ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯಪ್ರಕಾಶ್ ರಾಮಯ್ಯ ಕವಿತೆ- ಪ್ರತಿರೋಧ…

ಸತ್ಯಪ್ರಕಾಶ್ ರಾಮಯ್ಯ

ಇಳಿ ಸಂಜೆಯಲಿ ನೆಲಚುಂಬಿಸುವ ಕಿರಣಗಳು
ಟಿಸಿಲೊಡೆದ ಕೊನೆಯಿಲ್ಲದ ಕಾಲುದಾರಿಗಳು
ದಾರಿಯ ಇಕ್ಕೆಲಗಳಲಿ ಎಲ್ಲ ರಹಸ್ಯಗಳಿಗೆ
ಸಾಕ್ಷಿಯಾದರೂ ಬಿಮ್ಮನೆ ನಿಂತ ಮರಗಳು
ಹಠಾತ್ತಾಗಿ ಕಣ್ಣೀರು ಹಾಕಿದ ಕಾರ್ಮೋಡಗಳು
ಕೆಂಪಾದ ಸೂರ್ಯನ ಕಡೆಗೆ ಹಾರಿದ ಒಂಟಿ ಹಕ್ಕಿ
ಕೋಣೆಯ ಕಿಟಕಿಯಲಿ‌ ಬಂಧಿಯಾದ ಸರಳುಗಳು
ಪಿಸುಮಾತುಗಳನು‌‌‌ ಹೊತ್ತು‌ ತಂದ ತರಗೆಲೆಗಳು
ಮನಸಿನ‌ ನಿರ್ವಾತದಲಿ‌ ಸೃಷ್ಟಿಯಾದ ಕಪ್ಪು ರಂಧ್ರ!
ಬಿಗಿದಪ್ಪಿದ ತೋಳ್ಗಳಲಿ ಈಗಲೂ ಸೂಸುವ ಸುಗಂಧ
ಅಂತರಾಳದ ಸಮುದ್ರದಲಿ ಭೋರ್ಗರೆಯುತ್ತಲೇ ಇರುವ ಭಾವಬಂಧ!
ನೀಳ್ಗೂದಲ ಕತ್ತಲೊಳಗೆ ಮಿನುಗುವ ನಕ್ಷತ್ರಗಳು
ಗಾಢಾಂಧಕಾರದ ಹೃದಯದ ಕಪಾಟಿನಲಿ ಕಾಪಿಟ್ಟುಕೊಂಡ ದಿನರಾತ್ರಿಗಳು

ಎಲ್ಲ ಎಡೆಬಿಡದೆ ಕಾಡುತ್ತಲೇ ಇದೆ
ದಿಗಂತದಾಚೆ ಇರುವುದಾದರೆ ಒಂದು ಲೋಕ
ಕೋಟಿ‌ ನಕ್ಷತ್ರಗಳಲಿ ಸಾಯುವ ನತದೃಷ್ಟನಾಗುವೆ ಬಿಡು
ಹೇಗಿದ್ದರೂ ಈಗ ಎಲೆ ಉದುರುವ ಕಾಲ ಪಳೆಯುಳಿಕೆಯಾಗಿಯೇ ಇರಬಯಸುವೆ
ಮತ್ತೆ ಚಿಗುರುವ ಇರಾದೆಯಿಲ್ಲ
ಶರತ್ಕಾಲವೋ ವಸಂತವೋ ಬೇಕಿಲ್ಲ
ಮಾಸ ಯಾವುದಾದರೇನು
ಬರಿಯ ನಿರೀಕ್ಷೆಗಳ ಭಾರವನಷ್ಟೆ‌ ಹೊತ್ತಿರುವೆ
ಪ್ರತಿಫಲಾಪೇಕ್ಷೆಯ ಐಷಾರಾಮ ನನಗಿಲ್ಲ!
ಸಿಸಿಫಸನ ಮುಗಿಯದ ಕಥೆಯಿದು
ಮತ್ತೆ ಮತ್ತೆ ಉರುಳುವ ಕಾಲವನು
ಹಿಡಿದಿಡುವ ಪ್ರಯತ್ನವೇ ವ್ಯರ್ಥ
ನನಗೂ ಗೊತ್ತು ಎಂದೂ ಆರದ ಗಾಯವಿದು
ಆದರೆ,
ತೆರೆದ ಗಾಯದಿಂದಲೇ ಬೆಳಕು ಹೃದಯ ಸೇರುವುದು ನೆನಪಿರಲಿ
ಪ್ರೀತಿಯ ಪ್ರತಿರೋಧವಿದು
ಗುಪ್ತಗಾಮಿನಿಯಂತೆ ಸದಾ ಅವ್ಯಾಹತ!

‍ಲೇಖಕರು Admin

6 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading