’ಸತ್ಯಾನೇ ಹೇಳ್ಬೌದಿತ್ತಪ್ಪ, ಲಾಭಕ್ಕೆ ಕತ್ತರಿ ಬೀಳುತ್ತದೆ, ಡಬ್ಬಿಂಗ್ ಬೇಡ ಅಂತಾ..’

ರಮೇಶ್ ಚೀಮಾಚನಹಳ್ಳಿ

ಕನ್ನಡ ಚಿತ್ರರಂಗದ ಬಹಳಷ್ಟು ಮಂದಿ (ಮೇಲ್ನೊಟಕ್ಕೆ ಕಾಣುವಂತೆ) ಡಬ್ಬಿಂಗನ್ನ ವಿರೋದಿಸಿ ಬೀದಿಗಿಳಿದು ಹೋರಾಟ ಮಾಡಿದ್ರು. ಕಲಾವಿದರು, ತಂತ್ರಜ್ಞರು ಮತ್ತು ಸಿನಿಮಾವನ್ನೆ ಬದುಕಾಗಿಸಿಕೊಂಡು ದುಡಿಯುತ್ತಾ ಬಂದ ಸಹಾಯಕರು, ಹೀಗೆ ಎಲ್ಲರು ಒಟ್ಟಿಗೆ ಸೇರಿ ರೋಡ್ ಶೋ ಮಾಡಿ ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲು ‘ಜನಮರುಳೊ ಜಾತ್ರೆ ಮರುಳೊ’ ಅನ್ನೊ ಸನ್ನಿವೇಶ ಸೃಷ್ಟಿಮಾಡಿದ್ರು. ಇಷ್ಟೇ ಅಲ್ಲದೆ ಈ ಪ್ರತಿಭಟನೆಗೆ ‘ಕನ್ನಡ ಪರ ಸಂಘಟನೆಗಳ ಒಕ್ಕೂಟ’ ಬೆಂಬಲ ಸೂಚಿಸಿ, ‘ವಾಟಾಳ್ ನಾಗರಾಜ್’ ಕೂಡ ಜೊತೆಯಾಗಿದ್ದು ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು, ದುಡಿಯುತ್ತಿರುವವರು ಮತ್ತು ಕನ್ನಡಪರ ಸಂಘಟನೆಗಳು ಒಟ್ಟಿಗೆ ಬಂದು ಮಾಡಿದ ಹೋರಾಟದ ಕಾರಣಕ್ಕೆ, ಹಾಗೆ ಡಬ್ಬಿಂಗನ್ನು ವಿರೋಧಿಸಲು ಅವರು ನೀಡಿದ ಕಾರಣಗಳನ್ನು ಗಮನಿಸಿದಾಗ ನನಗೆ ಒಂದಿಷ್ಟು ಕುತೂಹಲ ಮತ್ತು ಕೆಲವು ಪ್ರಶ್ನೆಗಳು ಒಟ್ಟಿಗೆ ಹುಟ್ಟಿಕೊಂಡವು. ಡಬ್ಬಿಂಗಿನಿಂದ ‘ನಮ್ಮ ಸಂಸೃತಿ’ಯ ಮೇಲೆ ದುಷ್ಪರಿಣಾಮಗಳುಂಟಾಗುತ್ತವೆ, ‘ಕನ್ನಡ ಭಾಷೆ’ಯ ಬೆಳವಣಿಗೆಗೆ ಮಾರಕವಾಗುತ್ತದೆ ಮತ್ತು ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವವರು ಕೆಲಸ ಕಳೆದುಕೊಳ್ಳುತ್ತಾರೆ, ಇವು ಪ್ರತಿಭಟನಾನಿರತರು ನೀಡುವ ಮುಖ್ಯ ಕಾರಣಗಳು. ನನಗೆ ಈ ಕಾರಣಗಳನ್ನು ಒಟ್ಟಿಗೆ ನೊಡುವುದಕ್ಕಿಂತ ಬಿಡಿಬಿಡಿಯಾಗಿ ಗಮನಿಸುವುದು ಸೂಕ್ತ ಅನಿಸುತ್ತೆ. ಸಂಸ್ಕೃತಿಯ ಬಗ್ಗೆ ಮಾತಾಡೊ ಮೊದ್ಲು, ‘ನಮ್ಮ ಸಂಸ್ಕೃತಿ’ ಅನ್ನೊ ಆ ಸಂಸ್ಕೃತಿ ಯಾವುದೆಂದು ವ್ಯಾಖ್ಯಾನಿಸುವ ಅಗತ್ಯತೆ ಇದೆ ಅನಿಸುತ್ತೆ.

ನಾನು ತಿಳಿದಿರುವಂತೆ ಹೇಳೊದಾದ್ರೆ ಸಂಸ್ಕೃತಿ ಯಾವಾಗಲು ಚಲನಶೀಲವಾದದ್ದು ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾದದ್ದು ಮಾತ್ರವಲ್ಲ ಒಂದೇ ಪ್ರದೇಶದಲ್ಲಿ ಹಲವು ಸಂಸ್ಕೃತಿಗಳೂ ಕೂಡ ಇರಬಹುದು. ಆಯಾ ಹಿನ್ನೆಲೆಗಳ ಕಾರಣಕ್ಕೆ  ಅವರ ಒಪ್ಪಿತ ಮೌಲ್ಯಗಳು ಕೂಡ ಬೇರೆ ಬೇರೆಯಾಗಿರುತ್ತವೆ ಅಲ್ವ..? ಉದಾಹರಣೆಗೆ ತಂದೆ ಮತ್ತು ಮಗನ ನಡುವಣ ಅತಿಸ್ನೇಹಯುತ ಸಂಬಂದವನ್ನು ಇಬ್ಬರು ಒಟ್ಟಿಗೆ ಕೂತು ‘ಕುಡಿಯುತ್ತಿರುವ’ ದೃಶ್ಯದ ಮೂಲಕ ನಿರೂಪಿಸಿದಾಗ ಒಂದು ಹಿನ್ನೆಲೆಯ ಜನಕ್ಕೆ ಒಪ್ಪಿಗೆಯಾದ್ರೆ ಮತ್ತೊಂದು ಹಿನ್ನೆಲೆಯ ಜನಕ್ಕೆ ಅದು ಅಕ್ಷಮ್ಯ ಅಪರಾದ…ಇದನ್ನು ಒಪ್ಪೊದಾದ್ರೆ… ನಮ್ಮ ಸಿನಿಮಾಗಳು ‘ಯಾವ ಸಂಸೃತಿಯ ಒಪ್ಪಿತ ಮೌಲ್ಯಗಳ ಮೇಲೆ ಆಧಾರವಾಗಿರುತ್ತವೆ..?’ ಅನ್ನೊ ಪ್ರಶ್ನೆ ನನಗೆ ಕಾಡುತ್ತೆ. ಒಟ್ಟಿನಲ್ಲಿ ನನಗನ್ಸೋದು ಸಂಸೃತಿಯನ್ನು ಒಂದು ಚೌಕಟ್ಟಿನಲ್ಲಿ ಹಾಕಿ ವ್ಯಾಖ್ಯಾನಿಸೊದು ಕಷ್ಟ ಅಂತ, ಒಂದು ವೇಳೆ ವೈವಿದ್ಯಮಯ ಸಂಸೃತಿಗಳನ್ನು ಸಾಮಾನ್ಯೀಕರಿಸಿ ಕೆಲವು ಮಾನದಂಡಗಳ ಚೌಕಟ್ಟೊಂದನ್ನ ಮಾಡಿಕೊಂಡರೂ ಅದರ ಮಿತಿಯಲ್ಲಿ ಕನ್ನಡದ ಎಷ್ಟು ಸಿನಿಮಾಗಳು ಬರುತ್ತವೆ, ಅನ್ನೊದನ್ನು ಯೋಚಿಸಬೇಕು. ಜೊತೆಗೆ ಡಬ್ಬಿಂಗನ್ನ ವಿರೋಧಿಸುವವರು, ‘ನಮ್ಮ ಸಂಸೃತಿಗೆ ಮಾರಕವಾದ ಚಿತ್ರಗಳನ್ನು ಮಾತ್ರ ವಿರೋಧಿಸಬೇಕಿತ್ತೇ ಹೊರತು ಎಲ್ಲ ಚಿತ್ರಗಳನ್ನಲ್ಲ! ಸಾಮಾನ್ಯವಾಗಿ ಯಾವುದಾದರು ಚಿತ್ರದಲ್ಲಿ ನಾನು ಮೇಲೆ ಹೇಳಿದ ರೀತಿಯ ದೃಶ್ಯವೊಂದು ಚರ್ಚೆಗೆ ಬಂದ್ರೆ ‘ಅದು ಕಥೆಗೆ ಅಗತ್ಯವಿತ್ತು, ಇಡೀ ಸಿನಿಮಾವನ್ನು ನೋಡಿದರೆ ಅದರ ಅಗತ್ಯತೆ ಅರ್ಥವಾಗುತ್ತದೆ’ ಅಂತೆಲ್ಲಾ ಹೇಳುತಾರೆಯೇ ಹೊರತಾಗಿ ಸಂಸೃತಿಯ ಬಗ್ಗೆ ಮಾತಾಡಲ್ಲಾ..

ಇನ್ನೊಂದು ವಿಷಯ ಹಂಚಿಕೊಳ್ಳೊದಾದ್ರೆ, ನಾನು ಹುಟ್ಟಿ ಬೆಳೆದ ಹಳ್ಳಿಗಾಡಿನಲ್ಲಿ ’ಟಿವಿ, ಸಿನಿಮಾ ನೋಡಿ ಎಲ್ರು ಹಾಳಾಗೊದ್ರು..’ ಅನ್ನೊ ಮಾತೊಂದಿದೆ, ಜೊತೆಗೆ ಸಿನಿಮಾ ನೊಡೋರು ಅಂದ್ರೇ ಸೋಮಾರಿಗಳು ಇಲ್ಲಾ ಪೋಲಿ ಹುಡುಗ್ರು ಅಂತಾರಲ್ಲಾ… ಅಂದ್ರೆ ಸಿನಿಮಾ ನಮ್ಮ ಸಂಸೃತಿಯ ಭಾಗವಾಗಿ ಪೂರ್ತಿ ಒಪ್ಪಿತವಾಗಿಲ್ವಾ..? ಇದನ್ನ ನಾನು ಹೇಗೆ ಅರ್ಥ ಮಾಡ್ಕೊಳ್ಲಿ..?. ಇರಲಿ ಈ ಮಾತಲ್ಲಿರೊ ಸರಿತಪ್ಪುಗಳ ಚರ್ಚೆಗೆ ಇದು ಸಮಯ ಅಲ್ಲಾ..

ಇನ್ನು ಭಾಷೆ ಹಾಳಾಗೊ ವಿಷ್ಯ, ಕನ್ನಡ ಭಾಷೆ ಅಂದ್ರೆ ಚಿತ್ರರಂಗ ಮಾತ್ರಾನಾ..? ಇರಲಿ..ಕನ್ನಡ ಭಾಷೆಯ ಬೆಳವಣಿಗೆಗೆ ಎಲ್ಲಾ ಕಲೆಗಳೂ ಪೂರಕವಾಗಿರುತ್ತಾವಾದರೆ ಈ ರೀತಿಯ ಭಾಷೆಯ ಬೆಳವಣಿಗೆಗೆ ಸಿನಿಮಾದಂತಹ ಮಾಧ್ಯಮದಲ್ಲಿ ಬಳಸಲು ಸಾದ್ಯವಾಗುವ ಕನ್ನಡಿಗರದೇ ಆದ ಯಕ್ಷಗಾನ, ಜಾನಪದ ನೃತ್ಯದಂತಹ ಅದೆಷ್ಟು ಕಲೆಗಳು ಬಳಸಿದ್ದಾರೆ..? ಹೀಗೆ ಕೇಳಿದರೆ ಕಥೆಗೆ ಅವುಗಳು ಪೂರಕವಾಗಿದ್ದರೆ ಬಳಸಿಕೊಳ್ಳುತ್ತೇವೆ ಅನ್ನೊ ನಿರಾಯಾಸದ ಉತ್ತರ ಕೊಡಬಹುದು ಆದ್ರೆ ಅಂತಹ ಕಥೆಗಳೇಕೆ ಸಿನಿಮಾ ಆಗೊದಿಲ್ಲಾ..? ಇದನ್ನೆ ಸಂಕ್ಷಿಪ್ತವಾಗಿ ಹೇಳೋದಾದ್ರೆ ನಮ್ಮ ಕನ್ನಡ ಸಾಹಿತ್ಯದ ಹಮ್ಮೆಯ ಕಾದಂಬರಿಗಳು ಎಷ್ಟು ಸಿನಿಮಾಗಳಾಗಿವೆ…? ‘ಗೋಡೆಗೆ ಗೂಟ ಹೊಡೆದು ಕನ್ನಡ ತಾಯಿಯ ಪೋಟೋ ನೇತಾಕಿ ಪೂಜಿಸಿದರೆ ಅಥವಾ ಬಾವುಟ ಹಿಡಿದು ಬೀದಿಯಲ್ಲಿ ಪ್ರತಿಭಟಿಸಿದರೆ ಭಾಷೆ ಬೆಳೆಯೊಲ್ಲಾ. ಬದಲಾಗಿ ಬಳಸಬೇಕು ಅಲ್ವಾ..?’ ಹೀಗೇನಾದ್ರು ಕೇಳಿದ್ರೆ ‘ಪ್ರೇಕ್ಷಕ ಪ್ರಭು ನೋಡಬೇಕಲ್ಲಾ..!’ ಅಂತ ಹೇಳಿ ಕೈ ತೊಳೆದುಕೊಳ್ಳಬಹುದು.

ಆದರೆ ಪ್ರೇಕ್ಷಕರಿಗೆ ಇದನ್ನ ಅಭ್ಯಾಸ ಮಾಡಿಸುವ ಗೋಜಿಗೇ ಹೋಗದೆ ಇಂದು ನೋಡುವುದಿಲ್ಲಾ ಅಂತ ಹೇಳಿದ್ರೆ ಹೇಗೆ ಸ್ವಾಮಿ..? ಹಾಗೆ, ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ವಿಷಯಕ್ಕೆ ಬಂದ್ರೆ, ಇದು ಬರಿ ಚಿತ್ರರಂಗಕ್ಕೆ ಮಾತ್ರ ಮೀಸಲಾಗಿರುವ ಕಥೆಯಲ್ಲ, ಪ್ರತಿ ದಿನ ಪ್ರತಿ ಕ್ಷಣ ಅಭಧ್ರತೆಯ ಆತಂಕದಲ್ಲೆ ಬದುಕುತ್ತಿರುವ ಎಲ್ಲ ಕ್ಷೇತ್ರದ ದುಡಿಯುವ ವರ್ಗದವರ ಕಥೆ ಇದು. ನಮಗೆ ತಿಳಿದಿರುವ ಹಾಗೆ ಸಿನಿಮಾರಂಗದಲ್ಲೆ ದುಡಿಸುವವರು, ದುಡಿಯುವವರು ಎಲ್ಲರೂ ಇದ್ದಾರೆ. ಆದರೆ ಇವರಿಬ್ಬರ ಆತಂಕಗಳು ಬೇರೆಬೇರೆ. ಸಿನಿಮಾವನ್ನೆ ಬದುಕಾಗಿಸಿಕೊಂಡು ದುಡಿಯುತ್ತಿರುವ ಅದೆಷ್ಟೊ ಮಂದಿಗೆ ಇದು ಹಸಿವಿನ ಪ್ರಶ್ನೆ, ಮತ್ತೆ ಮೇಲ್ಪಂಕ್ತಿಯ ತಂತ್ರಜ್ಞರಿಗೆ, ನಟನಟಿಯರಿಗೆ, ಪ್ರತಿಷ್ಠಿತ ಬ್ಯಾನರ್ಗಳಿಗೆ ಲಾಭದ ಪ್ರಶ್ನೆ. ಇವರು ಹೇಳಿದಂತೆ ಕನ್ನಡ ಚಿತ್ರಗಳ ಸಂಖ್ಯೆ ಕಡಿಮೆಯಾದರೆ (ಸಿನಿಮಾ)ಬದುಕು ಕಳೆದುಕೊಳ್ಳುವವರು ದುಡಿಯುವ ವರ್ಗವೇ.. ಆದರೆ ತೆರೆಯ ಹಿಂದೆ ದುಡಿಯುವ ಇವರೆಲ್ಲರಿಗೂ ಪರ್ಯಾಯವಾದ, ಇದರಷ್ಟೆ ಆರ್ಥಿಕವಾಗಿ ಸಾಥ್ ನೀಡುವ ಬೇರೊಂದು ಕೆಲಸವನ್ನು ಹುಡುಕಿಕೊಳ್ಳುವ ಮತ್ತು ದುಡಿಯುವ ತಾಖತ್ತು ಇದೆ. ಸಾಧ್ಯವಾದರೆ ಇಂಥದೊಂದು ಧೈರ್ಯವನ್ನ ಮೇಲ್ಪಂಕ್ತಿಯ ಆ ಜನ ತೋರಲಿ ನೋಡೋಣ.. ಸರಿ ಇಂದು ಸಿನಿಮಾ ರಂಗದಲ್ಲಿರುವ ವಿವಿಧ ವರ್ಗಗಳ ನಡುವಿನ ಸಂಬಂಧ ಹೇಗಿದೆ, ಯಾಕಿದನ್ನು ಹೇಳುತ್ತಿದ್ದೀನೆಂದರೆ, ಕೆಲಸ ಕೊಡುವ ಮಂದಿಗೂ ಕೆಲಸ ಮಾಡುವ ಮಂದಿಗೂ ಇರುವ ನಡುವಿನ ಅಂತರಗಳು ದುಡಿಯುವ ವರ್ಗದ ಜನರ ಆತಂಕವನ್ನ ಹೆಚ್ಚಿಸುತ್ತವೆಯಲ್ಲವೆ? ದುಡಿಯುವ ಮಂದಿಯ ಕಷ್ಟಸುಖಗಳಿಗೆ ಅವರೆಷ್ಟು ಮಟ್ಟಿಗೆ ಸ್ಪಂದಿಸುತ್ತಾರೆ..?

ಒಬ್ಬ ಲೈಟ್ ಬಾಯ್  ಅವನ ಜೀವಿತಾವಧಿಯಲ್ಲಿ ಎಂದೂ ಕೆಲಸ ಮಾಡಲಾರ ಎಂದಾದರೆ ಅಂತಹ ಸಂದರ್ಭದಲ್ಲಿ ದುಡಿಸುವವರ ಪ್ರತಿಕ್ರಿಯೆ ಏನು..? ಇಂತಹ ಸಾವಿರ ಸಾವಿರ ಪ್ರಶ್ನೆಗಳು ನನ್ನನು ಕಾಡುತ್ತವೆ…ನಾನು ಇಷ್ಟನ್ನ ಮಾತ್ರ ಹೇಳಿ ಸುಮ್ಮನಾದರೆ ‘ವಿಷಯಾಂತರಿ’ ಅಂತಲೋ, ‘ವಿತಂಡವಾದಿ’ ಅಂತಲೋ ಅಂದುಕೊಂಡು ಸುಮ್ಮನಾಗಿಬಿಡಬಹುದು. ಆದರೆ ನನಗೆ ಈ ಯಾವ ಉದ್ದೇಶವೂ ಇಲ್ಲ. ಅಲ್ಲದೆ ನನಗೂ ಚಿತ್ರರಂಗಕ್ಕೂ ಅಂತ ಸಂಬಂಧವಾಗಲಿ, ವೈಷಮ್ಯವಾಗಲಿ ಇಲ್ಲ. ನನ್ನ ಸುತ್ತಲ ಸಮಾಜದ ಸದ್ಯದ ವಾಸ್ತವತೆಯನ್ನಿಟುಕೊಂಡು ಒಂದಿಷ್ಟನ್ನ ಬರೆಯುತ್ತಿದ್ದೇನಷ್ಟೆ. ವಾಸ್ತವದಲ್ಲಿ ಪ್ರತಿಭಟನಾಕಾರು ನೀಡಿದ ಯಾವ ಕಾರಣಗಳು ಕೇವಲ ಸಿನಿಮಾರಂಗಕ್ಕೆ ಸೀಮಿತವಾದವೂಗಳೂ ಅಥವಾ ಹೊಸ ವಿಷಯಗಳೊ ಅಲ್ಲವೇ ಅಲ್ಲ. ಸಾಂಸ್ಕೃತಿಕ ಸಂಘರ್ಷ ಸಾಮಾಜೀಕರಣಗೊಂಡ ಮಾನವ ಸಂತತಿ ಬದುಕಲು ಪ್ರಾರಂಭಿಸಿದಂದಿನಷ್ಟು ಹಳೆಯದು. ಅಂದಿನಿಂದ ಇಂದಿನವರೆಗೂ ಪ್ರಬಲರು ನಿರ್ದೇಶಿಸುವ ಮತ್ತು ಒಪ್ಪುವ ಮೌಲ್ಯಗಳೇ ಸಂಸ್ಕೃತಿ ಎಂಬಂತೆ ಬಿಂಬಿಸುತ್ತಾ ಬಂದಿದ್ದು, ಅದಕ್ಕೆ ಪ್ರತಿರೋಧಗಳೂ ಕೂಡ ಅಯಾ ಕಾಲಘಟ್ಟದಲ್ಲೆ ವ್ಯಕ್ತವಾಗುತ್ತಲೇ ಬಂದಿವೆ. ಮುಖ್ಯವಾಹಿನಿಯಲ್ಲಿ ಬಿಂಬಿಸಲ್ಪಡುವ ಆ ‘ನಮ್ಮ ಸಂಸ್ಕೃತಿ’ ಪರಸ್ಪರತೆ, ಸಮನ್ವಯತೆಗಳ ಆಧಾರದ ಮೇಲೆ ಕಟ್ಟಿಕೊಂಡದ್ದಾಗಿದ್ದು, ಜೊತೆಗೆ ಬದುಕುವ ಯಾರೊಬ್ಬರನ್ನು ಭಾಷೆಯ ಕಾರಣಕ್ಕೊ, ಧರ್ಮದಕಾರಣಕ್ಕೋ, ಜಾತಿ, ಬಣ್ಣದ ಕಾರಣಕ್ಕೋ ಅನುಮಾನಿಸಿ, ಅವಮಾನಿಸುವ ಮೌಲ್ಯಗಳನ್ನು ಬಿತ್ತದಿದ್ದರೆ ಸಾಕು, ನಾನದನ್ನ ಅಂದು ‘ನನ್ನ ಸಂಸ್ಕೃತಿ’ ಎಂದು ಒಪ್ಪಿಕೊಳ್ಳುತ್ತೇನೆ.  ಇಂತದೇ ವಿಚಾರಗಳನ್ನು ಬಿತ್ತುವ ಮತ್ತು ಪ್ರೋತ್ಸಹಿಸುವ ಯಾವುದೇ ಚಿತ್ರಗಳು ನನಗೆ ಹತ್ತಿರವಾಗುತ್ತವೆ.

ಅಲ್ದೆ, ನಮ್ಮ ನಿಮ್ಮಂತೆಯೆ ಬದುಕುತ್ತಿರುವ ನಮ್ಮವರು, ಇವರು ನೀಡಿದ ಕಾರಣಗಳಾದ ಸಂಸ್ಕೃತಿ, ಬಾಷೆ, ಮತ್ತು ಬದುಕಿನ ಅಗತ್ಯತೆಗಾಗಿ ಪ್ರತ್ಯೇಕವಾಗಿ ಪ್ರತಿದಿನವೂ ಪ್ರತಿಭಟಿಸುತ್ತಿದ್ದಾರೆ, ‘ಆದಿವಾಸಿಗಳು ನಮ್ಮ ಸಂಸ್ಕೃತಿಯ ಮೇಲೆ ನಿಮ್ಮ ಡಬ್ಬಾಳಿಕೆ ಬೇಡ’ ಅಂತ, ‘ನೆರೆ ಬಾಷಿಕರು ನಮ್ಮನು ನಮ್ಮ ಪಾಡಿಗೆ ಬದುಕಲು ಬಿಡಿ’ ಅಂತ, ‘ಸರ್ಕಾರದ ಬೃಹತ್ ಅಭಿವೃದ್ದಿ ಯೋಜನೆಗಳು ಬಂದಾಗ ರೈತರು ನಮ್ಮ ಜೀವನಾಧಾರವಾದ ಭೂಮಿಯನ್ನು ಬಿಟ್ಟುಬಿಡಿ’ ಅಂತ ಗೊಗರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಚಿತ್ರರಂಗದ ನಿಲುವು ಏನೆಂದು ಎಂದು ಸ್ಪಷ್ಟವಾಗಿಲ್ಲ. ಬಹುಶಃ ಆಗ ಒಂದು ಕ್ಷಣ ಮರುಗಿದರು ಸಾಕು ಅಂತಹವರಿಗೆ ಇವೆಲ್ಲವನ್ನು ಮಾತನಾಡುವ ನೈತಿಕತೆ ಇದೇ ಅಂತ ನಾನೆಂದುಕೊಳ್ಳುತ್ತೇನೆ. ಬೀದಿಗಿಳಿದು ಕೂಗಾಡಿದ ನಟನೊಬ್ಬನ ಸಂದರ್ಶನ ನೋಡುತ್ತಿದ್ದೆ, ‘ನೀವೇಕೆ ಕನ್ನಡ ಸಿನಿಮಾವನ್ನ ಪರಬಾಷೆಗೆ ಡಬ್ಬಿಂಗ್ ಮಾಡುತ್ತೀರಾ..?’ ಅಂತ ಸಂದರ್ಶಕರು ಪ್ರಶ್ನಿಸಿದರೆ ಅದಕ್ಕವರು ಹೇಳಿದ ಉತ್ತರ ಏನುಗೊತ್ತಾ ‘ಅವರೂ ಡಬ್ಬಿಂಗ್ ನಿಷೇಧಿಸಿ ಕಾನೂನು ಮಾಡಲಿ ಬಿಡಿ, ನಮಗೇನು ಬೇಜಾರಿಲ್ಲಾ, ಅಮೇಲೆ ನಾವೂ ಡಬ್ಬಿಂಗ್ ಮಾಡುವುದಿಲ್ಲಾ’ ಅಂತ… ನೀತಿ ಇದ್ದವರಿಗೆ ನಿಯಮದ ಅಗತ್ಯವಿಲ್ಲವೇನೊ ಅಲ್ವಾ..? ಇರಲಿ ಬಿಡಿ.ಇದನ್ನೆಲ್ಲ ನೋಡಿದಾಗ ನನಗನ್ನಿಸೊದಿಷ್ಟು… ಕನ್ನಡ ಚಿತ್ರರಂಗದಲ್ಲಿ ಲಾಭದ ಲೆಕ್ಕಾಚಾರದಲ್ಲಿರುವ ಜನರ ನಡುವಿನ ಕಂದಕ ಇಂತದೊಂದು ರೂಪ ಪಡೆದಿದೆ, ಪ್ರತಿಷ್ಠಿತ ಬ್ಯಾನರ್ಗಳಿಗೆ ಮಾತ್ರ ಉತ್ತಮ ತಂತ್ರಜ್ಞರು ಮತ್ತು ಜನಪ್ರಿಯ ಕಲಾವಿದರ ಲಭ್ಯತೆ ಇದ್ದು, ಇವರುಗಳಿಗೆ ಮಾತ್ರ ತಂತ್ರಜ್ಞರು ಮತ್ತು ಕಲಾವಿದರು ಅಪೇಕ್ಷಿಸಿದಷ್ಟು ಸಂಭಾವನೆ ಕೊಡಲು ಸಾದ್ಯವಾಗಿದೆ.

