ಸತ್ಯಬೋಧ ಜೋಶಿ
‘ಅಪ್ಪ ಅಪ್ಪಾ..
ಬಂದೂಕು ಬೆಳೆಯೋದು ಯಾವ ಹೊಲದಲ್ಲಿ..?
ಟಿ ವಿ ನೋಡುತ ಮಗಳು ಹೀಗಂತ ತೊದಲಿದಳು
‘ಹೆಚ್ಚೆಚ್ಚು ಗೊಬ್ಬರಕೆ ಬಾಂಬುಗಳು ಹುಟ್ಟುವವೇ..?
‘ಮಣ್ಣಿನಡಿಯಲ್ಲೋ!! ಇಲ್ಲ ಗೊಂಚಲುಗಳಲ್ಲೋ?
ಒಡೆದು ಕೆಡವಲು ಬೇಕೇ ಇಷ್ಟೊಂದು ಊರುಗಳು!!
ಎಂಥ ಆಟವಿದು ಪಪ್ಪಾ ಇಷ್ಟೊಂದು ಟಫ್ಫು!!
ಬಿದ್ದು ಮಲಗಿದವ ಉಸಿರಾಡಬಾರದು ಅಂದ್ರೆ!!
ಹೋಳಿಯ ರೀತಿಯ ಆಟವು ಅಲ್ಲ !
ಬರಿ ಬಣ್ಣ ಮೆತ್ತಿದ ಬಾಡಿ!
ಹಾಗಿದ್ದರೆ ಅವರು ಮರಳಿ ಏಳುವುದೆಂದು?
ಆಟ ಮುಗಿವುದೆಂದು?ಮನೆ ಸೇರುವದೆಂದು? ಗೆದ್ದವರಿಗೇನು? ಸೋತವರಿಗೇನು?
ಗೇಮು ಮುಗಿದು
ಬಿದ್ದವರು ಎದ್ದಾಗ, ಊರ ತುಂಬ ಹಬ್ಬವೇ!!
ಅಬ್ಬಾ! ಯಾವ ಹೊಸ ಗೇಮಿದು ಪಪ್ಪಾ!!

ಮಗಳೇ..
ಬಂದೂಕು..ಬಾಂಬು…!
ಹೊಲದಲ್ಲಲ್ಲಾ ಕೂಸೆ !ಮನದಲ್ಲಿ ಬೆಳೆಯತ್ತೆ ,
ಸಿರಿವಂತ ಮೆಹಲುಗಳ ಹೊಟ್ಟೆಗಳಲಿ ಕೊಬ್ಬತ್ತೆ!
ಆದರೂ ಹಸಿವೆ ನೀಗದಾದಾಗ
ದೊಡ್ಡವರು ಆಟಕ್ಕೆ ಇಳಿಯುತ್ತಾರೆ ಮಗಳೇ..!ಆವಾಗಲೇ ಬಂದೂಕು, ಬಾಂಬುಗಳು!!
ಉಪಹಾರಕ್ಕೆ ಊರುಗಳನು! ಊಟಕ್ಕೆ ದೇಶಗಳನು! ಹರಿದ್ಹರಿದು ತಟ್ಟೆ, ಬಟ್ಟಲು,ಜೇಬ ತುಂಬುವಾಗಲೇ
ಮಗಳೇ ! ಅಪ್ಪ ಬೇರೆಯ ಮನೆಗೆ, ಅಮ್ಮ ಬಾರದ ಕಡೆಗೆ!! ಮಕ್ಕಳು ದೇವರಲ್ಲವೇ ! ಅದಕೆ ಬೇಕೆಂದ ಕಡೆಗೆ!! ಅಂಥ ನಮ್ಮ ಅಳುವ ಮಕ್ಕಳ ಫೊಟೋ ಹಿಡಿದೇ, ಅವರು ತಮ್ಮ ಮಕ್ಕಳಿಗೆ ತೋರುತ್ತಾರೆ!! “ಹೀಗಾಗಬೇಡ” ಅನ್ನುತ್ತಾರೆ, ಅದಕ್ಕೆ ಅವರ ಮಕ್ಕಳು ನಮ್ಮಂತಾಗುವುದೇ ಇಲ್ಲ! ಆದರೆ ಅವರಲ್ಲೇ ಹಲವರು ಮುಂದೆ.. ದೇಶ ಆಳುತ್ತಾರೆ!!
ಅದಕ್ಕೆ …ಆ ಆಟದಲ್ಲಿ ಮಲಗಿದವ ಯಾರಿಗೂ ಬೇಡ! ಆ ದೇವರಿಗೂ!!ಅಂತೆಯೇ ಮಲಗಿದವವರು ಮುಂದೆ ಸ್ಟ್ಯಾಚು ಆಗುತ್ತಾರೆ ಮಗಳೇ! ಸೋತವರ ಹೊರೆಯಾಗಿ!,ಗೆದ್ದವರ ಬಲವಾಗಿ!
ರಜೆ ಕೊಡಿಸುವ ಹಬ್ಬವಾಗುತ್ತಾರೆ..
ಆದರೆ ಈ ಗೇಮು ತುಂಬಾ ಹಳೆಯದು ಮಗಳೇ! ಆಡುವ ಮನುಷ್ಯರಷ್ಟೇ ಹೊಸಬರು! ಹೆಸರು
“ಯುದ್ಧ ” ಅಂತ.






ಅತ್ಯಂತ ತೀಕ್ಷ್ಣ ಹೂರಣದ ಕವನ.
ಪ್ರಸ್ತುತ – ಅನಾದಿ ಎರಡೂ ಕಾಲದ ಅನಿವಾರ್ಯ ಪೀಡೆಯಾದ ಯುದ್ದವು ಮನುಜ ಮನುಜನ ನಡುವೆ ಗಡಿ ರೇಖೆಯಂತೆ ತಾನು ಸೀಳಿ ಆ ಮೂಲಕ, ರಕ್ತ ಪಾತವನ್ನು ಮತ್ತು ಅನಾಥ ಸಮಾಜವನ್ನೂ ಸೃಷ್ಟಿಸುವ ಭೀಕರ ಚಿತ್ರಣ ಇಲ್ಲಿದೆ.
ಅಪ್ಪ ಮತ್ತು ಮಗನ ಸಂಭಾಷಣೆಯ ಮೂಲಕ, ಬೀಭಿತ್ಸ ಸನ್ನಿವೇಶವನ್ನು ಕಟ್ಟಿಕೊಡುವ ಕವಿಯ ತಂತ್ರ ಇಲ್ಲಿ ಯಶಸ್ಸು ಕಂಡಿದೆ.
ತಾವು ಬರೆದಂತೆ ಯುದ್ಧದ ಆನಂತರ, ರಸ್ತೆಗಳಿಗೆ ಮರು ನಾಮಕರಣ ಮತ್ತು ಹೊಸ ವಿಗ್ರಹಗಳ ಆವಿಷ್ಕರಣವು ಖಂಡಿತ. ಹೀಗೆ ಕೆಲ ದಶಕಗಳು ಪೂಜಿಸಲ್ಪಟ್ಟ ಈ ವಿಗ್ರಹಗಳೂ ಮುಂದೊಂದು ಯುದ್ದದ ನಂತರ ಛಿದ್ರ!
ಮಾರ್ಮಿಕವಾದ ಕವಿತೆ