ಜಿ ಪಿ ಬಸವರಾಜು
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಕರೆಯಬಹುದಾದ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿ ನೂರು ವರ್ಷಗಳಾಗಿವೆ. ಈ ಪರಿಷತ್ತು ನಡೆಸುವ ಕನ್ನಡ ಸಾಹಿತ್ಯ ಸಮ್ಮೇಳನಗಳು ಪ್ರತಿವರ್ಷವೂ ನಿಯಮಿತವಾಗಿ ನಡೆದುಕೊಂಡು ಬಂದಿದ್ದರೆ ಈ ಹೊತ್ತಿಗೆ 100 ಸಮ್ಮೇಳನಗಳು ನಡೆಯಬೇಕಾಗಿತ್ತು. ಆದರೆ ಮಡಿಕೇರಿಯಲ್ಲಿ ನಡೆದಿರುವುದು 80ನೇ ಕನ್ನಡ ಸಾಹಿತ್ಯ ಸಮ್ಮೇಳನ. ಅಂದರೆ ಪರಿಷತ್ತಿನ ಚರಿತ್ರೆಯಲ್ಲಿ 20 ವರ್ಷಗಳು ಸಮ್ಮೇಳನಗಳಿಲ್ಲದೆ ಕಳೆದುಹೋಗಿವೆ.
ಪರಿಷತ್ತು ಆರಂಭವಾದಾಗ (1915) ಅದರ ಉದೇಶ: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಯಾಗಿತ್ತು. ಇದರ ಅಂಗವಾಗಿಯೇ ಉಪನ್ಯಾಸ, ವಿಚಾರ ಸಂಕಿರಣ, ಪುಸ್ತಕ ಪ್ರಕಟಣೆ, ಕನ್ನಡ ತರಗತಿಗಳು, ಗಮಕ ತರಗತಿಗಳು, ಸಂಶೋಧನೆ ಇವೆಲ್ಲ ಕಾಲಕಾಲಕ್ಕೆ ವ್ಯವಸ್ಥಿತವಾಗಿಯೇ ನಡೆದವು. ಇದರಲ್ಲಿ ಅನೇಕ ಚಟುವಟಿಕೆಗಳು ಈಗಲೂ ನಡೆಯುತ್ತಿವೆ. ಕನ್ನಡ-ಕನ್ನಡ ನಿಘಂಟು, ಹಳಗನ್ನಡ ಕಾವ್ಯಗಳ ಅನುವಾದ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಪ್ರಕಟಣೆ ಇತ್ಯಾದಿ ಕಾರ್ಯವನ್ನೂ ಪರಿಷತ್ತು ನಡೆಸಿಕೊಂಡು ಬಂತು. ಜೊತೆಗೆ ಕನ್ನಡಿಗರನ್ನೆಲ್ಲ ಒಂದೆಡೆ ಸೇರಿಸುವ, ಭಾಷೆ, ಸಾಹಿತ್ಯ, ಸಂಸ್ಕೃತಿಯ ವಿಚಾರಗಳನ್ನು ಚಿಂತಿಸಿ, ಚಚರ್ಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ವಾಷರ್ಿಕ ಸಾಹಿತ್ಯ ಸಮ್ಮೇಳನಗಳನ್ನೂ ಏರ್ಪಡಿಸುವ ಪರಿಪಾಠವನ್ನು ಪರಿಷತ್ತು ಆರಂಭಿಸಿತು. ಇದಕ್ಕೆ ಸಕರ್ಾರದ ಮತ್ತು ಸಾರ್ವಜನಿಕರ ಬೆಂಬಲವೂ ದೊರೆಯಿತು. ಈಗಲೂ ಅದು ಮುಂದುವರಿದಿದೆ.
ಸಣ್ಣ ರೀತಿಯಲ್ಲಿ ಆರಂಭವಾದ ಈ ಸಾಹಿತ್ಯ ಸಮ್ಮೇಳನಗಳು ಇವತ್ತು ದೊಡ್ಡದಾಗಿ ಹಿಗ್ಗಿವೆ. ಐದೋ ಹತ್ತೊ ಸಾವಿರ ಜನ ಸೇರುತ್ತಿದ್ದ ಸಮ್ಮೇಳನಗಳಲ್ಲಿ ಈಗ ಅರವತ್ತು, ಎಪ್ಪತ್ತು ಸಾವಿರ ಜನ ಸೇರುತ್ತಿದ್ದಾರೆ. ಕನ್ನಡದಲ್ಲಿ ಪ್ರಕಟವಾಗುತ್ತಿರುವ ಬಹುಪಾಲು ಪುಸ್ತಕಗಳು ಒಂದೇ ಕಡೆ ಸಿಕ್ಕುವಂತೆ ಈ ಸಮ್ಮೇಳನಗಳನ್ನು ಪುಸ್ತಕ ಮೇಳಗಳನ್ನಾಗಿಯೂ ರೂಪಿಸಲಾಗಿದೆ. ಈಗಿನ ಸಾಹಿತ್ಯ ಸಮ್ಮೇಳನಗಳಲ್ಲಿ ನೂರಾರು ಪುಸ್ತಕ ಮಳಿಗೆಗಳು; ಲಕ್ಷಾಂತರ ಪುಸ್ತಕಗಳು. ಕೋಟಿಗಟ್ಟಲೆ ವಹಿವಾಟು. ಕೊಳ್ಳುವವರಿಗೂ ಮಾರುವವರಿಗೂ ಹಬ್ಬ. ಜೊತೆಗೆ ಸಾಹಿತಿಗಳ ಒಡನಾಟ; ವೇದಿಕೆಗಳಲ್ಲಿ ಅವರ ದರ್ಶನ; ಅವರ ಮಾತಿನ ವೈಖರಿಯನ್ನು ಕೇಳುವ ಅವಕಾಶ. ಮೂರ್ನಾಲ್ಕು ದಿನಗಳ ಕಾಲ ಸಮ್ಮೇಳನ ನಡೆಯುವ ಊರಿನಲ್ಲಿ ಸಾಹಿತ್ಯವೋ ಸಾಹಿತ್ಯ; ಸಾಹಿತಿಗಳೋ ಸಾಹಿತಿಗಳು.

ಕನ್ನಡ ಸಾಹಿತ್ಯ ಪರಿಷತ್ತಿನ ತಲೆನೋವೇ ಬೇರೆ. ಸಾವಿರಾರು ಜನ ಕುಳಿತುಕೊಂಡು ಸಾಹಿತಿಗಳ ಮಾತುಗಳನ್ನು ಕೇಳಲು ಸಾಧ್ಯವಾಗುವಂಥ ದೊಡ್ಡ ಸಭಾಂಗಣವನ್ನು ನಿಮರ್ಿಸುವುದು; ಬೃಹತ್ ಸಂಖ್ಯೆಯಲ್ಲಿ ಬರುವ ಪ್ರತಿನಿಧಿಗಳಿಗೆ ಊಟ, ವಸತಿ, ಇತರ ಮೂಲಭೂತ ಸೌಕರ್ಯ ಒದಗಿಸುವುದು ಇತ್ಯಾದಿ ಕೆಲಸಗಳ ಹೊರೆಯನ್ನೇ ಪರಿಷತ್ತು ಹೊರಬೇಕು. ಇದಕ್ಕಾಗಿ ಪರಿಷತ್ತು ಈಗ ಖಚರ್ುಮಾಡುತ್ತಿರುವ ಹಣ ಲಕ್ಷಗಳಲ್ಲಿ ಅಲ್ಲ; ಕೋಟಿಗಳಲ್ಲಿ. ಐದಾರು ಕೋಟಿ ರೂಪಾಯಿಯನ್ನು ಸಂಗ್ರಹಿಸಬೇಕು. ಇದರಲ್ಲಿ ಬಹುಪಾಲು ಹಣ ಸಕರ್ಾರದಿಂದ ಬರಬೇಕು. ಇದಕ್ಕಾಗಿ ಮಂತ್ರಿಗಳು, ಜನಪ್ರತಿನಿಧಿಗಳು, ಹಣವಂತರು, ಧಾಮರ್ಿಕ ಮುಖಂಡರು ಹೀಗೆ ಎಲ್ಲರನ್ನೂ ಓಲೈಸಬೇಕು; ಇವರಿಗೆಲ್ಲ ವೇದಿಕೆಯಲ್ಲಿ ಸೂಕ್ತ ಜಾಗವನ್ನು ದೊರಕಿಸಿಕೊಡಬೇಕು. ರಾಜಕೀಯ, ಸಾಹಿತ್ಯ, ಸಂಸ್ಕೃತಿ, ಪರಿಚಾರಿಕೆ-ಯಾವುದು ಯಾವುದರಲ್ಲಿ ಬೆರೆತುಹೋಗುತ್ತದೆಯೋ ಹೇಳುವುದು ಕಷ್ಟ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ವಿಚಾರದಲ್ಲೂ ‘ರಾಜಕೀಯ’ ನುಸುಳುವುದುಂಟು. ಕೆಲವೊಮ್ಮೆ ಅದರ ಕೈಮೇಲಾಗುವುದೂ ಉಂಟು. ಇದು ಇವತ್ತಿನದಲ್ಲ; ಹಿಂದಿನಿಂದಲೂ ಇಂಥ ಉದಾಹರಣೆಗಳು ಇವೆ. 1971ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ಕವಿ ಪ್ರೊ.ಎಂ.ಗೋಪಾಲಕೃಷ್ಣ ಅಡಿಗ ಅವರು ಬಹಿರಂಗವಾಗಿಯೇ ಟೀಕಿಸಿ ಲೇಖನ ಬರೆದರು. ‘.. .. ರತ್ನನ ಪದಗಳ’ ಪ್ರತಿಭಾವಂತ ಕತರ್ೃವಾದ ಶ್ರೀ ರಾಜರತ್ನಂ ಅವರಿಗೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಅರ್ಹತೆ ಇಲ್ಲವೋ?’ ಎಂದು ಅಡಿಗರು ಪ್ರಶ್ನಿಸಿದರು. ಇಂಥ ಟೀಕೆಗಳು ಆಗಾಗ ಬಂದಿವೆ. ಹೆಚ್ಚು ಅರ್ಹರಾದವರನ್ನು ಮೂಲೆಗೆ ಸರಿಸಿ, ಸಮ್ಮೇಳನಾಧ್ಯಕ್ಷರನ್ನು ಆಯ್ಕೆಮಾಡಿರುವ ಮತ್ತು ಈ ಕಾರಣಕ್ಕಾಗಿ ಪರಿಷತ್ತು ಸಾರ್ವಜನಿಕ ಟೀಕೆಗಳಿಗೆ ಒಳಗಾಗಿರುವ ಅನೇಕ ಸಂದರ್ಭಗಳು ಇತಿಹಾಸದಲ್ಲಿ ದಾಖಲಾಗಿವೆ. ಇಂಥ ಟೀಕೆಗಳನ್ನು ಗಂಭೀರವಾಗಿ ತೆಗೆದುಕೊಂಡು, ಸಮ್ಮೇಳನಾಧ್ಯಕ್ಷರ ಆಯ್ಕೆಯನ್ನು ಸಾಧ್ಯವಾದಷ್ಟೂ ಸಮರ್ಪಕವಾಗಿ ಮಾಡುವ ವಿಧಾನವನ್ನು ಪರಿಷತ್ತು ಈವರೆಗೂ ಕಂಡುಕೊಂಡಂತಿಲ್ಲ. ಅರ್ಹರಾದ ಅನೇಕ ಸಾಹಿತಿಗಳು ಇನ್ನೂ ಈ ಅವಕಾಶದಿಂದ ದೂರವೇ ಉಳಿದಿರುವುದು ಈಗಲೂ ಕಾಣಿಸುತ್ತಿದೆ. ಪರಿಷತ್ತು ಈ ಬಗ್ಗೆ ಮುಕ್ತವಾದ ಚಚರ್ೆಗೂ ಅವಕಾಶ ಮಾಡಿಕೊಟ್ಟಿಲ್ಲ. ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ದೋಷಗಳೇನಾದರೂ ಇರಬಹುದೇ, ಇದ್ದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು? ಈ ಬಗ್ಗೆ ಪರಿಷತ್ತು ಚಿಂತಿಸಬೇಕು. ಪರಿಷತ್ತಿನ ಪದಾಧಿಕಾರಿಗಳಲ್ಲೇ ಗುಂಪುಗಾರಿಕೆ, ತಮಗೆ ಬೇಕಾದ ಸಾಹಿತಿಗೆ ಈ ಗೌರವ ದಕ್ಕುವಂತೆ ನೋಡಿಕೊಳ್ಳುವ ಹುನ್ನಾರ. ಇವೆಲ್ಲದರಿಂದ ಮುಕ್ತವಾದಾಗಲೇ ಈ ಗೌರವಕ್ಕೆ ಹೆಚ್ಚಿನ ಬೆಲೆ ಬರುತ್ತದೆ.
ಇನ್ನು ಸಾಹಿತ್ಯ ಸಮ್ಮೇಳನಗಳಲ್ಲಿ ಗುಣಾತ್ಮಕ ಚಚರ್ೆ, ಸಂವಾದ, ಚಿಂತನೆಗಳು ನಡೆಯುತ್ತಿವೆಯೇ? ಕನ್ನಡಿಗರ ಮುಖ್ಯ ಸಮಸ್ಯೆಗಳು, ಭಾಷೆ, ಸಾಹಿತ್ಯ, ಸಾಹಿತ್ಯದಲ್ಲಾಗುತ್ತಿರುವ ಹೊಸ ಹೊಸ ಬೆಳವಣಿಗೆಗಳು, ಬಿಕ್ಕಟ್ಟುಗಳು, ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಪಲ್ಲಟಗಳು, ಅದರಿಂದ ಕನ್ನಡಕ್ಕಾಗುತ್ತಿರುವ ತೊಂದರೆಗಳು, ಮಾಧ್ಯಮಗಳಲ್ಲಿ ಬಳಕೆಯಾಗುತ್ತಿರುವ ಕನ್ನಡ, ಮುಚ್ಚುತ್ತಿರುವ ಕನ್ನಡ ಶಾಲೆಗಳು ಹೀಗೆ ಕಾಲದಿಂದ ಕಾಲಕ್ಕೆ ಕನ್ನಡದ ಸಮಸ್ಯೆಗಳು ಹೆಚ್ಚು ಸಂಕೀರ್ಣಗೊಳ್ಳುತ್ತಿವೆ. ಇವುಗಳ ಗಂಭೀರ ಚಚರ್ೆ ಸಮ್ಮೇಳನಗಳಲ್ಲಿ ಆಗುತ್ತಿವೆಯೇ? ಇವುಗಳ ಗುಣಮಟ್ಟ ಹೇಗಿದೆ? ಅನೇಕ ಒತ್ತಡಗಳಿಗೆ ಮಣಿಯುವ ಯಾವ ಸಂಸ್ಥೆಯೂ ಗುಣಾತ್ಮಕ ಅಂಶಗಳನ್ನು ಉಳಿಸಿಕೊಳ್ಳುವುದು ಕಷ್ಟ. ಪರಿಷತ್ತು ಈ ಸಂಕಟದಿಂದ ಪಾರಾಗಿಲ್ಲ ಎಂಬುದು ಸಮ್ಮೇಳನಗಳನ್ನು ನೋಡಿದವರಿಗೆ ನಿಚ್ಚಳವಾಗಿ ಕಾಣಿಸುತ್ತದೆ.
ರಾಜಕೀಯ ನಮ್ಮ ಬದುಕಿನ ಒಂದು ಮುಖ್ಯಭಾಗ ಎಂಬುದು ನಿಜ. ರಾಜಕಾರಣಿಗಳನ್ನು ಸಮ್ಮೇಳನಗಳಿಂದ ದೂರ ಇರಿಸಬೇಕಾದದ್ದಿಲ್ಲ. ಆದರೆ ಅವರು ಇಂಥ ಸಮ್ಮೇಳನದ ವೇದಿಕೆಗಳಲ್ಲಿಯೇ ಮೆರೆಯಬೇಕಾದದ್ದು ಇಲ್ಲ. ಕೇಳುಗರ ನಡುವೆಯೇ ಕುಳಿತು ಎಲ್ಲವನ್ನೂ ಗಮನಿಸಬಹುದು; ಕನ್ನಡದ ಸಮಸ್ಯೆಗಳೇನು ಎನ್ನುವುದನ್ನು ತಿಳಿದುಕೊಳ್ಳಬಹುದು; ಅವುಗಳ ಪರಿಹಾರಕ್ಕೂ ಚಿಂತನೆ ನಡೆಸಬಹುದು. ಈ ಪಾಠವನ್ನು ಪರಿಷತ್ತು ರಾಜಕೀಯ ವ್ಯಕ್ತಿಗಳಿಗೆ ಕಲಿಸಬಹುದು. ಪರಿಷತ್ತು ಅದಕ್ಕೆ ಸಿದ್ಧವಿರಬೇಕಲ್ಲ. ಅದಕ್ಕೆ ಬೆನ್ನೆಲುಬು ಗಟ್ಟಿಯಾಗಿರಬೇಕು.