ಇದೇ ಕಾರಣದಿಂದ ಈ ಪ್ರತಿಷ್ಠಿತ ಬ್ಯಾನರ್ಗಳು ಮಾತ್ರ ಉತ್ತಮ(ಹಣ ಮಾಡಬಲ್ಲ) ಚಿತ್ರಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಇನ್ನುಳಿದಂತೆ ಸಿನಿಮಾವನ್ನೆ ಬದುಕಾಗಿಸಿಕೊಂಡ ಇತರರು ಡಬ್ಬಿಂಗನ್ನಾದರೂ ಮಾಡಿ ಬದುಕಲು ನಿರ್ಧರಿಸಿ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಬಲಾಢ್ಯರು ಮಾಡಿದ ಚಿತ್ರಗಳ ಬಿಡುಗಡೆಗೆ ತೊಂದರೆಯಾಗಿ ಲಾಭಕ್ಕೆ ಕತ್ತರಿ ಬೀಳುತ್ತದೆ ಅನ್ನೊ ಲೆಕ್ಕಾಚಾರದಿಂದ ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಲಾಭದ ಉದ್ದೇಶಕ್ಕಾಗಿ ಪ್ರತಿಭಟಿಸುತ್ತಿದ್ದಾರೆಂದರೆ ಕರ್ನಾಟಕದ ಜನರೆಲ್ಲರ ಗಮನ ಸೆಳೆಯಲು ಸಾದ್ಯವಾಗಲಾರದೆಂಬ ಲೆಕ್ಕಾಚಾರದಿಂದ ಸಿನಿಮಾ ರಂಗದಲ್ಲಿ ದುಡಿಯುವ ವರ್ಗದ ಅಭದ್ರತೆ ವಿಷಯವನ್ನು ಬಳಸಿಕೊಂಡು ವರ್ಗ ಸಂಘರ್ಷದ ಮನಸ್ಸುಗಳನ್ನ ಬೇರೆಡೆ ತಿರುಗಿಸಿದ್ದಾರೆ, (ಒಂದೇ ಕಲ್ಲಿಗೆ ಎರಡು ಹಕ್ಕಿ..!) ಅವರ ಪ್ರತಿಭಟನೆಗೆ ಎಮೋಷನಲ್ ಟಚ್ ಇದ್ರೆ ಬೇಗ ಎಲ್ಲರನ್ನು ಆಕರ್ಶಿಸಬಹುದೆಂದು ಬಾಷೆ, ಸಂಸ್ಕೃತಿ ತರದ ವಿಚಾರಗಳನ್ನ ಮುಂದಿಟ್ಟುಕೊಂಡಿದ್ದಾರೆ ಅಷ್ಟೆ..!

ನಾಗೇಶ್ ಹೆಗ್ಡೆ ಹೇಳೊ ನೀರಲ್ಲಿ ಕರೆಂಟು ತೆಗೆಯೋ ಕಥೆ ಗೊತ್ತ? ನಾಲ್ಕೇ ಲೈನಲ್ಲಿ ಹೇಳ್ತೀನಿ ಕೇಳಿ.. ಸರ್ಕಾರ, ಒಂದು ಊರಿನ ತೋರೆಯಲ್ಲಿ ರಭಸವಾಗಿ ಬರುವ ನೀರಿನಲ್ಲಿ ಕರೆಂಟ್ ತಯಾರಿಸಬೇಕಂತ ಪ್ಲಾನ್ ಮಾಡ್ತಂತೆ, ಅವಾಗ ವಿರೋಧ ಪಕ್ಷದವರು ಊರಿನ ಜನಗಳ ಬಳಿ ಬಂದು ‘ನಿಮ್ಮ ನೀರಲ್ಲಿ ಕರಂಟನ್ನ ತೆಗೆದರೆ ನಿಮಗೆ ಯಾವುದೇ ಸಾರ ಇಲ್ದೇ ಇರೋ ನೀರು ಸಿಗುತ್ತೆ ಅಷ್ಟೆ, ಅದರಿಂದ ನೀವೇನು ಮಾಡಕ್ಕಾಗಲ್ಲಾ..’ ಅಂತ ಕಿವಿಯೂದಿದರಂತೆ. ಅದನ್ನ ನಂಬಿದ ಜನ ಸರ್ಕಾರಕ್ಕೆ ಧಿಕ್ಕಾರ ಕೂಗಿ ಬೊಬ್ಬೆ ಹಾಕುವಾಗ ಆಡಳಿತ ಪಕ್ಷದವರು ಬಂದು ಹೀಗೆಂದರಂತೆ ‘ಹೌದು. ನೀರಲ್ಲಿರೋ ಕರೆಂಟನ್ನ ತೆಗೆದು ಒಳ್ಳೇದು ಮಾಡ್ತಿದ್ದೀವಿ, ಇಲ್ಲಾಂದ್ರೆ ನಿಮ್ಮ ಹೊಲಕ್ಕೆ ಬರೋ ನೀರು ಶಾಕ್ ಹೊಡೆದ್ರೆ…?’ ಯಾಕಿದನ್ನ ಹೇಳ್ತಿದ್ದೀನಿ ಅಂದ್ರೆ ಜನರ ಗಮನ ಸೆಳೆಯೋಕೆ ಅಂತ ಬಳಸಿಕೊಳ್ಳುವ ತಂತ್ರಗಳು ಪ್ರತಿಭಟನೆಯ ಗುರಿಯನ್ನ ಗೌಣವಾಗಿಸಿ ಬಿಡಬಹುದು ಇಂತಹ ಸಂದರ್ಭದಲ್ಲಿ ಪ್ರತಿಭಟನಾಕಾರರ ಜೊತೆಗಿರುವವರನ್ನು ದಾರಿತಪ್ಪಿಸುವುದು ಬಹಳ ಸುಲಭ ಅಲ್ವಾ..? ಅರೆ… ಸತ್ಯಾನೇ ಹೇಳ್ಬೌದಿತ್ತಪ್ಪ..! ನಮ್ಮ ಲಾಭಕ್ಕೆ ಕತ್ತರಿ ಬೀಳುತ್ತದೆ ಅದಕ್ಕಾಗಿ ಡಬ್ಬಿಂಗ್ ಬೇಡ ಅಂತಾ..!

‍ಲೇಖಕರು avadhi

March 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. M.A.Sriranga

    ಡಬ್ಬಿಂಗ್ ವಿರೋಧ ಏಕೆ ಎನ್ನುವುದು ಈ ಲೇಖಕರು ಹೇಳುವಷ್ಟು ಸರಳವಾಗಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಲೈಟ್ ಬಾಯ್ ಅಥವಾ ಇನ್ನಿತರ ವರ್ಗದವರಿಗೆ ( ನಾಯಕ ನಟ,ನಟಿ ಇವರುಗಳನ್ನು ಹೊರತುಪಡಿಸಿ) ಇರುವ ಕೆಲಸ ಹೋದರೆ ಬೇರೆ ಕಡೆ, ಬೇರೆ ರೀತಿಯ ಮತ್ತೊಂದು ಕೆಲಸ ಇಂದಿನ ದಿನಗಳಲ್ಲಿ ಅಷ್ಟು ಸುಲಭವಾಗಿ ಸಿಕ್ಕುವುದೂ ಇಲ್ಲ. ಇವರುಗಳನ್ನು ಇತರ ಭಾಷೆಯ ಚಿತ್ರ ರಂಗದವರು ಅಲ್ಲಿನ ಕೆಲಸಗಾರರ ಹಿತ ಕಾಯದೆ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆಯೇ? ಡಬ್ಬಿಂಗ್ ವಿರೋಧವು ಕನ್ನಡ ಸಿನಿಮಾ ನಿರ್ಮಾಣದ ಒಂದೆರೆಡು big house ಮತ್ತು big boss ಗಳ ಹಿತ ಕಾಯುವುದಕ್ಕೆ ಮಾತ್ರ ಸೀಮಿತವಲ್ಲ.

    ಪ್ರತಿಕ್ರಿಯೆ
  2. vidya

    ಲೇಖನ ಚನ್ನಾಗಿದೆ ಕೆಲವರ ಹಿತಾಸಕ್ತಿಗೊಸ್ಕರ ಡಬ್ಬಿಂಗ್ ಬೆಡ ಎಂದು ಬೊಬ್ಬೆ ಹೊಡೆಯುತ್ತಿದ್ದಾರಷ್ಟೆ. ಕಾರ್ಮಿಕರು ಎಲ್ಲಿಯಾದರೂ ಹೊಂದಿಕೊಳ್ಳುತ್ತಾರೆ. ಆದರೆ ಸ್ಟಾರ್ ಪಟ್ಟ ಕಟ್ಟಿಕೊಂಡ ಈಗೋ ಇರುವ ನಟರುಗಳಿಗೆ ಇದರಿಂದ ಭಾರೀ ನಷ್ಟ ಅದಕ್ಕಾಗಿ ಪುಂಡಾಟಿಗೆ ನಡೆಸಿದ್ದಾರೆ.

    ಪ್ರತಿಕ್ರಿಯೆ
  3. M.A.Sriranga

    ವಿದ್ಯಾ ಅವರಿಗೆ– ಕಾರ್ಮಿಕರು ಎಲ್ಲಿಯಾದರೂ ಹೊಂದಿಕೊಳ್ಳುತ್ತಾರೆ ಎಂಬ ಮಾತು ಸರಿ. ಆದರೆ ಕೆಲಸ ಯಾರು ಕೊಡುತ್ತಾರೆ? ಎಲ್ಲರೂ ”ಕನ್ನಡಿಗರಷ್ಟೇ” ಹೃದಯ ವೈಶಾಲ್ಯ ಉಳ್ಳವರೇ? ತಮ್ಮವರ ಹಿತಾಸಕ್ತಿಯನ್ನು ಬದಿಗೊತ್ತಿ ನಮ್ಮವರಿಗೆ ಕೆಲಸ ಕೊಡುತ್ತಾರೆಯೇ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: