’ಹಾರುವ ಹಕ್ಕಿಗೆ ಹೇಳಬಹುದೇ ಗಡಿಯ ಮಾತನ್ನು?’ – ರೂಪಾ ಹಾಸನ

ರೂಪ ಹಾಸನ

ಆಗಿನ್ನೂ ಬೆಳಗಿನ ಚುಮುಚುಮು ಬೆಳಕು ಪಸರಿಸುತ್ತಿತ್ತು. ಕೊರೆಯೋ ಚಳಿಯಲ್ಲಿ ರಾತ್ರಿಯಿಡಿ ಆ ಹಿಮಪರ್ವತದ ಮೇಲೆ ಗಡಿ ಕಾಯುತ್ತ ಇವನು ಬೆಂಡಾಗಿದ್ದ. ಇನ್ನೇನು ಕೆಲವೇ ನಿಮಿಷಗಳಲ್ಲಿ ಇವನ ಪಾಳಿ ಮುಗಿಯಲಿಕ್ಕೆ ಬಂದಿದೆ. ಆಮೇಲೆ ಚೆನ್ನಾಗಿ ನಿದ್ದೆ ಮಾಡಬಹುದು ಎಂದು ಕೊಂಡ ತಕ್ಷಣ ಆಕಳಿಕೆ ಬಂತು. ಒಂದು ಕ್ಷಣ ಕಣ್ಣನ್ನು ಮೆಲ್ಲಗೆ ಮುಚ್ಚಿದ….. ಅಷ್ಟರಲ್ಲೇ ಹತ್ತಿರದಲ್ಲೇ ಎಲ್ಲೋ ಶಬ್ದ ಕೇಳಿ ತಕ್ಷಣ ಬೆಚ್ಚಿ ಕಣ್ತೆರೆದ. ಕೈಲಿದ್ದ ರೈಫಲ್ ತನ್ನಂತೆ ತಾನೇ ಸಿದ್ಧವಾಯ್ತು. ಎಚ್ಚರದ ಕಣ್ಣಿನಿಂದ ಸುತ್ತಮುತ್ತ ಗಮನಿಸಲಾರಂಭಿಸಿದ. ಮೆಲ್ಲಗೆ ತೆವಳುತ್ತಲೇ ಸ್ವಲ್ಪ ದೂರ ಹೋಗಿ ನೋಡಿದ. ಮತ್ತೆ ಪಟ ಪಟ ಸದ್ದು. ಮತ್ತೂ ಹತ್ತಿರದಿಂದ ಸದ್ದು ಕೇಳಿದಾಗ ಮತ್ತಷ್ಟು ಕಿವಿನಿಮಿರಿಸಿ ಕುಳಿತು ರೈಫಲನ್ನು ಶಬ್ದದ ಕಡೆಗೆ ಹೊರಳಿಸಿ ಗುರಿಯಿಟ್ಟು ಕಾದ.

ಕೆಲ ಹೊತ್ತು ನಿಶ್ಯಬ್ದ. ಇದ್ದಕ್ಕಿದ್ದಂತೆ ಶತ್ರು ದೇಶದ ಭೂಮಿಯಿಂದ ಭರ್ರನೆ ಹಾರಿ ಬಂದ ಹಕ್ಕಿ ನಮ್ಮ ದೇಶದ ನೆಲದ ಮೇಲೆ ಬಂದು ಕುಳಿತು ಪಟಪಟ ಎಂದು ರೆಕ್ಕೆ ಬಡಿಯಿತು. ಇವನು ಕೆಲ ಹೊತ್ತು ದಿಗ್ಭ್ರಮೆಯಿಂದ ಕುಳಿತು ಬಿಟ್ಟ. ಆ ಹಕ್ಕಿ ಶತ್ರು ದೇಶದ್ದೋ ತನ್ನ ದೇಶದ್ದೋ? ಅದನ್ನ ಕೊಲ್ಲಲೋ ಬೇಡವೋ? ಎಂದು ಯೋಚಿಸಲಾರಂಭಿಸಿದ. ತನ್ನ ಯೋಚನೆಗೆ ಅವನಿಗೇ ನಗು ಬಂತು. ಪಕ್ಕದಲ್ಲೇ ಎಲ್ಲೋ ಅಸ್ಪಷ್ಟವಾಗಿ ನದಿ ಹರಿಯುವ ಶಬ್ಧ. ತನ್ನ ದೇಶದ ನದಿ, ಶತ್ರು ದೇಶಕ್ಕೆ ಹರಿದು ಹೋಗುತ್ತಾ ಇದೆ. ಶತ್ರು ದೇಶದಿಂದ ಬೀಸಿದ ಗಾಳಿ ತನ್ನ ದೇಶವನ್ನ ಆವರಿಸ್ತಾ ಇದೆ. ಇತ್ತಲಿನ ಪರ್ವತದ ಮುಖ ತನ್ನ ದೇಶದ್ದು, ಅತ್ತಲಿನ ಪರ್ವತದ ಮುಖ ಶತ್ರು ದೇಶದ್ದು. ಪರ್ವತ ಒಂದೇ ಆದರೂ ಹೆಸರು ಮಾತ್ರ ಎರಡು! ನಿಧಾನಕ್ಕೆ ನಗು ತುಂಬಿದ್ದ ಅವನ ಮುಖ ದುಗುಡದಿಂದ ಕಪ್ಪಾಗುತ್ತಾ ಹೋಯ್ತು.

ಶತ್ರು ದೇಶಕ್ಕೆ ಹರೀತಿರೋ ಈ ನದಿ, ಶತ್ರು ದೇಶದಿಂದ ತನ್ನ ದೇಶಕ್ಕೆ ಬೀಸಿ ಬರ್ತಾ ಇರೋ ಗಾಳಿ, ಒಂದೇ ಪರ್ವತಕ್ಕಿರೋ ಸ್ವದೇಶಿ ಮತ್ತು ಶತ್ರು ದೇಶದ ಎರಡು ಮುಖ, ಈಗಷ್ಟೇ ಶತ್ರು ದೇಶದಿಂದ ಹಾರಿ ಬಂದ ಆ ಹಕ್ಕಿಗೆ ಹೇಗೆ ಗುಂಡಿಕ್ಕಿ ಕೊಲ್ಲಲಿ? ಸೃಷ್ಟಿ ಎಂದಾದರೂ ಗಡಿಗಳನ್ನು ಹಾಕಿಕೊಂಡಿದೆಯೇ? ಇದು ಈ ದೇಶದ್ದು ಅದು ಆ ದೇಶದ್ದು ಎಂದು ವಿಭಜಿಸಿ ವಿಭಜಿಸಿ ಗಾಳಿ ನೀರು, ಗುಡ್ಡ ಬೆಟ್ಟ ಕಾಡು ಕಣಿವೆಯನ್ನ ಹರಿದು ಹಂಚಿ ಕೊಟ್ಟಿದೆಯಾ? ಹಾಗಿದ್ದರೆ ಸೂರ್ಯ, ಚಂದ್ರ, ನಕ್ಷತ್ರ ಯಾವ ದೇಶದ್ದು? ತನ್ನ ದೇಶದ್ದೋ ಶತ್ರು ದೇಶದ್ದೋ? ಅವನ ಮನಸೀಗ  ವಿಷಾದದಿಂದ ತುಂಬಿಹೋಯಿತು.

ಮಾನವನಿಗಷ್ಟೇ ಈ ಗಡಿ. ನದಿ, ಗಾಳಿ, ಮಳೆ, ಭೂಮಿ, ಸೂರ್ಯ, ಚಂದ್ರ, ನಕ್ಷತ್ರ, ಪ್ರಾಣಿ ಪಕ್ಷಿಗಳೂ ಮಾನವನಂತೆಯೇ ಗಡಿಗಳನ್ನು ಹಾಕಿಕೊಂಡು ತಮ್ಮ ತಮ್ಮಲ್ಲೇ ವಿರೋಧಿ ಬಣಗಳನ್ನು ಸೃಷ್ಠಿಸಿಕೊಂಡುಬಿಟ್ಟರೆ ಆಗೇನು ಮಾಡುವುದು? ಈ ಆಲೋಚನೆ ಬಂದ ತಕ್ಷಣ ಆ ಕೊರೆಯುವ ಚಳಿಯಲ್ಲೂ ಅವನ ಮೈ ಸಂಪೂರ್ಣ ಬೆವೆತು ಹೋಯ್ತು. ಮನದಲ್ಲೇ ಕೃತಜ್ಞತೆ ಸಲ್ಲಿಸುತ್ತಾ ‘ಹೇ ಸೃಷ್ಟಿಕರ್ತ, ಮಾನವನ ಸ್ವಾರ್ಥದಿಂದಷ್ಟೇ ಗಡಿಗಳ ನಿರ್ಮಾಣವಾಯ್ತು. ಸದ್ಯ ಮುಕ್ತ ಪ್ರಕೃತಿಗೂ  ಗಡಿಯನ್ನು ನೀ ಎಳೆಯಲಿಲ್ಲವಲ್ಲ!’ ಎಂದು ನಿಟ್ಟುಸಿರುಬಿಟ್ಟ. ಯಾಕೋ ಕೈಯಲ್ಲಿದ್ದ ರೈಫಲ್ ಮೇಲಕ್ಕೆ ಎತ್ತಲಾಗದಷ್ಟು ಭಾರವಾಗುತ್ತಿದೆ ಎನಿಸಿ ಭೂಮಿಗೆ ಕುಸಿದು ಕುಳಿತ.

‍ಲೇಖಕರು avadhi

March 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Kiran

    Utopic, but impractical. We have travelled a very very long way in division of human emotions. Cannot go back even if the wishes of many good hearts seek that. Makes a good reading but does not change reality to any extent.

    ಪ್ರತಿಕ್ರಿಯೆ
    • Anonymous

      idu impractical irabahudu. aadare manasannu alladisuvantide. manushyana swartavannu ele eleyaagi anaavarana maaduttade….. realy it is touching.
      ANU

      ಪ್ರತಿಕ್ರಿಯೆ
  2. Ananda Prasad

    ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಈಗ ಭಾರತ ಎಂದು ಕರೆಯಲ್ಪಡುವ ದೇಶದೊಳಗೆ ಹಲವಾರು ದೇಶಗಳು (ಅಥವಾ ರಾಜರುಗಳು) ಇದ್ದವು. ಇವು ಪರಸ್ಪರ ನಿರಂತರವಾಗಿ ಒಬ್ಬರ ಮೇಲೆ ಇನ್ನೊಬ್ಬರ ಆಕ್ರಮಣದ ಭೀತಿಯಲ್ಲಿ ಬದುಕುತ್ತಿದ್ದವು ಹಾಗೂ ಸ್ವತಂತ್ರ ಸೈನ್ಯ ಶಕ್ತಿಯನ್ನು ಹೊಂದಿದ್ದವು. ಇದು ನೂರಾರು ವರ್ಷಗಳಿಂದ ಹೀಗೇ ನಡೆದುಬಂದಿತ್ತು. ಭಾರತವು ಸ್ವತಂತ್ರಗೊಂಡ ನಂತರ ಇವುಗಳನ್ನೆಲ್ಲ ಭಾರತದಲ್ಲಿ ವಿಲೀನಗೊಳಿಸಿ ಒಂದೇ ಸೈನ್ಯ ಶಕ್ತಿಯ ಅಡಿಯಲ್ಲಿ ತಂದು ಇಂದು ಪರಸ್ಪರ ಆಕ್ರಮಣದ ಭೀತಿಯಿಲ್ಲದೆ ಬದುಕಲು ಸಾಧ್ಯವಾಗಿಲ್ಲವೇ? ಇದು ಮಾನವ ನಾಗರಿಕತೆಯ ಒಂದು ಹಂತ. ಮಾನವನ ಮನೋವಿಕಾಸ ಆದಂತೆ ನಾಗರಿಕತೆ ಮುಂದಿನ ಹಂತಕ್ಕೆ ಹೋಗುವ ಸಂಭವ ಇದೆ. ಯುರೋಪಿನಲ್ಲಿ ೨೮ ದೇಶಗಳು ಸೇರಿ ಯುರೋಪಿಯನ್ ಒಕ್ಕೂಟ ಎಂಬ ರಾಜಕೀಯ ಹಾಗೂ ಆರ್ಥಿಕ ಒಕ್ಕೂಟ ಮಾಡಿಕೊಂಡಿವೆ. ಅವು ಯುರೋಪಿಯನ್ ಪಾರ್ಲಿಮೆಂಟ್ ಅನ್ನು ಕೂಡ ಮಾಡಿಕೊಂಡಿವೆ ಹಾಗೂ ಐದು ವರ್ಷಕ್ಕೊಮ್ಮೆ ಈ ಪಾರ್ಲಿಮೆಂಟಿಗೆ ಚುನಾವಣೆ ಕೂಡ ನಡೆಸುತ್ತವೆ. ಈ ಯುರೋಪಿಯನ್ ಒಕ್ಕೂಟಕ್ಕೆ ಯುರೋ ಎಂಬ ಒಂದೇ ನಾಣ್ಯ (ಕರೆನ್ಸಿ) ಕೂಡ ಮಾಡಿಕೊಂಡಿವೆ, ಆದರೆ ಇನ್ನೂ ಒಂದೇ ಸೈನ್ಯವನ್ನು ರಚಿಸಿಕೊಂಡಿಲ್ಲ. ಮುಂದೆ ಹೆಚ್ಚು ಪರಸ್ಪರ ಅವಲಂಬನೆ, ನಂಬಿಕೆ ಬೆಳೆದಂತೆ ಒಂದೇ ಸೈನ್ಯ ರಚನೆಯಾಗಲೂಬಹುದು. ಹೀಗಾಗಿ ವಿಶ್ವ ಸರ್ಕಾರ ಮುಂದೊಮ್ಮೆ ರಚನೆಯಾಗದು ಎಂದು ಹೇಳಲು ಸಾಧ್ಯವಿಲ್ಲ. ಮಾನವನು ವಿಶಾಲ ಮನೋಭಾವನೆ ಬೆಳೆಸಿಕೊಂಡು ಮನೋವಿಕಾಸ ಹೊಂದುತ್ತಾ ಹೋದಂತೆ ನಾಗರಿಕತೆಯ ಮುಂದಿನ ಹಂತಕ್ಕೆ ಹೋಗುವ ಸಂಭಾವ್ಯತೆ ಇದೆ. ಇದನ್ನು ಕಲ್ಪನಾವಿಲಾಸ ಎಂದು ಹೇಳಲು ಸಾಧ್ಯವಿಲ್ಲ.

    ಪ್ರತಿಕ್ರಿಯೆ
  3. geetha dc

    m.d. vakkunda avara ‘magumalagide edeyamele’ kavana sankalanada kavitegalu nenepaadavu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: