ಫಕೀರನ ಹುಟ್ಟಿಗೆ ನೂರೈವತ್ತಂತೆ!
ಕಲ್ಲಚ್ಚು ಮಹೇಶ.ಆರ್. ನಾಯಕ್
ಹುಟ್ಟಿ ಎಷ್ಟಾದರೇನೂ
ನನ್ನ…ನಿಮ್ಮಂತ
ಸತ್ತರೂ ಗೊತ್ತಿಲ್ಲದಿರುವಂತಾವರಿಗೆ
ಅದೂ ಜೀವಂತವಾಗಿ?
ಆದರಿತನದು ಹಾಗಲ್ಲವಲ್ಲ
ಬೋಳು ತಲೆಯೊಳಗೆ
ಬ್ರಹ್ಮಾಂಡ ಬಯಸಿದ ‘ಅಹಿಂಸೆ’ ಯ ಹೊತ್ತು
ಜಗಕೆ ಕಾ'(ಕೋ)ಲಿ’ರಿಸಿದ ಫಕೀರನಲ್ಲವೇ ಇತ!
‘ಕನ್ನಡಕ’ದಲ್ಲಂತೂ ವಿಶ್ವ ರೂಪ
ಸೊಂಟದ ಗೇಣುದ್ದ ‘ಬಟ್ಟೆ’ ಶಾಂತಿಯ ಕೂಪ
ಸೊರಗಿದ ದೇಹದ ದಾಹ
ಸತ್ಯಾಗ್ರಹದ ಹೆಸರಿನಲಿ
ತಂದಿಟ್ಟೆ ಸ್ವಾತಂತ್ರ್ಯ 47ರಲಿ
ಆದರೇನ ಮಾಡುವದು
ವರುಷವೂ ಬಾಳಲಿಲ್ಲ ಜೀವ
ಧೃತಿಗೆಡಲಿಲ್ಲ ನಾವು
ಅಂದು ರಾಮನಾಮದಿ ಚೆಲ್ಲಿದ ರಕ್ತದ ಕಣ ಕಣ
ಬೀಜಾಸುರವಾಗಿದೆ ಇಂದು
ಒಂದೆಡೆ ‘ರಘುಪತಿ ರಾಘವ… ಈಶ್ವರ ಅಲ್ಲಾ’ ನಾದರೆ
ಮತ್ತೊಂದೆಡೆ ‘ಜೈ ಶ್ರೀರಾಮ್’ನ ಕೂಗು
ಅಧಿಕಾರದ ಬೀಜ ಮಂತ್ರವಾಗಿ ಎಲ್ಲೆಡೆ…
ಅಂದು ನಿನ್ನ ಕೊಂದ ಪ್ರತಿರೂಪದ ಗನ್ ನಲ್ಲಿ ಮತ್ತೆ ಮತ್ತೆ
ನಿನ್ನೆದೆಯ ಸೀಳುತ 150ರ ನೋಟದಲ್ಲೂ
ನಾವಿಂದು ಭವ್ಯ ಭಾರತವ ಕಟ್ಟುತ್ತಿದ್ದೇವೆ
ಹೊಚ್ಚ ಹೊಸ ಎರಡು ಸಾವಿರದ ನೋಟಿನೊಂದಿಗೆ!
ಮತ್ತದೆ ನೀ ಕಂಡ ಉಪವಾಸವ ಮರೆತಿಲ್ಲ ನಾವು
ತಂಗಳಾದರೂ ಸೈ ಕಂಗಳು
ನಿದ್ರೆಯೊಳು ಮರಣ ಕಾಣುವಾಗ
ಸ್ವತಂತ್ರದ ಹನಿ ಜಿನುಗುವಂತೆ
ಜೈಕಾರದಿ ಮೆರೆಸುತ್ತಿದ್ದೇವೆ ನಿನ್ನ ಜಯಂತಿಯ
ಮಧುಪಾನವಿಲ್ಲದ ನೀರಸ ರಜೆಯಾಗಿ
ಸಾಕು ನಮಗೆ ನೀ ಕೊಟ್ಟ ಸ್ಪೂರ್ತಿ
ಬದಲಾಗದ ಜೀವಕ್ಕೆ ನೂರೈವತ್ತೊಂದು ಭ್ರಾಂತಿ
ಅದೋ ಅಲ್ಲಿ ಧರ್ಮ ಜಾತಿ ಭಾಷೆಯ ಏಕತ್ವದ
ಜ್ವಾಲೆಯಲಿ ಮತ್ತೆ ಹುಡುಕುತ್ತಿದ್ದೆವೆ ಹೊಸ ಕ್ರಾಂತಿ
ನೀ ಹುಟ್ಟಿ ಬರಬೇಡ.. ಈಗಾಗಲೇ ಹುಟ್ಟಿದವರಿಗೆ
ಆ ನಿನ್ನ ಕೋಲು ಕನ್ನಡಕ ಗೇಣುದ್ದ ಬಟ್ಟೆಯ
ನೀಡು ಸಾಕು… ನೀಡು ಸಾಕು.






0 Comments