತವೆ?
ಕಾಡು ಹೂವಿಗೆ ಯಾವ ಲೆಕ್ಕಚಾರ? ಕಾಂಪೌಂಡಿನಲ್ಲಿ ಅರುಳುವ ಹೂವುಗಳಿಗೆ ಆಸೆಗಳಿವೆ. ಹೆಣ್ಣಿನ ಮುಡಿಯ ಆಸೆ, ದೇವರ ಗುಡಿಯ ಆಸೆ. ಕಾಡಿನ ಹೂವಿಗೆ ಆಸೆಗಳು ಎಂದರೇನು ಅಂತಾನೇ ಗೊತ್ತಿಲ್ಲ. ಬಹುಶಃ ಅದಕ್ಕೆಂದೆ ಅದರ ನಗು ಅಷ್ಟೊಂದು ವಿಶೇಷ.. ಅದರ ಬದುಕೂ ಕೂಡ.
ನಮ್ಮ ನಮ್ಮ ಎದೆಗಳಲ್ಲಿ ಒಂದು ಮುಗ್ಧತೆ ಕಾಪಿಟ್ಟುಕೊಳ್ಳದೆ ಹೋದರೆ ಜಗತ್ತು ಚೆಂದವಾಗಿ ಹೇಗೆ ಕಂಡೀತು? ಎಲ್ಲವನ್ನೂ ತಿಳಿದುಕೊಳ್ಳುವುದರಲ್ಲಿ ಹೆಗ್ಗಳಿಕೆಯಿಲ್ಲ; ಎಷ್ಟು ಬೇಕೊ ಅಷ್ಟು ತಿಳಿದುಕೊಂಡು ಸುಮ್ಮನಿರುವುದೆ ಚೆಲುವಿಕೆ. ನನ್ನ ಮಗನಿಗೆ ಇನ್ನೂ ಏನೂ ಬರುವುದಿಲ್ಲ ಎಂದು ಹೇಳುವ ಪೋಷಕರನ್ನು ಸುಮ್ಮನೆ ನೋಡುತ್ತೇನೆ..ಅವರ ಮಗು ಅದೆಷ್ಟು ಖುಷಿಯಾಗಿರಬಹುದು ಎಂಬುದು ನನ್ನ ಅಂದಾಜು. ಬಹುಶಃ ಮನುಷ್ಯ ತಿಳಿಯುತ್ತಾ ಹೋದಷ್ಟು ಕಳೆದುಕೊಳ್ಳುವುದೇ ಹೆಚ್ಚು.
ಜಗತ್ತು ಬದಲಾಗಿದೆ. ಹುಟ್ಟುವ ಮಕ್ಕಳು, ಕೈಲಿ ಮೊಬೈಲ್ ಹಿಡಿದೇ ಹುಟ್ಟುತ್ತಾರೆ. ಎರಡೇ ವರ್ಷಕ್ಕೆ ಲಕ್ಷಗಟ್ಟಲೆ ಡೊನೆಷನ್ ಪಡೆಯುವ ತರಗತಿಗೆ ಹೋಗಿ ಕೂರುತ್ತಾರೆ.. ಈ ಎಲ್ಲದರ ನಡುವೆಯೂ ನವಿಲು ಗರಿ ಮರಿ ಹಾಕುತ್ತದೆ ಎಂಬ ಪುಟ್ಟ ಭಾವವು, ನಂಬಿಕೆಯು, ಮುಗ್ಧತೆಯು ಇನ್ನೂ ಉಳಿದಿದೆ ಕೆಲವು ಪೋರರಲ್ಲಿ. ಬಹುಶಃ ಆ ಕಾರಣಕ್ಕೇನೊ ಈ ಜಗದಲ್ಲಿ ಇಂದಿಗೂ ಚೆಲುವಿದೆ.






0 Comments