ಸಮ್ಮೇಳನದ ಸಿದ್ಧತೆಗೆ ಕೊಡುವಷ್ಟು ಗಮನವನ್ನು ಪರಿಷತ್ತು ಸಮ್ಮೇಳನದ ಗುಣಾತ್ಮಕ ಅಂಶಗಳಿಗೆ ಕೊಡುವುದು ಯಾಕೆ ಸಾಧ್ಯವಾಗುವುದಿಲ್ಲ? ಈ ಬಗ್ಗೆ ಚಿಂತಿಸಿ ಸೂಕ್ತ ಸಲಹೆಗಳನ್ನು ಕೊಡಬಲ್ಲ ಸಮರ್ಥ ಪರಿಣತರ ನೆರವನ್ನು ಪರಿಷತ್ತು ಪಡೆದುಕೊಂಡಾಗ ಇದೆಲ್ಲ ಸಾಧ್ಯವಾಗುತ್ತದೆ. ಕೆಲವರ ಅಧಿಕಾರಾವಧಿಯಲ್ಲಿ ಇಂಥ ನೆರವಿಗೆ ಅವಕಾಶವಿತ್ತು.
ಆರಂಭದ ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡದ ಮಹತ್ವದ ಲೇಖಕರು, ವಿದ್ವಾಂಸರು, ಸಂಶೋಧಕರು, ಕನ್ನಡದ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಉಳ್ಳವರು ಇರುತ್ತಿದ್ದರು. ಅಲ್ಲಿ ಹಣವಿರಲಿಲ್ಲ; ಕೀತರ್ಿ ಸಿಕ್ಕುತ್ತಿರಲಿಲ್ಲ. ಬೇರೆಯ ಲಾಭಗಳೂ ಇರಲಿಲ್ಲ. ಕನ್ನಡದ ಸೇವೆ ಇದು ಎಂಬ ಭಾವನೆಯಲ್ಲಿಯೇ ಅವರು ದುಡಿಯುತ್ತಿದ್ದರು. ಕನ್ನಡ ಭಾಷೆ, ಸಾಹಿತ್ಯಕ್ಕೆ, ಕನ್ನಡಿಗರಿಗೆ ಒಳಿತಾಗಲಿ ಎಂಬುದಷ್ಟೆ ಅವರ ಧ್ಯೇಯವಾಗಿತ್ತು. ಇವತ್ತು ಚಿತ್ರವೇ ಬೇರೆಯಾಗಿದೆ. ಪರಿಷತ್ತಿನಲ್ಲಿ ಸಾಕಷ್ಟು ಹಣ ಹರಿದಾಡುತ್ತಿದೆ. ಇದೊಂದು ಪ್ರತಿಷ್ಠಿತ ಸಂಸ್ಥೆಯಾಗಿದೆ. ಪರಿಪತ್ತಿನ ಅಧ್ಯಕ್ಷ ಪದವಿಗೆ ಮತ್ತು ಇತರ ಪದಾಧಿಕಾರಿಗಳ ಆಯ್ಕೆಗಾಗಿ ನಡೆಯುವ ಚುನಾವಣೆಯನ್ನು ಗಮನಿಸಿದರೆ ಇದೆಲ್ಲ ಗೊತ್ತಾಗುತ್ತದೆ. ಈ ಚುನಾವಣೆಯಲ್ಲಿಯೂ ಗುಂಪುಗಾರಿಕೆ, ಹಣದ ದುಂದು, ಬಗೆಬಗೆಯ ಪಟ್ಟುಗಳು ಕಾಣಿಸುತ್ತವೆ. ಈ ‘ರಾಜಕೀಯ’ವನ್ನು ನೋಡಿ ವೃತ್ತಿಪರ ರಾಜಕಾರಣಿಗಳೂ ಬೆಚ್ಚಬೇಕು.
ಪರಿಷತ್ತಿನ ಸತ್ವ ತೀರಿಹೋಗಿದೆ, ಈ ಪರಿಷತ್ತನ್ನು ರಿಪೇರಿ ಮಾಡುವುದು ಆಗದ ಮಾತು, ಇದಕ್ಕೆ ಪಯರ್ಾಯವಾಗಿ ಹೊಸದೊಂದು ಸಂಸ್ಥೆಯನ್ನೇ ಹುಟ್ಟುಹಾಕಬೇಕು ಎಂಬ ಮಾತುಗಳಂತೂ ಅನೇಕ ಪ್ರಮುಖ ಸಾಹಿತಿಗಳಿಂದ ಆಗಾಗ ಕೇಳಿಬಂದಿವೆ. ಚಚರ್ೆ, ಚಿಂತನೆಗಳೂ ಸಾಹಿತ್ಯವಲಯದಲ್ಲಿ ನಡೆದಿವೆ. ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡದ್ದೇ ಇಂಥ ಒಂದು ಚಿಂತನೆಯ ಫಲವಾಗಿ. ಇದು ಕನ್ನಡ ಸಾಹಿತ್ಯದ ದಿಕ್ಕನ್ನು ಬದಲಿಸಿತು ಎಂಬುದು ಈಗ ಸ್ಪಷ್ಟ. ಲಂಕೇಶ್ ಮತ್ತು ಅವರ ಮಿತ್ರರು ಬೆಂಗಳೂರಿನಲ್ಲಿ ನಡೆಸಿದ ಸಮ್ಮೇಳನವೂ ಇಂಥ ಪ್ರಯತ್ನವೇ. ಇವಲ್ಲದೆ ಇನ್ನೂ ಕೆಲವು ಪಯರ್ಾಯ ಸಾಹಿತ್ಯ ಸಮ್ಮೇಳನಗಳು ಹೆಚ್ಚಿನ ಹಣಕಾಸು ಇಲ್ಲದೇ ನಡೆದಿವೆ. ಇಂಥ ಮೇಳಗಳಲ್ಲಿ ಸಾಹಿತ್ಯಕ್ಕೆ ಸಿಕ್ಕ ಪ್ರಾಮುಖ್ಯತೆ ಅರ್ಥಪೂರ್ಣ ಚಿಂತನೆಗಳನ್ನು ಹುಟ್ಟುಹಾಕಿರುವುದು ನಿಜ. ಹೊಸ ಬರಹಗಾರರಿಗೆ, ಹೊಸ ಹುಮ್ಮಸ್ಸಿಗೆ ಇವೆಲ್ಲ ದಾರಿಮಾಡಿಕೊಟ್ಟಿವೆ. ಸಾಹಿತ್ಯದಲ್ಲಿ ಹೊಸ ನೀರು ಹರಿಯಲು ಇವೆಲ್ಲ ಕಾರಣವಾಗಿವೆ. ಇದನ್ನು ಪರಿಷತ್ತು ಗಮನಿಸಿದೆಯಾ? ಅಂಥ ಸಂವೇದನೆಯನ್ನು ಅದು ಇನ್ನೂ ಉಳಿಸಿಕೊಂಡಿದೆಯಾ?
ಜಡತೆ ಎನ್ನುವುದು ವ್ಯಕ್ತಿಗಳಿಗೂ, ಸಂಸ್ಥೆಗಳಿಗೂ ಸಹಜವಾದದ್ದು. ಜಡ ಸಂಸ್ಥೆಗಳನ್ನು ಸಂಪೂರ್ಣವಾಗಿ ಕೊಂದುಹಾಕಬೇಕಾಗಿಲ್ಲ. ಜಡತೆಯನ್ನು ಹೊಡೆದೋಡಿಸಿದರೆ ಸಾಕು. ಅಲ್ಲಿ ಹೊಸ ಹುಮ್ಮಸ್ಸು ತುಂಬಿಕೊಳ್ಳಬಹುದು. ಜಡತೆ ತನ್ನಲ್ಲಿರುವುದನ್ನು ವ್ಯಕ್ತಿಯಾಗಲೀ, ಸಂಸ್ಥೆಯಾಗಲೀ ಮೊದಲು ಅರಿಯಬೇಕಾಗುತ್ತದೆ.



Really it is a very good article.
Nimma e nudi parishath annu echharisi hosa dikkinalli punar manana madikolluvanthagali