ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯಬೋಧ ಜೋಶಿ ಹೊಸ ಕವಿತೆ- ನಾನು

ಸತ್ಯಬೋಧ ಜೋಶಿ

ಹೊಳಹು ನನ್ನದು ಎಂಬ ಹೆಮ್ಮೆಯು ನನದಲ್ಲ
ಮತ್ತದರ ಅನುರಣನ ಎಂಬ ಹೆಮ್ಮೆ
ಸೃಷ್ಟಿ ಸ್ರೋತದ ಒಸರು ಭೋರ್ಗರೆದು ಹರಿದಾಗೆ
ತಿರುಳುಗಟ್ಟಿದ ತಣಿಸೋ ಕೃತಿಯು ಹೊಮ್ಮೆ!

ನೆಳಲು ಬೆಳಕಿನ ಆಟ, ಚಳಿಯ ಅಪ್ಪುಗೆ ಬೇಟ
ಕಸುವ ಕಾಣದ ಬೀಜ ಕಾಡುಪಾಲೆ
ನಂಟ ನೂಕಿದ ನೆಲವೆ ಅಂಟಿ ಅಪ್ಪುಗೆ ಇಹುದು
ಬಂಧ,ಮುಕ್ತಿಯ ಗಂಟು ಒಂದೇ ತಾನೇ!

ತನ್ನ ತಾನೇ ಗುಣಿಸಿ ಟಿಸಿಲೊಡೆದು ಭಾಗಿಸಿ
ಕುಸುರಿ ಅಪ್ಪುಗೆ ಬಿಚ್ಚೋ ತತಿಯೇ ಮೊಳಕೆ
ಮುಗಿಲ ಮುಟ್ಟಿದ ಎಲೆಯ ನಕ್ಷೆ ಸೆಲೆಯಲೆ ಇಹುದು ..
ಭಾವ ಬೀಜದ ಮರವೇ ಕಾವ್ಯ ತಾನೇ!

ಬೆರಗು ಮೈ ಮಣ್ಣಲ್ಲಿ, ಮಳೆಹನಿ ಚೆ0ಬೆಳಕಲ್ಲಿ
ತನ್ನ ತಾನೇ ಬೆಳದ ಹಸಿ ಸಸಿಯ ಬೆರಗು
‘ನಾನು’ ಎನ್ನುವ ಬೆರಗೆ ನಮ್ಮ ದಾಟಿಸೋ ಸಂಕ
ಬೆರಗೆ ಹರುಹನು ತೋರೋ ಪಾತಳಿ ತಾನೇ..!

ಮುಗಿಲು ಮುಟ್ಟುವ ಹರಹು,ಮಣ್ಣ ತೆವಳುವ ಹರಹು
ಮರುನಂಟ ಬಿಳುಲುಗಳ ಅವರವರ ಹರಹು
ಹೀರೊ ಶಬ್ದದ ಬೇರ ಕಣ್ಣು ಹೂವೊಳು ಇಹುದು
ಬಯಕೆ ಹಣ್ಣಿನ ಬೃಂಗ ಕಲ್ಪನೆ ತಾನೇ..!

ಕಂಪು ಬೀರುವ ಹೂವು ಬರಿ ಬಿಂಕದಾ ಹೂವು
ಹಣ್ಣಾಗೋ ಹೂವು, ಕಾಡ ಹೂವು
ಅರಳಿನಿಂತದೆಲ್ಲಾ ತಿರುಳುಗಟ್ಟೀತೇನು!
ಮಿಕ್ಕುಳಿದ ಸಾರವೇ ಸಿಹಿಯು ತಾನೇ..!

‍ಲೇಖಕರು Avadhi

24 May, 2021

1 Comment

  1. ಬದರಿನಾಥ ಪಳವಳ್ಳಿ

    ಬಹುಮುಖ ಪ್ರತಿಭೆಯ ಸಾಹಿತಿಗೆ ಕವನವೂ ತನ್ನ ಸುವಿಶಾಲ‌ ಅಕ್ಷರ ವೃಕ್ಷದ ಒಂದು ಕೊಂಬೆ.
    ಜೋಶಿಯವರ ಈ ಕವನವು ಅವರ ಬರವಣಿಗೆಯ ಸಮರ್ಥತೆಗೆ ಸರಳ ಉದಾಹರಣೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading