ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ತು ಹೋಗಿದ್ದೇನೆ ನಾನು

ಶ್ರೀದೇವಿ ಕೆರೆಮನೆ

ಚಿಂತಿಸಬೇಡ ಮತ್ತೆಂದು ಕಾಡುವುದಿಲ್ಲ ಸತ್ತು ಹೋಗಿದ್ದೇನೆ ನಾನು
ಹೆದರಿಕೆಬೇಡ ಬೆಂಕಿಯಾಗಿ ಸುಡುವುದಿಲ್ಲ ಸತ್ತು ಹೋಗಿದ್ದೇನೆ ನಾನು

ಜೊತೆಗಿದ್ದುದಕೆ ಸಾಕ್ಷಾಧಾರವಾಗಿ ಎಲ್ಲಿಂದ ತರಲಿ ಮುದ್ರೆಯುಂಗುರ
ನೆನಪ ಹುಡುಕಬೇಡ ಮತ್ತೆ ಸಿಕ್ಕುವುದಿಲ್ಲ ಸತ್ತು ಹೋಗಿದ್ದೇನೆ ನಾನು

ಮಾತು ತಪ್ಪಿಸುವ ಶಕ್ತಿಯಿರುವುದು ತೊಟ್ಟುನೀರು ಸೇರಿಸದ ಸುರೆಗೆ ಮಾತ್ರ
ಮಾತು ತಿರುಚಬೇಡ ಮೌನ ಕೊಲ್ಲುವುದಿಲ್ಲ ಸತ್ತು ಹೋಗಿದ್ದೇನೆ ನಾನು

ನೆತ್ತಿಯ ಮೇಲೆ ಎರಡಲುಗಿನ ಕತ್ತಿಯಿದ್ದರೂ ನೆಮ್ಮದಿಯಾಗಿರಬಲ್ಲೆ
ಚಾವಟಿ ಬೀಸಬೇಡ ತಲೆ ಎತ್ತುವುದಿಲ್ಲ ಸತ್ತು ಹೋಗಿದ್ದೇನೆ ನಾನು

ಅಂಗೈಯಲ್ಲಿರುವ ಗುಬ್ಬಚ್ಚಿಗೆ ಮುಷ್ಟಿ ಬಿಗಿದವರಾರೆಂದು ಕೇಳದಿರು
ಕತ್ತು ಹಿಸುಕಬೇಡ ಕನಸು ಕಾಣುವುದಿಲ್ಲ ಸತ್ತು ಹೋಗಿದ್ದೇನೆ ನಾನು

ಕಿಬ್ಬೊಟ್ಟೆಯಿಂದ ಬಸಿದ ರಕ್ತದ ಕಣಕಣದಲ್ಲಿ ನಿನ್ನ ಹೆಸರಿದೆ ನೋಡು
ನೆತ್ತರು ಹೀರಬೇಡ ತುಟಿ ಬಿಚ್ಚುವುದಿಲ್ಲ ಸತ್ತು ಹೋಗಿದ್ದೇನೆ ನಾನು

ಹೆಣ ಎದುರಿಟ್ಟು ಪತ್ತೆದಾರಿಕೆ ನಡೆಸಿದರೆ ಉತ್ತರಿಸುವುದು ಹೇಗೆ ಹೇಳು
ಶವ ತುಂಡರಿಸಬೇಡ ಉಸಿರಾಡುವುದಿಲ್ಲ ಸತ್ತು ಹೋಗಿದ್ದೇನೆ ನಾನು

ಸಿರಿ, ಅನುಮಾನದ ಸಣ್ಣಕಿಡಿ ಸಾಕು ಎಲ್ಲವನ್ನು ಸುಟ್ಟು ಬೂದಿಮಾಗಲು
ಕೊಳ್ಳಿಯಿಡಬೇಡ ಫಿನಿಕ್ಸನಂತೆ ಹುಟ್ಟುವುದಿಲ್ಲ ಸತ್ತು ಹೋಗಿದ್ದೇನೆ ನಾನು

‍ಲೇಖಕರು Avadhi

30 September, 2020

3 Comments

  1. Ashfaq Peerzade

    ಸತ್ತ ಹೋದವಳ ಭಾನೆಗಳಿನ್ನೂ ಜೀವಂತವಾಗಿವೆ. ಕಣ್ಣು ಹನಿಯಾಗಿಸು ಗಜಲ್.

  2. ಗೀತಾ ಜಿ ಹೆಗಡೆ ಕಲ್ಮನೆ

    ಎಷ್ಟೊಂದು ತೀಕ್ಷ್ಣವಾಗಿದೆ ಪದಗಳು!!

  3. Geetha n Swamy

    ಒಪ್ಪಿತ ಅಸಹಾಯಕತೆಯನ್ನು ಸ್ವಾಗತಿಸಿದಂತಿದೆ?????

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading